ಗುರುವಾರ , ಜನವರಿ 21, 2021
18 °C

ಹೊಸ ವರ್ಷದ ಆಗಮನ; ಸಂಗೀತ ನೃತ್ಯ ಸಿಂಚನ!

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

Prajavani

ಪ್ರತೀ ವರ್ಷ ಹೊಸ ವರ್ಷವನ್ನು ಬರಮಾಡಿಕೊಳ್ಳುವ ರೀತಿಗೂ ಈ ವರ್ಷದ ರೀತಿಗೂ ಬಹಳ ವ್ಯತ್ಯಾಸವಿತ್ತು. ಕೊರೊನಾ ಭೀತಿ, ತಲ್ಲಣಗಳ ನಡುವೆ ಹೊಸವರ್ಷವನ್ನು ಸ್ವಾಗತಿಸುವಂತಹ ಪರಿಸ್ಥಿತಿ ಈ ಬಾರಿ ನಿರ್ಮಾಣವಾಗಿದ್ದರೂ ನೊಂದ ಮನಕ್ಕೆ ಕಲೆಯ ಆಸ್ವಾದನೆಯ ಸಿಂಚನ ನೀಡಿದ್ದು ‘ಪ್ರಜಾವಾಣಿ’ ಫೇಸ್‌ಬುಕ್‌ ಸರಣಿ ಕಾರ್ಯಕ್ರಮಗಳು.

ಮುದುಡಿದ ಮನಕ್ಕೆ ಮುದ ನೀಡುವ ಸಂಗೀತ, ಮನಸ್ಸಿಗೆ ಕಚಗುಳಿ ಇಡುವ ಹಾಸ್ಯ, ನವಿರಾದ ಭಾವನೆ ಸೂಸುವ ಹನಿಗವನ, ಕಣ್ಮನ ತಣಿಸುವ ನೃತ್ಯ, ಮಧುರ ಭಾವನೆಗಳನ್ನು ಸ್ಮರಿಸುವ ಹಳೆಯ ಸಿನಿಮಾ ಗೀತೆಗಳು, ಜಾನಪದ ಸೊಗಡನ್ನು ಬಿಂಬಿಸುವ ಚೌಡಿಕೆ ಪದ, ಚಿಟ್‌ಮೇಳ ವಾದ್ಯ ನುಡಿಸಾಣಿಕೆ... ಇವೆಲ್ಲವೂ ಸೃಜನಶೀಲ ಮನಸ್ಸುಗಳಿಗೆ ಸಾಂತ್ವನ ನೀಡಿ ಹೊಸ ನಾಳೆಗಳನ್ನು ಬರಮಾಡಿಕೊಂಡದ್ದು ಡಿಸೆಂಬರ್‌ 31ರ ಸಂಜೆಯಿಂದ ಮಧ್ಯರಾತ್ರಿವರೆಗೂ ನಡೆದ ಕಾರ್ಯಕ್ರಮಗಳ ಹೈಲೈಟ್ಸ್.

ಕವಿ ಡುಂಡಿರಾಜ್ ಹನಿಗವನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ‘ಸಮಯ ಓಡೋದಿಲ್ಲ. ಓಡೋದು ನಾವು. ನಮಗೆ ಅವಸರ, ಈ ವರ್ಷ ಇನ್ನೂ ಯಾಕೆ ಹೋಗಿಲ್ಲ ಅನಿಸಿಬಿಟ್ಟಿದೆ. ಕೊರೊನಾ ಸಂಕಟ 2020 ಮುಗಿದರೆ ಸಾಕು ಅನಿಸಿಬಿಟ್ಟಿತು. ಅಂತೂ ಇಂತೂ ಮುಗಿಯಿತು 2020’ ಎನ್ನುತ್ತಲೇ ತಮ್ಮ ಹನಿ ಚುಟುಕಗಳ ಗುಟುಕನ್ನು ಕೇಳುಗರಿಗೆ ಉಣಬಡಿಸಿದರು ಡುಂಡಿರಾಜ್. ಜೊತೆಗೆ ಆನ್‌ಲೈನ್‌ನಲ್ಲಿ ದೇವರದರ್ಶನ ಕುರಿತ ಪ್ರಸ್ತಾಪ ಮಾಡುತ್ತಾ ಅದರಲ್ಲೂ ಒಂದು ಹನಿಗವನ ಕಟ್ಟಿ ಹಾಡಿದರು. ಆನ್‌ಲೈನ್‌ನಲ್ಲಿ ಗಣನಾಯಕನಿಗೆ ಕಿರುಕಾಣಿಕೆ ಅರ್ಪಿಸಿದರು ಕವನದ ಮೂಲಕ.

ನಿರ್ವಿಘ್ನವಾಗಿ ನೆರವೇರಿಸು ಎಲ್ಲ ಕೆಲಸ ಕಾರ್ಯ

ಗಣನಾಯಕ ನಿನಗೆ ಪಂಚಕಜ್ಜಾಯ....

ಎನ್ನುತ್ತಾ 2021ರನ್ನು ಬರಮಾಡಿಕೊಳ್ಳೋಣ,. ಇದು ಎಲ್ಲರಿಗೂ ಸವಿಸವಿಯಾಗಿರಲಿ ಎಂದು ಆಶಿಸಿದರು. ಮುಂದೆ ಕರ್ಣನಿಗೆ ಪರಶುರಾಮ ನೀಡಿದ ಶಾಪದ ಕುರಿತ ಪ್ರಸಂಗವನ್ನು ಇಂದಿನ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿ ಒಂದು ಹನಿಗವನ ರಚಿಸಿ ವಾಚಿಸಿದ್ದು ಬಹಳ ಅದ್ಭುತವಾಗಿತ್ತು.

ಚೌಡಿಕೆ ಹಾಡಿನ ಘಮಲು!

ಚೌಡಿಕೆ ಪದ ಜಾನಪದ ಶೈಲಿಯ ವಿಶಿಷ್ಟ ಹಾಡುಗಾರಿಕೆಯಲ್ಲೊಂದು. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಯಲ್ಲಮ್ಮವಾಡಿಯ ಚೌಡಿಕೆ ಪದ ಕಲಾವಿದೆಯರು ನಡೆಸಿಕೊಟ್ಟ ಕಾರ್ಯಕ್ರಮ ವಿಭಿನ್ನ ಅನುಭವ ನೀಡಿತು. ಕಲಾವಿದೆಯರಾದ ರಾಧಾಬಾಯಿ, ಲಕ್ಷ್ಮೀಬಾಯಿ, ವಿಮಲಾಬಾಯಿ ಹಾಗೂ ಸೋನಾಬಾಯಿ ಇವರು, ಆರಂಭದಲ್ಲಿ ದೇವಿ ಸ್ತುತಿ ಮಾಡುತ್ತಾ ‘ನಮೊ ನಮೊ ರೇಣುಕಾದೇವಿ.. ದೇವಿ ಮಾಡುವೆ ನಿನ್ನ ಸ್ತುತಿ..’ ಎನ್ನುತ್ತಾ ಜಾನಪದ ವಾದ್ಯ ನುಡಿಸುತ್ತಾ ಹಾಡಿದ್ದು ಸೊಗಸಾಗಿತ್ತು.


ರಾಧಾಬಾಯಿ ನೇತೃತ್ವದ ಚೌಡಿಕೆ ಕಲಾವಿದೆಯರು

ಈ ಮಣ್ಣಿನ ಘಮಲನ್ನು ಹಾಡಿನ ಹೊನಲಾಗಿ ಹರಿಸಿದ ಈ ಕಲಾವಿದೆಯರು ಫೇಸ್‌ಬುಕ್‌ ಸರಣಿ ಕಾರ್ಯಕ್ರಮದಲ್ಲಿ ಸುಮಾರು ಮುಕ್ಕಾಲು ತಾಸು ಮನತಣಿಸಿದರು.

ಚಿಟ್‌ಮೇಳದ ಸೊಬಗು!

ಚಿಟ್‌ಮೇಳ ವಿಶಿಷ್ಟ ಜಾನಪದ ವಾದ್ಯ ಕಲೆ. ಹಬ್ಬಹರಿದಿನಗಳಲ್ಲಿ, ಜಾತ್ರೆ ಸಂದರ್ಭದಲ್ಲಿ ಶ್ರುತಿ, ಲಯ, ತಾಳದೊಂದಿಗೆ ನುಡಿಸುವ ಈ ವಾದ್ಯಕಲೆಗೆ ಜಾನಪದ ಅಕಾಡೆಮಿ ಉತ್ತಮ ಸ್ಥಾನಮಾನ ದೊರಕಿಸಿಕೊಟ್ಟಿದೆ. ಹೊಸ ವರ್ಷವೆಂದರೆ ಹೊಸ ಸಂಭ್ರಮ. ಸೂಕ್ಷ್ಮ ಸಂವೇದನೆಯನ್ನು ಚಿಮ್ಮಿಸುವ ಈ ಗಳಿಗೆ ಎಂದಿನಂತೆ ಇರಲಿಲ್ಲ, ಸಂಕಟ, ಸಂಕಷ್ಟಗಳ ನಡುವೆ ಮನಸ್ಸಿಗೆ ಆಹ್ಲಾದದ ಸಿಂಚನ ನೀಡಿದ್ದು ಅರಸೀಕೆರೆಯ ಕುಮಾರಯ್ಯ ಮತ್ತು ತಂಡದವರು ನಡೆಸಿಕೊಟ್ಟ ದೇಶೀ ವಾದ್ಯಗಳ ಚಿಟ್‌ಮೇಳ. ಮಧ್ಯರಾತ್ರಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾ ಕಾರ್ಯಕ್ರಮವನ್ನು ವಿಭಿನ್ನವಾಗಿ ನಡೆಸಿಕೊಟ್ಟರು.

ಸುಮಾ ಪ್ರಸಾದ್‌ ಚಿಕ್ಕಮಗಳೂರು ನಿರೂಪಣೆ ಅಚ್ಚುಕಟ್ಟಾಗಿತ್ತು. ಕಾರ್ಯಕ್ರಮ ವಿನ್ಯಾಸ ಮತ್ತು ಸಂಘಟನೆ ಶ್ರೀನಿವಾಸ್‌ ಜಿ. ಕಪ್ಪಣ್ಣ ಅವರದಾಗಿದ್ದು ಎಂದೂ ಮರೆಯದ ಅನುಭವ ನೀಡಿತು.

ಸುಗಮ ಸಂಗೀತ ಸಿಂಚನ

ಸಂಗೀತ ಜಾಗತಿಕ ಭಾಷೆ. ಚಿಕ್ಕಮಗಳೂರಿನಂಥ ಮಲೆನಾಡಿನ ಸಂಗೀತ ಪ್ರತಿಭೆ ಸೌಮ್ಯಕೃಷ್ಣ ಅಮೆರಿಕದ ವರ್ಜೀನಿಯಾದಲ್ಲಿ ಕುಳಿತು ಜಗತ್ತಿನ ಸಹೃದಯರಿಗೆ ಸುಗಮ ಸಂಗೀತ ಸಿಂಚನ ನೀಡಿದ್ದು ಮರೆಯಲಾಗದ ಅನುಭವ ನೀಡಿತು.

ಬದುಕಿನೊಳಗೆ ಕಾವ್ಯ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ಕವಿಗಳು ಕವಿತೆ ಮೂಲಕ ಸಾರಿದ್ದಾರೆ. ಅದನ್ನು ಗಾನದ ಮೂಲಕ ಅಭಿವ್ಯಕ್ತಿಸಿದ್ದು ಸೌಮ್ಯ. ಸಂಗೀತ ನಿರ್ದೇಶಕಿ ಜಯಶ್ರೀ ಅರವಿಂದ ಅವರ ಸಂಯೋಜನೆಯ ಕುವೆಂಪು ಅವರ ಕವನ ‘ನಿನ್ನಬಾಂದಳದಂತೆ ನನ್ನ ಮನವಿರಲಿ...’ ಹಾಡು ಇಂಪಾಗಿತ್ತು. ಮುಂದೆ ‘ಇಳಿದು ಬಾ ತಾಯೆ ಇಳಿದು ಬಾ..’, ‘ನನ್ನ ಇನಿಯನ ಮನವ ಬಲ್ಲೆಯೇನೆ?’ ಕವನ, ಸಿ. ಅಶ್ವಥ್‌ ಸಂಗೀತ ಸಂಯೋಜನೆಯ ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟರ ರಚನೆ ‘ಯಾರು ಜೀವವೆ ಯಾರು ಬಂದವರು ಭಾವನೆಗಳನೇರಿ...’, ಎಚ್‌.ಕೆ. ನಾರಾಯಣ ಅವರ ಸಂಗೀತ ಸಂಯೋಜನೆಯ ಹಾಡು ‘ಶತಮಾನದಿಂದ ಹತಭಾಗ್ಯರಾಗಿ ಕೆಳ ಉರುಳಿಬಿದ್ದ ಜನವೇ..’ ಎಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿ ವಿಶಿಷ್ಟ ಅನುಭೂತಿ ಸೃಷ್ಟಿಸಿತ್ತು.

ಹಳೆಯ ಸಿನಿಮಾ ಹಾಡುಗಳನ್ನು ಕೇಳಿದರೆ ಮತ್ತೆ ಮತ್ತೆ ಗುನುಗುನಿಸುವಂತಿರುತ್ತದೆ. ರಾತ್ರಿ 10ಕ್ಕೆ ‘ಇಂಪು’ ಸಂಗೀತ ಸಂಸ್ಥೆಯ ಶೈಲಜಾ, ಎಚ್‌.ಆರ್‌.ಕೆ. ಪ್ರಸಾದ್‌, ಮತ್ತು ಕಿಶೋರ್‌ ಹಾಡಿರುವ ಹಳೆಯ ಕನ್ನಡ ಚಿತ್ರಗೀತೆಗಳು ಕೊರೊನಾ ಸಂಕಟದ ನೋವಿನ ಅಲೆಯಲ್ಲೂ ತಂಗಾಳಿಯ ಸೆಲೆಯಾಗಿ ಹೊರಹೊಮ್ಮಿದ್ದು ಮರೆಯಲಾಗದ ಅನುಭವ.!

ಒಂದೇ ವೃಕ್ಷದ ಕೊಂಬೆಗಳು...!

ಹಿರಿಯ ಕವಿ ಜಿ.ಎಸ್‌. ಶಿವರುದ್ರಪ್ಪ ಅವರ ಜನಪ್ರಿಯ ಕವನ ‘ಒಂದೇ ವೃಕ್ಷದ ಕೊಂಬೆಗಳು ನಾವ್‌ ಒಂದೇ ಬಳ್ಳಿಯ ಹೂವುಗಳು..’ ಸಮಯೋಜಿತ ಹಾಡೇ ಸರಿ. ಈ ಕವನವನ್ನು ನೃತ್ಯದ ಮೂಲಕ ಪ್ರದರ್ಶಿಸಿದವರು ಭಾರತ್‌ ನಗರದ ದೀಪಾ ಅಂಧ ಮಕ್ಕಳ ಶಾಲೆಯ ಸದಸ್ಯೆಯರು. ಅದೂ ರಾತ್ರಿ 11 ಗಂಟೆಗೆ. ಈ ವಿಶೇಷ ನೃತ್ಯ ರೂಪಕಕ್ಕೆ ಕೊರಿಯೊಗ್ರಫಿ ಮತ್ತು ನಿರ್ದೇಶನ ಸುಪರ್ಣಾ ವೆಂಕಟೇಶ್‌ ಅವರದು ಹಾಗೂ ತಾಂತ್ರಿಕ ನಿರ್ದೇಶನ ಸಾಯಿ ವೆಂಕಟೇಶ್‌ ನೀಡಿದ್ದರು. ಸಿ. ಅಶ್ವಥ್‌ ಸಂಗೀತ ಸಂಯೋಜನೆಯ ಈ ನೃತ್ಯದ ನಿರೂಪಣೆ ಸುಷ್ಮಾ. ನಿರ್ಮಾಣ ಶಾಂತಾರಾಮ್ ಅವರದಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು