ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಕರಕುಶಲ ಜಗತ್ತಿನ ವಿರಾಟ್‌ ದರ್ಶನ

Last Updated 29 ಜನವರಿ 2022, 19:31 IST
ಅಕ್ಷರ ಗಾತ್ರ

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನವಿದೆ. ‘ಕರಕುಶಲ’ ಎಂದರೆ ಮನುಷ್ಯನ ಹೃದಯ, ಬುದ್ಧಿ ಮತ್ತು ಕೈಗಳು ಏಕೀಭವಿಸಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುವ ಅಪೂರ್ವ ಶ್ರಮದ ಪ್ರತಿಫಲ. ಈ ನೆಲದ ವೈವಿಧ್ಯಮಯ ಕರಕುಶಲ ಕಲೆಗಳನ್ನು ನಾಡಿಗೆ ಪರಿಚಯಿಸುವ ಕೃತಿಯೇ ಬಿ.ಎಂ. ಚಂದ್ರಶೇಖರಯ್ಯ ಅವರ ‘ಕರ್ನಾಟಕದ ಕರಕುಶಲ ಕಲೆಗಳು’. ಕರಕುಶಲ ಕಲೆಯೆಂದರೆ ಮಕ್ಕಳ ಆಟಿಕೆ ಅಥವಾ ಮನರಂಜನೆಯ ವಸ್ತುಗಳ ತಯಾರಿಕೆ ಮಾತ್ರವಲ್ಲ. ಮನುಷ್ಯನ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡ ಹಲವು ಬಗೆಯ ವಸ್ತುಗಳಿಗೆ ಕಲಾತ್ಮಕ ಮೆರುಗು ನೀಡುವ ಒಂದು ರೀತಿಯ ಧ್ಯಾನ. ಅಂತಹ ಧ್ಯಾನದಲ್ಲಿ ಅರಳಿದ ಕರ್ನಾಟಕದ ಸಂಸ್ಕೃತಿಯನ್ನು ಈ ಕೃತಿಯು ಘನೀಕರಿಸಿ ಹಿಡಿದಿಟ್ಟಿದೆ ಎಂದರೆ ತಪ್ಪಾಗಲಾರದು.

ರಾಜ್ಯದ ಕರಕುಶಲ ಕಲೆಗಳಲ್ಲಿ ವೈವಿಧ್ಯ ಮೇಳೈಸಿದೆ. ಚಿತ್ರಕಲೆ, ಕುಂಭಕಲೆ, ಮರದ ಕೆತ್ತನೆ, ಕಲ್ಲು ಕೆತ್ತನೆ, ಲೋಹ ಶಿಲ್ಪ, ಆಭರಣಗಳ ತಯಾರಿಕೆ, ಮಣ್ಣಿನ ಮೂರ್ತಿ, ಮಡಕೆ–ಕುಡಿಕೆಗಳ ತಯಾರಿಕೆ, ದಂತ ಕೆತ್ತನೆ, ಹುದುಗು ಕಲೆ, ಜಾನಪದ ಗೊಂಬೆ, ಕೈಮಗ್ಗ, ಜವಳಿ, ಕಸೂತಿ ಕೆಲಸ, ಆಟಿಕೆ, ಕಂಬಳಿ ಮತ್ತು ಗುಡಾರಗಳ ನೇಯ್ಗೆ, ಬುಟ್ಟಿ, ಚಾಪೆಗಳ ಹೆಣಿಗೆ ಮೊದಲಾದ ನೂರಾರು ಕಲೆಗಳ ಒಳನೋಟವನ್ನು ಇಲ್ಲಿ ನೀಡಲಾಗಿದೆ. ಇಳಕಲ್ ಸೀರೆಗಳ ಸೊಗಸನ್ನು ‘ನೂಲಿನಲ್ಲಿ ನೇಯ್ದ ಕಾವ್ಯ’ ಅಧ್ಯಾಯದಲ್ಲಿ ಬಣ್ಣಿಸಲಾಗಿದೆ.

ಅತಿಪ್ರಮುಖವಾದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳನ್ನು ಆಮೂಲಾಗ್ರವಾಗಿ ಚರ್ಚಿಸಲಾಗಿದೆ. ಗೊಮ್ಮಟೇಶ್ವರ, ನಟರಾಜ, ಮಹಿಷಮರ್ಧಿನಿ, ಐಹೊಳೆಯ ಮೂರು ಗುಹಾಂತರ್ದೇವಾಲಯಗಳು, ವೆಲ್ಲೂರಿನ ಜಲಕಂಠೇಶ್ವರ ದೇವಾಲಯದ ಆವರಣದಲ್ಲಿರುವ ಕಲ್ಯಾಣ ಮಂಟಪ, ಹಂಪಿಯ ಕಲ್ಲಿನ ರಥ, ಅಜ್ಞಾತ ಶಿಲಾಬಾಲಿಕೆಯರ ಬೀಡಾದ ಜಲಸಂಗ್ವಿಯನ್ನು ಪರಿಚಯಿಸಲಾಗಿದೆ. ಗಂಗ ಶೈಲಿ, ಹೊಯ್ಸಳ ಶೈಲಿ, ವಿಜಯನಗರ ಶೈಲಿ, ಬ್ರಿಟಿಷರು ಹಾಗೂ ಇಸ್ಲಾಂ ವಾಸ್ತುಶಿಲ್ಪದ ಮೇಲೂ ಬೆಳಕು ಚೆಲ್ಲಲಾಗಿದೆ. ನಿರ್ದಿಷ್ಟ ಕರಕುಶಲ ಕಲೆಗಳಿಗೆ ಸಂಬಂಧಿಸಿದ ಕೆಲವು ಅಧ್ಯಯನಗಳನ್ನು ಲೇಖಕರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರು ಬಹು ವರ್ಷಗಳ ಹಿಂದೆ ಇದೇ ಹೆಸರಿನ ಕೃತಿಯನ್ನು ಮಕ್ಕಳಿಗಾಗಿ ಪರಿಚಯಿಸಿದ್ದರು.

ಕೃತಿ: ಕರ್ನಾಟಕದ ಕರಕುಶಲ ಕಲೆಗಳು

ಲೇಖಕ:ಬಿ.ಎಂ. ಚಂದ್ರಶೇಖರಯ್ಯ

ಪ್ರಕಾಶನ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ

ದೂರವಾಣಿ: 94498 86390

ಬೆಲೆ: ₹180

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT