ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕರುಳಬಳ್ಳಿಯ ವಿಷಾದದಲ್ಲಿ ಮೂಡುವ ಮಗಳ ಬಿಂಬ

Last Updated 2 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

‘ಮುದ್ದು ಮಗಳೇ’ ಎಂಬ ಶೀರ್ಷಿಕೆಯನ್ನು ಓದಿದಾಕ್ಷಣವೇ ಬಿರುಸೆಖೆಯಲ್ಲಿ ಒಮ್ಮಿಂದೊಮ್ಮೆಲೇ ತಂಗಾಳಿ ಬೀಸಿ ಮೈಮನವೆಲ್ಲ ಉಲ್ಲಸಿತಗೊಳ್ಳುವ ಅನುಭವವಾಗುತ್ತದೆ. ‘ಮಗಳು’ ಎಂಬ ಶಬ್ದಕ್ಕೆ ಇರುವ ಶಕ್ತಿ ಅದು. ಆದರೆ ಅದರ ಕೆಳಗಿನ ಸಾಲು ಓದಿದಾಗ ಮೈ ಆವರಿಸಿದ್ದ ತಂಗಾಳಿಯೇ ಬೆಂಕಿನಾಲಗೆ ಚಾಚಿ ಧಗಧಗ ದಹಿಸಿದಂತೆ ಭಾಸವಾಗುತ್ತದೆ. ಆ ಸಾಲು ಹೀಗಿದೆ: ‘ಮತ್ತೊಮ್ಮೆ ಹುಟ್ಟಿ ಬಾ...’

ಲತಾ ಶ್ರೀನಿವಾಸ್‌ ಅವರು ಬರೆದುಕೊಂಡಿರುವ ಈ ಪುಸ್ತಕದ ಪ್ರತೀ ಪುಟವೂ ಮುದ್ದು ಮಗಳ ನೆನಪು ಉಕ್ಕಿಸುವ ವಿಷಾದರಸದಲ್ಲಿ ಅದ್ದಿ ತೆಗೆದಂತಿದೆ. ಹೇಳಿಕೊಳ್ಳಲು ಇದು ‘ತಾಯಿಯೊಬ್ಬಳ ಆತ್ಮಕಥೆ’. ನಿರೂಪಣೆಯ ಕ್ರಮದಲ್ಲಿ ಇದು ತಾಯಿ, ಭೌತಿಕವಾಗಿ ತನ್ನನ್ನು ತೊರೆದಿರುವ ಮಗಳಿಗೆ ಬರೆದ ಅತ್ಯಾಪ್ತ ಓಲೆ. ಮಗಳಿಗಷ್ಟೇ ಅಲ್ಲ, ಸುತ್ತಲಿನ ಲೋಕವೂ ತನ್ನ ಮಾತನ್ನು ಕೇಳಲಿ ಎಂಬ ಅಂತರಂಗದ ಒತ್ತಡವೂ ಇಲ್ಲಿದೆ.

ಬಾಲ್ಯದಿಂದಲೇ ಅಪರೂಪದ ಕಾಯಿಲೆಯ ರೂಪದಲ್ಲಿ ಪ್ರಿಯಾಂಕಾಳ ಪುಟ್ಟ ಪಾದಗಳ ಹೆಜ್ಜೆಗಳನ್ನೇ ಅನುಸರಿಸುತ್ತ ಬಂದ ಮೃತ್ಯು ತಾರುಣ್ಯದ ಹೊಸ್ತಿಲಲ್ಲಿ ಜೀವವನ್ನೇ ಕಬಳಿಸುತ್ತಾನೆ. ಅದು ಮಗಳ ಯಾತನೆಯ ಸುದೀರ್ಘ ಯಾನದ ಅಂತ್ಯವೂ ಹೌದು; ಅಮ್ಮನ ಅಸೀಮ ನೋವಿನ ನಡಿಗೆಯ ಆರಂಭವೂ ಹೌದು.

ಸಾವಿನ ಬೆಳಕಿನಲ್ಲಿ ಬದುಕಿನ ಮಬ್ಬುಗತ್ತಲಿನ ದಾರಿಯನ್ನು ನೋಡತೊಡಗಿದಾಗ ಎಲ್ಲವೂ ಬೇರೆಯದೇ ಆಗಿ ಹೊಳೆಯಲಾರಂಭಿಸುತ್ತದೆ. ಇಲ್ಲಿ ಲತಾ ಶ್ರೀನಿವಾಸ್‌ ಆ ಹೊಳಪಿನ ದಾರಿಯಲ್ಲಿ ನಮ್ಮನ್ನೂ ಕರೆದುಕೊಂಡುಹೋಗುತ್ತಾರೆ. ‘ಶ್ರಾವಣಮಾಸದ ಚಳಿಮಳೆಯ ಜೊತೆಯಲ್ಲಿ ನಿನ್ನ ನೆನಪು ಜೀವವನ್ನೇ ತೋಯಿಸುವ ಕೊರಗು ಕಂದಾ, ನೀನು ನನ್ನ ಮಡಿಲಿಗೆ ಬಂದಾಗ ನನಗಿನ್ನೂ ಹತ್ತೊಂಬತ್ತು ತುಂಬಿರಲಿಲ್ಲ’ ಎಂದು ಆರಂಭವಾಗುವ ಈ ಬರಹ ಮಗಳ ಜೊತೆಜೊತೆಯಲ್ಲಿಯೇ ಅಮ್ಮನೂ ಬೆಳೆಯುತ್ತ, ಬೆಳಗುತ್ತ ಹೋಗುವ ಪರಿಯನ್ನು ನಿರೂಪಿಸುತ್ತ ಹೋಗುತ್ತದೆ.

ಮೇಲ್ನೋಟಕ್ಕೆ ‘ಅಲರ್ಜಿ’ ಎಂಬ ಸಾಧಾರಣ ಮುಖವಾಡ ತೊಟ್ಟ ಅಸ್ವಾಸ್ಥ್ಯ, ಮಗಳ ಜೀವವನ್ನೇ ನುಂಗಿ ನೊಣೆಯಬಲ್ಲದು ಎಂಬ ಕಲ್ಪನೆ ಯಾವ ತಾಯಿಗೆ ತಾನೇ ಇದ್ದೀತು? ಒಂದು ಸಾವು ಕುಟುಂಬದೊಳಗೆ ತಂದಿಡುವ ನಿರ್ವಾತ, ಅದರಿಂದ ಹುಟ್ಟಿಕೊಳ್ಳುವ ಸಂಕಟಗಳನ್ನು ಹೇಳುತ್ತಲೇ ಒಡಲ ಉರಿಗೆ ಹೊರಗಿನ ಜನರು ತಮಗೆ ಗೊತ್ತಿಲ್ಲದಂತೆ ತುಪ್ಪ ಸುರಿಯುವ ಕ್ರೌರ್ಯವನ್ನೂ ಈ ಪುಸ್ತಕ ತೆರೆದಿಡುತ್ತದೆ.

‘ಮತ್ತೆ ಹುಟ್ಟಿ ಬಾ...’ ಎಂಬ ಕರೆಯಲ್ಲಿಯೇ ಮಗಳ ನೆನಪುಗಳ ಜೊತೆಗೆ ಅವಳೊಂದಿಗೆ ಮತ್ತೆ ಬದುಕುವ ಅಮ್ಮನ ಹಂಬಲವೂ ಇದೆ. ಈ ಹಂಬಲದ ಪಾಲನ್ನು ನಮಗೂ ನೀಡುವಷ್ಟು ಈ ಪುಸ್ತಕ ಆಪ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT