ಶುಕ್ರವಾರ, ಏಪ್ರಿಲ್ 10, 2020
19 °C

ವಸಂತ ಪಂಚಮಿಗೆ ಸಾಮಗಾನ ಸಂಗೀತೋತ್ಸವ

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ವಿದ್ಯೆಗೂ, ಬುದ್ಧಿಗೂ ಅಷ್ಟೇ ಅಲ್ಲ ಸಕಲ ಕಲೆಗಳಿಗೂ ಅಧಿದೇವತೆ ಎನಿಸಿಕೊಂಡ ಸರಸ್ವತಿ ಹುಟ್ಟಿದ್ದು ವಸಂತ ಪಂಚಮಿಯಂದು ಎಂಬ ನಂಬಿಕೆ ಇದೆ. ಈ ದಿನದಂದು ಋತುಮಾನಕ್ಕೆ ಹೊಸ ಕಳೆ ತರಲು ಭಾರತೀಯ ಸಾಮಗಾನ ಸಭಾ 11ನೇ ವರ್ಷದ ಶಾಸ್ತ್ರೀಯ ಸಂಗೀತ ಮಹೋತ್ಸವವನ್ನು ಆಯೋಜಿಸಿದೆ. 

ಉತ್ಸವವನ್ನು ಬಹಳ ವಿಶಿಷ್ಟವಾಗಿ ರೂಪಿಸಲಾಗಿದೆ. ಜನವರಿ 29ರಂದು ಆರಂಭಗೊಳ್ಳಲಿರುವ ಉತ್ಸವವು ಫೆಬ್ರುವರಿ 2ರವರೆಗೆ ನಡೆಯಲಿದೆ ಎನ್ನುತ್ತಾರೆ ಸಭಾ ಸ್ಥಾಪಕ ಅಧ್ಯಕ್ಷ ಆರ್‌.ಆರ್‌. ರವಿಶಂಕರ್‌.

ಈ ಉತ್ಸವದಲ್ಲಿ  ಭಕ್ತಿಗೀತೆ ಹಾಗೂ ಭಜನೆಗಳನ್ನು ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಕೇಳಬಹುದು. ಆನ್‌ಲೈನ್‌ ಕೇಳುಗರ ನೆಚ್ಚಿನ ಕಲಾವಿದೆ ಸೂರ್ಯಗಾಯತ್ರಿ ಶಾಸ್ತ್ರೀಯ ಭಜನೆಗಳನ್ನು ಹಾಡಲಿದ್ದಾರೆ. ಪ್ರತಿ ಬಾರಿ ಉತ್ಸವ ಆಯೋಜಿಸಿದಾಗಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಮತ್ತು ಕಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡಬಹುದು ಎನ್ನುತ್ತಾರೆ ರವಿಶಂಕರ್‌. 

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಪಶ್ಚಿಮಬಂಗಾಳ ಹೀಗೆ ನಾನಾ ರಾಜ್ಯಗಳ ಪ್ರಸಿದ್ಧ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಮಹಿಳಾ ಕಲಾವಿದರೇ ಹೆಚ್ವಿದ್ದಾರೆ. ಬೆಂಗಳೂರಿನಂಥ ಮಹಾನಗರದಲ್ಲಿ ಎಲ್ಲ ಭಾಷೆಯ ಜನರು ವಾಸಿಸುತ್ತಿರುವುದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳುಗರು ಹೆಚ್ಚಾಗಿದ್ದಾರೆ. ಹಾಗಾಗಿ ಈ ಬಾರಿಯ ಉತ್ಸವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆಗೆ ಹಿಂದೂಸ್ತಾನಿಗೂ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

ಕಳೆದ ವರ್ಷ ಮೈಸೂರು ಆಸ್ಥಾನ ಸಂಗೀತೋತ್ಸವ ಎನ್ನುವ ಪರಿಕಲ್ಪನೆಯಡಿ ಕಾರ್ಯಕ್ರಮ ಆಯೋಜಿಸಿದ್ದೆವು. ಈ ಬಾರಿ ವಸಂತ ಪಂಚಮಿಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಮರಾಠಿಯ ಪ್ರಸಿದ್ಧ ಹಿನ್ನೆಲೆ ಗಾಯಕಿ ಆರ್ಯ ಅಂಬೇಕರ್‌ ಹಾಗೂ ತಮಿಳಿನ ಪ್ರಸಿದ್ಧ ಹಿನ್ನೆಲೆ ಗಾಯಕಿ ಶೋಭನಾ ವಿಘ್ನೇಶ್‌ ಅವರು ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷ ಎಂದು ಹೇಳಿದರು. 

ಪ್ರತಿ ವರ್ಷದ ಉತ್ಸವದಲ್ಲಿಯೂ ಸಂಗೀತ ಥೆರಪಿಗಾಗಿ ಒಂದು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದನ್ನು ‘ಸಾಮಗಾನ ಧನ್ವಂತ್ರಿ ಸಂಗೀತ ಸರಣಿ’ ಎನ್ನಲಾಗುತ್ತದೆ. ಈ ಬಾರಿ ಅಂಬಿ ಸುಬ್ರಮಣ್ಯಂ ಅವರು ಕೋಪ ನಿಗ್ರಹಕ್ಕಾಗಿ ಸಂಗೀತ ಥೆರಪಿಯನ್ನು ಪ್ರಸ್ತುತಪಡಿಸಲಿದ್ದಾರೆ.

ತ್ಯಾಗರಾಜರು ರಚಿಸಿರುವ ಹಾಡುಗಳನ್ನು ಗಾಯತ್ರಿ ವೆಂಕಟರಾಘವನ್‌ ಹಾಡಿದರೆ, ಪುರಂದರದಾಸರು ಬರೆದ ಹಾಡುಗಳನ್ನು ಸಂಗೀತ ಕಟ್ಟಿ ಪ್ರಸ್ತುತಪಡಿಸಲಿದ್ದಾರೆ. ಇದಲ್ಲದೇ ರಂಜನಿ–ಗಾಯತ್ರಿ, ಕೌಶಿಕಿ ಚಕ್ರವರ್ತಿ, ಜಯಂತಿ ಕುಮರೇಶ್‌, ಕುಮರೇಶ್‌, ಪ್ರವೀಣ್‌ ಗೋಡ್ಖಿಂಡಿ ‘ಮಧುರ ಸಮ್ಮಿಲನ’ದಡಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ಹೇಳಿದರು. 

29ಕ್ಕೆ ಉದ್ಘಾಟನೆ 

ಸಂಗೀತೋತ್ಸವದ ಉದ್ಘಾಟನಾ ಸಮಾರಂಭವು ಜನವರಿ 29ರಂದು ಬುಧವಾರ ಸಂಜೆ ಐದು ಗಂಟೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. ಆಕಾಶವಾಣಿಯ ನಿವೃತ್ತ ನಿರ್ದೇಶಕ ಎನ್‌.ಎಸ್‌.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ  ಮದರಾಸಿನ ಐಐಟಿಯ ಪ್ರಾಚಾರ್ಯ ಡಾ.ಕೆ.ಎಸ್‌.ಕಣ್ಣನ್‌ ಭಾಗವಹಿಸಲಿದ್ದಾರೆ. 

ಮಾತಂಗ ರಾಷ್ಟ್ರೀಯ ಪ್ರಶಸ್ತಿ

10ನೇ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ಯನ್ನು ರಾಜಸ್ಥಾನದ ಕಲಾವಿದ ಪಂಡಿತ್‌ ವಿಶ್ವಮೋಹನ್‌ ಭಟ್‌ ಅವರಿಗೆ ನೀಡಲಾಗುವುದು. ಪ್ರಶಸ್ತಿಯು ₹1 ಲಕ್ಷ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ 2ರಂದು ಸಂಜೆ 5ಗಂಟೆಗೆ ನಡೆಯಲಿದೆ. 

ಬುಕ್‌ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯವಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)