ಸೋಮವಾರ, ಅಕ್ಟೋಬರ್ 26, 2020
25 °C

ಮೊದಲ ಓದು: ಜನಪದ ಅಧ್ಯಯನಕ್ಕೆ ಆಕರ ಗ್ರಂಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪದ ಅಧ್ಯಯನಕ್ಕೆ ಆಕರ ಗ್ರಂಥ

‘ಮುತ್ತು ಬಂದಿದೆ ಕೇರಿಗೆ’, ‘ತಕ್ಕ ಮಣ್ಣಿನ ತೇವಕ್ಕಾಗಿ’, ‘ಬಯಲಾಗುವ ಪರಿ’ ಮೊದಲಾದ ಕೃತಿಗಳ ಮೂಲಕ ಓದುಗರ ಮನ ಗೆದ್ದಿರುವ ಲೇಖಕ ಸುರೇಶ್‌ ನಾಗಲಮಡಿಕೆ ಅವರಿಗೆ ಈಗ ಜನಪದ ಮಹಾಕಾವ್ಯಗಳ ಕುರಿತು ಧ್ಯಾನ. ಅವರ ಆ ಧ್ಯಾನದ ಫಲವೇ ‘ಹಾಡು ಕಲಿಸಿದ ಹರ’. ಜನಪದವನ್ನು ಹತ್ತು–ಹಲವು ಆಯಾಮಗಳಿಂದ ನೋಡುವ ಪ್ರಯತ್ನವನ್ನು ಕೃತಿಯಲ್ಲಿ ಕಾಣಬಹುದು. ಕವಿರಾಜಮಾರ್ಗದಿಂದ ಆರಂಭಗೊಂಡು ಆಧುಕಿನ ಕನ್ನಡ ಸಾಹಿತ್ಯದವರೆಗೆ ಜನಪದ ಬೆಳೆದುಬಂದ ದಾರಿಯ ನೋಟ ಇಲ್ಲಿದೆ.

 ಐದು ಮುಖ್ಯ ಶೀರ್ಷಿಕೆಗಳ ಅಡಿಯಲ್ಲಿ ಬರಹಗಳನ್ನು ವಿಂಗಡಣೆ ಮಾಡಲಾಗಿದ್ದು, ಅಧ್ಯಯನದ ಹಾದಿಯನ್ನು ಸಲೀಸಾಗಿಸಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಜನಪದದ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನ ಅಪೂರ್ವವಾದುದು. ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನೆಲೆಗಳನ್ನು ಕೃತಿಯಲ್ಲಿ ತುಂಬಾ ದೀರ್ಘವಾಗಿ ಚರ್ಚಿಸಲಾಗಿದೆ. ಆದಿಮರು, ಸಿದ್ಧರು, ನಾಥರು, ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ ಎಲ್ಲರೂ ಇಲ್ಲಿ ಸಂಗಮಿಸಿದ್ದಾರೆ.

ಜನಪದ ಕಾವ್ಯಗಳು ತಾವು ಎಂದಿಗೂ ವೈದಿಕ–ಅವೈದಿಕ ಎಂದು ಕರೆದುಕೊಂಡಿಲ್ಲ. ಆದರೆ, ಅವುಗಳ ಜೀವನ ಮೀಮಾಂಸೆಯ ಒಳಗಡೆ ಅವೈದಿಕ ನಿಲುವುಗಳು ಕಾಣಬರುತ್ತವೆ. ಈ ಕುರಿತ ಒಳನೋಟಗಳು ಕೃತಿಯಲ್ಲಿ ಬೇಕಾದಷ್ಟು ಸಿಕ್ಕುತ್ತವೆ. ಬೆನ್ನುಡಿಯಲ್ಲಿ ಎಸ್‌.ಎಫ್‌. ಯೋಹಪ್ಪನವರ್‌ ಅವರು ಬರೆಯುತ್ತಾರೆ: ‘ಸದಾ ಶಿಷ್ಟ ಸಾಹಿತ್ಯದ ಆಕ್ರಮಣಕ್ಕೆ ಗುರಿಯಾಗುತ್ತಾ ಬಂದಿರುವ ಜನಪದ ಸಾಹಿತ್ಯ ಈ ಕೃತಿಯಲ್ಲಿ ನಿಟ್ಟುಸಿರು ಬಿಟ್ಟು, ಮೊದಲ ಬಾರಿಗೆ ಎನ್ನುವಂತೆ ಸಮಾಧಾನದಲ್ಲಿ ಮೈ ಸಡಿಲಿಸಿದೆ.’ ಜನಪದದ ಅಧ್ಯಯನ ಆಸಕ್ತರಿಗೆ ಇದೊಂದು ಆಕರ ಗ್ರಂಥವೇ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು