ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಕ್‌ ಕುಟುಂಬದ ಬಿರ್ಜು ಮಹಾರಾಜ!

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೂ ಕೊಡುಗೆ, ಬಾಲಿವುಡ್‌ ನೃತ್ಯದಲ್ಲೂ ಮೋಡಿ
Last Updated 18 ಜನವರಿ 2022, 9:59 IST
ಅಕ್ಷರ ಗಾತ್ರ

ಕಥಕ್‌ ನೃತ್ಯಕ್ಕೆ ಹೊಸ ರೂಪ ಕೊಟ್ಟ ಪಂಡಿತ್‌ ಬಿರ್ಜು ಮಹಾರಾಜ್‌ ಇನ್ನು ನೆನಪು ಮಾತ್ರ. ವಿಶ್ವದಾದ್ಯಂತ ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ. ಬಿರ್ಜು ಮಹಾರಾಜ್‌ ಭೌತಿಕವಾಗಿ ಇನ್ನಿಲ್ಲವಾದರೂ ಅವರು ಸೃಷ್ಟಿಸಿರುವ ‘ಹೆಜ್ಜೆ– ಗೆಜ್ಜೆ’ ನೃತ್ಯ ಜಗತ್ತಿನಲ್ಲಿ ಸದಾ ಗುರುತು ಮೂಡಿಸುತ್ತವೆ. ಭಾರತೀಯ ಸಂಗೀತ, ನೃತ್ಯ ಲೋಕಕ್ಕೆ ಅವರು ಕೊಟ್ಟ ಅಗಾಧ ಕೊಡುಗೆಯ ನೋಟ ಇಲ್ಲಿದೆ...

ಬ್ರಿಜ್‌ ಮೋಹನ್‌ ನಾಥ್‌ ಮಿಶ್ರಾ ಎಂಬ ಹೆಸರುನೃತ್ಯ ಜಗತ್ತಿನಲ್ಲಿ ಪಂಡಿತ್‌ ಬಿರ್ಜು ಮಹಾರಾಜ್‌ ಎಂದೇ ಪ್ರಸಿದ್ಧಿ ಪಡೆದಿದೆ. ಬಿರ್ಜು ಮಹಾರಾಜ್‌ ಎಂದೊಡನೆ ಕಥಕ್‌ ಶೈಲಿಯ ಹೆಜ್ಜೆಗಳು ಕಣ್ಣ ಮುಂದೆ ವಿರಾಜಮಾನಗೊಳ್ಳುತ್ತವೆ. ತಮ್ಮದೇ ಆದ ಕಲ್ಕಾಬಿಂದಾದಿನ್‌ ನೃತ್ಯ ಘರಾಣೆ ಹುಟ್ಟು ಹಾಕಿದ ಅವರು ನೃತ್ಯ ಜಗತ್ತಿನಲ್ಲಿ ಎತ್ತರದ ಸ್ಥಾನ ಪಡೆದಿದ್ದಾರೆ. ಕಥಕ್‌ ನೃತ್ಯ ಶೈಲಿಯನ್ನು ಎತ್ತರಕ್ಕೇರಿಸಿದ್ದಾರೆ. ನೃತ್ಯ ಕುಟುಂಬದಲ್ಲೇ ಹುಟ್ಟಿ ಬೆಳೆದ ಬಿರ್ಜು ಮಹಾರಾಜರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೂ ದೊಡ್ಡ ಹೆಸರು ಮಾಡಿ ನೃತ್ಯ ಕುಟುಂಬಕ್ಕೆ ಹೊಸ ರೂಪ ಕೊಟ್ಟರು.

ಅವರ ತಂದೆ ಜಗನ್ನಾಥ್‌ ಮಹಾರಾಜ್‌ ಅವರು ರಾಯಘಡ ರಾಜರ ಆಸ್ಥಾನದಲ್ಲಿ ಕಥಕ್‌ ನೃತ್ಯಪಟುವಾಗಿದ್ದರು. ಅವರು ಲಚ್ಚು ಮಹಾರಾಜ್‌ ಎಂದೂ ಪ್ರಸಿದ್ಧಿ ಪಡೆದಿದ್ದರು. ಬಿರ್ಜು ಅವರು ತಂದೆಯಿಂದಲೇ ಆರಂಭಿಕ ಕಥಕ್‌ ನೃತ್ಯಾಭ್ಯಾಸ ಮಾಡಿದರು. ಸಣ್ಣ ವಯಸ್ಸಿನಿಂದ ಭೂಮಿಕೆ ಏರಿದ ಅವರು ಇತ್ತೀಚಿನವರೆಗೂ ಪ್ರದರ್ಶನ ನೀಡಿ ನೃತ್ಯಪ್ರಿಯರ ಮನಸ್ಸಿನಲ್ಲಿ ಮೆಚ್ಚುಗೆಯ ಮುದ್ರೆ ಒತ್ತಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನೃತ್ಯ ಮುದ್ರೆ ಪ್ರದರ್ಶಿಸುವ ಮೂಲಕ ಸಂಗೀತ ಸ್ವರಗಳ ಜೊತೆಗೆ ನೃತ್ಯವನ್ನು ಬೆಸೆದಿದ್ದರು. ಹಾಡುತ್ತಲೇ ನೃತ್ಯ ಪ್ರದರ್ಶನ ಮಾಡುತ್ತಿದ್ದ ಇವರು ರಸಿಕರ ಎದೆಯಲ್ಲಿ ಆನಂದ ಸೃಷ್ಟಿ ಮಾಡುತ್ತಿದ್ದರು.

ಬಿರ್ಜು ಮಹಾರಾಜರು 1938ರ ಫೆಬ್ರುವರಿ 4ರಂದು ರಾಯಘರದಲ್ಲಿ ಜನಿಸಿದರು. ಅವರು ತಮ್ಮ 7ನೇ ವಯಸ್ಸಿನಲ್ಲಿಯೇ ಮೊದಲ ನೃತ್ಯ ಪ್ರದರ್ಶನ ನೀಡಿದರು. ಅವರಿಗೆ 9 ವರ್ಷ ವಯಸ್ಸಾಗಿದ್ದಾಗ ಅವರ ತಂದೆ ನಿಧನರಾದರು. ಹೀಗಾಗಿ ಅವರ ಕುಟುಂಬ ದೆಹಲಿಗೆ ವಲಸೆ ಬಂತು. ಬಹುಶೃತ ಪ್ರತಿಭಾವಂತರಾಗಿದ್ದ ಅವರು ಬಹುವಾದ್ಯ ವಾದನದಲ್ಲೂ ಪಾಂಡಿತ್ಯ ಪಡೆದಿದ್ದರು. ಕಥಕ್ ನೃತ್ಯದದಲ್ಲಿ ರೂಪಕ ಮತ್ತು ನೃತ್ಯ ನಾಟಕ ಸೃಷ್ಟಿಸುವ ಮೂಲಕ ಕಥಕ್ ನೃತ್ಯಕ್ಕೆ ವೈಶಾಲ್ಯತೆ ತಂದುಕೊಟ್ಟರು.

‘ಕಲಾಶ್ರಮ’ ನೃತ್ಯ ಶಿಕ್ಷಣಕ್ಕೆ ಬಿರ್ಜು ಮಹಾರಾಜ್ ಅವರ ಕೊಡುಗೆ ಮಹತ್ವಪೂರ್ಣವಾದುದು. ಸಂಸ್ಥೆಯ ಮೂಲಕ ಅವರು ವಿಶ್ವದಾದ್ಯಂತ ಪ್ರವಾಸ ಮಾಡಿ ಪ್ರಸಿದ್ಧಿ ಪಡೆದರು. ವಿಶ್ವದ ಹಲವು ನಗರಗಳಲ್ಲಿ ಕಥಕ್‌ ಕಾರ್ಯಾಗಾರ ನಡೆಸಿಕೊಟ್ಟರು. ಸಾಮಾಜಿಕ ಜಾಲತಾಣಗಳನ್ನು ಬಳಸಿ ಇತ್ತೀಚಿನವರೆಗೂ ಅವರು ದೇಶ ವಿದೇಶದ ವಿದ್ಯಾರ್ಥಿಗಳಿಗೆ ನೃತ್ಯ ಪಾಠ ಮಾಡುತ್ತಿದ್ದರು.

ತಮ್ಮ ಚಿಕ್ಕಪ್ಪ ಶಂಭು ಮಹಾರಾಜ್ ಅವರೊಂದಿಗೆ ‘ಭಾರತೀಯ ಕಲಾಕೇಂದ್ರ’ದಲ್ಲಿ ಕಾರ್ಯನಿರ್ವಹಿಸಿದ ಬಿರ್ಜು ಮಹಾರಾಜ್, ಮುಂದೆ ನವದೆಹಲಿಯ ಕಥಕ್ ಶಿಕ್ಷಣ ಕೇಂದ್ರದ ಶಿಕ್ಷಕರಾಗಿ, ಅದರ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನೂರಾರು ನೃತ್ಯ ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ನಂತರ 1998ರಲ್ಲಿ ನಿವೃತ್ತರಾಗಿದ್ದರು. ವೃತ್ತಿಯಿಂದ ನಿವೃತ್ತರಾದರೂ ಅವರು ನೃತ್ಯದಿಂದ ನಿವೃತ್ತರಾಗಲಿಲ್ಲ. ನಂತರ ತಮ್ಮದೇ ಆದ ‘ಕಲಾಶ್ರಮ’ ನೃತ್ಯ ಕಲಾಶಾಲೆ ಸ್ಥಾಪನೆ ಮಾಡಿದರು.

ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಮ್ಮಾನ್‌, ಗಾಂಧಿ ಶಾಂತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಖೈರಾಗರ್ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಲತಾ ಮಂಗೇಶ್ಕರ್ ಪುರಸ್ಕಾರ ಮುಂತಾದ ಅನೇಕ ಮಹತ್ವದ ಗೌರವಗಳು ಬಿರ್ಜು ಮಹಾರಾಜ್ ಅವರಿಗೆ ಸಂದಿವೆ.

ಬಾಲಿವುಡ್‌ನಲ್ಲೂ ಛಾಪು: ಬಿರ್ಜು ಮಹಾರಾಜ್‌ ಅವರು ಚಲನಚಿತ್ರ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡಿದ್ದಾರೆ. ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸತ್ಯಜಿತ್ ರೇ ಅವರ ‘ಶತರಂಜ್ ಖಿಲಾರಿ’ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವ ಜೊತೆಗೆ ಗಾಯನವನ್ನೂ ಪ್ರಸ್ತುತಪಡಿಸಿದ್ದಾರೆ. ದೇವದಾಸ್ ಚಿತ್ರದ ‘ಕಾಹೆ ಛೇದ್ ಮೋಹೆ’ ಗೀತೆಯ ನೃತ್ಯಕ್ಕೆ ಹೆಜ್ಜೆ ಮೂಡಿಸಿದರು. ದಿಲ್ ತೋ ಪಾಗಲ್ ಹೈ, ಗದರ್ – ಏಕ್ ಪ್ರೇಮ್ ಕಥಾ, ವಿಶ್ವರೂಪಂ ಮುಂತಾದ ಅನೇಕ ಚಲನಚಿತ್ರಗಳಿಗೆ ನೃತ್ಯ ವಿನ್ಯಾಸ ಮಾಡಿದರು.

2002ರಲ್ಲಿ ಬಿಡುಗಡೆ ಕಂಡ ‘ದೇವದಾಸ್‌’ ಚಿತ್ರದಲ್ಲಿ ನಟಿ ಮಾಧುರಿ ದೀಕ್ಷಿತ್‌ ಕಥಕ್‌ ನೃತ್ಯಕ್ಕೆ ಹೆಜ್ಜೆಯಾಗಿದ್ದಾರೆ. ಮಾಧುರಿಯ ಮನಮೋಹಕ ಹೆಜ್ಜೆಗಳಿಗೆ ಬಿರ್ಜು ಮಹಾರಾಜ್‌ ಶಕ್ತಿಯಾಗಿದ್ದಾರೆ. ಕಮಲಹಾಸನ್ ನಟನೆಯ ‘ವಿಶ್ವರೂಪಂ’ ಚಿತ್ರದ ಸುಂದರ ನೃತ್ಯ ನಿರ್ದೇಶನಕ್ಕೆ ಬಿರ್ಜು ಮಹಾರಾಜ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ‘ಉನ್ನೈ ಕಾಣಾದ್‌’ ಸುಂದರ ಗೀತೆಯನ್ನು ಸಂಪೂರ್ಣವಾಗಿ ಕಥಕ್‌ ನೃತ್ಯ ಶೈಲಿಯಲ್ಲಿ ರೂಪಿಸಲಾಗಿದೆ. ಈ ಗೀತೆಯಲ್ಲಿ ಕಮಲಹಾಸನ್‌ ನಟನೆ ಇದ್ದರೂ ಆ ನೃತ್ಯ ನಿರ್ದೇಶನ ಮಾಡಿರುವ ಬಿರ್ಜು ಮಹಾರಾಜರೇ ನೋಡುಗರ ಕಣ್ಣಿಗೆ ಕಟ್ಟಿಕೊಳ್ಳುತ್ತಾರೆ. 2012ರಲ್ಲಿ ಬಿಡುಗಡೆಯಾದ ಈ ಚಿತ್ರದ ಗೀತೆ ಬಹಳಷ್ಟು ಪ್ರಸಿದ್ಧಿಪಡೆದಿದೆ.

‘ಬಾಜಿರಾ ಮಸ್ತಾನಿ’ ಚಿತ್ರದ ಮಾಹೇ ರಂಗ್‌ ದೋ ಲಾಲ್‌ ಗೀತೆ ಎಲ್ಲರಿಗೂ ಗೊತ್ತೇ ಇದೆ. ಶ್ರೇಯಾ ಘೋಷಾಲ್‌ ಅವರೊಂದಿಗೆ ಬಿರ್ಜು ಮಹಾರಾಜ್‌ ಅವರು ಸ್ವತಃ ಹಾಡಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಟಿ ದೀಪಿಕಾ ಪಡುಕೋಣೆಯ ಸುಂದರ ಹೆಜ್ಜೆಗಳಲ್ಲಿ ಬಿರ್ಜು ಮಹಾರಾಜ್‌ ಅವರ ನೃತ್ಯ ಶಕ್ತಿಯಿದೆ. ಈ ಗೀತೆಗೆ ಬಿರ್ಜು ಮಹಾರಾಜ್‌ ಅವರಿಗೆ ಫಿಲ್ಮಫೇರ್‌ ಪ್ರಶಸ್ತಿ ಬಂದಿದೆ.

ವಿಶ್ವದೆಲ್ಲೆಡೆ ಕಥಕ್‌ ನೃತ್ಯ ಪ್ರಕಾರದ ಹೆಸರು ಬಂದಾಗ ಅದರೊಂದಿಗೆ ಬಿರ್ಜು ಮಹಾರಾಜ್‌ ಅವರ ಹೆಸರೂ ಸೇರಿಕೊಳ್ಳುತ್ತದೆ. ನೃತ್ಯದ ಶಾಸ್ತ್ರಕ್ಕೆ ಬದ್ಧರಾಗಿ ಚಿತ್ರಗೀತೆ ಹಾಗೂ ಇತರ ಸಮಕಾಲೀನ ನೃತ್ಯದಲ್ಲೂ ಅವರು ಮೋಡಿ ಮಾಡಿದ್ದಾರೆ. ಕಥಕ್‌ ಕಲಿಯುವ ಪ್ರತಿ ವಿದ್ಯಾರ್ಥಿಯೂ ಬಿರ್ಜು ಮಹಾರಾಜರ ಹೆಜ್ಜೆಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT