ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ನೈತಿಕ ಪಠ್ಯದ ಅನನ್ಯ ಕೈಪಿಡಿ

Last Updated 25 ಜೂನ್ 2022, 19:31 IST
ಅಕ್ಷರ ಗಾತ್ರ

ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆಗಳ ಸಂಕಲನ ‘ಬಾರುಕೋಲು’, ಕನ್ನಡದ ಮಣ್ಣಿನಲ್ಲಿ ರೂಪುಗೊಂಡ ಮೇಧಾವಿಯೊಬ್ಬರ ವೈಚಾರಿಕ ಪ್ರಖರತೆಯ ಮಹತ್ವದ ದಾಖಲೆ.ಸಮಕಾಲೀನ ರಾಜಕಾರಣ ಸಂದರ್ಭದ ಬಹುದೊಡ್ಡ ಸಮಸ್ಯೆಗಳಾದ ಬೌದ್ಧಿಕ ದಿವಾಳಿತನ ಹಾಗೂ ಅನೈತಿಕತೆಗೆ ನೈತಿಕಪಠ್ಯದ ಔಷಧಿಯ ರೂಪದಲ್ಲೂ ನಟರಾಜ್‌ ಹುಳಿಯಾರ್‌ ಹಾಗೂ ರವಿಕುಮಾರ್‌ ಬಾಗಿ ಅವರು ಸಂಪಾದಿಸಿರುವ ಈ ಕೃತಿಯನ್ನು ಗಮನಿಸಬಹುದು.

ವ್ಯವಸ್ಥೆಯ ದರ್ಪದ ವಿರುದ್ಧ ರೈತರು ಬಾರುಕೋಲು ಕೈಗೆತ್ತಿಕೊಳ್ಳಬೇಕು ಎಂದು ಎಂಡಿಎನ್‌ ಯಾವುದೋ ಸಂದರ್ಭದಲ್ಲಿ ಹೇಳಿದ್ದನ್ನು ವಾಚ್ಯವಾಗಿ ಬಳಸುವುದೇ ಹೆಚ್ಚು. ಪ್ರಸಕ್ತ ಕೃತಿಯ ಪ್ರವೇಶಿಕೆಯಲ್ಲಿ ನಟರಾಜ್‌ ಹುಳಿಯಾರ್‌ – ‘ಬಾರುಕೋಲು’ ವಿಶೇಷಣ ಎಂಡಿಎನ್‌ ಅವರ ನಿಷ್ಠುರ ವ್ಯಕ್ತಿತ್ವ ಹಾಗೂ ಆ ವ್ಯಕ್ತಿತ್ವಕ್ಕೆ ವ್ಯಂಗ್ಯ ಅಲಂಕಾರಪ್ರಾಯವಾಗಿರುವುದನ್ನು ಗುರ್ತಿಸಿದ್ದಾರೆ. ‘ಬಾರ್‌ಕೋಲ್‌ ನನ್ನ ರೂಲ್‌ ಆಫ್‌ ಲಾ’ ಎನ್ನುವ ಎಂಡಿಎನ್‌ರ ಮಾತನ್ನು, ಕಾನೂನನ್ನು ಅವರು ತಮ್ಮ ನಡೆನುಡಿಯಾಗಿಸಿಕೊಂಡಿದ್ದರ ಸಂಕೇತದ ರೂಪದಲ್ಲಿ ಗ್ರಹಿಸಬೇಕಾಗಿದೆ. ಬಾರ್‌ ಕೋಡ್‌ ಮತ್ತು ಬಾರ್‌ಕೋಲ್‌ ಎಂಡಿಎನ್‌ ಅವರ ಪಾಲಿಗೆ ಅಭಿನ್ನವಾದವು ಎನ್ನುವುದಕ್ಕೆ ಈ ಸಂಕಲನದ ಲೇಖನಗಳು ಸಮರ್ಥನೆ ಒದಗಿಸುವಂತಿವೆ.

ಕರ್ನಾಟಕದ–ಕನ್ನಡದ ಒರಿಜಿನಲ್‌ ಥಿಂಕರ್‌ ಎಂದು ಕೃತಿಯ ಪ್ರವೇಶಿಕೆಯಲ್ಲಿ ಎಂಡಿಎನ್ ಅವರನ್ನು ನಟರಾಜ್‌ ಬಣ್ಣಿಸಿದ್ದಾರೆ. ಇದು ಕೇವಲ ಪ್ರಶಂಸೆಯ ಮಾತಾಗಿರದೆ, ಕನ್ನಡದ ಹಿತ್ತಲಲ್ಲಿ ಅರಳಿದ ವಿಶ್ವಪ್ರಜ್ಞೆ–ಚಿಂತನೆ ಅವರದ್ದಾಗಿದೆಎನ್ನುವುದಕ್ಕೆ ಕೃತಿಯುದ್ದಕ್ಕೂ ಉದಾಹರಣೆಗಳಿವೆ.

ಕನ್ನಡ ನೆಲದ ತವಕತಲ್ಲಣಗಳಿಗೆ ಎಂಡಿಎನ್‌ ಅವರ ಸೃಜನಶೀಲ ಸ್ಪಂದನಗಳು ಸಾಂದರ್ಭಿಕ ಪ್ರತಿಕ್ರಿಯೆಗಳಾಗಿರದೆ, ಈ ಕಾಲದ ಬಿಕ್ಕಟ್ಟುಗಳನ್ನು ಎದುರುಗೊಳ್ಳಲು ಒಳನೋಟಗಳನ್ನು ಕಾಣಿಸುವಂತಿವೆ. ಸಮ ಸಮಾಜದ, ರೈತಪ್ರಜ್ಞೆ ಕೇಂದ್ರವಾಗುಳ್ಳ ಸಮಾಜದ ನಿರ್ಮಾಣಕ್ಕೆ ಪ್ರೇರಣೆಯೊದಗಿಸುವ ಎಂಡಿಎನ್ ಚಿಂತನೆಗಳಿಗೆ ರಾಜಕೀಯ–ವೈಚಾರಿಕ ಮಹತ್ವವಷ್ಟೇ ಅಲ್ಲ, ಸಾಂಸ್ಕೃತಿಕ ಅನನ್ಯತೆಯೂ ಇದೆ. ಜಾಗತೀಕರಣದ ಕೆಡಕುಗಳ ಆಳ ವಿಶ್ಲೇಷಣೆಯಂತೆ, ಜಾತಿಯ ಅಪಾಯಗಳಿಗೆ ಸಂಬಂಧಿಸಿದ ಅವರ ಒಳನೋಟಗಳು ಈ ಹೊತ್ತಿನ ನಮ್ಮ ನಡೆ–ನುಡಿಗಳನ್ನು ರೂಪಿಸಿಕೊಳ್ಳಲು ಅಗತ್ಯವಾದ ಸೃಜನಶೀಲದ್ರವ್ಯದಂತಿವೆ.

‘ಬಾರುಕೋಲು’ ಕೃತಿಯಲ್ಲಿ ಎಂಡಿಎನ್‌ ಚಿಂತನೆಗಳು, ‘ತಾತ್ವಿಕ ಚಿಂತನೆ’, ‘ಗ್ರಾಮಸಮಾಜ, ರೈತರು, ಹೋರಾಟ’ ಹಾಗೂ ‘ಸಂಸ್ಕೃತಿ ಚಿಂತನೆ’ ಎನ್ನುವ ಮೂರು ಭಾಗಗಳಲ್ಲಿ ವಿಂಗಡಣೆಗೊಂಡಿವೆ.ಗಾಂಧಿ ಮತ್ತು ಲೋಹಿಯಾ ಎಂಡಿಎನ್‌ ಅವರನ್ನು ಪ್ರಭಾವಿಸಿದ ಎರಡು ಚೇತನಗಳು. ಆ ಪ್ರಭಾವವನ್ನು ಅವರ ವಿಚಾರಗಳಲ್ಲೂ ದಟ್ಟವಾಗಿ ಕಾಣಬಹುದು.

ಸದನದಲ್ಲಿ ನಂಜುಂಡಸ್ವಾಮಿ ಅವರು ಮಾಡಿರುವ ಭಾಷಣಗಳು ತಮ್ಮ ವೈಚಾರಿಕ ಪ್ರಭೆಯಿಂದ ದಂಗುಬಡಿಸುತ್ತವೆ.ಸದನದ ಹೊರಗೆ ಮತ್ತು ಒಳಗೆ ಅರಿವು ಮೂಡಿಸುವ, ಸ್ವಾಭಿಮಾನ ಮೂಡಿಸುವ ಶಕ್ತಿ ಅವರ ಮಾತುಗಳಿಗಿದೆ. ಕರ್ನಾಟಕದ ವಿಧಾನಮಂಡಲದ ಗತವೈಭವದ ನೆನ‍ಪುಗಳಂತೆಯೂ ಕಾಣಿಸುವ ಆ ಭಾಷಣಗಳು ಸದನದ ಘನತೆಯ ಬಗ್ಗೆ ಗೌರವ–ಕಾಳಜಿಯುಳ್ಳ ಯಾವುದೇ ಶಾಸಕನಿಗೆ ಪಠ್ಯದ ರೀತಿ ಒದಗಿಬರುವ ಶಕ್ತಿ ಹೊಂದಿವೆ.

‘ಹಿಂದೂ ಅಂದರೆ ಏನು?’ ಎನ್ನುವ ವಿಧಾನಸಭೆಯಲ್ಲಿ ಎಂಡಿಎನ್ ಮಾಡಿದ ಭಾಷಣದ ಬರಹವನ್ನು ಹಿಂದುತ್ವದ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳೆಲ್ಲರೂ ಓದಬೇಕಾದಂತಹುದು. ಚರ್ಚೆಯ ರೂಪದ ಈ ಭಾಷಣ ನಂಜುಂಡಸ್ವಾಮಿ ಅವರ ಬೌದ್ಧಿಕ ಪ್ರಖರತೆಯ ಜೊತೆಗೆ, 90ರ ದಶಕದಲ್ಲಿ ಕನ್ನಡ ವಿಧಾನಸಭೆಯ ಗುಣಮಟ್ಟ ಎಷ್ಟು ಉತ್ಕೃಷ್ಟವಾಗಿತ್ತು ಎನ್ನುವುದನ್ನೂ ಸೂಚಿಸುವಂತಿದೆ. ‘ವಿಚಾರವಾದಿ ಬಸವಲಿಂಗಪ್ಪನವರು ಶಿವೈಕ್ಯರಾಗಲಿಲ್ಲ’ ಎನ್ನುವ ವಿಧಾನಸಭೆಯ ಮಾತುಗಳ ಟಿಪ್ಪಣಿ ಹಾಗೂ ‘ಸಮಕಾಲೀನತೆ ಮತ್ತು ಕುವೆಂಪು: ಕ್ರಿಯೆ, ಪ್ರತಿಕ್ರಿಯೆ’ ಬರಹಗಳು ಎಂಡಿಎನ್‌ರ ಸಾಂಸ್ಕೃತಿಕ ಚಿಂತನೆಯ ಕಿಡಿಗಳಂತಿವೆ.

ಬೀಜಕ್ಕೂ ಸ್ವಾತಂತ್ರ್ಯಕ್ಕೂ ಇರುವ ಸಂಬಂಧದ ವಿಶ್ಲೇಷಣೆ, ಬೀಜಗಳ ಮುಕ್ತ ವಿನಿಮಯ ವ್ಯವಸ್ಥೆಯ ಸಾಧ್ಯತೆ, ರೈತರ ಹೊಲಗಳಲ್ಲಿ ಸರ್ಕಾರವೇ ಬೋರ್‌ವೆಲ್‌ ತೋಡಿಸಬೇಕು ಎನ್ನುವ ಚಿಂತನೆ, ಭಾಷೆಗೂ ಪ್ರಜಾಪ್ರಭುತ್ವಕ್ಕೂ ಇರುವ ಸಂಬಂಧದ ಪರಿಕಲ್ಪನೆ – ಇಂಥ ಹತ್ತಾರು ಹೊಳಹುಗಳು ಎಂಡಿಎನ್‌ ವೈಚಾರಿಕತೆಯ ಅನನ್ಯತೆಯನ್ನು ಸೂಚಿಸುವಂತಿವೆ.

ರೈತರ ಸ್ವಾಭಿಮಾನವನ್ನು ಎತ್ತಿಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡಿದ ನಂಜುಂಡಸ್ವಾಮಿ ಅವರ ಚಳವಳಿಯಲ್ಲಿ ಆತ್ಮವಿಮರ್ಶೆಗೂ ಮಹತ್ವದ ಸ್ಥಾನವಿತ್ತು. ತಮ್ಮ ನಿರ್ಧಾರ ತಪ್ಪಾಗಿದ್ದಾಗ ಅದನ್ನು ಒಪ್ಪಿಕೊಳ್ಳಲು ಅವರು ಹಿಂಜರಿದಿಲ್ಲ ಎನ್ನುವುದನ್ನು ‘ಬಾರುಕೋಲು’ ಓದುಗರ ಗಮನಕ್ಕೆ ತರುತ್ತದೆ.

ಎಂಡಿಎನ್‌ ನೆನಪು–ವಿಚಾರಗಳನ್ನು ಸಮಕಾಲೀನಗೊಳಿಸುವ ಉದ್ದೇಶದ ಈ ಕೃತಿಯ ವಿನ್ಯಾಸ ಆಕರ್ಷಕವಾಗಿದೆ. ಕೃತಿಯ ಕೊನೆಯ ಭಾಗದಲ್ಲಿ ನೀಡಲಾಗಿರುವ ‘ಕನ್ನಡದೇಶ ಪಕ್ಷ’ದ ಪ್ರಣಾಳಿಕೆ ಹಾಗೂಎಂಡಿಎನ್‌ ಅವರೊಂದಿಗೆ ಬರಗೂರರು ನಡೆಸಿರುವ ಸಂದರ್ಶನ ಬರಹಗಳು ಬಾರುಕೋಲಿನ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ, ಎಂಡಿಎನ್‌ ಅವರ ಬಹುಮುಖಿ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತಿವೆ.ಅಧ್ಯಾಯಗಳ ಕೊನೆಯಲ್ಲಿ ನೀಡಲಾಗಿರುವ ಟಿಪ್ಪಣಿಗಳು ಓದುಗಸ್ನೇಹಿ ಆಗಿರುವುದರ ಜೊತೆಗೆ, ಎಂಡಿಎನ್ ಅವರನ್ನು ಸೂತ್ರರೂಪದಲ್ಲಿ ನೆನಪಿರಿಸಿಕೊಳ್ಳಲಿಕ್ಕೂ ಸಹಾಯಕವಾಗುವಂತಿವೆ.

ಯುವ ತಲೆಮಾರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಾಗೂ ಮನನ ಮಾಡಿಕೊಳ್ಳಬೇಕಾದ ಪ್ರೇರಣೆ–ಚೇತನಗಳಲ್ಲಿ ಎಂಡಿಎನ್‌ ಒಬ್ಬರು ಎನ್ನುವುದನ್ನು ಮನದಟ್ಟು ಮಾಡಿಸುವುದರಲ್ಲಿ‘ಬಾರುಕೋಲು’ ಕೃತಿಯ ಮಹತ್ವವಿದೆ.

ಕೃತಿ: ಬಾರುಕೋಲು

ಸಂ: ನಟರಾಜ್‌ ಹುಳಿಯಾರ್‌, ರವಿಕುಮಾರ್‌ ಬಾಗಿ

ಪು: 258, ಬೆ: ರೂ. 200

ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ. ಫೋನ್: 8880087235

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT