ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸಂಯಮದಿಂದ ಕಟ್ಟಿದ ಚೆದುರಿದ ಚಿತ್ರಗಳು

Last Updated 16 ಮೇ 2020, 19:30 IST
ಅಕ್ಷರ ಗಾತ್ರ

ಇದು ವಿಜಯ್ ಹೂಗಾರ್ ಅವರ ಮೊದಲ ಕಥಾ ಸಂಕಲನ. ಮೊದಲ ಸಂಕಲನದಲ್ಲಿ ಬಹುತೇಕ ಎಲ್ಲ ಕಥೆಗಾರರಲ್ಲಿ ಕಂಡುಬರುವ ಕೊರತೆಗಳ ಜೊತೆಗೇ ಈ ಸಂಕಲನದ ಹಲವು ಕಥೆಗಳು ಗಮನಸೆಳೆಯುತ್ತವೆ.

ಸಹಜವಾಗಿರುವ ಮನುಷ್ಯನನ್ನೂ ಪ್ರಕೃತಿಯನ್ನೂ ನುಂಗಿ ಕೃತಕವಾದ ಪ್ರತಿಕೃತಿಗಳನ್ನಾಗಿಸುತ್ತ ಬೆಳೆಯುತ್ತಲೇ ಇರುವ ಮಹಾನಗರ ಒಂದು ಕಡೆ. ದೂರದೊಂದು ತೀರದಿಂದ ಕೇಳಿಬಂದ ಸ್ವರದ ಮೋಹಕ್ಕೆ ಒಳಗಾಗಿ ತಾನಿದ್ದಂತೆಯೂ ಇರಲಾಗದೆ, ಇನ್ನೊಂದರಂತೆಯೂ ಆಗಲಾಗದೆ ಒದ್ದಾಡುತ್ತಿರುವ ಹಳ್ಳಿ ಇನ್ನೊಂದು ಕಡೆಗೆ. ಈ ಎರಡು ಬಿಂದುಗಳ ನಡುವೆ ಯಾವೊಂದನ್ನೂ ಆಯ್ದುಕೊಳ್ಳಲಾಗದೆ ಗಿರಗಿಟ್ಲೆ ಹೊಡೆಯುವ ಪ್ರಕ್ರಿಯೆಯಲ್ಲಿ ಈ ಸಂಕಲನದ ಬಹುತೇಕ ಕಥೆಗಳು ರೂಪುಗೊಂಡಿವೆ. ಹಾಗಾಗಿ ಇಲ್ಲಿ ಹಳ್ಳಿಗಳ ಎದೆಯನ್ನು ಸೀಳಿ ಹರಿದುಹೋದ, ಶರವೇಗದಲ್ಲಿ ಮಾತ್ರವೇ ಸಲ್ಲುವ ಏಕಮುಖ ಹೆದ್ದಾರಿಯನ್ನೂ, ಅದರ ಪಕ್ಕದಲ್ಲೇ ಹಾದುಹೋದ ನಿಧಾನ ನಡಿಗೆಯಲ್ಲಿಯೇ ಜೀವವನ್ನೂ ಜೀವಂತಿಕೆಯನ್ನೂ ಉಳಿಸಿಕೊಂಡಿರುವ ಕಾಲುದಾರಿಯನ್ನೂ ಒಟ್ಟೊಟ್ಟಿಗೇ ನೋಡಬಹುದು. ಹಾಗೆಂದು, ಇವೆರಡರಲ್ಲಿ ಇದೇ ಮುಖ್ಯ; ಇನ್ನೊಂದು ಅಮುಖ್ಯ ಎಂಬ ಘೊಷಣೆಯಾಗಲಿ, ಒಂದನ್ನು ಕಪ್ಪಾಗಿ ಇನ್ನೊಂದನ್ನು ಬಿಳುಪಾಗಿ ಚಿತ್ರಿಸುವ ಅಸೂಕ್ಷ್ಮವಾಗಲಿ ಇಲ್ಲ ಎನ್ನುವುದು ಗಮನೀಯ ಸಂಗತಿ.

‘ಒಂದು ಖಾಲಿ ಕುರ್ಚಿ’ ಕತೆಯ ನಿರೂಪಕ, ‘ಮುಖಾಮುಖಿ’ ಆಶಾ, ‘ಒಂದು ಅಪೂರ್ಣ ಚಿತ್ರ’ದ ಪುಂಡಲೀಕ ಮತ್ತು ಶಾಲಿನಿ ಇವರೆಲ್ಲ ಹೆದ್ದಾರಿಯ ವೇಗದಲ್ಲಿ ಕಳೆದುಹೋದವರು. ಇದೇ ಕಥೆಗಳಲ್ಲಿ ಬರುವ ಜಯಮ್ಮ, ದೇವುಳ್ಕರ್ ಮೇಷ್ಟ್ರು, ಜ್ಞಾನೋಬರಾವ್, ಕಮಲಜ್ಜಿ, ತಿಪ್ಪಜ್ಜಿ, ನಳಿನಿ, ಗುಂಡಪ್ಪ ಮಾಸ್ತರ ಇವರೆಲ್ಲರೂ ಕಾಲುದಾರಿಯಲ್ಲಿ ನಡೆಯುತ್ತಿರುವವರು. ಈ ಎರಡೂ ಆಯ್ಕೆಗಳಿಗೆ ಅದರದೇ ಆದ ಸಂತಸ–ಸಂಕಟಗಳಿವೆ. ಸರಿ ತಪ್ಪು ಎಂದು ಗೆರೆ ಎಳೆದು ಹೇಳಲಾಗದ ಸಂದಿಗ್ಧಗಳಿವೆ. ಕಥೆಗಾರರು ಅಂಥ ಸಂದಿಗ್ಧಗಳನ್ನು ಸುಮ್ಮನೇ ಮುಖಾಮುಖಿಯಾಗಿಸಿ ನಿರ್ಧಾರವನ್ನು ಓದುಗರಿಗೇ ಬಿಡುತ್ತಾರೆ.

ಈ ಸಂಕಲನದ ಮೊದಲ ಕಥೆ ‘ರಾಮತೀರ್ಥದಲ್ಲೊಂದು ಅಶ್ವಮೇಧಯಾಗ’. ತಂದೆ ಮತ್ತು ಮಗನ ನಡುವಿನ ಸಂಕೀರ್ಣ ಸಂಬಂಧಗಳನ್ನು ಬಹುಸೂಕ್ಷ್ಮವಾಗಿ ಅನಾವರಣಗೊಳಿಸುತ್ತ ಬೆಳೆಯುವ ಕಥೆ ಒಮ್ಮಿಂದೊಮ್ಮೆಲೇ ಅಳ್ಳಕವಾಗಿ ವಧು ಅನ್ವೇಷಣೆಯ ಪ್ರಹಸನವಾಗಿ ಬದಲಾಗಿಬಿಡುತ್ತದೆ. ಈ ಜಾಳುಗುಣದಿಂದಲೇ ಮನಸಲ್ಲಿ ಉಳಿಯುವುದಿಲ್ಲ. ‘ಒಂದು ಖಾಲಿ ಕುರ್ಚಿ’ ಕಾರ್ಪೊರೇಟ್ ಲೋಕದ ತಣ್ಣಗಿನ ಕ್ರೌರ್ಯವನ್ನು ಬಿಚ್ಚಿಡುವ ಕಥೆ. ಮನುಷ್ಯನನ್ನು ಬರೀ ಸಲಕರಣೆಯಾಗಿ, ಬಳಸಿ ಹಾಳಾದಾಗ ಬಿಸಾಡಿ ಹೊಸದು ಕೊಂಡು ಬಳಸುವ ಹೃದಯಹೀನ ವ್ಯವಸ್ಥೆಯ ಚಿತ್ರಣ ಇಲ್ಲಿದೆ. ಆದರೆ ಅನುಭವವನ್ನು ಬಿಗಿಯಾಗಿ ಹೆಣೆಯುವ ಕೌಶಲದ ಕೊರತೆಯಿಂದಾಗಿ ಈ ಕಥೆ ಚೆದುರಿದ ಚಿತ್ರದ ಹಾಗೆಯೇ ಕಾಣಿಸುತ್ತದೆ. ‘ಸಾಕ್ಷಿ ಹಾರಿಹೋದ ಪ್ರಸಂಗ’ ಕೂಡ ಹಗುರವಾದ ಟ್ರಿಕ್ಸ್‌ ಕಾಣಿಸುವುದರಲ್ಲಿಯೇ ಮುಗಿದುಹೋಗುತ್ತದೆ.

‘ಮುಖಾಮುಖಿ 2.0’ ಈ ಸಂಕಲನದ ಹೆಚ್ಚು ಯಶಸ್ವಿ ಕಥೆ. ವಸ್ತುವಿನ ಆಯ್ಕೆ, ಅದರ ನಿರ್ವಹಣೆ ಎಲ್ಲದರಲ್ಲಿಯೂ ಬಿಗಿತನ ಹೊಂದಿದೆ.ಆಧುನಿಕತೆ– ನಾಗರಿಕತೆಗಳ ಪ್ರಖರ ಬೆಳಕಿನ ಸಮಾಜದಲ್ಲಿಯೂ ಆಳವಾಗಿ ಬೇರೂರಿರುವ ಜಾತಿಪದ್ಧತಿಯ ಬೇರುಗಳನ್ನು ಕೃತಕವೆನಿಸದ ಮೆಲುದನಿಯಲ್ಲಿ ಬಿಚ್ಚಿಡುತ್ತ ಹೋಗುತ್ತದೆ. ಅಷ್ಟೇ ಅಲ್ಲ, ಮನುಷ್ಯನ ಸಣ್ಣತನಗಳ ಮೂಲ ಇರುವುದು ಇಂಥ ಸಾಮಾಜಿಕ ಪದ್ಧತಿಗಳಲ್ಲಯಷ್ಟೇ ಅಲ್ಲ, ಅದು ಮನುಷ್ಯನ ಮನಸ್ಸಿನಲ್ಲಿಯೇ ಎಂಬುದನ್ನೂ ಕಾಣಿಸುತ್ತದೆ. ಅಕ್ಕ ಯಶೋಧೆ ಅಪ್ಪನ ವಿರುದ್ಧ ಹಟಹಿಡಿದು ಬದುಕು ಕಟ್ಟಿಕೊಂಡೂ ತಂಗಿಗೆ ‘ಅಪ್ಪನ ವಿರುದ್ಧ ಹೋಗೋದು ಬೇಡ’ ಅನ್ನುತ್ತಿದ್ದಾಳೆ. ಅದೇ ತಂಗಿ ಆಶಾ ಅಪ್ಪ ಅಮ್ಮನನ್ನು ಒಪ್ಪಿಸಿ ರಾಜೀವನನ್ನೇ ಮದುವೆಯಾಗುತ್ತೇನೆ ಎಂದು ನಿರ್ಧರಿಸಿ ಮನೆ ಬಾಗಿಲಿನಲ್ಲಿ ನಿಂತಿದ್ದಾಳೆ. ಬಾಗಿಲು ತೆರೆಯುವ ಅಪ್ಪ ಅಮ್ಮ ಮನಸ್ಸಿನ ಬಾಗಿಲನ್ನೂ ತೆರೆದಾರೇ? ಎಂಬ ಅರ್ಥಪೂರ್ಣ ಪ್ರಶ್ನೆಯನ್ನು ಓದುಗರ ಮನಸಲ್ಲಿ ಹುಟ್ಟಿಸಿ ಈ ಕಥೆ ಕೊನೆಗೊಳ್ಳುತ್ತದೆ.

ಹಳ್ಳಿ ಮತ್ತು ನಗರಗಳು ಒಳಿತು ಕೆಡುಕುಗಳ ಪ್ರತಿನಿಧಿಗಳಾಗಿಲ್ಲ ಎನ್ನುವುದು ಈ ಸಂಕಲನದ ಹೆಚ್ಚುಗಾರಿಕೆ. ಒಳಿತು ಕೆಡುಕು ಇರುವುದು ಮನುಷ್ಯನ ಮನಸ್ಸಿನಲ್ಲೇ ಹೊರತು ಹೊರಜಗತ್ತಿನಲ್ಲಲ್ಲ ಎಂಬ ನೋಟ ಇಲ್ಲಿನ ಹಲವು ಕಥೆಗಳಲ್ಲಿ ಮತ್ತೆ ಮತ್ತೆ ಕಾಣಿಸುತ್ತವೆ. ತನ್ನಿಷ್ಟದ ಬದುಕಿಗಾಗಿ ಹೋರಾಡುವ ‘ಮುಖಾಮುಖಿ’ ಕಥೆಯ ಆಶಾಳಷ್ಟೇ, ಮಹಾನಗರದಲ್ಲಿ ಹಸಿವಿನಷ್ಟೇ ಸಹಜವಾಗಿ ಬಯಕೆಯನ್ನೂ ತೀರಿಸಿಕೊಳ್ಳುವ ನಳಿನಿಯನ್ನೂ ಘನವಾಗಿ ಚಿತ್ರಿಸುವುದು ಕಥೆಗಾರರಿಗೆ ಸಾಧ್ಯವಾಗಿದೆ. ಈ ಕಾಣ್ಕೆಗೆ ಕಣ್ಮುಚ್ಚಿದ ಕಥೆಗಳೆಲ್ಲವೂ ಸೋತಿವೆ.

ಒಂದು ಖಾಲಿ ಕುರ್ಚಿ
ಲೇಖಕ: ವಿಜಯ್ ಹೂಗಾರ್
ಪ್ರಕಾಶಕ: ಸಂಗಾತ ಪುಸ್ತಕ
ಮೊಬೈಲ್: 9341757653
ಪುಟ: 110
ಬೆಲೆ : ₹110

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT