ಮಂಗಳವಾರ, ಅಕ್ಟೋಬರ್ 20, 2020
22 °C
ಅಕ್ಷರ ಕೆ.ವಿ. ಅವರ ನಾಟಕದ ಒಂದು ಓದು

PV Web Exclusive l ಪರಮಪದಸೋಪಾನಪಟ: ವ್ಯಕ್ತಮಧ್ಯದಲ್ಲಿ ಹೊತ್ತುರಿವ ಪಂಜು

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

Prajavani

ಕಳೆದ ಕೆಲವು ದಶಕಗಳ ಈಚೆಗೆ ಹಳ್ಳಿ ಪರಿಸರದಲ್ಲಿ, ಅದೂ ಮಲೆನಾಡ ಹಳ್ಳಿಗಳ ಜೀವನದಲ್ಲಿ ಆದ ಪಲ್ಲಟಗಳನ್ನು ಬಹುಸೂಕ್ಷ್ಮವಾಗಿ ಮತ್ತು ಸಮರ್ಥವಾಗಿ ಹಿಡಿದಿಡುವ ಪ್ರಯತ್ನವನ್ನು ಅಕ್ಷರ ಕೆ.ವಿ. ಅವರ ‘ಭಾರತಯಾತ್ರೆ’ ಸರಣಿಯ ನಾಟಕಗಳು ಮಾಡಿವೆ (ಭಾರತಯಾತ್ರೆ, ಸಹ್ಯಾದ್ರಿಕಾಂಡ, ಸೇತುಬಂಧನ). ಆಧುನಿಕ ಜೀವನದ ಸೆಳೆತಕ್ಕೆ ಒಳಗಾಗಿ ಹಳ್ಳಿಗಳಿಂದ ಜಿಗಿದು ನಗರ, ವಿದೇಶಗಳೆಂಬ ತಪ್ಪಲೆಗೆ ಬಿದ್ದವರಿಂದ ಉಂಟಾದ ಪಲ್ಲಟಗಳು ಮತ್ತು ಆಧುನಿಕ ಜಗತ್ತಿನ ಚಾಚುಗಳು ಹಳ್ಳಿಜೀವನವನ್ನೇ ಪ್ರವೇಶಿಸಿ ಉಂಟುಮಾಡಿದ ತಲ್ಲಣಗಳು ಎರಡನ್ನೂ ತುಂಬ ಸಂಯಮದಿಂದ ಧ್ಯಾನಿಸುವುದರ ಮೂಲಕವೇ ಈ ನಾಟಕಗಳು ಕಟ್ಟಲ್ಪಟ್ಟಿವೆ.

ಇದೇ ಸರಣಿಯ ಮುಂದುವರಿದ ಭಾಗ ಎಂದೂ ನೋಡಬಹುದಾದ, ಅದರಿಂದ ಸಿಡಿದು ಹೊರಗುಳಿದ ತುಂಡಿನಂತೆಯೂ ಕಾಣುವ ನಾಟಕ, ಅಕ್ಷರ ಅವರು ಇತ್ತೀಚೆಗೆ ರಚಿಸಿದ ‘ಪರಮಪದಸೋಪಾನಪಟ’. ಈ ಶೀರ್ಷಿಕೆಯನ್ನು ಜೋರಾಗಿ ಓದಿಕೊಂಡಾಗ ಉಂಟಾಗುವ ಒಂದು ರೀತಿಯ ಉತ್ಕರ್ಷವೇ ನಾಟಕದ ಕೇಂದ್ರದಲ್ಲಿಯೂ ಇದೆ. ಹಿಂದಿನ ನಾಟಕಗಳ ಸಂಯಮವೇ ಇಲ್ಲಿ ಒಡೆದು ಸ್ಫೋಟಗೊಂಡ ಹಾಗೆ ಕಾಣಿಸುತ್ತದೆ. ಸ್ಪೋಟದಲ್ಲಿಯ ದಿಗ್ಭ್ರಮೆ, ವೇಗ, ವಿಚ್ಛಿದ್ರತೆ, ತಕ್ಷಣದ ಗ್ರಹಿಕೆಗೆ ಸಿಗದ ದುರಂತ ಎಲ್ಲವೂ ಈ ನಾಟಕದಲ್ಲಿವೆ. ಗೂಡು ಬಿಟ್ಟು ಹಾರಿಬಂದ ಜೇನುಹುಳಗಳು ದಣಿವಾರಿಸಲು ಕುಳಿತುಕೊಂಡ ಬಗೆಯಲ್ಲಿ ಅವು ಒಂದೆಡೆ ಕೂತಿವೆ. ಅದು ನೋಡಲಿಕ್ಕೆ ಜೇನುಗೂಡಿನ ಹಾಗೆಯೇ ಕಾಣುತ್ತವೆ. ಆದರೆ ಅಲ್ಲಿ ಗೂಡಿಲ್ಲ, ಜೇನಿಲ್ಲ, ಒಂದರ ಬೆನ್ನಿಗೆ ಇನ್ನೊಂದು ಹತ್ತಿಕೂತ ಹುಳಗಳಿವೆಯಷ್ಟೆ. ಅವು ಅಲ್ಲಿಂದ ಹಾರಿಹೋದ ಮೇಲೆ ಏನೂ ಇಲ್ಲ!

ಈ ನಾಟಕ ನಡೆಯುವುದೆಲ್ಲ ನಡುರಾತ್ರಿಯ ಆಸುಪಾಸಿನಲ್ಲಿ. ಕತ್ತಲಲ್ಲಿ ಅಲೆದಾಡುವವರು ನಿಶಾಚರ ರಕ್ಕಸರು ಎಂಬುದು ನಂಬಿಕೆ. ಬೆಳಕಿನ ಸುಭಗ ಜಗತ್ತಿಗೆ ನಿಲುಕದ ಮತ್ತೊಂದು ಅಧೋಲೋಕ ರಾತ್ರಿ ಹೊತ್ತು ತೆರೆದುಕೊಳ್ಳುತ್ತದೆ.

 ವ್ಯಕ್ತಮಧ್ಯದಲ್ಲಿ ಘಟಿಸುತ್ತ ಹೋಗುವ ಈ ನಾಟಕ, ಆ ಘಟನೆಗಳ ಮೂಲಕವೇ ಭೂತದ ಕುರಿತು ದುಗುಡಮಿಶ್ರಿತ ವಿಷಾದವನ್ನೂ ಭವಿಷ್ಯದ ಕುರಿತು ನಿಗೂಢ ಆತಂಕವನ್ನೂ ಹುಟ್ಟಿಸುತ್ತ ಹೋಗುತ್ತದೆ. ಈ ನಾಟಕದ ಮುಖ್ಯಪಾತ್ರ ದಿವಾಕರ ಭಟ್ಟ. ಅವನು ತಾಳಮದ್ದಲೆಯಲ್ಲಿ ರಾವಣನ ಅರ್ಥ ಹೇಳಲು ಪ್ರಸಿದ್ಧ. ದೋ ನಂಬರ್ ವ್ಯಾಪಾರ ಮಾಡಿ, ಹಾವು ಏಣಿ ಆಟದಲ್ಲಿ ಏಣಿ ಸಿಕ್ಕವನ ಹಾಗೆ ಸರ್‍ರನೇ ಮೇಲೇರಿ ಈಗ ಹಾವಿನ ಬಾಯಿಗೆ ಸಿಕ್ಕ ಹಾಗೆ ತಳವಿಲ್ಲದ ಪಾತಾಳಕ್ಕೆ ಕುಸಿಯುತ್ತಲೇ ಇರುವವ. ತಾಳಮದ್ದಲೆ ಅರ್ಥ ಹೇಳುವುದು ಹೇಗೆ ಎನ್ನುವುದನ್ನು ವಿವರಿಸುತ್ತ ಅವನು ಆಡುವ ಮಾತು ಹೀಗಿದೆ: ‘ಇವತ್ತು ಮತ್ತು ಅವತ್ತು – ಎರಡೂ ಕಾಲಗಳಲ್ಲಿ ಎರಡು ಕಾಲನ್ನೂರಿಕೊಂಡು, ಇವತ್ತು ಆಗಿರೋದನ್ನ, ಆಗದೇ ಇರೋದನ್ನ, ಆಗಬಹುದಾದದ್ದನ್ನ, ಆಗಬೇಕು ಅನ್ನಿಸೋದನ್ನು, ಆಗಲಿ ಅಂತ ಕನಸು ಕಾಣೋದನ್ನು – ಎಲ್ಲವನ್ನೂ ಒಂದೇ ಪಟ್ಟಿಗೆ ಕೈಲಾಸ ಪರ್ವತದ ಬುಡಕ್ಕೇ ಕೈಹಾಕಿ ಎತ್ತಿದ ಹಾಗೆ ಮೇಲೆತ್ತಬೇಕು, ಮತ್ತೆ, ಗೋವರ್ಧನಗಿರಿಯ ಹಾಗೆ ಕಿರುಬೆರಳಿನ ತುದಿಗೆ ಲೀಲಾಜಾಲವಾಗಿ ನಿಲ್ಲಿಸಿ ಆಡಿಸಬೇಕು!’

ಈ ಮಾತನ್ನು ಒಟ್ಟಾರೆ ಈ ನಾಟಕಕ್ಕೂ ಅನ್ವಯಿಸಿ ನೋಡಬಹುದು. ಇದು ವರ್ತಮಾನದಲ್ಲಿ ನಡೆಯುತ್ತಲೇ ಪುರಾಣದಲ್ಲಿ ಕಾಲೂರುತ್ತದೆ. ಪುರಾಣದಲ್ಲಿಯೂ ವರ್ತಮಾನವನ್ನು ಕಾಣಿಸುತ್ತದೆ. ಈ ಮುಖಾಮುಖಿ ಹೇಗಿದೆಯೆಂದರೆ ವರ್ತಮಾನದ ಪಾತ್ರಗಳೆಲ್ಲವೂ ಪುರಾಣದ ಪಾತ್ರಗಳಾಗಿಯೂ, ಪುರಾಣದ ರಾವಣ ಈಗಿನ ದಿವಾಳಿ ದಿವಾಕರನಾಗಿಯೂ ಕಾಣಿಸಲಾರಂಭಿಸುತ್ತಾರೆ. ಇದು ಎಂದುಕೊಂಡು ಮುಟ್ಟಿದರೆ ಅದಾಗಿಯೂ ಅದು ಎಂದುಕೊಂಡು ಮುಟ್ಟಿದರೆ ಇದಾಗಿಯೂ ಬದಲಾಗುವ ಈ ದೃಶ್ಯಪಟ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. 

ನಮ್ಮ ಈ ಕಾಲದ ವಿಪ್ಲವಗಳಿಗೆ ಮುಖ್ಯ ಕಾರಣವನ್ನು ಒಂದು ಸಾಲಿನಲ್ಲಿ, ‘ಮಿತಿಮೀರಿದ ಹಣದ ವ್ಯಾಮೋಹ ಮತ್ತು ಅದರಿಂದ ಹುಟ್ಟಿಕೊಂಡ ಭೋಗಲಾಲಸೆಯೆಂಬ ಉಪ್ಪು ನೀರು’ ಎಂದು ಹೇಳಬಹುದೇನೋ. ಮನೆ ಹಿತ್ತಿಲ ಬಾವಿಯಲ್ಲಿನ ನೀರು, ತೋಟದ ಕೊನೆಯಲ್ಲಿನ ಕೆರೆಯಲ್ಲಿನ ನೀರು, ಊರ ಅಂಚಿನಲ್ಲಿ ಹರಿಯುತ್ತಿರುವ ನದಿಯಲ್ಲಿನ ನೀರು ಎಲ್ಲವೂ ದಾಹವನ್ನು ಹಿಂಗಿಸುತ್ತವೆ. ಇವೆಲ್ಲವೂ ಹೋಗಿ ಸೇರುವ ಸಮುದ್ರದಲ್ಲಿರುವುದೂ ನೀರೇ. ನೀರು ದಾಹ ಹಿಂಗಿಸುತ್ತದೆ ಎನ್ನುವುದು ಲೋಕಮಾನ್ಯ ಮಾತು. ಆದರೆ ಈ ಸಮುದ್ರದಲ್ಲಿರುವ ನೀರು ವೈಜ್ಞಾನಿಕವಾಗಿ ನೀರೇ ಆದರೂ ಅದು ದಾಹ ಹಿಂಗಿಸುವ ನೀರಲ್ಲ... ಬದಲಿಗೆ ದಾಹ ಹೆಚ್ಚಿಸುವ ನೀರು. ಬಾವಿ, ಕೆರೆ, ನದಿ, ತೋಡುಗಳಲ್ಲಿ ಹರಿಯುವ ನೀರುಗಳಲ್ಲಿನದ್ದೇ ಒಂದು ಗುಣ ಅತಿಯಾಗಿ ಉಪ್ಫಾದರೆ ಕುಡಿದಷ್ಟೂ ದಾಹ ಹೆಚ್ಚಿಸುವ ಸಮುದ್ರದ ನೀರಾಗಿಬಿಡುತ್ತದೆ.

ಬಾವಿಯ ನೀರು ಅಗತ್ಯಕ್ಕೆ ಸಾಕು. ಅದು ಪ್ರದರ್ಶನದ, ಅಗತ್ಯವನ್ನು ಅಲಕ್ಷಿಸಿದ ಭೋಗದ ಸಲಕರಣೆಯಾದರೆ ಅದಕ್ಕೆ ಸಮುದ್ರವೇ ಬೇಕು. ಆದರೆ ಹಿತ್ತಿಲ ಬಾವಿಯ ನೀರೇ ಉಪ್ಪಾಗಿಬಿಟ್ಟಿರುವ ವಿಚಿತ್ರ ಸಂದಿಗ್ಧದ ಕಾಲದಲ್ಲಿ ನಾವಿದ್ದೇವೆ. ಇದಕ್ಕೆ ಕಾರಣ ಏನು? ಈ ಆಟದ ಸೂತ್ರಧಾರ ಯಾರು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. ಸುಲಭವಾಗಿ ಸಿಕ್ಕುವ ಉತ್ತರಗಳು ಪೂರ್ತಿ ಸತ್ಯವನ್ನು ಕಾಣಿಸುವುದಿಲ್ಲ. ಗೊತ್ತಿಲ್ಲದ ಕೈ ಆಡಿಸುತ್ತಿರುವ ಆಟವೊಂದರಲ್ಲಿ ನಾವೆಲ್ಲರೂ ನರಳುತ್ತ ನವೆಯುತ್ತ ಹೊರಳಾಡುತ್ತಿದ್ದೇವೆ. ದೆಹಲಿಯ ಮಾಜಿ ಮಿನಿಸ್ಟರನ ಮನೆಯ ಮೇಲೆ ಕಂದಾಯ ಇಲಾಖೆ ದಾಳಿಯಾದರೆ ಸಾಗರದ ಪುಟ್ಟ ಊರಿನಲ್ಲೇಕೆ ತಲ್ಲಣವೇಳಬೇಕು? ಈ ತಲ್ಲಣದ ಬೇರು ಎಲ್ಲಿಂದ ಎಲ್ಲಿಗೆ ಚಾಚಿದೆ? ಅದನ್ನು ನಿಯಂತ್ರಿಸುವ ಆ ಕೈ ಯಾವುದು? ನಮ್ಮನ್ನು ಈ ಆಟದಿಂದ ಆಚೆ ಹೋಗದಂತೆ ತಡೆದಿರುವ ಟ್ರ್ಯಾಪ್ ಯಾವುದು? ಈ ಪ್ರಶ್ನೆಗಳಿಗೆ ಈ ನಾಟಕದಲ್ಲಿ ನೇರವಾದ ಉತ್ತರವಿಲ್ಲ. ಆದರೆ ಆ ಟ್ರ್ಯಾಪ್‌ ಅನ್ನು ತೀವ್ರವಾಗಿ ಅನುಭವಕ್ಕೆ ತಂದುಕೊಡುವ ಕೆಲಸವನ್ನುಈ ನಾಟಕ ಮಾಡುತ್ತದೆ.

ಹೊಳೆಯಲ್ಲಿ ದಾಟುವ ಜಾಗದಲ್ಲಿ ನೀರು ಜೋರು ಸದ್ದು ಮಾಡುತ್ತದೆ. ಆದರೆ ಗುಂಡಿಯಲ್ಲಿ ನೀರು ಸದ್ದೇ ಇಲ್ಲದೇ ಸುಮ್ಮನೆ ಇರುತ್ತದೆ – ಇಲ್ಲ. ಸುಮ್ಮನೆ ಇರುವ ಹಾಗೆ ತೋರುತ್ತದೆ. ಬದಿಯ ಮರದಿಂದ ಬಿದ್ದ ಹಣ್ಣೆಲೆಗಳು ಅಲ್ಲಲ್ಲೇ ರೌಂಡು ಹೊಡೆಯುತ್ತ ನೀರು ಯಾವಾಗಲೂ ಚಲಿಸುವುದೇ ಇಲ್ಲವೇನೋ, ಇದ್ದಲ್ಲಿಯೇ ಇರುತ್ತದೇನೋ ಅನ್ನುವ ಹಾಗೆ ಕಾಣುವಂತೆ ಮಾಡುತ್ತದೆ. ಆದರೆ ಮೇಲುಬದಿಗೆ ಸಾಪು ಸಪಾಟಾಗಿರುವ ಆ ಜಾಗದಲ್ಲೇ ಇರುವ ಒಳಸುಳಿಗಳೂ ಎಂಥ ಭರ್ಜರಿ ಈಜುಗಾರನನ್ನೂ ನುಂಗಿ ನೀರು ಕುಡಿಯವಷ್ಟು ಶಕ್ತಿಶಾಲಿ ಆಗಿರುತ್ತವೆ. ಈ ನಾಟಕದ ಕೇಂದ್ರದಲ್ಲಿರುವ ಟ್ರ್ಯಾಪ್ ಅಂಥದ್ದು. ಅದು ಸುಳಿಗೆ ಸಿಲುಕಿ ಗಿರಗಿಟ್ಲಿ ತಿರುಗಿಸಿದ ಹಾಗಿನ ತಲ್ಲಣವನ್ನೇ ಹುಟ್ಟಿಸುತ್ತದೆ. ಇಂದಿನ ಹಳ್ಳಿಗಳ ಪರಿಸ್ಥಿತಿ, ಅಲ್ಲಿನ ತಲ್ಲಣಗಳು, ಮನುಷ್ಯನ ದುರಾಸೆ, ಕುರುಡು ಕಾಂಚಾಣದ ಕುಣಿತ ಈ ಎಲ್ಲವನ್ನೂ ಹೇಳುತ್ತಲೇ, ಇದು ಹೀಗಲ್ಲದೇ ಇನ್ನು ಹೇಗೂ ಇರಲು ಸಾಧ್ಯವಿರಲಿಲ್ಲ ಎಂಬುದನ್ನೂ ಕಾಣಿಸುತ್ತ ಹೋಗುತ್ತದೆ.

ರಾತ್ರಿ ಹೊತ್ತಲ್ಲಿ ಒಂದು ಹೆಣವನ್ನು ಇಬ್ಬರು ಕಾವಲು ಕಾಯುತ್ತಿದ್ದಾರೆ. ಅವರು ಅತ್ತ ಹೋಗಿ ಇತ್ತ ಬರುವಷ್ಟರಲ್ಲಿ ಆ ಹೆಣ ಇದ್ದ ಜಾಗದಲ್ಲಿ ಇಲ್ಲ! ಅದೇ ಎದ್ದುಬಂದು ಹೇಳಿದ ಹಾಗೆ ಶುರುವಾಗುವ ಕಥನ ಕೊನೆಗೆ ಅದು ಇದ್ದ ಜಾಗದಲ್ಲೇ ಇರುವುದನ್ನು ತೋರಿಸುವ ಮೂಲಕ ಮುಗಿಯುತ್ತದೆ. ಹಾಗಾದರೆ ಅಲ್ಲಿ ಕಾವಲು ಕಂಡವರು ಕಂಡಿದ್ದೇನು? ಅವರಿಗಾದ ಅನುಭವಕ್ಕೆ ಏನು ಹೆಸರು? ವೈದ್ಯರು ಅದೊಂದು ರೋಗ ಎಂದು ನಗುತ್ತಾರೆ. ಆದರೆ ಅದು ರೋಗವೆಂದಾದರೆ ಈ ನಾಟಕವೇ ಇಲ್ಲ. ಅವರು ರಾತ್ರಿ ಕಂಡಿದ್ದು ನಿಜವೆಂದಾದರೆ ಹೆಣವೆದ್ದು ಬಂದು ಹೇಳಿದ ಕಥೆಯಾಗುತ್ತದೆ. ಇಂಥದ್ದೊಂದು ವಿಚಿತ್ರ ‘ಅವ್ಯಕ್ತ ಮಧ್ಯ’ದಲ್ಲಿ ಇಡೀ ನಾಟಕ ಘಟಿಸುತ್ತದೆ. ಆದರೆ ಸಂಕೀರ್ಣ ವರ್ತಮಾನವನ್ನು ಸಮರ್ಥವಾಗಿ ಬಿಂಬಿಸಲು ಈ ಮಿಥ್‌ನಿಂದಲ್ಲದೇ ಇನ್ನೊಂದರಿಂದ ಸಾಧ್ಯವಿಲ್ಲ. ಹಾಗಾಗಿಯೇ ದಿವಾಕರ ಭಟ್ಟ ಎಂಬವನ ಮನೆಯಲ್ಲಿನ ಸಾಮಾನ್ಯ ಸಂಸಾರದ ಜಗಳದ ಹಾಗೆ ಶುರುವಾಗುವ ನಾಟಕ ಹಂತ ಹಂತವಾಗಿ ವೇಗವರ್ಧನೆ ಮಾಡಿಕೊಳ್ಳುತ್ತ, ಇಡೀ ಜಗತ್ತೇ ಒಂದು ನಾಟಕರಂಗವನ್ನಾಗಿಸಿಕೊಂಡು ನಮ್ಮನ್ನೂ ಅದರ ಭಾಗವಾಗಿಸಿಕೊಳ್ಳುತ್ತದೆ. ತೆರೆಯ ಮುಂದೆ ಕಾಣಿಸುವುದರ ಹತ್ತು ಪಟ್ಟು ತೆರೆಯ ಹಿಂದೆ ನಡೆಯುತ್ತಿರುತ್ತದೆ ಮತ್ತು ಅದು ನಮ್ಮ ಅನುಭವಕ್ಕೆ ಬರುತ್ತಲೂ ಇರುತ್ತದೆ. ಹೀಗೆ ಹೇಳಿದ್ದರ ಹಲವು ಪಟ್ಟನ್ನು ಧ್ವನಿಸುವ ವಿಶಿಷ್ಟ ಶಕ್ತಿ ಈ ನಾಟಕದ ಪ್ರತಿ ಪಾತ್ರಕ್ಕೂ, ಪ್ರತಿ ಮಾತಿಗೂ ಇದೆ.

ಇದು ನಿಜಕ್ಕೂ ಗ್ರಾಮಬದುಕಿನ ಕಥೆಯಲ್ಲ, ಜಾಗತಿಕ ಕಥನ. ಇಂದಿನ ನಮ್ಮ ಜಗದ ತಲ್ಲಣಗಳ ನಿಜಮೂಲಕ್ಕೇ ನೇರವಾಗಿ ಕೈ ಹಾಕಿದ- ಹಾಗೆ ಕೈ ಹಾಕಿಯೂ ಯಾವ  ಜಡ್ಜ್‌ಮೆಂಟನ್ನೂ ಪಾಸು ಮಾಡುವ (ಈ ಮೂಲದ ಸಂಕೀರ್ಣತೆಯೇ ಅಂಥದ್ದು) ಹಟವಿಲ್ಲದೇ ಅದರ ಸಂಕೀರ್ಣತೆಯನ್ನೇ ಹಿಡಿಯುವ ಹಂಬಲದ ನಾಟಕ. ಹಾಗಾಗಿಯೇ ಈ ನಾಟಕದ ಕೇಂದ್ರದಲ್ಲಿರುವ ‘ಟ್ರ್ಯಾಪ್‍’, ನಮ್ಮ ವೈಯಕ್ತಿಕ ಬದುಕಿನ ಸಂಕಟಗಳನ್ನು ಕಾಣಿಸುವುದರ ಜೊತೆಗೇ ದೇಶದ ರಾಜಕೀಯ, ಸಾಂಸ್ಕೃತಿಕ ಬಿರುಕುಗಳು ಉಂಟುಮಾಡಿದ ಬಿಕ್ಕಟ್ಟುಗಳ ಸಂಕಟವನ್ನೂ ನಮ್ಮೊಳಗೆ ರಿಂಗಣಿಸುತ್ತದೆ.

ನಾಟಕದ ಭಾಷೆಯಲ್ಲಿಯೇ ಹೇಳುವುದಾದರೆ ಇದು ನಮ್ಮ ಕಾಲದ ಧರ್ಮಸಂಕಟದ ಬೇರುಗಳನ್ನು ಕಾಣಿಸುವ, ಅದರ ಮೂಲಕ ಎರಡೂ ಕಾಲಗಳಲ್ಲಿ ಕಾಲೂರಿ ವರ್ತಮಾನಪರ್ವತದ ಬುಡಕ್ಕೇ ಕೈಹಾಕಿ ಎತ್ತಿ ಕಿರುಬೆರಳ ತುದಿಯಲ್ಲಿ ಆಡಿಸುವಂಥ ಪ್ರಯತ್ನ.

‘ಪರಮಪದಸೋಪಾನಪಟ’ ಇ– ಪುಸ್ತಕವನ್ನು ಈ ಕೊಂಡಿ ಬಳಸಿ ಕೊಳ್ಳಬಹುದು: bit.ly/3dDj3f0

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು