ಶುಕ್ರವಾರ, ಜೂನ್ 18, 2021
21 °C

ಮೌಢ್ಯದ ಪರಮಾವಧಿ

ಅಂಬಿ ಎಸ್. ಹೈಯ್ಯಾಳ್ Updated:

ಅಕ್ಷರ ಗಾತ್ರ : | |

ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ ನಮಗೆ ಬದುಕಿನ ಕಾಲಚಕ್ರದೊಂದಿಗೆ ಸೆಣಸುವುದು ಸವಾಲಾಗಿತ್ತು. ಪರಾವಲಂಬನೆ, ಅಭದ್ರತೆ, ಅಸಹಾಯಕತೆ ಪ್ರತಿದಿನದ ಭಾಗವಾಗಿದ್ದು ಸುಳ್ಳಲ್ಲ. ಇದು ನಮ್ಮ ಸ್ಥಿತಿಯಾದರೆ ವಿಧವೆ ಪಟ್ಟ ಹೊತ್ತಿದ್ದ ಅಮ್ಮನ ಪರಿಸ್ಥಿತಿ ಇನ್ನೂ ಭಿನ್ನ. ನಿಶ್ಚಿತಾರ್ಥ, ಮದುವೆ ಇತರೇ ಶುಭ ಸಮಾರಂಭಗಳಿಗೆ ಅಮ್ಮ ಹುರುಪು, ಉತ್ಸಾಹದಿಂದ ಭಾಗವಹಿಸಿದರೆ ಆಗುವ ಕಾರ್ಯಗಳಲ್ಲೆವೂ ಅಪಶಕುನ, ಕೇಡು ಎಂಬ ಕುರುಡುನಂಬಿಕೆಗಳು ಈ ಸಮಾಜ ಅಮ್ಮನ ಮೇಲೆ ಹೇರಿತ್ತು.

ನಾವೆಲ್ಲರೂ ನಮ್ಮ ಸಂಬಂಧಿಯ ಮದುವೆ ಸಂಭ್ರಮದಲ್ಲಿದ್ದೆವು. ಲಗ್ನಪತ್ರಿಕೆ ಮುದ್ರಣವಾಗಿ ನೆಂಟರಿಗೆ ಆಹ್ವಾನ ಪತ್ರಿಕೆ ತಲುಪಿಸಲು ವಿಳಾಸ ಬರೆಯುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನನ್ನ ಬರವಣಿಗೆ ಚಂದವಲ್ಲದ ಕಾರಣ ಮುತ್ತು ಪೋಣಿಸಿದಂತೆ ದುಂಡಾಗಿ ಬರೆಯುವ ಅಮ್ಮನ ಹೆಸರು ಪ್ರಸ್ತಾಪಿಸಿದೆ. ಆಗ ಅಲ್ಲಿರುವರೆಲ್ಲರೂ ಒಬ್ಬರ ಮುಖ ಒಬ್ಬರೂ ನೋಡಿಕೊಂಡರು. ನನ್ನ ಮಾತಿಗೆ  ಪ್ರತಿಕ್ರಿಯೆ ಮಾತ್ರ ಶೂನ್ಯ. ಆ ಮೌನ ಉತ್ತರಕ್ಕೆ ಕಾರಣವೇನೆಂಬುದು ಆ ಕ್ಷಣಕ್ಕೆ ನನಗೆ ಅರ್ಥವಾಗಲಿಲ್ಲ. ‌

ತದನಂತರ ಆ ವಿಷಯ ಕುರಿತು ಬೇರೊಬ್ಬರ ಜೊತೆ ವಿಚಾರಿಸಿದಾಗ ಮೂಢನಂಬಿಕೆಯ ಮತ್ತೊಂದು ಮುಖದ ಪರಿಚಯವಾಗಿತ್ತು. ಅದ್ಯಾವುದೋ ಅಸಂಬದ್ಧ ನಂಬಿಕೆ ಅವರಲ್ಲಿ ಬೇರೂರಿತ್ತು. ವಿಧವೆಯರು ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆದರೆ ನವ ವಧು– ವರರ ಜೀವನದುದ್ದಕ್ಕೂ ಜಗಳ, ಮನಸ್ತಾಪ, ಅಪನಂಬಿಕೆ ಸೃಷ್ಟಿಯಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ ಎಂಬ ಅವರ ಮೌಢ್ಯದ ಪರಮಾವಧಿಯ ಬಗೆಗೆ ಹೃದಯ ಹಿಂಡಿದಂತಾಯಿತು. ಇಂತಹ ತಲೆಬುಡವಿಲ್ಲದ ನಂಬಿಕೆಗಳ ಬಗ್ಗೆ ನೋವು, ಹತಾಶೆ, ಆಕ್ರೋಶ ಮನದಲ್ಲಿ ಒಮ್ಮೆಲೆ ಅಲೆ ಅಲೆಯಾಗಿ ಭೋರ್ಗರಿಸಿದವು.

ಈಗಿನ ಡಿಜಿಟಲ್‌ ಯುಗದಲ್ಲೂ ಪುರುಷರಿಗಿಲ್ಲದ ಸಮಾಜದ ಕಟ್ಟುಪಾಡುಗಳು ಕೇವಲ ಮಹಿಳೆಗೆ ಮಾತ್ರ ಸೀಮಿತಗೊಳಿಸಿರುವ ಬಗ್ಗೆ ನನಗೆ ತೀವ್ರ ಅಸಮಾಧಾನ ಮೂಡಿಸಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.