ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನೀ ಬಿಟ್ಟು ಬಿಡು ಜಾತಿ, ಬಿಡುವೆ ನಾ ಮೀಸಲಾತಿ...

ಜಾತೀಯತೆ ವಿರುದ್ಧ ಹರೀಶ್ ಕಾಂಬಳೆ ‘ಹಿಪ್ ಹಾಪ್’ ಹಾಡಿನ ವಿಭಿನ್ನ ದನಿ
Last Updated 20 ಸೆಪ್ಟೆಂಬರ್ 2020, 7:34 IST
ಅಕ್ಷರ ಗಾತ್ರ
ADVERTISEMENT
""
""

‘ಜಾತಿ’ ಮತ್ತು ‘ಮೀಸಲಾತಿ’ ಭಾರತದ ಬಹುಚರ್ಚಿತ ಎರಡು ಪ್ರಮುಖ ವಿಷಯಗಳು. ವ್ಯಕ್ತಿಯೊಬ್ಬ ಜಾತಿ ಕಾರಣಕ್ಕೆ ತನ್ನೂರಿನಲ್ಲಿ ಅನುಭವಿಸುವ ಅವಮಾನ ಅಥವಾ ದೌರ್ಜನ್ಯ ಒಂದು ರೀತಿಯದ್ದು. ಆದರೆ, ಅದೇ ಜಾತಿ ಕಾರಣಕ್ಕಾಗಿ ಮೀಸಲಾತಿ ಪಡೆದು ಒಂದು ಹಂತಕ್ಕೆ ಬಂದಾಗಲೂ, ಒಂದಲ್ಲ ಒಂದು ರೀತಿಯಲ್ಲಿ ಕಡೆಗಣನೆ ಅಥವಾ ಮೂದಲಿಕೆಗೆ ಆತ ಒಳಗಾಗುತ್ತಾನೆ.

ಗ್ರಾಮೀಣ ಭಾಗದ ಜಾತೀಯತೆ ಕಣ್ಣಿಗೆ ಗೋಚರಿಸುತ್ತದೆ. ಕೆಲವೊಮ್ಮೆ ಹಲ್ಲೆಯ ರೂಪದಲ್ಲೂ ಕಾಣಿಸಿಕೊಳ್ಳುತ್ತದೆ. ನಗರದ್ದು ಮಾನಸಿಕ ಸ್ವರೂಪದ್ದು. ಓದಿಕೊಂಡಿರುವ ಮಂದಿ ಮಾಡುವ ಜಾತೀಯತೆ ಅಮೂರ್ತ ರೂಪದ್ದು. ಈ ಮಾನಸಿಕ ಹಿಂಸೆಯನ್ನು ಮೆಟ್ಟಿ ಹೊರಬರುವವರಷ್ಟೇ ಪ್ರಮಾಣದಲ್ಲಿ, ಪರಿಸ್ಥಿತಿಯ ಕೈಗೊಂಬೆಯಾಗಿ ಅದರೊಳಗೆ ಸಿಲುಕಿ ಯಾತನೆ ಅನುಭವಿಸುವವರೂ ಅಧಿಕ. ಕೆಲವೊಮ್ಮೆ ಆತ್ಮಹತ್ಯೆ ಆಲೋಚನೆಯ ಮಟ್ಟಕ್ಕೂ ಅದು ಕೊಂಡೊಯ್ಯುವುದುಂಟು.

ವರ್ಣ ವ್ಯವಸ್ಥೆಯ ಕಾಲದಿಂದ ಹಿಡಿದು, ಇಂದಿನ ಆಧುನಿಕ ಯುಗದವರೆಗೆ ಅಸ್ಪೃಶ್ಯತೆ ಆಚರಣೆ ಹಾಗೂ ಜಾತೀಯತೆಯು ಭಿನ್ನ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತಲೇ ಇದೆ. ಇದೊಂದು ರೀತಿಯಲ್ಲಿ ಸರ್ವಾಂತರ್ಯಾಮಿ. ನೆರಳಿನಂತೆ ಹಿಂಬಾಲಿಸುತ್ತ ಕೆಲವೊಮ್ಮೆ ಕಣ್ಣಿಗೆ ಕಂಡರೆ, ಕೆಲವೊಮ್ಮೆ ಅಡಗಿಕೊಳ್ಳುತ್ತದೆ. ಆದರೆ, ಅದರ ಬಿಸಿ ಮಾತ್ರ ತಟ್ಟುತ್ತಲೇ ಇರುತ್ತದೆ.

ಅಸ್ಪೃಶ್ಯತೆ ಆಚರಣೆ ಹಾಗೂ ಜಾತೀಯತೆ ವಿರುದ್ಧ ಹಿಂದಿನಿಂದಲೂ ವಿವಿಧ ರೀತಿಯಲ್ಲಿ ದನಿಗಳು ಮೊಳಗಿವೆ. ಈಗಲೂ ಮೊಳಗುತ್ತಿವೆ. ಅವರವರ ಭಾವಕ್ಕೆ ತಕ್ಕಂತೆ ಹಲವರು ಹಲವು ರೀತಿಯಲ್ಲಿ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಕಾಲ ಬದಲಾದಂತೆ ಅದು, ವಿವಿಧ ಕ್ಷೇತ್ರಗಳಲ್ಲಿ ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ಸಂಗೀತ ಕ್ಷೇತ್ರದಲ್ಲಿ ದಾಸವಾಣಿಯಿಂದ ಹಿಡಿದು, ಶರಣರ ವಚನಗಳಾದಿಯಾಗಿ ವಿವಿಧ ರೀತಿಯಲ್ಲಿ ಅದನ್ನು ಕಾಣಬಹುದು. ಈಗ ಅದರ ಮುಂದುವರಿದ ಭಾಗವಾಗಿ ಹಿ‌ಪ್ ಹಾಪ್ ಅಥವಾ ರ‍್ಯಾಪ್ ಹಾಡುಗಳಲ್ಲೂ ಜಾತೀಯತೆಯ ವಿರುದ್ಧದ ಭಿನ್ನವಾದ ದನಿ ಕೇಳಿ ಬರುತ್ತಿದೆ.

ಹರೀಶ ಕಾಂಬಳೆ

ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ‘ನೀ ಬಿಟ್ಟು ಬಿಡು ಜಾತಿ, ಬಿಡುವೆ ನಾ ಮೀಸಲಾತಿ’ ಎಂಬ ರ‍್ಯಾಪ್ ಹಾಡು ಗಮನ ಸೆಳೆಯುತ್ತಿದೆ. ಜಾತೀಯತೆಯ ವಿರುದ್ಧ ಹಳ್ಳಿ ಹುಡುಗನೊಬ್ಬನ ಈ ಹಾಡು, ‘ಜಾತಿ ಎಲ್ಲಿದೆ? ಅದೆಲ್ಲಾ ಮುಗಿದು ಹೋದ ಕಥೆ. ಸುಮ್ಮನೆ ನೀವು ಇಂದಿಗೂ ಜಾತಿ, ಜಾತಿ ಅಂತ ಅರಚಿಕೊಳ್ತೀರಾ’ ಎಂದು ಅಮಾಯಕರಂತೆ ಪ್ರಶ್ನಿಸುವವರನ್ನೂ ತಟ್ಟುವಂತಿದೆ. ದೇಶ ಆಧುನಿಕತೆಗೆ ತೆರೆದುಕೊಳ್ಳುತ್ತಾ ಹೋದರೂ, ಅದರೊಳಗೆ ಕಾಣದಂತೆ ಮಿಳಿತಗೊಳ್ಳುತ್ತಿರುವ ಜಾತೀಯತೆಯ ಸ್ವರೂಪವನ್ನು ಈ ಹಾಡು ವೇದ್ಯಗೊಳಿಸುತ್ತದೆ.

ಈ ಹಾಡನ್ನು ಕೇಳಿದವರಿಗೆ ತಮ್ಮೊಳಗಿನ ಜಾತೀಯತೆಯ ಪ್ರಜ್ಞೆ ಎಚ್ಚರಗೊಳ್ಳುತ್ತಲೇ, ಹಾಡಿನಲ್ಲಿ ಕಾಣುವ ಹುಡುಗನ ಬಗ್ಗೆಯೂ ಹಲವು ಪ್ರಶ್ನೆಗಳು ಏಳುತ್ತವೆ. ‘ಇವನ್ಯಾರೊ ಸಂಗೀತದ ಹಿನ್ನೆಲೆ ಹೊಂದಿರುವ ನಗರದ ಹುಡುಗನಿರಬೇಕು. ಆದರೂ, ಎಷ್ಟು ಚನ್ನಾಗಿ ಹಾಡಿದ್ದಾನೆ’ ಅಂದುಕೊಳ್ಳುತ್ತಾರೆ. ಅಂದಹಾಗೆ, ಆ ಹುಡುಗನ ಹಿನ್ನೆಲೆ ಕೇಳಿದಾಗ ನಿಜಕ್ಕೂ ಆತನ ಬಗ್ಗೆ ಆಸಕ್ತಿ ಹೆಚ್ಚದಿರದು.

ಆ ಹುಡುಗನ ಹೆಸರು ಹರೀಶ ಕಾಂಬಳೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಹತ್ಯಾಳ ಎಂಬ ಹಳ್ಳಿಯಲ್ಲಿ ವಾಸ. ಬಿಎಸ್ಸಿ ಪದವಿ ಜತೆಗೆ, ಬಿ.ಇಡಿ ಕೋರ್ಸ್ ಓದಿಕೊಂಡಿದ್ದಾನೆ. ಸದ್ಯ ಹಳ್ಳಿಯಲ್ಲಿರುವ ಖಾಸಗಿ ಡಾ.ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಶಿಕ್ಷಕನಾಗಿ ಕೆಲಸ.

ಅವಮಾನವೇ ಪ್ರೇರಣೆ

ಎಲ್ಲಾ ಪ್ರತಿಭೆಯ ಹಿಂದೆ ಒಂದೊಂದು ರೀತಿಯ ಸ್ಫೂರ್ತಿ ಇರುತ್ತದೆ. ಆದರೆ, ಹರೀಶ್ ಅವರ ಈ ಹಾಡಿಗೆ ಪ್ರೇರಣೆಯಾಗಿದ್ದು ಹಳ್ಳಿಯಿಂದ ಹಿಡಿದು ಕಾಲೇಜಿನವರೆಗೆ ತಾವು ಎದುರಿಸಿದ ಜಾತೀಯತೆ. ಈ ಅನುಭವಗಳನ್ನೇ ಅಕ್ಷರ ರೂಪಕ್ಕಿಳಿಸಿ, ಅದಕ್ಕೆ ಹಿಪ್‌ಹಾಪ್ ಹಾಡಿನ ರೂಪ ಕೊಟ್ಟು ಮುಂದಿಟ್ಟಿದ್ದಾರೆ.

‘ಬಿಎಸ್ಸಿ ಓದುವಾಗ ಪ್ರಾಯೋಗಿಕ ಪರೀಕ್ಷೆ ಇತ್ತು. ಚೆನ್ನಾಗಿ ಓದಿಕೊಂಡು ಯಾವ ಪ್ರಶ್ನೆ ಕೇಳಿದರೂ ಉತ್ತರಿಸಲು ರೆಡಿಯಾಗಿ ಉಪನ್ಯಾಸಕರ ಎದುರಿಗೆ ಹೋಗಿ ಕುಳಿತೆ. ನನ್ನ ರೆಕಾರ್ಡ್‌ ಪುಸ್ತಕದ ಮೇಲಿದ್ದ ಹೆಸರಿನ ಮೇಲೆ ಕಣ್ಣಾಡಿಸಿದ ಅವರು, ‘ನೀವು ರಿಸರ್ವ್ಡ್ ಕೆಟಗರಿಗೆ ಬರುತ್ತೀರಲ್ಲ. ಸರಿ ಬಿಡಿ, ನಿಮಗೆ ಕೇಳುವುದು ಏನೂ ಇಲ್ಲ’ ಎಂದು ಕಳಿಸಿದರು. ಹೆಸರಿನಲ್ಲಿ ನನ್ನ ಜಾತಿ ಗುರುತು ಹಿಡಿದು ನನ್ನನ್ನು ನೋಡಿದ ರೀತಿ ತುಂಬಾ ಕಾಡಿತು. ಅದರ ಹಿರಿತ ಹಳ್ಳಿಯ ಅಸ್ಪೃಶ್ಯತೆಗಿಂತಲೂ ಹೆಚ್ಚಾಗಿತ್ತು. ಅಂದಿನಿಂದ ಅಸ್ಪೃಶ್ಯತೆ ಆಚರಣೆ, ಜಾತೀಯತೆ ಹಾಗೂ ಮೀಸಲಾತಿ ಬಗ್ಗೆ ಮೇಲ್ಜಾತಿಯವರು ಮಾಡುವ ಅವಮಾನ ಹಾಗೂ ಕಡೆಗಣನೆಯ ಭಿನ್ನ ರೂಪಗಳನ್ನು ಗಮನಿಸುತ್ತಾ ಬಂದೆ. ಆಗಲೇ ಇವುಗಳ ವಿರುದ್ಧ ವಿಭಿನ್ನವಾಗಿ ದನಿ ಎತ್ತಬೇಕು ಎಂದು ನಿರ್ಧರಿಸಿದೆ. ಆಗಲೇ ಹಿಪ್‌ಹಾಪ್‌ನತ್ತ ನನ್ನ ಗಮನ ಹರಿಯಿತು’ ಎಂದು ಹರೀಶ್ ತಮ್ಮ ಅನುಭವವನ್ನು ಹಂಚಿಕೊಂಡರು.

‘ಹಿಂದಿಯಲ್ಲೇ ರ‍್ಯಾಪರ್ ಸುಮೀತ್ ಸ್ಯಾಮೊಸ್, ತಮಿಳಿನ ಅರಿವು, ಕ್ಯಾಸ್ಟ್‌ಲೆಸ್ ಕಲೆಕ್ಷನ್ ಬ್ಯಾಂಡ್, ನಮ್ಮ ಬಸವಣ್ಣನ ನೆಲದಲ್ಲಿ ಜಾತಿ ವಿರುದ್ಧ ಶರಣರು ಹಾಡಿದ ವಚನಗಳು, ಅಂಬೇಡ್ಕರ್ ಅವರ ಬರಹಗಳು ನನ್ನನ್ನು ಪ್ರಭಾವಿಸಿದವು. ಅಂದಿನಿಂದ ರ‍್ಯಾಪ್ ಸಾಹಿತ್ಯ ಬರೆಯಲು ಆರಂಭಿಸಿದೆ. ಜತೆಗೆ, ಸಂಗೀತ ಕಲಿಕೆಯತ್ತಲೂ ಗಮನ ಹರಿಸಿದೆ. ಅದರ ಫಲವಾಗಿ ಕನ್ನಡದಲ್ಲಿ ‘ನೀ ಬಿಟ್ಟು ಬಿಡು ಜಾತಿ, ಬಿಡುವೆ ನಾ ಮೀಸಲಾತಿ’ ಹಾಗೂ ಹಿಂದಿಯಲ್ಲಿ ‘ಚೋಟಿ ತೇರಿ ಸೋಚ್’ ಹಾಡುಗಳನ್ನು ಚಿತ್ರೀಕರಿಸಿದೆ. ಹಾಡಿನ ಜತೆಗೆ, ಸಂಗೀತ ಸಂಯೋಜನೆಯನ್ನೂ ಮಾಡಿದೆ. ಎಡಿಟಿಂಗ್ ಸೇರಿದಂತೆ ಕೆಲ ತಾಂತ್ರಿಕ ಕೆಲಸಗಳನ್ನು ಹಣ ಕೊಟ್ಟು ಮಾಡಿಸಿದ್ದೇನೆ. ಕೈಯಲ್ಲಿರುವ ಅಷ್ಟೋ ಇಷ್ಟು ಹಣದಲ್ಲೇ ಇವೆಲ್ಲವನ್ನೂ ಮಾಡಿಕೊಂಡು ಬರುತ್ತಿದ್ದೇನೆ. ಆದರೆ, ಸಾಮಾಜಿಕ ಅನಿಷ್ಟವಾದ ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ದನಿ ಎತ್ತುತ್ತಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಅವರು ಸಾರ್ಥಕ ಭಾವ ವ್ಯಕ್ತಪಡಿಸಿದರು.

‘ನನ್ನ ಪ್ರಯತ್ನಕ್ಕೆ ಮೆಚ್ಚುಗೆಯಷ್ಟೇ ಕೆಲವರು, ಬೆದರಿಕೆ ರೂಪದಲ್ಲಿ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಮೆಚ್ಚಿಕೊಂಡವರ ಪ್ರೀತಿಯೇ ಹೆಚ್ಚು. ಹಾಗಾಗಿ, ಅವಕ್ಕೆಲ್ಲ ಕ್ಯಾರೇ ಎನ್ನದೆ ನನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದಾನೆ. ಸದ್ಯ ‘ಪ್ಯಾಂಡಮಿಕ್ ಫೀಟ್’ (ಮಹಾಮಾರಿ) ಎಂಬ ಹೊಸ ಹಾಡು ತಯಾರಾಗಿದೆ. ಲಾಕ್‌ಡೌನ್‌ ಹಾಗೂ ಕೊರೊನಾ ಸೋಂಕನ್ನು ಗಮನದಲ್ಲಿಟ್ಟುಕೊಂಡು ಈ ಹಾಡು ಬರೆದಿದ್ದೇನೆ. ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿದ ಜಾತಿ ದೌರ್ಜನ್ಯದ ಪ್ರಕರಣಗಳು ಸೇರಿದಂತೆ, ಒಟ್ಟಾರೆ ಪರಿಸ್ಥಿತಿಗೆ ಮನುಷ್ಯನ ಕೊಡುಗೆ ಏನು ಎಂಬುದನ್ನು ಹೇಳಲು ಪ್ರಯತ್ನಿಸಿದ್ದೇನೆ. ಸೆ. 21ರಂದು ಅದನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಿದ್ದೇನೆ’ ಎನ್ನುತ್ತಾರೆ ಹರೀಶ್.

ಹಾಡುಗಳನ್ನು ಕೇಳಲು ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT