ಬುಧವಾರ, ಏಪ್ರಿಲ್ 21, 2021
25 °C

ಪುಸ್ತಕ ವಿಮರ್ಶೆ: ಸ್ವಾತಂತ್ರ್ಯ ಚರಿತೆ, ಅನನ್ಯ ದಾಂಪತ್ಯಗೀತೆ

ಶಾರ್ವರಿ Updated:

ಅಕ್ಷರ ಗಾತ್ರ : | |

Prajavani

ಕಸ್ತೂರ್‌ಬಾ Vs ಗಾಂಧಿ
ಲೇ:
ಬರಗೂರು ರಾಮಚಂದ್ರಪ್ಪ
ಪು: 160
ಬೆ: ರೂ. 120
ಪ್ರ: ಅಭಿರುಚಿ ಪ್ರಕಾಶನ
99805 60013

ಭಾರತೀಯ ಪುರಾಣಗಳು ಪ್ರತಿಪಾದಿಸುವ ‘ಅರ್ಧನಾರೀಶ್ವರ ತತ್ವ’ಕ್ಕೆ ಅತ್ಯುತ್ತಮ ಉದಾಹರಣೆ ಗಾಂಧಿ ಮತ್ತು ಕಸ್ತೂರ್‌ಬಾ ಅವರ ಅಪೂರ್ವ ಜೋಡಿ. ಗಾಂಧಿಯ ವ್ಯಕ್ತಿತ್ವ ಮತ್ತು ಸಾಧನೆಯ ಹಿನ್ನೆಲೆಯಲ್ಲಿ ಕಸ್ತೂರರ ಪ್ರೇಮ, ಔದಾರ್ಯ ಮತ್ತು ತ್ಯಾಗವನ್ನು ಕಾಣುವಂತೆ, ಕಸ್ತೂರರ ವ್ಯಕ್ತಿತ್ವ–ಸಾಧನೆಯಲ್ಲಿ ಗಾಂಧಿ ಕಾಣಿಸುತ್ತಾರೆ. ಪ್ರತ್ಯೇಕಿಸಿ ನೋಡುವುದು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಗಾಂಧಿ–ಕಸ್ತೂರರ ಬದುಕು ತಳುಕು ಹಾಕಿಕೊಂಡಿದೆ. ಈ ಅಭಿನ್ನತೆ ಬರಗೂರು ರಾಮಚಂದ್ರಪ್ಪ ಅವರ ‘ಕಸ್ತೂರ್‌ಬಾ Vs ಗಾಂಧಿ’ ಕಾದಂಬರಿಯಲ್ಲೂ ಕಾಣಿಸುತ್ತದೆ.

ಕಸ್ತೂರ್‌ಬಾ ಅವರ ಬದುಕಿನ ಕಥೆಯನ್ನು ಬರೆಯುವುದು ಕಾದಂಬರಿಕಾರರ ಉದ್ದೇಶವಾಗಿದ್ದರೂ, ಕಸ್ತೂರರ ಜೊತೆಗೆ ಗಾಂಧಿಯನ್ನೂ ಚಿತ್ರಿಸುವುದು ಅವರಿಗೆ ಅನಿವಾರ್ಯವಾಗಿದೆ. ಆ ಕಾರಣದಿಂದಾಗಿಯೇ ಶೀರ್ಷಿಕೆಯಲ್ಲಿ ಕಸ್ತೂರರ ಹೆಸರಿನ ಜೊತೆಗೆ ಗಾಂಧಿಯೂ ಸೇರಿಕೊಂಡಿದ್ದಾರೆ. ಇಲ್ಲಿನ ‘ವರ್ಸಸ್‌’ ಇಬ್ಬರ ನಡುವಣ ವ್ಯತ್ಯಾಸವನ್ನು ಗುರ್ತಿಸುವ ಗೆರೆಯಲ್ಲ; ಅದು ಒಬ್ಬರೊಳಗೊಬ್ಬರು ಬೆರೆತುಹೋದ ಭಾರತೀಯ ಸಮಾಜದ ಅಪೂರ್ವ ವಿದ್ಯಮಾನ.

ಜೀವನಚರಿತ್ರೆಯ ಚೌಕಟ್ಟನ್ನು ಮೀರಿ ‘ಕಸ್ತೂರ್‌ಬಾ Vs ಗಾಂಧಿ’ ಕೃತಿಯನ್ನು ಹೃದಯ ಸಂವಾದದ ಕಥನವನ್ನಾಗಿಸುವ ನಿಟ್ಟಿನಲ್ಲಿ ಬರಗೂರರು ವಿಶಿಷ್ಟ ನಿರೂಪಣಾ ತಂತ್ರ ಬಳಸಿದ್ದಾರೆ. ಆ ತಂತ್ರ ಎರಡು ಬಗೆಯದು. ಮೊದಲನೆಯದು, ಸಂವಾದರೂಪದ್ದು: ಕಸ್ತೂರ್‌ ಮತ್ತು ಗಾಂಧಿಯನ್ನು ಎದುರುಬದುರಾಗಿಸಿ ಮಾತನಾಡಿಸುವ ಮೂಲಕ ಘಟನೆಗಳನ್ನು ಕಟ್ಟಿಕೊಡುವುದು. ಈ ಸಂವಾದ ಮುದ್ದಣ ಮನೋರಮೆಯರ ರಮ್ಯ ಮಾದರಿಯದ್ದಲ್ಲ; ಒಬ್ಬರನ್ನೊಬ್ಬರು ಕೆಣಕುತ್ತ ಕೆದಕುತ್ತ ಸ್ವೀಕರಿಸುತ್ತ ಸಾಗುವ ವಿಮರ್ಶಾ ಮಾದರಿಯದು. ಎರಡನೇ ತಂತ್ರ, ಭಾಷಿಕ ರೂಪದ್ದು: ಗದ್ಯ ಪದ್ಯಗಳ ಮಿಳಿತವಾದ ಹಾಗೂ ಸಂಭಾಷಣಾ ಪ್ರಧಾನವಾದ ಭಾಷಾಶೈಲಿ ಕಸ್ತೂರ್‌–ಗಾಂಧಿ ಕಥೆಯ ಚೆಲುವನ್ನು ಹೆಚ್ಚಿಸಿದೆ ಹಾಗೂ ಕಾದಂಬರಿಗೆ ನಾಟಕೀಯತೆಯನ್ನು ತಂದುಕೊಟ್ಟಿದೆ.

ಕಸ್ತೂರ್‌ ಮತ್ತು ಗಾಂಧಿಯ ನಡುವಣ ಸಂವಾದದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪಕ್ಷಿನೋಟ ನೀಡುವುದು ಹಾಗೂ ಆ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ದಂಪತಿಯ ಉದಾತ್ತ ಬದುಕನ್ನು ಕಟ್ಟಿಕೊಡುವುದರ ಜೊತೆಗೆ, ದಾಂಪತ್ಯದ ಅನನ್ಯ ಮಾದರಿಯೊಂದನ್ನು ಓದುಗರ ಮುಂದಿಡಲು ಸಾಧ್ಯವಾಗಿರುವುದು ಕಾದಂಬರಿಯ ಹೆಚ್ಚುಗಾರಿಕೆ. ಸಮಾಜದಲ್ಲಿ ಸ್ವಾತಂತ್ರ್ಯ ಹಾಗೂ ಸಂಸಾರದಲ್ಲಿ ಸ್ವಾತಂತ್ರ್ಯ, ಎರಡರ ಹಂಬಲವೂ ಇಲ್ಲಿದೆ. ಗಾಂಧಿ ಎನ್ನುವ ಅಗ್ನಿದಿವ್ಯದಲ್ಲಿ ಕಸ್ತೂರರ ಅಪರಂಜಿತನ ಹೊಳಪುಗೊಳ್ಳುತ್ತಾ ಹೋದಂತೆ, ಕಸ್ತೂರರ ಮಾತೃಭಿತ್ತಿಯಲ್ಲಿ ಗಾಂಧಿಯ ವ್ಯಕ್ತಿತ್ವವೂ ಮಾಗುತ್ತಾ ಹೋದುದನ್ನು ಕಾದಂಬರಿ ಅತ್ಯಂತ ಸೊಗಸಾಗಿ ಚಿತ್ರಿಸಿದೆ. ದಾಂಪತ್ಯದ ಕಮ್ಮಟದಲ್ಲಿ ಕಸ್ತೂರ್‌ ಮತ್ತು ಗಾಂಧಿಯರ ವ್ಯಕ್ತಿತ್ವದ ವೈರುಧ್ಯಗಳು ಕರಗುತ್ತ, ಮಾನಸಿಕವಾಗಿ ಇಬ್ಬರೂ ಒಂದೇ ಆಗುವ ಸಾರ್ಥಕತೆಯನ್ನು ಗುರ್ತಿಸುವುದು ಬರಗೂರರ ಕೃತಿಗೆ ಸಾಧ್ಯವಾಗಿದೆ.

ಗಾಂಧಿ ಮತ್ತು ಅಂಬೇಡ್ಕರ್‌ ಮುಖಾಮುಖಿ ಕಾದಂಬರಿಯ ಉಜ್ವಲ ಭಾಗ. ವಿಭಿನ್ನ ವಿಚಾರಧಾರೆಗಳಿದ್ದರೂ ಒಂದೇ ಆಶಯ ಹೊಂದಿದ್ದ ಎರಡು ಮಹೋನ್ನತ ವ್ಯಕ್ತಿತ್ವಗಳನ್ನು ಮುಖಾಮುಖಿ ಆಗಿಸಿರುವ ಆರ್ದ್ರ ಸನ್ನಿವೇಶ ಕಾದಂಬರಿಯ ಘನತೆಯನ್ನು ಹೆಚ್ಚಿಸುವಂತಿದೆ. ಗಾಂಧಿ–ಅಂಬೇಡ್ಕರರ ಮಾತುಕತೆಯ ಚಿತ್ರಣದ ಮೂಲಕ, ಆ ಮುಖಾಮುಖಿ ವರ್ತಮಾನದಲ್ಲಿ ಮತ್ತೆ ಮತ್ತೆ ಸಾಧ್ಯವಾಗಬೇಕಾದ ಅಗತ್ಯವನ್ನು ಕಾದಂಬರಿಕಾರರು ಹೊಸ ತಲೆಮಾರಿಗೆ ಸೂಚಿಸುತ್ತಿರುವಂತಿದೆ.

ಕಸ್ತೂರ್‌ಬಾ ಕೃತಿಯನ್ನು ಸ್ತ್ರೀಸ್ವಾತಂತ್ರ್ಯದ ರೂಪದಲ್ಲಿಯೂ ನೋಡಲಿಕ್ಕೆ ಸಾಧ್ಯವಿದೆ. ಗಂಡನ ಬಗ್ಗೆ ಅಪಾರ ಗೌರವವಿದ್ದರೂ, ಕಸ್ತೂರ್‌ಬಾ ತಮ್ಮ ಸ್ವಂತಿಕೆಯನ್ನು ಬಿಟ್ಟುಕೊಡದ ದಿಟ್ಟ ಹೆಣ್ಣು. ಮಹಾತ್ಮ ಎನ್ನಿಸಿಕೊಂಡರೂ ‘ಪುರುಷಭಾಷೆ’ಯ ಹಂಗಿನಿಂದ ಗಾಂಧಿ ಪಾರಾಗದಿರುವುದನ್ನು ಅವಕಾಶ ಸಿಕ್ಕಾಗಲೆಲ್ಲ ಕಸ್ತೂರ್‌ ಎತ್ತಿ ತೋರಿಸುತ್ತಾರೆ. ಸೇವೆ, ಸರ್ವಾಧಿಕಾರದ ರೂಪು ಪಡೆದಾಗ ವಿರೋಧಿಸುತ್ತಾರೆ. ಕಸ್ತೂರರ ಆತ್ಮಸಾಕ್ಷಿಯ ಬೆಳಕಿನಲ್ಲಿ ನಡೆಯುವ ಗಾಂಧಿ, ಕೊನೆಗೆ ತಾವೇ ದೀಪವಾಗುತ್ತಾರೆ. ಆ ಗಾಂಧಿದೀಪದ ಬುಡದಲ್ಲಿ ತೈಲದ ರೂಪದಲ್ಲಿ ಕಸ್ತೂರರು ಇರುವುದು ಕಾದಂಬರಿಯುದ್ದಕ್ಕೂ ಓದುಗರ ಗಮನಕ್ಕೆ ಬರುತ್ತದೆ. ‘ನನ್ನ ನೆನಪುಗಳಲ್ಲಿ ಹೋರಾಟದ ಹೆಜ್ಜೆಗುರುತು ಮಾತ್ರ ಇಲ್ಲ. ತಾಯಿಗೆ ಆದ ಗಾಯವೂ ಇದೆ’ ಎನ್ನುವ ಕಸ್ತೂರರ ಮಾತು, ಅವರ ಬದುಕಿಗೇ ಬರೆದ ಭಾಷ್ಯದಂತಿದೆ.

‘ಕಸ್ತೂರ್‌ಬಾ Vs ಗಾಂಧಿ’ ಕಾದಂಬರಿ ಗಾತ್ರದಲ್ಲಿ ಕಿರಿದಾದರೂ, ಪರಿಣಾಮದಲ್ಲಿ ಹಿರಿದು. ಗಾಂಧಿಯ ಬಗ್ಗೆ ಅಪಕಲ್ಪನೆಗಳೇ ಹೆಚ್ಚುತ್ತಿರುವ ಈ ದಿನಗಳಲ್ಲಿ, ಬರಗೂರರ ಕೃತಿ ಯುವಜನರಿಗೆ ಚಾರಿತ್ರಿಕ ಸತ್ಯಗಳನ್ನು ತಿಳಿಸುವ ಹಾಗೂ ವರ್ತಮಾನದಲ್ಲಿ ನಮ್ಮ ದಿಕ್ಕು–ಬೆಳಕು ಯಾವುದಾಗಬೇಕೆನ್ನುವುದನ್ನು ಮನದಟ್ಟು ಮಾಡಿಸುವ ಪ್ರಾಂಜಲ ಪ್ರಯತ್ನವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು