ಸೋಮವಾರ, ಅಕ್ಟೋಬರ್ 18, 2021
22 °C

ಪುಸ್ತಕ ವಿಮರ್ಶೆ: ಧರ್ಮ–ರಾಜಕಾರಣಗಳ ಅಪವಿತ್ರ ಮೈತ್ರಿಯ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಘಟನೆ, ಕಾವ್ಯ, ಕಥೆ–ಕಾದಂಬರಿಗಳು ಹೀಗೆ ಹಲವು ಮುಖಗಳಲ್ಲಿ ತಮ್ಮ ಸೃಜನಶೀಲತೆಯನ್ನು ಸಫಲವಾಗಿ ಹರಿಸುತ್ತಿರುವ ಡಾ. ನಾ. ಮೊಗಸಾಲೆ ಅವರ ಹೊಸ ಕಾದಂಬರಿ ‘ಧರ್ಮ ಯುದ್ಧ’. ಕಾದಂಬರಿ ಪ್ರಕಾರ ಅವರಿಗೆ ಹೊಸದೇನೂ ಅಲ್ಲ; ಇಪ್ಪತ್ತಕ್ಕಿಂತ ಅಧಿಕ ಕಾದಂಬರಿಗಳನ್ನು ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. 

ಕರಾವಳಿಯ ಒಂದು ಸಾಮಾನ್ಯ ಊರಿನಲ್ಲಿ ನಡೆಯುವ ಸಾಮಾನ್ಯ ಕಥನದ ಹಾಗೆ ಕಾಣುವ ಈ ಕಾದಂಬರಿಗೆ, ನಂಬಲಸಾಧ್ಯವಾಗಿ ಜಾಗತಿಕಪ್ರಪಂಚದಲ್ಲಿ ನಡೆಯುತ್ತಿರುವ ಹಲವು ಪಲ್ಲಟಗಳನ್ನು, ಮನುಷ್ಯಸಂಕಟದ ಮೂಲಗಳನ್ನು ಕಾಣಿಸುವ ಸುಪ್ತ ಉದ್ದೇಶವೂ ಇದ್ದಂತಿದೆ. ಬಾವಿಯಲ್ಲಿ ಒಂದು ತಿಂಗಳ ಅಂತರದಲ್ಲಿಯೇ ಮೂರು ಕರಿ ಬೆಕ್ಕುಗಳು ಬಿದ್ದು ಸಾಯುವ ಒಂದು ಸಣ್ಣ ಘಟನೆಯ ಮೂಲಕ ಈ ಕಥನದ ಪದರಗಳು ತೆರೆದುಕೊಳ್ಳುತ್ತ ಹೋಗುತ್ತವೆ.

ನಂತರ ಅದು ಊರು, ಧರ್ಮ, ರಾಜಕೀಯ, ಮೂಢನಂಬಿಕೆಗಳು, ಸಣ್ಣತನಗಳು, ದುಷ್ಟತನಗಳು, ಪ್ರಾಮಾಣಿಕತೆ, ನಂಬಿಕೆ, ಅಮಾಯಕ ಮನಸ್ಸುಗಳು... ಹೀಗೆ ಬೇರೆ ಬೇರೆ ರೀತಿಯಲ್ಲಿ ಬಿಚ್ಚಿಕೊಳ್ಳುತ್ತ ಬೆಳೆಯುತ್ತದೆ. ಕೊನೆಗೆ ನಿಜವಾಗಿ ಬಾವಿಯಲ್ಲಿ ಬಿದ್ದ ಬೆಕ್ಕುಗಳು ಮನುಷ್ಯಕುಲದ ದುರಂತವನ್ನೇ ಸೂಚಿಸುವ ಅಪಶಕುನವೇ ಅನ್ನಿಸುವವರೆಗೂ ಹೋಗುತ್ತದೆ. ಇದು ಬರೀ ಮೂಢನಂಬಿಕೆಯ ಪರಿಭಾಷೆಯ ಅಪಶಕುನವಲ್ಲ. ಧರ್ಮ, ನೈತಿಕತೆ, ಮಾನವೀಯತೆ, ಮೌಲ್ಯಗಳು, ಸಹಜೀವನದ ತತ್ವಗಳನ್ನು ಅಪಭ್ರಂಶಗೊಳಿಸಿ, ಸ್ವಾರ್ಥದ ನಖವನ್ನು ಬಿಚ್ಚಿ ಕುಣಿಯುತ್ತಿರುವ ಮನುಷ್ಯ ತಾನೇ ತಂದುಕೊಳ್ಳುತ್ತಿರುವ ದುರಂತದ ಸೂಚಕ. 

ಧರ್ಮ ಮತ್ತು ರಾಜಕೀಯದ ನಡುವಿನ ವ್ಯತ್ಯಾಸವನ್ನು ಮರೆತ ಕಾಲವಿದು. ಈ ಎರಡರ ಅಪವಿತ್ರ ಸಂಯೋಗದ ಫಲವನ್ನು ನಾನಾರೂಪದಲ್ಲಿ ನಾವು ಕಾಣುತ್ತಲೇ ಇದ್ದೇವೆ. ಈ ಕಾದಂಬರಿಯ ಸೀತಾಪುರದಲ್ಲಿ ನಡೆಯುವುದೂ ಇದೇ. ಮನುಷ್ಯನನ್ನು ಪೊರೆಯಬೇಕಾಗಿದ್ದ ಧರ್ಮ, ಅಪಭ್ರಂಶಗೊಂಡಾಗ ಅವನ ಬದುಕನ್ನೇ ಉರಿಸುತ್ತದೆ. ಈ ಉರಿಯಲ್ಲಿ ನಾಶವಾಗುವುದು ಬರೀ ಮನುಷ್ಯನಲ್ಲ, ಪ್ರಕೃತಿಯೂ ಹೌದು. ಉದ್ಧಾರದ ಮುಖವಾಡ ಹೊತ್ತು ಸರ್ವನಾಶದ ವಿಷವನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ನಮ್ಮ ರಾಜಕೀಯ ಮತ್ತು ಕಾರ್ಪೊರೇಟ್‌ ಪ್ರಭುಗಳ ಪಿತೂರಿಗೂ ಈ ಕಾದಂಬರಿಯಲ್ಲಿ ಪಂಜುರ್ಲಿಗುಡ್ಡದ ಜೀರ್ಣೋದ್ಧಾರದ ರೂಪದಲ್ಲಿ ನಡೆಯುವ ಕಪಟನಾಟಕಗಳಿಗೂ ವ್ಯತ್ಯಾಸ ಬಹಳವಿಲ್ಲ.   

‘ಧರ್ಮಯುದ್ಧ’ ಎಂಬ ಶಬ್ದ ಕೇಳಿದ ತಕ್ಷಣವೇ ಒಂದು ಸಮುದಾಯ, ಒಂದಿಷ್ಟು ಘಟನೆಗಳನ್ನು ಮನಸ್ಸಲ್ಲಿ ಮೂಡಿಸಿಕೊಂಡುಬಿಡುವ ವಿಕ್ಷಿಪ್ತ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮೆಲ್ಲರ ಮನಸ್ಸೊಳಗೆ ಸ್ಥಾಪನೆಗೊಳಿಸಿರುವ ಆ ವಿಕೃತ ಚಿತ್ರವನ್ನೂ ಸಶಕ್ತವಾಗಿ ಒಡೆಯುತ್ತದೆ ಎಂಬುದೂ ಈ ಕಾದಂಬರಿ ಸಾಧಿಸುವ ಮುಖ್ಯವಾದ ಉದ್ದೇಶಗಳಲ್ಲೊಂದು.

**

ಧರ್ಮ ಯುದ್ಧ
ಲೇ: ಡಾ. ನಾ. ಮೊಗಸಾಲೆ
ಪ್ರ: ಮನೋಹರ ಗ್ರಂಥಮಾಲ
ಸಂ: 08362441823

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು