ಸೋಮವಾರ, ಜೂನ್ 21, 2021
28 °C

ಬರಗೂರು ರಾಮಚಂದ್ರಪ್ಪ ಬರೆದ ಕವಿತೆ: ಏನಾಗುತ್ತಿದೆ ಇಲ್ಲಿ?

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

Prajavani

ಏನಾಗುತ್ತಿದೆ ಇಲ್ಲಿ ಈ ನಾಡಿನಲ್ಲಿ

ಚಂದ್ರ ತಾರೆಗಳ ತೋರಿಸಿದ ಬೀಡಿನಲ್ಲಿ

ಚಂದ್ರ ತಾರೆಗಳು ತಂಗಳಾಗಿ ಉದುರುತ್ತಿವೆ
ಉಸಿರು ಕಟ್ಟಿದ ನಿಟ್ಟುಸಿರ ನೆಲದ ಮೇಲೆ
ಬೆಳದಿಂಗಳ ಭ್ರಮಿಸಿದ ಭಾವಗಳು ಮಲಗಿವೆ
ಸೌದೆಯೊಟ್ಟಿದ ಚಿಂತೆ ಚಿತೆಯ ಮೇಲೆ

ತೆನೆಯೊಡೆದ ಕನಸುಗಳ ಕರುಳ ಕತ್ತರಿಸಿ
ಖಜಾನೆಗಳ ತುಂಬ ತುಂಬಿಸಲಾಗುತ್ತಿದೆ
ಕೂಳೆ ಹೊಲದಲ್ಲಿ ಕೂಲಿ ಮಾಡಲು ಬಿಟ್ಟು
ನೀರಿಲ್ಲದ ನಾಲೆ ತೋಡಲಾಗುತ್ತಿದೆ

ಬಡಬಗ್ಗರ ಮಣ್ಣಿನ ಹಣತೆಗೆ ಎಣ್ಣೆಕೊಡದೆ
ಬಣ್ಣದ ಭಾಷಣ ಭೋರ್ಗರೆಯುತ್ತಿದೆ
ಭಯ ಬಿದ್ದ ಭೂಮಿಯ ಬೆವರು ಹರಿದು
ತಳಪಾಯವೇ ತಲ್ಲಣಿಸಿ ನಡುಗುತ್ತಿದೆ

ಅರಳುತ್ತಿರುವ ಹೂಗಳು ನರಳುತ್ತ ಬೀಳುತ್ತಿವೆ
ಕನಸು ಕದ್ದ ಕಳ್ಳ ಕುರ್ಚಿಯ ಕೆಳಗೆ
ಆಮ್ಲಜನಕವಿಲ್ಲದ ನರಕದಾರ್ಥಿಕತೆಗೆ
ಜೀವಗಳ ಬಲಿ ಕೋಟಿ ಕೊಳಗದ ಒಳಗೆ

ಚಂದ್ರ ಬೆತ್ತಲೆಯಾಗಿ ಸೂರ್ಯ ಕತ್ತಲೆಯಾಗಿ
ಮುಗಿಲು ಅಲ್ಲೋಲ ಕಲ್ಲೋಲವಾಗಿ
ನೆಲದ ಮಡಿಲಲ್ಲಿ ಕಡಲು ಕೆಂಡವಾಗಿ
ಉರಿದು ಹೋಗುವ ಮುನ್ನ ಎಚ್ಚರಾಗಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು