ಶುಕ್ರವಾರ, ನವೆಂಬರ್ 27, 2020
18 °C

ದಸರಾ ಸಂಗಿತೋತ್ಸವ 2020: ಒಬ್ಬಳೆ ಒಬ್ಬಳೆ ತಾಯಿ ದೇವಿ ಒಬ್ಬಳೆ..!

ಉಮಾ ಅನಂತ್ Updated:

ಅಕ್ಷರ ಗಾತ್ರ : | |

Prajavani

ವೀಣೆ ವಿದುಷಿ ಸುಮಾ ಸುಧೀಂದ್ರ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಹರಿಸಿದ ನಾದ ಪ್ರವಾಹದಲ್ಲಿ ಅವತರಿಸಿದ್ದು ದೇವಿಯೊಬ್ಬಳೇ. ‘ಪ್ರಜಾವಾಣಿ ದಸರಾ ಸಂಗೀತ ಮಹೋತ್ಸವ’ದ ಮೂರನೇ ದಿನದ ಸರಣಿಯಲ್ಲಿ ಸೋಮವಾರ ಸಂಜೆ ಆರಕ್ಕೆ ‘ಎಲ್ಲ ತಂತಿ ವಾದ್ಯಗಳ ತಾಯಿ’ ವೀಣೆಯಲ್ಲಿ ಆರಂಭವಾದ ದೇವಿ ಉಸಾಸನೆ ರಾತ್ರಿ ಎಂಟರವರೆಗೂ ಅತ್ಯಂತ ಜನಪ್ರಿಯ ಕೀರ್ತನೆಗಳೊಂದಿಗೆ ವಿಜೃಂಭಿಸಿತು.

ಕಛೇರಿಗೆ ಅಗ್ರಪಂಕ್ತಿ ಹಾಕಿದ್ದು ಸರಸ್ವತಿ ರಾಗ. ‘ಸರಸ್ವತಿ ನಮೋಸ್ತುತೆ...’ ಎಂಬ ಕೃತಿಯಲ್ಲಿ ವಿದ್ಯಾಧಿದೇವತೆಯ ಆರಾಧನೆ ನಡೆಯಿತು. ‘ಇವತ್ತಿನ ಇಡೀ ಕಛೇರಿಯನ್ನು ಪೂರ್ತಿಯಾಗಿ ದೇವಿಗೇ ಮೀಸಲಿಟ್ಟಿದ್ದೀನಿ. ನಮ್ಮ ಸಂಸ್ಕೃತಿಯಲ್ಲಿ ರಾಮ, ಈಶ್ವರನಿಗಿರುವಷ್ಟೇ ಆದ್ಯತೆ ದೇವಿಗೂ ಇದೆ. ಅಲ್ಲದೆ ನವರಾತ್ರಿಯ ಶುಭ ಸಂದರ್ಭದಲ್ಲಿ ದೇವಿಯನ್ನು ನೆನೆಸಿಕೊಳ್ಳುವುದು ಔಚಿತ್ಯಪೂರ್ಣವೂ ಆಗಿದೆ’ ಎನ್ನುತ್ತಾ ವಿದುಷಿ ಸುಮಾ, ಮುಂದೆ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ‘ನಾಗಾ ಗಾಂಧಾರಿ’ ರಾಗದ ಸುಪ್ರಸಿದ್ಧ ಕೃತಿ ‘ಸರಸಿಜನಾಭ ಸೋದರಿ...’ ಕೃತಿಗೆ ಆಲಾಪನೆ ಮಾಡತೊಡಗಿದರು. ಹಿತಮಿತವಾದ ಆಲಾಪದಲ್ಲಿ ಪಿಟೀಲು ಕೂಡ ವೀಣೆಯನ್ನೇ ಅನುಸರಿಸಿ ಎರಡೂ ತಂತಿ ವಾದ್ಯಗಳಲ್ಲಿ ದೇವಿ ಸುಖವಾಗಿ ಅವತರಿಸಿದ್ದು ಹೃದಯಸ್ಪರ್ಶಿಯೂ ಆಗಿತ್ತು.

‘ಅನ್ನಪೂರ್ಣೆ ವಿಶಾಲಾಕ್ಷಿ ಅಖಿಲ ಭುವನ ಸಾಕ್ಷಿ...’ ಸಾಮರಾಗ, ಆದಿತಾಳದ ಮಧ್ಯಮ ಕಾಲದ ಕೃತಿಯಲ್ಲೂ ತಾಯಿ ಅನ್ನಪೂರ್ಣೆಯ ವರ್ಣನೆಯೇ ಇದೆ. ‘ಗುರುಗುಹ’ ಎಂಬ ಅಂಕಿತನಾಮದಿಂದ ಮುತ್ತುಸ್ವಾಮಿ ದೀಕ್ಷಿತರು ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದು ಈ ಕೃತಿ ನವರಾತ್ರಿಯಂದು ಹಾಡದೇ ಅಥವಾ ನುಡಿಸದೇ ಇದ್ದರೆ ಕಛೇರಿಯೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಪಡೆದದ್ದು. ಇದಕ್ಕೆ ಕೊಂಚ ಸುದೀರ್ಘ ಆಲಾಪ ಮಾಡಿ, ಪಿಟೀಲು ತನಿಗೂ ಹೆಚ್ಚಿನ ಅವಕಾಶ ಮಾಡಿಕೊಟ್ಟರು ಈ ವಿದುಷಿ. ಇಲ್ಲಿ ಮಾರ್ದನಿಸಿದ ‘ಸ್ವರಪ್ರಸ್ತಾರ’ ಹಾಗೂ ‘ನೆರವಲ್‌’ಗಳು ಈ ರಾಗಕ್ಕೆ ಹೆಚ್ಚಿನ ಮೆರುಗನ್ನೂ ತಂದುಕೊಟ್ಟವು.

ರಾಗ ಬಿಲಹರಿ ಕೇಳುವುದೆಂದರೆ ಅದೊಂದು ಸೌಭಾಗ್ಯ. ಮೈಸೂರು ವಾಸುದೇವಾಚಾರ್ಯದ ವಿಳಂಬ ಕಾಲದ ಕೀರ್ತನೆ ‘ಶ್ರೀ ಚಾಮುಂಡೇಶ್ವರಿ ಪಾಲಯಮಾಂ..’ ನಲ್ಲಿ ರಾಗ ಬಿಲಹರಿ ದಳದಳವಾಗಿ ಅರಳಿತು. 29ನೇ ಮೇಳಕರ್ತ ರಾಗ ‘ಧೀರ ಶಂಕರಾಭರಣ’ದಲ್ಲಿ ಜನ್ಯವಾಗಿರುವ ಈ ರಾಗದಲ್ಲಿರುವ ‘ಚಿಟ್ಟೆಸ್ವರ’ ವೀಣೆ ತಂತಿಯ ಎಳೆಎಳೆಯಲ್ಲಿ ಮೊಳಗಿದ್ದು, ಮತ್ತೆ ಮತ್ತೆ ಕೇಳುವಂತಿತ್ತು.

ಸಂಜೆಯ ಸೊಬಗಿಗೆ ರಂಜನೆ ನೀಡಲೆಂದೇ ವಿದುಷಿ ಸುಮಾ ‘ರಂಜಿನಿ’ ರಾಗವನ್ನು ಆಯ್ದರು. ವಾಗ್ಗೇಯಕಾರ ಜಿ.ಎನ್‌. ಬಾಲಸುಬ್ರಹ್ಮಣ್ಯಂ ರಚಿಸಿದ ‘ರಂಜಿನಿ ನಿರಂಜಿನಿ..’ ಕೃತಿ ವೀಣೆ ನಾದದ ರುಚಿಯನ್ನೂ ವರ್ಧಿಸಿತು.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ಯಾಮಾಶಾಸ್ತ್ರಿಗಳು ‘ಸಂಗೀತ ತ್ರಿಮೂರ್ತಿ’ಗಳಲ್ಲಿ ಒಬ್ಬರೆಂದೇ ಖ್ಯಾತಿ ಪಡೆದವರು. ಭೈರವಿ ರಾಗ, ಖಂಡಛಾಪು ತಾಳದಲ್ಲಿ ರಚಿಸಿದ ‘ಸರಿಯಾಯುವರಮಾ..’ ಕೃತಿ ವೀಣೆಯಲ್ಲಿ ಅತ್ಯಾಕರ್ಷಕವಾಗಿ ಮೂಡಿಬಂತು. ಸುದೀರ್ಘ ಆಲಾಪ, ರಾಗದ ವಿಸ್ತಾರವಾದ ಹರವು, ಕೃತಿಯ ಲಯಬದ್ಧ ಹಾಗೂ ವಿದ್ವತ್ಪೂರ್ಣ ನಿರೂಪಣೆಯನ್ನು ಕೇಳಿದಾಗ ಸಾಕ್ಷಾತ್‌ ದೇವಿಯೇ ಧರೆಗಿಳಿದ ಅನುಭವ. ಕೊನೆಯಲ್ಲಿ ನಡೆದ ‘ತನಿಯಾವರ್ತನ’ವೂ ಅದ್ಭುತ ರಸಪಾಕವನ್ನೇ ಸೃಷ್ಟಿಸಿತು. ಲಯವಾದ್ಯಗಳಾದ ಮೃದಂಗ ಹಾಗೂ ಖಂಜೀರ ಕಲಾವಿದರು ಒಬ್ಬರಾದ ಮೇಲೊಬ್ಬರು ತಮ್ಮ ಸಾಮರ್ಥ್ಯ, ಸಾಧನೆಯ ಅನಾವರಣಗೊಳಿಸಿದರು. 

ಸಂಪ್ರದಾಯದಂತೆ ಕಛೇರಿಯ ಅಂತ್ಯ ಯಾವತ್ತೂ ಪುರಂದರದಾಸರ ಕೃತಿಯೊಂದಿಗೇ. ಮಧ್ಯಮಾವತಿ ರಾಗದಲ್ಲಿ ‘ಭಾಗ್ಯದ ಲಕ್ಷ್ಮಿ ಬಾರಮ್ಮಾ..’ ಕೃತಿ ನವರಾತ್ರಿಯ ರಂಗಿಗೆ ರಾಗಗಳ ರಂಗೂ ಏರುವಂತೆ ಮಾಡಿತ್ತು. ಪಿಟೀಲಿನಲ್ಲಿ ವಿದ್ವಾನ್‌ ಜಿ.ಕೆ. ಶ್ರೀಧರ್‌, ಮೃದಂಗದಲ್ಲಿ ಬಿ.ಸಿ. ಮಂಜುನಾಥ್‌ ಹಾಗೂ ಖಂಜೀರದಲ್ಲಿ ಆನೂರ್‌ ಸುನಾದ್‌ ಸಹಕರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು