ಸೋಮವಾರ, ಮೇ 23, 2022
28 °C

ಸಮಾಜದ ದರ್ಶನಕ್ಕೆ ವೈಚಾರಿಕ ದೀವಟಿಗೆ!

ಎಸ್‌.ಆರ್‌. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕತೆ ಪರಸ್ಪರ ಒಂದನ್ನೊಂದು ಬೆಳೆಸುವುದು ಡಾ.ರಾಜೇಂದ್ರ ಚೆನ್ನಿ ಅವರ ವಿಮರ್ಶೆಯ ಪ್ರಮುಖ ಲಕ್ಷಣಗಳಲ್ಲೊಂದು. ಸೂಕ್ಷ್ಮ ಓದನ್ನು ಪುರಾವೆಸಹಿತ ತೋರಿಸುವ ಕೃತಿನಿಷ್ಠ ಓದಿನಿಂದ ಹುಟ್ಟುವ ಒಳನೋಟಗಳು ಅವರನ್ನು ಸದಾ ಆಕರ್ಷಿಸುತ್ತವೆ. ಅವರ ಈಚಿನ ಕೃತಿ ‘ಲೋಕ ವಿಮರ್ಶೆ’ಯಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ವಿಮರ್ಶೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ. ಈ ಸಂಕಲನದಲ್ಲಿರುವ 63 ವಿಮರ್ಶಾ ಬರಹಗಳಲ್ಲಿ ಹೆಚ್ಚಿನವು ಅವರು ಪತ್ರಿಕೆ
ಗಳಲ್ಲಿ ಮೂರು ವರ್ಷಗಳ ಕಾಲ ಪ್ರಕಟಿಸಿದವು. ಭಾಷಣಗಳ ಬರಹ ರೂಪಗಳು, ಮುನ್ನುಡಿಗಳು ಮತ್ತು ವಿಮರ್ಶಾ ಟಿಪ್ಪಣಿಗಳೂ ಸೇರಿ ಚೆನ್ನಿಯವರ ಈಚಿನ ಚಿಂತನಾ ವಿಧಾನ ಹಾಗೂ ತಾತ್ವಿಕ ವಿಚಾರಗಳಿಗೆ ‘ಲೋಕ ವಿಮರ್ಶೆ’ ಕನ್ನಡಿ ಹಿಡಿಯುತ್ತದೆ.

ಸಾಹಿತ್ಯ ವಿಮರ್ಶೆ, ಆತನಕ ಬೆಳೆದುಬಂದ ಸಾಹಿತ್ಯ ಕಲಾ ಮೀಮಾಂಸೆ ಸಾಹಿತ್ಯ ಕೃತಿಗಳ ಒಟ್ಟು ಪರಂಪರೆಯನ್ನು ಗಮನಿಸಬೇಕಾದ ಜವಾಬ್ದಾರಿ ಹೊಂದಿರುತ್ತದೆ. ವೈಚಾರಿಕ ಲೇಖನಗಳಿಗೆ ಮೀಮಾಂಸೆಗಿಂತ ಹೆಚ್ಚು ಸಿದ್ಧಾಂತಗಳ ಕಟ್ಟು
ಪಾಡುಗಳು ಕಾಡುತ್ತವೆ. ಇವೆರಡಕ್ಕೂ ಸಮಾನವಾದ ಅಂಶವೆಂದರೆ ವಿಶ್ಲೇಷಣಾ ವಿಧಾನಗಳು. ಚೆನ್ನಿಯವರು ಸಾಹಿತ್ಯ ವಿಮರ್ಶೆಯಿಂದ ಪಡೆದ ವಿಶ್ಲೇಷಣಾ ವಿಧಾನಗಳನ್ನು ಸಾಮಾಜಿಕ, ವೈಚಾರಿಕ ಬರಹಗಳಲ್ಲೂ ಬಳಸಿಕೊಳ್ಳುತ್ತಾರೆ. ಹೀಗಾಗಿ ಅವರು ‘ಲೋಕ ವಿಮರ್ಶೆ’ಯಲ್ಲಿ ಸಾಮಾಜಿಕ ವಿವರಗಳನ್ನು ಪುರಾವೆಗಳ ರೂಪದಲ್ಲಿ ದಾಖಲಿಸಿ ವೈಚಾರಿಕತೆಯನ್ನು ಪ್ರತಿಪಾದಿಸುತ್ತಾರೆ. ಅದರಿಂದಾಗಿ ಅವರು ಎಡಪಂಥೀಯ ಚಿಂತನೆಯ ನೆಲೆಗಳಿಂದ ಹೊರಟಾಗಲೂ ಅದೊಂದು ಸಿದ್ಧಾಂತದ ನಿಲುವು ಆಗುವುದಿಲ್ಲ. ಬದಲಾಗಿ ಅವರ ವಿಶ್ಲೇಷಣೆಗಳು ಅದನ್ನೊಂದು ಉದಾರ ಮಾನವೀಯ ನೆಲೆಯಲ್ಲಿ ಪ್ರತಿಪಾದಿಸುತ್ತವೆ.

ಬಹುತ್ವದ ಪರವಾದ ವಿಶ್ಲೇಷಣೆಗಳು ಅವರು ನೀಡುವ ಪುರಾವೆಗಳ ಮೂಲಕ ಪ್ರಜಾಪ್ರಭುತ್ವದ ಮೂಲಚಿಂತನೆಯಾಗಿ ಪರಿವರ್ತಿತವಾಗುತ್ತವೆ. ಹೀಗಾದಾಗ ಅದು ಧಾರ್ಮಿಕ ಅಥವಾ ಯಾವುದೇ ಒಂದು ಪಂಥೀಯ ನಿಲುವನ್ನು ಮೀರಿ ಪ್ರಜಾ
ಪ್ರಭುತ್ವದ ನೆಲೆಗಳನ್ನು ಅವರ ಒಳನೋಟಗಳಿಂದ ಕಾಣಿಸಲು ನೆರವಾಗುತ್ತದೆ. ಅದರ ಮೂಲದಲ್ಲಿ ಕೆಲಸ ಮಾಡುವುದು ಅವರು ಸಾಹಿತ್ಯ ವಿಮರ್ಶೆಯಿಂದ ಪಡೆದ ಮೂಲ ಸತ್ವವೇ ಆಗಿದೆ.

‘ದೇಶಭಕ್ತ ಪದದ ಸ್ತ್ರೀವಾಚಕ ಪದವಿಲ್ಲವೇ?’ ಲೇಖನ ಪ್ರಾರಂಭವಾಗುವುದು ಮಲಯಾಳಂ ಲೇಖಕಿ ಸಾರಾ ಜೋಸೆಫ್‌ ಕತೆಯ ಮೂಲಕ. ಕನ್ನಿಕೆ ಪದದ ಪುರುಷ ವಾಚಕದ ಚರ್ಚೆಯಿಂದ. ಲೈಂಗಿಕ ಪರಿಶುದ್ಧತೆ ಸ್ತ್ರೀಯರಿಗೆ ಮಾತ್ರ ಅನ್ವಯಿಸುತ್ತದೆ ಎಂಬ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಮ್ಮ ಗಡಿಗಳಲ್ಲಿ ಹುತಾತ್ಮರಾದ ಸೈನಿಕರು ‘ದೇಶಭಕ್ತ’ರಾದರೆ ಅವರ ಪತ್ನಿಯರು ದೇಶಭಕ್ತೆಯರಾಗಬೇಕಲ್ಲವೇ ಎಂದು ಚರ್ಚೆ ಪ್ರಾರಂಭವಾಗುತ್ತದೆ.

ಹುತಾತ್ಮ ಸೈನಿಕ ಬಬ್ಲು ಸಂತ್ರಾನ ಪತ್ನಿ ಮಿತಾ ಸಂತ್ರಾ ತನ್ನ ಪತಿಯನ್ನು ಕಳೆದುಕೊಂಡಾಗಲೂ ಭಾರತ–ಪಾಕಿಸ್ತಾನಗಳ ನಡುವೆ ಯುದ್ಧ ಬೇಡ, ಶಾಂತಿ ಇರಲಿ ಎಂದು ಹೇಳಿದ ಮಾತು ಆಕೆ ದೇಶದ್ರೋಹಿ ಎಂದು ಯಾಕೆ ಟ್ರೋಲ್‌ ಆಯಿತು ಎಂಬ ಪ್ರಶ್ನೆಯಂತಹ ಹಲವು ಪುರಾವೆಗಳ ಸಹಿತ ವಿಚಾರ ಮಂಥನ ಮಾಡುತ್ತದೆ. ಲೇಖನದ ಇರಿಯುವ ವ್ಯಂಗ್ಯ, ಸೈನಿಕರ ತ್ಯಾಗವನ್ನು ಚುನಾವಣಾ ರಾಜಕೀಯಕ್ಕೆ ಬಳಸುವ ಚಿಂತನಾ ವಿರೋಧಿ, ಭಾವೋದ್ರೇಕ ಪ್ರವೃತ್ತಿಯನ್ನು ವಿಶ್ಲೇಷಿಸುತ್ತದೆ.

ಟಾಲ್‌ಸ್ಟಾಯ್‌ ಅವರ ‘ಯುದ್ಧ ಮತ್ತು ಶಾಂತಿ’ಯಂತಹ ಕಾದಂಬರಿಯನ್ನು ವಿಮರ್ಶಾತ್ಮಕವಾಗಿ ಜೀರ್ಣಿಸಿಕೊಳ್ಳದ ಮನಸ್ಸೊಂದು ಇಂಥ ಲೇಖನ ಬರೆಯುವುದು ಸಾಧ್ಯವಿಲ್ಲ. ಅದೇ ರೀತಿ ದ್ರೌಪದಿ ಮತ್ತು ಎಬಿವಿಪಿ ದೇಶಭಕ್ತಿ, ಹಿಂಸೆಯ ವ್ಯಾಖ್ಯಾನಗಳು, ಪ್ರತಿಮಾ ರಾಜಕೀಯ, ಪದ್ಮಾವತಿ ಪ್ರಸಂಗ, ನಮ್ಮ ಬಿಕ್ಕಟ್ಟುಗಳು... ಹೀಗೆ ಹಲವು ಲೇಖನಗಳನ್ನು ಉದಾಹರಿಸಬಹುದು.

ಕುವೆಂಪು, ಕಾರಂತ, ಷ. ಶೆಟ್ಟರ, ಕಾರ್ನಾಡ, ರಾಮಾನುಜಂ, ಬೆಸಗರಹಳ್ಳಿ, ಲಂಕೇಶ್‌, ತೇಜಸ್ವಿ, ಮೂಡ್ನಾಕೂಡು, ಮೊಗಳ್ಳಿ, ಕನಕರಾಜ್‌, ಬಸವರಾಜ ಸಬರದ, ಎಚ್‌.ಎಸ್‌.ರಾಘವೇಂದ್ರರಾವ್‌ ಹೀಗೆ ಹಲವು ಕನ್ನಡ ಲೇಖಕರ ಬಗ್ಗೆ ಬರೆದ ಸಾಂದರ್ಭಿಕ ಲೇಖನಗಳು ಇಲ್ಲಿವೆ. ಅಮಿತಾವ್‌ ಘೋಷ್‌, ಬ್ರೆಕ್ಟ್‌, ಎರಿಕ್‌ ಪ್ರಾಮ್‌, ಆರ್ವೆಲ್‌, ವಿಲ್‌ ಡ್ಯುರಾಂಟ್‌, ಟಾಲ್‌ಸ್ಟಾಯ್‌, ಶೇಕ್ಸ್‌ಪಿಯರ್‌, ವಿಕ್ಟರ್‌ ಹ್ಯೂಗೊ (ಪ್ಯಾರಿಸ್‌ನ ನೊತ್ರೊದಾಮ್‌ ಚರ್ಚ್‌ನ ಬೆಂಕಿ ಅವಘಡದ ಸಂದರ್ಭ) ಮೊದಲಾದ ಪಾಶ್ಚಿಮಾತ್ಯ ಲೇಖಕರ ಕುರಿತೂ ಸಾಂದರ್ಭಿಕ ಬರಹಗಳಿವೆ. ಗಾಂಧಿ, ಅಂಬೇಡ್ಕರ್‌, ದಲಿತ ರಾಜಕೀಯ ಮೊದಲಾದ ನೇರ ರಾಜಕೀಯ ಚಿಂತನಾ ಬರಹಗಳೂ ಇವೆ. ಇಲ್ಲಿನ ಬರಹಗಳಲ್ಲಿ ಸಮಾಜ ಮತ್ತು ಸಾಹಿತ್ಯಗಳ ನಡುವೆ ಅವಿನಾಭಾವ ಸಂಬಂಧವಿದೆ. ಅವು ಪ್ರತ್ಯೇಕ ಕಕ್ಷೆಯಲ್ಲಿ ಇರುವ ವಿಚಾರಗಳಲ್ಲ. ಪ್ರತ್ಯಕ್ಷ ಅಥವಾ ಪರೋಕ್ಷ ರಾಜಕೀಯ ನಿಲುವುಗಳಿಲ್ಲದ ಸಾಹಿತ್ಯ ಅಥವಾ ಸಾಮಾಜಿಕ ಚಿಂತನೆ ಇಂದು ಸಾಧ್ಯವಿಲ್ಲ ಎಂಬ ತಾತ್ವಿಕತೆಯಿಂದ ಇಲ್ಲಿನ ಲೇಖನಗಳು ಮೂಡಿಬಂದಿವೆ.

ಚೆನ್ನಿಯವರ ಸಾಹಿತ್ಯ ವಿಮರ್ಶೆಯ ಸಂಪೂರ್ಣ ಸತ್ವ ಹಾಗೂ ಒಳನೋಟಗಳು ‘ಪ್ರಾಚೀನ ಕನ್ನಡ ಸಾಹಿತ್ಯದ ಅಂತರ್‌ ಶಿಸ್ತೀಯ ಅಧ್ಯಯನ’ದಂತಹ ಬರಹಗಳಲ್ಲಿ ಗೋಚರಿಸುತ್ತವೆ. ಅಸಂಗ್ರಹ, ಅಪರಿಗ್ರಹ, ಅಹಿಂಸೆ, ಸನ್ಯಾಸ ಇಂಥ ಮೌಲ್ಯಗಳನ್ನು ಹೊಂದಿದ ಜೈನ ಧರ್ಮವು ನಿರಂತರ ಕಾಳಗಗಳ ಅಂದಿನ ಕನ್ನಡ ನಾಡಿನ ಚರಿತ್ರೆಯಲ್ಲಿ ವಹಿಸಿದ ಪಾತ್ರವೇನು ಎಂಬ ಪ್ರಶ್ನೆಯನ್ನು ಪಂಪ ಮೊದಲಾದ ಕವಿಗಳ ಹಿನ್ನೆಲೆಯಲ್ಲಿ ಚೆನ್ನಿ ಕೇಳುತ್ತಾರೆ. ವಿಮರ್ಶೆ ಕೇಳುವ ಪ್ರಶ್ನೆಗಳು ವಿಶ್ಲೇಷಣೆ ತಲುಪಬಹುದಾದ ಎತ್ತರವನ್ನೂ ಸೂಚಿಸುತ್ತವೆ.

ಸಮಕಾಲೀನ ಬರಹಗಾರರ ಬಗ್ಗೆ ಬರೆಯುವಾಗ ಕೆಲವೊಮ್ಮೆ ಚೆನ್ನಿ ಉದಾರವಾಗಿರುತ್ತಾರೆ. ಎಚ್‌.ಎಸ್‌.ಆರ್‌ ಅವರು ಮಹಿಳಾ ಸಾಹಿತ್ಯ ವಿಮರ್ಶೆಗೆ ನೀಡಿದ ಕೊಡುಗೆ ಬಗ್ಗೆ ಅವರು ಬರೆದುದು ಅದಕ್ಕೊಂದು ನಿದರ್ಶನ. ಚೆನ್ನಿಯವರ ವಿಮರ್ಶಾ ಕೃತಿಗಳನ್ನು ಒಟ್ಟಾಗಿ ಗ್ರಹಿಸಿದಾಗ ಪಾಶ್ಚಿಮಾತ್ಯ ಸಾಹಿತ್ಯ ಸಿದ್ಧಾಂತಗಳನ್ನು ಅರಗಿಸಿಕೊಂಡ ಪ್ರತಿಭೆ ಕನ್ನಡ ಸಾಹಿತ್ಯ ಚಿಂತನೆಯನ್ನು ಪುನರ್‌ರೂಪಿಸುತ್ತಿರುವುದು ಗೋಚರಿಸುತ್ತದೆ. ನಮ್ಮ ಸಂಸ್ಕೃತಿ ವಿಮರ್ಶೆ– ಚಿಂತನೆಗಳಿಗೂ ಪಾಠಗಳು ಅಗತ್ಯ ಎಂಬುದನ್ನು ಅವರ ವಿಮರ್ಶೆ ಪ್ರತಿಪಾದಿಸುತ್ತಾ ಬಂದಿದೆ. ಅವರು ಆಶಯ ವಿಮರ್ಶೆಯನ್ನು ಪಠ್ಯಗಳ ಚೌಕಟ್ಟಿನೊಳಗೇ ಹೇಳಲು ಪ್ರಯತ್ನಿಸುವವರು. ಲೋಕ ವಿಮರ್ಶೆ ಸಂಗ್ರಹದಲ್ಲಿ ಚೆನ್ನಿಯವರು ಆದರ್ಶವನ್ನು ಪುನರ್‌ ವ್ಯಾಖ್ಯಾನಿಸುವ; ಸಾಮಾಜಿಕ ಚಿಂತನೆಯನ್ನು ವೈಚಾರಿಕ ಚೌಕಟ್ಟಿನೊಳಗೆ ಪುರಾವೆಸಹಿತ ಪ್ರತಿಪಾದಿಸುವ ವಿಮರ್ಶಾ ಸಂಯಮದಿಂದಲೇ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು