ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ನಾಗರಿಕತೆಗಳನ್ನು ತುಲನಾತ್ಮಕವಾಗಿ ನೋಡುವ ಕೃತಿ: ಸಿ.ಎನ್.ರಾಮಚಂದ್ರನ್‌

‘ಬಿಯಾಂಡ್‌ ಈಸ್ಟ್‌ ಆ್ಯಂಡ್‌ ವೆಸ್ಟ್‌’ ಕೃತಿ ಕುರಿತ ಚರ್ಚೆ
Last Updated 30 ಏಪ್ರಿಲ್ 2022, 17:49 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಶ್ಚಾತ್ಯ, ಭಾರತೀಯ ಮಹಾಕಾವ್ಯ ಹಾಗೂ ಅನಂತರ ಬಂದ ಸಾಹಿತ್ಯ ಕೃತಿಗಳ ಮೂಲಕ ಎರಡು ನಾಗರಿಕತೆಗಳು ಮತ್ತು ಎರಡು ಸಂಸ್ಕೃತಿಗಳನ್ನು ತುಲನಾತ್ಮಕವಾಗಿ ನೋಡುವುದು ಬಿಯಾಂಡ್‌ ಈಸ್ಟ್‌ ಆ್ಯಂಡ್‌ ವೆಸ್ಟ್‌ ಕೃತಿಯ ಉದ್ದೇಶ’ ಎಂದುವಿಮರ್ಶಕಪ್ರೊ.ಸಿ.ಎನ್.ರಾಮಚಂದ್ರನ್‌ ತಿಳಿಸಿದರು.

ಸುಚೇತನ ಸ್ವರೂಪ ಅವರ ‘ಆ ಪೂರ್ವ ಈ ಪಶ್ಚಿಮ’ ಪುಸ್ತಕವನ್ನುಎನ್‌.ಎಸ್‌.ರಾಘವನ್‌ ಅವರು ‘ಬಿಯಾಂಡ್‌ ಈಸ್ಟ್‌ ಆ್ಯಂಡ್‌ ವೆಸ್ಟ್‌’ ಶೀರ್ಷಿಕೆಯಡಿ ಇಂಗ್ಲಿಷ್‌ಗೆ ಅನುವಾದಿಸಿದ್ದು ಈ ಕೃತಿ ಕುರಿತ ಆನ್‌ಲೈನ್‌ ಚರ್ಚೆಯಲ್ಲಿ ಶನಿವಾರ ಮಾತನಾಡಿದರು.

‘ಇದು ಅತ್ಯಂತ ಮಹಾ‌ತ್ವಾಕಾಂಕ್ಷೆಯ ವೈಚಾರಿಕ ಕೃತಿ. ಪಾಶ್ಚಿಮಾತ್ಯ ಹಾಗೂ ಭಾರತೀಯ ಮಹಾಕಾವ್ಯಗಳು, ಪಂಪನಿಂದ ಇಂದಿನವರೆಗಿನ ಕನ್ನಡ ಸಾಹಿತ್ಯದ ಮೇಲುನೋಟ, ವಚನ ಸಾಹಿತ್ಯ ಹೀಗೆ ಪೂರ್ಣಪ್ರಮಾಣದ ವ್ಯಾಖ್ಯಾನ ಮಾಡಲು ಅಸಾಧ್ಯ ಅನಿಸುವಷ್ಟು ವಿಚಾರಗಳು ಇದರಲ್ಲಿವೆ’ ಎಂದರು.

‘ಶ್ರೇಷ್ಠ ಮಹಾಕಾವ್ಯಗಳು,ಅವುಗಳ ಕಾಲಘಟ್ಟದ ಸಮಾಜ, ಸಂಸ್ಕೃತಿ, ಜನಾಂಗದ ಪ್ರಜ್ಞೆ ಇತ್ಯಾದಿಗಳೆಲ್ಲವನ್ನೂ ಸಫಲವಾಗಿ ಪ್ರತಿಫಲಿಸುತ್ತವೆ. ಈ ನಿಲುವನ್ನು ಕೃತಿಯಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಇಡೀ ವಿಶ್ವದಲ್ಲಿ ಕೇವಲ ನಾಲ್ಕು ಶ್ರೇಷ್ಠ ಮಹಾಕಾವ್ಯಗಳಿವೆ ಎಂದು ಲೇಖಕರು ಹೇಳುತ್ತಾರೆ.ಸಾಹಿತ್ಯ ಕೃತಿಗಳು ಇಡೀ ಸಮಾಜ ಅಥವಾ ರಾಷ್ಟ್ರದ ಸಂಸ್ಕೃತಿ, ಚಿಂತನೆ, ಪ್ರಬುದ್ಧತೆಯನ್ನು ಪ್ರತಿಫಲಿಸುವುದಿಲ್ಲ. ಅಲ್ಲಿಯೂ ಆಯ್ಕೆ ಬರುತ್ತದೆ. ಓದುಗರನ್ನು ಗಮನಿಸಿ ಲೇಖಕರು ಸಾಕಷ್ಟು ಬದಲಾವಣೆ ಮಾಡುತ್ತಾರೆ’ ಎಂದು ಹೇಳಿದರು.

ಪ್ರೊ.ಒ.ಎಲ್.ನಾಗಭೂಷಣಸ್ವಾಮಿ, ‘ಈ ಪುಸ್ತಕ ಓದಿದಾಗ ನಮ್ಮ ಸಂಸ್ಕೃತಿ ಹಾಗೂ ಸಾಹಿತ್ಯ ಕೃತಿಗಳ ಬಗ್ಗೆ ಅಪೂರ್ವವಾದ ಒಳನೋಟಗಳು ಲಭಿಸುತ್ತವೆ. ಓದುಗರಲ್ಲಿ ಹೊಸ ಪ್ರಶ್ನೆಗಳು ಜನ್ಮತಾಳುತ್ತವೆ. ಇಷ್ಟೊಂದು ವ್ಯಾಪ್ತಿಯ ಒಂದು ಸಾಂಸ್ಕೃತಿಕ ವಿಮರ್ಶೆ ಕನ್ನಡದಲ್ಲಿ ಆಗಿಲ್ಲ’ ಎಂ‌ದರು.

ಪ್ರೊ.ಎಚ್‌.ಎಸ್‌.ರಾಘವೇಂದ್ರ ರಾವ್‌, ‘ಪೂರ್ವವನ್ನು ಮರೆತ ಹಾಗೆ ಪಶ್ಚಿಮವು ನಮ್ಮನ್ನು ಆವರಿಸುತ್ತಿರುವ ವಿಶ್ವದಲ್ಲಿ, ನಾವೆಲ್ಲಾ ಪೂರ್ವ ಬೇಕು ಎನ್ನುತ್ತಲೇ ಪಶ್ಚಿಮವಾಗುತ್ತಿರುವ ಈ ಕ್ಷಣದಲ್ಲಿ ಇಂತಹ ಪುಸ್ತಕದ ಓದಿಗೆ ಬಹಳ ಮಹತ್ವವಿದೆ.ಈ ಪುಸ್ತಕದ ಬಹುಭಾಗ ಕನ್ನಡ ಸಾಹಿತ್ಯ ಕೇಂದ್ರಿತವಾಗಿದೆ. ಕವಿರಾಜಮಾರ್ಗದಿಂದ ಕಾರಂತರವರೆಗಿನ ಸಾಹಿತ್ಯದ ವಿಸ್ತಾರವನ್ನು ಲೇಖಕರು ಏಕಕಾಲದಲ್ಲಿ, ಒಟ್ಟಂದದಲ್ಲಿ ಮತ್ತು ಬಿಡಿಯಾಗಿ ಗಮನಕ್ಕೆ ತಂದಿದ್ದಾರೆ’ ಎಂದು ಹೇಳಿದರು.

ಲೇಖಕಿ ವನಮಾಲ ವಿಶ್ವನಾಥ, ‘ಮೂಲ ಕೃತಿಯಲ್ಲಿ ಇರುವ ಸಣ್ಣಪುಟ್ಟ ತೊಂದರೆಗಳನ್ನು ಅನುವಾದಿತ ಕೃತಿಯಲ್ಲಿ ನಿವಾರಿಸುವ ಮೂಲಕ ಸ್ಪಷ್ಟತೆ ನೀಡುವ ಕೆಲಸವನ್ನು ಎನ್‌.ಎಸ್‌.ರಾಘವನ್‌ ಮಾಡಿದ್ದಾರೆ’ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಮೂಲ ಕೃತಿಯ ಲೇಖಕಸುಚೇತನ ಸ್ವರೂಪ,ಎನ್‌.ಎಸ್‌.ರಾಘವನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT