ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಸಿನಿಮೀಯ ಚೌಕಟ್ಟಿನಲ್ಲಿ ಶೋಷಣೆಯ ಕಥೆ

Last Updated 26 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ನಾನು ಸ್ವಾಭಿಮಾನಿ ಕ್ಷೌರಿಕ’ – ಯಾವುದೋ ಸಮಾವೇಶದ ಫ್ಲೆಕ್ಸ್‌ ಘೋಷವಾಕ್ಯದಂತೆ ಭಾಸವಾಗುವ ಈ ಹೆಸರೇ ಕಾದಂಬರಿಯ ಹೂರಣವನ್ನೂ ಹೇಳುವಂತಿದೆ. ಕಾದಂಬರಿಯ ಶಕ್ತಿ ಮತ್ತು ಮಿತಿಗಳೆರಡರ ಕಡೆಗೂ ಬೊಟ್ಟು ಮಾಡುವಂತಿದೆ.

ಎಂ.ಎಸ್. ಮುತ್ತುರಾಜ್‌ ಅವರ ಈ ಕಾದಂಬರಿ ಕ್ಷೌರಿಕ ಕುಟುಂಬವೊಂದರ ಕಥನವನ್ನು ಬಿಚ್ಚಿಡುತ್ತದೆ. ಹಳ್ಳಿಗಳಲ್ಲಿನ ಶೋಷಣೆಯ ಕ್ರೂರ ಮುಖ, ನಗರದ ಅನಾಮಿಕತೆ, ಆ ಅನಾಮಿಕತೆಯೇ ಕೊಡುವ ಸ್ಥೈರ್ಯ, ಅದರಿಂದಲೇ ಬೆಳೆಯುವ ಹುಡುಗನೊಬ್ಬನ ಬದುಕಿನ ಪಥವನ್ನು ಕಾಣಿಸುತ್ತದೆ.‌

ರಾಮಾಪುರದ ರಾಮಯ್ಯ ಎಂಬ ಬಡ ಕ್ಷೌರಿಕನ ಬದುಕಿನ ಚಿತ್ರಣದೊಂದಿಗೆ ಈ ಕಥೆ ತೆರೆದುಕೊಳ್ಳುತ್ತದೆ. ತಾನು ಪರಿಶ್ರಮದಿಂದ, ಕೌಶಲದಿಂದ ಸ್ವಾಭಿಮಾನದಿಂದ ಮಾಡಬೇಕಾದ ಕೆಲಸವನ್ನು ಪ್ರಬಲ ಜಾತಿಯವರ ಮನೆ ಮುಂದೆ ಹಿಡಿ ಜೀವ ಹಿಡಿದುಕೊಂಡು, ಅವರಿಂದ ಹೀನಾಯವಾಗಿ ಬೈಸಿಕೊಂಡು ಮಾಡಬೇಕಾದ ದುಃಸ್ಥಿತಿ ಅವನದ್ದು. ಕ್ಷೌರಿಕ ವೃತ್ತಿಯವನಾದ ಅವನು ಊರ ಗೌಡನ ಸಾವಿನಲ್ಲಿ ಮಂಗಳವಾದ್ಯ ನುಡಿಸಲು ನಿರಾಕರಿಸಿದ್ದಕ್ಕಾಗಿ ರುದ್ರಯ್ಯನ ಸೇಡಿಗೆ ಗುರಿಯಾಗುತ್ತಾನೆ. ಅವನ ಕುಟುಂಬ ಬಹಿಷ್ಕಾರಕ್ಕೆ ಒಳಗಾಗುತ್ತದೆ.

ಶೋಷಣೆಯ ನಾನಾ ಮುಖಗಳನ್ನು ಪರಿಚಯಿಸುತ್ತ ಹೋಗುವ ಈ ಕಾದಂಬರಿ ಕೊನೆಗೆ ಅದರಿಂದ ಹೊರಬರಬೇಕಾದ ಅನಿವಾರ್ಯವನ್ನೂ ಒತ್ತಿ ಹೇಳುತ್ತದೆ. ರಾಮಯ್ಯನ ಅಸಹಾಯಕತೆ ಅವನ ಮಗ ವೆಂಕಟನಿಗೆ ಇಲ್ಲ. ಆರಂಭದಲ್ಲಿ ಅಪ್ಪ ಗಳಿಸಿದ್ದನ್ನು ತಿಂದುಂಡು ಸೋಮಾರಿಯಾಗಿಯೇ ಕಾಲ ಕಳೆದರೂ ಕೊನೆಗೆ ಮನೆಬಿಟ್ಟು ಮಹಾನಗರ ಸೇರುತ್ತಾನೆ. ಅಲ್ಲಿ ಕಾಮ್ರೇಡ್ ಮುತ್ತುರಾಜ್‌ನ ಪ್ರೇರಣೆ ಮತ್ತು ಬೆಂಬಲದಿಂದ ಸ್ವಾಭಿಮಾನಿ ಕ್ಷೌರಿಕನಾಗಿ ರೂಪುಗೊಳ್ಳುತ್ತಾನೆ. ಅದೇ ಸ್ವಾಭಿಮಾನದಿಂದ ಊರಿಗೆ ಮರಳಿ, ಕ್ಷೌರದಂಗಡಿ ಪ್ರಾರಂಭಿಸಿ, ದುರುಳ ರುದ್ರಯ್ಯನಿಗೆ ಎದುರಾಗುತ್ತಾನೆ.

ಇಂಥ ಶೋಷಣೆಯ ಪ್ರಪಂಚವನ್ನು ತೋರಿಸುವ ಕೃತಿಗಳು ಕನ್ನಡಕ್ಕೆ ಹೊಸತೇನಲ್ಲ. ಹಳೆಯ ವಸ್ತುವನ್ನೇ ಹೊಸ ಬೆಳಕಲ್ಲಿ ತೋರಿಸುವ, ಹೊಸ ಬಗೆಯ ಅನುಭವವನ್ನು ದಾಟಿಸುವ ಶಕ್ತಿ ಇಲ್ಲಿನ ನಿರೂಪಣೆಗೆ ಇಲ್ಲ. ಒಂದಾದ ಮೇಲೆ ಇನ್ನೊಂದು ದೃಶ್ಯವನ್ನು ಪೇರಿಸುತ್ತ ಹೋಗುವ ರೀತಿ, ಸಿನಿಮಾವೊಂದರ ಸ್ಕ್ರಿಪ್ಟ್‌ನಂತೆಯೂ ಭಾಸವಾಗುತ್ತದೆ. ನಿರೂಪಣೆಯ ಕ್ರಮದಲ್ಲಿಯಷ್ಟೇ ಅಲ್ಲ, ಸಂಭವಿಸುವ ಘಟನಾವಳಿಗಳಲ್ಲಿಯೂ, ಕಥೆಯ ಕೃತಕ ತಿರುವುಗಳಲ್ಲಿಯೂ ಈ ‘ಸಿನಿಮೀಯ’ತೆ ಇದೆ. ಹಾಗಾಗಿಯೇ ಈ ಕಾದಂಬರಿಯ ಹಲವು ಸನ್ನಿವೇಶಗಳನ್ನು ಓದುವಾಗ ‘ಈಗಾಗಲೇ ಗೊತ್ತಿದೆ’ ಎನ್ನುವ ಭಾವ ಹುಟ್ಟುತ್ತದೆ.

ತಮ್ಮ ವೃತ್ತಿಯಲ್ಲಿ, ಬದುಕಿನಲ್ಲಿ ಕಂಡಿದ್ದನ್ನು ಹೇಳುವ ಉದ್ದೇಶವೇ ಇಲ್ಲಿ ಮುಖ್ಯವಾಗಿದೆ. ಅದೇ ಈ ಕೃತಿಯ ಮಹತ್ವ ಮತ್ತು ಮಿತಿ ಎರಡೂ ಆಗಿದೆ.

ಕೃತಿ: ನಾನು ಸ್ವಾಭಿಮಾನಿ ಕ್ಷೌರಿಕ

ಲೇ: ಎಂ.ಎಸ್. ಮುತ್ತುರಾಜ್

ಪು: 208 ಬೆ: ₹ 200

ಪ್ರಕಾಶನ: ಎಂ.ಎಸ್. ಮುತ್ತುರಾಜ್ ಪಿಕ್ಚರ್ಸ್‌

ಸಂ: 9845094846

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT