ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ FaceBook Live: ಮಣಿನಾಲ್ಕೂರಿನ ನಾದ ಅವರ ನಾದ ಲಹರಿ

Last Updated 8 ಜೂನ್ 2020, 2:54 IST
ಅಕ್ಷರ ಗಾತ್ರ

‘ನಾದ ಮಣಿನಾಲ್ಕೂರು‘ ಹೆಸರು ಹೇಳುತ್ತಿದ್ದಂತೆ ಅನೇಕರಿಗೆ ಕತ್ತಲಲ್ಲಿ ಹಚ್ಚಿಟ್ಟ ದೀಪಗಳ ಬೆಳಕಿನ ನಡುವೆ ಸುಶ್ರಾವ್ಯವಾದ ನಾದದ ಅಲೆಯೊಂದು ತೇಲಿ ಹೋದಂತೆ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ‘ಕತ್ತಲ ಹಾಡಿ‘ನ ಮೂಲಕ ಜನರ ಮನವನ್ನು ತಲುಪಿದ್ದಾರೆ ಬಂಟ್ವಾಳ ತಾಲ್ಲೂಕು ಮಣಿನಾಲ್ಕೂರಿನ ನಾದ.

ಹೀಗೆ ಜೀವಪರ ಚಿಂತನೆ, ಸಾಮಾಜಿಕ ಕಳಕಳಿ, ಪರಿಸರ ಸಂಕ್ಷಣೆಯ ಗೀತೆಗಳ ಮೂಲಕವೇ ರಾಜ್ಯದಾದ್ಯಂತ ಅಲೆಮಾರಿಯಂತೆ ಸುತ್ತಾಡುತ್ತಾ ಜನ–ಮನ ತಲುಪುತ್ತಿರುವ ನಾದ ಮಣಿನಾಲ್ಕೂರರು ಭಾನುವಾರ ‘ಪ್ರಜಾವಾಣಿ‘ ಆಯೋಜಿಸಿದ್ದ ವಿಶೇಷ ‘ಫೇಸ್‌ಬುಕ್‌ ಲೈವ್‌‘ ಕಾರ್ಯಕ್ರಮದಲ್ಲಿ ಅಂಥದ್ದೇ ಚಿಂತನೆಯ ಗೀತೆಗಳನ್ನು ಪ್ರಸ್ತುಪಡಿಸಿದರು.

ನಿಡುಮಾಮಿಡಿ ಮಠದ ಚೆನ್ನಮಲ್ಲಸ್ವಾಮೀಜಿ ಅವರ ರಚನೆಯ ಮಣ್ಣು, ಮುಗಿಲು, ಸಕಲ ಜೀವಕೆ, ಅಣುವಿಗೆ, ತೃಣಕೆ.. ಅನಂತ ಲೋಕಕೆ ವಂದಿಸುವಂತಹ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು.

ಸಕಾಲಿಕ ವಿದ್ಯಮಾನಗಳನ್ನೇ ಪ್ರತಿನಿಧಿಸುವ ಹಾಡುಗಳನ್ನು ನಾದ ಅವರುಆಯ್ಕೆ ಮಾಡಿಕೊಂಡಿದ್ದರು. ಹಾಡು ಹಾಡುತ್ತಾ ಕೊರೊನಾ ಕಾಲದಲ್ಲಿ ಭಯದಲ್ಲಿರುವ ಜನಕ್ಕೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಕೊರೊನಾ ಸೋಂಕಿನಿಂದ ರಕ್ಷಣೆಗೆ ಬೇಕಾಗಿರುವುದು ‘ಸಾಮಾಜಿಕ ಅಂತರ‘ವಲ್ಲ. ದೈಹಿಕ ಅಂತರವಷ್ಟೇ ಎಂದು ಅಭಿಪ್ರಾಯಪಟ್ಟರು.

ನಂತರದಲ್ಲೇ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ರಚನೆಯ ‘ನಮ್ಮ ಎಲುಬಿನ ಹಂದರ ದೊಳಗೆ’ ಗೀತೆಯನ್ನು ಭಾವ ತುಂಬಿ ಹಾಡಿದರು. ಕೊರೊನಾ ಸೋಂಕಿನ ಭಯದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಬೇಕೋ ಬೇಡವೊ ಎಂಬ ಗೊಂದಲದಲ್ಲಿರುವ ಹೊತ್ತಲ್ಲಿ ಅಬ್ರಹಾಂ ಲಿಂಕನರ ಪತ್ರ ಆಧರಿಸಿದ ಗೀತೆ, ‘ಕಲಿಸು, ಗುರುವೇ ಕಲಿಸು‘ ಹಾಡನ್ನು ಪ್ರಸ್ತುತಪಡಿಸಿದರು. ಈ ಹಾಡಿಗೆ ವೀಕ್ಷಕರೊಬ್ಬರು ‘ಈ ಹಾಡು ನಮ್ಮ ಶಿಕ್ಷಣ ವ್ಯವಸ್ಥೆ Redifine ಮಾಡಿಕೊಳ್ಳುವ ಅವಶ್ಯಕತೆಯನ್ನು ನೆನಪಿಸುತ್ತದೆ‘ ಎಂದು ಪ್ರತಿಕ್ರಿಯಿಸಿದರು.

ಮಲಯಾಳಂ ಮೂಲದ, ಕನ್ನಡಕ್ಕೆ ಅನುವಾದಿಸಿರುವ (ಮೂಲ: ಮೊಹಾದ್ ವೆಂಬಾಯಂ, ಕನ್ನಡಕ್ಕೆ :ಸುನೈಫ್ ವಿಟ್ಲ) ‘ಹಿಂದೆಲ್ಲೋ ಇಲ್ಲಿ ನಾಡಿರುತ್ತಿತ್ತು.. ಆ ನಾಡಲಿ ಹೊಳೆ ಇರುತ್ತಿತ್ತು..‘ ಎಂಬ ಪರಿಸರ ಗೀತೆ, ಹೊತ್ತಿನ ಪರಿಸರದ ಪರಿಸ್ಥಿತಿಯನ್ನು ತೆರೆದಿಟ್ಟಿತು. ಜನಾರ್ದನ ಕೆಸರಗದ್ದೆ ರಚನೆಯ ‘ಮಸಣದಲ್ಲಿ ಗಿಡವ ನೆಡು ಬೆಳೆದು ಹಣ್ಣು ನೀಡುವುದು.. ಎಲ್ಲ ಮಣ್ಣಿನಲ್ಲಿ ಹೊನ್ನು ಇದೆ ತಿಳಿದುಕೋ... ಮನಸ್ಸಿಗಂಟಿದಾ ಕೊಳೆಯ ತಿಕ್ಕಿ ತೊಳೆದುಕೊ...’ ಹಾಡು ಲಾಕ್‌ಡೌನ್ ನಂತರದ ಬದುಕಿಗೆ ದಾರಿ ದೀಪದಂತೆ ಕಂಡಿತು.

ನಾದ ಅವರ ಹಾಡಿನಷ್ಟೇ ವೀಕ್ಷಕರ ಪ್ರತಿಕ್ರಿಯೆಗಳು ತುಂಬಾ ಅರ್ಥಪೂರ್ಣವಾಗಿದ್ದವು. ಕೆಲವರು ‘ನಿಮ್ಮ ವಿವರಣೆಯೂ ನಿಮ್ಮ ಹಾಡಿನಷ್ಟೇ ಚೆಂದವಾಗಿರುತ್ತೆ‘ ಎಂದರು. ‘ಏಕಾಂಗಿಯಾಗಿ ಹೊರಡು.. ಹಾಡಿ ಸರ್‘ ಎಂದು ಬೇಡಿಕೆ ಇಡುತ್ತಿದ್ದರು.

ಕೊನೆಯಲ್ಲಿ ಗಿರೀಶ್ ಹಂದಲಗೆರೆ ರಚನೆಯ ‘ಅರಿವೆಂಬುದು ಬಯಲ ಹಣ್ಣು...’, ಸಫ್ದಾರ್ ಹಶ್ಮಿ ಅವರ ರಚನೆಯ‘ನಾವು ಮುದ್ದು ಕಂದಗಳ ಮುಗುಳು ನಗೆಯನು ಮಾರುವುದಿಲ್ಲ.. ನಾವು ಹೆತ್ತ ತಾಯಿಯರ ಎದೆಯ ಬಯಕೆಗಳ ಹೀರುವುದಿಲ್ಲ..‘ ಎಂಬ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಗಿಸಿದರು.

ಬಿಸಿ.ರಸ್ತೆಯ ಜಂಕ್ಷನ್‌ನಲ್ಲಿರುವ ಅರಿವು ಬಳಗದ ವಿಕೇಶ್ ಬಂಟ್ವಾಳ, ಪ್ರತಾಪ್ ಚೆ, ಶ್ವೇತ ತುಪ್ಪದ ಮನೆ ಕಾರ್ಯಕ್ರಮಕ್ಕೆ ತಾಂತ್ರಿಕ ನೆರವು ನೀಡಿದರು.

ನಾದ ಮಣಿನಾಲ್ಕೂರರ ಫೇಸ್‌ಬುಕ್ ಲೈವ್ ಪೂರ್ಣ ಕಾರ್ಯಕ್ರಮ ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ Fb.com/Prajavani.net

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT