ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ರಮ್ಯತೆಯ ಹೊಸ ಹುಡುಕಾಟದಲ್ಲಿ

Last Updated 4 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಯಕ್ಷಿಣಿ ಕನ್ನಡಿ
ಲೇ:
ಜ.ನಾ.ತೇಜಶ್ರೀ
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ
ಸಂ: 8880087235

***

ತೇಜಶ್ರೀ ಅವರ ‘ಯಕ್ಷಿಣಿ ಕನ್ನಡಿ’ ಸಂಕಲನದ ಕವಿತೆಗಳು ಅವರ ಒಟ್ಟಾರೆ ಕಾವ್ಯಯಾನದ ಇನ್ನೊಂದು ಹೊರಳನ್ನು ಸೂಚಿಸುವಂತಿವೆ. ತೇಜಶ್ರೀ ಕಾವ್ಯ ಎಂದರೆ ಆಳವಾದ ಧ್ಯಾನ; ಇರುವಿಕೆಯನ್ನು ತೀವ್ರವಾಗಿ ಭಾವಿಸುವುದು. ಇದನ್ನು ಅವರು ಕಾವ್ಯಯಾನದ ಗಂಭೀರ ಪಯಣಿಗರಾಗಿ ಮಾಡುತ್ತಾರೆ ಎಂದು ಬೇರೆ ಹೇಳಬೇಕಿಲ್ಲ. ಈಗಾಗಲೇ ಕವಿತೆಗಳನ್ನು ರಚಿಸಿ ಒಂದು ಹದವನ್ನು ಕಂಡುಕೊಂಡಿರುವುದರಿಂದ ಕಾವ್ಯದ ರಚನೆಯ ಬಗ್ಗೆ ಒಂದು ಆದರ, ಸರಾಗವನ್ನು ಅವರಲ್ಲಿ ಕಾಣಬಹುದು. ಇದು ಅವರ ಪಾಲಿಗೆ ಒಂದು ಅಭಯವನ್ನೂ ಆತಂಕವನ್ನೂ ಒಟ್ಟೊಟ್ಟಿಗೆ ತಂದೊಡ್ಡಿರುವಂತೆ ಕಾಣುತ್ತದೆ. ಕವಿತೆ ಎನ್ನುವ ತೀವ್ರತೆಯನ್ನು ರೂಢಿಯಲ್ಲಿ ಹಿಡಿಯುವುದಕ್ಕಿಂತ ಇನ್ನೇನೊ ಬೇರೆ ಇದೆ ಎಂದು ಹುಡುಕಾಟ ಮಾಡುವಲ್ಲಿ ಅವರ ಕಾವ್ಯದ ತೀವ್ರ ಹಂಬಲ ಪ್ರಕಟಗೊಳ್ಳುತ್ತದೆ. ಪ್ರಸ್ತುತ ಸಂಕಲನವಾದರೂ ಅವರ ಕಾವ್ಯದ ಸದ್ಯ ಮತ್ತು ಶಾಶ್ವತಗಳ ಮರೆಸಾಟದ ಕುರಿತಾದ ಧ್ಯಾನವೇ ಆಗಿದೆ.

ತೇಜಶ್ರೀ ಅವರ ಈ ಸಂಕಲನದಲ್ಲಿ ರಮ್ಯತೆಯೆನ್ನುವುದು ಒಂದು ವಿಶಿಷ್ಟ ನೆಲೆಯಲ್ಲಿ ಪ್ರಕಟಗೊಂಡಿದೆ. ಅದು ಒಂದೆಡೆಗೆ ಜೀವದ ತಾದಾತ್ಮ್ಯವನ್ನು ತೀವ್ರವಾಗಿ ಭಾವಿಸುವ ಪರಿಯಲ್ಲಿ ಪ್ರಕಟಗೊಂಡರೆ, ಇನ್ನೊಂದೆಡೆ ಸದ್ಯ ಮತ್ತು ಶಾಶ್ವತದ ಮೇಲಾಟಗಳನ್ನು ಕುರಿತು ಧ್ಯಾನಿಸುವ ರೀತಿಯಲ್ಲಿ ನಿಲ್ಲುತ್ತದೆ. ಇಲ್ಲಿ ಬರುವ ಪ್ರಕೃತಿ ವರ್ಣನೆಯು ಅದಕ್ಕೆ ಹಿನ್ನೆಲೆಯಾಗಿ ಒದಗಿ ಬಂದಿದೆ. ಮರ ಮತ್ತು ಹಕ್ಕಿಗಳ ಒಡನಾಟದ ಕೆಲವು ಪದ್ಯಗಳು ಇಲ್ಲಿ ಗಮನ ಸೆಳೆಯುತ್ತವೆ. ‘ಕರ್ಣಾಟ ಕಾದಂಬರಿ’ಯಲ್ಲಿ ವೈಶಂಪಾಯನ ಗಿಳಿ ಕೆಳಗೆ ಬಿದ್ದಾಗ ಅಲ್ಲಿರುವ ಮರದ ವರ್ಣನೆಯನ್ನು ನೆನಪಿಗೆ ತರುವಂತೆ ಇರುವ ಕವಿತೆ – ಗಿಳಿಮರ. ಹಕ್ಕಿ ಮತ್ತು ಮರದ ತಾದಾತ್ಮ್ಯವು ಜೀವ ಮರದೊಳಗಿಂದ ಹುಟ್ಟುತ್ತಿದೆ ಎನ್ನುವ ಭಾವವನ್ನು ಉಂಟು ಮಾಡುತ್ತದೆ. ಸದಾ ಗಿಳಿಯ ಧ್ಯಾನದಲ್ಲಿರುವ ಮರದ ಕಾಂಡದ ಮೇಲೆ ಹಾವಸೆ ಹಬ್ಬಿ ಮರವೇ ಗಿಳಿಯಾಗಿಬಿಟ್ಟು ಅದರೊಳಗಿನ ಹುಳಗಳ ಗೌಜಿ ನಡೆಯುತ್ತಿದೆ. ಈ ಜೀವದಾಟವನ್ನು ಬಣ್ಣಿಸುವ ಕವಿತೆ ಭವದ ಇರುವಿಕೆಯನ್ನು ಭಾವಿಸಿ ತೋರುತ್ತಿದೆ. ಈ ಇರುವಿಕೆಯ ಚೆಲುವು ಸಕಲ ಜೀವರಾಶಿಗಳೆಲ್ಲದರಲ್ಲಿಯೂ ಪ್ರತಿಬಿಂಬಿತವಾಗುತ್ತಿರುವುದು ಅದರ ಘನತೆಯನ್ನು ಹೆಚ್ಚಿಸಿದೆ.

ಮರದ ಪ್ರತಿಮೆಯು ‘ಸೃಷ್ಟಿ ಸ್ಥಿತಿ ಲಯ’ ಎಂಬ ಕವಿತೆಯಲ್ಲಿಯೂ ಮುಂದುವರೆಯುತ್ತದೆ. ಮರ ಹಕ್ಕಿಯಾಗುವ ಕ್ರಿಯೆ ಇಲ್ಲಿಯೂ ಬಣ್ಣನೆಯಾಗಿದೆ. ‘ಎಲ್ಲ ಹಕ್ಕಿಗಳೂ ಸೇರಿ ಒಂದೇ ಹಕ್ಕಿಯಾಗಿ/ಮರವೆಂದರೀಗ ಒಂದು ಹಕ್ಕಿ’ಯಾಗಿ ಬಿಡುವ ಏಕೀಭವ ಇಲ್ಲಿ ಸಂಭವಿಸುತ್ತದೆ. ಮರದ ಮೇಲೆ ಆಡುವ ಜೀವಸಂಕುಲದ ಚೈತನ್ಯವನ್ನು ತಂದುಕೊಳ್ಳುವಂತೆಯೇ ಮರ ಸಾವಿನ ಭಾರವನ್ನೂ ಅನುಭವಿಸುತ್ತದೆ. ಈ ಹೊರಳಾಟವು ಒಂದೆಡೆಗೆ ಜೀವದ ಕಲರವವನ್ನೂ ಸಾವಿನ ಮೌನವನ್ನೂ ಒಳಗೊಳ್ಳುತ್ತದೆ ಎನ್ನುವುದನ್ನು ಕವಿತೆ ಚಿತ್ರವತ್ತಾಗಿ ಬಣ್ಣಿಸಿದೆ. ಹೀಗೆ ಈ ಸಂಕಲನದಲ್ಲಿ ಮರವನ್ನೇ ಧೇನಿಸುವ ಹಲವಾರು ಕವಿತೆಗಳಿವೆ (‘ನೆಲದೆದೆಯಲ್ಲಿ ಮರದ ಬೇರಿನ ಸಿಕ್ಕು’, ‘ಬದುಕು ಬರೆದ ಮರ’ ಇಂಥವು).

ಇರುವಿಕೆ ಎನ್ನುವುದು ನಿರಂತರವಾಗಿ ಬದಲಾಗುತ್ತಿರುವ ಒಂದು ಅಸ್ಮಿತೆ. ಆ ನಿರಂತರತೆಯ ಕ್ಷಣಿಕತೆಯು ಕ್ಷಣಭಂಗುರದ ಚೆಲುವನ್ನೂ ಭ್ರಮನಿರಸನವನ್ನೂ ಒಟ್ಟಿಗೇ ಉಂಟು ಮಾಡುತ್ತದೆ. ನೀಲಾಂಜನೆಯ ನೃತ್ಯದ ಲಾಸ್ಯವು ಸೌಂದರ್ಯೋಪಾಸನೆಯ ಉತ್ತುಂಗಕ್ಕೆ ಒಯ್ಯುವಂತೆಯೇ ಸಾವಿನ ಶೂನ್ಯವನ್ನೂ ಕಾಣಿಸಬಹುದು. ಈ ಕ್ಷಣಕ್ಕೆ ಚಿರಂತನದ ಗಮ್ಯವಿಲ್ಲದಿದ್ದರೂ ಅದನ್ನು ಹಿಡಿದಿಡುವ ಆಸೆ ಆಳದಲ್ಲಿ ತೀವ್ರವಾಗಿರುತ್ತದೆ. ಇದನ್ನು ತೇಜಶ್ರೀ ತಮ್ಮ ಕವಿತೆಗಳಲ್ಲಿ ಹಿಡಿದಿಡುತ್ತಿದ್ದಾರೆ. ಮರ್ತ್ಯದ ತೊಳಲಾಟವು ಅಂತಿಮವಾಗಿ ಇದ್ದೂ ಇಲ್ಲದಾಗುವ ದ್ವಂದ್ವದಲ್ಲಿಯೇ ಇರುವಂತಹದ್ದು ಪ್ರಾಯಶಃ.

ಇಲ್ಲಿ ‘ಶಾಶ್ವತಕ್ಕೆ ಕೈಚಾಚಿ ಕಣ್ಣಾಳದ ಕವಿತೆ’ ಬಣ್ಣಿಸುವಂತೆ ‘ಮಿಡಿನಾಗರಗಳು ಸುತ್ತಿಕೊಂಡ ಬಯಕೆ ಸುಳಿ ಅವನ ಮೈಮೇಲೆಲ್ಲ’ ಎನ್ನುವ ಸಾಲು ಅದನ್ನು ಹೆಚ್ಚಿನದಾಗಿ ಹೇಳಬಲ್ಲದು. ಮುಂದುವರೆದಂತೆ, ‘ಎತ್ತ ನೋಡಿದರೂ ಉತ್ಕಟ ಹೋರಾಟ;/ಮೇಲೆ ಬಾನಲ್ಲಿ, ಇಲ್ಲಿ ನೆಲದಲ್ಲಿ/ಮತ್ತು ಕಂಪಿಸುವ ಪಾತಾಳದೆದೆಯಲ್ಲಿ.. ..ಒಂದೊಂದು ಜೀವವನೂ ಒಂದೊಂದು ಬಗೆಯಲಿ ದಿಟ್ಟಿಸುವ ಸಾವಿಗೆ /ಅದೆಷ್ಟು ಒಳನೋಟಗಳು!....ದೇವರೇ ಶಾಶ್ವತವೆಂಬುದು ಎಷ್ಟು ಕ್ಷಣಿಕ!’ ಎಂದು ಉದ್ಗಾರದಲ್ಲಿ ಕವಿತೆ ಮುಗಿಯುತ್ತದೆ. ‘ಕ್ಷಣರುಚಿಯ ಮಲರಂಬು’ ಕವಿತೆ ಇನ್ನಷ್ಟು ಉತ್ತುಂಗಕ್ಕೆ ಹೋಗಿ ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟವ /ಆ ಗಳಿಗೆ ಏನಾಗಿತ್ತು/ಎಲ್ಲಿತ್ತು ಅದು ಇಟ್ಟುಕೊಂಡಿದೆ ಹೇಗೆ/ಕ್ಷಣರುಚಿಯ ಮಲರಂಬು’ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಈ ಹುಡುಕಾಟ ತಲತಲಾಂತರದಿಂದ ಬಂದುದೇ. ಆದರೆ ಅದು ಸದ್ಯವೇ ಶಾಶ್ವತವನ್ನು ತೊಡೆಯುತ್ತಿರುವ ದಿನಮಾನದಲ್ಲಿ ಸಂವೇದನೆಯ ಹೊಸ ಹೊರಳಿಗಾಗಿ ಕಾತರಿಸುವುದನ್ನು ಕವಿತೆಗಳು ಸೂಚಿಸುತ್ತಿರಬಹುದು. ಈ ಸಂಕಲನದ ‘ಅಹಲ್ಯೆ’ ಕವಿತೆ ರಮ್ಯತೆಯ ಇನ್ನೊಂದು ಆಯಾಮವನ್ನು ತೆರೆದಿಡುತ್ತದೆ. ಸ್ಪರ್ಶದ ಮೂಲಕ ಇಂದ್ರಿಯ ಗ್ರಾಹ್ಯವಾದ ಚೈತನ್ಯವನ್ನು ಕಂಡುಕೊಳ್ಳುವುದನ್ನು ಈ ಕವಿತೆ ತೋರಿಸಿದೆ.

ಈ ಸಂಕಲನದ ಕವಿತೆಗಳು ಕಾವ್ಯದ ಬಗ್ಗೆ ಮಾತನಾಡುತ್ತವೆ. ಕವಿತೆ ಕಟ್ಟುವ ಕಲೆಗಾರಿಕೆ ಹಾಗೂ ಕಸುಬುದಾರಿಕೆಗಳನ್ನು ಕುರಿತು ಒಂದು ಹಂತದಲ್ಲಿ ಕವಿ ನಿಂತು ನೋಡಿ ಮತ್ತೆ ಮುಂದಡಿಯಿಡುತ್ತಿರುತ್ತಾನೆ/ಳೆ. ಹೀಗೆ ಅದೊಂದು ‘ಯಕ್ಷಿಣಿ ಕನ್ನಡಿ’. ‘ಬೆಳಕ ಹೀರಿದ ಕನ್ನಡಿ/ಒಳಮನೆಯ ಕತ್ತಲಿಗೆ ಮುತ್ತಿಕ್ಕಿ / ಅಲ್ಲಿ ಒಂದು ಹೊಸ ಬೆಳಗು/ನಿಟ್ಟುನಿಟ್ಟಲ್ಲಿ ಬಚ್ಚಿಟ್ಟುಕೊಂಡ ಗುಟ್ಟುಗಳೆಲ್ಲ ಈಗ ಮಗುವಿನಂಗೈ ಕನ್ನಡಿಯೊಳಗಿನ ಕವಿತೆ’. ಹಾಗೆ ನೋಡಿದರೆ ಯಕ್ಷಿಣಿ ಕನ್ನಡಿ ಎನ್ನುವುದು ಕ್ಲೀಷೆ ಎನ್ನಿಸುವ ಪ್ರತಿಮೆ. ಮಾಯಾಕನ್ನಡಿಯನ್ನು ಸೃಷ್ಟಿಯ ವಿಸ್ಮಯವನ್ನು ಹೇಳುವುದಕ್ಕೆ ಬಳಸುತ್ತಾರೆ ಎನ್ನುವುದನ್ನು ಊಹಿಸಬಹುದು.

ಆದರೆ ‘ಕಂಪಿಸುತ್ತಿದೆ ಒಡಲು’ ಕವಿತೆ ಮಾತ್ರ ಅದುರುವ ದೇಹದ ತೀವ್ರಮೋಹದ ಕಂಪನದಲ್ಲಿ ಕಂಡುಕೊಳ್ಳುವುದು ವಿಶಿಷ್ಟವೆನಿಸುತ್ತದೆ. ಆ ಸಾಲುಗಳು ಹೀಗಿವೆ: ‘ಬಾ ಶಿವನೇ/ಅದುರುತ್ತಿರುವ ನನ್ನ ಈ ಕೈಯ ಹಿಡಿದುಕೋ;/ಬಿಡಿಸಿ ನೋಡು ಯಾವ ಕವಿತೆ/ಅದರೊಳಗೆ ಅಡಗಿ ಕುಳಿತು ಕಂಪಿಸುತ್ತಿದೆ.. .. ಕಾಯುತ್ತಿದೆ ಅದು ಶತಶತಮಾನಗಳಿಂದ/ಬಿಡಿಸುವ ಬೆರಳುಗಳಿಗಾಗಿ ಕಾದು;/ಕೇಳು ಏನು ಹೇಳುವುದಿದೆ ಅಂಗೈಯೊಳಗಿನ/ಆ ನನ್ನ ಕವಿತೆಗೆ’. ಇಲ್ಲಿರುವ ‘ಕತ್ತು ಹಿಚುಕುವ ಸಿದ್ಧಹಸ್ತ’ ಕವಿತೆ ಕವಿತೆಯೆನ್ನುವುದನ್ನು ಒಲಿಸಿಕೊಳ್ಳಲು ‘ಮೌನದೊಳಗೆ/ಕರಗಿಸುವುದ ಕಲಿಸು ಕವಿತೆ’ ಎಂದು ಬೇಡುತ್ತದೆ. ಮಾಂತ್ರಿಕತೆ ಇಲ್ಲದ ಕವಿತೆ ಏನೂ ಆಗದೆ ಉಳಿಯುವುದನ್ನೂ ಇಲ್ಲಿ ಕಂಡುಕೊಳ್ಳಲಾಗಿದೆ; ‘ಎಲ್ಲೋ ಕೆಲವರಿಗೆ ಮಾತ್ರ ದಕ್ಕಬಹುದು/ಸಿಪ್ಪೆ, ತಿರುಳು, ಬೀಜದ ಪೂರ್ಣದಲಿ/ಉಳಿದವರಿಗೆ ಹಣ್ಣಿನ ಕತ್ತು ಹಿಚುಕುವ ಹುಳ ಮಾತ್ರ’. ‘ಅಡಿಗರಿಂದ ಲಂಕೇಶರಿಗೆ’ ಕವಿತೆ ಕೂಡ ಕಾವ್ಯದ ಆಗುವಿಕೆಯನ್ನು ಕುರಿತಾದ ಕವನವೇ.

ತೇಜಶ್ರೀ ಅವರ ಕವಿತೆಗಳು ಹೀಗೆ ರಮ್ಯತೆಯ ಹೊಸ ಹುಡುಕಾಟದಂತೆ ಕಾಣುತ್ತಿರುವುದು ಕನ್ನಡ ಕವಿತೆ ಮತ್ತೊಮ್ಮೆ ನವೋದಯದ ಕಾವ್ಯಕುತೂಹಲವನ್ನು ಮೈಗೂಡಿಸಿಕೊಳ್ಳುವ ಹಂಬಲದಲ್ಲಿಯೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುವಂತಿದೆ. ತೇಜಶ್ರೀಯವರು ತಮ್ಮ ತೀವ್ರ ಕಾವ್ಯಭಾವಕ್ಕೆ ಸಾಥಿಯಾಗಿ ಹೊಸ ರೀತಿಯ ಕಾವ್ಯದ ಲಯಗಳನ್ನು ಪ್ರಯೋಗ ಮಾಡಿದ್ದಿದ್ದರೆ ಅದರ ಮೀಟು ಹೊರಳನ್ನು ಸೃಷ್ಟಿಸಬಹುದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT