ಶನಿವಾರ, ಜನವರಿ 16, 2021
17 °C

ಪುಸ್ತಕ ವಿಮರ್ಶೆ: ಸ್ತ್ರೀವಾದದ ಹಾದಿಯಲ್ಲಿ ನಾಲ್ಕು ಹೆಜ್ಜೆ

ಎಸ್‌.ಆರ್‌.ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಹೆಣ್ಣು ಹೆಜ್ಜೆ
ಲೇ:
ಡಾ.ಎಚ್‌.ಎಸ್‌. ಅನುಪಮಾ
ಪ್ರ: ಲಡಾಯಿ ಪ್ರಕಾಶನ
ಮೊ: 94802 86844
ಪುಟಗಳು: 270
ಬೆಲೆ: 200

***

ಡಾ.ಎಚ್‌.ಎಸ್‌. ಅನುಪಮಾ ಅವರು ಸ್ತ್ರೀವಾದದ ಸಕ್ರಿಯ ಚಳವಳಿಗಾರ್ತಿ ಹಾಗೂ ಲೇಖಕಿ. ವೃತ್ತಿಯಿಂದ ವೈದ್ಯರಾಗಿರುವ ಅವರು ಈಗಾಗಲೇ 48 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದೀಗ ಲಡಾಯಿ ಪ್ರಕಾಶನ ಅವರ ‘ಹೆಣ್ಣು ಹೆಜ್ಜೆ: ಮಹಿಳಾ ಮಾದರಿ–ಮಾರ್ಗ’ ಎಂಬ ಕೃತಿಯನ್ನು ಹೊರ ತಂದಿದೆ. ಸಮಾನತೆ, ಸ್ವಾತಂತ್ರ್ಯಗಳ ದೃಷ್ಟಿಯಿಂದ ಮಹಿಳೆಯರಿಗೆ ಮಾದರಿ ಹಾಗೂ ಸ್ಫೂರ್ತಿ ಆಗಬಲ್ಲ ಹಲವು ಮಹಿಳಾ ಸಾಧಕಿಯರನ್ನು ಈ ಕೃತಿ ಪರಿಚಯಿಸುತ್ತದೆ. ಇಲ್ಲಿ ಹಲವರ ವ್ಯಕ್ತಿಚಿತ್ರ ರೂಪದ ಪರಿಚಯವೂ ಸೇರಿಕೊಂಡಿದೆ.

ಇಸ್ರೇಲ್‌ನಲ್ಲಿ 1988ರಲ್ಲಿ ಪ್ರಾರಂಭವಾದ ‘ವಿಮೆನ್‌ ಇನ್‌ ಬ್ಲ್ಯಾಕ್‌’ ಕಪ್ಪು ಉಡುಗೆ ಧರಿಸಿದ ಮಹಿಳೆಯರ ಯುದ್ಧ ವಿರೋಧಿ ಸಂಘಟನೆ. ಲೋಕಕಂಠಕವಾದ ಯುದ್ಧ ಹೆಣ್ಣುಮಕ್ಕಳ ಬದುಕನ್ನು ಹದಗೆಡಿಸುವ ಪರಿಯನ್ನು ತಿಳಿಸುತ್ತಾ ಯುದ್ಧ ವಿರೋಧಿ ಸಂಘಟನೆಯನ್ನು ಪರಿಚಯಿಸುವ ಲೇಖನವಿದು. ಭಾರತೀಯಳೇ ಆದ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ, ಸೋಮಾಲಿಯಾ ಮೂಲದ ಅಮೆರಿಕನ್ ರೂಪದರ್ಶಿ ವಾರಿಸ್‌ ಡೆರಿ (ಅವಳ ಆತ್ಮಕಥೆಯಾಧರಿಸಿದ ಸಿನಿಮಾ – ಡೆಸರ್ಟ್‌ ಫ್ಲವರ್‌), ಮುಸ್ಲಿಂ ಹೆಣ್ಣು ಮಗಳು, ‘ಅವಧ್‌ನಾಮಾ’ ಉರ್ದು ದಿನಪತ್ರಿಕೆಯ ಸಂಪಾದಕಿ ಶಿರೀನ್ ದಳವಿ ಹೀಗೆ ಹಲವು ಹೋರಾಟಗಾರ್ತಿಯರ ಚಿತ್ರಣಗಳು ಇಲ್ಲಿವೆ.

ಡಾ. ಅನುಪಮಾ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಮತ್ತು ‘ಮೇ ಸಾಹಿತ್ಯ ಮೇಳ ಬಳಗ’ ಇವುಗಳಲ್ಲಿ ಸಕ್ರಿಯ ಕಾರ್ಯಕರ್ತೆ. ಅವರ ಬರವಣಿಗೆಗಳಲ್ಲಿ ಇಂತಹ ಸಕ್ರಿಯ ಚಳವಳಿಗಳಿಗೆ ಪ್ರೇರೇಪಣೆ ಕೊಡಬಲ್ಲ ವಿಷಯಗಳನ್ನು ವೈಚಾರಿಕವಾಗಿ ವಿವರಿಸುವ ಉದ್ದೇಶವಿರುತ್ತದೆ. ಅದರ ಜೊತೆ ಅಂತಹ ವಿಚಾರ, ವ್ಯಕ್ತಿ ಚಿತ್ರಣಗಳಿಂದ ಸ್ತ್ರೀಸಮಾನತೆಯ ಹೋರಾಟಕ್ಕೆ ಪೂರಕವಾಗಬಲ್ಲ ಉತ್ತಮ ಮಾದರಿಗಳನ್ನು ಕರ್ನಾಟಕದ ಹೆಣ್ಣುಮಕ್ಕಳಿಗೆ ಪರಿಚಯಿಸುವ ಉದ್ದೇಶವೂ ಇರುತ್ತದೆ. ಈ ಪುಸ್ತಕದ ಎಲ್ಲಾ 28 ಬರಹಗಳೂ ಹೀಗೆ ವ್ಯಕ್ತಿ ವಿಚಾರಗಳನ್ನು ಪರಿಚಯಿಸುತ್ತವೆ.

ಇಲ್ಲಿನ ಬರಹಗಳು ಈ ಮೊದಲೇ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳನ್ನು ಪತ್ರಿಕೆಗಳಲ್ಲಿ ಬಿಡಿ ಬಿಡಿಯಾಗಿ ಓದಿದ್ದಾಗ ಗೋಚರಿಸದೇ ಇದ್ದ ಸಮಾನತೆಯ ಹೋರಾಟಕ್ಕೆ ಬೇಕಾದ ಮನೋಭಾವವನ್ನು ಸಿದ್ಧಗೊಳಿಸುವ ಉದ್ದೇಶ ಈ ಬರಹಗಳನ್ನು ಒಟ್ಟಾಗಿ ಓದಿದಾಗ ಗೋಚರಿಸುತ್ತದೆ.

ಅನುಪಮಾ ಅವರು ಸ್ತ್ರೀವಾದವನ್ನೂ ಸರಳವಾಗಿ ವಿವರಿಸಬಲ್ಲವರು. ಸ್ತ್ರೀವಾದವನ್ನು ಬೌದ್ಧಿಕ ಕಸರತ್ತಿನ ಸಂಕೀರ್ಣ ಭಾಷೆಯಲ್ಲಿ ಹೇಳುವುದು ಅವರ ಜಾಯಮಾನವಲ್ಲ. ಸ್ವಾತಂತ್ರ್ಯ, ಸಮಾನತೆ ಮತ್ತು ಯಾವುದೇ ರೀತಿಯ ಶೋಷಣೆಯ ವಿರೋಧದ ನಿಲುವು ಈ ಮೂರು ಅಂಶಗಳಿಂದ ಕೂಡಿದ ತಳಪಾಯದ ಮೇಲೆ ಅವರ ಬರಹಗಳು ಬೆಳೆಯುತ್ತವೆ. ಹೋರಾಟವಿಲ್ಲದ ಕೇವಲ ಕುರ್ಚಿ–ಮೇಜುಗಳ ಬರಹ ಕೂಡ ಅವರ ಜಾಯಮಾನವಲ್ಲ. ಈ ದೃಷ್ಟಿಯಿಂದ ದೇಶ–ವಿದೇಶಗಳ ಹಲವು ಮಹಿಳಾ ಮಾದರಿಗಳು ಮತ್ತು ಅವರು ಸಾಗಿದ ಮಾರ್ಗ ಮತ್ತು ಹೋರಾಟಗಳನ್ನು ಒಂದು ಕಡೆ ಓದಲು ಈ ಪುಸ್ತಕ ಸಹಕರಿಸುತ್ತದೆ. ಇಲ್ಲಿನ ಭಾಷೆ, ವಿಚಾರಗಳು ಚಳವಳಿಗೆ ಪೂರಕವಾದ ಗುರಿಯತ್ತ ಚಲಿಸುತ್ತವೆ. ಸ್ತ್ರೀ ಸಮಾನತಾ ಚಳವಳಿಯ ದೊಡ್ಡ ಚಿತ್ರದ ಒಂದು ಪುಟ್ಟ ಭಾಗವಾಗಿ ಇಂತಹ ಬರಹಗಳು ತಮ್ಮ ಉದ್ದೇಶ ಸಾಧನೆಯಲ್ಲಿ ಸಫಲವಾಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು