ಗುರುವಾರ , ಫೆಬ್ರವರಿ 25, 2021
20 °C

ಕಾದಂಬರಿ ಒಂದು ಚರ್ಚೆ ನೂರು

ಡಾ.ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

ಮೂರು ದಿನಗಳ ಕಾಲ ನಿರಂತರವಾಗಿ ಬೆಳಗಿನಿಂದ ಸಂಜೆ ತನಕ ಸುಮಾರು ಅರವತ್ತು ಜನ ಸೇರಿ ಕುವೆಂಪು ಬರೆದ ‘ಕಾನೂರು ಹೆಗ್ಗಡತಿ’ ಕಾದಂಬರಿಯನ್ನು ಚರ್ಚಿಸಿದ ಅಪರೂಪದ ಸಂಗತಿಯೊಂದು ಈಚೆಗೆ ಕುಪ್ಪಳಿಯಲ್ಲಿ ನಡೆದ ಕಮ್ಮಟದಲ್ಲಿ ಘಟಿಸಿತು. ಈ ಕಮ್ಮಟಕ್ಕೆ ಆಯ್ಕೆಯಾದ ಶಿಬಿರಾರ್ಥಿಗಳಿಗೆ ಎರಡು ತಿಂಗಳು ಮುಂಚಿತವಾಗಿಯೇ ಕಾದಂಬರಿ ಓದಿಕೊಂಡು ಬರಲು ತಿಳಿಸಲಾಗಿತ್ತು. ಸುಮಾರು ಹತ್ತು ಜನ ಸಂಪನ್ಮೂಲ ವ್ಯಕ್ತಿಗಳೊಂದಿಗೆ, ಶಿಬಿರದ ನಿರ್ದೇಶಕರಾದ, ವಿಮರ್ಶಕ ಕೆ.ವಿ. ನಾರಾಯಣ ಅವರು ನಡೆಸಿಕೊಟ್ಟ ಪರಿ ಅಪೂರ್ವವಾದುದು. ಈ ಶಿಬಿರಕ್ಕೆ ಪೂರ್ವಭಾವಿಯಾಗಿ ಅವರು ಇಪ್ಪತ್ನಾಲ್ಕು ಅಂಶಗಳನ್ನು (ವಿಷಯಗಳನ್ನಲ್ಲ) ಕಾದಂಬರಿಯ ಚರ್ಚೆಗೆ ಅನುಕೂಲವಾಗುವಂತೆ ಗುರುತಿಸಿಕೊಟ್ಟಿದ್ದರು.

ಕಾದಂಬರಿಯನ್ನು ಓದುವ ಹಲವು ವಿಧಗಳಿರಬಹುದಾದರೂ ಹೆಚ್ಚಾಗಿ ನಾವು ಅದನ್ನು ಹೊರಗಿನ ಸಂಗತಿಗಳ ಮೂಲಕ ಪ್ರವೇಶಿಸುತ್ತಿರುತ್ತೇವೆ. ಆ ಕ್ರಮವನ್ನು ಬಿಟ್ಟು ಕಾದಂಬರಿಯನ್ನೇ ಒಂದು ಸ್ವಯಂಪೂರ್ಣ ರಚನೆ ಎಂದು ಪರಿಗಣಿಸಿ ಕಾದಂಬರಿಯ ಒಳಗಿನಿಂದಲೇ ಕಂಡುಕೊಳ್ಳುವ ಸಾಧ್ಯತೆಯ ಹುಡುಕಾಟವಾಗಿ ಈ ಕಮ್ಮಟ ಇತ್ತು. ಹಾಗೆಂದು ಇದು ಸಾಹಿತ್ಯ ಕೃತಿಯನ್ನು ಸಮಾಜದಿಂದ ಬೇರ್ಪಡಿಸಿ ಇಡುವುದಿಲ್ಲ. ಬದಲಿಗೆ ಕಾದಂಬರಿಯನ್ನು ಅದರೆಲ್ಲಾ ವಿವರಗಳೊಂದಿಗೆ ಅತ್ಯಂತ ಹತ್ತಿರದ ಓದನ್ನು ಮಾಡಬಯಸುತ್ತದೆ. ಈ ಹತ್ತಿರದ ಓದು ನಮ್ಮನ್ನು ಕಾದಂಬರಿಯ ಓದಿನ ಜೊತೆ ಜೊತೆಯಲ್ಲೇ ಬದುಕಿನ ಓದಿಗೂ ಅನುವು ಮಾಡಿಕೊಡುವ ಅನುಭವವನ್ನು ಕಾಣಿಸಿತು. ಓದು ಆಯಾಸವಲ್ಲ, ಅಪ್ಯಾಯಮಾನ ಎಂಬುದನ್ನೂ ಕಾಣಿಸಿತು. ಇಲ್ಲಿ ಕಂಡುಕೊಂಡ ಹಲವು ವಿಷಯಗಳಲ್ಲಿ ಕೆಲವನ್ನು ಹಂಚಿಕೊಳ್ಳಬಯಸುವೆ.

ಸಾಹಿತ್ಯ ಕೃತಿಯೊಂದನ್ನು ಲೇಖಕರಿಗೇ ತಳುಕುಹಾಕಿ ವಿಮರ್ಶಿಸುವುದು ಕನ್ನಡದಲ್ಲಿ ಬಂದಿರುವ ಅತ್ಯಂತ ಜನಪ್ರಿಯ ವಿಧಾನ. ಇಲ್ಲಿ ಇದನ್ನು ಗೌಣಗೊಳಿಸಲಾಯಿತು. ಲೇಖಕರು ಮತ್ತು ಕೃತಿಯ ನಿರೂಪಕರು ಬೇರೆ ಬೇರೆ. ಲೇಖಕರ ನಿಲುವೇ ನಿರೂಪಕ/ಕಿಯ ನಿಲುವು ಆಗಬೇಕಿಲ್ಲ ಎಂಬ ಹಿನ್ನೆಲೆಯಿಂದ ನೋಡುತ್ತಾ ಹೋದಾಗ ಅದು ಹೊಸ ದಾರಿಯನ್ನು ತೆರೆದ ಅನುಭವೊಂದನ್ನು ದಕ್ಕಿಸಿಕೊಟ್ಟಿತು.

ಕಾದಂಬರಿಯೊಂದು ತನ್ನಲ್ಲೇ ತಾನು ಪರಿಪೂರ್ಣಗೊಂಡ ರಚನೆ ಎಂದು ನಾವು ಪ್ರವೇಶಿಸುವಾಗ, ಅದು ಯಾವ ರೀತಿಯ ರಚನೆ ಎಂದು ವಿವರಿಸಿಕೊಳ್ಳುವುದರೊಂದಿಗೆ ಕಮ್ಮಟ ಮೊದಲುಗೊಂಡಿತು. ರಚನೆಯಲ್ಲಿ ಎರಡು ರೀತಿಗಳಿರುತ್ತವೆ. ಒಂದು, ಅಂಗಾಂಗಿ ರಚನೆ. ಇನ್ನೊಂದು ಅಂಶಾಂಶಿ ರಚನೆ. ಅಂಗಾಂಗಿ ರಚನೆಯಲ್ಲಿ ಪ್ರತೀ ಅಂಗವೂ ಸ್ವತಂತ್ರವಾಗಿ ತನ್ನದೇ ಕಾರ್ಯ, ಅಸ್ತಿತ್ವ ಹೊಂದಿದ್ದರೂ ಪರಿಣಾಮದಲ್ಲಿ ಅವುಗಳೆಲ್ಲವೂ ಇನ್ನೊಂದು ರಚನೆಯಾಗಿ ರೂಪುಗೊಳ್ಳುತ್ತವೆ. (ಉದಾ: ನಮ್ಮ ದೇಹ). ಅಂಶಾಂಶಿಯಲ್ಲಿ ಎಲ್ಲ ಬಿಡಿಗಳೂ ಇಡಿಯೊಂದರ ಪ್ರತಿನಿಧಿಯಾಗಿರುತ್ತವೆ. ಉದಾ: ಅನ್ನದ ಅಗುಳು). ಕಾದಂಬರಿಯ ರಚನೆಯು ಈ ಎರಡೂ ರೀತಿಯಲ್ಲಿ ಇರಬಹುದು. ಈ ಅಂಗಾಂಗಿ ರಚನೆಯಲ್ಲಿ ದುಡಿಯುವ ಬಿಡಿ ಭಾಗಗಳು ಅವುಗಳಷ್ಟಕ್ಕೇ ಅವು ತರತಮಕ್ಕೆ ಒಳಗಾಗಿರುವುದಿಲ್ಲ. ಆದರೆ, ಅದಕ್ಕೊಂದು ಸಾಮಾಜಿಕ ವಿವರಣೆ ಕೊಡುವಾಗ ಮನುಷ್ಯರು ಮಾಡಿಕೊಂಡಿರುವ ವ್ಯವಸ್ಥೆಗೆ ತಕ್ಕಂತೆ ತರತಮ ಭಾವಕ್ಕೆ ಈಡಾಗುತ್ತದೆ.

ಅಂಶಾಂಶಿಯಲ್ಲಿರುವ ಎಲ್ಲವೂ ಸಮಾನ ಎಂಬ ಭಾವ ಇಲ್ಲೂ ಇರಬೇಕಾಗಿತ್ತಾದರೂ ಸಾಮಾಜಿಕ ರಚನೆ ಇದಕ್ಕೆ ಅನುವು ಮಾಡಿಕೊಡುವುದಿಲ್ಲ. ಇದನ್ನು ಕಾದಂಬರಿಯ ನಿರೂಪಕರು ಹೇಗೆ ಸಂಘಟಿಸುತ್ತಾರೆ ಎಂಬುದರ ಮೇಲೆ ಕಾದಂಬರಿಯ ನೆಲೆಯೂ ನಿರ್ಣಯವಾಗುತ್ತದೆ. ಆದರೆ ಈ ನೆಲೆಯನ್ನು ನಿರ್ಣಯಿಸುವಾಗ ಒಂದು ಸಾವಧಾನದ ಓದು ಅತೀ ಅಗತ್ಯ. ಉದಾಹರಣೆಗೆ, ಸುಬ್ಬಮ್ಮನನ್ನು ಕುರಿತು ದಾರಿದ್ರ್ಯದಲ್ಲಿ ಹುಟ್ಟಿ ಬೆಳೆದು, ಅಸಂಸ್ಕೃತರಿಂದ ಪೋಷಿತವಾಗಿ, ಅವರ ನಡೆ ನುಡಿ ಆಚಾರ, ವ್ಯವಹಾರ ಶೀಲಗಳನ್ನು ಕಲಿತ ಸುಬ್ಬಮ್ಮನಲ್ಲಿ ಸುಸಂಸ್ಕೃತ ಸ್ತ್ರೀ ಸಹಜವಾದ ಔದಾರ್ಯ, ಗಾಂಭೀರ್ಯ, ನಯವಿನಯ, ಸಂಯಮ ಸಂಚಲನಗಳು ಒಂದಿನಿತೂ ಇರಲಿಲ್ಲ ಎಂಬ ವಿವರಣೆಗಳನ್ನು ಓದಿದಾಗ ಕೆಳವರ್ಗವನ್ನು ತುಚ್ಚೀಕರಿಸಿದ್ದಾರೆ ಎಂಬ ಭಾವವೇ ಮೊದಲು ಮೂಡುವುದು.

ಆದರೆ, ಮೇಲುವರ್ಗಕ್ಕೆ ಸೇರಿದ ಚಂದ್ರಯ್ಯಗೌಡರು ಸುಸಂಸ್ಕೃತರಾಗಿದ್ದರೆ? ಎಂಬ ಪ್ರಶ್ನೆ ಓದುಗರಿಗೇ ಹೊಳೆಯುವಂತೆ ಅವರ ವರ್ಣನೆಯೂ ಇದೇ ಕಾದಂಬರಿಯಲ್ಲಿದೆ. ಅಂದರೆ, ಇವೆಲ್ಲವೂ ಸಾಮಾಜಿಕವಾಗಿ ಸ್ಥಾಪಿಸಲಾದ ನಂಬಿಕೆಯೇ ಹೊರತು ಇನ್ನೇನಲ್ಲ ಎಂಬುದನ್ನು ಕಾದಂಬರಿಯೇ ಬಿಡಿಸಿ ತೋರುವ ರಚನೆಯೊಂದು ಇಲ್ಲಿದೆ. ಆದರೆ, ನಾವು ಎಷ್ಟೋ ಸಲ ಇದನ್ನು ವೈರುಧ್ಯ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆಯೂ ಇರುತ್ತದೆ.

ಈ ಕಾದಂಬರಿಯಲ್ಲಿ ಬರುವ ಪ್ರಾಣಿ, ಪಕ್ಷಿ, ಕೀಟಾದಿಗಳು, ಮರ-ಗಿಡ, ಮಳೆ, ಮುಂಜಾನೆ, ರಾತ್ರಿ, ಹಗಲು, ಬಿಸಿಲು, ಬೇಟೆ, ಕಳ್ಳಂಗಡಿ, ಸಾವುಗಳು, ಆಚರಣೆಗಳು ಇತ್ಯಾದಿ ಅಸಂಖ್ಯ ವರ್ಣನೆಗಳನ್ನು ಕಥೆಯೊಂದು ಕಥನವಾಗುವುದಕ್ಕೆ ಹೇಗೆ ಬಳಸಿಕೊಳ್ಳಲಾಗಿದೆ? ಅದು ತಕ್ಕ ರೀತಿಯಲ್ಲಿ ಒದಗಿ ಬಂದಿದೆಯೇ ಇಲ್ಲವೆ? ಎಂಬುದನ್ನು ಗಮನಿಸುವುದು ಕೂಡ ಭಿನ್ನ ಪಯಣವೇ ಆಗಿದೆ.

ಹಾಗೆಯೇ ಈ ಕಥನಗಳ ನೈತಿಕ ಕೇಂದ್ರ ಯಾವುದು? ಎಂಬ ಇನ್ನೊಂದು ಚರ್ಚೆಯನ್ನೂ ಇಲ್ಲಿ ತರಲಾಯಿತು.

ಕಾನೂರು ಹೆಗ್ಗಡತಿಯನ್ನು ಹೇಗೆ ಓದುತ್ತೇವೆ ಎಂಬ ಈ ಕಮ್ಮಟವು ಆ ಮೂಲಕ ಒಂದು ಕಾದಂಬರಿಯನ್ನು ಹೇಗೆ ಓದಬೇಕು ಎನ್ನುವುದನ್ನು ಕಟ್ಟಿಕೊಡಲು ಪ್ರಯತ್ನಿಸಿತು. ಈ ಪ್ರಯತ್ನದಲ್ಲಿ ಶಿಬಿರಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು, ನಿರ್ದೇಶಕರು ಎಂಬ ಯಾವ ತರತಮವೂ ಇರಲಿಲ್ಲ. ಇಲ್ಲಿ ಯಾರೂ ಅಮುಖ್ಯರಾಗಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು