ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಗೋಕಾಕ್ ಸಾಹಿತ್ಯ ಅಧ್ಯಯನಕ್ಕೊಂದು ನೂತನ ಆಕರಗ್ರಂಥ

Last Updated 5 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಕನ್ನಡದ ವಿಸ್ಮಯ ವಿ.ಕೃ. ಗೋಕಾಕ
ಲೇ:
ಅನಿಲ ಗೋಕಾಕ
ಪ್ರ: ಸಾಹಿತ್ಯ ಪ್ರಕಾಶನ
ಮೊ: 94481 10034
ಪುಟಗಳು: 794, ಬೆಲೆ: 1195

***

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿನಾಯಕ ಕೃಷ್ಣ ಗೋಕಾಕರದು (1909-1992) ಕಳೆದ ಶತಮಾನದ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅವರು ಮುಂದೆ ಆಕ್ಸ್‌ಫರ್ಡ್‌ನಲ್ಲಿ ಓದಿ ಭಾರತಕ್ಕೆ ಹಿಂತಿರುಗಿದರು. ಸಾಂಗ್ಲಿ, ಹೈದರಾಬಾದ್, ವೀಸನಗರ, ಕೊಲ್ಲಾಪುರ, ಧಾರವಾಡ, ಬೆಂಗಳೂರು, ಶಿಮ್ಲಾ ಹೀಗೆ ಹಲವು ಕಡೆ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದರು. ಗೋಕಾಕರು ಕುಲಪತಿ ಹುದ್ದೆಯಲ್ಲಿದ್ದವರಾದರೂ ಅವರ ವಿದ್ಯಾರ್ಥಿಗಳು ಅವರನ್ನು ಶೆಲ್ಲಿ, ಕೀಟ್ಸ್‌, ಶೇಕ್ಸ್‌ಪಿಯರ್ ಮೊದಲಾದವರ ಕುರಿತು ಭಾವನಾತ್ಮಕವಾಗಿ ಪಾಠಮಾಡಿ ತಮ್ಮ ಸಾಹಿತ್ಯದ ಅನುಭವವಾಗಿಸಿದ ಗುರುಗಳೆಂದು ನೆನಪಿಸಿಕೊಳ್ಳುತ್ತಾರೆ. ಹಲವು ದೇಶಗಳ ಪ್ರವಾಸ ಮಾಡಿರುವ ಅವರು ಭಾರತದಲ್ಲಿ ಇಂಗ್ಲಿಷ್ ಭಾಷಾ ಬೋಧನೆ, ಸಾಹಿತ್ಯ, ಭಾಷಾ ಕಲಿಕೆಗಳಿಗೆ ಮೌಲಿಕ ಕೊಡುಗೆಯನ್ನಿತ್ತವರು.

ಗೋಕಾಕರ ನವ್ಯಕಾವ್ಯ ಪ್ರಯೋಗಗಳೂ ಸೇರಿದಂತೆ ಅವರ ಸಾಹಿತ್ಯದಲ್ಲಿ ಕನಿಷ್ಠ ಆರು ಹಂತಗಳ ಬೆಳವಣಿಗೆಗಳನ್ನು ವಿಮರ್ಶಕರು ಗುರುತಿಸುತ್ತಾರೆ. ಅವರ ಜೀವನಯಾತ್ರೆ ಮತ್ತು ಸಾಹಿತ್ಯ ಪಯಣಗಳಿಗೆ ಹತ್ತಿರದ ಸಂಬಂಧವಿದೆ. ಗೋಕಾಕರ ಪುತ್ರ, ನಿವೃತ್ತ ಐಎಎಸ್‌ ಅಧಿಕಾರಿ ಅನಿಲ ಗೋಕಾಕರು ಪ್ರಕಟಿಸಿರುವ ‘ಕನ್ನಡದ ವಿಸ್ಮಯ ವಿ.ಕೃ. ಗೋಕಾಕ’ ಗ್ರಂಥ ಅಂತಹ ಸಂಬಂಧಗಳ ಮೇಲೆ ಒಳನೋಟ ಬೀರುತ್ತದೆ.

ತಮ್ಮ ತಂದೆಯವರ ಹುಟ್ಟಿನಿಂದ ಕೊನೆವರೆಗಿನ ಜೀವನಯಾತ್ರೆಯನ್ನು ಅನಿಲ ಅವರು ಹಲವು ಮೂಲಗಳನ್ನು ಬಳಸಿಕೊಂಡು ಬರೆದಿದ್ದಾರೆ. ಪ್ರತೀ ಅಧ್ಯಾಯದ ಕೊನೆಗಿನ ಆ ಮೂಲಗಳ ವಿವರಗಳಲ್ಲದೆ, ಈ ಸಮಗ್ರ ಕೃತಿ ಕೂಡ ಮುಂದಿನ ಗೋಕಾಕ ಸಾಹಿತ್ಯಾಧ್ಯಯನಕ್ಕೆ ಸಮರ್ಥ ಆಕರ. ಗೋಕಾಕ ಅಧ್ಯಯನಕ್ಕೆ ಈ ಗ್ರಂಥ ಒದಗಿಸಬಹುದಾದ ಆಕರಗಳ ಒಂದೆರಡು ಉದಾಹರಣೆಗಳನ್ನಾದರೂ ನಾವಿಲ್ಲಿ ಗಮನಿಸಬಹುದು.

ಮಹರ್ಷಿ ಅರವಿಂದರ ಜೀವನದೃಷ್ಟಿ ಹಾಗೂ ವಿಕಸನ ತತ್ವಗಳು ಜಗತ್ತಿನ ಪುನರುಜ್ಜೀವನಕ್ಕೆ ನೀಡಿದ ಕೊಡುಗೆ ಚಿತ್ರಿಸುವ ಉದ್ದೇಶದಿಂದ ಗೋಕಾಕರು ರಚಿಸಿದ ‘ತ್ರಿಶಂಕುವಿನ ಪ್ರಜ್ಞಾ ಪ್ರಭಾತ’ ಎಂಬ ದೀರ್ಘಕವನ 1965ರಲ್ಲಿ ಪ್ರಕಟವಾಯಿತು. ಮುಂದೆ ಜ್ಞಾನಪೀಠ ಪ್ರಶಸ್ತಿ ಪಡೆದ ‘ಭಾರತ ಸಿಂಧು ರಶ್ಮಿ’ ಕೃತಿಗೆ ಇದುವೇ ಹೇಗೆ ಮೊದಲ ಮೆಟ್ಟಿಲಾಯಿತು ಎಂಬುದನ್ನು ಈ ಗ್ರಂಥ ಗೋಕಾಕರ ಚಿಂತನೆಗಳ ಹಿನ್ನೆಲೆಯಲ್ಲಿ ತೋರಿಸಿಕೊಡುತ್ತದೆ. ಅರವಿಂದರ ತತ್ವಗಳಿಂದ ಮಾಗಿದ ಗೋಕಾಕರು, ಸಾಯಿಬಾಬಾರಿಂದ ಯಾಕೆ ಆಕರ್ಷಿತರಾದರು ಎಂಬುದರ ಅಂತರಂಗದ ನೋಟವನ್ನೂ ಗ್ರಂಥಕರ್ತರು ಕಾಣಿಸುತ್ತಾರೆ.

‘ಭಾರತ ಸಿಂಧು ರಶ್ಮಿ’ ಋಗ್ವೇದ ತತ್ವ, ಪೌರಾಣಿಕ ಪ್ರತಿಮಾ ಶಕ್ತಿ, ಆರ್ಯ-ದ್ರಾವಿಡ ಮಿಶ್ರ ರಕ್ತದ ರಾಜನ ಮೂಲಕ ಚಾರಿತ್ರಿಕ ಸೂಚನೆ–ಇಂತಹ ಎಲ್ಲ ವಿವರಗಳನ್ನುಳ್ಳ ಆಧುನಿಕ ಮಹಾಕಾವ್ಯ. ಸಪ್ತಕಿರಣ ಹಾಗೂ ಸಪ್ತಲೋಕಗಳ ಸಂಕೇತಗಳ ಮೂಲಕ ಕಾವ್ಯ ಚೇತನ-ಸಾಮರಸ್ಯಗಳನ್ನು ಅನ್ವಯಿಸಿ ತೋರಿಸುತ್ತದೆ. ಮಹಾಕಾವ್ಯ ರಚನೆಗೆ ಗೋಕಾಕರು ಮಾಡಿಕೊಂಡ ಹಲವು ತಯಾರಿಗಳ ವಿವರಗಳೂ ಕೃತಿಯೊಳಗೆ ಲಭ್ಯವಾಗುತ್ತವೆ.

ಗೋಕಾಕರ ಸರಣಿ ಕಾದಂಬರಿ ‘ಸಮರಸವೇ ಜೀವನ’ (1935, 1956, 1969) ನವೋದಯ ಚಿಂತನೆಗೆ ಗೋಕಾಕರು ನೀಡಿದ ಪ್ರಮುಖ ಕೊಡುಗೆಗಳಲ್ಲೊಂದು. ಆ ಕೃತಿ ಹರಳುಗಟ್ಟಿದ ವಿವರಗಳೂ ಇಲ್ಲಿವೆ. ಕೃತಿಯ ಕೊನೆಯ ಭಾಗದಲ್ಲಿ ಗೋಕಾಕರು ಇಂಗ್ಲಿಷಿನಲ್ಲಿ ಬರೆದ ಕಾದಂಬರಿಯ ಕನ್ನಡದ ಅನುವಾದವಿದೆ. ಲೇಖಕರ ಆತ್ಮಚರಿತ್ರೆಯನ್ನು ನೆನಪಿಸಬಲ್ಲ ಈ ಕಾದಂಬರಿಯ ಭಾಗಗಳ ರಚನೆಯ ಹಿನ್ನೆಲೆ ಹಾಗೂ ಜೀವನ ಚರಿತ್ರೆಯ ಸಾಂದರ್ಭಿಕ ವಿವರಗಳು ಗ್ರಂಥದ ಆಕರ ಮೌಲ್ಯವನ್ನು ಹೆಚ್ಚಿಸುತ್ತವೆ.

ಹತ್ತೊಂಬತ್ತು ಅಧ್ಯಾಯಗಳುಳ್ಳ ಈ ಗ್ರಂಥ ಗೋಕಾಕರ ಹಿರಿಯರು ಹಾಗೂ ಅವರ ಬಾಲ್ಯದ ಸವಣೂರಿನ ದಿನಗಳಿಂದ ಮುಂಬಯಿಯಲ್ಲಿ ಮಗನ ಮನೆಯಲ್ಲಿ ಕಳೆದ ಕೊನೆಯ ದಿನಗಳವರೆಗೆ ಎಲ್ಲವನ್ನೂ ದಾಖಲಿಸುತ್ತದೆ. ಇವುಗಳ ನಡುವೆ ಅವರು ಹಲವು ಜಾಗಗಳಲ್ಲಿ ಕೆಲಸ ಮಾಡಿದರು, ಹತ್ತಾರು ರಾಷ್ಟ್ರಗಳನ್ನು ನೋಡಿ ಬಂದರು. ಆದರೂ ಅವರ ಅಂತರಂಗದ ಆಡುಂಬೊಲ ಧಾರವಾಡವೇ ಆಗಿತ್ತು. ಅದಕ್ಕೊಂದು ಪುಟ್ಟ ಸೂಚನೆ ಹೀಗಿದೆ: ಅನಾರೋಗ್ಯದಿಂದಾಗಿ ದೆಹಲಿಗೆ ಪ್ರಯಾಣ ಮಾಡಲು ಗೋಕಾಕರಿಗೆ ಸಾಧ್ಯವಾಗದು ಎಂದು ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ತಾವೇ ಮುಂಬಯಿಗೆ ಬಂದು ಜ್ಞಾನಪೀಠ ಪ್ರಶಸ್ತಿ ನೀಡಿದರು. ಅದಾದ ಬಳಿಕ ತಮ್ಮ ಕೊನೆಯ ದಿನಗಳಲ್ಲೇ ಅದಮ್ಯ ಆಸೆಯಿಂದ ಗೋಕಾಕರು ಕಷ್ಟಪಟ್ಟು ಧಾರವಾಡಕ್ಕೆ ಹೋದರು. ಎಲ್ಲೂ ಅತಿ ಭಾವುಕತೆ ಇಲ್ಲದ ನಿರೂಪಣೆ ಗಮನಸೆಳೆಯುತ್ತದೆ.

ಗೋಕಾಕರು ತೀರಿಹೋಗಿ 28 ವರುಷಗಳ ಬಳಿಕ ಈ ಗ್ರಂಥ ಹೊರಬಂದಿದೆ. ಇಂದಿನ ಸಾಹಿತ್ಯದ ವಿದ್ಯಾರ್ಥಿಗಳು ಅಥವಾ ಅವರ ಹಲವು ಅಧ್ಯಾಪಕರು ಗೋಕಾಕರನ್ನು ನೋಡಿರುವುದು ಸಾಧ್ಯವಿಲ್ಲ. ಅನೇಕ ವಿದ್ಯಾರ್ಥಿಗಳು ಡಾ. ಸುರೇಂದ್ರನಾಥ ಮಿಣಜಗಿಯವರು ಗೋಕಾಕರ ಬಗ್ಗೆ ಬರೆದಿರುವ ಮೊನೋಗ್ರಾಫ್ ಪುಸ್ತಕದ ಕೊನೆಯಲ್ಲಿರುವ ಗೋಕಾಕರ ಕೃತಿಗಳ ಪಟ್ಟಿಯನ್ನು ಗುರುತು ಹಾಕಿಕೊಳ್ಳುವುದನ್ನು ಲೈಬ್ರರಿಗಳಲ್ಲಿ ಗಮನಿಸಿದ್ದೇನೆ. ಈ ಗ್ರಂಥದ ಮುಂದಿನ ಮುದ್ರಣದಲ್ಲಿ ಗೋಕಾಕರ ಎಲ್ಲಾ ಕೃತಿಗಳ ಮೊದಲ ಮುದ್ರಣ ವಿವರಸಹಿತ ಅವರಿಗೆ ಸಂದ ಪ್ರಶಸ್ತಿಗಳು, ಅವರ ಬಗ್ಗೆ ಬಂದ ಮುಖ್ಯ ಕೃತಿಗಳ ವಿವರ ಇತ್ಯಾದಿಗಳನ್ನು ಗ್ರಂಥದ ಕೊನೆಗೆ ನಮೂದಿಸಿದರೆ ಗೋಕಾಕರ ಬಗೆಗಿನ ಮುಂದಿನ ಅಧ್ಯಯನಕ್ಕೆ ಸಹಕಾರಿ. ಕನ್ನಡ, ಇಂಗ್ಲಿಷ್ ಭಾಷೆಗಳು ಸೇರಿ ಗೋಕಾಕರು 75ಕ್ಕೂ ಅಧಿಕ ಕೃತಿ ಪ್ರಕಟಿಸಿರುವುದರಿಂದ ಅಂತಹ ಅನುಬಂಧಗಳ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಿದೆ.

ಸಾಹಿತ್ಯಾಸಕ್ತರಲ್ಲದ ಕನ್ನಡಿಗರಿಗೂ ಗೋಕಾಕ ವರದಿ ಬಗ್ಗೆ ತಿಳಿದಿರುತ್ತದೆ. ಈ ವರದಿಯ ಹಿಂದೆ ಗೋಕಾಕರಿಗಿದ್ದ ಚಿಂತನಾಕ್ರಮ, ಇಂಗ್ಲಿಷ್ ಬೋಧನಾ ಕ್ರಮಗಳ ಬಗ್ಗೆ ಹೈದರಾಬಾದಿನಲ್ಲಿದ್ದಾಗ ನಿರೂಪಿಸಿದ ನೀತಿ ನಿಯಮಗಳಿಂದ ಪಡೆದ ಅನುಭವ ಇತ್ಯಾದಿ ಬಹಳ ಚರ್ಚಿತವಾಗದ ಹಲವು ವಿವರಗಳು ಇಲ್ಲಿವೆ.

ಗೋಕಾಕರಿಗೆ ಪ್ರಿಯವಾಗಿದ್ದ ಸವಣೂರಿನ ನಸ್ಯ ಹಾಕುವ ಅಭ್ಯಾಸ, ಹೊರರಾಜ್ಯಗಳಲ್ಲಿ ಕನ್ನಡಿಗರನ್ನು ಕಂಡಾಗ ಉಕ್ಕುತ್ತಿದ್ದ ಪ್ರೀತಿ, ತಮ್ಮ ಆದರ್ಶಕ್ಕಾಗಿ ಉದ್ಯೋಗಗಳಿಗೆ ರಾಜೀನಾಮೆ ನೀಡಿದಾಗಲೆಲ್ಲಾ ಸಣ್ಣಪುಟ್ಟ ಹಣಕಾಸಿನ ಬಗೆಗೂ ಮಾಡಬೇಕಾಗುತ್ತಿದ್ದ ಜಾಗೃತಿ- ಹೀಗೆ ಬದುಕಿನ ಹಲವು ವಿವರಗಳು ಹೊರಗೆ ಗಂಭೀರವಾಗಿ ಕಾಣುತ್ತಿದ್ದ ಗೋಕಾಕರ ನಿತ್ಯಜೀವನದ ಸರಳ ವ್ಯಕ್ತಿತ್ವವನ್ನು ತೋರಿಸಿಕೊಡುತ್ತವೆ. ಅವರು ಪತ್ರ ಇತ್ಯಾದಿ ದಾಖಲೆಗಳನ್ನು ಜೋಪಾನ ಮಾಡುತ್ತಿದ್ದ ಕ್ರಮದಿಂದಾಗಿ ಅವರ ಸಮಕಾಲೀನರಾಗಿದ್ದ ಕವಿ ಪೇಜಾವರ ಸದಾಶಿವರಾಯರ ಚಿಂತನೆಗೂ, ಗೋಕಾಕರ ಚಿಂತನೆಗಳಿಗೂ ಇದ್ದ ವ್ಯತ್ಯಾಸಗಳನ್ನು ತೋರಿಸಿಕೊಡುತ್ತದೆ.

ತೇಜಸ್ವಿಯವರ ‘ಅಣ್ಣನ ನೆನಪುಗಳು’ ಪ್ರಸಿದ್ಧವಾದ ಕೃತಿ. ಅಲ್ಲಿ ಲೇಖಕರೂ ಆದ ಮಗ, ತಮ್ಮ ತಂದೆ ಕುವೆಂಪು ಅವರ ಬಗ್ಗೆ ಬರೆಯುತ್ತಾ ಕೌಟುಂಬಿಕ ಕಣ್ಣಲ್ಲಿ ಬರಹಗಾರ ಕುವೆಂಪು ಬಗ್ಗೆ ಒಳನೋಟ ನೀಡುತ್ತಾರೆ. ತಾಯಿ, ಅಕ್ಕ, ಬಂಧುಗಳು ಹಾಗೂ ಗೋಕಾಕರೇ ಬರೆದಿರುವ ಸಾಹಿತ್ಯ, ಪತ್ರ, ದಿನಚರಿ- ಹೀಗೆ ಹಲವು ಆಕರಗಳಿಂದ ಅನಿಲ ಅವರು ತಮ್ಮ ತಂದೆಯವರ ಬಾಳಪಯಣವನ್ನೂ, ಸಾಹಿತ್ಯ ಸಾಧನೆಯನ್ನೂ ಜೊತೆಯಾಗಿ ಕಾಣಿಸುತ್ತಾರೆ. ಗ್ರಂಥವನ್ನು ಓದಿದ ಎಲ್ಲರಿಗೂ ಅವರ ಶ್ರಮ ಗೋಚರಿಸುತ್ತದೆ. ಇವೆರಡೂ ವಿಭಿನ್ನ ರೀತಿಯ ಕೃತಿಗಳು. ಕನ್ನಡದ ಮಹತ್ವಪೂರ್ಣ ಲೇಖಕರ ಬಗೆಗೆ ಅವರ ಮಕ್ಕಳಿಂದ ಇಂತಹ ಕೃತಿಗಳು ರಚನೆಯಾಗುವುದು ಮುಖ್ಯ ಲೇಖಕರ ಅಧ್ಯಯನಕ್ಕೊಂದು ಹೊಸ ಅಧ್ಯಾಯವನ್ನು ಸೇರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT