ಗುರುವಾರ , ಸೆಪ್ಟೆಂಬರ್ 29, 2022
28 °C

ಕಥೆ: ಇಬ್ಬನಿ

ಅಜಯ್ ಕುಮಾರ್ ಎಂ. ಗುಂಬಳ್ಳಿ Updated:

ಅಕ್ಷರ ಗಾತ್ರ : | |

Prajavani

ಕಾಲೇಜಿನಲ್ಲಿದ್ದ ಪವನ್ ಗೆಳತಿ ಫೋನಿಗೆ ಕಾದಿದ್ದ. ಅವನಿಗೆ ಹೇಳದೆ ಅವಳು ಇದುವರೆಗೂ ಎಲ್ಲೂ ಹೋಗಿದ್ದಿಲ್ಲ. ಬೆಳಿಗ್ಗೆ ಕರೆ ಮಾಡಿದ್ದಾಗ ‘ನನ್ನೊಟ್ಟಿಗೆ ಅಣ್ಣ ಚಾಮರಾಜನಗರದವರೆಗೆ ಬರಬಹುದು’ ತಿಳಿಸಿ ಎಂದಿನಂತೆ ‘ನೀನು ಮುಂದಿನ ನಿಲ್ದಾಣದಲ್ಲಿ ಇರು’ ಎಂದು ಸಹ ಹೇಳಿದ್ದಳು. ಲೆಕ್ಚರರ್ ಪಾಠ ಮಾಡುತ್ತಿದ್ದರೂ ಅವನ ಮನಸ್ಸು ಸ್ಥಿಮಿತದಲ್ಲಿರಲು ಪರದಾಡಿತು. ವಿನಯ್ ಸನ್ನೆ ಮಾಡಿ ‘ಹೋಗಿದ್ದು ಬಾ’ ಪ್ರಚೋದಿಸಿದ. ತರಗತಿ ಮುಗಿಯಲು ಉಳಿದಿದ್ದು ಐದು ನಿಮಿಷವಷ್ಟೆ. ಪವನ್‍ಗೆ ಅದು ಗಂಟೆಯಾಗಿ ಒದ್ದಾಡುತ್ತಿದ್ದ. ಕೊನೆಗೆ ಕ್ಲಾಸ್ ರೂಮಿಂದ ಹೊರಗೆ ಬಂದು ನಿಟ್ಟುಸಿರು ಬಿಟ್ಟು ವಿನಯ್‍ಗೆ ಹೇಳಿ ಬಸ್‍ನಿಲ್ದಾಣದತ್ತ ಹೊರಟ. ಸುರೇಖ, ಮಾಲಶ್ರೀ ‘ಹೋಗು ಹೋಗು’ ಎನ್ನುತ್ತ ಕುಹಕದ ನಗೆ ಬೀರಿದರು. ವಿನಯ್ ‘ಹಬ್ಬ ಮಾಡು’ ತರಲೆ ಮಾತಾಡಿದ. ಗೆಳೆತಿಯರಿಬ್ಬರು ನಕ್ಕರು. ಪವನ್ ಲವ್ ವಿಷಯ ಅವನ ಗೆಳೆಯ, ಗೆಳತಿಯರಿಗೆ ಗೊತ್ತಿತ್ತು. ಅದೇನು ಅಂತ ದೊಡ್ಡ ವಿಷಯವಲ್ಲ. ಏಕೆಂದರೆ ಎಲ್ಲರೂ ತಮ್ಮ ಬಗ್ಗೆ ಪರಸ್ಪರರು ಹೇಳಿಕೊಂಡಿದ್ದರು. ವಿನಯ್ ಇಬ್ಬರು ಹುಡುಗಿಯರನ್ನು ಪ್ರೀತಿಸುತ್ತಿದ್ದ. ಆ ಇಬ್ಬರು ಹುಡುಗೀರು ಬೇರೆ ಬೇರೆ ಕಾಲೇಜಿನವರಾಗಿದ್ದು ವಿನಯ್‍ಗೆ ಅನುಕೂಲ ಆಗಿತ್ತು. ಪ್ರತಿಕೂಲದ ವಿಷಯವೆಂದರೆ ಆ ಇಬ್ಬರೂ ಹುಡುಗೀರು ಬಸ್‍ನಿಲ್ದಾಣಕ್ಕೆ ಒಂದೇ ಸಮಯಕ್ಕೆ ಬರುತ್ತಿದ್ದುದು ವಿನಯ್ ಕಳ್ಳನಂತೆ ಅವಿತುಕೊಳ್ಳುವಂತೆ ಮಾಡುತ್ತಿತ್ತು. ಒಮ್ಮೆ ಒಂದು ಹುಡುಗಿಗೆ ಗುಮಾನಿ ಬಂದಿದ್ದನ್ನು ಸರಿಪಡಿಸಲು ಅಗ್ನಿ ಪರೀಕ್ಷೆಗಳನ್ನು ಮಾಡಿದ್ದ. ಆವಾಗಿಂದ ಒಬ್ಬಳೇ ಸಾಕು ಅನ್ನುವ ತೀರ್ಮಾನ ಮಾಡಿ ಸ್ವಲ್ಪ ದಿನಗಳ ಬಳಿಕ ವಿನಯ್ ಹಳಬನೇ ಆಗಿದ್ದ. ಸುರೇಖಳಿಗೆ ಪಕ್ಕದ ಮನೆಯ ಹುಡುಗ ಲವ್ ಲೆಟರ್ ಕೊಟ್ಟು, ಅವಳ ಹಿಂದೆ ಗಿರಕಿ ಹೊಡೆಯುತ್ತ ‘ಐ ಲವ್ ಯು’ ಎಂದು ಪೀಡಿಸಿದರೂ ಅವಳು ಒಪ್ಪಿಕೊಂಡಿರಲಿಲ್ಲ. ಆಸೆ ಇದ್ದರೂ ಅಪ್ಪನ ಭಯಕ್ಕೆ ಅವನನ್ನು ತಿರಸ್ಕರಿಸಿದ್ದಳು. ಮಾಲಶ್ರೀ ‘ತನಗೆ ಪ್ರೇಮನಿವೇದನೆಯೇ ಬಂದಿಲ್ಲ’ ಎಂದು ಹೇಳಿದ್ದಳು. ಆಗ ಪವನ್, ವಿನಯ್ ‘ಇದನ್ನ ನಾವು ನಂಬಲ್ಲ’ ಎಂದಾಗ ‘ನಿಜ. ನಾನು ಕಪ್ಪಗಿದ್ದೀನಿ ಅಂತ ಬಂದಿಲ್ವೇನೋ?’ ಅವಳೇ ನಗುತ್ತ ನುಡಿದಿದ್ದಳು.

‘ಇಬ್ಬನಿ ಹೊರಟುಹೋಗಿದ್ದರೆ’ ಭಯದಿಂದ ತರಾತುರಿಯಲ್ಲಿ ಪವನ್ ಬಸ್ಟ್ಯಾಂಡಿಗೆ ಹೋದ. ಫೋನ್ ರಿಂಗಣಿಸಲು ರಿಸೀವ್ ಮಾಡಿ ‘ಹೇಳು’ ಅಂದ. ‘ಅರ್ಧಗಂಟೇಲಿ ಬರ್ತಿನಿ’ ಮತ್ತೇನನ್ನೂ ಹೇಳದೇ ಇಬ್ಬನಿ ಕರೆ ಕಟ್ಟುಮಾಡಿದಳು. ಅವನು ಕೇಳಬೇಕೆಂದಿದ್ದ ಪ್ರಶ್ನೆಗಳು ಅವನಲ್ಲೇ ಉಳಿದವು. ‘ಬಂದಾಗ ಕೇಳುತ್ತೀನಿ’ ಎಂದು ಅತ್ತಿತ್ತ ದೃಷ್ಠಿ ಹೊರಳಿಸಿದ. ಬೇರೆ ಪ್ರೇಮಿಗಳನ್ನು ಕಂಡರೆ ಅವನಿಗೆ ಹೊಟ್ಟೆಕಿಚ್ಚು ಜಾಸ್ತಿ. ಏಕೆಂದರೆ ಚೆಂದದ ಹುಡುಗೀರು ಅಷ್ಟೇನು ಚೆಂದವಿರದ ಹುಡುಗರನ್ನೆ ಪ್ರೀತಿಸುತ್ತಿದ್ದರು. ಅಪರೂಪಕ್ಕೆ ಇಬ್ಬರೂ ಚೆಂದವಿರುತ್ತಾರೆ. ಮತ್ತೆ ಕೆಲವರಲ್ಲಿ ಅಜಗಜಾಂತರ ವ್ಯತ್ಯಾಸ. ‘ಪ್ರೇಮಕ್ಕೆ ಕಣ್ಣಿಲ್ಲ’ ಎಂಬ ಮಾತನ್ನು ಒಪ್ಪುತ್ತಾನಾದರೂ ತೀರ ಕುರುಡತನದ ಪ್ರೇಮವೂ ಸರಿಯಲ್ಲ ಎಂದು ತಿಳಿದಿದ್ದ.

ಮಳೆಗಾಲವಾದ್ದರಿಂದ ದಿನವಿಡೀ ತುಂತುರು ಉದುರುತ್ತಲೇ ಇತ್ತು. ಮೂರು ತಿಂಗಳಿಂದ ಊರಿಗೆ ಬಾರದಿದ್ದಕ್ಕೆ ಇಬ್ಬನಿ ನಾಲ್ಕುದಿನ ರಜೆ ಹಾಕಿ ಬಂದಿದ್ದಳು. ಅನಿವಾರ್ಯ ಕಾರಣದಿಂದ ಮತ್ತೆರಡು ದಿನ ರಜೆ ಹೆಚ್ಚಾಯಿತು. ವಾರ್ಯಾಂತಕ್ಕೆ ಕೆಲಸಕ್ಕೆ ಹೋಗಲೇ ಬೇಕಾದ್ದರಿಂದ ಹೊರಟು ನಿಂತಿದ್ದಳು. ಅಣ್ಣ-ಅತ್ತಿಗೆ, ಅಪ್ಪ-ಅಮ್ಮ ಬೇಡ ಎಂದಿದ್ದರೂ ಅವಳು ಕೇಳಲಿಲ್ಲ. ಪವನ್ ಕಾಲೇಜಿನಲ್ಲಿದ್ದ. ಅಂದು ಅವನಿಗೆ ಎರಡನೇ ಸೆಮಿಸ್ಟಾರಿನ ಇತಿಹಾಸ ಪರೀಕ್ಷೆ. ಅವನು ಮೊದಲೇ ‘ನಂಗೆ ಎಕ್ಸಾಮ್ಸ್ ಇದೆ’ ತಿಳಿಸಿದ್ದರಿಂದ ‘ಅವಳು ಇಂದು ಬರುವುದಿಲ್ಲ’ ಎಂದು ಹಾಸ್ಟೆಲ್‍ಗೆ ಹೊರಟಿದ್ದ. ಪರೀಕ್ಷೆ ಮಧ್ಯಾಹ್ನದ ಮೇಲೆ ಇದ್ದಿದ್ದರಿಂದ ಸುರೇಖ, ಮಾಲಶ್ರೀ ಕಾಲೇಜಿಗೆ ಇನ್ನೂ ಬಂದಿರಲಿಲ್ಲ.

ಹಾಸ್ಟೆಲ್ಲಿನ ಆವರಣದ ನೆಲ ಮಿದಗೊಂಡಿತ್ತು. ಅಲ್ಲಿನ ಗಿಡಗಳು ಮಳೆ ನೀರಿಂದ ನಿರಂತರ ಸ್ನಾನ ಮಾಡಿ ಸಪ್ಪಗಾಗಿದ್ದವು. ಪವನ್ ಅಂಗಳಕ್ಕೆ ಹೆಜ್ಜೆ ಇಟ್ಟ. ಪುಚಕ್ಕನೆ ಪಾದ ನೆಲಕ್ಕಿಳಿಯಿತು. ಮುಖ್ಯದ್ವಾರದ ಬಳಿ ಕೆಸರನ್ನು ಗಾರೆನೆಲಕ್ಕೆ ಒರೆಸಿ ನಿಧಾನಕ್ಕೆ ಆರನೇ ನಂಬರಿನ ರೂಮಿಗೆ ನಡೆದ. ವಾಸು, ಮಿಥುನ್, ಮಲ್ಲೇಶ್ ಮಲಗಿದ್ದರು. ‘ಬಾರಪ್ಪ ರಾಜಕಾರಣಿ’ ಎಲ್ಲರೂ ಒಟ್ಟಿಗೆ ಕರೆದರು. ಪವನ್ ಹೆಚ್ಚಾಗಿ ಪೊಲಿಟಿಕಲ್ ಸೈನ್ಸ್ ಬಗ್ಗೆ ಮಾತನಾಡುತ್ತಿದ್ದ ದೆಸೆಯಿಂದ ಅವನಿಗೆ ಆ ಹೆಸರು ಬಂದಿತ್ತು. ವಿನಯ್ ಗೊಳ್ಳನೆ ನಕ್ಕ. ಪವನ್ ಮುಖವನ್ನು ಕಿವುಚಿಕೊಳ್ಳದೇ ‘ಬನ್ನಿ ಸ್ಯಾ..ಸೂ..ಗಳೇ’ ಅಂದ. ಅದು ಅವರಿಗೆ ಉರಿ ತರಿಸಿತು. ‘ಹಾಗಂದ್ರೆ ಏನು’ ಕೆಟ್ಟದಾಗಿ ಏನೋ ಹೇಳಿರಬೇಕೆಂದು ಅದನ್ನು ತಿಳಿಯಲೆಂದೆ ಕೇಳಿದಾಗ ‘ಶ್ಯಾಮ್ ಸುಂದರ್‍ಗಳೇ’ ಅಂತ ಅಂದ ಪವನ್. ವಿನಯ್ ಹೊಟ್ಟೆ ಹಿಡಿದುಕೊಂಡು ನಗುತ್ತಲೇ ಇದ್ದ. ಎಲ್ಲರೂ ಒಂದಾಗಿ ಚಳಿಗೆ ಬೆಚ್ಚಗೆ ಏನನ್ನಾದರು ಮಾಡಿಕೊಳ್ಳುವ ಯೋಚನೆ ಮಾಡುತ್ತಿದ್ದರು. ಚುರುಮುರಿ ಎಲ್ಲರಿಗೂ ಒಪ್ಪಿಗೆಯಾಗಿ ಇಂತಿಷ್ಟು ದುಡ್ಡು ಎಲ್ಲರಿಂದಲೂ ವಸೂಲಾಯ್ತು. ವಾಸು, ಮಿಥುನ್ ಅಂಗಡಿಗೆ ಹೊರಟರು. ವಿನಯ್ ಲವರ್ ಜೊತೆ ಫೋನಿನಲ್ಲಿ ಬೆರೆತಿದ್ದ. ಮಲ್ಲೇಶ್ ನೀಲಿಚಿತ್ರಗಳ ವೀಕ್ಷಣೆಯಲ್ಲಿದ್ದ. ಪವನ್ ಫೋನ್ ಎತ್ತಿಕೊಂಡ ತಕ್ಷಣಕ್ಕೆ ಇಬ್ಬನಿ ಕರೆ ಬಂತು. ಅವಳೆಲ್ಲವನ್ನೂ ವಿವರಿಸಿ ‘ಜೊತೆಗೆ ಬಾ’ ಕರೆದದ್ದಕ್ಕೆ ‘ಎಕ್ಸಾಮ್ ಇದೆ. ಬರಕ್ಕಾಗದು’ ಅಂದ. ಅವಳು ‘ನಾನು ಕಾಯ್ತೀನಿ’ ಎಂದಾಗ ಯೋಚಿಸಿ ‘ಬರ್ತಿನಿ’ ಎಂದ. ಕರೆ ಕಟ್ಟಾಯಿತು. ವಿನಯ್‍ಗೆ ವಿಷಯ ತಿಳಿಸಿ ‘ನಾನು ಅವಳೊಟ್ಟಿಗೆ ಈರೋಡ್‍ಗೆ ಹೋಗ್ಬೇಕು.’ ಅಂದಾಗ ಪವನ್ ‘ಎಕ್ಸಾಮ್ ಮುಗಿಸ್ಕೊಂಡು ಹೋಗಿದ್ದು ಬಾ. ಫುಲ್ ಎಂಜಾಯ್’ ಅನ್ನುತ್ತ ಪೋಲಿ ನಗೆ ನಕ್ಕ. 

ವಾಸು, ಮಿಥುನ್ ಮಳೆಗೆ ಸಿಕ್ಕಿಕೊಂಡಿದ್ದರಿಂದ ಅವರೂ ಹಾಸ್ಟೆಲ್ ಸೇರೋ ಹೊತ್ತಿಗೆ ಮಧ್ಯಾಹ್ನ ಒಂದೂವರೆ ಆಗಿತ್ತು. ಅಷ್ಟೊತ್ತಿಗೆ ವಿನಯ್-ಪವನ್ ಇಬ್ಬರೂ ತಲೆಗೆ ಒಂದೊಂದು ಪ್ಲಾಸ್ಟಿಕ್ ಕವರ್ ಹಾಕೊಂಡು ಕಾಲೇಜು ಕಡೆಗಿನ ರಸ್ತೆಗೆ ಇಳಿದಿದ್ದರು. ಮೆಲ್ಲಮೆಲ್ಲಗೆ ನಡೆಯಲೇಬೇಕಿತ್ತು. ಇಲ್ಲದಿದ್ದರೆ ಚಪ್ಪಲಿ ಕುಣಿತಕ್ಕೆ ಕೆಸರು ಪ್ಯಾಂಟಿಗೆಲ್ಲ ಮೆತ್ತಿಕೊಳ್ಳುತ್ತಿತ್ತು.

ಸಂಜೆ ಐದೂವರೆಗೆ ಪರೀಕ್ಷೆ ಮುಗಿದ ಮೇಲೆ ಪವನ್ ಎಲ್ಲರಿಗೂ ‘ಬೈ’ ಹೇಳಿ ಫೋನ್ ಸ್ವಿಚ್ ಆನ್ ಮಾಡಿ ಬಸ್ಟ್ಯಾಂಡಿಗೆ ಹೊರಟ. ಸುರೇಖ, ಮಾಲಶ್ರೀ, ವಿನಯ್ ತುಂತುರು ಮಳೆಯಲ್ಲಿ ನೆನೆಯುತ್ತಲೇ ಸಾಗಿದರು.

ಇಬ್ಬನಿ ‘ಬಸ್‍ಸ್ಟ್ಯಾಂಡಲ್ಲೆ ಇದೀನಿ’ ಎಂದು ಮೆಸೇಜ್ ಕಳಿಸಿದ್ದಳು. ಪವನ್ ಅವಳನ್ನು ಹುಡುಕಿ ಪಕ್ಕದ ಸೀಟಿನಲ್ಲಿ ಕುಳಿತು ‘ಬಸ್’ ಎಂದ. ‘ಬರಬೇಕು’ ಅಂದಳು. ಡೈರಿಯಲ್ಲಿ ಅವಳೊಟ್ಟಿಗಿನ ಪ್ರಯಾಣದ ಪ್ರತಿಯೊಂದು ವಿವರಗಳನ್ನು ಬರೆದಿಟ್ಟಿದ್ದನು. ಅದರಲ್ಲಿ ತೀರ ಖಾಸಗಿ ವಿಷಯಗಳನ್ನು ಬರೆದಿದ್ದ. ಬಸ್ಸಿನಲ್ಲಿ ಮುತ್ತುಕೊಟ್ಟಿದ್ದು, ಅಪ್ಪಿಕೊಂಡಿದ್ದು, ಎದೆಗೆ ಕೈ ಬಿಟ್ಟಿದ್ದು-ಇತರೆ ಹೀಗೆ. ಹಸಿರು ಬಸ್ ಬಂದಿತು. ಅವನು ಖಾಲಿ ಬಸ್ ಬರಲಿ ಎಂದು ಪ್ರಾರ್ಥಿಸುತ್ತಿದ್ದ. ಬಸ್ಸಲ್ಲಿ ಜನ ವಿರಳವಾಗಿದ್ದರು. ಹಿಂದಿನ ಸೀಟಿಗೆ ಕರೆದ. ಅವಳು ಮಧ್ಯದ ಸೀಟಿನಲ್ಲಿ ಕುಳಿತಳು. ‘ತೊಂದರೆ ಇಲ್ಲ’ ಎಂದು ತಾನು ಅಲ್ಲೇ ಕುಳಿತ. ದೂರದ ಪ್ರಯಾಣ ಆದ್ದರಿಂದ ಸಮಯವಿತ್ತು. ಬಸ್ಸು ಚಾಮರಾಜನಗರದಿಂದ ಹೊರಟಿತು. ಹಾಸನೂರಿಂದ ಬಣ್ಣಾರಿಯವರೆಗೆ ಹೇರ್‍ಪಿನ್ ಬೆಂಡಿಗ್‍ಗಳಲ್ಲಿ ಬಸ್ಸು ಅತ್ತಿತ್ತ ವಾಲುತ್ತಿರುತ್ತದೆ. ಆಗ ಹೆಚ್ಚಿನ ಪ್ರಯಾಣಿಕರು ಗಟ್ಟಿಯಾಗಿ ಕುಳಿತುಕೊಳ್ಳುವುದೇ ದುಸ್ತರವಾಗುತ್ತದೆ. ಇನ್ನು ಇತರರನ್ನು ಗಮನಿಸುವ ಗೋಜಿಗೆ ಅವರು ಹೋಗುವುದಿಲ್ಲ. ಪವನ್ ಇವೆಲ್ಲವನ್ನು ಲೆಕ್ಕಾಚಾರ ಹಾಕುತ್ತಿದ್ದ. ಈಗ ಇವರಿದ್ದ ಬಸ್ಸು ಪುಣಜನೂರು ಚೆಕ್‍ಪೋಸ್ಟ್‍ಯಿಂದ ಮುಂದೆ ಸಾಗಿತ್ತು. ಅವನು ಇಡೀ ಬಸ್ಸಿನ ಒಳನೋಟವನ್ನು ಅಭ್ಯಸಿಸಿ ಇಬ್ಬನಿಗೆ ಚುಂಬಿಸುತ್ತ, ಅವಳೆದೆಗೆ ಕೈಬಿಟ್ಟು ಹೊಟ್ಟೆಯ ತನಕವೂ ಬೆರಳಾಡಿಸುತ್ತ ತುಟಿಗೆ ಗಾಢವಾಗಿ ಚುಂಬಿಸುತ್ತಲೇ ಇದ್ದ. ಇಬ್ಬನಿ ಸಹ ಅಷ್ಟೇ ಬಲದಲ್ಲಿ ಅವನನ್ನು ಚುಂಬಿಸುತ್ತಿದ್ದಳು. ಪವನ್ ಅವಳ ಬೆನ್ನಿಗೂ ಮುತ್ತಿಕ್ಕುತ್ತಿದ್ದ. ಒಟ್ಟಿನಲ್ಲಿ ಚಳಿಗೆ ಇಬ್ಬರೂ ಮೈಯನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು.

ಬಸ್ ಅರಣ್ಯದ ರಸ್ತೆಯೊಳಗೆ ವೇಗಮಿತಿಯಲ್ಲಿ ಚಲಿಸುತ್ತಿತ್ತು. ಇಡೀ ಕಾಡು ಹಚ್ಚ ಹಸಿರಾಗಿತ್ತು. ಜಿಂಕೆಗಳು ಅಲ್ಲೊಂದು ಇಲ್ಲೊಂದು ನಿಂತಿದ್ದವು. ಸ್ಪೀಡ್ ಬ್ರೇಕರ್ ಇದ್ದಲ್ಲಿ ಬಸ್ಸು ದಡದಡ ಸದ್ದು ಮಾಡಿ ಪ್ರಯಾಣಿಕರನ್ನು ಎಚ್ಚರಿಸುತ್ತಿತ್ತು. ಬಹಳವಾಗಿ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದರು. ಇಬ್ಬರೂ ಕ್ಷಣಕಾಲ ಮೈಮರೆತ್ತಿದ್ದರು. ಇಬ್ಬನಿ ಬೆಚ್ಚಿದಳು. ‘ಯಾಕೆ? ಏನಾಯ್ತು?’ ಅಚ್ಚರಿಯಿಂದ ಕೇಳಿದ ಪವನ್. ಹಿಂದಕ್ಕೆ ಬೆರಳು ತೋರಿಸಿದಳು. ಕುಡುಕನೊಬ್ಬ ಅವಳ ಕಾಲನ್ನು ಸ್ಪರ್ಶಿಸಲು ಹಾತೊರೆಯುತ್ತ ಒಂದೆರಡು ಸಲ ಟಚ್ ಕೂಡ ಮಾಡಿದ್ದ. ಹಿಂದೆಮುಂದೆ ನೋಡದೇ ಪವನ್ ಎದ್ದು ಅವನ ಕಪಾಳಕ್ಕೆ ಒಂದು ಕೊಟ್ಟು ‘ಏನ್ ಮಾಡ್ತಿದಿಯ ಬೋಳಿ ಮಗ್ನೆ’ ಎಂದ. ಅವನು ಏನೇನೋ ತೊದಲುತ್ತ ದೂರಕ್ಕೆ ಸರಿದ. ಒಂದಿಬ್ಬರು ಪ್ರಯಾಣಿಕರು ಇವರತ್ತ ನೋಡಿ ಸುಮ್ಮನಾದರು. ಇಬ್ಬನಿ ಪವನ್ ಕೈಹಿಡಿದು ‘ಪ್ಲೀಸ್ ಕೂತ್ಕೋ’ ಬೇಡಿಕೊಳ್ಳುತ್ತಿದ್ದಳು. ಊರಲ್ಲೇ ಯಾರಿಗು ಕೈ ಮಾಡದವನು ಬೇರೆ ಊರಲ್ಲಿ ಹೊಡದೇ ಬಿಟ್ಟಿದ್ದ. ಅವನೆದೆ ಬಡಿದುಕೊಳ್ಳುತ್ತಿದ್ದರು ಅವನಲ್ಲಿ ಧೈರ್ಯವಿತ್ತು. ತನ್ನ ನಂಬಿದ್ದವಳ ಕಾಪಾಡಲು ಸಿದ್ಧನಿದ್ದ. ಬಸ್ಸು ಸಾಗುತ್ತಲೇ ಇತ್ತು. ಪವನ್ ಮೌನವಾಗಿ ಮರಗಿಡಗಳನ್ನು ನೋಡುತ್ತಿದ್ದ. ಮುಸ್ಸಂಜೆ ಬಲಿಯುತ್ತ ಕತ್ತಲಾಗುತ್ತಿತ್ತು. ರಾತ್ರಿ ಎಂಟಕ್ಕೆ ಬಸ್ಸು ಈರೋಡ್ ತಲುಪಿತು. ವಾಪಸ್ ಒಬ್ಬನೆ ಹೊರಡಬೇಕೆಂಬ ದಿಗಿಲು ಅವನಲ್ಲಿ ಈಗ ಹೆಚ್ಚಾಗಿ ಸಪ್ಪಗಾಗಿದ್ದ. ಇಬ್ಬನಿ ಅವನ ಕೈಹಿಡಿದುಕೊಂಡು ಬೇಕರಿಗೆ ಕರೆದೊಯ್ದಳು. ಇಬ್ಬರೂ ಜ್ಯೂಸ್ ಕುಡಿಯುತ್ತಿದ್ದರು. ಅವಳ ಕಂಗಳಲಿ ನೀರು ಮಡುಗಟ್ಟಿತ್ತು. ‘ನನ್ನ ಬೇಗ ಮದುವೆ ಮಾಡ್ಕೋ’ ಅಂದಳು. ಅವಳ ಕೈಹಿಡಿದು ಪವನ್ ಕಣ್ಣಲ್ಲೇ ಭರವಸೆ ಸೂಚಿಸಿದ. ‘ನನ್ನ ಬಿಟ್ಟು ಇರ್ತೀಯ ನೀನು’ ಪುನ ಕೇಳಿದಳು. ‘ಆಗಲ್ಲ’ ಅಂದು ‘ನೀನು’ ಅಂದ. ‘ರೀಯಲೀ ಐ ಲವ್ ಯು’ ಎಂದ ಇಬ್ಬನಿ ತುಂಬಾ ಭಾವನಾತ್ಮಕವಾಗಿದ್ದಳು. ಆ ಕ್ಷಣದಲ್ಲಿ ಇಬ್ಬರಲ್ಲು ಪ್ರೀತಿಯಷ್ಟೇ ತುಂಬಿ ತುಳುಕುತ್ತಿತ್ತು. ಇಬ್ಬರ ಕಣ್ಣಲ್ಲಿ ಪ್ರೇಮದ ಬೆಳಕಿತ್ತು. ಯಾರೊಬ್ಬರ ಹಸ್ತಕ್ಷೇಪವನ್ನು ಸಹಿಸದವರಾಗಿದ್ದರು. ಬೆಸೆದ ಕೈಗಳು ಹಾಗೇ ಇದ್ದವು. ಟೈಮು ಒಂಬತ್ತಾಗಿತ್ತು. ‘ನಾನು ಹೋಗ್ತಿನಿ’ ಪವನ್ ಅವಳ ಕೆನ್ನೆ ಮುಟ್ಟಿದ. ಇಬ್ಬನಿ ಮೌನಕ್ಕೆ ಬಿದ್ದಳು. ಅವನು ಮತ್ತೆ ಹೇಳಿದ. ‘ಬೇಡ ಇಲ್ಲೆ ಇರು’ ಅಂದಳು. ‘ಇಲ್ಲಿ ಅಂದ್ರೆ ಎಲ್ಲಿ. ನೀನು ಹಾಸ್ಟೆಲ್ಲಿಗೆ ಹೋಗ್ಬೇಕಲ್ಲಾ’ ಸಾಧ್ಯವಿಲ್ಲ ಎಂಬಂತೆ ನುಡಿದ ಪವನ್. ‘ನಾನು ಹಾಸ್ಟೆಲ್ಲಿಗೆ ಹೋಗಲ್ಲ. ಇವತ್ತು ಫುಲ್ ನೈಟ್ ಟ್ರಾವೆಲ್ ಮಾಡೋಣ’ ಅಂದಳು ಇಬ್ಬನಿ. ‘ಏಯ್ ತಲೆ ಕೆಟ್ಟಿದಿಯ ನಿಂಗೆ’ ಸಣ್ಣ ಕೋಪ ಉಗಿಯುತ್ತ ಪವನ್ ಅಂದ. ‘ಈ ರಾತ್ರೀಲಿ ನಿನ್ನ ವಾಪಸ್ ಕಳಿಸೋಕೆ ನಂಗೆ ಮನಸಿಲ್ಲ. ಪ್ಲೀಸ್ ನೀನು ನಂಜೊತೆ ಬಾ.’ ಇಬ್ಬನಿ ಹೃದಯದಿಂದ ಕೇಳಿಕೊಂಡಳು. ಹೆಚ್ಚಿಗೆ ಅವನು ಮಾತನಾಡದೇ ಅವಳ ಆಜ್ಞೆಗೆ ತಲೆದೂಗಿದ. ಒಂಬತ್ತು ಮೂವತ್ತಕ್ಕೆ ಬಸ್‍ಸ್ಟ್ಯಾಂಡಲ್ಲಿ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಎರಡು ಪುಟ್ಟ ಹೃದಯಗಳು ಇಡೀ ರಾತ್ರಿಯನ್ನು ಹಗಲಾಗಿ ಮಾರ್ಪಡಿಸುವಂತೆ ಮುಂದಿನ ಪ್ರಯಾಣಕ್ಕಾಗಿ ಬಸ್ಸು ಕಾಯುತ್ತ ಕುಳಿತುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.