ಬುಧವಾರ, ಜೂನ್ 29, 2022
24 °C

ಪುಸ್ತಕ ವಿಮರ್ಶೆ: ಮುಸ್ಲಿಂ ಜಾತಿವ್ಯವಸ್ಥೆ ಮೇಲೆ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಅಲ್ಪಸಂಖ್ಯಾತರ ಕುರಿತಾದ ಚರ್ಚೆಗಳಲ್ಲಿ, ಅದರಲ್ಲಿಯೂ ಮುಸ್ಲಿಂ ಸಮುದಾಯದ ಕುರಿತ ಚರ್ಚೆಗಳಲ್ಲಿ ಅವರ ಮೂಲಭೂತ ಹಕ್ಕುಗಳ ಮೇಲೆ ಆಗುತ್ತಿರುವ ಹಲ್ಲೆಗಳು, ಮಹಿಳಾ ಹಕ್ಕುಗಳಿಗೆ ಇರುವ ಚ್ಯುತಿಗಳು, ವ್ಯವಸ್ಥೆಯು ಅವರ ಅಸ್ತಿತ್ವದ ಮೇಲೆ ನಡೆಸುತ್ತಿರುವ ದಾಳಿಗಳನ್ನು ಎದುರಿಸುವ ವಿಷಯಗಳೇ ಕೇಂದ್ರವಾಗಿರುತ್ತವೆ. ಆದರೆ, ಈ ಎಲ್ಲ ಸಂಗತಿಗಳನ್ನು ಚರ್ಚಿಸುವಾಗ ನಮ್ಮ ಕಣ್ಣ ಮುಂದೆ ಮುಸ್ಲಿಂ ಎನ್ನುವ ಒಂದು ಸಮೂಹ ಇರುತ್ತದೆಯೇ ವಿನಾ ಅದರೊಳಗಿನ ವಿಂಗಡಣೆಗಳಲ್ಲ. ಹಾಗಾಗಿಯೇ ಮುಸ್ಲಿಂ ಧರ್ಮದೊಳಗೇ ಇರುವ ಜಾತಿ ವ್ಯವಸ್ಥೆ ಮತ್ತು ಅದರ ಪರಿಣಾಮಗಳ ಬಗ್ಗೆ ಅಷ್ಟೊಂದು ಚರ್ಚೆ ಆಗಿಲ್ಲ.

ಜಾತಿ ವ್ಯವಸ್ಥೆಯನ್ನು ಒಪ್ಪದ ಮುಸ್ಲಿಂ ಧರ್ಮದೊಳಗೆ ಜಾತಿಗಳು ಹುಟ್ಟಿಕೊಂಡಿದ್ದು ಹೇಗೆ? ಪ್ರಭುತ್ವದ ನಡೆಗಳು ಅದಕ್ಕೆ ಹೇಗೆ ಪುಷ್ಟಿಯೊದಗಿಸಿದವು? ಜಾತಿಯನ್ನು ಗುರ್ತಿಸುವುದು ಹೇಗೋ, ಗುರ್ತಿಸದಿರುವುದೂ ಹೇಗೆ ಅನ್ಯಾಯಕ್ಕೆ ಕಾರಣವಾಗಬಲ್ಲದು? ಒಂದು ಸಮುದಾಯದ ಅಸ್ಮಿತೆಯಲ್ಲಿ ಅವುಗಳ ಪಾಲು ಏನು? ಈ ಎಲ್ಲವಕ್ಕೂ ವ್ಯವಸ್ಥೆ ಕಣ್ಮುಚ್ಚಿ ಕೂಡುವುದರಿಂದ ಒಂದು ವರ್ಗದ ಜನರು ಹೇಗೆ ಅನ್ಯಾಯಕ್ಕೊಳಪಡುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳನ್ನೂ ಎತ್ತಿಕೊಂಡು ವರ್ತಮಾನದ ಹಲವು ಬಿಕ್ಕಟ್ಟುಗಳಿಗೆ ಇತಿಹಾಸದ ದಾಖಲೆ ಮತ್ತು ಭವಿಷ್ಯದ ದೂರದೃಷ್ಟಿಗಳ ಮೂಲಕ ಮುಖಾಮುಖಿಯಾಗುವ ಪ್ರಯತ್ನ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಎಂಬ ಕೃತಿಯಲ್ಲಿದೆ. ಈ ಶೀರ್ಷಿಕೆಯೇ ಈ ಕೃತಿಯ ಅಗತ್ಯವನ್ನೂ, ಅನನ್ಯತೆಯನ್ನೂ ಹೇಳುವಂತಿದೆ. ಇದು ಅಲ್ಪಸಂಖ್ಯಾತರು ವರ್ಸಸ್ ಜಾತಿ ವ್ಯವಸ್ಥೆ ಅಲ್ಲ. ಜಾತಿ ವ್ಯವಸ್ಥೆಯ ಚೌಕಟ್ಟಿನೊಳಗೇ ಅಲ್ಪಸಂಖ್ಯಾತರನ್ನು ಇಟ್ಟು ನೋಡುವ ಪ್ರಯತ್ನ.

ಲೇಖಕ ಮುಜಾಫರ್ ಅಸ್ಸಾದಿ ಅವರೇ ಹೇಳಿಕೊಂಡಿರುವ ಹಾಗೆ ಈ ಗ್ರಂಥದಲ್ಲಿ ಸಂಶೋಧನೆಯ ಬಲವಿದೆ. ಜೊತೆಗೆ ಅವರ ಬಾಲ್ಯದ ನೆನಪುಗಳ ಬೆಂಬಲವೂ ಇದೆ. ವೈಯಕ್ತಿಕವಾಗಿ ಮುಸ್ಲಿಂ ಸಮುದಾಯವರಾಗಿ ದಕ್ಕಿದ ಒಳಗಿನ ನೋಟ ಮತ್ತು ಒಬ್ಬ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿ, ವಿದ್ವಾಂಸರಾಗಿ ದಕ್ಕಿದ ಹೊರನೋಟ ಎರಡೂ ಈ ಕೃತಿ ರಚನೆಗೆ ಕಾರಣವಾಗಿವೆ. ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸಮಾಜ ವ್ಯವಸ್ಥೆಯ ಬಗ್ಗೆ ಕುತೂಹಲವಿರುವ ಯಾರ ಓದಿಗಾದರೂ ಒದಗಬಲ್ಲ ಕೃತಿ ಇದು. 

ಅರುಣ್‌ಕುಮಾರ್‌ ಅವರು ಈ ಕೃತಿಗೆ ರಚಿಸಿರುವ ಸುಂದರ ಮುಖಪುಟಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುಖಪುಟ ಚಿತ್ರ ವಿನ್ಯಾಸ ಬಹುಮಾನ ಸಿಕ್ಕಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಕೃತಿ: ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ

ಲೇ: ಡಾ.ಮುಜಾಫರ್‌ ಅಸ್ಸಾದಿ

ಪುಟಗಳು: 264

ಬೆಲೆ: ₹ 300

ಪ್ರ: ಬಹುರೂಪಿ ಪ್ರಕಾಶನ ಬೆಂಗಳೂರು, 7019182729

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು