ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಕವಿ, ಬಯಲಲ್ಲಿ ಕವಿತೆ

Last Updated 22 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಕವಿತೆ ಬರೆದ ಕವಿಯನ್ನು ಹೆಚ್ಚಿನ ವಿಚಾರಣೆಗೆ

ಪೊಲೀಸರು ಕಸ್ಟಡಿ ಕೇಳಿದರು.

ನ್ಯಾಯಾಧೀಶರು ಮಂಜೂರು ಮಾಡಿದರು

ಇದು ಭಾರತ

ಇದುವೇ ಭಾರತ’

–‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂಬ ಕವಿತೆ ಓದಿ ‘ಜಾತಿ, ಧರ್ಮಗಳ ನಡುವೆ ವೈರತ್ವ ಉಂಟು ಮಾಡಿ ಸಾರ್ವಜನಿಕ ಶಾಂತಿಭಂಗಕ್ಕೆ ಯತ್ನಿಸಿದರೆಂಬ’ ಆರೋಪಕ್ಕೆ ಗುರಿಯಾಗಿರುವ ಕೊಪ್ಪಳದ ಕವಿ, ಪತ್ರಕರ್ತ ಸಿರಾಜ್‌ ಬಿಸರಹಳ್ಳಿ ಹಾಗೂ ಆ ಪದ್ಯವನ್ನು ಬಿತ್ತರಿಸಿದ ‘ಕನ್ನಡ ನೆಟ್‌ ಡಾಟ್‌ ಕಾಂ’ನ ಸಂಪಾದಕ ರಾಜಾಭಕ್ಷಿ ಫೆ. 18ರಂದು ಗಂಗಾವತಿ ನ್ಯಾಯಾಲಯಕ್ಕೆ ಶರಣಾದ ಬಳಿಕ ಮತ್ತೊಬ್ಬ ಕವಿ, ಪ್ರಕಾಶಕ ಬಸೂ ಅವರು ತಮ್ಮ ಫೇಸ್‌ಬುಕ್‌ ವಾಲ್‌ ಮೇಲೆ ಬರೆದುಕೊಂಡ ಕಿರು ಪದ್ಯವಿದು.

ಜ. 9ರಂದು ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಸಿರಾಜ್‌ ಕವಿತೆ ಓದಿದ್ದರು. ಜ. 14ರಂದು ರಾಜಾಭಕ್ಷಿ ಜಾಲತಾಣದಲ್ಲಿ ಅದನ್ನು ಬಿತ್ತರಿಸಿದ್ದರು. ಅದಾಗಿ ಹತ್ತು ದಿನಗಳ ಬಳಿಕ ಜ. 24ರಂದು ಬಿಜೆಪಿ ಮುಖಂಡರೊಬ್ಬರು ಠಾಣೆಗೆ ದೂರು ನೀಡಿದರು.

ಗಂಗಾವತಿ ಠಾಣೆಯಲ್ಲಿ ಕವಿ ಮತ್ತು ಪ್ರಕಾಶಕ ಇಬ್ಬರ ವಿರುದ್ಧವೂ ಐಪಿಸಿ 505 (2)–ಜಾತಿ, ಧರ್ಮಗಳ ನಡುವೆ ವೈರತ್ವ, ದ್ವೇಷ ಉಂಟು ಮಾಡುವ ಉದ್ದೇಶ ಹಾಗೂ ಐಪಿಸಿ 504- (ಐಪಿಸಿ 34ರೊಂದಿಗೆ) ಶಾಂತಿಭಂಗಕ್ಕೆ ಜಂಟಿ ಯತ್ನ ಪ್ರಕರಣ ದಾಖಲಾಯಿತು. ನಂತರ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಕೊನೆಗೆ ಕೋರ್ಟ್‌ನಲ್ಲಿ ಹಾಜರಾಗಿ, ಪೊಲೀಸ್‌ ಕಸ್ಟಡಿಗೆ ಅವರನ್ನು ಒಪ್ಪಿಸಲಾಗಿತ್ತು. ಒಂದು ದಿನದ ಕಸ್ಟಡಿಯ ಬಳಿಕ ಕವಿಗಳಿಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಕವಿ, ಪತ್ರಕರ್ತ ಸಿರಾಜ್ ಬಿಸರಹಳ್ಳಿ

ಕವಿತೆ ಓದಿದ್ದ ಕವಿ ಜೈಲು ನೋಡಿ ಬಂದರೆ, ಕವಿತೆ ಮಾತ್ರ ಸ್ವಚ್ಛಂದವಾಗಿ ಬಯಲಿನಲ್ಲಿ ಓಡಾಡುತ್ತಿದೆ. ನೂರಾರು ಜನ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಆ ಕವಿತೆಯ ಅನುವಾದಗಳು ಲಿಪಿ ಇರುವ, ಲಿಪಿ ಇಲ್ಲದ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ನಿಯಂತ್ರಣದ ಬ್ಯಾರಿಕೇಡ್‌ಗಳನ್ನು ದಾಟಿ ಎಲ್ಲೆಡೆ ಪ್ರತಿಭಟನಾ ಕಾವ್ಯ ಹೊರಹೊಮ್ಮುತ್ತಿದೆ. ಭಾಷೆಗಳ ಗಡಿಮೀರಿ ಇಂಗ್ಲಿಷ್‌, ಹಿಂದಿ, ತಮಿಳು, ತುಳು, ಕೊಂಕಣಿ, ತೆಲುಗು, ಉರ್ದು, ಮಲಯಾಳ, ಕೊಡವ, ಲಂಬಾಣಿ, ಬ್ಯಾರಿ ಮತ್ತು ಸಾವಜಿ ಭಾಷೆಗೆ ಆ ಕವಿತೆ ಅನುವಾದವಾಗಿದೆ!

ಕವಿಯ ಮೇಲೆ ಪ್ರಕರಣ ದಾಖಲಿಸಿದ್ದನ್ನು ವಿರೋಧಿಸಿ ಕವಿ ಅರುಣ್‌ ಜೋಳದ ಕೂಡ್ಲಿಗಿ ತಮ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಆ ಪದ್ಯ ಓದಿ, ಇತರರೂ ಲೈವ್‌ ಓದಿನ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಈಗ ಸಿರಾಜ್‌ ಅವರ ಕವನವನ್ನು ನಾಡಿನಾದ್ಯಂತ ಸಾರ್ವಜನಿಕವಾಗಿ ವಾಚಿಸುವ ಕಾರ್ಯಕ್ರಮವೂ ನಡೆಯುತ್ತಿದೆ.

ಕವಿ ಸಿರಾಜ್‌ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ ಎಂದೇ ಪ್ರಚಾರ ನಡೆದಿದೆ. ಆದರೆ, ಪೊಲೀಸರು ತೋರಿಸಿರುವ ಸೆಕ್ಷನ್‌ಗಳಲ್ಲಿ ಅದರ ಪ್ರಸ್ತಾಪ ಇಲ್ಲ. ಅದೇ ವೇಳೆ,ಸಿರಾಜ್‌ ಅವರ ಪದ್ಯವನ್ನು ಅನುವಾದ ಮಾಡಿ ಹಂಚಿದ ಕವಿಗಳ ಮೇಲೆ ಇದೇ ಮಾದರಿಯಲ್ಲಿ ಕೇಸ್ ದಾಖಲಾಗಬಹುದೇ ಎಂಬ ಪ್ರಶ್ನೆ ಎದ್ದಿದೆ. ಕವಿತೆಯನ್ನು ಅನುವಾದ ಮಾಡುವುದೂ ಶಾಂತಿಭಂಗಕ್ಕೆ ಕಾರಣ ಆಗಬಹುದೆ? ಮೂಲಪದ್ಯದ ಜೊತೆಗೆ ಈ ಅನುವಾದಗಳನ್ನೂ ನೂರಾರು ಸಾಹಿತಿಗಳು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ; ಫಾರ್ವರ್ಡ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಚರ್ಚೆಗಳು ನಡೆಯುತ್ತಿವೆ.

ಆನೆಗೊಂದಿಉತ್ಸವವನ್ನು ಜಿಲ್ಲಾಡಳಿತವೇ ಏರ್ಪಡಿಸಿತ್ತು. ‘ಗೋಷ್ಠಿಯ ಸಂದರ್ಭದಲ್ಲಿ ವೇದಿಕೆಯಲ್ಲಿ ಅರವತ್ತು ಜನ, ಸಭಿಕರ ಸಾಲಿನಲ್ಲಿ ಮೂವತ್ತು ಜನರಿದ್ದರು’ ಎಂಬುದು ಪ್ರತ್ಯಕ್ಷದರ್ಶಿಗಳ ಮಾತು.‘ಸರ್ಕಾರದ ಅನುದಾನದಲ್ಲಿ ನಡೆದ ಈ ಉತ್ಸವದಲ್ಲಿ ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ವಿರೋಧಿಸುವಂತಹ, ಪ್ರಧಾನಿ ಮೋದಿ ವಿರುದ್ಧ ಹಗುರವಾಗಿ, ಅಪಮಾನದ ಶಬ್ದಗಳುಳ್ಳ ಕವಿತೆ ಓದಿದರು ಹಾಗೂ ಪ್ರಕಟಿಸಿದರು’ ಎಂಬುದು ದೂರು. ಆದರೆ ಕವಿತೆಯಲ್ಲಿ ಎಲ್ಲೂ ಮೋದಿಯವರ ಹೆಸರಿಲ್ಲ. ಕವಿಗೋಷ್ಠಿಯಲ್ಲಿ ಈ ಕವಿತೆಗೆ ಅವಕಾಶ ನೀಡಿದ ಅಧಿಕಾರಿಗಳು, ಚಪ್ಪಾಳೆ ತಟ್ಟಿದ ಸಭಿಕರ ಮೇಲೂ ಮೊಕದ್ದಮೆ ದಾಖಲಿಸಬಹುದೆ?

ಎಪ್ಪತ್ತರ ದಶಕದಲ್ಲಿ ‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂದು ಬಂಡಾಯ ಸಾಹಿತ್ಯ ಚಳವಳಿಯ ಘೋಷಣೆ ಹೊರಹೊಮ್ಮಿತು. ನೋವುಂಡ ಜನರಿಗಾಗಿ ಕಾವ್ಯ ಖಡ್ಗವಾಗುವುದು ಎಂದರೆ ಅದು ಅಕ್ಷರಶಃ ಖಡ್ಗ ಎಂದು ಅರ್ಥಮಾಡಿಕೊಳ್ಳಬೇಕಿಲ್ಲ ಎಂಬುದು ಸಾಮಾನ್ಯ ತಿಳಿವಳಿಕೆ. ಈಗ ಇದೇ ದೊಡ್ಡ ಕೊರತೆ.

ಅದು ಶಾಂತಿಭಂಗದ ಆಶಯವುಳ್ಳ ಕವಿತೆ ಎಂದು ಹೇಳಲು ಅಲ್ಲಿ ಯಾವುದೇ ಶಾಂತಿಭಂಗದ ಮಾತುಗಳಿಲ್ಲ. ಜನರನ್ನು ದಂಗೆಗೆ ಎತ್ತಿಕಟ್ಟುವ ಉದ್ದೇಶ, ಮಾತುಗಳೂ ಅಲ್ಲಿಲ್ಲ. ಅಲ್ಲಿರುವುದು ಜನರ ಕಷ್ಟದ ಸರಣಿ. ಆಡಳಿತಗಾರರ ವೈಖರಿಯ ಕುರಿತ ಅಸಮಾಧಾನವಷ್ಟೇ.

ಭಾರತದಲ್ಲಿ ದೇಶದ್ರೋಹದ ಕಾಯ್ದೆಯನ್ನು ಜಾರಿಗೆ ತಂದವರು ಬ್ರಿಟಿಷರು. ಭಾರತೀಯರ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಆ ಕಾಯ್ದೆ ಧಾರಾಳ ಬಳಕೆಯಾಯಿತು. ಅವರು ಭಾರತ ಬಿಟ್ಟು ತೊಲಗಿದ ಬಳಿಕವೂ ಕಾಯ್ದೆ ಜಾರಿಯಲ್ಲಿದೆ. ಆಳುವವರ ಹೆಸರೆತ್ತದೆ ಟೀಕಿಸಿದರೂ ಅದು ದೇಶದ್ರೋಹ ಎಂದುಕೊಳ್ಳುವ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವವನ್ನು, ಅದರ ಆಡಳಿತ ವೈಖರಿಯನ್ನು ಟೀಕಿಸುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು, ವಿರೋಧಿಸುವುದು ಕಾರ್ಡ್‌ಗಾಗಿ ನಿದ್ದೆಗೆಡುವ ಬಡಜನರ ದಯನೀಯ ಪರಿಸ್ಥಿತಿ ಕುರಿತು ಕಳಕಳಿ ತೋರುವುದೂ ಶಾಂತಿ ಭಂಗ, ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಹುನ್ನಾರವಾಗುತ್ತದೆಯೇ? ಇದೀಗ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆ.

ಇನ್ನು ಮುಂದೆ ಸರ್ಕಾರಿ ಉತ್ಸವಗಳಲ್ಲಿ ಕವಿಗೋಷ್ಠಿ ನಡೆಸುವುದಾದರೆ, ಭಾಗವಹಿಸುವ ಕವಿಗಳು ಓದಲಿರುವ ಕವಿತೆಯನ್ನು ಜಿಲ್ಲಾಧಿಕಾರಿಗೆ ಕಳಿಸಿ ಮೊದಲೇ ಸೆನ್ಸಾರ್‌ ಮಾಡುವ ಕ್ರಮ ಜಾರಿಗೆ ಬರಬಹುದೆ? ಕಾದು ನೋಡಬೇಕು. ಸದ್ಯಕ್ಕಂತೂ ‘ನಿನ್ನ ದಾಖಲೆ ಯಾವಾಗ ನೀಡುತ್ತಿ..?’ ಎನ್ನುವ ಕವಿತೆ ಜೈಲು ಕಂಬಿಗಳನ್ನು ಲೆಕ್ಕಿಸದೆ ಬಯಲಿನಲ್ಲಿ ಅಲೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT