ಭಾನುವಾರ, ಜುಲೈ 25, 2021
22 °C

ಕಾಲದ ತೋಟದಲ್ಲಿ ಬಿಚ್ಚಿಕೊಂಡ ಸ್ಮೃತಿಕೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೃತಿ: ಕಾಲಕೋಶ (ಕಾದಂಬರಿ)
ಲೇ: ಶಶಿಧರ ಹಾಲಾಡಿ
ಪು: 160 ಬೆ:₹160
ಪ್ರಕಾಶನ: ಅಂಕಿತ ಪುಸ್ತಕ
ದೂ: 080 26617100/755
ಜಾಲತಾಣ: www.ankitapustaka.com

‘ಕಾಲಕೋಶ’ ಶಶಿಧರ ಹಾಲಾಡಿ ಅವರ ಮೊದಲ ಕಾದಂಬರಿ. ರಚನೆಯಾಗಿ ಹತ್ತು ವರ್ಷಗಳ ಕಾಲ ಕಾಲಕೋಶದಲ್ಲಿಯೇ ಕಾವು ಪಡೆಯುತ್ತಿದ್ದ ಈ ಕಾದಂಬರಿ ಈಗ ಮತ್ತೆ ಹೊಸ ಮೈ ಪಡೆದುಕೊಂಡು ಪ್ರಕಟವಾಗಿರುವುದಕ್ಕೂ, ಈ ಕಾದಂಬರಿಯಲ್ಲಿ ಮುಖ್ಯ ಕಥನದ ಎಳೆಗಳೂ ಫ್ಲ್ಯಾಷ್‌ಬ್ಯಾಕ್‌ನಲ್ಲಿಯೇ ಬಿಚ್ಚಿಕೊಳ್ಳುವುದಕ್ಕೂ ಕಾಣುವ ಸಂಬಂಧ ಕಾಕತಾಳೀಯವೇ ಇರಬಹುದು.

ಕರ್ನಾಟಕದ ಹಳ್ಳಿಯೊಂದರ ಹುಡುಗ ಬ್ಯಾಂಕ್ ಉದ್ಯೋಗದ ನಿಮಿತ್ತ ದೆಹಲಿಗೆ ತೆರಳುತ್ತಾನೆ. ಅಲ್ಲಿ ಅವನ ಒಡನಾಟಕ್ಕೆ ಬರುವ ಒಂದು ಸಿಖ್‌ ಕುಟುಂಬ ಮತ್ತು ಇನ್ನೊಂದು ಮಹಾರಾಷ್ಟ್ರದ ಹಿಂದೂ ಕುಟುಂಬದ ಮೂಲಕ ಈ ಕಥನ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

1947ರಿಂದ 1984ರವರೆಗಿನ ಕಾಲಾವಧಿಯಲ್ಲಿ ಈ ಕಾದಂಬರಿ ವರ್ತಮಾನದಿಂದ ಭೂತಕಾಲಕ್ಕೂ ಮತ್ತೆ ವರ್ತಮಾನಕ್ಕೂ ಜಿಗಿದಾಡುತ್ತ ಬೆಳೆಯುತ್ತದೆ.

1947ರಲ್ಲಿ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಕಾಂಡ, ನಂತರ ಗಾಂಧೀಜಿ ಹತ್ಯೆಯಾದಾಗ ದೇಶದಾದ್ಯಂತ ನಡೆದ ಹಿಂಸೆ ಮತ್ತು ಇಂದಿರಾ ಗಾಂಧಿ ಹತ್ಯೆಯಾದಾಗ ಸಿಖ್ಖರ ಮೇಲೆ ನಡೆದ ಹಿಂಸೆ –ಇವು ಈ ದೇಶದ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದ ಕಪ್ಪುಚುಕ್ಕೆಗಳು. ಆ ಹಿಂಸೆಯ ಹಿಂದಿನ ಮನಸ್ಥಿತಿಗಳ ವಿವಿಧ ರೂಪಗಳೇ ಮಾರುವೇಷ ತೊಟ್ಟು ಇನ್ನಷ್ಟು ವಿಕಾರಗೊಂಡು ಇಂದಿಗೂ ನಮ್ಮ ನಡುವೆ ನಖದಂತಗಳನ್ನು ಝಳಪಿಸುತ್ತಲೇ ಇವೆ.

ಹಾಲಾಡಿ ಅವರ ಕಾದಂಬರಿ ಈ ಮೂರು ಮುಖ್ಯ ವಿದ್ಯಮಾನಗಳನ್ನು ಒಳಗೊಂಡಿದೆ. ಈ ಪ್ರಯತ್ನವೇ ಕುತೂಹಲ ಹುಟ್ಟಿಸುವಂತಿದೆ. ಆದರೆ ಈ ವಿದ್ಯಮಾನಗಳು, ಅದರ ಪರಿಣಾಮಗಳು ಉಂಟುಮಾಡುವ ತಲ್ಲಣಗಳು ಸೇರಿ ಒಂದು ಕಥನ ವಾತಾವರಣ ನಿರ್ಮಾಣವಾಗಿಲ್ಲ ಎಂಬುದು ಈ ಕಾದಂಬರಿಯ ಮಿತಿ. ಬಹುತೇಕ ಭೂತಕಾಲದಲ್ಲಿಯೇ ನಡೆಯುವ ಕತೆ ಮತ್ತು ನಿರೂಪಣೆಯಲ್ಲಿ ಇರುವ ವರದಿಯ ಗುಣವೇ ಇದಕ್ಕೆ ಕಾರಣವಾಗಿರಲೂಬಹುದು. ತಾನು ಕೇಳಿದ ಅಥವಾ ತಿಳಿದುಕೊಂಡ ಮಾಹಿತಿಯನ್ನು ಪರೋಕ್ಷವಾಗಿ ದಾಖಲಿಸುವ ದಾರಿಯಾಗಿ ಕಾದಂಬರಿ ಪ್ರಕಾರ ಲೇಖಕನಿಗೆ ಸಿಕ್ಕಿದೆ. ಹಾಗಾಗಿ ಮಾಹಿತಿಯ ಆಚೆಯ ಜೀವನದೃಷ್ಟಿ, ಅದನ್ನು ಕಾಡುವ ಹಾಗೆ ಕಟ್ಟಿಕೊಡುವ ಭಿತ್ತಿ ಇದಕ್ಕೆ ಸಿಕ್ಕಿಲ್ಲ. ಆದರೆ ಚರಿತ್ರೆಯಲ್ಲಿ ಘಟಿಸಿದ ಹಿಂಸೆಯ ನಾನಾ ಮುಖಗಳನ್ನು ದಾಖಲಿಸುವ ಪ್ರಯತ್ನವಾಗಿ ಈ ಕಾದಂಬರಿಯನ್ನು ಓದಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು