ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜನೆಯ ‘ರಾಗಾ’ ಸ್ವರಯಾನ

Last Updated 25 ಫೆಬ್ರವರಿ 2023, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿರುವ ರಂಜನಿ–ಗಾಯತ್ರಿ ಸಹೋದರಿಯರ ಕಛೇರಿ ಎಂದರೆ ಅದೊಂದು ರಸದೌತಣ. ‘ಸಾಮಗಾನ ಮಾತಂಗ’ ಗೌರವಕ್ಕೆ ಪಾತ್ರರಾದ ಈ ಸಹೋದರಿಯರ ಜೊತೆಗೊಂದು ಮಾತುಕತೆ...

**

ರಂಜನಿ–ಗಾಯತ್ರಿ... (RaGa sisters) ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುಗರಿಗೆ ಈ ಸಿರಿಕಂಠದ ಜೋಡಿಯ ಹೆಸರು ಚಿರಪರಿಚಿತ. ಇವರ ಯುಗಳ ಗಾಯನ ಜಗತ್ಪ್ರಸಿದ್ಧ. ಇವರು ರಾಗಗಳ ಸ್ವರಮಾಲೆ ಪೋಣಿಸಿದರೆಂದರೆ ಕಛೇರಿ ಮುಗಿದರೂ ಮನದಲ್ಲಿ ರಾಗಗಳದ್ದೇ ಗುಂಗು. ರಾಗ–ತಾನ–ಪಲ್ಲವಿ ಹಾಡುವುದನ್ನು ಕೇಳುವುದೇ ಪರಮಾನಂದ. ಚೆನ್ನೈಯಲ್ಲಿ ನೆಲೆಸಿರುವ ಈ ಸಹೋದರಿಯರು, ಎಳೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಪಕ್ವತೆ ಸಾಧಿಸಿದವರು.

ದೇಶ ವಿದೇಶಗಳಲ್ಲಿ ಸಂಗೀತದ ಕಂಪನ್ನು ಪಸರಿಸಿದ ಈ ಅಕ್ಕತಂಗಿಯರಿಗೆ ಇದೀಗ ಬೆಂಗಳೂರಿನ ‘ಭಾರತೀಯ ಸಾಮಗಾನ ಸಂಗೀತ ಸಭಾ’ ನೀಡುವ ಪ್ರತಿಷ್ಠಿತ ‘ಸಾಮಗಾನ ಮಾತಂಗ’ ಪ್ರಶಸ್ತಿಯ ಗರಿ. ಈ ಹಿನ್ನೆಲೆಯಲ್ಲಿ ರಂಜನಿ–ಗಾಯತ್ರಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಸ್ವರಯಾನದ ಬಗ್ಗೆ ಮಾತುಕತೆ ನಡೆಸಿದರು.

ಈ ಯುಗಳ ಸಹೋದರಿಯರು ವಿಶ್ವವೇದಿಕೆವರೆಗೆ ಹೋದದ್ದು ಗಾಯಕಿಯರಾಗಿ. ಗಾಯನ ಕಲಿಕೆಗೂ ಮುನ್ನ ಇಬ್ಬರೂ ಪಿಟೀಲು ವಾದಕಿಯರಾಗಿದ್ದರು. ಹದಿಹರೆಯದಲ್ಲೇ ಘಟಾನುಘಟಿ ಕಲಾವಿದರಾಗಿದ್ದ ಡಿ.ಕೆ. ಪಟ್ಟಮ್ಮಾಳ್‌, ಬಾಲಮುರಳಿಕೃಷ್ಣ,
ಟಿ. ವಿಶ್ವನಾಥನ್‌ನಂ‌ಥವರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಸೈ ಎನಿಸಿಕೊಂಡವರು. ಹಾಗಾದರೆ ಈ ವಿದುಷಿಯರ ಸಂಗೀತ ಜೀವನ ಗಾಯಕಿಯರಾಗಿ ತಿರುವು ಪಡೆದುಕೊಂಡದ್ದು ಹೇಗೆ?

ರಂಜನಿ–ಗಾಯತ್ರಿ ಅವರ ಮಾತುಗಳಲ್ಲೇ ಕೇಳೋಣ.

ನಮ್ಮ ಮನೆಯಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಗೀತದ ವಾತಾವರಣ ಇತ್ತು. ಮುಂಬೈಯಲ್ಲಿ ಹುಟ್ಟಿ ಬೆಳೆದದ್ದು. ನಮ್ಮ ತಂದೆ ಎನ್‌. ಬಾಲಸುಬ್ರಹ್ಮಣ್ಯನ್, ತಾಯಿ ಮೀನಾಕ್ಷಿ ಇಬ್ಬರಿಗೂ ಸಂಗೀತದಲ್ಲಿ ಅಪರಿಮಿತ ಆಸಕ್ತಿ. ಆದರೆ, ಇವರಿಬ್ಬರೂ ಶಾಸ್ತ್ರೀಯವಾಗಿ ಸಂಗೀತ ಕಲಿತವರಲ್ಲ. ತಂದೆ ವಿಶ್ವಸಂಸ್ಥೆಯಲ್ಲಿ (United Nations) ವೃತ್ತಿಯಲ್ಲಿದ್ದರೆ, ತಾಯಿ ಅಧ್ಯಾಪಕಿ. ಮುಂಬೈಯಲ್ಲಿ ನಡೆಯುತ್ತಿದ್ದ ಎಲ್ಲ ಸಂಗೀತ ಕಛೇರಿಗಳಿಗೂ ಅಪ್ಪ ನಮ್ಮನ್ನು ಕರೆದುಕೊಂಡು ಹೋಗಿ ಸಂಗೀತದಲ್ಲಿ ಹೆಚ್ಚು ಆಸಕ್ತಿ ಬರುವಂತೆ ಮಾಡುತ್ತಿದ್ದರು. ಅವರಿಗೆ ಸಂಗೀತ ಎಂಬುದು ‘ಪ್ಯಾಶನ್‌’. ಆಗ ಮುಂಬೈಯಲ್ಲಿ ಹಿಂದೂಸ್ತಾನಿ ಸಂಗೀತವೇ ಹೆಚ್ಚು ಪ್ರಚಲಿತದಲ್ಲಿತ್ತು. ಅಲ್ಲಲ್ಲಿ ಕರ್ನಾಟಕ ಸಂಗೀತವೂ ಇರುತ್ತಿತ್ತು.

ಮೊದಲು ಹನ್ನೆರಡು ವರ್ಷ ಪಿಟೀಲು ಕಲಿತೆವು. ಮುಂದೆ ಮುಂಬೈಯಿಂದ ಚೆನ್ನೈಗೆ ಬಂದು ನೆಲೆಸ ಬೇಕಾಯಿತು. ಆಗ ನಮ್ಮ ಗುರು ವಿದ್ವಾನ್‌ ಪಿ.ಎಸ್‌. ನಾರಾಯಣಸ್ವಾಮಿ ಅವರು ನಮಗೆ ಹಾಡುವಂತೆ ಹೇಳುತ್ತಿದ್ದರು. ಒಮ್ಮೆ ಚೆನ್ನೈಯಲ್ಲಿ ಒಂದು ಸಂಗೀತ ಕಛೇರಿ ಏರ್ಪಡಿಸಿ ನಮ್ಮನ್ನು ಹಾಡಲು ಹೇಳಿದರು. ಈ ಅನಿರೀಕ್ಷಿತ ಆಹ್ವಾನದಿಂದ ನಾವು ಮೊದಲು ತಬ್ಬಿಬ್ಬಾದರೂ ಸಿಕ್ಕಿದ ಅವಕಾಶ ಬಿಡಲಿಲ್ಲ. ಇಬ್ಬರೂ ಯುಗಳ ಕಛೇರಿ ನೀಡಿದೆವು. ಇದು ಎಲ್ಲರಿಗೂ ಇಷ್ಟವಾಯಿತು. ಇಲ್ಲಿಂದ ಮುಂದೆ ನಾವು ಗಾಯಕಿಯರಾಗಿಯೇ ಮುಂದುವರೆದೆವು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಈ ಹಂತ ತಲುಪಲು ನಮ್ಮ ಗುರುಗಳೇ ಕಾರಣ.

ಸ್ಮರಣೀಯಂ...!: ಕಲಾವಿದರ ಬದುಕಿನಲ್ಲಿ ಅನೇಕ ಸ್ಮರಣೀಯ ಘಟನೆಗಳು ಜರುಗುತ್ತಲೇ ಇರುತ್ತವೆ. ನಮ್ಮ ಮೊದಲ ಪರಿಪೂರ್ಣ ಸಾರ್ವಜನಿಕ ಕಛೇರಿಯಲ್ಲಿ ಆದ ಅನುಭವ ನಮಗೆಂದಿಗೂ ಸ್ಮರಣೀಯ. ಇದು ನಮ್ಮೆಲ್ಲ ಕಛೇರಿಗಳಿಗೆ ದಾರಿದೀಪವೂ ಹೌದು. ಅದು 1986ನೇ ಇಸವಿ. ನನಗಾಗ (ರಂಜನಿ) ಹದಿಮೂರು ವರ್ಷ. ಗಾಯತ್ರಿಗೆ 10 ವರ್ಷ. ಚೆನ್ನೈಯ ‘ಇಂಡಿಯನ್‌ ಮ್ಯೂಸಿಕ್ ಗ್ರೂಪ್‌’ ಸಂಘಟಿಸಿದ ಯೂತ್‌ ಫೆಸ್ಟಿವಲ್‌ನಲ್ಲಿ ನಮಗೆ ಅವಕಾಶ ಸಿಕ್ಕಿತು. ಮೂರು ದಿನಗಳ ಸಂಗೀತೋತ್ಸವ ಅದು. ನಾವಿಬ್ಬರೂ ಪಿಟೀಲು ಕಛೇರಿ ನಡೆಸಿಕೊಟ್ಟೆವು. ಮರುದಿನ ಆಂಗ್ಲ ಪತ್ರಿಕೆಯೊಂದರಲ್ಲಿ ನಮ್ಮ ಕಛೇರಿಯ ಸುದ್ದಿ ಮುಖಪುಟದಲ್ಲೇ ಬಂತು.

‘ಯಂಗ್‌ ಆರ್ಟಿಸ್ಟ್ಸ್ ಬ್ರೈಟೆನ್‌ ‌ದಿ ಫೆಸ್ಟಿವಲ್‌’ (Young artists brighten the festival) ಅಂತ. ಆಗ ನಮಗಾದ ಆನಂದ ಬಹುಶಃ ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದವರಿಗೂ ಆಗಿರಲಿಕ್ಕಿಲ್ಲ.

1997ರಿಂದ ನಾವು ಸಂಪೂರ್ಣವಾಗಿ ನಮ್ಮನ್ನು ಗಾಯನಕ್ಕೇ ತೊಡಗಿಸಿಕೊಳ್ಳಲಾರಂಭಿಸಿದೆವು. ಅದು 1999ನೇ ಜನವರಿ ತಿಂಗಳು. ಚೆನ್ನೈಯ ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಮ್ಮ ಕಛೇರಿ ಏರ್ಪಾಡಾಗಿತ್ತು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ನಾವು ಗಾಯನ ಕಛೇರಿ ನೀಡಿದೆವು. ವರ್ಣ, ಕೃತಿ, ಕೀರ್ತನೆ, ತಿಲ್ಲಾನಗಳನ್ನು ಮನದುಂಬಿ ಹಾಡಿದೆವು. ಈ ಕಛೇರಿ ನಮ್ಮನ್ನು ಸಂಪೂರ್ಣ ಗಾಯಕಿಯರನ್ನಾಗಿ ಪ್ರತಿಷ್ಟಾಪಿಸಿತು.

ವಿದೇಶದಲ್ಲಿ ಹಲವಾರು ‍ಪ್ರತಿಷ್ಠಿತ ಸಭಾಂಗಣಗಳಲ್ಲಿ ಹಾಡಿದೆವು. ಎಲ್ಲವೂ ಒಂದು ರೀತಿಯಲ್ಲಿ ‘ಮ್ಯಾಜಿಕಲ್‌ ಮೂವ್‌ಮೆಂಟ್’ ಎಂದೇ ಹೇಳಬಹುದು. ಪೋಲೆಂಡ್‌ನಲ್ಲಿ ಸುಮಾರು ಐದು ವರ್ಷಗಳ ಹಿಂದೆ ನೀಡಿದ ಕಛೇರಿ ನಮ್ಮ ಮೇಲೆ ಬಹಳ ಪ್ರಭಾವ ಬೀರಿತು. ಅಲ್ಲಿನ ಜನರಿಗೆ ಶಾಸ್ತ್ರೀಯ ಸಂಗೀತದ ಗಂಧವಿಲ್ಲ. ಆದರೆ ಆಸ್ವಾದಿಸುವ ಮನಸ್ಸಿದೆ. ಇಡೀ ಕಛೇರಿಯನ್ನು ಆಲಿಸಿದ ಅನೇಕ ಕೇಳುಗರು, ಸಂಗೀತ ಮುಗಿದಮೇಲೆ ಅಕ್ಷರಶಃ ಕಣ್ಣುಗಳಲ್ಲಿ ನೀರು ತುಂಬಿಕೊಂಡರು. ನಮ್ಮ ಗಾಯನ ಅವರ ಹೃದಯ ತಟ್ಟಿತ್ತು. ಸಂಗೀತಕ್ಕಿರುವುದು ಮಾಂತ್ರಿಕ ಶಕ್ತಿ, ಚುಂಬಕ ಸೆಳೆತ ಎಂಬುದನ್ನು ಅವರು ಸಾಬೀತುಪಡಿಸಿದರು. ಕೆಲವು ಕೇಳುಗರಂತೂ ತಮಗೆ ಏನನ್ನಿಸಿತು ಎಂಬುದನ್ನು ಬರೆದೂ ತೋರಿಸಿದರು.

ರಂಜನಿ – ಗಾಯತ್ರಿ ಸಹೋದರಿಯರು
ರಂಜನಿ – ಗಾಯತ್ರಿ ಸಹೋದರಿಯರು

ಮನೋಧರ್ಮದ ಅಭಿವ್ಯಕ್ತಿ: ಯುಗಳ ಗಾಯನದಲ್ಲಿ ಹೊಂದಾಣಿಕೆ ಮಾಡಿಕೊಂಡು ಹಾಡುವ ಬಗ್ಗೆ ಹೇಳಲೇಬೇಕು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಇಬ್ಬರು ಸೇರಿ ಹಾಡುವಾಗ ಹೊಂದಾಣಿಕೆ ಬಹಳ ಮುಖ್ಯ. ಮೊದಲಿಗೆ ರಾಗದ ಆಲಾಪ, ಮುಂದೆ ಸ್ವರಪ್ರಸ್ತಾರ, ಸಾಹಿತ್ಯ, ನೆರವಲ್‌, ತನಿಯಾವರ್ತನ... ಇವೆಲ್ಲ ಗಾಯನದ ವಿವಿಧ ಹಂತಗಳು. ಇಲ್ಲೆಲ್ಲ ಒಬ್ಬರ ಮನೋಧರ್ಮವನ್ನು ಇನ್ನೊಬ್ಬರೊಂದಿಗೆ ಮ್ಯಾಚ್‌ ಮಾಡಿಕೊಂಡು ಹಾಡಬೇಕಾಗುತ್ತದೆ. ನಾವು ಸಾಮಾನ್ಯವಾಗಿ ವೇದಿಕೆಗೆ ಹೋದ ಮೇಲೆಯೇ ಹೊಂದಾಣಿಕೆ ಮಾಡಿಕೊಳ್ಳುವುದು. ಎಲ್ಲವೂ ‘ಆನ್ ದಿ ಸ್ಪಾಟ್’. ಮೂವತ್ತು ವರ್ಷಕ್ಕೂ ಮೇಲ್ಪಟ್ಟು ಕಛೇರಿ ಕೊಡುತ್ತಾ ಬಂದಿರುವುದರಿಂದ ಹೊಂದಾಣಿಕೆ ಎಂಬುದು ತನ್ನಷ್ಟಕ್ಕೇ ಬರುತ್ತದೆ. ಹಾಡುತ್ತ ಹಾಡುತ್ತ ನಾವು ಒಂದಾಗಿ ಬಿಡುತ್ತೇವೆ.

ಯಾವುದೇ ರಾಗವಿರಲಿ. ಅಲ್ಲಿ ಬರೀ ಮಾಧುರ್ಯ ಇರುವುದಿಲ್ಲ. ಭಕ್ತಿ, ತನ್ಮಯತೆ, ಲಯ, ಭಾವ, ಸೌಂದರ್ಯ ಎಲ್ಲವೂ ಅಲ್ಲಿ ಅಡಗಿರುತ್ತದೆ. ಇದಕ್ಕೇ ಹೇಳುವುದು ‘ಮ್ಯೂಸಿಕ್‌ ಈಸ್‌ ಡಿವೈನ್‌’ ಎಂದು. ನಾವು ಆಯ್ದುಕೊಳ್ಳುವ ರಾಗ ಸಾವೇರಿ, ಮಧ್ಯಮಾವತಿ, ರೀತಿಗೌಳ... ಹೀಗೆ ಯಾವುದೇ ಇರಲಿ. ಅದು ರಸಿಕರ ಹೃದಯ ತುಂಬುವಂತಿರಬೇಕು. ‌

ಸಂಗೀತ ಎಂದರೆ ಅದು ಸಾಧನಾ. ಅದೊಂದು ಧ್ಯಾನ. ಇದನ್ನು ತಪಸ್ಸಿನಂತೆ, ವ್ರತದಂತೆ ಮಾಡಿದರೆ ಖಂಡಿತಾ ಯಶಸ್ಸು ಸಿಗುತ್ತದೆ. ಆದರೆ ಇದು ನಿಂತ ನೀರಲ್ಲ. ಇದು ‘ಲೈಫ್‌ಟೈಮ್‌ ಪ್ರೋಸೆಸ್. ನಾವು ಹಾಡುತ್ತೇವೆ, ಕಲಿಯುತ್ತೇವೆ, ಕಲಿಸುತ್ತೇವೆ, ದಿನವೂ ಸಂಗೀತದಲ್ಲಿ ಹೊಸತನ ಕಾಣುವುದು ನಮ್ಮ ಜಾಯಮಾನ. ನಮ್ಮ ಶಿಷ್ಯಂದಿರಿಗೂ ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕಲು ಪ್ರೇರೇಪಿಸುತ್ತೇವೆ.

ತಮ್ಮ ಸಂಗೀತ ಬದುಕಿನ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡ ಬಳಿಕ ಕೊನೆಗೆ ತಮಗೆ ಒಲಿದಿರುವ ‘ಸಾಮಗಾನ ಮಾತಂಗ’ ಪ್ರಶಸ್ತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು ಈ ಗಾಯಕಿಯರು.

‘ಮಾತಂಗ ಪ್ರಶಸ್ತಿ ನಮಗೆ ಗ್ರೇಟ್‌ ಆನರ್‌. ಸಂಗೀತ ದಿಗ್ಗಜರಾದ ಡಾ. ಬಾಲಮುರಳಿಕೃಷ್ಣ, ಎಲ್‌. ಸುಬ್ರಹ್ಮಣ್ಯಂ, ಹರಿಪ್ರಸಾದ್‌ ಚೌರಾಸಿಯ ಮುಂತಾದ ಗಣ್ಯರಿಗೆ ಸಿಕ್ಕಿದ ಪ್ರಶಸ್ತಿಗೆ ಇಂದು ನಾವು ಭಾಜನರಾಗುತ್ತಿರುವುದು ಸೌಭಾಗ್ಯವೇ ಎನ್ನಬೇಕು. ಕಳೆದ 36 ವರ್ಷಗಳಿಂದ ಹಾಡುತ್ತಾ ಬಂದ ನಮಗೆ ಸಂದ ಗೌರವವಿದು ಎಂದೇ ಭಾವಿಸುವೆವು’ ಎನ್ನುತ್ತಾ ರಂಜನಿ–ಗಾಯತ್ರಿ ‘ಸಂ’ಗೆ ಬಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT