ಭಾನುವಾರ, ಜುಲೈ 3, 2022
27 °C

ಅವಲೋಕನ | ಹಾವಳಿ: ವಿಮೋಚನಾ ಹೋರಾಟದ ಕಥನ

ಆನಂದಿನಿ Updated:

ಅಕ್ಷರ ಗಾತ್ರ : | |

Prajavani

ಹಾವಳಿ (ಕಾದಂಬರಿ)
ಲೇ: ಮಲ್ಲಿಕಾರ್ಜುನ ಹಿರೇಮಠ
ಪ್ರ: ಮನೋಹರ ಗ್ರಂಥಮಾಲಾ ಧಾರವಾಡ
ಸಂ: 9845447002

ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷ, ಒಂದು ತಿಂಗಳು, ಎರಡು ದಿನಗಳಾದ ಮೇಲೆ ಸಾವಿರಾರು ಜನರ ತ್ಯಾಗ ಬಲಿದಾನಗಳಿಂದ ಕೂಡಿದ ಮತ್ತೊಂದು ವಿಮೋಚನಾ ಹೋರಾಟದ ನಂತರವೇ ಹೈ.ಕ. (ಈಗ ಕಲ್ಯಾಣ ಕರ್ನಾಟಕ) ಪ್ರಾಂತ್ಯಕ್ಕೆ ಸ್ವಾತಂತ್ರ್ಯದ ಬೆಳಕು ಕಂಡಿತು. ಇದನ್ನೊಂದು ವರದಿ ಮಾತ್ರವಾಗಿ ಓದಿದ ಇತರೆ ಭಾಗದ ಜನರಿಗೆ ಈ ಪ್ರಾಂತ್ಯದ ಹಿಂದುಳಿದಿರುವಿಕೆಯ ಕಾರಣಗಳು ಹೊಳೆಯುವುದು ಕಷ್ಟವೇ. ಈ ವಿಮೋಚನಾ ಹೋರಾಟದ ಭೀಕರತೆಯನ್ನು ಒಂದು ಕಾದಂಬರಿಯ ಹದಕ್ಕೆ ಒಗ್ಗಿಸಿ ಮರುಸೃಷ್ಟಿಸಿದ ಗ್ರಾಮಭಾರತದ ಕಥನವೇ ‘ಹಾವಳಿ’.

ಶಾಂತರಸರ ‘ಉರಿದ ಬದುಕು’, ಜಂಬಣ್ಣ ಅಮರಚಿಂತರ ‘ಬೂಟುಗಾಲಿನ ಸದ್ದು’ ಕೃತಿಗಳನ್ನು ಬಿಟ್ಟರೆ ವಿಮೋಚನಾ ಹೋರಾಟದ ಕಥೆ ಇಷ್ಟು ಸಮಗ್ರವಾಗಿ, ಈ ಪರಿಪ್ರೇಕ್ಷ್ಯದಲ್ಲಿ ಬೇರೆಲ್ಲೂ ದಾಖಲಾದಂತಿಲ್ಲ. ಹಿಂಸೆಯ ಕಾರಣವನ್ನು ವ್ಯಕ್ತಿಯಲ್ಲಿ ಹುಡುಕದೆ ಸಮುದಾಯದಲ್ಲಿ ಮತ್ತು ಸಮಾಜೋ-ರಾಜಕೀಯ ಸಂದರ್ಭದಲ್ಲಿ ಹುಡುಕುವ ಈ ಕಾದಂಬರಿಯು, ಸಾಮರಸ್ಯದ ನೆಲೆಗಳಾದ ಹಳ್ಳಿಗಳು ರಜಾಕಾರರ ಹಾವಳಿಯ ಸಂದರ್ಭದಲ್ಲಿ ಕೋಮು ಆಧಾರಿತ ವಿಭಜನೆಗೆ ಒಳಗಾಗದೆ ನಿಜಾಮನ ಪರ ಮತ್ತು ಭಾರತದ ಪರ ಎಂಬ ನೆಲೆಯಲ್ಲಿ ವಿಭಜನೆ ಹೊಂದುವುದನ್ನು ಹಿಡಿದಿಟ್ಟಿದೆ. ಸ್ವಾತಂತ್ರ್ಯ ಬಂದು ಇಷ್ಟು ಅವಧಿಯ ನಂತರವೂ ಈ ಭಾಗದಿಂದ ಒಂದೇ ಒಂದು ಕೋಮುಗಲಭೆ ವರದಿಯಾಗಿಲ್ಲದರ ಹಿಂದೆ ಕೂಡ ಇದೇ ಸಮಚಿತ್ತ ಮನೋಧರ್ಮದ ಬೀಜವು ಕೆಲಸ ಮಾಡಿರುವುದನ್ನು ಗ್ರಹಿಸಲು ನೆರವಾಗುವಂತೆ ಈ ಕೃತಿ ಮೈದಾಳಿದೆ.

ಇತ್ತಂಡಗಳಿಂದಲೂ ಆರೋಗ್ಯಕರ ಸುದೂರ ಕಾಪಾಡಿಕೊಂಡು, ತೀರ್ಮಾನಗಳನ್ನೆಲ್ಲ ಓದುಗರಿಗೇ ಬಿಟ್ಟು, ಬಹುಮುಖಿಯಾದ ಈ ಸಂಕೀರ್ಣ ಕಥೆಯನ್ನು, ಕಾಲಬದ್ಧವಾಗಿದ್ದೂ ಕಾಲಾತೀತವಾಗುವಂತೆ ಕಟ್ಟಿಕೊಡಲಾಗಿದೆ. ಇದು ಸಂಕೀರ್ಣವೇಕೆಂದರೆ ಮೇಲ್ನೋಟಕ್ಕೆ ಭಾರತದ ರಾಜಕೀಯ ಇತಿಹಾಸದ ಒಂದು ಮುಖ್ಯ ವಿದ್ಯಮಾನದ ದಾಖಲೆಯಂತಿರುವ ಇದು; ಆಳದಲ್ಲಿ ಪ್ರೇಮ, ಸಂಬಂಧ, ಮನುಷ್ಯತ್ವ, ಸಣ್ಣತನ, ಅಧಿಕಾರಲಾಲಸೆಗಳ ಜಾಲವಾದ ಬಸಾಪುರವೆಂಬ ಗ್ರಾಮದ ಸಾವಯವ ಸಂಬಂಧಗಳ ಕಥನವೂ ಆಗಿ ರೂಪುಗೊಂಡಿದೆ.

ವಿಭಜನೆಯ ಪರವಾಗಿದ್ದ ಮುಸ್ಲಿಂ ನಾಯಕ ಜಿನ್ನಾರ ನೆನಪೇ ಬೇಗ ಆಗುವಂಥ ಪೂರ್ವಗ್ರಹೀತ ಮನಃಸ್ಥಿತಿಯ ಈಗಿನ ಹಲವರಿಗೆ, ಅಖಂಡ ಭಾರತದ ಪರವಾಗಿದ್ದ ಮುಸ್ಲಿಂ ನಾಯಕ ಮೌಲಾನಾ ಆಜಾದರ ನೆನಪೇ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಬಿಯ ಮೇಲೆ ಮರುಕ, ರೋಶನ್ ಸಾಹೇಬರ ಮೇಲೆ ಗೌರವ, ಶಂಕರ-ರೆಹಮಾನ-ಶೇಖರರ ಮೇಲೆ ಅಭಿಮಾನ, ದೇಸಾಯರ ಮೇಲೆ ಅಸಹ್ಯ ಮತ್ತು ವಸಂತನ ಮೇಲೆ ಛೀದರಿಕೆ ಭಾವ ಮೂಡುವಂತೆ ಅವುಗಳ ಪಾತ್ರಪೋಷಣೆ ಮಾಡಿರುವ ಲೇಖಕರ ಕ್ರಮ ಗಮನಾರ್ಹವಾಗಿದೆ.

ಇನ್ನು ಇಬ್ರಾಹಿಂಸಾಬರು ನಬಿಗೆ ಹೇಳುವ ‘ಜಿಹಾದ್ ಅಂದರೆ ನಮ್ಮೊಳಗಿನ ಸೈತಾನನ ವಿರುದ್ಧ ಹೋರಾಡೋದು’ ಎಂಬ ಮಾತು; ‘ಸಾಮಾನ್ಯ ಜನರು ದೇವರೇ ತಮಗೆ ದಿಕ್ಕುದೆಸೆ ಅಂತ ನಂಬಿಕೊಂಡರೆ, ನಾಯಕರು ತಾವೇ ದೇವರು-ಧರ್ಮಕ್ಕ ದಿಕ್ಕುದೆಸೆ ಕಲ್ಪಿಸಬಲ್ಲವರು ಅಂತ ತಿಳಕೊಂಡಿರ‍್ತಾರ’ ಎನ್ನುವ ಮಾತು ಮತ್ತು ಗುರವ್ವಳು ಶಂಕರನಿಗೆ ‘ಹರಾಮಿ ದುಡ್ಡಂದ್ರ ಚೇಳಿದ್ದಂಗ. ನಾವು ದುಡಿದಿದ್ದಷ್ಟ ನಮ್ಮ ದುಡ್ಡು’ ಎನ್ನುವ ಮಾತುಗಳಂತೂ ಗುಂಗು ಹಿಡಿಸುವಷ್ಟು ಶಕ್ತವಾಗಿವೆ. ಎಲ್ಲಮ್ಮನ ಜೋಗತಿ, ಜಾತ್ರಿ, ಗವಿಮಠದ ರಬ್ಬುಳಗಿಯ ವಿವರಗಳ ಜೊತೆಗೆ ಶಿವಮೂರ್ತಿಸ್ವಾಮಿ ಅಳವಂಡಿ, ಪಂಚಾಕ್ಷರಿ ಹಿರೇಮಠರಂಥ ನೈಜ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳೂ ಇಲ್ಲಿ ಬರುತ್ತವೆ.

ವಿಮೋಚನಾ ಹೋರಾಟದ ಕರಾಳತೆಯು ದೇಶದ ಸ್ವಾತಂತ್ರ್ಯ ಹೋರಾಟದ ಕರಾಳತೆಗಿಂತ ಯಾವ ವಿಧದಲ್ಲೂ ಎಳ್ಳಷ್ಟೂ ಬೇರೆಯಲ್ಲ ಎನ್ನುವುದನ್ನು ಕಾದಂಬರಿಕಾರರು ತಮ್ಮ ಎಂದಿನ ನಿರುದ್ವಿಗ್ನವಾದ ನಿರಾಭರಣ ಶೈಲಿಯಲ್ಲಿ ದಾಖಲಿಸಿ ತೋರಿಸಿ ಯಶಸ್ವಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು