ಶುಕ್ರವಾರ, ಫೆಬ್ರವರಿ 3, 2023
23 °C

ಮೊದಲ ಓದು | ಸಂಶೋಧನಾ ಕ್ಷೇತ್ರಕ್ಕೆ ಕನ್ನಡ ಪದಕೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಶಕಗಳ ಹಿಂದೆ ಕನ್ನಡದ ಸಂಶೋಧನಾ ಮಹಾಪ್ರಬಂಧಗಳಲ್ಲಿ ಇಂಗ್ಲಿಷ್‌ ಶಬ್ದಗಳ ಬಳಕೆ ಅಧಿಕವಾಗಿತ್ತು. ಆ ಶಬ್ದಗಳಿಗೆ ಸಮಾನಾರ್ಥಕವಾಗಿ ಕನ್ನಡ ಪದಗಳ ಕೊರತೆಯೇ ಈ ರೀತಿ ಆಂಗ್ಲ ಪದಗಳ ಬಳಕೆಗೆ ಪ್ರಮುಖ ಕಾರಣವಾಗಿತ್ತು. 

ವಿಷಯದ ಗ್ರಹಿಕೆಯ ಉದ್ದೇಶದಿಂದ ಉನ್ನತ ಶಿಕ್ಷಣದ ಎಲ್ಲ ಮಟ್ಟಗಳಲ್ಲೂ ಬೋಧನೆ ಮತ್ತು ಕಲಿಕೆಯಲ್ಲಿ ಮಾಧ್ಯಮವಾಗಿ ಕನ್ನಡ ಬಳಕೆಯಾಗುತ್ತಿದೆ. ಆಂಗ್ಲ ಪದಗಳೇ ತುಂಬಿರುತ್ತಿದ್ದ ಸಂಶೋಧನಾ ಪ್ರಬಂಧಗಳಿಂದು ಕನ್ನಡದಲ್ಲಿಯೇ ಮೂಡಿಬರುತ್ತಿವೆ. ಹೇಗೆ ಅಧ್ಯಯನಶಿಸ್ತುಗಳ ಕ್ಷೇತ್ರ ವಿಶಾಲವಾಗುತ್ತಿದೆಯೋ ಹಾಗೆಯೇ ಕನ್ನಡದ ಭಾಷಾ ಭಂಡಾರವೂ ಹಿಗ್ಗುತ್ತಿದೆ. ವಿಷಯದ ಬಗ್ಗೆ ಜ್ಞಾನ ಹೆಚ್ಚುತ್ತಿದ್ದಂತೆ ಹೊಸ ಪದಗಳೂ ಸೇರ್ಪಡೆಯಾಗುತ್ತಿವೆ. ಜೊತೆಗೆ ಈಗಿರುವ ಪದಗಳಿಗೂ ಹೊಸ ವ್ಯಾಖ್ಯಾನ ದೊರೆಯುತ್ತಿದೆ. ಹೊಸ ಪದಗಳಿಗೆ ಆಂಗ್ಲ–ಕನ್ನಡ ಭಾಷೆಯ ನಿಘಂಟುಗಳಿಂದ ಭಾಷಾಂತರ ಮಾಡುವುದೂ ಅಷ್ಟು ಸೂಕ್ತವಲ್ಲ. ಸಂದರ್ಭೋಚಿತವಾಗಿ ಆ ವಾಕ್ಯಕ್ಕೆ ಸರಿಹೊಂದುವಂಥ ಪದಗಳನ್ನು ಬಳಸುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕೃತಿ ಮೂಡಿಬಂದಿದೆ.

ಪ್ರಸ್ತುತ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಷಯವೆಂದರೆ ಲಿಂಗ ವ್ಯವಸ್ಥೆಯ ಅಧ್ಯಯನ. ಕಾನೂನು, ಆಡಳಿತ, ಆರ್ಥಿಕ ವ್ಯವಸ್ಥೆ ಹೀಗೆ ಎಲ್ಲ ವ್ಯವಸ್ಥೆಗಳನ್ನೂ ಲಿಂಗದ ಆಯಾಮದಿಂದ ನೋಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ಅಧ್ಯಯನ ಹಾಗೂ ಲಿಂಗ ವ್ಯವಸ್ಥೆಯ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಲಭ್ಯವಿರುವ ಪದಭಂಡಾರದ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ. ಈ ಉದ್ದೇಶ ಈಡೇರಿಸುವುದೇ ಈ ಪದಗುಚ್ಛದ ಆಶಯ. ಕೃತಿಯಲ್ಲಿ ಲಿಂಗವ್ಯವಸ್ಥೆಯನ್ನೇ ಕೇಂದ್ರವಾಗಿಟ್ಟುಕೊಂಡು, ಅದರ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ವಿಶ್ವದಾದ್ಯಂತ ಚಾಲ್ತಿಯಲ್ಲಿರುವ ಆಂಗ್ಲ ಭಾಷೆಯ ಪದಗಳಿಗೆ ಸಮಾನಾರ್ಥಕ ಪದಗಳನ್ನು ನೀಡಲಾಗಿದೆ. ಜೊತೆಗೆ ಲಿಂಗನ್ಯಾಯ ಸ್ಥಾಪನೆಗಾಗಿ ಅಸ್ತಿತ್ವಕ್ಕೆ ಬಂದ ಕಾಯಿದೆಗಳನ್ನೂ ಇಲ್ಲಿ ಕನ್ನಡದಲ್ಲಿ ಕೊಡಲಾಗಿದೆ. ‘ಲಿಂಗ ವ್ಯವಸ್ಥೆಯ ಅಧ್ಯಯನಕ್ಕೆ ಪೂರಕವಾದ ಎಲ್ಲ ಪರಿಕಲ್ಪನೆಗಳೂ ಇಲ್ಲಿ ಸೇರ್ಪಡೆಯಾಗಿವೆ ಎಂದು ನಾವು ಹೇಳುವುದಿಲ್ಲ. ಇದು ನಮ್ಮ ಮೊದಲ ಪ್ರಯತ್ನ’ ಎನ್ನುವ ಮೂಲಕ ಸಂಪಾದಕ ಬಳಗವು ಕೃತಿಯ ವಿಸ್ತರಣೆಯ ಸುಳಿವನ್ನೂ ನೀಡಿದೆ.

ಕೃತಿ: ಲಿಂಗ ವ್ಯವಸ್ಥೆಯ ಅಧ್ಯಯನಗಳಲ್ಲಿ ಸಮಾನಾರ್ಥಕ ಪದಗಳು

ಪ್ರಧಾನ ಸಂ: ಆರ್‌. ಇಂದಿರಾ

ಸಹ ಸಂ: ಪ್ರಮುಲ ರಾಮನ್‌, ಶಾಂತಿ ಜಿ.

ಪ್ರ: ಅಭಿರುಚಿ ಪ್ರಕಾಶನ, ಮೈಸೂರು

ಸಂ: 9980560013

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು