ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಸೋಲಿಗರ ಬದುಕಿನ ನೋಟ: ಅಕ್ಷರಗಳಲ್ಲಿ ಬಿಡಿಸಿದ ಸ್ಮೃತಿಚಿತ್ರ

Last Updated 1 ಏಪ್ರಿಲ್ 2021, 11:55 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಬೆಟ್ಟದ ಅರಣ್ಯವು (ಈಗ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ) ಶತಮಾನಗಳಿಂದಲೂ ಸಾವಿರಾರು ಆದಿವಾಸಿಗಳನ್ನು ಪೊರೆಯುತ್ತಾ ಬಂದಿದೆ. ಈ ಆದಿವಾಸಿಗಳಲ್ಲಿ ಹೆಚ್ಚಿನವರು ಸೋಲಿಗರು. ಈಗಲೂ ಬಿಆರ್‌ಟಿ ಸಂರಕ್ಷಿತ ಪ್ರದೇಶದ ವಿವಿಧ ಪೋಡುಗಳಲ್ಲಿ 1,500 ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ಅಂದಾಜು 12 ಸಾವಿರ ಸೋಲಿಗರಿದ್ದಾರೆ. ಮೊದಲೆಲ್ಲ ಕಾಡಿನ ಅಲ್ಲಲ್ಲಿ ಹರಡಿಕೊಂಡಿದ್ದ ಸೋಲಿಗರಲ್ಲಿ ಬಹುತೇಕರು ಈಗ ಸರ್ಕಾರ ನಿರ್ಮಿಸಿರುವ ಕಾಲೊನಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಟಿವಿ, ಮೊಬೈಲ್‌, ವಾಹನಗಳು ಸೇರಿದಂತೆ ‘ಆಧುನಿಕ’ ಜೀವನಕ್ಕೂ ಅವರು ಒಗ್ಗಿಕೊಂಡಿದ್ದಾರೆ.

ಪ್ರೊ.ಜಯದೇವ
ಪ್ರೊ.ಜಯದೇವ

ಮರಗಿಡ, ಪ್ರಾಣಿ ಪಕ್ಷಿಗಳು, ನದಿ ತೊರೆ ಸೇರಿದಂತೆ ಪರಿಸರದೊಂದಿಗೆ ಜೀವಿಸುವ ಸೋಲಿಗರ ಬಗ್ಗೆ, ಅವರ ಜ್ಞಾನ, ಆಚಾರ ವಿಚಾರಗಳ ಬಗ್ಗೆ ಹೊರ ಜಗತ್ತಿಗೆ ಹೆಚ್ಚಾಗಿ ತಿಳಿದಿಲ್ಲ. ಸೋಲಿಗರ ಬಗ್ಗೆ ನಡೆದ ಅಧ್ಯಯನಗಳು, ಅವರ ಕುರಿತಾದ ಸಾಹಿತ್ಯ ಕೃತಿಗಳು ಕಡಿಮೆಯೇ.

ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಚಾಮರಾಜನಗರದಲ್ಲಿ ದೀನ ಬಂಧು ಸಂಸ್ಥೆಯನ್ನು ಹುಟ್ಟುಹಾಕಿರುವ ಶಿಕ್ಷಣ ತಜ್ಞ, ಲೇಖಕ ಪ್ರೊ.ಜಿ.ಎಸ್‌.ಜಯದೇವ ಅವರು ಸೋಲಿಗರ ಕುರಿತಾಗಿ ಒಂದು ಪುಸ್ತಕ ಬರೆದಿದ್ದಾರೆ. ನಾಲ್ಕು ದಶಕಗಳಿಂದ ಸೋಲಿಗರ ಪರವಾಗಿ ಕೆಲಸ ಮಾಡುತ್ತಾ ಬಂದಿರುವ ಅವರು, ಅಂದಿನಿಂದ ಇಂದಿನವರೆಗೂ ಸೋಲಿಗರ ಬದುಕನ್ನು ಹತ್ತಿರದಿಂದ ಕಂಡವರು.

ಸೋಲಿಗರಜೀವನ, ಅವರೊಂದಿಗೆ ಒಡನಾಡಿದ ಅನುಭವ, ಅವರ ಬದುಕಿನಲ್ಲಿ ಆಗಿರುವ ಪಲ್ಲಟವನ್ನು ತಮ್ಮ ಅನುಭವದಲ್ಲಿ ಕಂಡಂತೆ ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಪ್ರೊ.ಜಿ.ಎಸ್‌.ಜಯದೇವ ಅವರು. ‘ಸೋಲಿಗ ಚಿತ್ರಗಳು’ ಎಂಬ ಹೆಸರನ್ನು ಅವರು ಪುಸ್ತಕಕ್ಕೆ ಇರಿಸಿದ್ದಾರೆ. ಆದಿವಾಸಿಗಳ ಬದುಕಿನೊಂದಿಗೆ ಸ್ಮೃತಿಚಿತ್ರಗಳು ಎಂಬ ಅಡಿ ಬರಹವೂ ಕೃತಿಗಿದೆ. ಬೆಂಗಳೂರಿನ ಪರಸ್ಪರ ಪ್ರಕಾಶನ ಈ ಅಪರೂಪದ ಕೃತಿಯನ್ನು ಪ್ರಕಟಿಸಿದೆ. 298 ಪುಟಗಳ ಪುಸ್ತಕದಲ್ಲಿ ಸೋಲಿಗರ ಬಗ್ಗೆ ಮಾತ್ರವಲ್ಲ. ಅರಣ್ಯ ರಕ್ಷಣೆಯ ಹೆಸರಿನಲ್ಲಿ ಕಾಡಿಗೆ, ಆದಿವಾಸಿಗಳಿಗೆ ಆಗುತ್ತಿರುವ ಶೋಷಣೆ, ಲಾಂಟಾನ ಕಳೆ ಗಿಡದಿಂದಾಗಿ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಮೇಲಾಗುವ ಪರಿಣಾಮಗಳ ಬ‌ಗ್ಗೆಯೂ ವಿವರಿಸಿದ್ದಾರೆ.

ಚಾಮರಾಜನಗರದಲ್ಲಿ ಬೋಧನಾ ವೃತ್ತಿಯಲ್ಲಿದ್ದ ಪ್ರೊ.ಜಿ.ಎಸ್‌.ಜಯದೇವ ಅವರು 1978ರಲ್ಲಿ ಡಾ.ಸುದರ್ಶನ್‌ ಅವರೊಂದಿಗೆ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಕೆಲಸ ಮಾಡಲು ಆರಂಭಿಸಿದ ನಂತರ ಸೋಲಿಗರೊಂದಿಗೆ ಬಾಂಧವ್ಯ ಹೊಂದಿದ್ದಾರೆ. 43 ವರ್ಷಗಳಲ್ಲಿ ಅವರು ಕಂಡ ಸೋಲಿಗರ ಜೀವನ, ಆಹಾರ ಕ್ರಮ, ಸಂಸ್ಕೃತಿ, ಕಾಡು, ಪ್ರಾಣಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಲಾಂಟಾನದಿಂದ ಕಾಡು ನಾಶವಾಗುತ್ತಿದೆ ಎಂಬ ಬೇಸರ, ಅರಣ್ಯ ರಕ್ಷಣೆ ಹೆಸರಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ನಿಲುವು.. ಎಲ್ಲವನ್ನೂ ವಿವರವಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸೋಲಿಗ ಸಮುದಾಯದ ಅಸಾಮಾನ್ಯ ಸಾಧಕರನ್ನು ಪುಸ್ತಕದಲ್ಲಿ ಪರಿಚಯಿಸುವ ಜಯದೇವ ಅವರು, ಸಾಧಕರ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಬಹುತೇಕ ಲೇಖನಗಳು ಸೋಲಿಗರೊಂದಿಗೆ ನಡೆಸಿದ ಸಂಭಾಷಣೆಯ ರೂಪದಲ್ಲಿದೆ. ಸಂಭಾಷಣೆಯ ನಡುವೆಯೇ ತಮ್ಮ ಅಭಿಪ್ರಾಯಗಳನ್ನೂ ಅವರು ಹೇಳುತ್ತಾ ಹೋಗುತ್ತಾರೆ.

‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಸೋಲಿಗರೊಡನೆ ಒಂದು ಬಾಂಧವ್ಯವೇ ಏರ್ಪಟ್ಟಿತು. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ, ಅವರ ಜೀವನ ಸಂಸ್ಕೃತಿಗಳು ‘ನಾಡಜನ’ ಎನಿಸಿಕೊಳ್ಳುವ ನಮಗಿಂತ ಎಷ್ಟು ಭಿನ್ನವಾಗಿದೆ ಎಂದು ಅರಿತೆ. ಅವರೊಡನೆ ಕಳೆದ ದಿನಗಳ ನೆನಪುಗಳು ನಿತ್ಯಹರಿದ್ವರ್ಣದಂತೆ ಇಂದಿಗೂ ಹಸಿರಾಗಿಯೇ ಇದೆ. ನಾಲ್ಕು ದಶಕಗಳ ಕಾಲಮಾನದಲ್ಲಿ ಸೋಲಿಗರ ಜೀವನ ಸಂಸ್ಕೃತಿ, ರೀತಿ ನೀತಿಗಳು ಬದಲಾದ ಬಗೆಯನ್ನು ತಟಸ್ಥವಾಗಿ ನೋಡಲು ಸಾಧ್ಯವೇ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೇನೆ. ಸೋಲಿಗರ ಸಂಸ್ಕೃತಿಯಲ್ಲಿ ಆಗುತ್ತಿರುವ ಅನೇಕ ಬದಲಾವಣೆಗಳನ್ನು ಆತಂಕದಿಂದ, ವಿಷಾದದಿಂದ ಗಮನಿಸಿದ್ದೇನೆ. ನಾಲ್ಕು ದಶಕಗಳ ದಟ್ಟವಾದ ನೆನಪು, ವಿಷಾದ ನನ್ನನ್ನು ಸದಾ ಕಾಡುತ್ತಿದೆ. ಹಳೆಯ ನೆನಪುಗಳನ್ನು ನಾನು ದಾಖಲಿಸದಿದ್ದರೆ ಇದನ್ನು ಮತ್ತಾರೂ ಮಾಡಲಾರರೆಂಬ ಭಯದಿಂದ ಈ ಸಂಗತಿಗಳನ್ನು ದಾಖಲಿಸಬೇಕು ಎಂದು ನಿರ್ಧರಿಸಿದೆ’ ಎಂದು ಮುನ್ನಡಿಯಲ್ಲಿ ಬರೆಯುತ್ತಾರೆ ಜಯದೇವ ಅವರು.

‘ಭೌಗೋಳಿಕವಾಗಿ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಬಂದ ಒಂದು ಜನಸಮುದಾಯ ಸ್ವತಂತ್ರವಾಗಿ ತನ್ನದೇ ಪಾರಂಪರಿಕ ಜ್ಞಾನ, ಸಂಸ್ಕೃತಿಯನ್ನು ರೂಪಿಸಿಕೊಂಡು ಬದುಕಿ ಬಾಳಿದುದರ ಇತಿಹಾಸ ದಾಖಲಿಸಲೇ ಬೇಕಾದ ವಿಚಾರ. ನಮ್ಮ ದೇಶದಲ್ಲಿ ಗಿರಿಜನರ ಸಾಧನೆಗಳನ್ನು ಅವರ ಕೊಡುಗೆಗಳನ್ನು ದಾಖಲಿಸುವ ಗೋಜಿಗೇ ಹೋಗಿಲ್ಲ. ಗಿರಿಜನ ಜೀವನದ ಹಂಚಿತಿನ್ನುವಂತಹ ಅನುಸರಣೀಯ ಮೌಲ್ಯಗಳು, ಅವರ ಸಹಜಶೀಲತೆ, ಪ್ರಕೃತಿ ಪ್ರೇಮ, ಅರಣ್ಯದೊಡನೆ ಹಾಸುಹೊಕ್ಕಾದ ಅವರ ಜೀವನ ಶೈಲಿ, ಅರಣ್ಯ ಜ್ಞಾನ, ಗಿಡಮೂಲಿಕೆಗಳ ಜ್ಞಾನ ಇತ್ಯಾದಿ ಸೂಕ್ಷ್ಮ ವಿಷಯಗಳು ಎಲ್ಲೂ ದಾಖಲೆಗೆ ಸಿಗದೆ ನುಣುಚಿ ಹೋಗುತ್ತವೆ’ ಎಂದೂ ಅವರು ಬರೆಯುತ್ತಾರೆ.

‘ಆದಿವಾಸಿ ಸಮುದಾಯದಿಂದ ಇಡೀ ಮನುಜ ಕಲಿಯಬೇಕಾದದ್ದು ಬಹಳಷ್ಟಿದೆ. ಆದರೆ, ಈಗಾಗಲೇ ಇಂತಹ ತಾಜಾ ಜ್ಞಾನ ಆದಿವಾಸಿಗಳಲ್ಲೂ ಕಾಣೆಯಾಗುತ್ತಿದೆ. ಈ ಕೆಲವನ್ನಾದರೂ ದಾಖಲಿಸದಿದ್ದರೆ ನಮಗೆ ಬಹಳ ದೊಡ್ಡ ನಷ್ಟವಾದೀತು ಎಂಬ ಪ್ರಜ್ಞೆ ಈ ಪುಸ್ತಕದ ಪ್ರೇರಕ ಶಕ್ತಿ’ ಎಂದು ಪುಸ್ತಕ ಬರೆಯಲು ಪ್ರೇರಣೆ ನೀಡಿದ ಸಂಗತಿ ಬಗ್ಗೆ ಬೆಳಕು ಚೆಲ್ಲುತ್ತಾರೆ ಪ್ರೊ.ಜಯದೇವ.

ಜ್ಞಾನ ಭಂಡಾರಗಳ ಪರಿಚಯ

ಬೆಟ್ಟಕ್ಕೆ ಬೇಟೆಗೆ ಬರುತ್ತಿದ್ದ ಮೈಸೂರು ಮಹಾರಾಜರ ವಿಚಾರವನ್ನು ತಿಳಿದ ಮಸಣಮ್ಮ, ಸಾರಿಮಾದಮ್ಮ, ಕುನ್ನೇಗೌಡ, ಕಾರನ ಕೇತೇಗೌಡ, ಸಸ್ಯ ಪ್ರಪಂಚದ ಮಾಹಿತಿಗಳನ್ನು ನಾಲಿಗೆ ತುದಿಯಲ್ಲಿ ಹೊಂದಿರುವ ಪುಟ್ಟರಂಗ, ಮಂಜಿಗುಂಡಿ ಕೇತಮ್ಮ, ಕಾಡುಶುಂಠಿ ಬಗ್ಗೆ ಪಾಠ ಮಾಡಿದ ಅಚ್ಚುಗೆ ಗೌಡ.. ಹೀಗೆ ಸೋಲಿಗ ಸಮುದಾಯದ ಹಿರಿ ತಲೆಗಳು ಹಾಗೂ ಅವರ ಜ್ಞಾನ ಭಂಡಾರವನ್ನು ಜಯದೇವ ಅವರು ಪರಿಚಯಿಸಿದ್ದಾರೆ.

ಉನ್ನತ ವಿದ್ಯಾಭ್ಯಾಸ ಮಾಡಿ ಡಾಕ್ಟರೇಟ್‌ ಪದವಿ ಪಡೆದ ಸೋಲಿಗ ಸಮುದಾಯದ ಡಾ.ಮಾದೇಗೌಡ, ಡಾ.ರತ್ನಮ್ಮ ಹಾಗೂ ಪೊನ್ನಂಪೇಟೆಯ ಅರಣ್ಯಶಾಸ್ತ್ರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜಡೇಗೌಡ ಅವರ ಸಾಧನೆ ಹಾಗೂ ಸೋಲಿಗರ ಅಭಿವೃದ್ಧಿಗಾಗಿ ಅವರು ಮಾಡುತ್ತಿರುವ ಕೆಲಸಗಳನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ.

ಸೋಲಿಗರ ರೊಟ್ಟಿ ಹಬ್ಬ, ಅವರು ಪೂಜಿಸುವ ದೇವರು, ಧಾರ್ಮಿಕ ಆಚರಣೆಗಳು, ಅಂತ್ಯಸಂಸ್ಕಾರದ ವಿಧಾನ, ಮದುವೆ ಹೀಗೆ ಅವರ ಆಚಾರ ವಿಚಾರಗಳನ್ನು ವಿಸ್ತೃತವಾಗಿ ವಿವರಿಸುವ ಜಯದೇವ ಅವರು, ತಮ್ಮ ಸಂಸ್ಕೃತಿ, ಆಚಾರ ವಿಚಾರವನ್ನು ಸೋಲಿಗರು ಇನ್ನೂ ಪಾಲಿಸಿಕೊಂಡು ಬರುತ್ತಿದ್ದರಾದರೂ, ಮೊದಲಿನಷ್ಟು ಸಂಭ್ರಮ ಕಾಣುತ್ತಿಲ್ಲ.ಈಗಿನ ಪೀಳಿಗೆಯ ಸೋಲಿಗರಿಗೆ ಕಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆಧುನಿಕತೆಗೆ ಜೋತು ಬಿದ್ದು, ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಕುಡಿತಕ್ಕೆ ದಾಸ್ಯರಾಗುತ್ತಿದ್ದಾರೆ ಎಂಬ ಬೇಸರವನ್ನು ಪದೇ ಪದೇ ವ್ಯಕ್ತಪಡಿಸುತ್ತಾರೆ.

ಮಾಹಿತಿ ಕಣಜ

ಇತ್ತೀಚೆಗೆ ದೀನಬಂಧು ಆಶ್ರಮದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಾನಪದ ವಿದ್ವಾಂಸರಾದ ಡಾ.ಕೃಷ್ಣಮೂರ್ತಿ ಹನೂರು, ವಿಮರ್ಶಕ ಟಿ.ವಿ.ಅಶೋಕ ಹಾಗೂ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅವರು ಮಾತನಾಡುತ್ತಾ, ‘ಇದು ಸೋಲಿಗರ ಕುರಿತ ಅಧ್ಯಯನ ಪುಸ್ತಕ ಅಲ್ಲ. ಸೋಲಿಗರು ಜಯದೇವ ಅವರ ಅಧ್ಯಯನದ ವಸ್ತುವೂ ಅಲ್ಲ. ಶೈಕ್ಷಣಿಕ ಅಧ್ಯಯನ ಉದ್ದೇಶದಿಂದ ಇದನ್ನು ಬರೆದಿಲ್ಲ’ ಎಂದು ಹೇಳಿದ್ದರು.

ಇದು ಸೋಲಿಗರ ಬಗ್ಗೆ ಅಧ್ಯಯನ ಮಾಡಿದ ಪುಸ್ತಕ ಅಲ್ಲದಿರಬಹುದು. ಆದರೆ, ಸೋಲಿಗರ ಬಗ್ಗೆ ಅಧ್ಯಯನ ನಡೆಸುವವರು ಈ ಪುಸ್ತಕವನ್ನು ಓದಲೇ ಬೇಕು. ಸೋಲಿಗರ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿರದ ಅಷ್ಟೊಂದು ಮಾಹಿತಿಗಳು ಈ ಕೃತಿಯಲ್ಲಿ ಅಡಕವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT