ಮಂಗಳವಾರ, ಮೇ 24, 2022
23 °C

ಕನ್ನಡವೆಂಬ ಜ್ಞಾನದ ಭಾಷೆ

ಜಿ.ಎನ್. ದೇವಿ Updated:

ಅಕ್ಷರ ಗಾತ್ರ : | |

Deccan Herald

ಕೇಂದ್ರ ಗೃಹ ಸಚಿವಾಲಯವು ಪ್ರತಿ ಹತ್ತು ವರ್ಷಗಳಿಗೊಮ್ಮೆ ದೇಶದಲ್ಲಿ ಜನಗಣತಿ ನಡೆಸುತ್ತದೆ. ಇದರಲ್ಲಿ ಭಾಷೆಗಳ ಗಣತಿ ಕೂಡ ಸೇರಿದೆ. ಇದೊಂದು ಬೃಹತ್ ಪ್ರಕ್ರಿಯೆ. ಜನಗಣತಿ ಮೂಲಕ ಕಂಡುಕೊಳ್ಳುವ ಸಂಗತಿಗಳು ಎಷ್ಟರಮಟ್ಟಿಗೆ ನಿಖರ ಎನ್ನುವ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಎತ್ತಬಹುದು. ಹೀಗಿದ್ದರೂ, ಭಾರತದ ಪ್ರತಿ ಭಾಷೆಯ ಸ್ಥಾನ ಎಲ್ಲಿದೆ ಎಂಬುದನ್ನು ಸೂಚಿಸುವ ವಿಶ್ವಾಸಾರ್ಹ ಅಂಕಿ-ಅಂಶಗಳನ್ನು ಈ ಜನಗಣತಿ ನಮಗೆ ಕೊಡುತ್ತದೆ.

ಕಡೆಯ ಬಾರಿಗೆ ಇಂತಹ ಗಣತಿ ನಡೆದಿದ್ದು 2011ರಲ್ಲಿ. ಭಾರತದ ಒಟ್ಟು 4,37,06,512 (4.37 ಕೋಟಿ) ಜನ ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಈ ಗಣತಿ ಕಂಡುಕೊಂಡಿತು. ತನ್ನನ್ನು ಹೊರತುಪಡಿಸಿಯೂ, ತನ್ನ ಮಾತೃಭಾಷೆಯೇ ‘ನಮ್ಮದು ಕೂಡ’ ಎಂದು ಹೇಳಿಕೊಳ್ಳುವವರ ಸಂಖ್ಯೆ 4.37 ಕೋಟಿಗಿಂತ ಹೆಚ್ಚು ಎಂಬುದು ಗೊತ್ತಾದಾಗ ಹೆಮ್ಮೆಯಾಗುವುದು ಸಹಜ. 2001ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಕನ್ನಡ ಮಾತನಾಡುವವರ ಬೆಳವಣಿಗೆ ಪ್ರಮಾಣ ಶೇಕಡ 16ರಷ್ಟು (ನಿಖರವಾಗಿ ಹೇಳಬೇಕೆಂದರೆ, ಅದು ಶೇಕಡ 15.99ರಷ್ಟು). ಇದು ಕೂಡ ಮೇಲ್ನೋಟಕ್ಕೆ ಒಳ್ಳೆಯ ಚಿತ್ರಣವನ್ನೇ ನೀಡುತ್ತದೆ.

ಕನ್ನಡ ಮಾತನಾಡುವವರು ಎಂದು ಜನಗಣತಿ ನೀಡಿರುವ ಅಂಕಿ-ಅಂಶಗಳಲ್ಲಿ ಬಡಗ ಭಾಷಿಗರು (1,33,550 ಜನ), ಕುರುಂಬ ಭಾಷಿಗರು (24,189 ಜನ), ‘ಇತರ ಭಾಷಿಗರು’ (30,244 ಜನ) ಕೂಡ ಸೇರಿದ್ದಾರೆ. ಹಾಗೆಯೇ, ಜನಗಣತಿಯು ‘ಪ್ರಾಕೃತ’ (?) ಎಂದು ಕರೆದಿರುವ 12,257 ಜನ ಕೂಡ ಸೇರಿದ್ದಾರೆ. ಇವನ್ನೆಲ್ಲ ಪರಿಗಣಿಸಿದಾಗ, ಕನ್ನಡವನ್ನೇ ಮಾತನಾಡುವವರ ಸಂಖ್ಯೆ 4,35,06,272ಕ್ಕೆ (4.35 ಕೋಟಿ) ಇಳಿಯುತ್ತದೆ. ‘ಹಾಗಾದರೆ ಸಮಸ್ಯೆ ಏನು? ನಾಲ್ಕು ಕೋಟಿ ಮೂವತ್ತೈದು ಲಕ್ಷಕ್ಕಿಂತ ಕಡಿಮೆ ಜನ ಮಾತನಾಡುವ ಬೇರೆ ಭಾಷೆಗಳು ಸಾಕಷ್ಟಿವೆ’ ಎಂದು ಕೆಲವರು ಹೇಳಬಹುದು. ಈ ಅಂಕಿ-ಅಂಶಗಳನ್ನು ಕರ್ನಾಟಕದ ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡಿದಾಗ ಪರಿಸ್ಥಿತಿಯ ಸ್ವರೂಪ ಸ್ಪಷ್ಟವಾಗಿ ಕಾಣಿಸುತ್ತದೆ. 2011ರಲ್ಲಿ ಕರ್ನಾಟಕದ ಜನಸಂಖ್ಯೆ 6,11,30,272 (6.11 ಕೋಟಿ) ಎಂದು ಅದೇ ಜನಗಣತಿ ಹೇಳಿದೆ. ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕೆಂದರೆ, ಕರ್ನಾಟಕದ ಪ್ರತಿ 611 ಜನರ ಪೈಕಿ 350 ಜನರಿಗೆ ಕನ್ನಡ ಮಾತೃಭಾಷೆ, ಇನ್ನುಳಿದ 261 ಜನರ ಮಾತೃಭಾಷೆಗಳು ಬೇರೆ ಬೇರೆ. ಈ 261ರಲ್ಲಿ ಬಹುಪಾಲು ಜನ ಕನ್ನಡವನ್ನು ತಮ್ಮ ಎರಡನೆಯ ಭಾಷೆಯನ್ನಾಗಿ ಬಳಸುತ್ತಾರಾ ಎಂಬುದು ಖಚಿತವಿಲ್ಲ. ಅಲ್ಲದೆ, ವ್ಯಕ್ತಿಯೊಬ್ಬ ಒಂದು ಭಾಷೆಯನ್ನು ತನ್ನ ಮಾತೃಭಾಷೆಯನ್ನಾಗಿ ಬಳಸುವುದಕ್ಕೂ, ಅದನ್ನು ತನ್ನ ಎರಡನೆಯ ಭಾಷೆಯನ್ನಾಗಿ ಬಳಸುವುದಕ್ಕೂ ವ್ಯತ್ಯಾಸ ಇದೆ.

ಕನ್ನಡವನ್ನು ಬೇರೆ ಭಾಷೆಗಳ ಜೊತೆ ಹೋಲಿಕೆ ಮಾಡಿ ನೋಡಿದರೆ: ಕನ್ನಡವು 1971ರಲ್ಲಿ 9ನೆಯ ಸ್ಥಾನದಲ್ಲಿ ಇತ್ತು, ದೇಶದ ಒಟ್ಟು ಜನಸಂಖ್ಯೆಯ ಶೇಕಡ 3.98ರಷ್ಟು ಪಾಲನ್ನು ಪಡೆದಿತ್ತು ಎಂಬುದು ಗೊತ್ತಾಗುತ್ತದೆ. 1981ರಲ್ಲಿ ಎಂಟನೆಯ ಸ್ಥಾನಕ್ಕೆ ಏರಿದರೂ, ಕನ್ನಡವು ಒಟ್ಟು ಜನಸಂಖ್ಯೆಯ ಶೇಕಡ 3.86ರಷ್ಟು ಪಾಲನ್ನು ಮಾತ್ರ ಪಡೆದುಕೊಂಡಿತ್ತು. 2001ರಲ್ಲಿ ಎಂಟನೆಯ ಸ್ಥಾನದಲ್ಲೇ ಉಳಿದ ಕನ್ನಡ, ಒಟ್ಟು ಜನಸಂಖ್ಯೆಯಲ್ಲಿ ಶೇಕಡ 3.69ರಷ್ಟು ಪಾಲು ಪಡೆಯಿತು. 2011ರಲ್ಲಿ ಕೂಡ 8ನೇ ಸ್ಥಾನದಲ್ಲಿ ಉಳಿದ ಕನ್ನಡ, ಒಟ್ಟು ಜನಸಂಖ್ಯೆಯಲ್ಲಿ ಶೇಕಡ 3.61ರಷ್ಟು ಪಾಲನ್ನು ಪಡೆದಿದೆ. ಅಂದರೆ 1961ರಿಂದ 2011ರ ನಡುವಿನ ಅವಧಿಯಲ್ಲಿ ಕನ್ನಡ ಮಾತನಾಡುವವರ ಪ್ರಮಾಣದಲ್ಲಿ ಶೇಕಡ 0.37ರಷ್ಟು ಕಡಿಮೆ ಆಗಿದೆ.

ಇದು ಸಣ್ಣ ಪ್ರಮಾಣ ಎಂದು ಅನಿಸಬಹುದು. ಆದರೆ, ಇಂದಿನ ಭಾರತದ ಜನಸಂಖ್ಯೆಯಲ್ಲಿ ಶೇಕಡ 0.37 ಅಂದರೆ ಅಂದಾಜು 50 ಲಕ್ಷ ಜನ ಎಂಬುದನ್ನು ಅರ್ಥ ಮಾಡಿಕೊಂಡಾಗ, ಕನ್ನಡದ ಪಾಲಿಗೆ ಎಲ್ಲವೂ ಒಳ್ಳೆಯದೇ ಆಗಿದ್ದಿದ್ದರೆ ಇಂದು ಈಗಿರುವುದಕ್ಕಿಂತ 50 ಲಕ್ಷದಷ್ಟು ಹೆಚ್ಚು ಜನ ಕನ್ನಡ ಮಾತನಾಡುತ್ತಿರುತ್ತಿದ್ದರು ಎನ್ನುವುದು ಗೊತ್ತಾಗುತ್ತದೆ.

ಕನ್ನಡವನ್ನು ಹಿಂದಿಯ ಜೊತೆ ಹೋಲಿಕೆ ಮಾಡಿ ನೋಡಿದಾಗ, ಕನ್ನಡದ ಕುಸಿತದ ಪರಿಸ್ಥಿತಿ ಹೆಚ್ಚು ಅರ್ಥವಾಗುತ್ತದೆ. 1961ರಲ್ಲಿ ದೇಶದಲ್ಲಿ ಹಿಂದಿ ಮಾತನಾಡುವ ಜನರ ಸಂಖ್ಯೆ 20,27,67,971 (20.27 ಕೋಟಿ) ಆಗಿತ್ತು. 1971ರಲ್ಲಿ ಅದು 25,77,49,009ಕ್ಕೆ (25.77 ಕೋಟಿ), 1991ರಲ್ಲಿ 32,95,05,193ಕ್ಕೆ (32.95 ಕೋಟಿ) ಹೆಚ್ಚಳ ಕಂಡಿತು. 2001ರಲ್ಲಿ 42,20,48,642 (42.20 ಕೋಟಿ) ಆಯಿತು. 2011ರ ಜನಗಣತಿಯ ಪ್ರಕಾರ ಹಿಂದಿ ಭಾಷಿಗರ ಸಂಖ್ಯೆ 52.83 ಕೋಟಿ. ಅಂದರೆ, ಅದೇ ಐವತ್ತು ವರ್ಷಗಳ ಅವಧಿಯಲ್ಲಿ ಹಿಂದಿ ಮಾತನಾಡುವವರ ಪ್ರಮಾಣ ಶೇಕಡ 260ರಷ್ಟಕ್ಕೆ ಏರಿದೆ. ಅಂದರೆ 1961ರಲ್ಲಿ 20.27 ಕೋಟಿ ಇದ್ದ ಹಿಂದಿ ಭಾಷಿಗರ ಸಂಖ್ಯೆ 2011ರ ವೇಳೆಗೆ 52.83 ಕೋಟಿ ಆಗಿದೆ.

1961ರಲ್ಲಿ ಕನ್ನಡ ಭಾಷಿಗರ ಸಂಖ್ಯೆ 2.17 ಕೋಟಿ ಎಂದು ಹೇಳಲಾಗಿತ್ತು. ಹಿಂದಿಯಂತೆಯೇ ಶೇಕಡ 260ರಷ್ಟಕ್ಕೆ ಬೆಳವಣಿಗೆ ಸಾಧಿಸಬೇಕಿದ್ದಿದ್ದರೆ, 2011ರಲ್ಲಿ ಕನ್ನಡ ಭಾಷಿಗರ ಸಂಖ್ಯೆ 5.64 ಕೋಟಿ ಆಗಿರಬೇಕಿತ್ತು. ಆದರೆ, ಬೇಸರದ ಸಂಗತಿಯೆಂದರೆ ಕನ್ನಡ ಭಾಷಿಗರ ಸಂಖ್ಯೆ 4.35 ಕೋಟಿ ಮಾತ್ರ.

ಈ ಸಂದರ್ಭದಲ್ಲಿ ಕನ್ನಡದ ಭವಿಷ್ಯದ ಬಗ್ಗೆ ಗಂಭೀರ ಅವಲೋಕನ ನಡೆಯಬೇಕು. ಭಾಷೆಗಳ ಬೆಳವಣಿಗೆ, ಕುಸಿತಗಳೆಲ್ಲ ಶುದ್ಧ ಗಣಿತದ ಸೂತ್ರಗಳಿಗೆ ಅನುಗುಣವಾಗಿ ನಡೆಯುವುದಿಲ್ಲವಾದರೂ, ರಾಷ್ಟ್ರಮಟ್ಟದಲ್ಲಿ ಹಿಂದಿಯನ್ನು ಮುಂದಕ್ಕೆ ತರುವ ಕೆಲಸ ಇಷ್ಟೇ ತೀವ್ರಗತಿಯಲ್ಲಿ ನಡೆದರೆ, ಇನ್ನು ನೂರು ವರ್ಷಗಳಲ್ಲಿ ಕನ್ನಡ ಅಪಾಯಕ್ಕೆ ಸಿಲುಕಲಿದೆ. ಇದು ಅಂದಾಜು ಲೆಕ್ಕಾಚಾರ ಮಾತ್ರ ಎಂಬ ಎಚ್ಚರಿಕೆಯ ಮಾತನ್ನು ನಾನು ಇಲ್ಲಿ ಹೇಳಬೇಕು.

ಒಂದು ಭಾಷೆಯ ಭವಿಷ್ಯವನ್ನು ನಿರ್ಧರಿಸುವಾಗ ಇತರ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳನ್ನೂ ಪರಿಗಣಿಸಬೇಕು. ಹಿಂದಿಗೆ ಸಂಬಂಧಿಸಿದ ಜನಗಣತಿ ಅಂಕಿ-ಅಂಶಗಳನ್ನು ಪ್ರತಿ ಬಾರಿಯೂ ತಿರುಚಲಾಗುವ ಕಾರಣ, ಹಿಂದಿ ಭಾಷಿಗರ ಸಂಖ್ಯೆಯಲ್ಲಿ ಸಾಮಾನ್ಯವಾಗಿ ತೀವ್ರ ಹೆಚ್ಚಳ ಕಂಡುಬರುತ್ತದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಛತ್ತೀಸಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿನ 48 ಇತರ ಭಾಷೆಗಳನ್ನು ಮಾತನಾಡುವ ಜನರನ್ನೂ ಹಿಂದಿ ಭಾಷಿಗರು ಎಂದೇ ಪರಿಗಣಿಸುವ ಮೂಲಕ ಹಿಂದಿ ಮಾತನಾಡುವವರ ಸಂಖ್ಯೆಯನ್ನು ಹೆಚ್ಚು ಮಾಡಿ ತೋರಿಸಲಾಗುತ್ತದೆ. ಆದರೆ, ಈ ಭಾಷೆ ಮಾತನಾಡುವವರನ್ನು ಹಿಂದಿ ಗುಂಪಿನಿಂದ ಹೊರಗಿರಿಸಿದರೂ, ಹಿಂದಿ ಭಾಷಿಗರ ಸಂಖ್ಯೆ 2011ರ ಜನಗಣತಿ ಅನ್ವಯ 41 ಕೋಟಿ ಆಗಿರುತ್ತದೆ.

ಬೇರೆ ಕಡೆಗಳಿಂದ ಜನ ವಲಸೆ ಬರುವುದಕ್ಕೆ ಉತ್ತೇಜನ ನೀಡುವ ಹೆಚ್ಚಿನ ಆರ್ಥಿಕ ಅಭಿವೃದ್ಧಿಯನ್ನು ಕಂಡ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಭಾಷೆಯ ಬಗ್ಗೆ ನಮಗೆ ಪ್ರೀತಿ ಇದ್ದರೂ, ಜನ ಬೇರೆ ಕಡೆಗಳಿಂದ ಬರುವುದನ್ನು ನಮ್ಮ ಸಂಸ್ಕೃತಿಗೆ ಅಪಾಯ ಎಂಬಂತೆ ಕಾಣುವುದು ವಿವೇಕಯುತ ಆಗುವುದಿಲ್ಲ. ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಯಿಂದ ಕೆಲವು ವಿಚಾರಗಳನ್ನು ನಾವು ಕಲಿತುಕೊಳ್ಳಬೇಕು. ಈ ಮೂರು ದೇಶಗಳಲ್ಲಿ ದೊಡ್ಡ ಸಂಖ್ಯೆಯ ಜನ ದೇಶದ ಪ್ರಮುಖ ಭಾಷೆಗಳನ್ನು ಮಾತನಾಡುವುದಿಲ್ಲ. ಹೀಗಿದ್ದರೂ, ಇಂಗ್ಲಿಷ್‌ ಮತ್ತು ಜರ್ಮನ್ ಭಾಷೆಗಳ ಬೆಳವಣಿಗೆಗೆ ಧಕ್ಕೆಯಾಗಿಲ್ಲ. ಮರಾಠಿ ಬಗೆಗಿನ ಪ್ರೀತಿ ಎಂಬಂತೆ ಕಾಣಿಸುವ ಗುಣದ ನೆಪದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಋಣಾತ್ಮಕ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದೆ. ಮಹಾರಾಷ್ಟ್ರದಲ್ಲಿ ಅನ್ಯಭಾಷಿಗರ ಮೇಲೆ ದಾಳಿ ನಡೆಸುವುದಕ್ಕೆ ಎಂಎನ್‌ಎಸ್‌ ಪ್ರಚೋದನೆ ನೀಡುತ್ತಿದೆ. ಆದರೆ, ಇದರಿಂದ ಭಾಷೆ ಬೆಳೆಯುವುದಿಲ್ಲ. ಹೀಗೆ ಮಾಡುವುದರಿಂದ ಸಂಸ್ಕೃತಿ ಇನ್ನಷ್ಟು ಸಂಕುಚಿತಗೊಳ್ಳಬಹುದಷ್ಟೇ. ಕನ್ನಡ ಬೆಳೆಯಬೇಕು ಎಂದಾದರೆ, ನಾವು ಇದನ್ನು ಜ್ಞಾನದ ಭಾಷೆಯನ್ನಾಗಿ ಮಾಡಲು ಇನ್ನಷ್ಟು ಶ್ರಮ ಹಾಕಬೇಕು. ಸದ್ಯದ ಸ್ಥಿತಿಯಲ್ಲಿ ಕನ್ನಡವು ಜಾಗತಿಕ ಮಟ್ಟದಲ್ಲಿ 27ನೆಯ ಸ್ಥಾನದಲ್ಲಿ ಇದೆ. ಕನ್ನಡಕ್ಕಿಂತ ಮುಂದೆ ಇರುವ ಭಾರತದ ಭಾಷೆಗಳ ಸಾಲಿನಲ್ಲಿ ಹಿಂದಿ, ಬಂಗಾಳಿ, ತೆಲುಗು, ತಮಿಳು, ಮರಾಠಿ, ಪಂಜಾಬಿ, ಗುಜರಾತಿ, ಉರ್ದು, ಮಲಯಾಳ ಸೇರಿವೆ. ಜಾಗತಿಕ ಭಾಷೆಗಳಿಗೆ ಎದುರಾಗಿ ನಿಲ್ಲಲು ಕನ್ನಡವು ಭಾರತದ ಈ ಭಾಷೆಗಳ ಜೊತೆ ಸಮಾನ ಹಿತಾಸಕ್ತಿಗಳನ್ನು ಗುರುತಿಸಿಕೊಳ್ಳಬೇಕು. ತನ್ನಲ್ಲಿ ಜ್ಞಾನದ ಸೃಷ್ಟಿ ಹೆಚ್ಚಿಸಲು ದಾರಿಗಳನ್ನು ಹುಡುಕಿಕೊಳ್ಳಬೇಕು. ದೊಡ್ಡ ಮಟ್ಟದಲ್ಲಿ ಅನುವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸಲು ಮುಕ್ತವಾಗಬೇಕು.

ಪುಟ್ಟ ದ್ವೀಪದ ಭಾಷೆ ಇಂಗ್ಲಿಷ್, ಎಲ್ಲ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವ ಹಸಿವಿನ ಮೂಲಕ ವೈಶ್ವಿಕ ಭಾಷೆಯಾಗಿ ಬೆಳೆದಿದೆ. ಬೇರೆ ರಾಜ್ಯಗಳ ಮಕ್ಕಳಿಗಾಗಿ ದ್ವಿಭಾಷಾ ಶಾಲೆಗಳನ್ನು ಆರಂಭಿಸುವುದು ಕನ್ನಡದ ದೃಷ್ಟಿಯಿಂದ ಒಳ್ಳೆಯದು. ‘ಕನ್ನಡದ ಬಳಕೆಯಲ್ಲಿರುವ ಇಂಗ್ಲಿಷ್ ಪದಗಳು’ ಎಂಬ ಪದಕೋಶವನ್ನು ರಚಿಸಿ, ‘ಭಾಷೆ ಕಲುಷಿತವಾಗುತ್ತದೆ’ ಎನ್ನುವ ಸಾಂಸ್ಕೃತಿಕ ರೋಗವನ್ನು ನಿವಾರಿಸಬೇಕು. ಅಷ್ಟಕ್ಕೂ, ನಮ್ಮದು ಸಹಸ್ರಾರು ವರ್ಷಗಳ ಇತಿಹಾಸ ಇರುವ ಭಾಷೆ. ಈ ಭಾಷೆಗೆ ಬಹಳ ಶ್ರೀಮಂತವಾದ ತತ್ವಶಾಸ್ತ್ರೀಯ ಹಾಗೂ ಸಾಹಿತ್ಯಕ ಪರಂಪರೆ ಕೂಡ ಇದೆ. ಮುಂದಿನ ನೊಬೆಲ್‌ ಪ್ರಶಸ್ತಿ ಪಡೆಯುವ ಭಾರತದ ಲೇಖಕ ಕನ್ನಡದವನೇ ಆಗಿರುತ್ತಾನೆ ಎಂದು ನಾನು ಮೊದಲಿಂದಲೂ ಹೇಳುತ್ತಿದ್ದೇನೆ. ಇದು ಸಾಧ್ಯವಾಗಬೇಕು ಎಂದಾದರೆ, ನಾವು ಹಿಂದಿ ವಸಾಹತುಶಾಹಿಯಿಂದ ರಕ್ಷಿಸಿಕೊಳ್ಳಬೇಕು. ಅನುವಾದವನ್ನು ಉತ್ತೇಜಿಸಬೇಕು.

ಇಂಗ್ಲಿಷಿನಿಂದ ಕನ್ನಡಕ್ಕೆ: ವಿಜಯ್ ಜೋಷಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು