ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕಾಡುವ ‘ಸಕಾರಣ’ದ ಚಿಂತನೆಗಳು

Last Updated 14 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಸಕಾರಣ
ಲೇ:
ಚಿದಾನಂದ ಸಾಲಿ
ಪ್ರ: ಅನ್ನಪೂರ್ಣ ಪ್ರಕಾಶನ, ಸಿರಿಗೇರಿ
ಸಂ: 8762479216

ಚಿದಾನಂದ ಸಾಲಿಯವರ ‘ಸಕಾರಣ’ ಎಂಬ ವಿಮರ್ಶಾ ಕೃತಿಯಲ್ಲಿ ವಿಮರ್ಶೆ, ಕಥಾ ಸಾಹಿತ್ಯ, ಅನುವಾದ, ಕಲೆ, ಗಡಿನಾಡು, ಶಿಕ್ಷಣ, ಗ್ರಾಮೀಣ ಮಕ್ಕಳ ಶೈಕ್ಷಣಿಕ, ಆರ್ಥಿಕ, ಹಸಿವಿನ ಸಮಸ್ಯೆ - ಮುಂತಾದವುಗಳ ಬಗ್ಗೆ ಚಿಂತಿಸಿರುವ ಇಪ್ಪತ್ತೆರಡು ಲೇಖನಗಳು ಇವೆ. ಕಳೆದ ಒಂದೂವರೆ ದಶಕದ ಭಾಷಣ, ಮುನ್ನುಡಿ, ಕೆಲವು ಸಂಪಾದಿತ ಕೃತಿಗಳು ಹಾಗೂ ಪುರವಣಿಗಳಿಗೆ ಬರೆದ ಲೇಖನಗಳು ಎಲ್ಲ ಒಂದೆಡೆ ಸಂಕಲಿತವಾಗಿವೆ. ಈ ಲೇಖನಗಳು ಸಾಂದರ್ಭಿಕವಾಗಿದ್ದರೂ ಅದನ್ನೂ ಮೀರಿ ಸೂಕ್ಷ್ಮವಾದ ಒಳನೋಟಗಳನ್ನು ಒಳಗೊಂಡಿವೆ.

ಸಾಹಿತ್ಯವನ್ನು ಚರಿತ್ರೆ ಮತ್ತು ಸಂಸ್ಕೃತಿಯ ಫಲ ಎಂದು ವ್ಯಾಖ್ಯಾನಿಸುವ ಈ ಕಾಲದಲ್ಲಿ ಒಮ್ಮೊಮ್ಮೆ ನಾವು ಸಾಹಿತ್ಯ ಕೃತಿಯಲ್ಲಿ ಸಾಮಾಜಿಕ ಅಥವಾ ಸಾಂಸ್ಕೃತಿಕ ಅಧ್ಯಯನವನ್ನಷ್ಟೇ ಮಾಡಿಬಿಡುತ್ತೇವೆ. ಇಂತಹ ಕಡೆ ಸಾಹಿತ್ಯದ ಕಲಾತ್ಮಕತೆ ಮತ್ತು ಅದರ ಅನನ್ಯತೆಯನ್ನು ಕಡೆಗಣಿಸಿ ಬಿಡುವುದರಿಂದ ಅದರ ಎಲ್ಲಾ ಅರ್ಥ, ಧ್ವನಿಸಾಧ್ಯತೆಗಳನ್ನು ಮರೆಯುತ್ತೇವೆ. ಆದ್ದರಿಂದ ಅದನ್ನು ಮೀರಿ ನಾವು ಸಾಹಿತ್ಯ ಕೃತಿಯ ಒಳ ಶರೀರದ ಸೂಕ್ಷ್ಮವಾದ ಚರ್ಚೆಗಳೊಂದಿಗೆ ಸಾಂಸ್ಕೃತಿಕ ಅಧ್ಯಯನ ಮಾಡಬೇಕು. ಅಂದರೆ ಆಶಯ ಆಕೃತಿಗಳ ಸಾವಯವ ಸಂಬಂಧದಲ್ಲಿಯೇ ಅಧ್ಯಯನ ಮಾಡಿದಾಗ ಆ ಕೃತಿಯ ಅನಂತ ಅರ್ಥ ಸಾಧ್ಯತೆಗಳು, ಒಳನೋಟಗಳು ದಕ್ಕುತ್ತವೆ. ‘ವಿಮರ್ಶೆಯ ಹೊಸ ದಿಕ್ಕು: ಕೆಲವು ಟಿಪ್ಪಣಿಗಳು’ ಎಂಬ ಪುಟ್ಟ ಲೇಖನದಲ್ಲಿ ಸಾಲಿಯವರು ಇದನ್ನು ಚರ್ಚಿಸಿದ್ದಾರೆ. ಕೆಲವು ಪ್ರಶ್ನೆಗಳನ್ನು ಎತ್ತಿ ಆಲೋಚನೆ ಮಾಡುವಂತೆ ಪ್ರೇರೇಪಿಸಿದ್ದಾರೆ.

ಈ ಕೃತಿಯಲ್ಲಿ ಅನುವಾದಕ್ಕೆ ಸಂಬಂಧಿಸಿದ ಛಂದೋಬದ್ಧ ಪ್ರಕಾರಗಳ ಅನುವಾದ: ಸ್ವರೂಪ ಮತ್ತು ಸವಾಲು, ಅನುವಾದದ ನೆಪದಲ್ಲಿ ಅನುಮಾನಗಳ ಅವಲೋಕನ ಎಂಬ ಎರಡು ಲೇಖನಗಳಲ್ಲಿ, ಅನುವಾದಕನೊಬ್ಬನು ಅನುವಾದ ಮಾಡುವಾಗ ಅದರಲ್ಲೂ ಕಾವ್ಯವನ್ನು ಅನುವಾದ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ಚರ್ಚಿಸುತ್ತಾ ಅವುಗಳ ಮಾರ್ಗೋಪಾಯಗಳ ಬಗ್ಗೆಯೂ ವಿಶ್ಲೇಷಣೆ ಮಾಡಲಾಗಿದೆ. ಛಂದೋಬದ್ಧ ಪ್ರಕಾರಗಳಲ್ಲಿ ಚಂಪೂ, ರಗಳೆ, ಷಟ್ಪದಿ, ಸಾಂಗತ್ಯ, ಗಜಲ್ ಮುಂತಾದುವುಗಳ ಬಗ್ಗೆ ಅರಿವಿರಬೇಕು, ಜೊತೆಗೆ ಗುರು, ಲಘು, ಪ್ಲುತ ಇತ್ಯಾದಿಗಳ ಅರಿವೂ ಇರಬೇಕು. ಅಂತಹ ವ್ಯಕ್ತಿ ಅನುವಾದ ಮಾಡಿದರೆ ಮೂಲ ಕೃತಿಗೆ ನ್ಯಾಯ ಸಲ್ಲಿಸಬಹುದು. ಇಲ್ಲದಿದ್ದರೆ ಅಪಾರ್ಥಗಳುಂಟಾಗಿ ಮೂಲಕ್ಕೆ ಧಕ್ಕೆಯುಂಟಾಗುತ್ತವೆ. ಹೊಸಗನ್ನಡ ಕವಿತೆಯನ್ನು ಅನುವಾದ ಮಾಡುವಾಗಲೂ ನಾವು ಅದರ ಲಯದ ವಿನ್ಯಾಸಗಳನ್ನು ಹಿಡಿಯಬೇಕಾಗುತ್ತದೆ. ಜೊತೆಗೆ ಶಿಲ್ಪ, ಆಶಯ, ಅಲ್ಲಿರುವ ಸಂಕೇತ, ಪ್ರತಿಮೆ ಪ್ರತೀಕ, ಚಿತ್ರಗಳು, ಅವುಗಳ ಅರ್ಥ ಸಾಧ್ಯತೆಗಳು ಅನುವಾದಕನಿಗೆ ಗೊತ್ತಿರಲೇಬೇಕು. ಮೂಲಲೇಖಕನಿಗಿಂತ ಅನುವಾದಕನಿಗೆ ಹೆಚ್ಚು ಜವಾಬ್ದಾರಿ ಇದೆ. ಈ ವಿಚಾರಗಳನ್ನು ಈ ಎರಡೂ ಲೇಖನಗಳಲ್ಲಿ ಚರ್ಚಿಸಲಾಗಿದೆ. ಜೊತೆಗೆ ಸಾಹಿತ್ಯಿಕ, ಮಾನವಿಕ, ವೈಜ್ಞಾನಿಕ, ವಾಣಿಜ್ಯಿಕ ಅನುವಾದಗಳ ಬಗ್ಗೆಯೂ ಮಾಹಿತಿ ಇದೆ. ‘ಅನುವಾದದ ನೆಪದಲ್ಲಿ ಅನುಮಾನಗಳ ಅವಲೋಕನ’ ಎಂಬ ಲೇಖನದಲ್ಲಿ ಗಜಲ್‌ಗಳ ಅನುವಾದದ ಸ್ವರೂಪದ ಬಗ್ಗೆ ಹಲವಾರು ವಿಚಾರಗಳನ್ನು ಸೋದಾಹರಣವಾಗಿ ಚರ್ಚಿಸಲಾಗಿದೆ.

‘ಕನ್ನಡ ಗಜಲ್: ಹುಟ್ಟು, ಸ್ವರೂಪ ಮತ್ತು ವಿಕಾಸ’ ಎಂಬ ಲೇಖನವು ಈ ಕೃತಿಯಲ್ಲಿರುವ ಲೇಖನಗಳಲ್ಲಿ ದೀರ್ಘವಾದದ್ದು ಮತ್ತು ಮುಖ್ಯವಾದದ್ದು. ಗಜಲ್ ಕುರಿತು ವಿಸ್ತಾರವಾಗಿ ಚರ್ಚಿಸಿರುವ ಈ ಲೇಖನ ಅಧ್ಯಯನಕಾರರಿಗೆ, ಕುತೂಹಲಿಗಳಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಇದರ ಜೊತೆಯಲ್ಲಿಯೇ ನಾವು ‘ಶಾಂತರಸರ ಗಜಲ್: ಕೆಲವು ಟಿಪ್ಪಣಿಗಳು’ ಲೇಖನವನ್ನು ಸೇರಿಸಿಕೊಂಡು ಓದಬಹುದು.

‘ಕನ್ನಡ ಕಥಾ ಸಾಹಿತ್ಯದ ಇತ್ತೀಚಿನ ಒಲವುಗಳು’ ಎಂಬ ಲೇಖನವು ನವ್ಯೋತ್ತರ ಕಾಲಘಟ್ಟದ ಕಥಾಸಾಹಿತ್ಯದ ಒಲವು ನಿಲುವುಗಳನ್ನು ಚರ್ಚಿಸುತ್ತದೆ. ಬಸವರಾಜ ಕಟ್ಟೀಮನಿಯವರ ಕಥೆಗಳ ಆಶಯವನ್ನು ವ್ಯಾಖ್ಯಾನಿಸುವ ಲೇಖನವೂ ಇಲ್ಲಿದೆ. ‘ಜಗನ್ನಾಥ ದಾಸರ ಸಾಮಾಜಿಕ ಮತ್ತು ಅನುಭಾವಿಕ ನೆಲೆಗಳು’ ಲೇಖನವು ದಾಸ ಸಾಹಿತ್ಯದ ಪರಂಪರೆಯಲ್ಲಿ ಅವರ ಇತಿಮಿತಿಗಳನ್ನು ಸೋದಾಹರಣವಾಗಿ ವಿಶ್ಲೇಷಣೆ ಮಾಡಿರುವುದು ಸೂಕ್ಷ್ಮ ಒಳನೋಟಗಳಿಗೆ ಕಾರಣವಾಗಿದೆ.

ಪ್ರತೀ ಲೇಖನದಲ್ಲೂ ಮಾಹಿತಿ ಇದೆ. ಹೇಳಿಕೆಗಳಿವೆ. ಆದರೆ, ವಿಶ್ಲೇಷಣೆ ಕಡಿಮೆ. ಮಾಹಿತಿಯೊಂದಿಗೆ ವಿಶ್ಲೇಷಣೆ ಸೇರಿದರೆ ವಿಮರ್ಶೆಗೆ ಅಪಾರವಾದ ಒಳನೋಟಗಳನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ. ‘ಆಳವಾದ ಒಳನೋಟದ ವಿಮರ್ಶಾ ಪ್ರಜ್ಞೆಗಿಂತ ತಕ್ಷಣಕ್ಕೆ ಸ್ಪಂದಿಸುವ ಜರ್ನಲಿಸ್ಟಿಕ್ ಗುಣವೇ ಇಲ್ಲಿ ಢಾಳಾಗಿ ಕಾಣಿಸುತ್ತದೆ’ ಎಂದು ಇಲ್ಲಿನ ಲೇಖನಗಳ ಮಿತಿಗಳ ಬಗ್ಗೆ ಲೇಖಕರು ಹೇಳಿಕೊಂಡಿರುವುದು ನಿಜವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT