ಶನಿವಾರ, ಸೆಪ್ಟೆಂಬರ್ 26, 2020
23 °C

ಗಯಾತನ ರಸಪ್ರಶ್ನೆ

ಮಂಜುನಾಥ ಅದ್ದೆ Updated:

ಅಕ್ಷರ ಗಾತ್ರ : | |

Prajavani

‘ಹೊರಗಿನ ಸಡಗರಕ್ಕೂ ಒಳಗಿನ ಸಂಕಟಕ್ಕೂ ಮ್ಯಾಚ್ ಆಗದೇ ಮೂರು ದಿನಗಳಿಂದ ತಳಮಳ ಪಡ್ತಿದ್ದೀನಿ. ನಿಜ ಹೇಳಬೇಕು ಅಂದ್ರೆ, ಈ ಬರ್ತ್‌ ಡೇ ಆಚರಣೆ ನನಗೆ ಇಷ್ಟವಿಲ್ಲ. ಭೂಮಿ ಮೇಲೆ ಗಿಡಬಳ್ಳಿ, ನಾಯಿನರಿ, ಕ್ರಿಮಿಕೀಟ, ಪ್ರಾಣಿಪಕ್ಷಿಗಳೆಲ್ಲಾ ಹುಟ್ಟಿವೆ; ಹುಟ್ಟುತ್ತಲೂ ಇವೆ. ಇಂಥಾ ಅಖಂಡ ಜೀವಪ್ರವಾಹದ ನಡುವೆ ನಮ್ಮದೇನು ವಿಶೇಷ? ಹೆಂಡತಿ ಮಕ್ಕಳು ಬಿಡ್ತಿಲ್ಲ. ಇದು ಐವತ್ತನೇ ವರ್ಷದ್ದು ಅನ್ನೋ ಹಟ, ಅಕ್ಕರೆ ಅವರದ್ದು. ಆದರೆ, ಇದು ನನ್ನೊಳಗಿನ ಹೆಮ್ಮೆಗಿಂತ ದುಃಖವನ್ನೇ ಹೆಚ್ಚಿಸಿದೆ. ಇಷ್ಟಕ್ಕೂ ಇದು ನನ್ನ ಪ್ರೈಮರಿ ಸ್ಕೂಲ್ ಮೇಷ್ಟ್ರು ಫಿಕ್ಸ್ ಮಾಡಿರುವ ಹುಟ್ಟಿದ ದಿನ. ಇದ್ಯಾವುದನ್ನೂ ನಾನೀಗ ಬಾಯಿ ಬಿಡುವಂತಿಲ್ಲ. ಎಲ್ಲರ ಎದುರೂ ನಗೆಯ ನಾಟಕ ಮಾಡ್ತಿದ್ದೀನಿ. ಒಳಗಡೆ ತುಂಬಾ ನೋವಾಗ್ತಿದೆ. ಇದು ನನ್ನದಲ್ಲ; ನನ್ನೊಳಗೆ ಸೇರಿರಬಹುದಾದ ಹಲವು ಜನರ ಕೀವು ರಕ್ತದ ಬರ್ತ್‌ ಡೇ ಅನ್ನಿಸ್ತಿದೆ. ನನ್ನಪ್ಪ, ಅಮ್ಮನ ಡೆತ್ ಡೇ ಅನ್ನಿಸ್ತಿದೆ..’ ಸಣ್ಣಗೆ ತೇಲಿ ಬರುತ್ತಿದ್ದ ಸಂಗೀತ, ಖಾದ್ಯಗಳ ಘಮಲಿನ ನಡುವೆಯೇ ವಿನೋದನು ಕಟ್ಟಿಕೊಂಡಿದ್ದ ಉಸಿರನ್ನು ಬಿಟ್ಟವನಂತೆ ಮೇಲಿನದನ್ನೆಲ್ಲಾ ಜಗದೀಶನ ಕಿವಿಯಲ್ಲಿ ಉಸುರಿಕೊಂಡನು.

ತನ್ನ ಹೆಗಲ ಮೇಲಿದ್ದ ವಿನೋದನ ಕೈಯನ್ನು ಮೆಲ್ಲನೆ ತಟ್ಟಿದನು ಜಗದೀಶ; ವಿನೋದನ ಹೆಂಡತಿ ಮಕ್ಕಳ ಅಕ್ಕರೆ, ಇವನ ಸಂಕಟ, ಸದ್ಯದ ಸಡಗರ ಎಲ್ಲವನ್ನೂ ಒಮ್ಮೆಗೇ ವ್ಯಕ್ತಪಡಿಸಲು ಎಂಬಂತೆ ನವೆದ ಬಟ್ಟೆ ಒತ್ತಡಕ್ಕೆ ಹಿಂಜಿಕೊಂಡಂತೆ ತನ್ನ ತುಟಿಗಳನ್ನು ಅಗಲಿಸಿ ವಿಷಾದವೂ ಸಂತಸವೂ ಬೆಸೆಗೊಂಡಂಥ ರೂಪದ ನಗುವೊಂದನ್ನು ಚೆಲ್ಲಿದನು. ಕಣ್ಣನ್ನು ಕಿರಿದು ಮಾಡಿ ನೋಟವನ್ನು ಆಕಾಶದ ಕಡೆಗೆ ತೇಲಿಸಿದನು. ಇಂಥಾ ಗಳಿಗೆಯಲ್ಲಿ ಇನ್ನೇನನ್ನು ಹೇಳಬೇಕೆಂದು ಜಗದೀಶನಿಗೂ ಹೊಳೆಯದಾಗಿತ್ತು. ಲವಲವಿಕೆಯಿಂದ ಇದ್ದ ಸಂದರ್ಭವನ್ನು ವಿನೋದನ ಗತವು ಆವರಿಸಿಕೊಳ್ಳಬಾರದು ಎಂಬ ಒತ್ತಾಸೆ ಮಾತ್ರ ಇವನದಾಗಿತ್ತು.

ತಾನೇ ಮುಂದಡಿ ಇಟ್ಟು ಎರಡು ಗ್ಲಾಸುಗಳಿಗೆ ಬಿಯರ್‌ ಸುರಿದು ತಂದು ‘ಕಮಾನ್.. ಕಮಾನ್.. ಚಿಯರ್‌ ಅಪ್’ ಎಂದು ಒಂದನ್ನು ವಿನೋದನ ಕೈಗಿಟ್ಟನು. ಅಷ್ಟೊತ್ತಿಗೆ ನಾಲ್ಕಾರು ಗ್ಲಾಸು ಬಿಯರ್ ಏರಿಸಿದ್ದ, ಗಾಳಿಯ ಜೊತೆಗೆ ಹಗುರವಾಗಿ ತೇಲುವ ಸ್ಪರ್ಧೆಗೆ ಇಳಿದವರಂತೆ ಕಂಡ ವಿನೋದನ ಇಬ್ಬರು ಸಹೋದ್ಯೋಗಿಗಳು ನೊರೆಯುಕ್ಕುವ ಗ್ಲಾಸುಗಳ ಸಮೇತ ಇವರತ್ತ ಬಂದರು. ಅವರ ಬೆರಗು, ಗುನುಗು, ನಗು ಮುಂದಿನ ಗಳಿಗೆಗಳನ್ನು ಆವರಿಸಿದವು. ವಿನೋದ, ಜಗದೀಶ ಇಬ್ಬರೂ ತಾವಿದ್ದ ಹಿಂದಿನ ಇರುವಿಕೆಯಿಂದ ಕದಲಲೇಬೇಕಾದಂಥ ಸ್ಥಿತಿ ಅಲ್ಲಿ ಸೃಷ್ಟಿಯಾಯ್ತು.

ಅಲ್ಲಿ ಸೇರಿದ್ದ ಹೆಚ್ಚಿನವರು ಟೆಕಿಗಳೇ ಆಗಿದ್ದರು. ಗಂಡ ಹೆಂಡತಿ ಅದೇ ಜಾಡಿನಲ್ಲಿ ಇಪ್ಪತ್ತೈದು ವರ್ಷ ದುಡಿದವರಾದ್ದರಿಂದ ಅದು ಸಹಜವೂ ಆಗಿತ್ತು. ಸಾಫ್ಟ್‌ವೇರ್ ಕಂಪನಿಗಳಲ್ಲಿನ ರಾಟೆ-ಲಾಳಿಯಂಥ ಒತ್ತಡದ ಚಲನೆ ಮತ್ತು ಏಕತಾನದ ವರ್ತುಲದಿಂದ ಹೊರಬಂದು ಹಗುರಾದಂಥ ಭಾವ ಹಲವರ ಮುಖದಲ್ಲಿ ಮೂಡಿತ್ತು. ಅಲ್ಲಿ ಹಾಡುವವರು ಹರಿಸುತ್ತಿದ್ದ ಕನ್ನಡ ಭಾವಗೀತೆ-ಜನಪದ ಗೀತೆಗಳು ಅನೇಕರನ್ನು ತಮ್ಮ ಊರು, ಬಾಲ್ಯ, ಸ್ಕೂಲು.. ಹೀಗೆ ಎಲ್ಲೆಲ್ಲಿಗೋ ಸೆಳೆದು ಹೊತ್ತೊಯ್ದಿದ್ದವು. ಬೆಂಗಳೂರಿನ ಹೊರವಲಯದ ರೆಸಾರ್ಟ್ ಆದ್ದರಿಂದ ಸಂಜೆಯ ನಿಶ್ಯಬ್ದವು ಗಾಯನದ ನಡುವಿನ ಗ್ಯಾಪನ್ನು ಇನ್ನಷ್ಟು ಗಾಢಗೊಳಿಸಿತ್ತು. ಟೆಕಿ ಸಂಕುಲದ ಬದುಕಿನ ಪಾತಳಿಯೇ ಇಂಗ್ಲಿಷ್ ಭಾಷೆಯ ರಿಂಗ್‌ನಲ್ಲಿ ಸಿಕ್ಕಿಕೊಂಡಿದ್ದ ಕಾರಣಕ್ಕೋ ಏನೋ.. ಹಾಡುಗಳಲ್ಲಿನ ಕನ್ನಡದ ಶಬ್ದಗಳು ರಾಗವಾಗಿ ಕಿವಿಗೆ ತಲುಪಿದಂತೆಲ್ಲಾ ಕೆಲವರು ತಮ್ಮೊಳಗಡಗಿದ್ದ ನೆಲಮೂಲದ ಸಂವೇದನೆಗಳು ಮೈಮನಸ್ಸಿನ ಮೇಲೆ ನುಗ್ಗಿಬಂದಂತೆ ಎಂಥದ್ದೋ ಅನುಭೂತಿ ಮತ್ತು ಉದ್ಗಾರಗಳಿಗೆ ನೆಲೆಯಾಗಿದ್ದರು.

ಇವೆಲ್ಲ ನಡೆಯುವಾಗ ನೊಂದವನು ಮಿಡಿಯುವ ಮನಕ್ಕೆ ಪದೇ ಪದೇ ಹಂಬಲಿಸುವಂತೆ ವಿನೋದನು, ತನ್ನ ಕಣ್ಣೋಟದಲ್ಲಿ ಜಗದೀಶನನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದನು. ಇದನ್ನು ಗ್ರಹಿಸಿದ ಜಗದೀಶ ಸಡಗರ-ಸಂಗೀತದಲ್ಲಿ ತೇಲುವವನಂತೆ ಎತ್ತೆತ್ತಲೋ ತಿರುಗಿ ತಲೆ ಕುಣಿಸುತ್ತಾ ಕೈತಾಳವನ್ನು ನಟಿಸುತ್ತಿದ್ದನು. ಎಲ್ಲವೂ ಸಾಂಗೋಪಾಂಗವಾಗಿಯೇ ಇತ್ತು. ವಿನೋದನ ಹೆಂಡತಿ ಶುಭಲಕ್ಷ್ಮಿಯ ಅಕ್ಕರೆ ಮತ್ತು ಅಚ್ಚುಕಟ್ಟುತನಕ್ಕೆ ಇಡೀ ಕಾರ್ಯಕ್ರಮ ಸಾಕ್ಷಿಯಾಗಿತ್ತು. ಜಗತ್ತಿನಲ್ಲಿ ತನ್ನವರೆಂಬ ಯಾರೂ ಇಲ್ಲದ ದಿನಗಳಲ್ಲಿ ಬದುಕಿನ ದಿಕ್ಕಾಗಿ ವಿನೋದನನ್ನು ತುಂಬಿಕೊಂಡವಳು ಈಕೆ; ಸಾಗರದ ಕಡೆಯ, ನಯವಿನಯಕ್ಕೆ ಹೆಸರಾಗಿದ್ದ ಕುಟುಂಬದವಳು. ಈಕೆಯೂ, ಹೆಗೆಲೆತ್ತರಕ್ಕೆ ಬೆಳೆದ ಇಬ್ಬರು ಮಕ್ಕಳೂ ಕಾರ್ಯಕ್ರಮ ಮುಗಿದಾಗ ಖುಷಿ ಮತ್ತು ಸಾರ್ಥಕ ಭಾವದಲ್ಲಿ ಮಿಂದಿದ್ದರು.

ಎಲ್ಲವೂ ಮುಗಿದು ಎಲ್ಲರೂ ಹಾರುತ್ತಾ, ತೇಲುತ್ತಾ ಮಾರನೆ ರಜೆ ಸಂಡೆಯ ಸವಿನಿದ್ದೆ ನೆನಪಲ್ಲಿ ಮನೆ ಸೇರುವ ಹೊತ್ತಿಗೆ ಬೆಳಗಿನ ಜಾವ ಮೂರು ಗಂಟೆಯೇ ಆಗಿತ್ತು. ಮನೆಗೆ ಬಂದ ವಿನೋದನು ಸೋಫಾಗೆ ಬೆನ್ನು ಕೊಟ್ಟು ಹಾಗೇ ಕುಳಿತಿದ್ದನು. ನಿದ್ದೆ ಕಣ್ಣ ರೆಪ್ಪೆಗಳ ಮೇಲೆ ಕುಣಿಯುತ್ತಿದ್ದುದರಿಂದ ಮಕ್ಕಳಿಬ್ಬರೂ ತಮ್ಮ ರೂಮುಗಳನ್ನು ಸೇರಿಕೊಂಡರು. ಗಂಡನ ಮೊದಲ ಬರ್ತ್‌ ಡೇ ಮಾಡಲು ಕಳೆದ ನಾಲ್ಕಾರು ದಿನಗಳಿಂದ ಶ್ರಮಿಸಿದ್ದ ಶುಭಲಕ್ಷ್ಮಿಗೆ ವ್ಯಯಿಸಿದ್ದ ಮುತುವರ್ಜಿ, ಸಮಯ, ಶಕ್ತಿಗಳೂ; ಗಳಿಸಿದ್ದ ಆಯಾಸ, ಆತಂಕ, ಸಾರ್ಥಕತೆಗಳೂ ಒಟ್ಟಿಗೇ ದೇಹ- ಮನಸ್ಸುಗಳೊಳಗೆ ಮುಖಾಮುಖಿಯಾಗಿದ್ದವು. ಜರ್ಜರಿತಳಾಗಿ ವಾಶ್ ರೂಮಿಗೆ ಎಡತಾಕಿ ಮಲಗುವ ಕೋಣೆ ಸೇರಿಕೊಂಡಳು. ವಿನೋದ ಕುಳಿತಿದ್ದ ಸೋಫಾದ ಕಡೆಗೆ ನಾಲ್ಕಾರು ನಿಮಿಷಗಳಲ್ಲೇ ರೂಮುಗಳಿಂದ ಗೊರಕೆಯ ಸದ್ದು ತಲುಪಿತ್ತು.

ಕುಳಿತಿದ್ದವನು ಹಾಗೆಯೇ ಮನೆಯ ತುಂಬೆಲ್ಲಾ ಒಮ್ಮೆ ಕಣ್ಣಾಡಿಸಿದನು. ಹನ್ನೆರಡು ವರ್ಷಗಳ ಹಿಂದೆ ಕೊಂಡಂಥ ಐಷಾರಾಮಿ ಫ್ಲಾಟ್. ಈಗಾಗಲೇ ಅದರ ಲೋನ್ ಕೂಡ ಮುಗಿದಿದೆ. ಮೊನಾಲಿಸಾಳಿಂದ ಚಾಪ್ಲಿನ್ ತನಕ, ಸಣ್ಣ ವೇಸ್‌ನಿಂದ ಕಪಾಟುಗಳ ತನಕ… ಶುಭಲಕ್ಷ್ಮಿ ಖುದ್ದು ಕಾಳಜಿಯಿಂದ ಏರ್ಪಡಿಸಿರುವ, ಮನವನ್ನು ಆವರಿಸಿ ಹಾರೈಸುವಂತಿರುವ ವಾತಾವರಣ; ಚೆನ್ನಾಗಿ ಬೆಳೆಯುತ್ತಾ ಓದಿನಲ್ಲೂ ಮುಂದಿರುವ ಮಕ್ಕಳು. ಆಗಿರುವುದೆಲ್ಲವೂ `ಹಾಯ್’ ಎನ್ನಿಸುವಂತೆಯೇ ಇದೆ. `ಆದರೆ.. ಆದರೆ.. ಈ ಬರ್ತ್‌ ಡೇ ನನ್ನದೇನಾ..?’ ವಿನೋದನ ಮನಸ್ಸು ನೋಯುವ ಹಲ್ಲಿಗೆ ನಾಲಿಗೆ ಪದೇ ಪದೇ ಹೊರಳುವಂತೆ ಅಲ್ಲಿಗೇ ತಲುಪಿತು.

ಮಲಗುವ ಕೋಣೆಯ ಬಾಗಿಲನ್ನು ಮೆಲ್ಲನೆ ಮುಂದಕ್ಕೆ ಎಳೆದು ಅಷ್ಟೇ ಎಚ್ಚರದಿಂದ ಸಿಟ್ಔಟ್‌ನ ಬಾಗಿಲನ್ನು ತೆರೆದು ಹೊರಕ್ಕೆ ಬಂದನು. ನಾಲ್ಕನೇ ಮಹಡಿಯ ವಿಶಾಲವಾದ ಸಿಟ್ಔಟ್‌ನಲ್ಲಿ ಜುಲೈ ತಿಂಗಳ ಆಷಾಢದ ಗಾಳಿ ತಣ್ಣಗೆ ತೀಡುತ್ತಿತ್ತು. ಸಣ್ಣಗೆ ಮಳೆ ಹನಿಗಳೂ ಉದುರಲಾರಂಭಿಸಿದ್ದವು. ಗಾಳಿ-ಮಳೆಯಿಂದ ದೇಹಕ್ಕೆ ತಂಪೆನಿಸಿದರೂ ವಿನೋದನ ಮನಸ್ಸು ಹಳೆಯ ಕೆಂಡಗಳನ್ನು ತುಂಬಿಕೊಂಡ ಬಾಣಲೆಯಂತಾಗಿತ್ತು. ಕಣ್ಣೆದುರಿನ ವಿಶಾಲವಾದ ಬೆಂಗಳೂರು, ನೋಟಕ್ಕೆ ಎಟುಕುವಷ್ಟು ದೂರಕ್ಕೂ ಕಾಣುವ ಕೆಂಪು ಬೆಳಕು, ಬೆಳಕನ್ನು ಭೇದಿಸಿ ಉದುರುತ್ತಿದ್ದ ಹನಿಗಳು.. ನೆನಪುಗಳ ಸರಣಿ ಏರ್ಪಟ್ಟು ಹಿಂಡಲು ಶುರುವಿಟ್ಟಿತು.

ಹಚ್ಚಿದ ಸಿಗರೇಟ್‌ನ ಹೊಗೆ ಸುರುಳಿಗಳ ನಡುವೆ ಬಿಚ್ಚಿಕೊಂಡದ್ದು ಅವನ ಗತದ ಮೂವತ್ತೈದು ವರ್ಷಗಳು. ಇವನೂ ಕೂಡ ಕರ್ನಾಟಕದ ಪರ ಊರುಗಳಿಂದ ಬಂದ ಇತರರಂತೆ ಬೆಂಗಳೂರನ್ನು ಮನಸಾರೆ ಬೈದುಕೊಂಡವನೇ ಆಗಿದ್ದನು. ಬೆಳಗಾವಿಯ ಹಾಸ್ಟೆಲ್‌ನಲ್ಲಿ ಇದ್ದಾಗ ಬೀದಿ ನಾಟಕವೊಂದರಲ್ಲಿ ಕೇಳಿಸಿಕೊಂಡಿದ್ದ ‘ಸ್ಯಾರೆ ಗಂಜಿಗಾಗಿ ಸೇರು ಬೆವರು ಸುರಿಸುತ ಊರೂರು ತಿರುಗೋರು ನಾವಣ್ಣ.. ಬೆಂದೂರು- ಬೇಯದೂರು ಸಾಕಾಗಿ ಬೆಂಗಳೂರಿಗೆ ಬದುಕನು ಹುಡುಕುತ ಬಂದೆವಣ್ಣ’ ಎಂಬ ಹಾಡನ್ನು ಮನಸಾರೆ ಹಾಡಿಕೊಂಡು ಅತ್ತವನು ಕೂಡ ಆಗಿದ್ದನು.

ವಿನೋದ ತನ್ನ ಹದಿನೈದನೇ ವಯಸ್ಸಿನಲ್ಲಿ ಅಪ್ಪ ಅಮ್ಮನನ್ನು ಹಿಂಬಾಲಿಸಿ ಅಥಣಿ ತಾಲ್ಲೂಕಿನ ಹಳ್ಳಿಯೊಂದರಿಂದ ನುಸುಳಿಕೊಂಡು ಬೆಂಗಳೂರಿಗೆ ಬಂದು ಲಗ್ಗೆರೆಯ ಸ್ಲಂ ಸೇರಿಕೊಂಡಿದ್ದವನು. ಸುತ್ತೆಂಟು ಹಳ್ಳಿಗಳಿಗೆ ನಾಟಿ ವೈದ್ಯರಾಗಿ ಹೆಸರು ಮಾಡಿ ಅಥಣಿ-ಬೆಳಗಾವಿ ಓಡಾಡುವ ಸುಬುದೇಂದ್ರ ಸ್ವಾಮಿಯವರ ಸಹಾಯಕ, ಸೇವಕ, ಬಾಡಿ ಗಾರ್ಡ್ ಎಲ್ಲವೂ ಆಗಿದ್ದ ಮಾಕುರಪ್ಪನ ಮೊಮ್ಮಗ ಈ ವಿನೋದ. ತಾತ ಇವನಿಗಿಟ್ಟ ಹೆಸರು `ಗಯಾತ’ ಎಂಬುದಾಗಿತ್ತು. ಗಯಾತ ಎಂದರೆ ಗಾಯಗಳನ್ನು ವಾಸಿ ಮಾಡುವವನು ಎಂಬ ಅರ್ಥವನ್ನು ತನಗೆ ತಾನೇ ಕಲ್ಪಿಸಿಕೊಂಡವನಾಗಿದ್ದ ಮಾಕುರಪ್ಪ, ತನ್ನ ಮೊಮ್ಮಗನು ದೊಡ್ಡ ನಾಟಿ ವೈದ್ಯನಾಗಲಿ ಎಂಬ ಆಸೆ ಇಟ್ಟುಕೊಂಡಿದ್ದನಂತೆ. ಸ್ವಾಮಿಗಳು ನಾರು– ಬೇರು, ಸೊಪ್ಪು ಹುಡುಕಲು ಕಾಡಿಗೆ ಹೋದರೆ ಜೊತೆಗೆ ಚೀಲ, ಗುದ್ದಲಿ ಸಮೇತ ಹೋಗಿ ಅಗೆದು ಸಂಗ್ರಹಿಸುವುದು, ವೈದ್ಯ ಮಾಡಲು ಹೋದರೆ ಮದ್ದು ಅರೆಯುವುದು, ಕೈಕಾಲುಗಳಲ್ಲಿ ಆದ ಕುರು ತೆಗೆದು ಮದ್ದು ಹಾಕಲು ಹೋದರೆ ಸಹಾಯಕ್ಕೆ ನಿಲ್ಲುವುದು ಮಾಕುರಪ್ಪನ ಮೂವತ್ತು ವರ್ಷಗಳ ಕಾಯಕವಾಗಿತ್ತಂತೆ.

ಕುರಗಾಯಗಳು ಆದರೆ ಅವನ್ನು ಒಡೆದು ಕೀವು, ಕೆಟ್ಟ ರಕ್ತ ತೆಗೆದು ಸೊಪ್ಪು-ಸುಣ್ಣಗಳನ್ನು ಬೆರೆಸಿ ಹಚ್ಚಿ ಗಾಯ ಒಣಗುವಂತೆ ಮಾಡುವುದು ಸ್ವಾಮಿಯವರ ವೈದ್ಯ ವಿಧಾನಗಳಲ್ಲಿ ಒಂದು. ಆಗೆಲ್ಲಾ ಕೆಳ ಜಾತಿಗಳವರಿಗೆ ಕುರ ಎದ್ದರೆ ಅಲ್ಲಿಗೆ ಉಪ್ಪು ಸವರಿ ಹಸು-ಎತ್ತುಗಳಿಂದ ನೆಕ್ಕಿಸಿ ಅದನ್ನು ಒಡೆಯುವುದು, ದೊಡ್ಡ ಜಾತಿಯವರಿಗೆ ಆದರೆ ತನ್ನ ಸಹಾಯಕನೂ ಬುಡಕಟ್ಟು ಸಮುದಾಯದವನೂ ಆದ ಮಾಕುರಪ್ಪನೇ ಗಾಯದ ಮೇಲೆ ಬಾಯಿಟ್ಟು ಉಸಿರು ಕೊಟ್ಟು ಅದು ಕಿತ್ತು ಬರುವಂತೆ ಜೂರಿ ಮೇಲೆಳೆಯುವುದನ್ನು ಸುಬುದೇಂದ್ರರು ರೂಢಿಸಿದ್ದರಂತೆ. ಹೀಗೆ ಕಿತ್ತ ನಂತರ ಮಾಕುರಪ್ಪನ ಬಾಯಿ ತೊಳೆಸಿ ಕುರುಗೊಂಡವರಿಂದ ನಾಕು ಸೇರು ಜೋಳ ಕೊಡಿಸಿ, ತಮಗೆ ಸಿಕ್ಕ ಹಣದಲ್ಲಿ ಎರಡಾಣೆಯನ್ನೂ ಕೊಡುತ್ತಿದ್ದರಂತೆ. ಇದೇ ಕಾರಣಕ್ಕೆ ಕರಿನಿಂಗ ಎಂಬ ಈತನ ಮೂಲ ಹೆಸರು ಮೂವತ್ತು ವರ್ಷಗಳ ಹಾದಿಯಲ್ಲಿ ಮಾಕುರಪ್ಪ ಎಂದೇ ಬದಲಾಗಿತ್ತಂತೆ.

ಮಾಕುರಪ್ಪನಿಗೆ ಇದೇ ಅನ್ನದ ದಾರಿಯೂ ಬದುಕೂ ಆದ್ದರಿಂದ ಮೊಮ್ಮಗನೂ ನಾಟಿ ವೈದ್ಯನಾಗಲಿ ಎಂದು ಆಸೆಪಟ್ಟಿದ್ದನಂತೆ. ನಾಲ್ಕೈದು ವಯಸ್ಸಿಗೆಲ್ಲಾ ಗಯಾತನನ್ನು ಕರೆದುಕೊಂಡು ಸ್ವಾಮಿಗಳ ಹಿಂದೆ ಸುತ್ತುವುದು, ಇವನಿಂದಲೂ ಬಾಯಿಟ್ಟು ಉಸಿರು ಕೊಡಿಸಿ ಕುರು ಕೀಳಿಸುವುದು, ಅಸಹ್ಯ ಎನ್ನಿಸಿದರೂ ಹುಮ್ಮಸ್ಸು ಮತ್ತು ಹಟದಿಂದ ಮೊಮ್ಮಗ ಕುರು ಕಿತ್ತು ಕೀವು ರಕ್ತ ತುಂಬಿದ ಬಾಯಿ ತೊಳೆಯುವುದನ್ನು ನೋಡಿ ಹರ್ಷಿಸುವುದು ಮಾಕುರಪ್ಪನ ಹೆಮ್ಮೆಗಳಲ್ಲಿ ಪ್ರಥಮದ್ದಾಗಿತ್ತಂತೆ.

ಸ್ಕೂಲ್ ಮೇಷ್ಟ್ರು ಮಹಾಲಿಂಗಪ್ಪನವರ ಲಿಟರಸಿ ಸರ್ವೇ ಮತ್ತು ಒತ್ತಾಯಕ್ಕೆ ಶಾಲೆಗೆ ಬಿದ್ದ ಗಯಾತ ನಾಲ್ಕು ಪಾಸು ಮಾಡಿ ಅದೇ ಮೇಷ್ಟ್ರ ಒತ್ತಾಯಕ್ಕೆ ಬೆಳಗಾವಿಯ ಫ್ರೀ ಹಾಸ್ಟೆಲ್ ತುಳಿದು ಐದಕ್ಕೆ ಸೇರಿದನಂತೆ. ಇದಾದ ಎರಡೇ ವರ್ಷಕ್ಕೆ ವೈದ್ಯರ ಸಹಾಯಕ ಮಾಕುರಪ್ಪ ಹಾವು ಕಡಿದು ತೀರಿಕೊಂಡನಂತೆ! ಇಂಥಾ ದಿನಗಳಲ್ಲಿ ಮಾಕುರಪ್ಪನ ಮಗ ಲಕ್ಕಣ್ಣನು ಘಟಪ್ರಭಾ ದಂಡೆಯಲ್ಲಿ ಕಾಲುವೆಗಳನ್ನು ತೋಡುವ ಕಾಂಟ್ರಾಕ್ಟರ್ ಬಳಿ ದಿನಗೂಲಿಗೆ ಇದ್ದನಂತೆ. ಇದೆಲ್ಲಾ ಆಗಿ ಒಂದು ವರ್ಷ ಕಳೆದು ಗಯಾತ ಏಳು ಪಾಸು ಮಾಡಿ ಎಂಟಕ್ಕೆ ಸೇರುವ ಬೇಸಿಗೆಯ ದಿನಗಳಲ್ಲಿ ಸಹಕೂಲಿಕಾರನೊಬ್ಬ ಬಿತ್ತಿದ ಬೆಂಗಳೂರು ದುಡಿಮೆಯ ಕನಸಿಗೆ ಮನಸೋತು ಲಗ್ಗೆರೆಯ ಸ್ಲಮ್ಮು ಸೇರಿದ ಕುಟುಂಬವಿದು. ಹಿಂದೆ ಪ್ರಯಾಸದಿಂದಲೇ ಗಯಾತನನ್ನು ಶಾಲೆಗೆ ತುರುಕಿದ್ದ ಮೇಷ್ಟ್ರು ಮಹಾಲಿಂಗಪ್ಪನವರ ಸಹಕಾರ ಬಲದಿಂದಲೇ ಬೆಂಗಳೂರಿನಲ್ಲೂ ಶಾಲೆ-ಹಾಸ್ಟೆಲ್ ಹಿಡಿದಿದ್ದು.

ಅನೇಕ ವರ್ಷಗಳಿಂದ ಬಾಲ್ಯದಲ್ಲಿ ಬಾಯ್ತುಂಬಿದ್ದ ಕೀವು ರಕ್ತದ ಅಸಹ್ಯ ನೆನಪಿನಿಂದಾಗಿ ಗಯಾತ ಉಮ್ಮಳಿಕೆ ರೋಗಕ್ಕೆ ತುತ್ತಾಗಿದ್ದ. ಮರೆತು ಉಂಡರೆ ಊಟ; ಉಣ್ಣುವಾಗ ಕುರಕ್ಕೆ ಬಾಯಿ ಕೊಟ್ಟದ್ದು ನೆನಪಾದರೆ ಎಲ್ಲವೂ ಕ್ಷಣಮಾತ್ರದಲ್ಲಿ ವಾಂತಿ! ಇದರ ನಡುವೆಯೇ ಹಾಸ್ಟೆಲ್, ಶಾಲೆ; ಶನಿವಾರ-ಭಾನುವಾರ ಅಪ್ಪ ಅಮ್ಮನೊಂದಿಗೆ ಲಗ್ಗೆರೆಯ ಗುಡಿಸಲು ವಾಸ. ಇದೇ ನಡಿಗೆಯಲ್ಲಿ ಇವನು ಐದು ವರ್ಷ ಪೂರೈಸಿ ಪಿಯುಸಿಯಲ್ಲಿ ವಿಜ್ಞಾನವನ್ನು ಉತ್ತಮ ಅಂಕಗಳೊಂದಿಗೆ ತಟಾಯಿಸಿದನು. ಗೆಳೆಯರ-ಮೇಷ್ಟ್ರುಗಳ ಸಲಹೆ, ಸಹಕಾರಗಳಿಂದ ಸರ್ಕಾರಿ ಕೋಟಾದಲ್ಲಿ ಇಂಜಿನಿಯರಿಂಗ್ ಸೀಟನ್ನೂ ಹಿಡಿದಾಗಿತ್ತು.

‘ಇನ್ನೇನು? ಎಲ್ಲವೂ ಸರಿಯಾಯ್ತು. ಇಂಜಿನಿಯರಿಂಗ್ ಮುಗಿಸಿ ಅಪ್ಪ ಅಮ್ಮನನ್ನು ನೆಮ್ಮದಿಯ ನೆಲೆಗೆ ಸಾಗಿಸಬೇಕು..’ ಇದೇ ಕನಸಿನಲ್ಲಿ ಎರಡನೇ ವರ್ಷ ಮುಗಿಸಿದವನಿಗೆ ನಿಂತ ನೆಲವೇ ಕುಸಿದಂತಾಗಿದ್ದು ಒಂದು ಇಳಿಸಂಜೆ ಹಾಸ್ಟೆಲ್ ಬಳಿಗೆ ಪಕ್ಕದ ಗುಡಿಸಲಿನ ಸೋಮಶೇಖರ ತಂದ ಸುದ್ದಿಯಿಂದ. `ಮಲ್ಲೇಶ್ವರದಲ್ಲಿ ತಲೆ ಎತ್ತಲಿದ್ದ ಬಹುಮಹಡಿ ಕಟ್ಟಡಕ್ಕೆ ಆಳವಾದ ಅಡಿಪಾಯ ಅಗೆಯುತ್ತಾ ಒಟ್ಟಿಗೆ ಕೆಲಸ ಮಾಡುತ್ತಿದ್ದ ಏಳು ಜನರು ದಡ ಕುಸಿದು ನೆಲಸಮಾಧಿಯಾಗಿದ್ದಾರೆ. ಅವರಲ್ಲಿ ನಿನ್ನ ಅಪ್ಪ ಅಮ್ಮ ಕೂಡ ಇಬ್ಬರು..’ ಎಂಬುದಾಗಿತ್ತು ಆ ಸುದ್ದಿ.

ಅಸಹ್ಯ ನೆನಪುಗಳ ಉಮ್ಮಳಿಕೆ ರೋಗದ ಗಯಾತ ಇನ್ನೊಂದು ಕಡೆ ಪದಗಳಿಗೆ ನಿಲುಕದ ದುಃಖದ ಕಡಲಿಗೆ ಮುಗ್ಗರಿಸಿದ್ದ. ಅವನ ಮುಂದಿನ ದಿನಗಳು `ಆ ನೆನಪು- ಈ ದುಃಖ’ವನ್ನು ದೇಹ-ಮನಸ್ಸಿನ ಕಣಕಣಕ್ಕೂ ತುಂಬಿದವು. ಅವನತನದ ಸರ್ವಸ್ವವೂ ಅಲ್ಲಾಡಿಹೋಗಿ ರೋಗ ಹಿಡಿದವನಂತಾದ.

ಆಗ ಇವನ ಜೀವ, ಜೀವನದ ಉಳಿವಿಗೆ ಮದ್ದಿನಂತೆ ಜೊತೆಯಾದವಳು ಸಹಪಾಠಿ ಶುಭಲಕ್ಷ್ಮಿ. ಅವಳ ಮಮತೆಯ ನೆರಳನ್ನು ಹೊಕ್ಕ ಇವನ ನಂಬಿಕೆ ಕೈ ಹಿಡಿಯಿತು, ನಿಜ. ಇಷ್ಟಾದರೂ `ನೆನಪು-ದುಃಖ’ ಎರಡೂ ಇವನ ಬದುಕಿನ ಎಲ್ಲಾ ವಿಶೇಷತೆಗಳನ್ನು ಕೊಂದೇಬಿಟ್ಟಿದ್ದವು. `ನಿನ್ನ ಗತದ ಯಾವ ಕುರುಹುಗಳೂ ಇನ್ನಿರುವುದು ಬೇಡಾ’ ಎಂದೇ ಆಕೆ ಕೋರ್ಟ್, ಲಾಯರ್ ಎಂದೆಲ್ಲಾ ಓಡಾಡಿ ಗಯಾತನನ್ನು ವಿನೋದನನ್ನಾಗಿ ಮಾಡಿದ್ದಳು. ಹೆಸರು ಬದಲಿಸಿದ ಮಾತ್ರಕ್ಕೆ ಇವನ ಜೀವಕಣಗಳ ರಸ ಪ್ರಶ್ನೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಅವಳಿಗೂ ಸಾಧ್ಯವಾಗಿರಲಿಲ್ಲ. ದೇಹ-ಮನಸ್ಸಿನ ರಸಾಯನಶಾಸ್ತ್ರದ ದಿಕ್ಕನ್ನು ಬದಲಿಸಿಕೊಳ್ಳಲಾಗದ ಸಂಕಟ ಅವನಿಗೂ; ಅದನ್ನು ಇಲ್ಲವಾಗಿಸಲು ಆಗಲಿಲ್ಲ ಎಂಬ ಕೊರಗು ಅವಳಿಗೂ ಮನದ ಮೇಲಣ ಕಲೆಗಳಂತೆ ಉಳಿದುಬಿಟ್ಟಿದ್ದವು. ಈಚೀಚೆಗೆ ಮಕ್ಕಳು ಬೆಳೆದಂತೆಲ್ಲಾ ಗಯಾತ ಅಲಿಯಾಸ್ ವಿನೋದ ಹಗುರಾದಂತೆ ಕಂಡರೂ ವಿಶೇಷತೆಗಳು ಏರ್ಪಟ್ಟಾಗ ಖಿನ್ನತೆಯ ಚಿಪ್ಪು ಸೇರುವುದು ನಡೆದೇ ಇತ್ತು.

‘ತನ್ನ ಹುಟ್ಟು ಮತ್ತು ಇರುವಿಕೆಗೆ ಅರ್ಥ ಇರುವುದೇ ಇವನನ್ನು ದೌರ್ಭಾಗ್ಯದ ತುದಿಯಿಂದ ನೆಮ್ಮದಿಯ ಅಂಗಳಕ್ಕೆ ನೆಗೆಸುವುದರಲ್ಲಿ..’ ಎಂದು ನಂಬಿದಂತಿತ್ತು ಆಕೆ. ಇಂಥಾ ಕ್ರಿಯೆಗೆ ಅವನನ್ನು ಒಗ್ಗಿಸಲೆಂದೇ ಬರ್ತ್‌ ಡೇ ನೆಪದಲ್ಲಿ ಸರಳ-ಆಪ್ತ ರೀತಿಯ ಸಮಾರಂಭವನ್ನು ಏರ್ಪಡಿಸಿದ್ದು. ವಿನೋದನ ಗತವನ್ನು ತಿಳಿದಿದ್ದ ಏಕೈಕ ಗೆಳೆಯ ಜಗದೀಶನ ಸಲಹೆ-ಸಹಕಾರವನ್ನು ಹೆಜ್ಜೆಹೆಜ್ಜೆಗೂ ಪಡೆದಿದ್ದಳು. ಪಾರ್ಟಿ ಮುಗಿಸಿ ಬರುವಾಗ ನಿರಾಳ ಮುಖದಲ್ಲಿ ಇದ್ದಂತೆ ಕಂಡ ವಿನೋದನನ್ನು ನೋಡಿ ಹೋಗಿ ನಿದ್ದೆಗೆ ಜಾರಿದ್ದಳು.

ಸಿಟ್ ಔಟ್‌ನಲ್ಲಿ ಕುಳಿತು ಸುಟ್ಟ ಸಿಗರೇಟುಗಳ ಲೆಕ್ಕ ಮೀರುವ ಹೊತ್ತಿಗೆ ವಿನೋದನ ತಲೆ ಗಿರಗಿರನೆ ತಿರುಗುವ ಬುಗುರಿಯಂತಾಗಿತ್ತು. ‘ಎಷ್ಟು ಓಡಿ ಕೈ ಎಟುಕಿಸಿದರೂ ತಬ್ಬಿಕೊಳ್ಳಲು ಸಿಗದೇ ಗಾಳಿಯಲ್ಲಿ ತೇಲುವ ಅಮ್ಮ-ಅಪ್ಪ-ಅಜ್ಜ! ಕೆಳಗೆ ಬಗ್ಗಿ ನೋಡಿದರೆ ಸುತ್ತಾ ಮೊಣಕಾಲು ಮಟ್ಟ ಮಡುಗಟ್ಟಿ ನಿಂತಿರುವ ಯಾರ್ಯಾರದೋ ಕೀವು ರಕ್ತ! ವಿನೋದನ ಬಾಯಿಂದ ಕಟ್ಟೆಯೊಂದು ಒಡೆದುಕೊಂಡಂತೆ ಮೀಟರುಗಟ್ಟಲೇ ದೂರಕ್ಕೆ ವಾಂತಿ ಚಿಮ್ಮಲಾರಂಭಿಸಿತು. ಆತ ಅದೇ ವಾಂತಿಯ ಮಡುವಲ್ಲಿ ಪ್ರಜ್ಞೆ ತಪ್ಪಿ ಬಿದ್ದನು.

ಇಷ್ಟಾಗುವ ಹೊತ್ತಿಗಾಗಲೇ ಬೆಳಕಾಗುವ ಲಕ್ಷಣದಂತೆ ಬೆಂಗಳೂರಿನ ರಾತ್ರಿ ಲೈಟುಗಳ ಕೆಂಪು ಬಿಳಿಯ ಬಣ್ಣಕ್ಕೆ ತಿರುಗಲಾರಂಭಿಸಿತ್ತು. ಮಹಾನಗರದ ಅಳಿದುಳಿದ ಮರಗಳಲ್ಲಿ ಆಶ್ರಯ ಪಡೆದಿದ್ದ ಕಾಗೆ, ಗೊರವಂಕ, ಪಾರಿವಾಳ, ಗಿಣಿಗಳೆಲ್ಲಾ ಬೆಳಕು ಮೂಡುವ ದಿಕ್ಕಿಗೆ ಮುಖ ಮಾಡಿ ಶಬ್ದ ಸಂವಾದಕ್ಕೆ ಮುಂದಾಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.