ಬುಧವಾರ, ಡಿಸೆಂಬರ್ 7, 2022
23 °C

ಪುಸ್ತಕ ವಿಮರ್ಶೆ | ಕನ್ನಡ ಭಾರತಿ: ವಿ.ವಿ. ಅಂಗಳದಲ್ಲಿ ಅರಳಿದ ‘ಭಾರತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಕನ್ನಡ ಸಂಶೋಧನ ಸಂಘವು ಪ್ರಕಟಿಸಿರುವ ‘ಕನ್ನಡ ಭಾರತಿ’ ಎಂಬ ಅರ್ಧವಾರ್ಷಿಕ ಪತ್ರಿಕೆ ಮೂವತ್ತೇಳು ವಿಚಾರಪೂರ್ಣ ಸಂಶೋಧನಾ ಬರಹಗಳನ್ನು ಒಳಗೊಂಡಿದೆ. ಈ ಸದ್ಯದ ಕನ್ನಡ ನಾಡು, ನುಡಿ, ಸಂಸ್ಕೃತಿಯ ಚಿಂತನೆಗಳ ಮೇಲೆ ಬೆಳಕು ಹಾಯಿಸುತ್ತಾ ನಾಡಿನ ಅಸ್ಮಿತೆಗಳನ್ನೂ ಗುರುತಿಸಲಾಗಿದೆ. ಕನ್ನಡ ಪಡೆದುಕೊಳ್ಳಬಹುದಾದ ತಾಂತ್ರಿಕ ಸವಾಲಿನ ಸಾಧ್ಯತೆಗಳನ್ನು ಈ ಸಂಚಿಕೆ ಒಳಗೊಂಡಿದೆ. ಸಾಹಿತ್ಯ, ವಿಜ್ಞಾನ, ಮಾನವಿಕ ಸಂಗತಿಗಳ ಕುರಿತಾದ ವಿಷಯಗಳು, ಕರ್ನಾಟಕದ ಏಕೀಕರಣ, ಅಖಂಡ ಕರ್ನಾಟಕದ ಕನಸು, ಧಾರವಾಡ ಪರಿಸರದ ಸ್ಪಂದನೆ, ಅದರಲ್ಲಿ ವಿದ್ಯಾವರ್ಧಕ ಸಂಘದ ಪಾತ್ರ, ಕನ್ನಡ ಸಂಘ ಸಂಸ್ಥೆಗಳು ಬಳ್ಳಿಯಂತೆ ಹಬ್ಬಿನಿಂತ ಬಗೆ, ಹೊರನಾಡ ಕನ್ನಡ ಸಂಘಗಳ ಕುರಿತಾದ ಬರಹಗಳು ಇಲ್ಲಿ ಒಡಮೂಡಿವೆ.

ಪಂಪನು ತೋರಿದ ಕನ್ನಡ ಪರಿಸರದ ಪ್ರೀತಿ, ವಚನಕಾರರು, ತತ್ವಪದಕಾರರು, ಆಲೂರು ವೆಂಕಟರಾಯರು, ಉತ್ತಂಗಿ ಚೆನ್ನಪ್ಪ, ಶಿವಮೂರ್ತಿಶಾಸ್ತ್ರಿ, ಬಿಎಂಶ್ರೀ, ಸಿದ್ಧಯ್ಯ ಪುರಾಣಿಕ, ಡಿ.ಎಸ್.ಕರ್ಕಿ, ಕುವೆಂಪು, ಬೇಂದ್ರೆ, ತೇಜಸ್ವಿ, ವಿ.ಎಸ್.ಕಾಂತನವರ, ಅರವಿಂದ ಮಾಲಗತ್ತಿ ಅವರ ಬರಹಗಳಲ್ಲಿ ಕಾಣುವ ಕನ್ನಡ ಬಾಳಿನ ನಡೆಯನ್ನು ಗುರುತಿಸಲಾಗಿದೆ. ಭಾಷೆಯು ತನ್ನ ಹಲವು ವೈರುಧ್ಯಗಳ ನಡುವೆಯೂ ತಾಳುವ ತನ್ನರಿವಿನ ವಿಶಿಷ್ಟ ದಾರಿಯನ್ನು ಈ ಕನ್ನಡ ಭಾರತಿಯಲ್ಲಿ ಕಾಣಿಸಲಾಗಿದೆ. ಸಾಹಿತ್ಯದ ಕಾಲಘಟ್ಟಗಳು ರೂಪಿಸಿದ ಭಾಷಾವೈವಿಧ್ಯ, ಜನಪದ ರಂಗಭೂಮಿಯ ಕೊಡುಗೆ, ಜಾನಪದ ಮತ್ತು ಜಾಗತೀಕರಣ, ಅಂಕಣ ಸಾಹಿತ್ಯದ ಅಗತ್ಯ ಹೀಗೆ ಹಲವಾರು ಸಂಗತಿಗಳು ಇಲ್ಲಿ ಯುವ ಸಂಶೋಧಕರ ಬರಹದ ಮುಖ್ಯ ವಸ್ತು ಮತ್ತು ಕಾಳಜಿಯಾಗಿವೆ.

ಇದಕ್ಕೆ ಸ್ಪಂದನೆ ಎಂಬಂತೆ ಆರು ಜನ ಪ್ರಾಧ್ಯಾಪಕರು ತಮ್ಮ ವಿಶಿಷ್ಟ ಬರಹಗಳ ಮೂಲಕವೇ ಈ ನುಡಿ ಸಾಂಗತ್ಯಕ್ಕೆ ಒದಗಿದ್ದಾರೆ. ಕನ್ನಡದ ವಿ.ವಿಗಳನ್ನು ಕಟ್ಟಬೇಕಾದ ‘ವಿವೇಕ’ ಎನ್ನುವ ಲೇಖನವೊಂದರಲ್ಲಿ, ಕನ್ನಡ ವಿಶ್ವವಿದ್ಯಾಲಯದ ಸ್ಥಾಪಿತ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರ ಕ್ರಿಯಾಶಕ್ತಿ, ಕುಲಪತಿಯಾಗಿ ಕಾರ್ಯನಿರ್ವಹಿಸಿದ ರೀತಿ, ಅಲ್ಲಿ ಚಿರಸ್ಥಾಯಿಯಾಗಿ ಕೈಗೊಂಡ ಸಾಂಸ್ಕೃತಿಕ, ಸಾಹಿತ್ಯಿಕ, ಯೋಜನೆ ಪ್ರಕಟಣೆಯ ಕಾರ್ಯ, ನೆಲದ ಮರೆಯ ನಿಧಾನದಂತೆ ಕನ್ನಡ ವಿಶ್ವವಿದ್ಯಾಲಯ ಬೆಳಗಿನಿಂತ ಬಗೆ ಇದೆಲ್ಲವನ್ನೂ ಇಲ್ಲಿ ದಾಖಲಿಸಲಾಗಿದೆ.

ಮೊದಲ ಬಾರಿಗೆ ಹೊಸ ಸಂಚಿಕೆಯನ್ನು ರೂಪಿಸುವುದರ ಮೂಲಕ ಈ ಕನ್ನಡ ವಿಭಾಗದ ಕನ್ನಡ ಸಂಶೋಧನ ಸಂಘವು ಹೊಸ ಇತಿಹಾಸವನ್ನು ಬರೆದಿದೆ. ವಿಭಾಗದ ಸಂಶೋಧನೆಯ ಸ್ವರೂಪದಾಚೆ ನಾಡು ನುಡಿ ಚಿಂತನೆಯನ್ನು ಇಲ್ಲಿ ಕಟ್ಟಿಕೊಟ್ಟಿರುವುದು ಇನ್ನೊಂದು ವಿಶೇಷ. ಸ್ವತಃ ವಿದ್ಯಾರ್ಥಿ, ಪ್ರಾಧ್ಯಾಪಕರೇ ಆರ್ಥಿಕ ಸಂಪನ್ಮೂಲ ಕೂಡಿಸಿಕೊಂಡು ಇಂತಹದೊಂದು ಸಂಚಿಕೆಯನ್ನು ರೂಪಿಸಿರುವರು. ಕನ್ನಡ ಭಾರತಿಯಂತಹ ವಿಶಿಷ್ಟ ಕೃತಿ ಸಂಪುಟಗಳು ನಮಗೆ ಬೇಕು ಎಂಬುದು ಇಲ್ಲಿ ಸಾಕಾರಗೊಂಡಿದೆ. ಸಂಪಾದಕೀಯ ಬರಹಗಳು ಕೃತಿಯ ಒಟ್ಟು ಆಶಯವನ್ನು ಹೇಳಿವೆ. ಇಲ್ಲಿನ ಲೇಖಕರಿಗೂ ಸಂಪಾದಕರಿಗೂ ಅಭಿನಂದನೆಗಳು ಸಲ್ಲಲೇಬೇಕು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು