ಶನಿವಾರ, ಆಗಸ್ಟ್ 13, 2022
22 °C

PV Web Exclusive | ಕೋಲುಮಂಡೆ: ವಾಸ್ತವ ಮತ್ತು ಪರಿಕಲ್ಪನೆ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ಚಂದನ್‌ ಶೆಟ್ಟಿ ಅವರ ಕೋಲುಮಂಡೆ

ಚಂದನ್‌ ಶೆಟ್ಟಿ ಅವರ ಇತ್ತೀಚಿನ ‘ಕೋಲುಮಂಡೆ’ ಹಾಡು ವಿವಾದಕ್ಕೆ ಕಾರಣವಾಗಿತ್ತು. ಮಲೆಮಾದೇಶ್ವರಸ್ವಾಮಿಯ ಭಕ್ತರ ಆರೋಪ ಇದ್ದದ್ದು, ತಮ್ಮ ದೇವರು ಸಂಕವ್ವನನ್ನು ‘ಕೋಲುಮಂಡೆ’ ಹಾಡಿನಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ. ಹಾಡಿನಲ್ಲಿ ತೊಡಿಸಿದ ಸಂಕವ್ವನ ಉಡುಗೆ ಬಗ್ಗೆ ಭಾರಿ ಆಕ್ಷೇಪವನ್ನು ಭಕ್ತರು ವ್ಯಕ್ತಪಡಿಸಿದ್ದರು. ಮತ್ತು ಚಂದನ್‌ ಶೆಟ್ಟಿ ಅವರ ಈ ಹಾಡನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಬೇಕು ಮತ್ತು ಅವರು ಭಕ್ತರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಮತ್ತು ಅದೇ ರೀತಿ ಆಯಿತು ಕೂಡ. ಈ ವಿವಾದ ಈಗ ಅಂತ್ಯಕಂಡಿದೆ.

ಆದರೆ, ಈ ಹಾಡಿಗೆ ವಿರೋಧ ವ್ಯಕ್ತವಾದ ಕಾರಣದ ಬಗ್ಗೆ ಕೊಂಚ ಯೋಚಿಸಬೇಕಾದ ಅಂಶಗಳಿವೆ. ವಿವಾದಕ್ಕೆ ಮರುಜೀವ ತುಂಬುವುದು ಈ ಬರೆಹದ ಉದ್ದೇಶವಲ್ಲ. ಆದರೆ, ಈ ವಿವಾದವು ಮಹಿಳೆ ಮತ್ತು ಉಡುಗೆ, ದೇವರು ಮತ್ತು ಭಕ್ತರ ನಂಬಿಕೆಗಳ ಬಗ್ಗೆ ಯೋಚನೆಗೆ ಹಚ್ಚುತ್ತದೆ. ಮತ್ತು ಮುಖ್ಯವಾಗಿ ನಮ್ಮ ಆಲೋಚನೆಗಳಲ್ಲಿರುವ ವೈರುಧ್ಯವನ್ನು ಕಾಣಿಸುತ್ತದೆ. ವೈರುಧ್ಯಗಳ ಚರ್ಚೆ ಇಂದಿನದೇನಲ್ಲ. ಇದು ಲಾಗಾಯ್ತಿನಿಂದಲೂ ಇದ್ದೇಯಿದೆ. ಆದರೂ ಮತ್ತೆ ಮತ್ತೆ ನಾವು ಹಿಮ್ಮುಖವಾಗಿ ಹೋಗುತ್ತಿರುವುದರಿಂದ, ಮತ್ತೆ ಮತ್ತೆ ಈ ವೈರುಧ್ಯಗಳಿಗೆ ಮುಖಾಮುಖಿ ಆಗುವುದು ಅನಿವಾರ್ಯ ಎನ್ನುವ ಕಾರಣಕ್ಕಾಗಿ ಈ ಬರೆಹ ಇದೆ.

ಮಲೆಮಾದೇಶ್ವರ ಕಥಾನಕಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಈ ಕಥಾನಕಕ್ಕೆ ಸಂಬಂಧಿಸಿದವರು ಇಷ್ಟು ವರ್ಷಗಳ ಹಿಂದೆ ದಟ್ಟ ಅರಣ್ಯದಲ್ಲಿ ವಾಸಿಸುತ್ತಿದ್ದವರು ಎಂದು ಹೇಳಲಾಗುತ್ತದೆ. ಅರಣ್ಯಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದೂ ಹೇಳಲಾಗುತ್ತದೆ. ಸಂಕವ್ವನ ಅಥವಾ ಆಗಿನ ಹೆಣ್ಣುಮಕ್ಕಳ ಉಡುಗೆಗಳ ಬಗ್ಗೆ ಆ ಕಥಾನಕಗಳಲ್ಲಿ ಅಷ್ಟು ಸ್ಪಷ್ವವಾದ ಉಲ್ಲೇಖವಿಲ್ಲದಿದ್ದರೂ, ಬುಡಕಟ್ಟು ಸಮುದಾಯದವರ ಉಡುಗೆಗಳು ಹೇಗಿರುತ್ತವೆ ಎಂದು ನಾವು ಇತಿಹಾಸದಿಂದ ತಿಳಿದಿದ್ದೇವೆ. ಅಂತೆಯೇ ಸಂಕವ್ವ ಕೂಡ ಇದ್ದಳು ಎನ್ನುವುದನ್ನು ಮತ್ತೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯ ಕಾಣುವುದಿಲ್ಲ. ಕುಪ್ಪಸ ಇಲ್ಲದೆ, ಕೇವಲ ಸೆರಗಿನಿಂದಲೇ ತಮ್ಮ ಮೈಮುಚ್ಚಿಕೊಳ್ಳುವುದು, ಸೀರೆಯನ್ನು ಮೊಣಕಾಲಿಗಿಂತ ಸ್ವಲ್ಪ ಮೇಲೆ ಉಡುವುದು ಅಂದಿನ ಉಡುಗೆ.

ಹಿಂದೆ ಒಮ್ಮೆ ಹಿಂದಿ ಸಿನಿಮಾವೊಂದರ ಹಾಡಿನಲ್ಲಿ ರಾಧೆಯನ್ನು ‘ಸೆಕ್ಸಿ’ ಎಂದು ಕರೆದಿದ್ದಕ್ಕಾಗಿ ದೊಡ್ಡ ವಿವಾದವೊಂದು ಸೃಷ್ಟಿಯಾಗಿತ್ತು. ಇದನ್ನು ನೆನಪಿಸಿಕೊಳ್ಳುತ್ತಲೇ, ನಾವು ನಂಬಿರುವ ನಮ್ಮ ದೇವರುಗಳಾದ ಸಂಕವ್ವನನ್ನೋ ಲಕ್ಷ್ಮೀಯನ್ನೋ ಸರಸ್ವತಿಯನ್ನೋ ಮಾರಿಯನ್ನೋ ಈ ರೀತಿ ‘ಸೆಕ್ಸಿ’ಯಾಗಿ ತೋರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ಮತ್ತು ಈ ವಿರೋಧ ತಪ್ಪೊ ಸರಿಯೋ ಅದು ಬೇರೆಯದೇ ವಿಚಾರ. ಭಕ್ತರ ಈ ನಂಬಿಕೆಗಳಿಗೆ ಗೌರವ ಕೊಡುತ್ತಲೇ, ಈ ದೇವರುಗಳ ಹೆಸರಿನಲ್ಲಿ ನಡೆಯುವ ಆಚರಣೆಗಳ ಬಗೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲವಲ್ಲ ಎನ್ನುವುದು ನಮ್ಮ ಆಲೋಚನೆಯಲ್ಲಿನ ವೈರುಧ್ಯವಲ್ಲವೇ?

ದೇವರ ಹೆಸರಲ್ಲಿ ನಡೆಯುವ ಬೆತ್ತಲೆ ಸೇವೆ, ಸೊಪ್ಪು ಕಟ್ಟಿಕೊಂಡು ದೇವರ ಸೇವೆಯಲ್ಲಿ ತೊಡಗುವುದು ಸೇರಿದಂತೆ ಈಗಲೂ ಜರುಗುತ್ತಿರುವ ಹಲವು ಆಚರಣೆಗಳ ಬಗೆಗೆ ನಮ್ಮ ವಿರೋಧ ಇರಬೇಕಲ್ಲವೆ? ದೇವರ ಹೆಸರಿನಲ್ಲಿ ನಮ್ಮ ಮನೆಯ ಹೆಣ್ಣುಮಕ್ಕಳು ಅರೆ ಬೆತ್ತಲಾಗುವುದು ಒಪ್ಪಿತವೇ? ಇದೇ ಚಂದನ್‌ ಶೆಟ್ಟಿ ಅವರ ಇನ್ನಿತರ ಹಾಡುಗಳಲ್ಲಿ ಹೆಣ್ಣು ಮಕ್ಕಳನ್ನು ’ಸೆಕ್ಸಿ’ಯಾಗಿ ತೋರಿಸಿಲ್ಲವೇ? ಆಗೆಲ್ಲ ನಮಗೆ ಅದನ್ನು ವಿರೋಧಿಸಬೇಕು, ನಿಷೇಧಿಸಬೇಕು ಎಂದು ಎನ್ನಿಸಲಿಲ್ಲ ಯಾಕೆ?

ಅಲ್ಲಿಗೆ ನಮ್ಮ ದೇವರು, ನಮ್ಮ ಮನೆ ಹೆಣ್ಣು ಮಕ್ಕಳು ಮೈತುಂಬ ಬಟ್ಟೆ ಹಾಕಿಕೊಳ್ಳುವುದನ್ನು ಒತ್ತಾಯಿಸುತ್ತೇವೆ; ಆದರೆ, ಬೇರೆಯವರ ಮನೆ ಹೆಣ್ಣು ಮಕ್ಕಳು, ಸಿನಿಮಾ, ಮಾಡೆಲಿಂಗ್ ಕ್ಷೇತ್ರಗಳಲ್ಲಿ ಅರೆ ನಗ್ನವಾಗಿ ಇದ್ದರೆ ಅಡ್ಡಿಯಿಲ್ಲ? – ಈ ಪ್ರಶ್ನೆಗಳು ‘ಕೋಲುಮಂಡೆ’ ಹಾಡನ್ನು ವಿರೋಧಿಸುವವರಿಗೆ ಕೇಳುತ್ತಿರುವುದಲ್ಲ. ಬದಲಿಗೆ ನಮಗೆ ನಾವೇ ಕೇಳಿಕೊಳ್ಳುವಂತವು. ಇವು ನಮ್ಮ ಆಲೋಚನೆಗಳನ್ನು ಇನ್ನಷ್ಟು ಸ್ಪಷ್ಟವಾಗಿಸಲು ಎತ್ತುತ್ತಿರುವ ಪ್ರಶ್ನೆಗಳಷ್ಟೇ.

ಸಾಹಿತ್ಯ, ಅದು ಜಾನಪದವೇ ಇರಲಿ, ಶಿಷ್ಟವೇ ಇರಲಿ ಅವು ನಮ್ಮ ಬಿಂಬಗಳು. ನಾವು ಹೇಗಿದ್ದೇವೊ ಹಾಗೆ ಅವು ಇರುತ್ತವೆ. ಅವುಗಳು ರಚಿತವಾದ ಕಾಲಘಟ್ಟದಲ್ಲಿನ ವಾಸ್ತವಗಳೇ ಕಥೆಯಾಗಿ ರೂಪ ತಳೆಯುತ್ತವೆಯಷ್ಟೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ರಚಿತವಾದ ಕಾಲಘಟದಲ್ಲಿ ನಮ್ಮ ಜನರು ಯಾವ ಬಟ್ಟೆ ಹಾಕಿಕೊಳ್ಳುತ್ತಿದ್ದರು, ಹೇಗೆ ಬದುಕುತ್ತಿದ್ದರು ಹಾಗೆ ಈ ಕಾವ್ಯಗಳಲ್ಲಿ ಪಾತ್ರಗಳು ಜೀವಿಸಿವೆ. ಸೀತೆ, ದ್ರೌಪದಿ, ರಾಧೆಯೂ ಅಷ್ಟೆ. ಆಗಿನ ಕಾಲಘಟ್ಟದ ಉಡುಗೆಯನ್ನೇ ಅವರೂ ಉಟ್ಟಿದ್ದಾರೆ. ಈಗ ಅವುಗಳನ್ನು ಧಾರಾವಾಹಿ, ಸಿನಿಮಾ ಮಾಡುವ ಪ್ರಯತ್ನದಲ್ಲಿ ಮಾಡಲಾದ ಬದಲಾವಣೆಗಳನ್ನೇ ಆ ಕಾಲದ ನಿಜವೆಂದು ಹೇಳುವ ತರ್ಕಕ್ಕೆ ತಳವಿಲ್ಲ ಎನ್ನಿಸುತ್ತದೆ. ವಾಸ್ತವ ಮತ್ತು ಪರಿಕಲ್ಪನೆಯ ಅರ್ಥವನ್ನು ನಾವು ಸರಿಯಾಗಿ ಗ್ರಹಿಸಬೇಕು.

ಸಾಹಿತ್ಯ ರಚನೆಯಾದ ಕಾಲಘಟ್ಟ, ವಾಸ್ತವ, ಜನರ ನಂಬಿಕೆಗಳು ಇವುಗಳ ಮಧ್ಯೆ ಇರುವ ಅಂತರದ ಕುರಿತು ಚಿಂತಕರು, ತಿಳಿದವರು ಆಗಾಗ್ಗೆ ಜನರಿಗೆ ಹೇಳುತ್ತಿರಬೇಕು. ಇಲ್ಲದಿದ್ದರೆ, ನಮ್ಮ ಆಲೋಚನೆಗಳಲ್ಲಿ ಇರುವ ವೈರುಧ್ಯವು ಸಮಾಜದ ಸೌಂದರ್ಯವನ್ನು, ಸೌಹಾರ್ದವನ್ನು ಕೆಡವಲು ಕಾರಣವಾಗುತ್ತವೆ. ಜತೆಗೆ, ಇಂಥವು ರಾಜಕೀಯ ಸ್ವರೂಪ ಪಡೆದು ಸಮಾಜವನ್ನು ಬೇರೆಯ ದಿಕ್ಕಿಗೆ ಕರೆದುಕೊಂಡು ಹೋಗುವ, ಸೌಹಾರ್ದವನ್ನು ಹಾಳು ಮಾಡುವ ವಿಕೋಪಕ್ಕೆ ಕರೆದೋಯ್ಯುತ್ವವೆ. ಹಿಂದಿಯ ‘ಪದ್ಮಾವತ್‌’ ಸಿನಿಮಾದ ಬಿಡುಗಡೆಯ ಹೊತ್ತಿನಲ್ಲಿ ಆದ ಘಟನಾವಳಿಗಳನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು