ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಷಿರ ವಾದ್ಯದಲ್ಲಿ ಅರಳಿದ ಮಾರ್ವ, ಭೂಪಾಲಿ...!

ಪ್ರಜಾವಾಣಿ ದಸರಾ ಸಂಗೀತ ಮಹೋತ್ಸವ
Last Updated 21 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೊಳಲ ಗಾನ ಆಲಿಸಲು ಸಂಗೀತ ಜ್ಞಾನ ಬೇಕಿಲ್ಲ. ನಾದ ಆಸ್ವಾದಿಸಲು ಸಂಗೀತದ ಪರಿಭಾಷೆಯನ್ನು ಅರಿಯಬೇಕಿಲ್ಲ. ಈ ಸುಷಿರ ವಾದ್ಯದ ನಾದವೇ ಅಂಥದ್ದು. ಅದೆಷ್ಟು ಮಾದಕತೆ ಮನಸ್ಸಿಗೆ; ಅದೆಂಥ ಮೋಹಕತೆ ತನುವಿಗೆ..! ಹೀಗಾಗಿಯೇ ಕೊಳಲು ಮೈಲುದ್ದ ದೂರ ಮಾರ್ದನಿಸುವುದು, ಸೂಜಿಗಲ್ಲಿನಂತೆ ಸೆಳೆಯುವುದು.

ಅಂದ ಹಾಗೆ ‘ಪ್ರಜಾವಾಣಿ’ ದಸರಾ ಸಂಗೀತ ಮಹೋತ್ಸವ ಸರಣಿಯ ನಾಲ್ಕನೇ ದಿನದ ಸರಣಿಯಲ್ಲಿ ಖ್ಯಾತ ಬಾನ್ಸುರಿ ವಾದಕ ಪಂ. ಪ್ರವೀಣ್‌ ಗೋಡಖಿಂಡಿ ಹಾಗೂ ಇವರ ಸುಪುತ್ರ ಷಡಜ್‌ ಗೋಡಖಿಂಡಿ ಅವರ ಬಾನ್ಸುರಿ ಕಛೇರಿ ‘ಗಂಧರ್ವ ಲೋಕ’ ಸೃಷ್ಟಿಸಿತು. ಕಳೆದ ಮೂರು ದಿನಗಳಿಂದ ಪಿಟೀಲು, ಗಿಟಾರ್‌, ವೀಣೆಯ ಸುನಾದವನ್ನು ಆಲಿಸಿದ ಕೇಳುಗರಿಗೆ ಮಂಗಳವಾರ ಮುಸ್ಸಂಜೆ ಬಿದಿರಿನಿಂದ ಮಾಡಿದ ಹಗುರ ವಾದ್ಯ ‘ಬಾನ್ಸುರಿ’ ನಾದ ಕೇಳುವ ಸೌಭಾಗ್ಯ. ಈ ಮೂಲಕ ನೊಂದ ಮನಸ್ಸುಗಳಿಗೆ ಮನರಂಜನೆಯ ಸಾಂತ್ವನ ‘ಕೃಷ್ಣನ ಕೊಳಲಿನ ಕರೆ’ಯಲ್ಲಿ ಮೂಡಿಬಂತು.

ಕಛೇರಿಗೆ ನಾಂದಿ ಹಾಡಿದ್ದು ಸಂಜೆಯ ಸುಪ್ರಸಿದ್ಧ ರಾಗ ಮಾರ್ವ. ಹಿಂದೂಸ್ತಾನಿ ಸಂಗೀತದ ಮಾರ್ವ ಥಾಟ್‌ನಲ್ಲಿಯೇ ಬರುವ ಈ ರಾಗ ಕರ್ನಾಟಕ ಶಾಸ್ತ್ರೀಯ ಸಂಗೀತದ ‘ಹಂಸಾನಂದಿ’ ರಾಗಕ್ಕೆ ಸರಿಸಮನಾದದ್ದು. ಪಂಚಮ ಸ್ವರವನ್ನು ವರ್ಜ್ಯವಾಗಿಸಿ ‘ವಾದಿ’ಯಲ್ಲಿ ರಿಷಭ ಹಾಗೂ ‘ಸಂವಾದಿ’ಯಲ್ಲಿ ಧೈವತ ಸ್ವರವನ್ನು ಹೊಂದಿರುವ ಅತ್ಯಂತ ಮಾಧುರ್ಯಭರಿತ ರಾಗವಿದು.

ಸುದೀರ್ಘ ಆಲಾಪದ ಬಳಿಕ ರಾಗ ‘ಮಾರ್ವ’ವನ್ನು ಮಧ್ಯಲಯ ತೀನ್‌ತಾಲ್‌ನಲ್ಲಿ ನುಡಿಸಿದರು. ರಾಗ–ತಾನಗಳು ಎರಡೂ ಬಾನ್ಸುರಿಯಲ್ಲಿ ಏಕಪ್ರಕಾರವಾಗಿ ಮೇಳೈಸಿ ಕಛೇರಿ ಕಳೆಕಟ್ಟಿತು. ಇಲ್ಲಿ ಬಳಸಿದ್ದ ವಾದನದ ಮೀಂಡ್‌, ಗಮಕಗಳೂ ಅಸಾಧಾರಣವಾಗಿದ್ದವು. ಸುಮಾರು ಮುಕ್ಕಾಲು ಗಂಟೆ ಕಾಲ ಒಂದೇ ರಾಗದ ವಿವಿಧ ಆಯಾಮವನ್ನು ಬೆರಳುಗಳ ತಂತ್ರಗಾರಿಕೆ ಮೂಲಕ ಪ್ರದರ್ಶಿಸಿದ್ದು ಅಲ್ಲದೆ ತಾರಕ, ಅತಿತಾರಕ ಸ್ಥಾಯಿಯವರೆಗೂ ಕೊಳಲಿನ ದನಿ ವಿಸ್ತರಿಸಿ ಕೇಳುಗರಿಗೆ ‘ನಾದ ಚಮತ್ಕಾರ’ವನ್ನೇ ಸೃಷ್ಟಿಸಿದರು.

ರಾಗ ಮಾರ್ವದ ನಂತರದ ಆಯ್ಕೆ ಅತ್ಯಂತ ಜನಪ್ರಿಯ ರಾಗ ‘ಭೂಪಾಲಿ’ಯದ್ದು. ‌‌ಕಲ್ಯಾಣ್‌ ಥಾಟ್‌ನ ಭಕ್ತಿರಸ ಸೂಸುವ ಈ ರಾಗ ‘ಔಡವ’–ಔಡವ ಸ್ವರಸಮೂಹವನ್ನು ಹೊಂದಿದ್ದು ಕರ್ನಾಟಕ ಸಂಗೀತದ ‘ಮೋಹನ’ ರಾಗಕ್ಕೆ ಸರಿಸಮನಾದದ್ದು. ಮೋಹನ ರಾಗದಲ್ಲಿ ಮೋಹನ ಮುರಳಿ ಮೊಳಗಿದ್ದು ಅತ್ಯಂತ ಸುಶ್ರಾವ್ಯವಾಗಿತ್ತು. ಇಲ್ಲಿ ವಾದಕರು ಮಧ್ಯಲಯ ರೂಪಕತಾಲ್‌ನಲ್ಲಿ ರಾಗ ವಿಸ್ತರಿಸಿದರು. ಬಳಿಕ ಧೃತ್‌ ತೀನ್‌ತಾಲ್‌ನಲ್ಲಿ ‘ಜೋಡ್‌ಜಾಲ’ವೂ ಅತ್ಯದ್ಭುತವಾಗಿ ಅನುರಣಿಸಿತು.

ಹಿಂದೂಸ್ತಾನಿ ಸಂಗೀತದ ಕಿರಾಣಾ ಘರಾಣ ಶೈಲಿಯಲ್ಲಿ ತಂದೆಯ ‘ಪರಿಪಕ್ವ’ ಕೊಳಲ ನಾದ ಹಾಗೂ ಮಗನ ‘ಬಿಸಿರಕ್ತ’ ಕೊಳಲ ಗಾನ.. ಎರಡರ ನಡುವೆ ಕಿಂಚಿತ್ತೂ ವ್ಯತ್ಯಾಸವಿಲ್ಲದಂತೆ ಇಬ್ಬರ ಜುಗಲ್‌ಬಂದಿ ‘ಎರಡರೊಳಗೊಂದಾಗಿ’ ಸಂಗೀತ ಬಾಂಧವ್ಯ ಬೆಸೆಯಿತು.

ಇದು ಧಾರವಾಡ ಮಣ್ಣಿನ ಹಿಂದೂಸ್ತಾನಿ ಸಂಗೀತದ ಗುಣ. ತಂದೆ ಪಂ. ವೆಂಕಟೇಶ್‌ ಗೋಡಖಿಂಡಿ ಅವರ ನುಡಿಸಾಣಿಕೆ ಶೈಲಿ ಅಚ್ಚೊತ್ತಿದಂತೆ ಮಗ–ಮೊಮ್ಮಗನ ಉಸಿರು–ಬೆರಳುಗಳಲ್ಲಿ ಅವತರಿಸಿದ್ದು ಅಲ್ಲದೆ ತಲೆಮಾರಿನ ಸಂಗೀತದ ಕೊಂಡಿ ಪರಂಪರೆಯನ್ನು ಮುಂದುವರಿಸುತ್ತಿರುವುದೂ ಹೆಮ್ಮೆಯ ವಿಚಾರ.

ಪಂ. ಕಿರಣ ಗೋಡಖಿಂಡಿ ಸಮರ್ಥವಾದ ತಬಲಾ ಸಾಥಿ ನೀಡಿ ಕಛೇರಿಗೆ ಕಳೆಕಟ್ಟಿದರು. ಸೌಮ್ಯಚೇತನ್‌ ಆರಂಭದಲ್ಲಿ ಕಲಾವಿದರನ್ನು ಕೇಳುಗರಿಗೆ ಪರಿಚಯಿಸಿ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT