ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಾರಿದ ಬೆಂಗಳೂರು: 2023ರ ವರೆಗಿಲ್ಲ ಪರಿಹಾರ

ಗರಿಷ್ಠ ಮಟ್ಟ ತಲುಪಿದ ನೀರು ಬಳಕೆ; ಕೈಚೆಲ್ಲುವ ಜಲಮಂಡಳಿ
Last Updated 3 ಮೇ 2019, 20:15 IST
ಅಕ್ಷರ ಗಾತ್ರ

ಈ ಬೇಸಿಗೆಗೆ ನಗರದ ಬಾಯಾರಿಕೆ ನೀಗಿಸಲು ಆಗದ ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕೈಚೆಲ್ಲುವ ಸಾಧ್ಯತೆಯೇ ಹೆಚ್ಚಿದೆ. ಏಕೆಂದರೆ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಮಂಡಳಿಯ ಆತಂಕವನ್ನು ಹೆಚ್ಚಿಸಿದೆ. ಅಂತರ್ಜಲ ಕುಸಿತ ಮತ್ತು ಬತ್ತಿದ ಕೊಳವೆ ಬಾವಿಗಳು ಪರಿಸ್ಥಿತಿ ಬಿಗಡಾಯಿಸಲು ಕಾರಣ ಎನ್ನುತ್ತಿದೆ ಮಂಡಳಿ.

ಇದೇ ಮೊದಲ ಬಾರಿಗೆ ಬೇಸಿಗೆಯ ಆರಂಭದ ಮೊದಲ ಎರಡು ತಿಂಗಳಲ್ಲಿಯೇ ಬಿಡಬ್ಲ್ಯೂಎಸ್‌ಎಸ್‌ಬಿ ನಗರದಲ್ಲಿ ಗರಿಷ್ಠ ಪ್ರಮಾಣದ ನೀರು ಪೂರೈಸಿದೆ. ಮೇ ತಿಂಗಳಲ್ಲಿ ಬಿಸಿಲು ಪ್ರಖರಗೊಳ್ಳುವ ಸಾಧ್ಯತೆ ಇರುವುದರಿಂದ ನೀರಿನ ಬೇಡಿಕೆಯೂ ಹೆಚ್ಚುವ ನಿರೀಕ್ಷೆ ಇದೆ. ಇದು ಮಂಡಳಿಯ ನಿಜವಾದ ಆತಂಕ. ಪರ್ಯಾಯಕ್ಕಾಗಿ ಮಂಡಳಿ ಪರದಾಡುತ್ತಿದೆ.

ನಗರದಲ್ಲಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನೀರಿನ ಬೇಡಿಕೆಯೂ ಗರಿಷ್ಠಮಟ್ಟ ತಲುಪಿದೆ. ಪ್ರತಿದಿನ ಸರಾಸರಿ 1,453 ಎಂಎಲ್‌ಡಿ (ಮಿಲಿಯನ್‌ ಲೀಟರ್‌ ಪರ್‌ ಡೇ. ಅಂದರೆ ದಿನವೊಂದಕ್ಕೆ ಪೂರೈಸುವ ನೀರಿನ ಪ್ರಮಾಣ) ನೀರು ಪೂರೈಸಲಾಗಿದೆ. ನಗರಕ್ಕೆ ಇಷ್ಟೊಂದು ಗರಿಷ್ಠ ಪ್ರಮಾಣದ ನೀರು ಪೂರೈಸಿರುವುದು ಇದೇ ಮೊದಲು ಎಂದು ಜಲ ಮಂಡಳಿ ಹೇಳಿದೆ. ಈ ಬೇಡಿಕೆ ಇನ್ನಷ್ಟು ಹೆಚ್ಚಾದರೆ ತನ್ನಿಂದ ಪೂರೈಸುವುದು ಸಾಧ್ಯವಿಲ್ಲ ಎಂದು ‘ಮೆಟ್ರೊ’ಗೆ ಸ್ಪಷ್ಟಪಡಿಸಿದೆ.

ಜಲ ಮಂಡಳಿ ಅಸಹಾಯಕತೆ
2017ರಲ್ಲಿ ಜಲ ಮಂಡಳಿಯ ನೀರು ಸರಬರಾಜು ಗರಿಷ್ಠ ಸಾಮರ್ಥ್ಯ 1220 ರಷ್ಟಿತ್ತು. 2018ರಲ್ಲಿ ಅದು 1390ಕ್ಕೆ ಹೆಚ್ಚಿತ್ತು. ದಿನವೊಂದಕ್ಕೆ ನಗರಕ್ಕೆ 1454 ಎಂಎಲ್‌ಡಿಗಿಂತ ಹೆಚ್ಚಿನ ಪ್ರಮಾಣದ ನೀರು ಪೂರೈಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ವರೆಗೆ ಪ್ರತಿದಿನ 1309 ಎಂಎಲ್‌ಡಿ ನೀರು ಪೂರೈಸಲಾಗುತ್ತಿತ್ತು. ಜನವರಿಯಲ್ಲಿ ಈ ಬೇಡಿಕೆ 1400 ಎಂಎಲ್‌ಡಿಗೆ ಏರಿತು. ಫೆಬ್ರುವರಿಯಲ್ಲಿ 1415, ಮಾರ್ಚ್‌ನಲ್ಲಿ 1450 ಮತ್ತು ಏಪ್ರಿಲ್‌ನಲ್ಲಿ 1453 ಎಂಎಲ್‌ಡಿ ನೀರು ಸರಬರಾಜು ಮಾಡಲಾಗಿದೆ.

ಯಾವ ಪ್ರದೇಶದಲ್ಲಿ ನೀರಿನ ಬಳಕೆ ಹೆಚ್ಚು?
ಪೀಣ್ಯ, ವಿಜಯನಗರ, ಆರ್‌.ಟಿ. ನಗರ, ಬಸವೇಶ್ವರ ನಗರ, ಜಯನಗರ, ರಾಜಾಜಿ ನಗರ, ಯಶವಂತಪುರ, ಬೆಳ್ಳಂದೂರು, ಕೋರಮಂಗಲ, ನಾಯಂಡನಹಳ್ಳಿ ಈ ಪ್ರದೇಶಗಳಲ್ಲಿ ನೀರಿನ ಬೇಡಿಕೆ ಹೆಚ್ಚಿದೆ.

2023ಕ್ಕೆ ಪರಿಹಾರ
ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಐದನೇ ಹಂತದ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ನೀಗುತ್ತದೆ ಎನ್ನುವುದು ಜಲ ಮಂಡಳಿಯ ವಿಶ್ವಾಸ. 2023ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆಗ ದಿನವೊಂದಕ್ಕೆ 775 ಎಂಎಲ್‌ಡಿ ಹೆಚ್ಚುವರಿ ನೀರು ದೊರೆಯಲಿದೆ.

ಇಲ್ಲಿದೆ ಸಮಸ್ಯೆ ಮೂಲ
ಅಂತರ್ಜಲ ಮಟ್ಟ ಕುಸಿತ,ಮಿತಿ ಮೀರಿದ ನೀರಿನ ಬಳಕೆ, ಜನಸಂಖ್ಯೆ ಹೆಚ್ಚಳ ನೀರಿನ ಸಮಸ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಪಟ್ಟಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ 1000 ಅಡಿಗೆ ಕುಸಿದಿದೆ. ಇದರಿಂದ ಬೋರ್‌ವೆಲ್‌ಗಳು ಬತ್ತುತ್ತಿವೆ. ಹೀಗಾಗಿ ಜನರು ಟ್ಯಾಂಕರ್‌ ನೀರಿಗೆ ಮೊರೆ ಹೋಗುತ್ತಿದ್ದಾರೆ. ಯಶವಂತಪುರದಲ್ಲಿ ಟ್ಯಾಂಕರ್‌ ನೀರು ಸರಬರಾಜು ಮಾಡುವ ದೊಡ್ಡ ವ್ಯವಸ್ಥಿತ ಜಾಲವೇ ಇದೆ.
* ಅಂತರ್ಜಲ ಮಟ್ಟ ಕುಸಿತ
* ಬತ್ತಿದ ಕೊಳವೆ ಬಾವಿಗಳು
* ವಾಹನ, ಬಟ್ಟೆ ತೊಳೆಯಲು, ಗಿಡ, ಮರಗಳಿಗೆ
* ನೀರು ಹನಿಸಲು ಶುದ್ಧ ನೀರು ಬಳಕೆ
* ಸ್ನಾನಕ್ಕೆ ಮಿತಿ ಮೀರಿದ ನೀರು ಖರ್ಚು
* ಕೈಗಾರಿಕೆಗಳಿಂದ ದುಂದು ವೆಚ್ಚ
* ನೀರು ಪೂರೈಸುವ ಕೊಳವೆ ಮಾರ್ಗ ಒಡೆದು ಅನಗತ್ಯ ಪೋಲು
* ನೀರು ಮಿತ ಬಳಕೆ ಮತ್ತು ನಿರ್ವಹಣೆ ಕುರಿತು ಪ್ರಜ್ಞೆಯ ಕೊರತೆ

ಮಿತ ಬಳಕೆಯೊಂದೇ ಪರಿಹಾರ
* ಕೊಳವೆಬಾವಿ ಕೊರೆಸಲು ನಿಯಂತ್ರಣ ಹೇರಿಕೆ
* ಕೊಳವೆಬಾವಿ, ಕೆರೆಗಳ ಮರುಪೂರಣ
* ನೀರಿನ ಮಿತಬಳಕೆ
* ಮಲೀನ ನೀರು ಸಂಸ್ಕರಣಕ್ಕೆ ಆದ್ಯತೆ
* ಸಂಸ್ಕರಿಸಿದ ನೀರು ಮರು ಬಳಕೆ
* ಅಪಾರ್ಟ್‌ಮೆಂಟ್‌, ವಾಣಿಜ್ಯ ಕಟ್ಟಡ, ಕಚೇರಿ, ಮಾಲ್‌ಗಳಲ್ಲಿ ಮಳೆ ನೀರು ಕೊಯ್ಲು
* ಮಳೆ ನೀರು ಸಂಗ್ರಹ ಮತ್ತು ಸದ್ಭಳಕೆಗೆ ವ್ಯವಸ್ಥಿತ ಯೋಜನೆ

**
ನಗರದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಲೇ ಇದೆ. ಇರುವ ನೀರಿನ ಸಂಪನ್ಮೂಲದಲ್ಲಿಯೇ ಈ ಬೇಡಿಕೆ ಪೂರೈಸುವುದು ಕಷ್ಟ.
–ಬಿ.ಸಿ. ಗಂಗಾಧರ್‌, ಮುಖ್ಯ ಎಂಜಿನಿಯರ್‌ (ನಿರ್ವಹಣೆ), ಬೆಂಗಳೂರು ಜಲ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT