ಕನಸೊಂದರ ಮಹಾಕಥನ

7
ನವ್ಯೋತ್ತರ ಕಾದಂಬರಿ ಪರಿಚಯ

ಕನಸೊಂದರ ಮಹಾಕಥನ

Published:
Updated:
Deccan Herald

21ನೇ ಶತಮಾನದ ಅಥವ ಸಾಂಸ್ಕೃತಿಕ ಪರಿಭಾಷೆಯಲ್ಲಿ ಹೇಳುವುದಾದರೆ ನವ್ಯೋತ್ತರ- ಪೋಸ್ಟ್ ಮಾಡರ್ನ್- ಸಾಹಿತ್ಯದ ಆದಿ ಕಥೆ ಎಂದು ಸಮಕಾಲೀನ ವಿಮರ್ಶಕರಿಂದ ಪರಿಗಣಿಸಲ್ಪಡುವ ಈ ಕಾದಂಬರಿ ಹಲವು ಕಾರಣಗಳಿಗಾಗಿ ಮುಖ್ಯವಾದ ಕೃತಿ. ಇದರ ವೈಶಿಷ್ಟ್ಯ ಏನೆಂದರೆ ಇದು ಎರಡು ಆವೃತ್ತಿಗಳನ್ನು ಹೊಂದಿರುವ ಒಂದೇ ಕಥೆ! ಅಂದರೆ ಎರಡು ಪುಸ್ತಕಗಳು, ಒಂದೇ ಕಥೆ! ಒಂದು ಹೆಣ್ ಆವೃತ್ತಿ, ಇನ್ನೊಂದು ಗಂಡ್ ಆವೃತ್ತಿ! ಇಡೀ ಕಥನ ಸಾಗುವುದು ಭಾಷೆಯೊಂದರ ಡಿಕ್ಷನರಿ - ನಿಘಂಟಿನಂತೆ: ಪದಗಳು, ಆ ಪದಗಳ ಅರ್ಥಗಳ ಜೊತೆಗೆ!

‘Dictionary of Khazars: Male Edition’ , ‘Dictionary of Khazars: Female Edition’ ಎಂಬ ಎರಡು ಪುಸ್ತಕಗಳ ಈ ಕಾದಂಬರಿ ಸರ್ಬೊ-ಕ್ರೊಷಿಯಾ ಭಾಷೆಯಲ್ಲಿ 1984ರಲ್ಲಿ ಬರೆಯಲ್ಪಟ್ಟು 1988ರಲ್ಲಿ ಇಂಗ್ಲಿಷಿಗೆ ಅನುವಾದಗೊಂಡಿತು. ಸರ್ಬಿಯಾ ದೇಶದ ಗಡಿಗಳ ದಾಟಿ ಯುರೋಪಿನ ಸಾಹಿತ್ಯ ಜಗತ್ತನ್ನು ಆವರಿಸಿಕೊಂಡ ಈ ಕಾದಂಬರಿ ಮೆಲ್ಲಗೆ ಅಮೆರಿಕಾಕ್ಕೆ ಹಬ್ಬಿ ಜಗತ್ತಿನ ಹಲವಾರು ಕಡೆ ಪಸರಿಸಿಕೊಂಡಿತು.

ಮಿಲೊರಡ್ ಪಾವಿಚ್ ಎಂಬಾತನ ಬೆರಳುಗಳಿಂದ ಕೆತ್ತಲ್ಪಟ್ಟ ಈ ಕೃತಿಯನ್ನು ಸಮಕಾಲೀನ ಸಾಹಿತ್ಯದ ಬಹುಮುಖ್ಯ ಪಠ್ಯ ಎಂದೇ ಗುರುತಿಸಲಾಗುತ್ತಿದೆ. Dictionary of Khazars, A Lexicon Novel in 100, 000 Words ಎಂಬ ಅಡಿ ಬರಹದಲ್ಲಿ ರೂಪಿಸಲ್ಪಟ್ಟ ಈ ಕಾದಂಬರಿ ಮೂರು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಗಂಡು- ಹೆಣ್ಣು ಎರಡೂ ಆವೃತ್ತಿಗಳಲ್ಲೂ ಮೂರು ಭಾಗಗಳಿವೆ: ಕೆಂಪು ಪುಸ್ತಕ, ಹಸಿರು ಪುಸ್ತಕ ಮತ್ತು ಹಳದಿ ಪುಸ್ತಕ ಎಂಬ ಕಿರು ಶೀರ್ಷಿಕೆಗಳನ್ನು ಹೊತ್ತ ಈ ಕಾದಂಬರಿ ನಿರೂಪಣೆಗೊಂಡಿರುವುದು ಒಂದು ನಿಘಂಟಿನ ರೂಪದಲ್ಲಿ. ಹಾಗಾಗಿಯೇ ಇದಕ್ಕೆ
ಡಿಕ್ಷನರಿ ಎಂಬ ಹೆಸರು!

ಅಕಾರಾದಿಯಂತೆ ಜೋಡಿಸಲ್ಪಟ್ಟ ಪದಗಳು, ಅವುಗಳ ವಿವರಣೆ, ಅರ್ಥಗಳು! ಒಂದು ಆವೃತ್ತಿಯ ಮೂರು ಭಾಗಗಳಲ್ಲಿಯೂ ಈ ಒಂದು ಲಕ್ಷ ಪದಗಳು ಕಾಣಿಸಿಕೊಳ್ಳುತ್ತವೆ; ಆದರೆ ಅರ್ಥಗಳು/ ವ್ಯಾಖ್ಯಾನಗಳು ಬೇರೆ ಬೇರೆ! ಇದು ಸಾಲದೆಂಬಂತೆ ಕೊನೆಯಲ್ಲಿ ‘Appendix’! ಅಲ್ಲಿ ಅರ್ಥಗಳ ಚೆಲ್ಲಾಟ! ಮತ್ತೆ ಗಂಡಸು- ಹೆಂಗಸು ಆವೃತ್ತಿಗಳಲ್ಲಿ ಈ ಅರ್ಥಗಳು ಏನಾಗಿರಬಹುದೆಂಬ ಕುತೂಹಲ! ಹೀಗೆ ಪದಗಳಿಗೆ ನೀಡುವ ನಿಘಂಟೊಂದರ ಅರ್ಥ/ ವ್ಯಾಖ್ಯಾನಗಳ ಮೂಲಕವೇ ಕಥೆಯೊಂದು ಹಿಂದಕ್ಕೂ ಮುಂದಕ್ಕೂ ಜೀಕಾಡುತ್ತದೆ; ಆದಿ ಅಂತ್ಯಗಳಿಲ್ಲದ ನಿರೂಪಣೆಯೊಂದು ಅದರೊಳಗೇ ಸುಳಿದಾಡುತ್ತಿರುತ್ತದೆ. ಇಂತಹ ಒಂದು ವಿಶಿಷ್ಟ ಪುಸ್ತಕಕ್ಕಿರುವ ಮೂರು ಭಾಗಗಳು ಮೂರು ಬಗೆಯ ಬದುಕಿನ ಕ್ರಮಗಳನ್ನು ಪ್ರತಿನಿಧಿಸುತ್ತವೆ. ಜಗತ್ತಿನ ಪ್ರಮುಖ ಧರ್ಮಗಳಾದ ಕ್ರೈಸ್ತ, ಇಸ್ಲಾಂ ಮತ್ತು ಯಹೂದಿ ಮೂರು ಧರ್ಮಗಳ ವ್ಯಾಖ್ಯಾನವೇ ಈ ಕಾದಂಬರಿಯ ಮೂರು ಭಾಗಗಳು! ಒಂದೇ ಮೂಲದಿಂದ ಹುಟ್ಟಿದ ಈ ಮೂರು ಅಬ್ರಹಾಮಿಕ್ ಧರ್ಮಗಳ ಗುರುಗಳು ಇಲ್ಲಿ ಕನಸೊಂದನ್ನು ತಮ್ಮ ಧರ್ಮಕ್ಕನುಗುಣವಾಗಿ ವಿಶ್ಲೇಷಿಸುತ್ತಾರೆ. ಕನಸಿನಲ್ಲಿ ಬಂದ ವಿಚಾರದ ಪ್ರತಿಪದಕ್ಕೂ ಅವರದೇ ಹಿನ್ನೆಲೆಯ ವ್ಯಾಖ್ಯಾನಗಳು! ಅಷ್ಟಕ್ಕೂ ಯಾರು ಕಂಡ ಕನಸು ಎನ್ನುವುದೇ ಇಲ್ಲಿ ಮುಖ್ಯವಾದ ವಿಚಾರ!

ಸುಮಾರು 7- 10ನೇ ಶತಮಾನಗಳಲ್ಲಿ ಯುರೋಪಿನ ಕಾಸ್ಪಿಯನ್ ಮತ್ತು ಬ್ಲ್ಯಾಕ್ ಸಮುದ್ರಗಳ ನಡುವಿನ ಭೂ ಭಾಗದಲ್ಲಿ ವಾಸಿಸುತ್ತಿದ್ದ ಕಜ಼ರ್ ಎಂಬ ಪ್ರಬಲ ಬುಡಕಟ್ಟು ಸಾಮ್ರಾಜ್ಯದ ಇತಿಹಾಸವನ್ನು ಪಾವಿಚ್ ಇಲ್ಲಿ ಮರುರೂಪಿಸಿದ್ದಾನೆ. ಇತಿಹಾಸ ಎಂದು ಹೇಳಲಾಗದ, ಪುರಾಣ ಎಂದೂ ತಳ್ಳಿ ಹಾಕಲಾಗದ, ಫ್ಯಾಂಟಸಿ ಎಂದು ಅಚ್ಚರಿಗೊಳಗಾಗಿ ಬಿಟ್ಟುಬಿಡಬಹುದಾದಂತಹ ಕಾದಂಬರಿ ಇದಲ್ಲ! ಕಜ಼ರ್ ಬುಡಕಟ್ಟಿನ ಅರಸನಿಗೊಂದು ಕನಸು ಬೀಳುತ್ತದೆ. ಕನಸಿನ ಅರ್ಥಗಳನ್ನು ಬೆಂಬತ್ತುವ ಜನಾಂಗವಾದ ಈ ಕಜ಼ರ್ ಯುದ್ಧದ ನೈಪುಣ್ಯಗಳಿಗೂ ಕಾಠಿಣ್ಯಗಳಿಗೂ ಹೆಸರುವಾಸಿಯಾದುದು! ಉಸಿರಾಡುವಷ್ಟೇ ಸಹಜವಾಗಿ ಬೇಟೆಯ ಮುಗಿಸುವ ಇವರು ಕನಸುಗಳನ್ನೂ ಬೇಟೆಯಾಡುವವರು! ಆದರೆ ಕಜ಼ರ್ ಅರಸ ಈ ಬಾರಿಯ ಕನಸಿಗೆ ಹೊರಗಿನವರ ವ್ಯಾಖ್ಯಾನಗಳನ್ನು ಕೇಳಲು ಉತ್ಸುಕತೆ ತೋರುತ್ತಾನೆ.

ತನ್ನ ನಾಡಿನಲ್ಲಿರುವ ಮೂರು ಹೊಸ ಧರ್ಮಗಳ ಮುಂದಾಳುಗಳಿಗೆ ಹೇಳಿ ಕಳುಹಿಸಿ ತನ್ನ ಕನಸನ್ನು ವ್ಯಾಖ್ಯಾನಿಸುವಂತೆ ಹೇಳುತ್ತಾನೆ. ಆ ಮೂವರಲ್ಲಿ ಯಾರು ತನ್ನ ಕನಸನ್ನು ಸರಿಯಾಗಿ ವ್ಯಾಖ್ಯಾನಿಸುವರೊ ಅಥವ ತನಗೆ ತೃಪ್ತಿ ಪಡಿಸುವ ವ್ಯಾಖ್ಯಾನವ ನೀಡುತ್ತಾರೊ ಅವರ ಧರ್ಮಕ್ಕೆ ತಾನು ಮತಾಂತರಗೊಳ್ಳುತ್ತೇನೆ, ತಾನು ಮಾತ್ರವಲ್ಲ ತನ್ನಿಡೀ ಸಮುದಾಯವನ್ನೇ ಮತಾಂತರಗೊಳಿಸುತ್ತೇನೆ ಎಂದು ಮಾತು ಕೊಡುತ್ತಾನೆ. ಸಮರೋತ್ಸಾಹಕ್ಕೂ ಗಟ್ಟಿತನಕ್ಕೂ ಹೆಸರುವಾಸಿಯಾಗಿದ್ದ ಕಜ಼ರ್ ಬುಡಕಟ್ಟು ಸಮುದಾಯ ಕನಸಿನೊಂದಿಗೆ ಜೂಜು ಕಟ್ಟಿ ಅಂಗಳಕ್ಕಿಳಿಯಿತು! ಮೂರು ಧರ್ಮಗುರುಗಳ ವ್ಯಾಖ್ಯಾನಗಳ ಕೇಳಿಸಿಕೊಂಡಿದ್ದೇ ಈ ಕಾದಂಬರಿಯ ಕಥೆ! ಕೆಂಪು ಪುಸ್ತಕದ ಕ್ರೈಸ್ತ ವ್ಯಾಖ್ಯಾನ, ಹಸಿರು ಪುಸ್ತಕದ ಇಸ್ಲಾಂ ವ್ಯಾಖ್ಯಾನ ಮತ್ತು ಹಳದಿ ಪುಸ್ತಕದ ಯಹೂದಿ ವ್ಯಾಖ್ಯಾನ ಎಂಬ ಕಜ಼ರ್ ಕನಸಿನ ಮೂರು ವ್ಯಾಖ್ಯಾನಗಳು ನಮ್ಮನ್ನು ರೋಮಾಂಚನಗೊಳಿಸುತ್ತವೆ. ಇತಿಹಾಸದಲ್ಲಿ ಯಾವುದೇ ಗುರುತುಗಳಿಲ್ಲದೆ ನಾಶವಾಗಿ ಹೋದ ಬುಡಕಟ್ಟೊಂದರ ಕಥನವನ್ನು ಮೂರು ಧರ್ಮಗಳ ಮೂಲಕ ಕಟ್ಟಿಕೊಡುತ್ತಾನೆ ಪಾವಿಚ್.

ಏಳನೇ ಶತಮಾನದ ಆಸುಪಾಸಿನ ಯುರೋಪಿನಲ್ಲಿ ಹರಡಿಕೊಂಡಿದ್ದ ಈ ಕಜ಼ರ್ ಬುಡಕಟ್ಟು ಸಮೂಹದ ಬಗೆಗೆ ಯಾವುದೇ ನಿಖರ ದಾಖಲೆಗಳು ಇಲ್ಲ! ಆದರೆ ಅಂತಹ ಒಂದು ಸಮೂಹ ಅಸ್ತಿತ್ವದಲ್ಲಿದ್ದ ನೆನಪುಗಳನ್ನು ಯುರೋಪ್ ಹೊಂದಿದೆ. ಜನಮಾನಸದ ಕಥೆಗಳಲ್ಲಿ ಹುದುಗಿ ಹೋಗಿರುವ ಕಜ಼ರ್ ಕಥನವನ್ನು ಪಾವಿಚ್ ಹೆಕ್ಕಿ ಮಾನವಗಾಥೆಯನ್ನು ಕಟ್ಟುತ್ತಾನೆ. ಜನಪದ ಕಥನಗಳನ್ನೇ ಆಧಾರವನ್ನಾಗಿಟ್ಟುಕೊಂಡು ಕನಸೆಂಬ ಕುದುರೆಯನೇರಿ ಕಜ಼ರ್‌ಗಳ ಲೋಕವನ್ನು ನಮಗೆ ತೋರಿಸುತ್ತಾನೆ. ನಿಘಂಟೊಂದರ ಅಕಾರಾದಿ ಜೋಡಣೆಯಲ್ಲಿ ಪದಗಳನ್ನು ಮತ್ತು ಅವುಗಳ ಅರ್ಥಗಳ ವ್ಯಾಖ್ಯಾನಗಳನ್ನು ನೀಡುತ್ತಾ ನಮ್ಮನ್ನು ಅಚ್ಚರಿಗೊಳಿಸುತ್ತಾನೆ.

ಎಲ್ಲಾ ಮೂರು ವ್ಯಾಖ್ಯಾನಗಳಲ್ಲೂ ಪದಗಳು ಪುನರಾವರ್ತನೆ ಆಗುತ್ತವೆ! ಅರ್ಥಗಳು ಬದಲಾಗುತ್ತಲೇ ಇರುತ್ತವೆ! ಅದೊಂದು ಅದ್ಭುತ ಲೋಕ! ಅಲ್ಲಿ ಸೈತಾನ್‌ಗಳು ಗಹಗಹಿಸುತ್ತಾರೆ, ಹೆಂಗಸೊಬ್ಬಳ ಸ್ತನದಿಂದ ಬರುವುದು ಕಪ್ಪು ಹಾಲು! ಇನ್ನೊಬ್ಬಳ ಕಣ್ಣಿನ ರೆಪ್ಪೆಗಳಲ್ಲಿ ಎರಡು ಅಕ್ಷರಗಳನ್ನು ಬರೆಯಲಾಗಿದೆ, ಆ ಅಕ್ಷರಗಳನ್ನು ಯಾರೂ ಓದಬಾರದೆಂದು ಆಕೆಯ ಕಣ್ಣಿನ ರೆಪ್ಪೆಗಳಲ್ಲಿ ಬರೆಯಲಾಗಿದೆ, ಒಂದು ಬೆಳಿಗ್ಗೆ ಕೆಲವರು ನಿಲುವುಗನ್ನಡಿಯನ್ನು ತಂದು ಆಕೆಯನ್ನ ಖುಷಿಗೊಳಿಸುತ್ತಾರೆ. Ateh ಎನ್ನುವ ಮೊದಲನೇ ಪದದ ವಿವರಣೆಯಾದ ಇಲ್ಲಿ ಆಕೆ ಖುಷಿಯಿಂದ ಕನ್ನಡಿಯ ನೋಡುತ್ತಾಳೆ, ಮತ್ತಷ್ಟು ಖುಷಿಗೊಂಡು ತನ್ನ ರೆಪ್ಪೆಗಳ ಮೇಲಿನ ಎರಡು ಅಕ್ಷರಗಳ ಓದುತ್ತಾಳೆ. ತಕ್ಷಣವೇ ಸತ್ತು ಹೋಗುತ್ತಾಳೆ! ಈ Ateh ಪದದ ವಿವರಣೆಯನ್ನು ಮೂರೂ ಧರ್ಮಗುರುಗಳು ತಮ್ಮ ನೀತಿಗಳಿಗನುಸಾರವಾಗಿ ವಿವರಿಸುತ್ತಾ ಹೋಗುತ್ತಾರೆ.

ತಲಾ ಇಂತಹ ಒಂದು ಲಕ್ಷ ಪದಗಳ ಹೊಂದಿರುವ ಮೂರೂ ಭಾಗಗಳು ಪ್ರತಿ ಪದಕ್ಕೂ ಬೇರೆಯದೇ ಅರ್ಥಗಳನ್ನ ನೀಡುತ್ತಾ ಓದುಗರನ್ನು ಸುಂಟರಗಾಳಿಯ ಸುಳಿಗೆ ಸಿಕ್ಕಿಸುತ್ತವೆ. ಇದು ಸಾಲದೆಂಬಂತೆ ಕೊನೆಯಲ್ಲಿ ‘Appendix’!ನಲ್ಲಿ ಪದಗಳ ಮೂರು ವಿಭಿನ್ನ ಅರ್ಥಗಳು ತಲೆ ಕೆಳಗಾಗುತ್ತವೆ. ಒಂದು ಭಾಗದ ಒಂದು ಪದವನ್ನು ಅರ್ಥ ಮಾಡಿಕೊಳ್ಳಲು ಮತ್ತೊಂದು ಭಾಗಕ್ಕೆ ಜಿಗಿಯಬೇಕು, ಅಲ್ಲಿಂದ ಮಗದೊಂದು ಭಾಗಕ್ಕೆ... ಹೀಗೆ ಅಪರಿಮಿತ ಓದುಗಳ ಹೊಂದಿರುವ ಈ ಕಾದಂಬರಿ ಒಂದು ಆಟದಂತೆ! ಆದರೆ ಆಟಕ್ಕಿರುವ ನಿಯಮಗಳು ಇಲ್ಲಿಲ್ಲ! ನೀವು ಎಲ್ಲಿಂದ ಹೇಗೆ ಬೇಕಾದರೂ ಓದಲು ಆರಂಭಿಸಬಹುದು! ಕಥೆಯ ಓಘಕ್ಕೇನೂ ತೊಂದರೆಯಾಗುವುದಿಲ್ಲ! ನಾವು ಓದಲು ತೊಡಗುವ ಯಾವುದೇ ಪುಟವೇ ಅದರ ಆರಂಭವಾಗುತ್ತದೆ. ಆರಂಭದಿಂದಲೇ ಶುರು ಮಾಡಿ ಕಥೆಯನ್ನು ಮುಗಿಸಬೇಕೆಂಬ ನಿಯಮಗಳೇನೂ ಇಲ್ಲಿಲ್ಲ!! ಅದನ್ನು ಪಾವಿಚ್‌ನೇ ಹೇಳುತ್ತಾನೆ. ಆರಂಭ ಅಂತ್ಯಗಳಿಲ್ಲದ ತನ್ನೊಳಗೆ ತಾನೇ ಸುತ್ತುವ ಆ ಮೂಲಕ ಓದುಗರನ್ನು ಸ್ವತಂತ್ರಗೊಳಿಸುವ ಒಂದು ಕಥನವೇ ಈ ಕಾದಂಬರಿ.

ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಸೃಜನಶೀಲ ಬರಹಗಾರ/ರ್ತಿ ತನ್ನ ಪ್ರತಿ ಸಾಲುಗಳೊಳಗೆ ಹತ್ತಾರು ಅರ್ಥಗಳನ್ನ ಹುದುಗಿಸಿಟ್ಟಿರುತ್ತಾರೆ. ಅವುಗಳನ್ನ ಅರ್ಥೈಸಿಕೊಳ್ಳುವುದು ಓದುಗರಾದ ನಮಗೆ ಬಿಟ್ಟಿದ್ದು. ಹಾಗಾಗಿಯೇ ಇದುವರೆಗಿನ ಬಹುತೇಕ ಬರಹಗಳು ಲೇಖಕ ಕೇಂದ್ರಿತ ಬರಹಗಳು. ಅರ್ಥಗಳನ್ನು ಸ್ಫುರಿಸುವ ಅವಕಾಶವನ್ನು ಸೃಷ್ಟಿಸುವ ಬರಹಗಾರನೇ ಇಲ್ಲಿ ಮುಖ್ಯನಾಗುತ್ತಾನೆ. ಆದರೆ ಪಾವಿಚ್‌ನ ಈ ಕಾದಂಬರಿ ಓದುಗರನ್ನು ಲೇಖಕರನ್ನಾಗಿಸುತ್ತದೆ. ಪ್ರತಿ ಪದದ ಅರ್ಥಬೇಟೆಗೆ ಓದುಗರನ್ನು ತಳ್ಳುತ್ತದೆ. ಕಾದಂಬರಿಯನ್ನು ಎಲ್ಲಿಂದ ಬೇಕಾದರೂ ಆರಂಭಿಸಿ ಓದುಗರೇ ಕಥೆ ಕಟ್ಟಿಕೊಳ್ಳುವಂತೆ ಹುರಿದುಂಬಿಸುತ್ತದೆ. ಹಾಗಾಗಿಯೇ ಇದೊಂದು ಓದುಗ ಕೇಂದ್ರಿತ ಕಾದಂಬರಿ. ಓದುಗ ಕೇಂದ್ರಿತ ಕಾದಂಬರಿ/ ಬರಹವೆಂದರೆ ನಮ್ಮಲ್ಲಿ ಕೆಲವರಿಗೆ ತಪ್ಪು ಅಭಿಪ್ರಾಯಗಳಿವೆ; ಓದುಗರಿಗೆ ಯಾವುದೇ ಕಷ್ಟಗಳ ನೀಡದೆ ಸರಾಗವಾಗಿ ಓದಿಸಿಕೊಳ್ಳುವ ಕಥನ ಎಂಬ ನಂಬುಗೆಯಿದೆ. ನವ್ಯೋತ್ತರ ಸಾಹಿತ್ಯದ ಪ್ರಮುಖ ವಿಮರ್ಶಾ ಸಿದ್ಧಾಂತವಾದ ರೀಡರ್ಸ್‌ ರೆಸ್ಪಾನ್ಸ್ ಥಿಯರಿ ಹೇಳುವ ಓದುಗ ಕೇಂದ್ರಿತ ಪಠ್ಯ ಎನ್ನುವುದು ಸರಾಗ ಓದಲ್ಲ, ಬದಲಿಗೆ ಓದುಗರೇ ಲೇಖಕರಾಗುವ ಓದು. ಆ ಮೂಲಕ ಲೇಖಕ ಎಂಬ ಯಜಮಾನ್ಯವನ್ನು ಕೆಡವಿ ಓದುಗರೇ ಲೇಖಕರಾಗುತ್ತಾರೆ, ಅವರೇ ಕಥೆಗಳ ಕಟ್ಟಿಕೊಳ್ಳುತ್ತಾರೆ. ಲೇಖಕನೂ ಒಬ್ಬ ಓದುಗನಾಗಿ ಕಥೆಯ ಅಸಾಧ್ಯ ಓದುಗಳ ಜೋಡಿಸುವುದೇ ಓದುಗ ಕೇಂದ್ರಿತ ಪಠ್ಯ. ಇದನ್ನು ಪಾವಿಚ್ ಸಾಧಿಸುತ್ತಾನೆ. ಆ ಮೂಲಕ ಅರ್ಥ ಕೇಂದ್ರಿತ ಓದನ್ನು ನಿರಾಕರಿಸಿ ಕಾಲ- ದೇಶಗಳ ನಿರ್ವಚಿಸಿ ಪದಗಳ ಆಟ ಕಟ್ಟುತ್ತಾನೆ. ಅವಶೇಷಗಳೂ ಇಲ್ಲದ ಸಮೂಹವೊಂದನ್ನು ಮರುಸೃಷ್ಟಿಸಿ ಹಲವಾರು ಅರ್ಥ– ಖಜಾನೆಯ ಮುಚ್ಚಳವನ್ನು ತೆರೆದು ನಗುತ್ತಾನೆ.

ಪ್ರಪಂಚದ ಇತಿಹಾಸದಲ್ಲಿ ಒಂದಿನಿತೂ ಗುರುತಿಲ್ಲದೆ ಮಾಯವಾಗಿ ಹೋದ ಕಜ಼ರ್ ಬುಡಕಟ್ಟಿನ ಭಾಷೆಯ ಶಬ್ದಭಂಡಾರವನ್ನು ಸಂಗ್ರಹಿಸಿದ ನಿಘಂಟೊಂದು 1691ರಲ್ಲಿ ಪ್ರಕಟವಾದ ದಾಖಲೆಗಳಿವೆ. ಆ ನಿಘಂಟು ನಾಶವಾಗಿ ಕಜ಼ರ್ ಬುಡಕಟ್ಟಿನ ಕುರುಹುಗಳೇ ಇಲ್ಲದೆ ಹೋದವು. ಆ ನಿಘಂಟಿನ ಮರುಸೃಷ್ಟಿಯೇ ಈ ಕಾದಂಬರಿ ಎಂದು ಹೇಳಿದ ಪಾವಿಚ್ ನೈಜ ಕಥೆಗೆ ಕಲ್ಪನೆ, ಪುರಾಣ, ಐತಿಹ್ಯ, ಧಾರ್ಮಿಕ ವ್ಯಾಖ್ಯಾನ, ಮಾನವ ಸಹಜ ಕನಸು ಹೀಗೆ ಅನೇಕ ಅಂಶಗಳನ್ನ ಬೆರೆಸಿ ಹತ್ತಾರು ನಿರೂಪಣೆಗಳ ಹಿಂದಿನ ಅರ್ಥ ಸಾಧ್ಯತೆಗಳನ್ನು ನೀಡಿದ. ಹಾಗಾಗಿಯೇ ಆತ ಒಬ್ಬ ಪೋಸ್ಟ್ ಮಾಡರ್ನ್- ನವ್ಯೋತ್ತರ- ಜಗತ್ತಿನ ಸಂತ! ನನ್ನಂತಹ ನವ್ಯೋತ್ತರ ಸಾಹಿತ್ಯಾಭ್ಯಾಸಿಗಳಿಗೆ ಮೂಲಗ್ರಂಥವೊಂದನ್ನು ನೀಡಿದವ! ಮೂಲ ಎನ್ನುವುದನ್ನೇ ಒಪ್ಪದ ನವ್ಯೋತ್ತರ ಸಿದ್ಧಾಂತಗಳ ಅರಿವಿನ ಎಚ್ಚರವನ್ನಿಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ. ಮಾನವ ಸಹಜ ಬದುಕೊಂದು ಕಾಲಗತಿಯಲ್ಲಿ ಸಾಂಸ್ಥೀಕರಣಗೊಂಡು ಮಾಯವಾದ ಬಗೆಯನ್ನೇ ಇದು ವಿವರಿಸುತ್ತದೆ ಎಂದೇ ನಾ ಅರ್ಥ ಮಾಡಿಕೊಂಡಿದ್ದೇನೆ. ರೊಲಾ ಬಾಕ್ತ್ (Roland Barthes) ಹೇಳುವ Writerly Text ಆಗಿರುವ ಇದು ಓದುಗರಿಗೆ ಯಾವುದೇ ನಿರ್ಬಂಧಗಳನ್ನು ಹೇರದೆ ಸ್ವತಂತ್ರಗೊಳಿಸುತ್ತದೆ. ಈ ಕಾದಂಬರಿಯ ಮಗದೊಂದು ವೈಶಿಷ್ಟ್ಯವೇನೆಂದರೆ ಇದರ ಹೆಣ್ಣು- ಗಂಡು ಆವೃತ್ತಿಗಳು!

ಈ ಎರಡು ಆವೃತ್ತಿಗಳ ಎರಡು ಪುಸ್ತಕಗಳಲ್ಲಿ ಇರುವುದು ಒಂದೇ ಕಥೆ, ಆ ಕಥೆಯ ಮೂರು ಭಾಗಗಳು, ಮೂರು ಧರ್ಮಗಳ ವ್ಯಾಖ್ಯಾನಗಳು! ಆದರೆ ಒಂದೇ ಒಂದು ಪ್ಯಾರಾಗ್ರಾಫ್ ಮಾತ್ರ ಭಿನ್ನವಾಗಿದೆ. ಆ ಹದಿನೈದು ಸಾಲುಗಳ ಭಿನ್ನತೆಯನ್ನು ಹುಡುಕಿಕೊಳ್ಳುವುದು ಓದುಗರಾದ ನಮಗೆ ಬಿಟ್ಟದ್ದಿದೆ. ಆ ಭಿನ್ನತೆಯನ್ನು ಇಟ್ಟುಕೊಂಡೇ ಕಥೆಯ ಓದಬೇಕೆಂದೇನೂ ಇಲ್ಲ ಎಂದೂ ಪಾವಿಚ್ ಹೇಳುತ್ತಾನೆ. ಆದರೆ ಆ ಭಿನ್ನತೆಯಿಂದ ಕಥೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ ಎಂದೂ ಸೇರಿಸುತ್ತಾನೆ. ಕೆಲವರು ಇದನ್ನು ಅಲ್ಲಗಳೆದು ಇದೊಂದು ವ್ಯಾಪಾರೀ ಗಿಮಿಕ್ ಎನ್ನುತ್ತಾರೆ. ಅದೇನೇ ಇರಲಿ ಈ ಕಾದಂಬರಿ ನಮ್ಮ ಕಾಲದ ಬಹುಮುಖ್ಯ ಕೃತಿ.

ಕಥೆಯ ಕೊನೆಯಲ್ಲಿ ಏನಾಯ್ತು ಎಂಬುದನ್ನು ಹೇಳದ ಈ ಕಾದಂಬರಿ ಕಜ಼ರ್ ಬುಡಕಟ್ಟು ಯಾವ ಧರ್ಮಕ್ಕೆ ತನ್ನನ್ನು ಸಮರ್ಪಿಸಿಕೊಂಡಿತು ಎನ್ನುವುದನ್ನು ಇಲ್ಲಿ ನಿಗೂಢವಾಗಿಯೇ ಉಳಿಸುತ್ತದೆ. ಇಂತಹ ಒಂದು ಅಪರಿಮಿತ ಓದಿನ ಕಾದಂಬರಿ ಯಾವ ಕಾರಣಕ್ಕಾಗಿ ಈ ಕಥೆ ಇಂದು ಜಗತ್ತಿನ ಗಂಭೀರ ಸಾಹಿತ್ಯದ ಓದುಗರನ್ನು ಸೆಳೆದಿದೆ? ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ... ಅಣ್ವಸ್ತ್ರಗಳ ಜಗತ್ತಿನಲ್ಲಿ ಬದುಕುತ್ತಿರುವ ಚಿಕ್ಕಪುಟ್ಟ ರಾಷ್ಟ್ರಗಳೇ ಕಜ಼ರ್ ಬುಡಕಟ್ಟುಗಳು ಎನ್ನುವವರೂ ಇದ್ದಾರೆ. ನನಗಂತೂ ಇದು ಮಾನವ ಸಹಜ ಬದುಕೊಂದನ್ನು ಧರ್ಮಗಳು ತಮ್ಮ ಸಾಂಸ್ಥೀಕರಣಗೊಂಡ ನಿರ್ಮಿತ ಸತ್ಯಗಳೊಳಗೆ ನುಂಗಿ ಹಾಕಿದ ಕಥನವಾಗಿಯೇ ಕಾಣುತ್ತದೆ. ಭಾರತದ ಹಿಂದೂ ಎಂಬ ಧಾರ್ಮಿಕ ನಿರ್ಮಿತ ಸತ್ಯವೊಂದು ನೆಲಮೂಲದ ಬುಡಕಟ್ಟು ಸಮೂಹಗಳ ನುಂಗಿಕೊಂಡಂತೆ!

ಕ್ರಿಸ್ಟೋಫರ್ ನೊಲನ್‌ನ ‘Inception’ ಚಲನಚಿತ್ರಕ್ಕೂ ಅರ್ಜೈಂಟೈನಾದ ಲೇಖಕ ಬೋರ್ಹೆ ಬರಹಗಳಿಗೂ ಹೇಗೆ ಸಂಬಂಧಗಳಿವೆಯೋ ಹಾಗೆಯೇ ಬೋರ್ಹೆಗೂ ಯಹೂದಿಗಳ ಕಬಾಲ ಗ್ರಂಥಕ್ಕೂ ಬಂಧವಿದೆ ಎಂದೇ ನಾ ತಿಳಿದುಕೊಂಡಿದ್ದೇನೆ. ಇದರ ಮುಂದುವರಿಕೆಯಾಗಿ ಯಹೂದಿಗಳ ಕಬಾಲಕ್ಕೂ ಕಜ಼ರ್‌ಗಳ ಕನಸಿಗೂ ಸಂಬಂಧವಿದೆ ಎನ್ನುವ ಹೊಸ ಹೊಳಹನೂ ನನಗೆ ನೀಡಿದ ಕೃತಿ ಇದು! ಕಬಾಲದ ಪ್ರಕಾರ ನಾವಿರುವ ಈ ಜಗತ್ತು ದೇವರು ಕಾಣುತ್ತಿರುವ ಒಂದು ಕನಸು! ಹಾಗಾಗಿಯೇ ನನ್ನ ಅನುಮಾನದ ಹುಟ್ಟುಗುಣ ಇಲ್ಲಿ ಥಟಕ್ಕನೆ ಎದ್ದು ನಿಲ್ಲುತ್ತದೆ. ಕಜ಼ರ್‌ಗಳಿಗೂ ಕಬಾಲಕ್ಕೂ ಸಾಮ್ಯಗಳ ಹುಡುಕಿ ಹೊರಡುತ್ತದೆ. ಪ್ರಪಂಚದ ಬಹುತೇಕ ಧರ್ಮಗಳೆಲ್ಲವೂ ಬುಡಕಟ್ಟುಗಳ ಜ್ಞಾನ ಪರಂಪರೆಯನ್ನು ಕದ್ದುಕೊಂಡು ಅಥವ ಅರಗಿಸಿಕೊಂಡು ಸಾಂಸ್ಥೀಕರಣಗೊಂಡಿವೆ. ಬುಡಕಟ್ಟು ಜ್ಞಾನವನ್ನು ನಾಶಪಡಿಸಿ ಅವರನ್ನು ನಾಗರಿಕಗೊಳಿಸಿದ ಕೇಕೆಯೊಳಗೆ ಬುಡಕಟ್ಟುಗಳ ನಂದದ ಬೆಂಕಿಯಿದೆ, ಬೆಳಕಿದೆ. ಹೀಗೆ ಸದ್ಯಕ್ಕೆ ಈ ಕಾದಂಬರಿಯನ್ನು ಓದಿಕೊಂಡಿರುವ ನಾನು ಈ ಲೇಖನವ ಮುಗಿಸುವ ಮುಂಚೆ ಒಂದು ಮಾತ ಹೇಳಲೇಬೇಕು.

ಜಗತ್ತಿನ ಖ್ಯಾತ ಲೇಖಕ ದಕ್ಷಿಣ ಅಮೆರಿಕಾದ ಗೇಬ್ರಿಯಲ್ ಗಾರ್ಸಿಯ ಮಾರ್‌ಕೆಸ್‌ನ ಮ್ಯಾಜಿಕ್ ರಿಯಲಿಸಂ ಅನ್ನು ನಮ್ಮಲ್ಲಿ ಕೆಲವರು ರಾಮಾಯಣ ಮಹಾಭಾರತಗಳಂತಹ ಭಾರತೀಯ ಪುರಾಣಗಳಿಗೆ ಹೋಲಿಸಿ ಲ್ಯಾಟಿನ್ ಅಮೆರಿಕಾದ ಮಾಯಾ ವಾಸ್ತವವನ್ನು ಹಾಳುಗೆಡವಿದ ಉದಾಹರಣೆ ನಮ್ಮ ಮುಂದಿದೆ. ವಸಾಹತೋತ್ತರ ಮತ್ತು ಎಡಪಂಥೀಯ ಚಿಂತನಾಕ್ರಮವಾದ ಮ್ಯಾಜಿಕ್ ರಿಯಲಿಸಂಅನ್ನು ನಮ್ಮ ಕೆಲ ವಿದ್ವಾಂಸರು ಪೊಳ್ಳು ಪುರಾಣ ಕಥೆಗಳಿಗೆ/ ಫ್ಯಾಂಟಸಿ, ರಮ್ಯ ನಿರೂಪಣೆಗಳಿಗೆ ಕಟ್ಟಿಹಾಕಿದರು. ಇಂತಹ ಅವಘಡಗಳು ಮಿಲೊರಡ್ ಪಾವಿಚ್‌ನ ಈ ಕಾದಂಬರಿಗೆ ಸಂಭವಿಸದಿರಲಿ ಎಂದು ಆಶಿಸುತ್ತೇನೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !