ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದಲ್ಲೂ ಇದೆ ಲಿಂಗತಾರತಮ್ಯ: ಗಾಯಕಿ ಟಿ.ಎಸ್. ಸತ್ಯವತಿಯವರೊಂದಿಗಿನ ಸಂದರ್ಶನ

Last Updated 24 ಸೆಪ್ಟೆಂಬರ್ 2022, 23:58 IST
ಅಕ್ಷರ ಗಾತ್ರ

ಡಾ.ಟಿ.ಎಸ್. ಸತ್ಯವತಿಯವರು ಹೆಸರಾಂತ ಕರ್ನಾಟಕ ಸಂಗೀತ ಗಾಯಕಿ, ಸಂಗೀತಶಾಸ್ತ್ರಜ್ಞೆ ಹಾಗೂ ಸಂಸ್ಕೃತ ವಿದುಷಿ. ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. ಎರಡರ ಹರೆಯದಲ್ಲಿಯೇ ಮೈಸೂರು ಮಹಾರಾಣಿಯ ಮುಂದೆ ಹಾಡಿದ ಬಾಲಪ್ರತಿಭೆ. ಹಿರಿಯಕ್ಕ ವಿದುಷಿ ವಸಂತ ಮಾಧವಿ, ವಿದ್ವಾನ್ ಆರ್. ಕೆ. ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಅವರ ಕಲೆ ಅರಳಿ, ಪಕ್ವಗೊಂಡಿತು. ವಿದ್ವಾನ್ ಬೆಂಗಳೂರು ಕೆ ವೆಂಕಟರಾಂ ಅವರಲ್ಲಿ ಮೃದಂಗ ಕಲಿತರು. ಸಂಗೀತಶಾಸ್ತ್ರ ಅಧ್ಯಯನಕ್ಕೆ ಡಾ. ಬಿ.ವಿ.ಕೆ ಶಾಸ್ತ್ರಿಯವರ ಮಾರ್ಗದರ್ಶನವೂ ಇತ್ತು. ಸತ್ಯವತಿ ಅವರಿಗೆ 2022ರ ಶ್ರೀ ಷಣ್ಮುಖಾನಂದ ಎಂ.ಎಸ್. ಸುಬ್ಬುಲಕ್ಷ್ಮಿ ಸಂಗೀತ ಪ್ರಾಚಾರ್ಯ ಪ್ರಶಸ್ತಿ ಸಂದಿದೆ. ಈ ಸಂದರ್ಭದಲ್ಲಿ ನಡೆಸಿದ ಸಂದರ್ಶನದ ಆಯ್ದ ಭಾಗಗಳು.

ಒಬ್ಬ ಬಾಲಪ್ರತಿಭೆಯ ಕಲಾ ವಿಕಾಸದಲ್ಲಿ ಅಭ್ಯಾಸ ಹಾಗೂ ಕೇಳ್ಮೆಯ ಪಾತ್ರವೇನು?

ಸಂಗೀತದಲ್ಲಿ ಅನೌಪಚಾರಿಕವಾದ ಕೇಳ್ಮೆಯ ಪಾತ್ರ ಹಿರಿದು. ಉತ್ತಮ ಸಂಗೀತವನ್ನು ಸುಮ್ಮನೆ ಆಡಾಡ್ತಾ ಕೇಳೋದು ಪ್ರಯೋಜನಕಾರಿ. ಹೀಗೆ ಕೇಳಿಸೋದ್ರಲ್ಲಿ ನನ್ನ ತಾಯಿಯ ಪಾತ್ರ ದೊಡ್ಡದು. ಸುಮಾರು ಹನ್ನೆರಡು ವಯಸ್ಸಿನ ತನಕ ಅವರ ಜೊತೆ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಕಡಲೇಕಾಯಿ ತಿಂತಾ ಕಛೇರಿಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನಿದ್ದೆ ಬಂದಾಗ ಅವರ ತೊಡೆ ಮೇಲೆ ಮಲಗ್ತಿದ್ದೆ.

ನನಗೆ ಆಟದ ಆಸೆ. ಅಭ್ಯಾಸ ಮಾಡಬೇಕೆಂಬ ಉಮೇದು ಇರ್ಲಿಲ್ಲ. ಆದರೆ ಅಮ್ಮ ಬಲವಂತವಾಗಿ ಎಬ್ಬಿಸಿ ಅಭ್ಯಾಸಕ್ಕೆ ಹಚ್ಚುತ್ತಿದ್ದರು. ಇದು ಮುಂದೆ ತುಂಬಾ ಉಪಯೋಗಕ್ಕೆ ಬಂತು. ಕೂತು ಅಭ್ಯಾಸ ಮಾಡಿದ್ದು ಕಡಿಮೆ. ಆದರೆ ಎಲ್ಲೇ ಇದ್ದರೂ ಮನಸ್ಸಿನ ಒಂದು ಭಾಗ ಸಂಗೀತದಲ್ಲೇ ಇರ್ತಿತ್ತು. ಕಛೇರಿ ಇದ್ದಾಗಲೂ ಕಂಠ ಪರಿಷ್ಕರಣೆಗೆ ಅಂತ ಒಂದೂವರೆ ಗಂಟೆ ಅಭ್ಯಾಸ ಮಾಡ್ತಿದ್ದೆ. ಉಳಿದಂತೆ ಸದಾ ಆ ರಾಗಗಳು, ಕೃತಿಯ ಸಂಗತಿಗಳು, ಕಲ್ಪನಾಸ್ವರಗಳು ಮನಸ್ಸಿನಲ್ಲಿ ಸುಳಿದಾಡ್ತಾನೇ ಇರ್ತಿದ್ವು. ಮನೋಧರ್ಮ ಬೆಳೆಯೋದಕ್ಕೆ ಇದು ಸಹಕಾರಿಯಾಯ್ತು.

ಒಂದಷ್ಟು ಸಹಜ ಪ್ರತಿಭೆ, ಪೋಷಕರು ಕಲ್ಪಿಸಿದ ವಾತಾವರಣ, ಸದಾ ಕಿವಿಯ ಮೇಲೆ ಬೀಳುತ್ತಿದ್ದ ರೇಡಿಯೊ ಸಂಗೀತ, ಶಾಸ್ತ್ರೀಯ ಸಂಗೀತವನ್ನೇ ಆಧರಿಸಿದ್ದ ಹಳೆಯ ಚಿತ್ರಗೀತೆಗಳು ನನ್ನನ್ನು ರೂಪಿಸಿದವು. ಸಂಗೀತವನ್ನು ಸದಾ ನನ್ನಷ್ಟಕ್ಕೆ ಹಾಡ್ಕೊತಿದ್ದೆ. ಇದು ತುಂಬಾ ಮುಖ್ಯ.

ಸಂಗೀತದ ಕಲಿಕೆಗೆ ಸಂಗೀತದ ಹಿನ್ನೆಲೆ ಇರಬೇಕೇ?

ಕುಟುಂಬದಲ್ಲಿ ಸಂಗೀತದ ಹಿನ್ನೆಲೆ, ವಾತಾವರಣ ಇರಬೇಕಾಗಿಲ್ಲ. ಆದರೆ ಸಂಗೀತದಲ್ಲಿ ಆಸಕ್ತಿ, ಪ್ರತಿಭೆ ಇರಬೇಕು. ಮಗುವಿನ ಆಸಕ್ತಿ ನೋಡಿ ಸಂಗೀತ ಹೇಳಿಕೊಟ್ಟಿದ್ದೇನೆಯೇ ಹೊರತು ಹಿನ್ನೆಲೆ ನೋಡಿ ಅಲ್ಲ. ಕಲಿಕೆಯ ಹಂಬಲ ಇರೋರು ಗುರುವನ್ನರಸಿ ಹೋಗುತ್ತಾರೆ. ಅಂತಹ ಮಕ್ಕಳು ಸಂಗೀತದಲ್ಲಿ ಉಳಿಯುತ್ತಾರೆ. ಅದಕ್ಕೆ ಜಾತಿ, ಜನಾಂಗದ ಹಿನ್ನೆಲೆ ಬೇಕಿಲ್ಲ. ಈಗ ಒಳ್ಳೆಯ ಕಲಾವಿದರು ಅನ್ನಿಸಿಕೊಂಡಿರುವ ಮಾರುತಿ ಪ್ರಸಾದನಂತಹ ನನ್ನ ವಿದ್ಯಾರ್ಥಿಗಳಿಗೆ ಸಂಗೀತದ ಹಿನ್ನೆಲೆಯೇ ಇರಲಿಲ್ಲ.

ಸಾಹಿತ್ಯ ಸಂಗೀತಗಳೆರಡರಲ್ಲೂ ರಸೋತ್ಪತ್ತಿಯೇ ಬಲು ಮುಖ್ಯ. ಸಂಗೀತದಲ್ಲಿ ಇದು ಹೇಗೆ ಸಂಭವಿಸುತ್ತದೆ?

ಸಾಹಿತ್ಯದಲ್ಲಿ ನವರಸ ಎಂದು ಹೇಳುವುದನ್ನು ಸಾರಾಸಗಟಾಗಿ ಸಂಗೀತಕ್ಕೆ ಅನ್ವಯಿಸಲು ಆಗುವುದಿಲ್ಲ. ಎರಡರ ರಸದೃಷ್ಟಿ ಮೂಲಭೂತವಾಗಿ ಒಂದೇ ಇದ್ದರೂ ಕೂಡ ಸಂಗೀತದಲ್ಲಿ ಇದು ಸಂಭವಿಸುವ ಕ್ರಮ ಬೇರೆ. ರಸ ಎಂದರೆ ಆಸ್ವಾದ್ಯವಾದದ್ದು. ಸಂಗೀತದಲ್ಲಿನ ಆಸ್ವಾದ್ಯ ಮೂಲಭೂತವಾಗಿ ನಾದಲಯವೇ ಆಗಿರುತ್ತೆ. ಆದರೆ ಇದರ ಜೊತೆಗೆ ಸಾಹಿತ್ಯವೂ ಸೇರಿಕೊಳ್ಳುವುದು ಕರ್ನಾಟಕ ಸಂಗೀತದ ವಿಶೇಷ. ಇವೆಲ್ಲವೂ ಯಾವ ಹದಪಾಕದಲ್ಲಿ ಬೆರೆತುಕೊಂಡಿವೆ ಎಂಬುದನ್ನು ಅರಿತು, ಈ ನಾದ, ಲಯ, ಸಾಹಿತ್ಯವನ್ನು ಒಟ್ಟಿಗೆ ಆಸ್ವಾದಿಸಬಹುದಾದರೆ ಉತ್ಕೃಷ್ಟ ಮಟ್ಟದ ರಸಾನುಭೂತಿ ದೊರಕುತ್ತದೆ.

ಅಭಿಜಾತ ವಾದ್ಯಸಂಗೀತದಲ್ಲಿ ಸಾಹಿತ್ಯದ ಪಾತ್ರವೇನು?

ಕರ್ನಾಟಕ ಸಂಗೀತ ಸಾಹಿತ್ಯಕ್ಕೆ ತುಂಬ ಆತುಕೊಂಡಿದೆ. ಆದರೆ ವಾದ್ಯಸಂಗೀತಕ್ಕೆ ಸಾಹಿತ್ಯದ ಅವಲಂಬನೆಯಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ಇಲ್ಲಿ ರಾಗ ಇರುವುದು ಸಾಹಿತ್ಯದ ಅಕ್ಷರಗಳಲ್ಲಿ. ವಾದ್ಯಗಳಲ್ಲಿ ನುಡಿಸಲು ರಾಗ ಸಿಗುವುದು ಕೂಡ ಕೃತಿಗಳಲ್ಲೇ. ಈ ಮೂಲ ಕೃತಿಗಳನ್ನು ಬಿಟ್ಟುಬಿಟ್ರೆ, ಮುಂದಿನ ಪೀಳಿಗೆಗೆ ರಾಗವನ್ನು ಹಸ್ತಾಂತರಿಸುವುದು ಹೇಗೆ? ನಾವು ನಮ್ಮ ಬೇರನ್ನೇ ತೊರೆದಂತಲ್ಲವೇ?

ಈಗ ಹಾಡುತ್ತಿರುವ ರಾಗಗಳು ಸ್ಪಷ್ಟವಾಗಿ ರೂಪುಗೊಂಡಿದ್ದು ಯಾವಾಗ?

ಚಾರಿತ್ರಿಕವಾಗಿ ನೋಡೋದಾದ್ರೆ ನಮ್ಮ ಸಂಗೀತದ ಚರಿತ್ರೆಯಲ್ಲಿ ಒಂದು ನಿರಂತರತೆ ಇಲ್ಲ. ರಾಗದ ದೃಷ್ಟಿಯಿಂದ ಇಂದು ನಮ್ಮ ಚಿಂತನೆ ತುಂಬಾ ಭಿನ್ನವಾಗಿದೆ. ಹಾಗಾಗಿ ಸಂಗೀತ ಗ್ರಂಥಗಳಲ್ಲಿ ರಾಗಗಳನ್ನು ಹುಡುಕುವುದು ಮೂರ್ಖತನ. ಇಂದು ಹಾಡುತ್ತಿರುವ ರಾಗಗಳೆಲ್ಲವೂ ಸ್ಪಷ್ಟ ರೂಪ ಪಡೆದಿರೋದು ಇತ್ತೀಚಿನ 250 ವರ್ಷಗಳಲ್ಲಿ.

ಅಭಿಜಾತ ಸಂಗೀತದ ಚೌಕಟ್ಟು ಎಂದರೇನು? ಅದು ಜಾನಪದ ಹಾಗೂ ಲಘು ಸಂಗೀತಕ್ಕಿಂತ ಭಿನ್ನವಾಗುವುದು ಯಾವ ಅಂಶದಿಂದ?

ಅಭಿಜಾತ ಸಂಗೀತದಲ್ಲಿ ರಾಗ ತಾಳಗಳ ಪ್ರಯೋಗಗಳು ಪರಿಷ್ಕೃತಗೊಂಡು ಸಿದ್ಧವಾಗಿರುತ್ತವೆ. ಅದಕ್ಕೆ ಒಂದು ಸ್ಪಷ್ಟವಾದ ವ್ಯಾಕರಣವಿದೆ. ಆ ವ್ಯಾಕರಣಕ್ಕೆ ಒಗ್ಗದಿರುವುದನ್ನು ಅದು ಸಾಮಾನ್ಯವಾಗಿ ಸ್ವೀಕರಿಸುವುದಿಲ್ಲ.
ಜಾನಪದ ಮತ್ತು ಸಿನಿಮಾ ಸಂಗೀತಕ್ಕೆ ತಮ್ಮದೇ ಆದ ಗಟ್ಟಿ ನೆಲೆಯಿದೆ. ಅಲ್ಲಿ ಪಿಚ್ ಮುಖ್ಯ. ಹೆಚ್ಚಾಗಿ ಎತ್ತರದ ಶ್ರುತಿಯಲ್ಲಿಯೇ ಹಾಡುತ್ತಾರೆ. ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಕಂಠ ಪರಿಷ್ಕರಣೆ ಮತ್ತು ಧ್ವನಿ ಸಂಸ್ಕರಣ ಅವುಗಳಿಗೆ ಬೇಕು.

ಇವೆಲ್ಲಾ ಪರಸ್ಪರ ಭಿನ್ನವಾಗುವುದು ಗಮಕ ಪ್ರಯೋಗ ಮತ್ತು ಉಚ್ಚಾರಣೆ ಅಂದರೆ ಆರ‍್ಟಿಕ್ಯುಲೇಷನ್‌ನಿಂದ. ಅಭಿಜಾತ ಸಂಗೀತಕ್ಕೆ ಅದರದೇ ಆದ ವಿಶಿಷ್ಟ ಉಚ್ಚಾರಣೆಯಿದೆ. ಜಾನಪದದಲ್ಲಿ ಹೆಚ್ಚಾಗಿ ಪ್ಲೇನ್ ನೋಟ್ಸ್ ಬರುತ್ತವೆ. ಅವರದು ಮುಕ್ತಕಂಠದ ಗಾಯನ, ಹಕ್ಕಿಯ ಹಾಡಿನಂತೆ ಸ್ವಚ್ಛಂದ. ಜಗತ್ತಿನ ಎಲ್ಲಾ ಸಂಗೀತಗಳಿಗೂ ಅದರದ್ದೇ ಆದ ಪ್ರತ್ಯೇಕ ಸೌಂದರ್ಯವಿದೆ. ಅದನ್ನು ಗುರುತಿಸಿ, ಅದನ್ನು ಅದಾಗಿಯೇ ಅನುಭವಿಸಬೇಕೇ ಹೊರತು, ಅದನ್ನು ಇಲ್ಲಿಗೆ ತಂದು, ಬೆರೆಸಿ, ಪಚಪಚ ಮಾಡಬಾರದು.

ವಿಭಿನ್ನ ಭಾವವಿರುವ ರಚನೆಗಳನ್ನು ಸಂಗೀತಕ್ಕೆ ತಂದರೆ, ವೈವಿಧ್ಯಮಯ ದನಿಗಳು, ರಸಗಳು ಸೇರಿ ಸಂಗೀತದ ಬುಡ ಹಿಗ್ಗುತ್ತದಲ್ಲವೇ?

ಈ ಮಾತು ನೂರಕ್ಕೆ ನೂರು ಸತ್ಯ. ಹೊಸ ಬಗೆಯ ಸಾಹಿತ್ಯ ನಮ್ಮ ಶಾಸ್ತ್ರೀಯ ಸಂಗೀತ ಒಪ್ಪುವಂತಿರಬೇಕು. ಧ್ವನಿಯ ದೃಷ್ಟಿಯಿಂದ ಹೊಂದಿಕೊಳ್ಳಬೇಕು. ಸಂಗೀತದ ಗಾಂಭೀರ್ಯಕ್ಕೆ ಧಕ್ಕೆ ಬಾರದಂತಿರಬೇಕು. ಶರದೃತು ಕುರಿತು ಋತುಗಾನ ಎನ್ನುವ ರೂಪಕದಲ್ಲಿ ವಾಲ್ಮೀಕಿ, ಭಾರವಿ, ಪುತಿನ, ಜಿಎಸ್‌ಎಸ್, ಅಡಿಗರು, ವೀಸೀ ಇಂತಹವರ ಕವನಗಳನ್ನು ಅಳವಡಿಸಿದೆ. ಇವುಗಳನ್ನು ಕಛೇರಿಗಳಲ್ಲಿ ಹಾಡಿದ್ದೇನೆ. ಇದರಿಂದ ಕರ್ನಾಟಕ ಸಂಗೀತ ಹೆಚ್ಚು ಜನರಿಗೆ ತಲುಪುತ್ತದೆ. ಆದರೆ ಹಾಗೆ ಮಾಡುವಾಗ ನಮ್ಮ ಬೇರು ಎಲ್ಲಿದೆ ಎನ್ನುವುದನ್ನು ಮರೆಯಬಾರದು.

12ನೇ ಶತಮಾನದ ಮಾನಸೋಲ್ಲಾಸದಂತಹ ಶಾಸ್ತ್ರಗ್ರಂಥದ ಮೇಲೆ ಪ್ರೌಢಪ್ರಬಂಧ ಬರೆದವರು ನೀವು. ಆ ಪುರಾತನ ಗ್ರಂಥ ವರ್ತಮಾನಕ್ಕೆ ಹೇಗೆ ಪ್ರಸ್ತುತ?

ಈ ಗ್ರಂಥ ಹಲವು ಕಾರಣಗಳಿಗೆ ಮುಖ್ಯ. ಕೇವಲ ಶಾಸ್ತ್ರದಲ್ಲಿದ್ದು ಪ್ರಯೋಗದಲ್ಲಿಲ್ಲದ ರಾಗಗಳ ಬಗ್ಗೆ ಮಾತನಾಡಬೇಕಿಲ್ಲ ಮತ್ತು ಯಾವುದೇ ಕಾಲಘಟ್ಟದಲ್ಲಿ 50ಕ್ಕಿಂತ ಹೆಚ್ಚು ರಾಗಗಳು ಬಳಕೆಯಲ್ಲಿರೋಲ್ಲ ಅನ್ನುತ್ತಾನೆ ಕವಿ ಮುಮ್ಮಡಿ ಸೋಮೇಶ್ವರ. ಮೃದಂಗ ಹಾಗೂ ವೀಣೆಯ ರಚನಾ ಕ್ರಮ, ನುಡಿಸುವ ಕ್ರಮ, ಅಂಗುಲಿವಿನ್ಯಾಸ, ಸಂಗೀತಸಭೆಯಲ್ಲಿ ಕಲಾವಿದರು, ವಾದಕರು ಎಲ್ಲೆಲ್ಲಿ ಕುಳಿತುಕೊಳ್ಳಬೇಕೆನ್ನುವುದನ್ನು ವಿವರಿಸುತ್ತಾನೆ. ವಾದನ ಮತ್ತು ಗಾಯನಗಳಲ್ಲಿ ಇಂದಿಗೂ ಅನ್ವಯಿಸಲಾಗುವ ಏಳು ಗಮಕಗಳನ್ನು ಹೇಳುತ್ತಾನೆ. ವಿಭಿನ್ನ ರೀತಿಯ ಸಂಗೀತ ಭಿನ್ನರುಚಿಯ ಜನರಿಗೆ ಆನಂದವನ್ನು ನೀಡುತ್ತದೆ ಎಂಬ ವಿಷಯವನ್ನು ತಿಳಿಸಿದ್ದಾನೆ. ದೈವಚಿಂತನೆಯೇ ಭಕ್ತಿಯಲ್ಲ, ಯಾವುದರ ಬಗ್ಗೆ ನಿಮಗೆ ಪೂಜ್ಯಭಾವವೂ, ಪ್ರೇಮವೂ ಇರುತ್ತದೋ ಅದೇ ಭಕ್ತಿ. ಹಾಗಾಗಿ ಲೋಭವಿಲ್ಲದೆ, ದುರುದ್ದೇಶವಿಲ್ಲದೆ, ತನಗಿಷ್ಟವಾದ ವಿಷಯವನ್ನು ಕುರಿತ ರಚನೆಯನ್ನು ತನ್ಮಯತೆಯಿಂದ ಹಾಡಿದರೆ, ಅದು ಉತ್ಕೃಷ್ಟ ಸಂಗೀತವೆನ್ನುತ್ತಾನೆ.

ಒಬ್ಬ ಕಲಾವಿದೆಯಾಗಿ ನಿಮ್ಮ ಸಂಗೀತದ ಗಟ್ಟಿಯಾದ, ವಿಶಿಷ್ಟ ಅಂಶ ಯಾವುದು?

ನಾನು ಕೃತಿಗಳಲ್ಲಿ ಒಲವುಳ್ಳವಳು. ಕೃತಿಯ ವಿನ್ಯಾಸದ ಸೊಗಸು, ಭಾಷಾ ಸೊಗಸು, ಅದರ ಸಂಗೀತಾತ್ಮಕ ಸೊಬಗು, ಅದರ ಉದ್ದೇಶ, ಅದು ಯಾವ ರೀತಿಯ ಪ್ರೇರಣೆ ಕೊಡ್ತಿದೆ ಅನ್ನೋದು ನನಗೆ ಮುಖ್ಯ. ನನಗೆ ರಾಗ, ಕಲ್ಪನಾಸ್ವರ ನೆರವಲ್ ಇವೆಲ್ಲಾ ಹುಟ್ಟೋದು ಕೃತಿಯಿಂದ. ಕೃತಿಪ್ರಸ್ತುತಿಯಲ್ಲಿ ಯಾವುದೋ ಒಂದು ಜಾಗಕ್ಕೆ ಬಂದಾಗ ಈ ಜಾಗ ಎಷ್ಟು ಚೆನ್ನಾಗಿದೆ. ಸ್ವರಹಾಕಿ ಇದನ್ನು ಅಲಂಕರಿಸಬೇಕೆಂಬ ಪ್ರೇರಣೆ ನನ್ನೊಳಗಿನಿಂದ ಉಕ್ಕುತ್ತದೆ. ಅದು ನನ್ನ ನಿಜವಾದ ಶಕ್ತಿ. ಕೃತಿಯ ಸಾಹಿತ್ಯದ ಉಚ್ಚಾರಣೆಯಿಂದ ಹಿಡಿದು ಶಬ್ದಗಳ ಲಾಲಿತ್ಯ, ಮಾಧುರ್ಯ, ಸೌಂದರ್ಯ, ಆ ಕಟ್ಟಾಣಿಕೆ, ನನಗೆ ಮುಖ್ಯವಾಗುತ್ತದೆ. ಕೃತಿ ನನಗೆ ಕೊಡುವ ಪುಳಕ, ನವಿರು ಅವರ್ಣನೀಯ. ಅದು ನನ್ನನ್ನು ಒಂದು ಧ್ಯಾನದ ಸ್ಥಿತಿಗೆ ಒಯ್ದುಬಿಡುತ್ತದೆ.

ಇಂದು ಕೇಳುಗರು ಮತ್ತು ಕಲಾವಿದರ ಮನಸ್ಸು ಮತ್ತು ಅಭಿರುಚಿ ಬದಲಾಗಿದೆಯಲ್ಲವೇ?

ಹೌದು. ಇವತ್ತಿನ ಗ್ಲೋಬಲೈಸೇಷನ್, ಲಿಬರಲೈಸೇಷನ್, ತಂತ್ರಜ್ಞಾನದ ಪ್ರಗತಿಯ ಪ್ರಭಾವ ಅಗಾಧ. ಅಪೇಕ್ಷೆಗಳು, ನಿರೀಕ್ಷೆಗಳು ಬದಲಾಗ್ತಾ ಇವೆ. ಧ್ವನಿವರ್ಧಕ ನಮ್ಮನ್ನು ಆಳ್ತಾ ಇದೆ. ಸಂಗೀತ ಅಂದರೆ ಸ್ಪೀಡ್, ಪಿಚ್, ವಾಲ್ಯೂಮ್ ಅಂತಾಗಿಬಿಟ್ಟಿದೆ. ಜನ ಮೆಚ್ಚುಗೆ ಸೂಚಿಸುವುದು ಇವುಗಳಿಗೆ. ಪ್ರಾಮಾಣಿಕವಾಗಿ ಹೇಳಬೇಕು ಅನ್ನಿಸಿದ್ದನ್ನು ಬಿಟ್ಟು, ಜನಕ್ಕೇನು ಬೇಕೋ ಅದನ್ನು ಕೊಡಬೇಕಾದಾಗ, ಸಂಗೀತದ ಗಟ್ಟಿತನವೇ ಕಳೆದುಹೋಗುತ್ತದೆ. ಇದೊಂದು ವಿಷವರ್ತುಲ. ಇವತ್ತು ಕೇಳುಗರ ದೊಡ್ಡ ವರ್ಗಕ್ಕೆ ಬೇಕಾಗಿರೋದು ಕೇವಲ ಮನರಂಜನೆ. ಸಂಗೀತದ ಸೂಕ್ಷ್ಮಗಳು, ವೈಶಿಷ್ಟ್ಯಗಳು ಅವರಿಗೆ ಬೇಕಾಗಿಲ್ಲ.

ಮಹಿಳೆಯಾಗಿಸಂಗೀತ ಕ್ಷೇತ್ರದಲ್ಲಿ ನಿಮ್ಮ ಅನುಭವ ಹೇಳಿ.

ಕಾಲೇಜಿನಲ್ಲಿ ನನಗೆ ಲಿಂಗತಾರತಮ್ಯದ ಅನುಭವ ಎಂದೂ ಆಗಲಿಲ್ಲ. ಸಂಗೀತ ಕ್ಷೇತ್ರದಲ್ಲಿ ಲಿಂಗತಾರತಮ್ಯ ಖಂಡಿತವಾಗಿಯೂ ಇದೆ. ನೋಡಿದ್ದೇನೆ, ಆದರೆ ಅನುಭವಿಸಿಲ್ಲ. ಲಿಂಗತಾರತಮ್ಯ ಕಂಡಾಗ ನನ್ನೊಳಗೆ ನಾನು ನೊಂದಿದ್ದೇನೆ. ಒಮ್ಮೆ ಶೇಷಾದ್ರಿಪುರಂನಲ್ಲಿ ಘನವಾಗಿ ಬೇಗಡೆರಾಗ ಹಾಡಿ ನಾದೋಪಾಸನ ಕೃತಿ ಹಾಡಿದೆ. ವಂದನಾರ್ಪಣೆಯಲ್ಲಿ ಕಾರ್ಯದರ್ಶಿಗಳು ‘ಗಂಡು ರಾಗವಾದ ಬೇಗಡೆಯನ್ನು ಗಂಡಸರನ್ನೂ ಮೀರಿಸಿ ಹಾಡಿದ್ದಾರೆ’ ಎಂದರು. ರಾಗವೊಂದನ್ನು ಗಂಡುರಾಗ ಅನ್ನೋದೆ ನನಗೆ ವಿಚಿತ್ರವೆನಿಸುತ್ತೆ. ಕೆಲವು ಕಲಾವಿದರು ಹೆಂಗಸರಿಗೆ ಪಕ್ಕವಾದ್ಯ ನುಡಿಸಲ್ಲ ಅಂತ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ನಾನೂ ಅಂತಹವರನ್ನು ಕರೆಯುವುದು ನಿಲ್ಲಿಸಿದೆ. ಸಂಕುಚಿತವಾದ ಭಾವನೆಗಳಿರೋ ಜನಗಳಿದ್ದಂತೆ, ಉದಾತ್ತವಾಗಿ, ಉದಾರವಾಗಿ ಯೋಚಿಸುವರೂ ಇದ್ದಾರೆ. ಅವರ ಸಂಪರ್ಕದಲ್ಲಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT