ಹಿಂದೂಸ್ತಾನಿ ಸಂಗೀತ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಈ ಪೇಢಾ ನಗರಿಯಿಂದ ಅನೇಕ ಗಣ್ಯ ಹಿಂದೂಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ. ನಮ್ಮ ಮನೆ–ಮನವನ್ನೂ ಬೆಳಗಿಸಿದ್ದಾರೆ. ಪಂಡಿತ್ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಸವಾಯಿ ಗಂಧರ್ವ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಮಾಧವ ಗುಡಿ, ಪಂಡಿತ್ ಎಂ.ವೆಂಕಟೇಶ್ ಕುಮಾರ್, ಜಯತೀರ್ಥ ಮೇವುಂಡಿ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಹಿಂದೂಸ್ತಾನಿ ಸಂಗೀತದ ಜೈಪುರ ಘರಾಣೆ, ಗ್ವಾಲಿಯರ್ ಘರಾಣೆ, ಆಗ್ರಾ ಘರಾಣೆ ರಾಗಗಳನ್ನು ಪ್ರಸ್ತುತಪಡಿಸಿದವರು ಇಲ್ಲಿನ ಕಲಾವಿದರು. ಉತ್ತರ ಪ್ರದೇಶದ ಕೈರಾಣಾ ಜಿಲ್ಲೆಯವರಾಗಿದ್ದ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರು ಪ್ರತಿ ವರ್ಷ ಮೈಸೂರು ಒಡೆಯರ ದರ್ಬಾರಿಗೆ ಆಗಮಿಸುವ ಸಂದರ್ಭದಲ್ಲಿ ಧಾರವಾಡದಲ್ಲಿರುವ ತಮ್ಮ ಸಹೋದರನ ಜೊತೆ ಉಳಿಯುತ್ತಿದ್ದರು. ಆ ಸಂದರ್ಭದಲ್ಲಿ ಅವರ ಶಿಷ್ಯನಾಗಿದ್ದ ಸವಾಯಿ ಗಂಧರ್ವರಿಗೆ ಈ ಕಿರಾಣಾ ಘರಾಣಾ ಕಲೆಯನ್ನು ಕಲಿಸಿದರು. ಮುಂದೆ ಅವರೇ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಷಿ ಮತ್ತು ಬಸವರಾಜ ರಾಜಗುರು ಅವರಿಗೆ ಗುರುಗಳಾದರು. ಅಲ್ಲಿಂದ ಈ ಪ್ರದೇಶವು ನಿರಂತರವಾಗಿ ಈ ಪ್ರಕಾರದಲ್ಲಿ ಹೊಸ ಪ್ರತಿಭೆಗಳನ್ನು ತರುತ್ತಲೇ ಇದೆ.

ಶಾಸ್ತ್ರೀಯ ಸಂಗೀತಕ್ಕೆ ಧಕ್ಕೆ ಇಲ್ಲ
ಕಾಲಕ್ಕೆ ತಕ್ಕಂತೆ ಜನರು ಬದಲಾಗುತ್ತಾರೆ. ಅದು ಸಹಜ ಕೂಡ. ಆದರೆ, ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಯಾವ ಕಾಲಕ್ಕೂ ಧಕ್ಕೆ ಬರುವುದಿಲ್ಲ. ಕಾರಣ ದೈವಕೃಪೆ ಇದೆ. ಹಿಂದಿನವರ ತಪಸ್ಸಿನ ಫಲವಿದೆ... ಇದು, ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಅಚಲವಾದ ನಂಬಿಕೆ.

ಮೊದಲು ವಯಸ್ಸಾದವರು ಮಾತ್ರ ಶಾಸ್ತ್ರೀಯ ಸಂಗೀತ ಕೇಳಲು ಬರುತ್ತಿದ್ದರು. ಈಗ ಎಲ್ಲ ವಯೋಮಾನದವರೂ ಬರುತ್ತಾರೆ. ಶಾಸ್ತ್ರೀಯ ಸಂಗೀತ ಕಲಿಕೆಯಲ್ಲೂ ಯುವಜನ ಉತ್ಸಾಹ ತೋರುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯ ಸರ್ಕಾರದಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಸಂಗೀತೋತ್ಸವ ಕಾರ್ಯಕ್ರಮ, ಅನುದಾನ, ಪ್ರತಿಷ್ಠಾನಗಳ ಸ್ಥಾಪನೆ, ಶಿಷ್ಯವೇತನ...ಹೀಗೆ ಹಲವಾರು ಸೌಲಭ್ಯಗಳು ಧಾರವಾಡಕ್ಕೆ ಸಿಕ್ಕಿವೆ ಎನ್ನುತ್ತಾರೆ.

ನೌಕರಿ ಗ್ಯಾರಂಟಿ ಇಲ್ಲ!
‘ಶಾಸ್ತ್ರೀಯ ಸಂಗೀತ ಕಲಿತವರಿಗೆ ನೌಕರಿ ಗ್ಯಾರಂಟಿ ಇಲ್ಲ. ಇದೊಂದು ಅಸಮಾಧಾನವಿದೆ. ಎಲ್ಲರಿಗೂ ತನ್ನ ಕಾಲ ಮೇಲೆ ನಿಲ್ಲಬೇಕು ಎಂಬ ಆಸೆ ಇರುತ್ತದೆ. ಬಡ ಕುಟುಂಬದ ಮಕ್ಕಳು ಕಷ್ಟಗಳ ಮಧ್ಯೆ ಸಂಗೀತಾಭ್ಯಾಸ ಮಾಡುತ್ತಾರೆ. ಆನಂತರ, ಉದ್ಯೋಗ ಸಿಕ್ಕರೆ ಅವರ ಬದುಕಿಗೆ ದಾರಿಯಾಗುತ್ತದೆ. ಲಕ್ಷಾಂತರ ಸಂಗೀತ ವಿದ್ಯಾರ್ಥಿಗಳು ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ. ಹಾಗಾಗಿ ಸರ್ಕಾರ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಸಂಗೀತ ಶಿಕ್ಷಕರನ್ನು ನೇಮಿಸಿದರೆ, ಕಲಾವಿದರೂ ಉಳಿಯುತ್ತಾರೆ, ಕಲೆಯೂ ಬೆಳೆಯುತ್ತದೆ’ ಎನ್ನುತ್ತಾರೆ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಎಂ.ವೆಂಕಟೇಶ ಕುಮಾರ್.

ಉತ್ತಮ ಸಭಾಂಗಣಗಳ ಕೊರತೆ
ಹುಬ್ಬಳ್ಳಿ ಮತ್ತು ಧಾರವಾಡ ನಗರ ವ್ಯಾಪ್ತಿಯಲ್ಲಿ ಸವಾಯಿ ಗಂಧರ್ವ ಹಾಲ್, ಡಿ.ಎಸ್.ಕರ್ಕಿ ಕನ್ನಡ ಭವನ, ಸಾಂಸ್ಕೃತಿಕ ಭವನ, ಸೃಜನ ರಂಗ ಮಂದಿರ, ಮಲ್ಲಿಕಾರ್ಜುನ ಮನ್ಸೂರ ಕಲಾಭವನ, ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನ, ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನ ಸೇರಿದಂತೆ ಎಂಟು–ಹತ್ತು ಸಭಾಭವನಗಳಿವೆ. ಇವುಗಳಲ್ಲಿ ಕೆಲವು ಚಿಕ್ಕದಾಗಿದ್ದಾರೆ, ಇನ್ನು ಕೆಲವು ಕೈಗೆಟುಕದ ದರ ಹೊಂದಿವೆ. ಸರ್ಕಾರಿ ಭವನಗಳಲ್ಲಿ ಲೈಟಿಂಗ್ ಸಿಸ್ಟಮ್, ಸೌಂಡ್ ಸಿಸ್ಟಮ್ ಉತ್ತಮವಾಗಿಲ್ಲ. ಜನರೇಟರ್ ವ್ಯವಸ್ಥೆ ಇಲ್ಲ. ಆಸನಗಳು ಹಾಳಾಗಿರುವುದರಿಂದ ಪ್ರೇಕ್ಷಕರು ಕಿರಿಕಿರಿ ಅನುಭವಿಸುವಂತಾಗಿದೆ. ಸವಾಯಿ ಗಂಧರ್ವ ಹಾಲ್ ನವೀಕರಣಗೊಂಡ ಮೇಲೆ ಸಂಗೀತ–ನೃತ್ಯ ಕಾರ್ಯಕ್ರಮ ನಡೆಸಲು ಯೋಗ್ಯವಾಗಿದೆ. ಆದರೆ ₹ 16ರಿಂದ 18 ಸಾವಿರ ಬಾಡಿಗೆ ಇದೆ. ಸರ್ಕಾರಿ ಸಭಾಂಗಣಗಳನ್ನು ಆಧುನೀಕರಣಗೊಳಿಸಬೇಕು ಮತ್ತು ಬಾಡಿಗೆ ದರವನ್ನು ಇಳಿಸಬೇಕು ಎಂಬುದು ಕಲಾವಿದರ ಒಕ್ಕೊರಲ ಒತ್ತಾಯವಾಗಿದೆ.

ದಾನಿಗಳ ನೆರವು ಬೇಕಿದೆ
‘ಅವಕಾಶ ವಂಚಿತ, ಶೋಷಿತ ಮತ್ತು ಬಡ ಮಕ್ಕಳಿಗೆ ಉಚಿತವಾಗಿ ಶಾಸ್ತ್ರೀಯ ಸಂಗೀತವನ್ನು ಕಲಿಸಿ, ಅವರ ಬದುಕಿಗೊಂದು ದಾರಿ ಮಾಡಿಕೊಡುತ್ತಿದೆ ಕಲಕೇರಿ ಸಂಗೀತ ವಿದ್ಯಾಲಯ. ಇಲ್ಲಿ ಉಚಿತವಾಗಿ ಊಟ, ವಸತಿ, ಶಿಕ್ಷಣ ನೀಡುತ್ತಿದ್ದೇವೆ. ಎಸ್ಸೆಸ್ಸೆಲ್ಸಿ ನಂತರ ಬಿ–ಮ್ಯೂಸಿಕ್, ಎಂ–ಮ್ಯೂಸಿಕ್, ಪಿಎಚ್.ಡಿ ಮಾಡುವವರಿಗೆ ಆರ್ಥಿಕ ನೆರವನ್ನೂ ಸಂಸ್ಥೆ ನೀಡುತ್ತಿದೆ. ಆದರೆ, ಇತ್ತೀಚೆಗೆ ಎಲ್ಲ ದರಗಳು ದುಬಾರಿಯಾಗಿರುವುದರಿಂದ ಹಣಕಾಸಿನ ಸಮಸ್ಯೆಯನ್ನು ಸಂಸ್ಥೆ ಎದುರಿಸುತ್ತಿದೆ. ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ದಾನಿಗಳು ಸಿಗುತ್ತಿಲ್ಲ. ದಾನಿಗಳು ಉದಾರವಾಗಿ ನೆರವು ನೀಡುವ ಮೂಲಕ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಶಾಸ್ತ್ರೀಯ ಸಂಗೀತವನ್ನು ಉಳಿಸಿ–ಬೆಳೆಸಬೇಕಿದೆ’ ಎನ್ನುತ್ತಾರೆ ಸಂಗೀತ ಶಿಕ್ಷಕ ಕೃಷ್ಣ ಸುತಾರ.

ಪ್ರಚಾರ, ಧನಸಹಾಯ ಸಿಗುತ್ತಿಲ್ಲ...
ರಿಯಾಲಿಟಿ ಷೋ, ನ್ಯೂ ಈಯರ್ ಸೆಲಬ್ರೆಷನ್, ವ್ಯಾಲೆಂಟೈನ್ಸ್ ಡೇ ಸೆಲಬ್ರೆಷನ್ ಮುಂತಾದ ಕಾರ್ಯಕ್ರಮಗಳಿಗೆ ಸಿಕ್ಕಷ್ಟು ಪ್ರಚಾರ, ಭರತನಾಟ್ಯ ಕಾರ್ಯಕ್ರಮಗಳಿಗೆ ಸಿಗುವುದಿಲ್ಲ. ಜಾಹೀರಾತುಗಳ ಮೋಹಕ ಜಾಲಕ್ಕೆ ಸಿಲುಕಿ ಯುವಜನರು ಹಾದಿ ತಪ್ಪುತ್ತಾರೆ. ಹಾಗಾಗಿ, ನಮ್ಮ ಸಂಸ್ಕೃತಿ–ಸಂಸ್ಕಾರದ ಪ್ರತಿಬಿಂಬವಾದ ಶಾಸ್ತ್ರೀಯ ನೃತ್ಯಕ್ಕೆ ಪ್ರಚಾರದ ಅಗತ್ಯ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳೆದ ವರ್ಷ ಸಂಘ–ಸಂಸ್ಥೆಗಳಿಗೆ ಧನಸಹಾಯ ನೀಡಿಲ್ಲ. ಇದರಿಂದ ಕೈಯಿಂದ ಹಣ ಖರ್ಚು ಮಾಡಿ, ಕಾರ್ಯಕ್ರಮಗಳನ್ನು ಮಾಡಿದ ನೃತ್ಯ ಶಾಲೆಗಳಿಗೆ ತೊಂದರೆಯಾಗಿದೆ. ಇಲಾಖೆ ವತಿಯಿಂದ ಹೆಚ್ಚು ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕಿದೆ’ ಎನ್ನುತ್ತಾರೆ ವಿದುಷಿ ಹೇಮಾ ವಾಘ್ಮೋಡೆ.

ಕನ್ನಡವನ್ನು ಎತ್ತಿ ಹಿಡಿಯಬೇಕು
‘ನಮ್ಮ ಪುರಾಣ–ಪುಣ್ಯಕಥೆಗಳ ಆಯ್ದ ಭಾಗಗಳನ್ನು ನೃತ್ಯ ರೂಪಕಗಳ ಮೂಲಕ ಪ್ರಸ್ತುತಪಡಿಸಿ, ದೇಸಿ ಸಂಸ್ಕೃತಿ ಮತ್ತು ಪರಂಪರೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಶಾಸ್ತ್ರೀಯ ನೃತ್ಯ ಗುರುಗಳಾದ ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಕವಿರತ್ನ ಕಾಳಿದಾಸನ ಅಭಿಜ್ಞಾನ ಶಾಕುಂತಲ ಸಂಸ್ಕೃತ ಕಾವ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡಿ, ನೃತ್ಯ ರೂಪಕವನ್ನು ರಚಿಸಿದ್ದೇವೆ. ದ.ರಾ.ಬೇಂದ್ರೆಯವರ ಸಖೀಗೀತೆ, ಡಿ.ವಿ.ಗುಂಡಪ್ಪನವರ ಶ್ರೀಕೃಷ್ಣ ಪರೀಕ್ಷಣ ಕೃತಿಗಳನ್ನು ನೃತ್ಯರೂಪಕದ ಮೂಲಕ ಸಾದರ ಪಡಿಸಿದ್ದೇವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಪರಿಚಯವೂ ಆಗುತ್ತದೆ. ಕಲೆಯ ಜತೆಗೆ ಕನ್ನಡ ಭಾಷೆಯೂ ಬೆಳೆಯುತ್ತದೆ’ ಎನ್ನುತ್ತಾರೆ ವಿದುಷಿ ಡಾ.ಸಹನಾ ಭಟ್.

ಜನಪ್ರಿಯತೆಯ ಬೆನ್ನು ಹತ್ತಬೇಡಿ!
ನೀವು ಸಾಧನೆಯ ಬೆನ್ನು ಹತ್ತಬೇಕೇ ಹೊರತು ಜನಪ್ರಿಯತೆಯ ಬೆನ್ನು ಹತ್ತಬಾರದು. ಸಂಗೀತ ಎಂಬುದು ಸಾಧನೆಯ ಪಥ. ಸಂಗೀತವೆಂದರೆ ಅಧ್ಯಾತ್ಮ. ಅಲ್ಲಿ ಕಲಿಕೆ ನಿರಂತರ. ರಾತ್ರೋರಾತ್ರಿ ಯಾವ ವಿದ್ಯೆಯೂ ಸಿದ್ಧಿಸುವುದಿಲ್ಲ. ಹಾಗಾಗಿ ಏಕಾಗ್ರತೆ, ತಾಳ್ಮೆ, ಅರ್ಪಣಾ ಮನೋಭಾವ, ನಿರಂತರ ಪರಿಶ್ರಮ ಇದ್ದರೆ ಮಾತ್ರ ಸಂಗೀತ ಒಲಿಯುತ್ತದೆ.

ಗುರುಕುಲ ಪದ್ಧತಿಗೂ, ಇಂದಿನ ಕಾಲೇಜು ಮತ್ತು ವಿ.ವಿ.ಗಳು ನೀಡುತ್ತಿರುವ ಸಂಗೀತ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ ಎಷ್ಟು ವಿದ್ಯಾರ್ಥಿಗಳು ಉತ್ತಮ ಕಲಾವಿದರಾಗಿದ್ದಾರೆ? ರಿಯಾಲಿಟಿ ಷೋಗಳಲ್ಲಿ ಮಿಂಚಿದ ಮಾತ್ರಕ್ಕೆ ಸಾಧನೆ ಮಾಡಿದ್ದಾರೆ ಎಂದರ್ಥವಲ್ಲ. ಮೂರು ತಿಂಗಳು, ಆರು ತಿಂಗಳು ಅಭ್ಯಾಸ ಮಾಡಿಸಿ, ಟಿ.ವಿ ಷೋಗಳಿಗೆ ನಮ್ಮ ಮಕ್ಕಳನ್ನು ಅಣಿಗೊಳಿಸಿ ಎಂದು ಕೆಲವು ಪೋಷಕರು ಗುರುಗಳ ಮೇಲೆ ಒತ್ತಡ ಹಾಕುತ್ತಾರೆ. ಮಕ್ಕಳನ್ನೂ ತಪ್ಪು ದಾರಿಗೆ ಎಳೆಯುತ್ತಾರೆ. ವಿದ್ಯೆಯನ್ನು ಪರಿಪೂರ್ಣವಾಗಿ ಕಲಿಯಲು ಸಮಯ ಮತ್ತು ತಾಳ್ಮೆ ಎರಡೂ ಅಗತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಶಾಸ್ತ್ರೀಯ ಸಂಗೀತಗಾರ ಪಂಡಿತ್ ವಿಜಯಕುಮಾರ ಪಾಟೀಲ.

ಕಲಾಭವನ ಬಾಡಿಗೆ ದುಬಾರಿ!
ಧಾರವಾಡದಲ್ಲಿರುವ ಮಲ್ಲಿಕಾರ್ಜುನ ಮನ್ಸೂರ್ ಕಲಾಭವನ ನವೀಕರಣಗೊಂಡು ಮೂರ್ನಾಲ್ಕು ವರ್ಷಗಳಾದವು. ಆದರೆ, ಇಂದಿಗೂ ಅಲ್ಲಿ ಖಾಸಗಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದೆ. ಇದಕ್ಕೆ ಕಾರಣ ದುಬಾರಿ ಬಾಡಿಗೆ!

‘₹35 ಸಾವಿರದಿಂದ ₹40 ಸಾವಿರ ಹಣ ತೆತ್ತು ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಮಾಡುವಷ್ಟು ಶಕ್ತಿ ಅವಳಿ ನಗರದ ಖಾಸಗಿ ಸಂಗೀತ ಮತ್ತು ನೃತ್ಯ ಶಾಲೆಗಳಿಗಿಲ್ಲ. ‘ಉಚಿತ ಪ್ರವೇಶ’ ಇರುವ ಕಾರ್ಯಕ್ರಮಗಳಿಗೆ ಇಷ್ಟೊಂದು ಬಾಡಿಗೆ ಕಟ್ಟುವುದಾದರೂ ಹೇಗೆ? ಶಾಸ್ತ್ರೀಯ ಕಾರ್ಯಕ್ರಮಗಳಿಗೆ ಪ್ರೇಕ್ಷಕರು ಬರುವುದೇ ಕಡಿಮೆ. ಇನ್ನು ಟಿಕೆಟ್ ಕೊಂಡುಕೊಂಡು ಬನ್ನಿ ಎಂದರೆ ಆಯೋಜಕರೇ ಪ್ರೇಕ್ಷಕರಾಗಬೇಕಾಗುತ್ತದೆ’ ಎಂಬುದು ಕಲಾವಿದರ ಅಳಲು.

‘ಪಂಡಿತ್ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಮುಂತಾದವರ ಸಂಗೀತ ಕಾರ್ಯಕ್ರಮಗಳನ್ನು ಕಲಾಭವನದಲ್ಲಿ ಕೇಳಿಕೊಂಡು ಬೆಳೆದಿದ್ದೇವೆ. ಆದರೆ, ಕಲಾಭವನ ನವೀಕರಣಗೊಂಡ ನಂತರ ಅಲ್ಲಿ ಸಂಗೀತ ಮತ್ತು ನೃತ್ಯದ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಹಾಗಾಗಿ ಪಾಲಿಕೆ ಮತ್ತು ಜಿಲ್ಲಾಡಳಿತ ಕಲಾಭವನದ ಬಾಡಿಗೆಯನ್ನು ಕಡಿಮೆ ಮಾಡಿದರೆ, ಕಲಾವಿದರು ಮತ್ತು ಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎನ್ನುತ್ತಾರೆ ಪಂಡಿತ್ ವಿಜಯಕುಮಾರ ಪಾಟೀಲ ಮತ್ತು ಸಂಗೀತ ಶಿಕ್ಷಕ ಕೃಷ್ಣ ಸುತಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.