ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಯ್ಯ ದೇವರಮನಿ ಬರೆದ ಕಥೆ: ಮುತ್ತಿನ ರಾಶಿ

Last Updated 5 ಮಾರ್ಚ್ 2022, 19:30 IST
ಅಕ್ಷರ ಗಾತ್ರ

‘ಜಳಿಗಿ ಎಮ್ಮಿ ಈಯ್ಯಲಾಗೇತಿ, ಇವತ್ತಿಲ್ಲಾ ನಾಳೆ ಈಯ್ಯಬೋದು, ಜೋಳ ಬೇಯಿಸ್ಬೇಕು, ನೆತ್ತಿಗಿ ತಿಕ್ಕಾಕ ಹಳ್ಳೆಂಣಿಲ್ಲ, ಗೀಬು ಉಣ್ಣಾಕ ಬೆಲ್ಲಯಿಲ್ಲ ಹಲಗೇರಿ ಸಂತಿಗೋಗಿ ತರಬಾರದ? ಮಾಡೋ ಕೆಲ್ಸ ಕಂಡೆಬಟ್ಟೆ ಬಿದ್ದಾವು ನೀ ನೋಡಿದ್ರ ಮಸ್ಗಂತ ಕುಂತಿ’ ಎಂದು ಗೌರಕ್ಕ ಗಂಡನನ್ನು ಜಾಡಿಸಿದಳು. ಬಾಯೊಳಗೆ ಪೈಜ್ ಬೀಡಿ ಕಚ್ಚಿಗೊಂಡು ಮಸ್ಗಲ್ಲ ಮ್ಯಾಲ ಕುಂತು ಕುಡ್ಗೋಲು ಮಸೀತಿದ್ದ ಮಾದೇವ ‘ಜೋಳ ಕೊಯ್ಯಾಕ ಕೂಲೇರಿಗೆ ಹೇಳೇನೀ ಅವ್ರು ಬಂದ್ರ ಅವಸರ ಮಾಡ್ತಾರ ತಟುಗು ತಿಕ್ಕಿ ಕೊಡ್ತೀನಿ ತಡಕ’ ಎಂದು ಹೆಬ್ಬೆಳ್ಳಿನಿಂದ ಕುಡ್ಗೋಲು ಮುಸುಡಿ ಸವರಿ ಹರಿತವಾಗಿದ್ದನ್ನು ನಿಕ್ಕಿಮಾಡಿಕೊಂಡ. ಬಾಯಿಯೊಳಗಿನ ಬೀಡಿ ಹೊಗೆ ಕಕ್ಕುತಿತ್ತು. ಮಗಳು ಅಂಗಳ ಕಸ ಗುಡಿಸುತ್ತಿದ್ದಳು. ಸೊಸಿ ಹಾಸಿಗೆಯಲ್ಲಿ ಬಿದ್ದುಕೊಂಡಿತ್ತು. ಮೊಮ್ಮಗ ಹೇತು ಬಂದು ‘ಅಜ್ಜಿ ನೀರು ಹಣಿಸು’ ಅಂತಾ ನಿಂತಿತು. ಅಷ್ಟೋತ್ತಿಗೆ ಹಾಲಪ್ಪ ಕ್ಯಾನ್ ತಗೊಂಡು ಬಂದ ‘ಯಕ್ಕಾ ಬೇಗ ಹಾಲು ಹಿಂಡು ನಿಂದು ಯಾವಾಗ್ಲೂ ತಡ ಹಾಕ್ಕೇತಿ ಹಿಂಗ ಮಾಡಿದ್ರ ಹಾಲು ಹಣಿಸೆನೋದಿಲ್ಲ ನೋಡು’ ಅವಸರ ಮಾಡಿದ. ‘ಎಮ್ಮಿಗೆ ಮುಸುರಿ ಹಿಡ್ಬೇಕು, ಸಗಣಿ ಮಿದುವುಗುಟ್ಟಿ ಕುಳ್ಳು ತಟ್ಟಬೇಕು, ಹೊಲಕ್ಕ ಬುತ್ತಿಕಟ್ಟಬೇಕು, ಹುಡುಗನ್ನ ಮುಕುಳಿಗೆ ನೀರು ಹಣಿಸಬೇಕು. ಹಾಲಪ್ಪ ನೋಡಿದ್ರ ಅವಸರಕ್ಕೆ ಕುಂತಾನ, ಚಿನಾಲಿಗೆ ಇನ್ನೂ ಬೆಳಕರಿದಿಲ್ಲ ಏನರೊಂದು ನ್ಯಾವ ಮಾಡಿಕೆಂದು ಹಾಸಿಗೆ ಬಿಟ್ಟು ಏಳಕ್ಕಿಲ್ಲ’ ಎಂದು ಸೊಸೆಯನ್ನು ಶಪಿಸಿದಳು. ‘ಎಮ್ಮಿ ಮೊಲಿನೋ ಮೂಡುಗಾಳಿಗೆ ಒಳ್ಕಿ ಕಟ್ಟಿಗಿಗ್ಯಾಗೆವು ನಾಕು ಎಮ್ಮಿ ಹಾಲು ಕರೆಯೊತ್ತಿಗೆ ಬೆಳ್ಳುಗಳು ಸೆಟೆದುಹೊಕ್ಕಾವು’ ವಟಗುಟ್ಟುತ್ತ ಗೌರಕ್ಕ ಎಮ್ಮಿ ಬೆನ್ನು ಚಪ್ಪರಿಸಿ ಮೊಲಿಗೆ ನೀರು ಉಗ್ಗಿದಳು.

ಮುಂಜಾನೆಯ ಬಿಸಿಲಿಗೆ ಮನೆ ಮುಂದಿನ ಕಣದಲ್ಲಿಯ ಜೋಳದ ರಾಶಿ ಪಳಗುಟ್ಟುತಿತ್ತು. ಜೋಳದ ರಾಶಿಯ ಪಕ್ಕದಲ್ಲಿದ್ದ ರೊಣ್ಗಲ್ಲು ಹಾಡ್ಗಿ ಈಚು ಬಿಗಿಸಿಕೊಂಡು ಒಕ್ಕಲಿಗೆ ಸಿದ್ದವಾಗಿತ್ತು. ಕಣದ ಪಕ್ಕದ ಮುಡಿಕೆ ಸಾಲಿನಲ್ಲಿ ಕಳ್ಳಿಗಿಡಗಳು ಮೂಡುಗಾಳಿಗೆ ಸೆಡ್ಡುಹೊಡೆಯುವಂತೆ ಹಸಿರು ಮುಕ್ಕಳಿಸುತ್ತಿದ್ದವು. ಮನೆ ಪಕ್ಕದ ವಾರೆಜಪ್ಪರದ ಗೊಂದಲಿಯಲ್ಲಿನ ಬಿಳಿಜೋಳ ಸೊಪ್ಪೆಯನ್ನು ದನಗಳು ಚಳಿಗೆ ನುಗ್ಗು ಹಾಕುತಿದ್ದವು. ಮಾದೇವ ಕುಡ್ಗೋಲು ಮೋತಿ ತಿಕ್ಕೋದು ಮುಗಿಸಿ ಜೆಲ್ಲಿ ಪುಟ್ಟಿ ಜೋಡ್ಸಿಟ್ಟ. ಇವತ್ತು ಕುಮ್ರಿ ಹೊಲ ಕೊಯ್ಯೋದು ಮುಗದ್ರೆ ನಾಳೆಯಿಂದ ಹುಂಬಳಿ ಹೊಲಕ್ಕೆ ಕೈ ಹಚ್ಚಬೋದು, ಅದು ಒಂದೆರಡು ದಿನದಾಗ ಮುಗಿಯೋ ಕೆಲಸಲ್ಲ ಎಂದು ಗುಣಾಕಾರ ಹಾಕಿದ. ಅಷ್ಟೋತ್ತಿಗೆ ಕೂಲಿಯವರನ್ನು ಕರೆಯಲು ಹೋಗಿದ್ದ ಮಗ ಸಿದ್ಧಬಸವ ಬಂದ. ಅದು ಇದು ಮಾತಾಗುತ್ತಲೇ ಅಳುಗಳು ಜೆಲ್ಲಿ ಪುಟ್ಟಿ ತಗೊಂಡು ಹೊಲದ ಕಡೆ ಹೆಜ್ಜೆ ತುಳಿದರು.

ಗಳೇಸಾಮಾನುಗಳ ಮ್ಯಾಲ ಕುಂತು ಗೌಡ್ಕಿ ಪಾರ್ಟು ಮಾಡ್ತಿದ್ದ ಮೊಮ್ಮಗ ಗೋಣಿಬಸವನಿಗೆ ‘ಲೇ... ಹೊಟ್ಟೆಗ್ಯಾಡಿ ಐನಾತಿ ಹೆಂಡ್ರ ಗಂಡ ನಿಟ್ಟುಬಿದ್ದು ನಿಗಿರೇಕ್ಕೆಂದು ಹೋಗೀ... ಬಿಟ್ಟು ಇಳಿತಿಯ ಕಡ್ಡಿಬರಗಿ ತಕ್ಕಂಬೇಕಾ’ ಎಂದು ಗೌರಕ್ಕ ದುರುಗುಟ್ಟಿದಳು. ಅಜ್ಜಿ ಬೈದಿದ್ದಕ್ಕೆ ಮುಖ ತಿಕ್ಕಿಸಿಗೆಂದ ಗೋಣಿ ತಣುಕ್ಕನೆ ನೆಗೆದ. ನೆಗೆದು ಬಗ್ಗಿ ನೋಡಿದ ‘ಅಯ್ಯೋ ಅಜ್ಜಿ ಗಳೇ ಸಂಧಿಲಿ ಕಾಮಿ ಯಾವಾಗ ಮರಿಯಾಕೇತಿ ಅಂಡಬಂಡ ಕಾಮಿಪಿಳ್ಳಿ ಕಣ್ಣು ಕಣ್ಣು ಬಿಡ್ತಾವು ನೋಡು ಬಾ...’ ಎಂದು ಕರೆದದ್ದಕ್ಕೆ ‘ಥತ್ತೇರಿ ಇದ್ಕ ಹಡೆಯಾಕ ಬ್ಯಾಸರಿಲ್ಲ. ಇನ್ಮೇಲೆ ಮನಿ ತುಂಬಾ ಪಿಳ್ಳೆಗಳು... ಮಿಯೋ ಮಿಯೋ ಅಂತ ಸಿಕ್ಕದ್ಕೆಲ್ಲಾ ಬಾಯಿ ಹಾಕ್ತವೆ’ ಹಾಲು ಮೊಸರು ಜೋಪಾನಕ್ಕೆ ಸಂದೂಕ ನೋಡಿದಳು. ಸಂದೂಕದ ಬಾಗಿಲು ಮುರಿದಿತ್ತು. ನೆಲುವು ನೋಡಿದಳು ಕಿತ್ತು ನೇತಾಡುತಿತ್ತು.
***
ಬಾಜು ಮನಿ ಸರ್ವಕ್ಕ ‘ಗೌರಕ್ಕ ಮಜ್ಜಿಗಿ ಕಡಿದಿಲ್ಲೆನವ್ವಾ’ ಎನ್ನುತ್ತಾ ಚರಿಗಿ ತಗೊಂಡು ಬಂದಳು ‘ಅಯ್ಯೋ ಮಾರೈತಿ ಇನ್ನೂ ಕಡದಿಲ್ಲ ಬಾ... ಕಡ್ಗೋಲು ಕಟ್ಟೇನಿ ನಾಕು ಜೂರಿ ಬರ್ ಬರ್ ಎಳದು ಬಿಡವ್ವ, ಬೇಕಾದ್ರ ನಾ ಹಾರಿಬಿಟ್ಟು ತೆಗಿತೀನಿ. ಬಿಸಿಲೇರತೈತಿ ಇಲ್ಲಾಂದ್ರೆ ಬೆಣ್ಣಿ ಕರಗಿ ಹಂಬಲಿ ಹಾಕ್ಕೇತಿ’ ಎಂದು ಕೆಲಸ ಹಚ್ಚಿದಳು. ‘ನಿನ್ನ ಬಾಳೇವು ನೋಡಕಾಗಲ್ಲ ಬಿಡು. ಮುಂಜ್ಯಾನಿಂದ ಒಂದೇ ಸಮನೆ ಮಾಡಕತ್ತಿ. ನಿನ್ನ ಮಗಳು ಇಮ್ಲಿ ಮೈ ನೆರತು ನಾಕು ವರ್ಷಾತು ಅದ್ಕ ತಟುಗಾದ್ರು ಅಡುಗೆ ಕೆಲ್ಸ ಕಲ್ಸಬಾರದ. ನಾಳೆ ಗಂಡನ ಮನ್ಯಾಗ ಹ್ಯಾಂಗ ಮಾಡ್ಕೆಂದು ತಿನ್ತಾವು ಅಂತೀನಿ’ ಅಂತಾ ಸರ್ವಕ್ಕ ಕಡ್ಗೋಲಿಗೆ ಕೈ ಹಚ್ಚಿದಳು. ‘ಏನು ಮಾಡೋಣ ಸರ್ವಕ್ಕ ನನ್ನ ಸೊಸೆನೋ ಮೋಜುಗಾತಿ ಫೇರ್ ಅಂಡ್ ಲವ್ಲಿ, ಪಾಂಡ್ಸ್ ಮುಖಕ್ಕೆ ಮೈಗೆ ಮೆತ್ತಿಗೆಂದು ಸೊಗಸು ಮಾಡ್ತಾಳ ಚಿನಾಲಿ. ಘಮಗುಟ್ಟು ಎಣ್ಣಿ ತಂದ್ಕೊಡು ತೇಲಿ ನೆರಕಾನಕೆ ಶಾಂಪೂ ತಂದ್ಕೊಡು ಅಂತಾ ವಾರೆ ತೆಗೀತಾಳ. ಇದು ಎಲ್ಲದಕ್ಕೂ ಬಸವಣ್ಣಂಗೆ ಗೋಣು ಹಾಕ್ತತೇತಿ. ನಂಗೆ ಕಟ್ಟಿಗೇನಕ ಲಂಗ ಇಲ್ಲ, ಸುತ್ತಿಗೇನಕ ಅಪ್ಪಂತ ಸೀರೆಯಿಲ್ಲ. ಹರುಕ ಬರಕ ಸುತ್ತಿಗೆಂದು ಊರುಕೇರಿ ಮಾಡಬೇಕು. ಇದ್ನೇಲ್ಲಾ ಕೇಳಿದ್ರೆ ಎಲ್ಲಿಗೆ ಹೊಂಟಿ ಮನ್ಯಾಗ ಬಿದ್ದಿರಕ್ಕಾಗಲ್ಲ. ತೆಲೆ ಕೂದ್ಲು ನೇರತ್ರು ಊರು ಮಾಡೋದು ಬಿಟ್ಟಿಲ್ಲ, ಬಣ್ಣ ತಂದು ಕೊಡಲೇನು ಹಚ್ಚಿಗೆಂದು ತಿರುಗುವಂತಿ ಅಂತಾನ..! ಹಡದವ್ವಗ ಹಿಂಗ ಹೇಳಬೋದಾ ನೀನಾ ಹೇಳು’ ಎಂದು ಕಣ್ಣೀರು ತೆಗೆದಳು. ಮಜ್ಜಿಗಿಯಲ್ಲಿನ ಬೆಣ್ಣೆಯಂತೆ ಗೌರಕ್ಕನ ದುಃಖ ಉಮ್ಮಳಿಸಿತು.

ಗೌರಕ್ಕನ ಸೊಸಿ ಮಾಟ ನೋಡಿ ಊರಮಂದಿ ಪಕ್ಕಾಗಿದ್ದರು. ಎತ್ತರ ಇಮ್ಮಡಿ ಚಪ್ಪಲಿ, ಪೂರಾ ಬೆನ್ನು ಕಾಣೋ ಜಂಪರು, ಟಾಪು ಲೆಗ್ಗಿನ್ಸು, ಅವರಪ್ಪ ಕೊಡಿಸಿದ ಸ್ಮಾರ್ಟ್ ಫೋನು ನೋಡಿ ಜನ ‘ಇಕಿ ದುಡಿಯೋಕೆ ಬಂದಿಲ್ಲ ಬುಡು ಚೈನಿಮಾಡಿ ಗೌರಕ್ಕನ ಮನಿ ಮಂತ್ಯಾನ ಮಕ್ಕಾಡೆ ಮಂಗಸ್ತಾಳ. ಆ ಸಿದ್ಧಬಸವನೋ ಹುಚ್ಚುಮಳ್ಳ ಹೆಣ್ತಿ ತೆಲಿಮ್ಯಾಲ ಕುರಿಸ್ಕೆಂದು ಜಾತ್ರಿ ಮಾಡ್ತಾನ. ಹೊಲಮನಿ ದುಡಕಂಡು ತಿನ್ನವಾಕ ಈ ಶೋಕಿಯಲ್ಲ ಯಾಕ? ಅಂತೀನಿ. ಅವರವ್ವ ಗೌರಕ್ಕ ದುಡಿಮೆಸ್ಥಳು ಎಲ್ರುನೂ ಕೂಡಿ ಹಾಕ್ಕೆಂದು ಒಕ್ಕುಲತನ ನೆಡಸ್ತಾಳ. ಮುಂಜ್ಯಾಲಿಂದ ಸಂಜಿತಂಕ ಒಂದೇ ಕತ್ತೆ ದೋಖೀದಂಗ ದೋಖತೈತಿ’ ಅಂತಾ ಮಾತಾಡಿಕೊಳ್ಳುತ್ತಿದ್ದರು. ಆದ್ರೆ ಗೌರಕ್ಕನ ಸೊಸಿ ಮಾತ್ರ ಅದ್ಯಾವದನ್ನು ತೆಲಿಗೆ ಹಾಕ್ಕೊಳದೇ ಮೈ ಮೆರಿತಿದ್ದಳು. ಗೌರಕ್ಕನ ಗಂಡ ಮಾದೇವ ಮಣಕೂರಿಂದ ಹೆಣ್ಣಾಸ್ತಿಗೆ ಹಾದ್ರಿಹಳ್ಳಿಗೆ ಬಂದು ನೆಲೆನಿಂತಿದ್ದ. ಗೌರಕ್ಕಂದು ಹೆಣ್ಣಾಸ್ತಿ ಕಂಡೆಬಟ್ಟೆಯಿದ್ರು ಮಾದೇವ ದುಡಿಯೋ ಮುಕ್ಕ ಅಲ್ಲ. ಗುಣುಕಲ ಮುದ್ದಿಯಿದ್ದಂಗೆ ಕುಂತಲ್ಲೇ ಕುಂಡಿ ಮರೆಯೋ ಆಸ್ಸಾಮಿ. ಯಾವ ಕೆಲಸನು ಮೈಗಚ್ಚಿಕೊಂಡು ಮಾಡೋ ಪೈಕಿಯಲ್ಲ ಬಾರಿಕೋಲು ಹಚ್ಚಿ ಬಾರಿಸಿದಂಗ ಹೇಳಿದ್ರೆ ಸೈ ಮಾಡೋದು. ಗೌರಕ್ಕ ಇವನ್ನೆಲ್ಲಾ ಕಟ್ಟಿಗೊಂಡು ಸಂಸಾರ ಜೀಕುತ್ತಿದ್ದಳು.

‘ಏನಾರ ಗರಂ ಗರಂ ಐತೇನಕ್ಕ’ ಎನ್ನುತ್ತಾ ಚಂಪಣ್ಣ ಸೀದಾ ಅಡುಗೆ ಮನಿಗೆ ಬಂದ. ಚಂಪಣ್ಣ ಎಗ್ಗುಯಿಲ್ಲದ ಮನಷ್ಯಾ. ಒಂದು ರೀತಿ ಅಡುಗಿಮನಿ ಅತಿಥಿ ಅಂದ್ರು ತಪ್ಪಿಲ್ಲ. ಹೆಳೆದೆ ಕೇಳದೆ ಅಡುಗಿಮನಿಗೆ ನುಗ್ಗುತ್ತಿದ್ದ. ಗೊತ್ತಿಲ್ಲ ನಿಮ್ಗೆ ಗೊತ್ತಿಲ್ಲ? ಅಂತಾ ಗೊತ್ತಿಲ್ಲದ ಇಚಾರ ಊರಿಗೆಲ್ಲಾ ಬಿತ್ತುತ್ತಿದ್ದ. ಲಗ್ನದ ಸುದ್ದಿ, ಮೈ ನೇರತ ಸುದ್ದಿ, ಯಾರಿಗಾದ್ರೂ ಕೂಸು ಹುಟ್ಟಿದ್ರೆ ಆ ಸುದ್ದಿ, ಅಷ್ಟೇ ಯಾಕೆ ಓಡಿ ಹೋದವರ ಸುದ್ದಿ; ಕಳ್ಳ ಬಸುರಾದವರ ಸುದ್ದಿ ಎಲ್ಲವೂ ಚಂಪಣ್ಣಗೆ ಮೊದಲು ತಾಗುತ್ತಿದ್ದವು. ಅವ್ನ ಹೆಣ್ತಿ ಇವ್ನು ಇಟ್ಟಗೊಂಡ ಸುದ್ದಿ, ಇವ್ನು ಹೆಣ್ತಿ ಅವ್ನು ಇಟ್ಟಗೊಂಡ ಸುದ್ದಿಯನ್ನು ಊರು ಮುಂದಿನ ಅಗಸ್ಯಾಗ ಬಿತ್ತಿ ಅಡುಗಿಮನಿ ನುಗ್ಗುತ್ತಿದ್ದ. ಕಳ್ಳ ಹಾದ್ರ ಹುಳ್ಳು ಹುಳ್ಳುಗೆ ಹಬ್ಬುತಿದ್ದಂಗೆ ಕೈ ಕೈ ಹಿಚಿಗಿಕೊಳ್ಳೋದು ಮಾತ್ರ ಕಳ್ಳಪಿಂಡಿಗಳದಾಗುತ್ತಿತ್ತು. ಅಂಗಾಗಿ ಯಾರಿಗೂ ಹೇಳಬ್ಯಾಡಪ್ಪ ಅಂತಾ ತಿನ್ನಾಕ ಗರಂ ಗರಂ ಕೊಡ್ತಿದ್ದರು. ಕೊಟ್ಟುದ್ದು ತಿಂದು ಅಗಸ್ಯಾಗ ಹೂಸು ಬಿಡೋದು ಮಾತ್ರ ಚಂಪಣ್ಣ ಮರಿತಿದ್ದಿಲ್ಲ. ಅಂದು ಬಂದವನು ನೇರ ಸುದ್ದಿಗೆ ಕೈ ಹಚ್ಚಿದ ‘ಏನ ಗೌರಕ್ಕ ನಿನ್ನ ಮಗಳು ಇಮ್ಲಿನಾ ಊರಮುಂದ್ಲರ ಬಸವಣ್ಣೆಪ್ಪ ತನ್ನ ಮಗನಿಗೆ ಕೇಳಿದ್ನಂತ. ನೀ ಕೊಡೊ ಪೈಕಿ ಅಲ್ಲಬಿಡು. ಬಸವಣ್ಣೆಪ್ಪ ಊರಾಗ ಒಳ್ಳೆಯವನೇ... ನಾಕು ಮಂದಿಗೆ ಬೇಕಾದವನೇ... ಕಷ್ಟ ಅಂದೋರಿಗೆ ಕೈ ಎತ್ತಿ ಕೊಟ್ಟೋನು. ಹೊಲ ಮನಿ ಇಚಾರದಗೂ ತೆಗೆದು ಹಾಕಂಗಿಲ್ಲ ಐದು ಕೂರ್ಗಿ ಎರಿಹೊಲ ಊರುಮುಂದ ಕಟಾಂಜನದ ದೊಡ್ಡ ಮನಿ. ನಿಜವ್ವ..! ಆದ್ರೆ..! ಅವ್ನ ಮಗ ಗಾಜಿಗೌಡನ ಚಾಳಿ ಸುಮಾರೈತಿ. ಹಾದಿ ತಪ್ಪೇತಿ, ಬೇಲಿ ಹಾರಿ ಎಲ್ಲೆಂದ್ರಲ್ಲಿ ಮೆಯ್ಯೊ ಜಾತಿ ಅದು. ಎಲ್ಲಿ ಹೆಣ್ಣು ಹತ್ತಿಲ್ಲಂತ ನಿನ್ನ ಮಗಳು ಕೇಳ್ಯಾಣ. ಅವ್ನು ಹೊಲಮನಿ ತಗೊಂಡು ಏನು ಮಾಡ್ತಿ. ಗಿಣಿ ಹೆತ್ತು ಗಿಡುಗನ ಕೈಗೆ ಹಾಕಬ್ಯಾಡ. ಇದ್ರಮ್ಯಾಲ ನಿನ್ನಿಷ್ಟ’ ಎಂದು ಕುಳಿತನು. ಗೌರಕ್ಕ ಕಲ್ಲಾಗಿದ್ದಳು. ಗೌರಕ್ಕ ಮಗಳ ಮದುವಿ ಸಿದ್ಧತೆಯಲ್ಲಿದ್ದಳು. ಹೊಲದಾಗಿನ ಜೋಳ ಕೊಯ್ಲು, ಒಕ್ಕಲು ಮುಗಿತಿದ್ದಂಗೆ ಜೋಳ ಮಾರಿ ಲಗ್ನ ಮಾಡೋ ಲೆಕ್ಕಾಚಾರದಲ್ಲಿದ್ದಳು. ಗಂಡು ಕೂಡಾ ಗೊತ್ತಾಗಿತ್ತು. ಸುರುಗಿಹಳ್ಳಿ ಸೋಮಣ್ಣನ ಮಗ ಗುರುಬಸವನೊಂದಿಗೆ ಬರೋ ಅಮಾಸಿ ಮುಗಿದು ಮುಂದಿನ ಅಮಾಸಿಯೊಳಗೆ ಲಗ್ನ ಎಂದು ತೀರ್ಮಾನವಾಗಿತ್ತು.

***
ಹಾದ್ರಿಹಳ್ಳಿ ಮತ್ತು ಸುತ್ತಲಿನ ಊರಿನವರಿಗೆ ಅಮಾಸಿಯೆಂದ್ರ ಇನ್ನಿಲ್ಲದ ಭೀತಿ ಹೊಕ್ಕುಬಿಡ್ತಿತ್ತು. ಇವರನ್ನು ಅಮಾಸಿ ಹಲವು ತೆಲೆಮಾರುಗಳಿಂದ ಕಾಡಿಸಿ ಹಾಕಿತ್ತು. ಅದ್ರಿಂದ ಮುರಚಂಜಿಗೆ ಉಂಡು ಬುಡ್ಡಿ ಕೆಡಿಸಿ ಮಲಗಿಬಿಡುತ್ತಿದ್ದರು. ಅಪ್ಪಿತಪ್ಪಿಯೂ ಮನೆಯಾಚೆ ಕಾಲಿಡುತ್ತಿರಲಿಲ್ಲ. ನೀರಕಡೆ ಹೋಗಲು ಕೂಡಾ ಬುಗುಲು ಬೀಳುತಿದ್ದರು. ಈಗಿರುವಾಗ ಶಿವರಾತ್ರಿ ಅಮಾಸಿಯೊಂದು ಮಸಿಯನ್ನು ಕುಟ್ಟಿ ಕುಟ್ಟಿ ಕತ್ತಲನ್ನು ಉಗ್ಗುತಿತ್ತು. ಕಳ್ಳಿಸಾಲಿನಲ್ಲಿ ಹಲ್ಲಿ, ಹಾವುರಾಣಿ ಹರಿದ ಸದ್ದು ಕೇಳುವಂತಿತ್ತು. ದೂರದಲ್ಲಿ ನರಿಗಳು ಊಳಿಡುವ ಸದ್ದು ಉಯ್ಯಾಲೆಯಂತೆ ತೇಲಿ ಬಂದು ಮಲಗಿದವರ ನಿದ್ದೆ ಕೆಡಿಸುತ್ತಿತ್ತು. ಕೊರೆವ ಚಳಿ, ಕವ್ವಗತ್ತಲೆಗೆ ನಾಯಿಗಳು ಕೂಡಾ ಮುದುರಿ ಮಲಗಿದ್ದವು. ಊರು ಕೂಡಾ ತುಂಬಾ ಕೌದಿ ಹೊದ್ದು ಮಲಗಿತ್ತು. ಮಲಗಿತ್ತು ಅಂದ್ರೆ ತಪ್ಪಾಗುತ್ತದೆ ಮಲಗಿದಂಗಿತ್ತು. ಏನು ಕಾದಿದೆಯೋ ಏನೋ... ಎಂಬ ಭಯ ಮಿಸುಗಾಡುತ್ತಿರುವಾಗಲೇ ಮೂಡುಗಾಳಿ ಸುಳ್ಳು ಸುಳ್ಳು ಬೀಸಿತು. ಮಿಣಿ ಮಿಣಿಗುಟ್ಟುತಾ ಚುರು ಚುರು ನಾಲಿಗೆ ಚಾಚಿದ ಬೆಂಕಿ ಒಮ್ಮೆಲೇ ಚಿಟ್ ಪಟ್ ಸದ್ದಿನೊಂದಿಗೆ ಧಣ್ ಧಣ್ ಉರಿಯತೊಡಗಿತು. ಕತ್ತಲು ಕೂಡಾ ಬೆದುರುವಂತೆ ಝಳದೊಂದಿಗೆ ಕೆಂಬೆಳಕ ಕಾರತೊಡಗಿತು. ಕಣದ ವಾರೆಜಪ್ಪರದಲಿದ್ದ ದನಗಳು ಬೆಂಕಿಯ ಝಳಕ್ಕೆ ಚಡಪಡಿಸುತ್ತ ಒದರಾಟಕಿತ್ತವು. ಕಿಟಕಿ ಬಾಗಿಲುಗಳ ಸಂದಿಗಳಲ್ಲಿ ಕೆಂಬೆಳಕು ಮಲಗಿದ್ದವರನ್ನು ತಿವಿಯುವಂತೆ ತೂರಿಬಂತು. ಗೌರಕ್ಕ ದಿಗಿಲು ಬಿದ್ದು ಬುದುಗ್ಗನೆ ಎದ್ದಳು. ಬಾಗಿಲು ತೆಗೆದು ನೋಡುತ್ತಾಳೆ! ನಾಕಾರು ಆಳೆತ್ತರದ ಬೆಂಕಿ ಜೋಳದ ರಾಶಿಯನ್ನು ಮುಕ್ಕುತಿದೆ. ಅಬ್ಬೊಬ್ಬೊ... ಲಬ್ಬೊಬ್ಬೊ... ಬಿತ್ತಲೇ ಬೆಂಕಿ
ಅಯ್ಯೋಯ್ಯೋ... ಅಪ್ಪಪ್ಪೋ... ಸುಡ್ತಲೊ ರಾಶಿ... ಎಂದು ಹಿಂದಕ್ಕೂ ಮುಂದಕ್ಕೂ ಬೋರಾಡಹತ್ತಿದಳು. ಹೆಣ್ತಿ ಚೀರಾಟ ಕೇಳಿ ಹೊರಸಿನ ಮ್ಯಾಲ ಮಲಗಿದ್ದ ಮಾದೇವ ಎದ್ದು ಬಂದನು. ಶಿವ ಶಿವಾ... ಬೆಂಕಿ! ಬೆಂಕಿ! ತೆನಿರಾಶಿಗೆ ಬೆಂಕಿ! ದನ ಬಿಟ್ಟೋಡಿಯಲೇ ಸಿದ್ದ ಎಂದು ಕೂಗಿದ. ಸಿದ್ದಬಸವ ನುಗ್ಗಿದವನೇ ವಾರೆಜಪ್ಪರದಲ್ಲಿದ್ದ ದನಗಳ ಕಣ್ಣಿ ಹರಿದ. ಇವರ ಬೋರಾಟ ಚೀರಾಟ ಕೇಳಿದ ತುಸು ದೂರದ ಊರಿನ ಜನಗಳು ಮಾದೇವನ ಕಣದ ಕಡೆಗೆ ಧಾವಿಸಿದರು. ಮಾದೇವನ ರಾಶಿಗೆ ಬೆಂಕಿ ಬಿದ್ದೆತ್ರಲೇ... ನೀ ಬಾರೋ... ತಾ ಬಾರೋ... ನೀರು ಉಗ್ಗು ಗದ್ದಲಗಳು ಕಣ ತುಂಬಿದವು. ಉರಿ ಮಾತ್ರ ಯಾರು ಮಾತು ಕೇಳುವಂತಿರಲಿಲ್ಲ. ಕೈ ಸೋತ ಜನಗಳು ಕಣ್ಣು ಬಿಟ್ಟು ನಿಂತರು. ಬೆಂಕಿ ಸರಿಹೊತ್ತಿನ ತಂಕ ಉರಿದು ತಣ್ಣಗಾತು. ಸುಟ್ಟ ರಾಶಿಯ ತೆನೆಗಳಿಂದ ಕಮಟು ವಾಸನೆ ಚಳಿಗಾಳಿಯೊಂದಿಗೆ ಮೇಲೇಳುತಿತ್ತು. ಗೌರಕ್ಕ ಎದೆ ಎದೆ ಬಡ್ಕೊಂಡು ಸುಸ್ತಾಗಿ ಕುಂತಳು. ಮಗಳ ಮದ್ವಿ ಇಚಾರ ರಾಶಿಯೊಂದಿಗೆ ಸುಟ್ಟು ಕರುಕಲಾಯಿತು. ಊರು ಜನರ ಓಡಾಟ ಕಂಡು ಬೆಳಗಿನ ಕೋಳಿಗಳು ಬೆರಗಾಗಿದ್ದವು.

***
ಸುದ್ದಿ ತಿಳಿದ ಸುರುಗಿಹಳ್ಳಿ ಬೀಗರು ಬಂದರು. ಗೌರಕ್ಕ ಸೋತು ಬಾಗಿಲಿಗೊರಗಿ ಕುಂತಿದ್ದಳು. ಮಾದೇವ ಮಂಕಾಗಿ ನಿಂತಿದ್ದ. ಮಗಳು ಕೋಣೆಯಲ್ಲಿ ಮುಸು ಮುಸು ಸೊರಗುಟ್ಟುತಿತ್ತು. ಇಡಿ ಕುಟುಂಬವೆ ಕೂಳು ನೀರು ಮುಟ್ಟದೆ ಸೋತು ಕುಳಿತಿತ್ತು. ನೆಂಟಬೀಗ ಸೊಮ್ಮಣ್ಣ ಮತ್ತು ಅಳಿಯನಾಗುವ ಗುರುಬಸವನನ್ನು ನೋಡಿದ್ದೆ ತಡ ಗೌರಕ್ಕನಿಗೆ ದುಃಖ ಉಮ್ಮಳಿಸಿ ಬಂತು ‘ಅಯ್ಯೋ ಅಳಿದೇವ್ರು... ಉಣ್ಣೋ ಮುತ್ತಿನರಾಶಿಗೆ ಕೊಳ್ಳಿಯಿಟ್ರಲ್ಲೋ...! ಲಗ್ನ ಹಮ್ಮಿಕೆಂದಿದ್ವಿ, ಜೋಳ ಕೊಟ್ಟು ಮದುವಿ ಮಾಡೋಣ ಅಂತಿದ್ವಿ. ಎಲ್ಲಾ ಸುಟ್ಟು ಬೂದಿಯಾತೋ...’ ಎಂದು ತೆಲೆ ಚಚ್ಚಿಕೊಳ್ಳತೊಡಗಿದಳು. ‘ಇದು ಯಾವ್ದೋ ಮನಿ ಮುರ್ಕರ ಕೈವಾಡೈತಿ’ ಎಂದು ಮಾದೇವ ಕಿಡಿ ಕಿಡಿಯಾದನು. ‘ಇದು ಯಾಂವ ಮಾಡ್ಯಾನ ಅನ್ನೋದು ನಂಗೆ ಗೊತ್ತಿಲ್ಲೇನು? ಮುತ್ತಿನ ರಾಶಿಗೆ ಕೊಳ್ಳಿಯಿಟ್ಟವ್ನ ಕೈ ಸೇದಿಹೋಗಾ... ಉಣ್ಣೋ ಅಂಬಲಿ ಹಾರೋಡದವ್ನ ತಟ್ಯಾಗ ಮಣ್ಣು ಬಿಳಾ... ಮನೆಬಿದ್ದು ಹೋಗಾ... ಹೆಣ್ಣು ದಿಕ್ಕಿಲ್ಲದಾಗಾ...’ ಗೌರಕ್ಕ ಬೈಗುಳ ಸುರಿಸತೊಡಗಿದಳು.

‘ಆಗಿದ್ದೆಲ್ಲಾ ಆಗಿಹೋತು ಅತ್ತೆವ್ವ ಸಮಾಧಾನ ಮಾಡ್ಕೋ ಕೇಡ್ಸೋನು ಇದ್ರೆ ಕಾಯೋನು ಇರ್ತಾನೆ. ಆ ದ್ಯಾವ್ರು ಕೈ ಬಿಡಾಕಿಲ್ಲ. ಮಗಳು ಮದ್ವಿ ಮುರಿದು ಬಿತ್ತು ಅಂತ ಯಾಕ ಆಡ್ಕೊತೀಯಾ. ಏನು ಇದ್ರು ಇಲ್ದಿದ್ರೂ ನಾ ಇಮ್ಲಿನಾ ಕಟ್ಕೋತೀನಿ. ನಿನ್ನ ಮಗ್ಳು ಕಳ್ಸಿಕೊಡು ಸಾಕು ನಾನೆ ಖರ್ಚಾಕಿ ಮದ್ವಿ ಮಾಡ್ಕೋತೀನಿ’ ಎಂದು ಮಾತುಕೊಟ್ಟನು. ನೆಂಟಬೀಗ ಸೊಮ್ಮಣ್ಣ ‘ನಮ್ಗೆ ನಿಮ್ಮ ಕಷ್ಟ ಅರ್ಥ ಆಕ್ಕೇತಿ, ಇಂತೆದ್ಕೆಲ್ಲಾ ಸಂಬಂಧ ಮುರ್ಕೊಳ್ಳಕ್ಕಕಾಗತ ನೀನೇ ಹೇಳು ಗೌರಕ್ಕ’ ಎಂದು ಸಮಾಧಾನ ಮಾಡಿದ. ಗೌರಕ್ಕ ಮಾದೇವನ ಕರಿಬಡಿದ ಮುಖದಲ್ಲಿ ಸಣ್ಣ ನಗುವೊಂದು ಮಿಂಚಿತು.

***

‘ಸುರುಗಿಹಳ್ಳಿ ಗುರುಬಸ್ಯಾ ಇಮ್ಲಿನಾ ಅದುಹ್ಯಾಂಗ ಮದುವಿಯಾಗ್ತಾನ ನಾನು ನೋಡ್ತೀನಿ’ ಅಂತ ಗಾಜಿಗೌಡ ಗೂಳಿಯಂತೆ ಗುಟುರು ಹಾಕಿದ. ಗಾಜಿಗೌಡ ಗುರುಬಸವನ ಮೇಲೆ ಹಲ್ಲು ಕಡಿಯಲು ಇನ್ನೊಂದು ಬಲವಾದ ಕಾರಣವಿತ್ತು. ಅದೆಂದರೆ ವರ್ಷದ ಹಿಂದೆ ಗಾಜಿಗೌಡ ಮಲ್ಲೂರು ದೊಡ್ಡಕೆರೆಯನ್ನು ಹೂಳೇತ್ತಿದ್ದು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಹೊಂದಿದ್ದ ಎರಡು ಊರಿನ ಜನಗಳನ್ನು ಬಿಟ್ಟು ಜೆಸಿಬಿ ಹಚ್ಚಿ ರಾತ್ರೋ ರಾತ್ರಿ ಹೂಳು ತೆಗೆದಿದ್ದ ಅಷ್ಟೇ ಅಲ್ಲ ಪಿಡಿಓ ಒಳಗಾಕಿಕೊಂಡು ಮುಗಿಯದ ಕಾಮಗಾರಿಗೆ ಬಿಲ್ ಪಾಸ್ ಮಾಡಿಸಿಕೊಂಡಿದ್ದ. ಇದರಿಂದ ಕೆಲಸಕ್ಕೆ ಅರ್ಜಿ ಹಾಕಿದ ಹಲವರಿಗೆ ಕೆಲಸವಿಲ್ಲದಂತಾಗಿತ್ತು. ಗುರುಬಸವ ಅವರನ್ನೆಲ್ಲಾ ಎತ್ತಿಕಟ್ಟಿ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿದ. ತಾಲೂಕು ಪಂಚಾಯಿತಿ ಅಧಿಕಾರಿಗೆ ಫೋನಾಯಿಸಿ ತಕ್ಷಣವೇ ಬರದಿದ್ದರೆ ಪಂಚಾಯಿತಿಗೆ ಬೀಗ ಜಡಿಯುವುದಾಗಿ ಎಚ್ಚರಿಸಿದ್ದ. ಇದನ್ನೆಲ್ಲಾ ಮಾಹಿತಿ ಹಕ್ಕಿನಲ್ಲಿ ಕೇಳುವುದಾಗಿ ಪಿಡಿಓಗೆ ಧಮಕಿ ಹಾಕಿದ್ದ. ಇದರಿಂದ ಪಿಡಿಓ ಬಿಸಿ ನೀರು ತಂದ್ರಲ್ಲಪ್ಪ ಅಂತ ಪತರಗುಟ್ಟಿಕೊಂಡು ಗಾಜಿಗೌಡನ ಬಳಿ ಸಹಾಯಕ್ಕೆ ಓಡೋಡಿ ಬಂದಿದ್ದ. ‘ಏನು ಆಗಲ್ಲ ನಾನೆಲ್ಲಾ ನೋಡ್ಕೊಳ್ಳತೀನಿ ಹ್ಯಾಂಗಾರ ಮಾಡಿ ಮುಚ್ಚಿ ಹಾಕೋಣ’ ಎಂದಿದ್ದ. ಅಷ್ಟೋತ್ತಿಗೆ ಜೋರಾಗಿ ಬಾರಿಸಿದ ಮುಂಗಾರು ಮಳೆಗೆ ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಹಗರಣವೆಲ್ಲಾ ಮುಚ್ಚಿಹೋಗಿ ಪಿಡಿಓ ಮತ್ತು ಗಾಜಿಗೌಡ ಇಬ್ಬರೂ ಬಚಾವಾಗಿದ್ದರು. ಅಂದಿನಿಂದ ಇಬ್ಬರಲ್ಲೂ ವೈರತ್ವ ಬುಸುಗುಡುತ್ತಿತ್ತು.

***

ಗಾಜಿಗೌಡ ಗುರುಬಸವ ಇಬ್ಬರೂ ವಾರಿಗೆಯವರು. ಮಲ್ಲೂರಿನ ಹೈಸ್ಕೂಲಿನಲ್ಲಿ ಜೊತೆಗೆ ಓದಿದವರು. ಇಬ್ಬರೂ ಚುರುಕಾಗಿದ್ದು ಆಟಪಾಠದಲ್ಲಿ ಇತರರಿಗಿಂತ ಮುಂದಿದ್ದರು. ಮಲ್ಲೂರು ಹೈಸ್ಕೂಲ್ ಹೆಡ್‌ಮಾಸ್ಟರ್ ಶ್ರೀನಿವಾಸಯ್ಯನವರು ಇದ್ದರೆ ಗಾಜಿಗೌಡ ಗುರುಬಸವನಂತೆ ಇರಬೇಕು ಎಂದು ಹೊಗಳುತ್ತಿದ್ದರು. ಇಬ್ಬರಿಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ತೆಗೆದು ಶಾಲೆಯ ಬೋರ್ಡ್‌ಗೆ ಬರಬೇಕೆಂಬ ಛಲ ಮೂಡಿತ್ತು ಅದರಂತೆ ಕಷ್ಟಬಿದ್ದು ಓದುತ್ತಿದ್ದರು. ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ಗುರುಬಸವ ಹೆಚ್ಚು ಅಂಕ ಪಡೆದಿದ್ದ. ಇದರಿಂದ ಗಾಜಿಗೌಡನಿಗೆ ಅವಮಾನವಾದಂತಾಗಿ ಇವರ ನಡುವಿನ ಸ್ನೇಹ ನಿಧಾನವಾಗಿ ಹಳಸತೊಡಗಿತ್ತು. ಶ್ರೀನಿವಾಸಯ್ಯನವರು ಗುರುಬಸವನನ್ನು ಶಾಲೆಗೆ ಕರೆದು ಸನ್ಮಾನ ಮಾಡಿದ ಮೇಲೆಂತು ಗಾಜಿಗೌಡ ಮತ್ತಷ್ಟು ಕುದ್ದುಹೋಗಿದ್ದ. ಮುಂದೆ ಗುರುಬಸವ ಗಾಜಿಗೌಡ ಬಿನ್ನ ಹಾದಿಯನ್ನು ತುಳಿದರು. ಗಾಜಿಗೌಡ ಬಿಎ ವ್ಯಾಸಂಗಕ್ಕೆ ತಿಲಾಂಜಲಿ ಇಟ್ಟು ಫಾಲ್ತು ತಿರುಗಾಡತೊಡಗಿದ. ಗುರುಬಸವ ಎಲ್ ಎಲ್ ಬಿ ಮುಗಿಸಿ ರಾಣೇಬೆನ್ನೂರಿನ ಕೋರ್ಟಿನಲ್ಲಿ ವಕಾಲತ್ತು ವಹಿಸತೊಡಗಿದ. ಅವರಿವರ ಕಷ್ಟಗಳಿಗೆ ಸ್ಪಂದಿಸುತ್ತಾ, ಗಲಾಟೆ ವ್ಯಾಜ್ಯಗಳನ್ನು ಬಗೆಹರಿಸುತ್ತಾ, ತಪ್ಪು ಮಾಡಿದವರಿಗೆ ಬುದ್ದಿವಾದ ಹೇಳುತ್ತಾ, ಜನ ಸಾಮಾನ್ಯರಿಗೆ ಅರಿವು ಮೂಡಿಸುತ್ತ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಭದ್ರತಾ ಯೋಜನೆಗಳು ತಲುಪಬೇಕೆಂದು ಊರಲ್ಲಿ ಸಮಾಜ ಪರಿವರ್ತನಾ ಸಂಘವನ್ನು ಕಟ್ಟಿ ಶೋಷಿತರಿಗೆ ಧ್ವನಿಯಾದ. ಇದಕ್ಕೆ ವಿರುದ್ಧವಾಗಿ ಗಾಜಿಗೌಡ ಊರಲ್ಲಿ ಸಾರಾಯಿ ಅಂಗಡಿ ತೆರೆದು ಮಟ್ಕಾ ಬರೆಯುತ್ತ ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ. ಬಸವಣ್ಣೆಪ್ಪ ಎಷ್ಟೇ ಬುದ್ಧಿವಾದ ಹೇಳಿದರು ಕೇಳದೆ ಪಡ್ಡೆ ಹುಡುಗರ ಗುಂಪುಕಟ್ಟಿಕೊಂಡು ರಾಜಕೀಯ ಸುರುವಿಟ್ಟುಕೊಂಡ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಾಜಿಗೌಡ ಹಾದ್ರಿಹಳ್ಳಿಯಿಂದ ನಿಂತ ಸುದ್ದಿ ಹೆಡ್ ಮಾಸ್ಟರ್ ಶ್ರೀನಿವಾಸಯ್ಯನವರಿಗೆ ಮುಟ್ಟುತ್ತಲೆ ಗುರುಬಸವನನ್ನು ಕರೆಸಿಕೊಂಡು ಚುನಾವಣೆಗೆ ನಿಲ್ಲಲು ತಿಳಿಸಿದ್ದರು. ‘ಈ ರಾಜಕೀಯ ನಮ್ಮೊಂತೋರಿಗೆ ಅಲ್ಲ ಸರ್ ಬರಿ ದಗಲಬಾಜಿ ಮಾಡಿಕೊಂಡು ದುಡ್ಡು ಲಪಟಾಯಿಸೋರಿಗೆ ನಂಗ್ಯಾಕೋ ಸರಿಬೀಳಲ್ಲ’ ಎಂದಿದ್ದ. ‘ರಾಜಕೀಯ ಎಂದು ಅಸೆಡ್ಡೆ ಮಾಡಬ್ಯಾಡ ಗುರುಬಸವ ಏನಾದ್ರೂ ಬದಲಾವಣೆಯೆಂದ್ರೆ ಒಂದು ಶಿಕ್ಷಣ ಇನ್ನೊಂದು ರಾಜಕೀಯ. ನೀನಲ್ಲದಿದ್ರೆ ಇನ್ನೊಂದು ಕೆಟ್ಟುಹುಳ ತಿನ್ನೋಕೆ ಸುರುಮಾಡುತ್ತೆ. ನೀನಿಂತ್ರೆ ಗಾಜಿಗೌಡನ್ನ ಎಡೆಮುರುಗಿ ಕಟ್ಟಬೋದು’ ಎಂದು ಬುದ್ದಿವಾದ ಹೇಳಿ ಹುರಿದುಂಬಿಸಿದ್ದರು. ಅದರಂತೆ ಗುರುಬಸವ ಸುರಗಿಹಳ್ಳಿ ಕ್ಷೇತ್ರದಿಂದ ನಿಂತಿದ್ದ. ಗಾಜಿಗೌಡ ಹಣ, ಹೆಂಡ ಹಂಚಿ ಕಣ್ಣು ಕೆಕ್ಕರಿಸಿ, ಬಾಯಿ ಜೋರು ಮಾಡಿ ಹೆದರಿಸಿ ಬೆದರಿಸಿ ಓಟು ಹಾಕಿಸಿಕೊಂಡರೆ ಗುರುಬಸವ ತನ್ನ ಒಳ್ಳೆಯ ಗುಣ, ನಡತೆ, ಸಾಮಾಜಿಕ ಕೆಲಸಗಳನ್ನು ಹೇಳಿ ಕೈ ಮುಗಿದು ಓಟು ಹಾಕುವಂತೆ ಬೇಡಿಕೊಂಡ. ತಾನು ಗೆದ್ದು ಬಂದರೆ ಸೂರಿಲ್ಲದವರಿಗೆ ಸೂರು, ಪ್ರತಿ ಮನೆಗೂ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಎಲ್ಲರಿಗೂ ಉದ್ಯೋಗ ಖಾತ್ರಿ ಕೆಲಸ ಕೊಡಿಸುವುದಾಗಿ ಆಶ್ವಾಸನೆ ನೀಡಿದ. ಸುರುಗಿಹಳ್ಳಿ ಜನ ಗುರುಬಸವನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದರು. ಹಾದ್ರಿಹಳ್ಳಿ ಜನ ಹಣ ಹೆಂಡಕ್ಕೆ ಸೋತು ಗಾಜಿಗೌಡನನ್ನು ಗೆಲ್ಲಿಸಿದರು. ಮಲ್ಲೂರು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಇಬ್ಬರಲ್ಲೂ ಭಾರಿ ಪೈಪೋಟಿ ಶುರುವಾಗಿತ್ತು. ಇದನ್ನು ಗಮನಿಸಿದ ಶ್ರೀನಿವಾಸಯ್ಯನವರು ಮದ್ಯ ಪ್ರವೇಶಿಸಿದರು. ‘ಮೊದಲನೇ ಅವಧಿಗೆ ಗುರುಬಸವನಿಗೆ ಬಿಟ್ಟುಕೊಡು ನಂತರ ಅವಧಿಯನ್ನು ನೀನು ಮಾಡುವಂತೆ’ ಎಂದು ಗಾಜಿಗೌಡನಿಗೆ ಬುದ್ಧಿವಾದ ಹೇಳಿದರು. ಕಿವಿಯೂದಿ ಚುನಾವಣೆಗೆ ನಿಲ್ಲಿಸಿದ ಕಾವು ತಣ್ಣಗಾಗುವ ಮೊದಲೆ ಹೂಡಿದ ಇನ್ನೊಂದು ನಾಟಕಕ್ಕೆ ಕೆಂಡವಾಗಿದ್ದ ಗಾಜಿಗೌಡ ಅದ್ಯಾವುದನ್ನೂ ಕಿವಿಗಾಕಿಕೊಳ್ಳದೆ ತಾನೆ ಮೊದಲ ಅವಧಿಗೆ ಅಧ್ಯಕ್ಷನಾಗುವೆ ಅಂತ ಹಠಕ್ಕೆ ಬಿದ್ದ. ಶ್ರೀನಿವಾಸಯ್ಯನವರು ಹೇಳಿದ ಬುದ್ದಿಮಾತುಗಳೆಲ್ಲಾ ತಳವಿಲ್ಲದ ಗಡಿಗೆಯಂತೆ ಸೋರಿ ಹೋದವು. ಗಾಜಿಗೌಡ ರೆಸಾರ್ಟ್ ರಾಜಕಾರಣ ಮಾಡಿ ಅಧ್ಯಕ್ಷನಾದ. ಕೆರೆ ಹೂಳೆತ್ತುವ ವಿಷಯದಲ್ಲಿ ನಡದ ಜಟಾಪಟಿ ಗಾಜಿಗೌಡನ ಹುಳುಕೆಲ್ಲಾ ಹೊರಹಾಕಿತ್ತು. ಗುರುಬಸವನ ಮೇಲೆ ಕತ್ತಿ ಮಸೆಯುತ್ತಿದ್ದ ಗಾಜಿಗೌಡ ಅವಕಾಶ ಸಿಕ್ಕಾಗ ಹಣಿಯಲು ನೋಡುತ್ತಿದ್ದ.

***

ಗೌರಕ್ಕನ ಮಗ ಸಿದ್ದಬಸವನೂ ಮತ್ತು ಗುರುಬಸವನು ಗೆಳೆಯರಾಗಿದ್ದರು. ಗುರುಬಸವ ಪಂಚಾಯಿತಿ ಮೆಂಬರ್ ಆದಮೇಲೆ ಗೌರಕ್ಕ ‘ನಮ್ಮ ದನಗಳು ಬಿಸಿಲು ಮಳಿಗೆ ವಾರೆಜಪ್ಪರದಲ್ಲಿ ನಿಲ್ಲಬೇಕು ಅದ್ಕೆ ಪಂಚ್ಯಾತಿಯಿಂದ ದನದ ಕೊಟ್ಟಿಗೆ ಹಾಕ್ಸಿಕೊಡು ಅವುಕ್ಕೂ ಒಂದು ಸೂರು ಆಕ್ಕೇತಿ’ ಎಂದು ಕೇಳಿದ್ದಳು. ಪಿಡಿಓಗೆ ಹೇಳಿ ಹಾಕಿಸಿಕೊಟ್ಟಿದ್ದ. ಗೌರಕ್ಕ ಗುರುಬಸವನ ಗುಣ ನಡೆತೆ ಮಾತುಕತೆ ಹತ್ತಿರದಿಂದ ನೋಡಿ ‘ದ್ಯಾವ್ರಂತ ಮನಷ್ಯ ಕಷ್ಟಕ್ಕೆ ಕರಗ್ತಾನೆ ಓದಿಕೆಂದು ನಾಕು ಮಂದಿಗೆ ಬುದ್ದಿಗ್ಯಾನ ಹೇಳ್ತಾನೆ. ಅಪ್ಪ ಅವ್ವನ್ನ ಜೊತೆಗಿಟ್ಟುಕೊಂಡು ಸಾಕ್ತಾನೆ, ಪಟ್ಣುದಾಗ ವಕೀಲಕಿ ಬೇರೆ ಮಾಡ್ತಾನೆ ಇಂಥ ಪುಣ್ಯಾತ್ಮಗ ಹೆಣ್ಣು ಕೊಡ್ಬೇಕು ನೋಡು’ ಎಂದು ಗಂಡನಿಗೆ ಹೇಳಿದ್ದಳು. ಒಂದು ಸಾರಿ ಮೂರನೇ ಬಿಲ್ಲು ಪಾಸಾಗಿಲ್ಲ ಅಂತೇಳಿ ದನದ ಕೊಟ್ಟಿಗೆ ಜಿಪಿಎಸ್ ಮಾಡಲು ಬಿಲ್ ಕಲೆಕ್ಟರ್ ಜೊತೆ ಬಂದಾಗ ಗೌರಕ್ಕ ಒಂದು ಲೋಟ ಮಜ್ಜಿಗಿ ಕೊಟ್ಟು ಕೇಳೆ ಬಿಟ್ಟಿದ್ದಳು ‘ತಮ್ಮ ಗುರುಬಸವ ಮದುವೆಗಿದೀವಿ ಆಗ್ತಿಯೋ ಇಲ್ವೋ... ವ್ಯಾಳೆಕ್ಕೆ ಸರಿಯಾಗಿ ಆಗಿಬಿಡ್ಬೇಕು’ ಅಂದಿದ್ದಕ್ಕೆ ‘ಮನೇಲಿ ಅಪ್ಪ, ಅವ್ವ ಹುಡುಗಿ ಹುಡುಕುತ್ತಿದ್ದಾರೆ ಅವ್ರು ಒಪ್ಪಿದ್ರೆ ಆತು’ ಎಂದಿದ್ದ. ಆ ಮಾತೊಂದು ಕಿವಿಗೆ ಬೀಳುತ್ತಲೇ ಗೌರಕ್ಕ ಯಾರಕಡೆಯಿಂದ ಕೇಳಿಸಬೇಕೆಂದು ಲೆಕ್ಕ ಹಾಕಿದ್ದಳು. ಬಸವಣ್ಣೆಪ್ಪನಿಗೆ ತಿಳಿಸೋಣವೆನಿಸಿತು ಆದರೆ ಹಗ್ಗಕೊಟ್ಟು ಕೈ ಕಟ್ಟಿಸಿಕೊಂಡಗಾಗುತ್ತೆ ಅನ್ನಿಸಿ ಸುಮ್ಮನಾದಳು. ಅದಕ್ಕೆ ಕಾರಣ ನಾಕು ತಿಂಗಳ ಹಿಂದೆ ಬಸವಣ್ಣೆಪ್ಪ ತನ್ನ ಮಗನಿಗೆ ಇಮ್ಲಿಯನ್ನು ಕೇಳಿದ್ದನು. ಮುಲಾಜಿಗೆ ಬೀಳದ ಗೌರಕ್ಕ ‘ತ್ಯಗಿ ಅಣ್ಣಯ್ಯ ನಾವು ಇನ್ನೂ ಎಲ್ಡು ವರ್ಷ ಮಗಳ ಮದುವಿ ಮಾಡಲ್ಲ. ಲಗ್ಣ ಮಾಡೋಕೆ ನಮ್ಮತ್ರ ದುಡ್ಡು ಎಲ್ಲೇತಿ’ ಎಂದಿದ್ದಳು. ‘ನೀನೇನು ಕೊಡ್ಬೇಡ ಗೌರಕ್ಕ ನಾವೆ ಖರ್ಚಾಕಿ ಲಗ್ಣ ಮಾಡ್ಕೋತೀವಿ’ ಅಂದಿದ್ದಕ್ಕೆ ‘ನೀನೇನೋ ಹೇಳ್ತಿ ಅಣ್ಣಯ್ಯ ಬರಿ ಕೊಳ್ಳಲ್ಲಿ ಮನಿಮಗಳ ಕಳಿಸೋಕ್ಕಾಗುತ್ತಾ ನಾಕು ತೊಲಿ ಬಂಗಾರನಾದ್ರು ಮೈ ಮೇಲೆ ಹಾಕೋದು ಬೇಡ್ವಾ. ಇನ್ನು ಸಿದ್ದಬಸವನ ಮದುವಿ ಸಾಲನೇ ತೀರಿಲ್ಲ ಅಂತದ್ರೋಳಗೆ ಇವಳ ಲಗ್ಣ ಹ್ಯಾಂಗ ಮಾಡ್ಲಿ’ ಎಂದು ಸಾಗು ಹಾಕಿದ್ದಳು. ಆದ್ದರಿಂದ ಬಸವಣ್ಣೆಪ್ಪನ ಬದಲು ಈ ಕಾರ್ಯ ಸಾಧನೆಗೆ ಸರ್ವಕ್ಕನೆ ಸೂಕ್ತ ಅಂತ ತೀರ್ಮಾನಿಸಿ ಅವಳ ಮುಖಾಂತರ ಸುರುಗಿಹಳ್ಳಿ ಸೋಮಣ್ಣನಿಗೆ ಗಂಡು ಗೊತ್ತು ಮಾಡಲು ತಿಳಿಸಿದ್ದಳು. ಒಂದು ಸೋಮವಾರ ಸರ್ವಕ್ಕನೆ ಮುಖತ ಸುರುಗಿಹಳ್ಳಿಗೆ ಹೋಗಿ ಸೋಮಣ್ಣನನ್ನು ಕಂಡು ವಿಷಯ ಪ್ರಸ್ತಾಪಿಸಿದ್ದಳು. ‘ಗೌರಕ್ಕನ ಬಗ್ಗೆ ಕೇಳಿದ್ದೇನೆ ಯಾರು ತಂಟೆಗೂ ಹೋಗದೆ ತಾವಾತು ತಮ್ಮ ಬದುಕಾತು ಅಂತೇಳಿ ದುಡಿಮೆ ಮಾಡ್ಕೆಂದು ಹೋಗ್ತಾರ ಅಂತೋರು ಮನೆಯಿಂದ ಹೆಣ್ಣು ತರೋದು ನಮ್ಮ ಭಾಗ್ಯನೇ ಸರಿಬಿಡು ಸರ್ವಕ್ಕ. ಸೋಮಾರ ಗುರುಬಸವನ್ನ ಕಳಿಸುತ್ತೇನೆ ಹೆಣ್ಣು ತೋರಿಸಲು ಹೇಳು’ ಅಂತ ಒಪ್ಪಿ ಹೇಳಿಕಳಿಸಿದ್ದ. ಅದರಂತೆ ಗುರುಬಸವನು ಶಾಸ್ತ್ರವೆಂಬತೆ ನೋಡಿ ಬಂದನು. ಅಂದು ಗೌರಕ್ಕ ಮದುವೆ ವಿಚಾರಿಸದಾಗಲೇ ಇಮ್ಲಿನ್ನೊಮ್ಮೆ ನೋಡಿದ್ದ. ಪ್ರೀತಿ ಕಣ್ಣು ಎಳೆತನದಲ್ಲಿದ್ದರಿಂದ ಮನಸು ಸಮ್ಮತಿಸಿರಲಿಲ್ಲ. ಈಗ ಎಲ್ಲವೂ ಪಕ್ವವಾಗಿತ್ತು. ಅದರಂತೆ ಎರಡು ಕಡೆಯವರು ಮಾತಿಗೆ ಕುಂತು ಮಾತುಕತೆಯಾಡಿದರು. ಹೆಣ್ಣಿನ ಕಡೆಯವರು ನಾಕು ತೊಲ ಬಂಗಾರ ಹಾಕಿ ಲಗ್ನ ಮಾಡಿಕೊಡುವುದು ಗಂಡಿನವರು ವಧುವಿಗೆ ನೀಡಬಹುದಾದ ಕಾಲ್ಗೆಜ್ಜೆ, ಸುತ್ತುಗಾಲುಂಗುರ ಧಾರೆ ಸೀರೆ ನೀಡುವುದು ಅಂತ ಮಾತಾಗಿ ಶಿವರಾತ್ರಿ ಅಮಾವಾಸ್ಯ ಮುಗಿದು ಮುಂದಿನ ಅಮಾವಾಸ್ಯಯೊಳಗೆ ಲಗ್ನ ಮುಗಿಸಲು ಒಪ್ಪಿ ಹಾಲುಬಾನ ಉಂಡು ಹೋಗಿದ್ದರು.

ಮಾತುಕತೆ ಆದಮೇಲೆ ಇಮ್ಲೀಗೂ ಗುರುಬಸವನಿಗೂ ಒಂದು ಹದದ ಸಲುಗೆ ಬೆಳೆದಿತ್ತು. ಇಬ್ಬರು ಸುರುಗಿಹಳ್ಳಿ ಈರಣ್ಣನ ಕೊಂಡ ಜಾತ್ರಿಲಿ ಭೇಟಿಯಾಗಿದ್ರು. ಕೈ ಕೈ ಹಿಡಿದುಕೊಂಡು ಜೊತೆಗೆ ಕೆಂಡ ಹಾಯ್ದು ಈರಣ್ಣನಿಗೆ ಅಡ್ಡಬಿದ್ದಿದ್ದರು. ಸಂಜೆ ಹೋರಡಬೇಕೆನ್ನುವಾಗ ಗುಟ್ಟಾಗಿ ತುಟಿಗೆ ತುಟಿ ಮುತ್ತು ಹಂಚಿಗೆಂದು ತಿಂದಿದ್ರು. ಆದ್ದರಿಂದಲೇ ರಾಶಿ ಸುಟ್ಟ ದಿನ ಲಗ್ನದ ಖರ್ಚಿಗೆ ದುಡ್ಡಿಲ್ಲದಿದ್ರೂ ನಾನೆ ಖರ್ಚಾಕಿ ಮಾಡಕೇಂತಿನಿ ಅಂತ ಗುರುಬಸವ ಭರವಸೆ ನೀಡಿದ್ದ. ‘ಸುರುಗಿಹಳ್ಳಿ ಬೀಗರು ಬಂದ್ರು ನೋಡು’ ಅನ್ನೋದು ಕಿವಿಗೆ ಬೀಳುತ್ತಲೇ ಕೋಣೆಯಲ್ಲಿ ಸೊರಗುಟ್ಟುತ್ತಿದ್ದ ಇಮ್ಲಿ ನಗೆಯಗೆಜ್ಜೆ ಕಟ್ಟಿ ಬಾಗಿಲಿಗೆ ಓಡಿ ಬಂದಿದ್ದಳು. ಗುರುಬಸವನ ಸಣ್ಣದೊಂದು ನೋಟವೇ ನಾ ನಿನ್ನ ಬಿಡಲಾರೆ ಎಂಬುದನ್ನ ಅಂದು ಸಾರಿತ್ತು.

***

ಬಸವಣ್ಣೆಪ್ಪನ ಮಗ ಗಾಜಿಗೌಡನೆ ಗೌರಕ್ಕನ ಜೋಳದ ರಾಶಿಗೆ ಬೆಂಕಿಯಿಟ್ಟಿದ್ದು ಅಂತ ಚಂಪಣ್ಣ ಊರಲ್ಲಿ ಹೂಸು ಬಿಟ್ಟನು. ಹೂಸು ಬಿಟ್ಟರೆ ನಾರದೇ ಇರುತ್ತದೆಯೇ? ಊರು ತುಂಬಾ ಹಬ್ಬಿ ಗುಲ್ಲೆದ್ದಿತು. ಊರಲ್ಲಿ ಯಾರಿಗೆ ಕಷ್ಟ ಅಂದ್ರು ಬಸವಣ್ಣೆಪ್ಪ ಊರುಗೋಲಾಗುತ್ತಿದ್ದ. ತನ್ನ ಮಗನೆ ಬೆಂಕಿಯಿಟ್ಟಿದ್ದು ಅಂತಾ ಕೇಳಿದಾಗ ಮರಿ ಮರಿ ಮರಿಗಿಬಿಟ್ಟನು. ಹೆಣ್ಣು ಕೊಡಲಿಲ್ಲ ಅಂತ ಗೌರಕ್ಕನ ಮ್ಯಾಲ ಬ್ಯಾಸರವಿತ್ತಾದರೂ ಮಗಳ ಲಗ್ನಕ್ಕೆ ವಿಘ್ನಮಾಡೋ ಮನುಷ್ಯನಂತೂ ಅಲ್ಲವೇ ಅಲ್ಲ. ಸುದ್ದಿ ತಿಳಿದಕೂಡಲೆ ಧಮ್ಮಕಟ್ಟಿಕೊಂಡು ಗೌರಕ್ಕನ ಮನೆಗೆ ಓಡಿ ಬಂದನು. ‘ನನ್ನ ಹೊಟ್ಯಾಗ ಹುಟ್ಟಬಾರದ ಗೂಳಿ ಹುಟ್ಟೇತಿ. ಏನು ಮಾಡೋಣ ನಮ್ಗೆಲ್ಲಾ ಬಗ್ಗಲ್ಲ. ಮೂಗುದಾರ ಹಾಕಿ ಬಿಗಿಯೋಣ ಅಂದ್ರ ಎಲ್ಲಿ ಹೆಣ್ಣು ಹತ್ತುವಲ್ಲವು. ನಂಗೂ ವಯಸ್ಸಾತು ಮನೆಗೆ ಒಂದು ಹೆಣ್ಣು ದಿಕ್ಕಿಲ್ಲ. ಸೊಸೆ ಕೈಲಿ ಬಿಸಿ ಮುದ್ದಿ ಮುರಿಯೋ ವ್ಯಾಳೇ ಅದ್ಯಾವಾಗ ಬರ್ತದೋ...’ ಎಂದು ಗೋಣು ಕೆಳಹಾಕಿ ಉಸಿರುಗಳಿದ. ‘ದೊಡ್ಡ ತೇಲಿಮುಳ್ಳು ಅದಾನ ಯವ್ವ ಅವನು... ಅವನ ಚಾಳಿನೇ ಅಂತದ್ದು. ಆಕಿ ಹಡದು ನನ್ನ ಹೆಗಲಿಹಾಕಿ ಹೋದಳು. ಈಗ ನೋಡು... ಅನ್ನಬೋಸೋದು ನಾನು... ಏನು ಮಾಡೋಣ’ ಹೊಟ್ಯಾಗಿನ ಸಂಕಟ ಬುಗಿಲೆಳುತಿತ್ತು. ಸುಟ್ಟ ರಾಶಿಯ ಬೂದಿಗುಡ್ಡೆಯಲ್ಲಿ ನಾಯಿಯೊಂದು ಕೆದರಿ ಕೆದರಿ ಮುದುರಿಕೊಂಡು ಮಲಗುವ ಯತ್ನದಲ್ಲಿತ್ತು. ಮೂಡುಗಾಳಿಗೆ ಕೆದರಿದ ಬೂದಿ ಹಾರಿಬಂದು ಕುಳಿತವರ ಮುಖಕ್ಕೆ ರಾಚಿತು. ಇದ್ರೌನು ಗುಡ್ಡಿ ಕೇದ್ರತೈತಿ ಅಚ್ಚಾ ಎಂದು ಸಿದ್ದಬಸವ ಕಲ್ಲು ಬೀರಿದ ಗುರ್ರು ಎಂದು ತಿರುಗಿತು. ಪೆಚ್ಚಾಗಿ ಬಂದ ಕುಳಿತ. ‘ನೋಡು ಮಾದೇವ ಕೈಗೆ ಬಂದ ಬೆಳೆ ಸುಟ್ಟೋತು ಅಂತ ಚಿಂತಿಮಾಡಬ್ಯಾಡ. ಮಗಳ ಮದ್ವಿ ಮುಂದಿಟ್ಟುಗೊಂಡು ತೇಲಿಮ್ಯಾಲೆ ಕೈಹೊತ್ತು ಕುಂತ್ರೆ ಹ್ಯಾಂಗ ಹೇಳು? ಗೊತ್ತು ಮಾಡಿದ ಲಗ್ನ ನಿಲ್ಸೋದು ಬ್ಯಾಡ ಅದೇನು ಲಗ್ನದ ಖರ್ಚು ನಾ ಕೊಡ್ತೀನಿ. ಲಗ್ನ ಮಾಡಿ ಮುಗಿಸೋಣ’ ಎಂದು ಬಸವಣ್ಣೆಪ್ಪ ಭರವಸೆಯಿತ್ತನು. ಗೌರಕ್ಕ ಮಾದೇವ ಹರ್ತಿಕಲ್ಲಿನಂತೆ ಕುಂತಿದ್ದರು.

***

ಉಪಸಂಹಾರ: ಗುರುಬಸವ ಮತ್ತು ಇಮ್ಲಿಯ ಮದುವೆ ಅತ್ಯಂತ ಸರಳವಾಗಿ ಎಲ್ಲರ ಸಮ್ಮುಖದಲ್ಲಿ ನಡೆಯಿತು. ಇಂಥ ಅಪರೂಪದ ಮದುವೆಯನ್ನು ಸುರುಗಿಹಳ್ಳಿ ಮತ್ತು ಹಾದ್ರಿಹಳ್ಳಿ ಜನರು ಇದುವರೆಗೂ ನೋಡಿಯೇ ಇರಲಿಲ್ಲ. ಆದರೆ ಇಂಥ ಅಪರೂಪದ ವಿವಾಹಕ್ಕೆ ಕಾರಣರಾದವರು ಮಾತ್ರ ಶ್ರೀನಿವಾಸಯ್ಯನವರು. ‘ಸಮಾಜದಲ್ಲಿ ಪರಿವರ್ತನೆ ತರಬೇಕಾದರೆ ಮೊದಲು ನಾವು ಅಳವಡಿಸಿಕೊಳ್ಳಬೇಕು. ಅಂಥಯೇ ನೀನ್ಯಾಕೆ ಮಂತ್ರ ಮಾಂಗಲ್ಯ ಆಗಬಾರದು’ ಎಂದು ಕೇಳಿದರು. ಕುವೆಂಪು ಸಾಹಿತ್ಯದಿಂದ ಪ್ರೇರಿತನಾಗಿದ್ದ ಗುರುಬಸವ ಒಪ್ಪಿಗೆ ಸೂಚಿಸಿದ. ಗೌರಕ್ಕ ಮತ್ತು ಮಾದೇವ ಕೂಡಾ ಸಮ್ಮತಿ ನೀಡಿದರು. ಶ್ರೀನಿವಾಸಯ್ಯನವರೇ ಮುಂದೆ ನಿಂತು ಗುರುಬಸವನಿಗೂ ಇಮ್ಲಿಗೂ ಮಂತ್ರ ಮಾಂಗಲ್ಯ ಓದಿಸಿದರು. ಎಲ್ಲರೂ ಶುಭ ಹಾರೈಸಿದರು. ಗುರುಬಸವ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದನು. ಶ್ರೀನಿವಾಸಯ್ಯನವರು ಹೇಳಿದಂತೆ ಗುರುಬಸವ ರಾಜಕೀಯವನ್ನು ಅಲಕ್ಷ್ಯ ಮಾಡಲಿಲ್ಲ ಬದಲಾಗಿ ಸಮಾಜ ಪರಿವರ್ತನೆಯ ಸಾಧನವನ್ನಾಗಿಸಿಕೊಂಡು ಮಾದರಿಯಾದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT