ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರು ಮೇಲಾದ ಸಸಿಗೆ ನೀರಿನ ಆರೈಕೆ!

Last Updated 25 ಫೆಬ್ರುವರಿ 2020, 8:50 IST
ಅಕ್ಷರ ಗಾತ್ರ

ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ?
ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೇ ಬೆಳಗಬಲ್ಲುದೆ?
ಆ ತರನಂತೆ ಕುಟಿಲನ ಭಕ್ತಿ, ಕಿಸುಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ, ನಿಶ್ಚಯವನರಿಯಬಾರದು
ಗುರುವಾದಡೂ, ಲಿಂಗವಾದಡೂ, ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ
ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟ
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ?
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು
ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ

ಅಂಗಸೋಂಕಿನ ಲಿಂಗತಂದೆ ಎಂಬ ಶರಣನ ವಚನವಿದು.

ಭೋಗಬಂಕೇಶ್ವರಲಿಂಗ ಎಂಬ ಅಂಕಿತದ ಅವನ ಹನ್ನೊಂದು ವಚನಗಳಷ್ಟೇ ದೊರೆತಿರುವುದು. ಅವುಗಳಲ್ಲಿ ತಾರ್ಕಿಕ ಹಾಗೂ ವೈಚಾರಿಕ ಸತ್ಯಗಳು ಪ್ರತಿಪಾದಿತವಾಗಿವೆ. ಪ್ರಸ್ತುತ ವಚನದಲ್ಲಿ ಆತ ಬೆಳಕಿನಂತಹ ಸತ್ಯವೊಂದನ್ನು ಮಾರ್ಮಿಕವಾದ ರೂಪಕಗಳೊಂದಿಗೆ ಓದುಗನಲ್ಲಿ ಇಳಿಸುತ್ತಾನೆ.

ಮರದೊಳಗೆ ಬೆಂಕಿ ಇದ್ದರೂ ಅದು ತನ್ನಷ್ಟಕ್ಕೆ ತಾನೇ ಹೊತ್ತಿ ಉರಿಯುವುದಿಲ್ಲ. ಕೊಂಬೆಗಳು ಪರಸ್ಪರ ಘರ್ಷಿಸಿಕೊಳ್ಳಬೇಕಾಗುತ್ತದೆ. ಕಲ್ಲಿನೊಳಗೆ ಬೆಂಕಿ ಅಥವಾ ಬೆಳಕು ಇದ್ದರೂ ಅದು ತನ್ನಷ್ಟಕ್ಕೆ ಬೆಳಗಲಾರದು. ಕಲ್ಲುಗಳನ್ನು ಒಂದನ್ನೊಂದು ತಿಕ್ಕಬೇಕಾಗುತ್ತದೆ. ಎಂದರೆ ಮನುಷ್ಯನ ಆಳದಲ್ಲಿರುವ ಸುಪ್ತ ಚೇತನವು ಮೇಲ್ನೋಟಕ್ಕೆ ತನ್ನ ನೈಜರೂಪವನ್ನು ತೋರಿಸುವುದಿಲ್ಲ. ಆಳವಾದ ಪರಿಶೀಲನೆ ಅಥವಾ ಮಂಥನದಿಂದ ಮಾತ್ರ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯ. ದಿಟ ಎಂದರೆ ಸತ್ಯ. ಹುಸಿ ಎಂದರೆ ಸುಳ್ಳು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಸುಳ್ಳು-ನಿಜಗಳ ತೀರ್ಮಾನವನ್ನು ಆಳವಾದ ವಿವೇಚನೆಯ ನಂತರವೇ ಮಾಡಬೇಕು. ಕುಟಿಲಬುದ್ಧಿಯವರು ತೋರಿಕೆಯ ಭಕ್ತಿಯನ್ನು ಪ್ರದರ್ಶಿಸುತ್ತ ಇತರರನ್ನು ವಂಚಿಸುವ ಸಂಗತಿ ಥಟ್ಟನೆ ಗೊತ್ತಾಗುವುದಿಲ್ಲ.

ಕಿಸಕುಳ ಅಂದರೆ ಕಿರುಕುಳ. ತೊಂದರೆ ಕೊಡುವವರ ಢಾಂಬಿಕತನದ ವೈರಾಗ್ಯವಾಗಲೀ ಮೇಲ್ನೋಟಕ್ಕೆ ಅರ್ಥವಾಗುವುದಿಲ್ಲ. ಗುರು, ಲಿಂಗ, ಜಂಗಮ ಯಾರನ್ನೇ ಆಗಲಿ, ಸ್ವೀಕರಿಸುವ ಮುನ್ನ ಪರೀಕ್ಷಿಸಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಅಂತಹ ಭಕ್ತಿ ಅಥವಾ ವಿರಕ್ತಿ – ಎರಡೂ ಅರ್ಥಹೀನ. ಅವು ತೂತುಮಡಿಕೆಯಲ್ಲಿ ನೀರು ತುಂಬಿದ ರೀತಿಯಲ್ಲಿ ವ್ಯರ್ಥವಾಗುತ್ತವೆ. ಸೂತ್ರ ತಪ್ಪಿದ ಬೊಂಬೆಯ ಹಾಗೆ ಉದ್ಧೇಶದಿಂದ ದೂರವುಳಿಯುತ್ತವೆ.

ನಿಜನೇತ್ರ ತಪ್ಪಿದ ದೃಷ್ಟ ಎಂದರೆ ನಿಜವಾದ ಕಣ್ಣೋಟ. ಒಳ ಅರಿವಿನಿಂದ ಬೆಳಕಿನತ್ತ ನಡೆಸುವ ಒಳಗಣ್ಣು, ಎಂದರೆ ಸತ್ಯದರ್ಶನ. ಗಿಡವೊಂದು ನೆಲದಿಂದ ನೀರು-ಸತ್ವಗಳನ್ನು ಹೀರಿಕೊಳ್ಳುವುದ ತನ್ನ ಬೇರಿನ ಮೂಲಕ ಅಂತಹ ಬೇರು ಕಿತ್ತು ನೆಲದಿಂದ ಮೇಲೆ ಬಂದು ಬಿದ್ದಾಗ ಇನ್ನು ಆ ಗಿಡದ ಆರೈಕೆ ಅಸಾಧ್ಯವಾಗುತ್ತದೆ. ಜೀವನಪಥದ ಮಾರ್ಗದರ್ಶಿಯೆಂದು ಒಪ್ಪಿಕೊಳ್ಳುವಾತನನ್ನು ಲೋಕ ಒಪ್ಪುವ ಮುನ್ನ ನಮ್ಮ ಆತ್ಮ ಒಪ್ಪಿಕೊಳ್ಳಬೇಕು. ಆಗಲೇ ‘ಆತ್ಮಸಾಥ್’ ಸಿಗಬಹುದು.

ಪ್ರತಿಯೊಬ್ಬ ವ್ಯಕ್ತಿ ತನ್ನ ಎಲ್ಲ ಕೆಲಸಗಳಲ್ಲಿ ತೊಡಗಿಕೊಳ್ಳ ಬೇಕಾದುದು ಕೇವಲ ಕ್ರಿಯಾಂಗಗಳ ಮೂಲಕವಾಗಿಯಲ್ಲ. ಅದರಲ್ಲಿ ನಮ್ಮ ಚೇತನವೂ ಸೇರಬೇಕೆಂದರೆ ಭಾವಶುದ್ಧಿಯು ಪರಮಾವಶ್ಯಕ. ಭಾವಶುದ್ಧಿಯಿಂದ ಮಾತ್ರ ಅನುಭಾವ ದೊರಕಲು ಸಾಧ್ಯ. ಎಲ್ಲ ಸಂಗತಿಗಳನ್ನು ನಮ್ಮ ವಿವೇಕದ ಕಡಗೋಲಿನಿಂದ ಮಥನಿಸಿ ಸಟೆಯ ಹೊಟ್ಟು ತೂರಿ ದಿಟದ ಕಾಳನ್ನು ಪಡೆಯಬೇಕಾದಾಗ ಲೋಕಮಾಯೆಯ ಮುಸುಕಿನಲ್ಲಿ ಮುಚ್ಚಿಕೊಂಡಿರುವ ನಿಜನೇತ್ರವನ್ನು ತೆರೆದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಅದ್ಭುತ ವಿಚಾರವನ್ನು ಅಂಗಸೋಂಕಿನ ಲಿಂಗತಂದೆ ಮಾರ್ಮಿಕವಾಗಿ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT