ಗುರುವಾರ , ಮಾರ್ಚ್ 23, 2023
31 °C

ಕವಿತೆ: ಕೋಮಲೆ ಅಂದವರಾರು ಮಿಥಿಲೆಯನ್ನು?

ನೆಲ್ಲುಕುಂಟೆ ವೆಂಕಟೇಶ್ Updated:

ಅಕ್ಷರ ಗಾತ್ರ : | |

Prajavani

ಮಿಥಿಲೆ ಮಂಚಿಗೆ ಮೇಲೆ ನಿಂತು
ಗೋಧಿ ಬಾರ್ಲಿಗೆ ಆತು
ಗರಾ ಗರಾ ಕವಣಿ ಬೀಸಿ
ದೂರದೆತ್ತರದ ಕೈಲಾಸ ಗಿರಿಯ
ಮುಡಿಯ ಗದ್ದುಗೆ ಮೇಲೆ ಕಳಶ ಕಟ್ಟುವ ವಯಸ್ಸಿನ್ನುಮ್ಮಸ್ಸು ಸೀತೆಗೆ.

ಸೀತೆ ಕುಣಿತದ ಬೆವರು
ರಾಮ ಸಾಮುವಿನ ನೀರು
ಹೊತ್ತು ಸಾಗುವ ಗಂಗೆಗೆಷ್ಟೊಂದು ನೆನಪು.
ಕಂಬನಿ ಹೊರುವ ಕನಸು ಬಿದ್ದರೆ ಬೆಚ್ಚುತ್ತಾಳೆ ಪಾಪ

ಹರೆಯದಂಗಾಂಗಕ್ಕೆ ಕತ್ತಲು ಕತ್ತರಿಸಿ
ಬೆಳಗು ಧಿಗ್ಗನೇಳುತ್ತದೆ
ಮೊಳಕೆ ಪಯಿರಾಗುವಂತೆ
ಮುಚ್ಚಿ ತೆರೆದರೆ ಸಾಕು ಕಣ್ಣು
ಸೂರ್ಯ ನಗುತ್ತಾನೆ ಎದುರು ಕೂತು
ಅಂಥ ಹೊತ್ತಲ್ಲಿ ಹಾರ ಬದಲಾದವು.

ಕೋಮಲೆ ಅಂದವರಾರು ಮಿಥಿಲೆಯನ್ನು?
ನಡೆಯಲಾದೀತೆ
ಚಿತ್ರಕೂಟಕೆ
ಸಾವಿರ ಮೈಲಿ.
ಗಂಗೆ ಉಬ್ಬಿ ಕುಣಿದೆಸೆದ ಮಣ್ಣಿಗಗಾಧ ಶಕ್ತಿ
ಎಸೆದರೆ ಎದ್ದು ಬರುತ್ತಾಳೆ ಹಸಿರು.
ಕಂಗೆಟ್ಟದ್ದು ಈಗ ಮಾತ್ರ
ಮೂರ್ಛೆ ಕಲ್ಪನೆ ಕವಿಯದೇ ಇರಬೇಕು!
ಕೈಯ್ಯೇ ಕತ್ತಿಯಾಗುತ್ತಿತ್ತು ತಲೆಗೆ ಮುಸುಕಿಲ್ಲದಿದ್ದರೆ ಸೀತೆಗೆ

ಹೊರುವುದು ಸುಲಭ ಕಿರೀಟ
ಹೆಣ್ಣಿನ ತಲೆಯೊದಿಕೆ ಭೂಮಿಯೊಳಗೆ ಕುಸಿದು ಹೋಗುವಷ್ಟು ಭಾರ
ರಾವಣನ ಹಾರು ವಿಮಾನದಲ್ಲಿ
ರಾಮನ ಬೀರು ಮಾತುಗಳಲ್ಲಿ
ಗಿರಿ ಬಂಡೆಯಂತೆ ತಲೆಯನ್ನೊತ್ತುತ್ತಿತ್ತು ನೆಲಕ್ಕೆ
ಬೆಂಕಿ ಧಿಗ್ಗನೆ ಬೆಳಗಿ
ಭೂಮಿಯೆದೆ ಬಿರಿದು
ರಾಮ ರಾಮ.

ಅಶೋಕದ ಏಕಾಂತದ ಗಳಿಗೆಗಳಲ್ಲಿ
ಬೀಳುವ ಕನಸ್ಸು ರೋಮಾಂಚಕವಲ್ಲ

ಚಂದ್ರ ಮುಗಿಲನ್ನು ಅಟ್ಟಾಡಿಸಿ ಕುಣಿವಾಗ
ವೃಕ್ಷದೆಲೆಗಳು ಕುಣಿ ಕುಣಿದು ತಿರು ತಿರುಗಿ ನೆಲಕ್ಕಿಳಿವಾಗ
ಕಡಲ ನೀರು
ಸೀತೆ ಸೆರಗಿಗೆ ಸೋಂಕಿ
ಧಗ್ಗನೆದ್ದು ಉರಿಯುತ್ತದೆ
ರಾಮ ರಾಮ.
ಎದೆಯೊಳಗೆ ಕೂತು ಕನಸು ಬರೆವ ಚಿತ್ರಕಾರನಿಗೆ ಹೇಳು ದೊರೆಯೇ
ಗಂಗೆ ತಟದ ಸುಗ್ಗಿ ಹಬ್ಬವ ಚಿತ್ರಿಸಲು.
ನೀರು ಬೆಂಕಿಯಾಗುವ ಪಾಪಿ ನಾನಲ್ಲವಯ್ಯಾ.

ಹಿಮ ಹೊದ್ದ ಬೆಟ್ಟಗಳು ಕರಗಿ ಮುಳ್ಳು ಮೈಯ್ಯಾದರೆ
ಗಂಗೆ ಮಡಿಲು ಅನಾಥ.
ಭೀಷ್ಮ ಭಗೀರಥ ಕರ್ಣ ಸಗರರು ಕೊಳೆತು ಹೋಗುತ್ತಾರೆ ತಂದೆ.

ಊರೂರ ಕನಸು ಕಲ್ಪನೆಗಳ ಕಿತ್ತು
ಒಂದೆಡೆ ರಾಶಿ ಹಾಕಬೇಡಿರಯ್ಯಾ

ಹೋಮದ ಹೊಗೆ
ಈಶ್ವರನ ಉಸಿರು ಕಟ್ಟಿಸುತ್ತದೆ.
ತಡೆಯಲಾರಳು ಸೀತೆ
ಕಂಗಳಲ್ಲಿ ಉಳಿದಿಲ್ಲ ನೀರು
ಗಂಗೆ ಯಮುನೆಯಾಗುವುದು ಘೋರ ಘೋರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು