ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಕಾಲಕ್ಷೇಪ

Last Updated 20 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ನಿದ್ದೆಗಣ್ಣಲ್ಲಿ ಮಂಚದಿಂದ ಇಳಿದು ಕಿಟಕಿಗೆ ಹೊದಿಸಿದ ಪರದೆಯನ್ನು ಸರ್‍ರನೆ ಎಳೆದಾಗ ಸೂರ್ಯನ ಎಳೆಯ ಬಿಸಿಲು ಆಕೆಯ ಮುಖವನ್ನು ಜಗ್ಗನೆ ಬೆಳಗಿತು. ಜಗಮಗಿಸುವ ಸೂರ್ಯನ ಕಿರಣಗಳ ಮೂಲಕ ತೂರಿ ಬಂದ ಆ ದಿವ್ಯ ಬೆಳಕಿಗೆ ಆಕೆಯ ಕತ್ತಲಿನ ಕಣ್ಣುಗಳು ತಕ್ಷಣಕ್ಕೆ ಹೊಂದಿಕೊಳ್ಳದೇ ತೊಳಲಾಡಿದವು. ತುಸು ಹೊತ್ತು ಸೈರಿಸಿ ಬೆಳಕನ್ನು ಛೇದಿಸಿ ಕಣ್ರೆಪ್ಪೆ ತೆರೆದಾಗ ಎಲ್ಲವೂ ಮಂಜು ಮಂಜಾಗಿ ಕಂಡಿತು. ತನ್ನ ಕೈಗಳ ಮುಷ್ಠಿಯಿಂದ ಎರಡೂ ಕಣ್ಣಗಳನ್ನು ನಯವಾಗಿ ಉಜ್ಜಿ ಬಾಹ್ಯ ಜಗತ್ತಿನ ಜೀವಂತಿಕೆಯನ್ನು ಲಕ್ಷಿಸತೊಡಗಿದಳು.

ದೂರದಲ್ಲೆಲ್ಲೋ ಮುಗಿಲು ಸೀಳಿಕೊಂಡು ಹಾರುತ್ತಿದ್ದ ವಿಮಾನ, ನಾಮುಂದು ತಾಮುಂದು ಎಂದು ಮುನ್ನುಗ್ಗುತ್ತಿರುವ ವಾಹನಗಳ ದಟ್ಟನೆ, ಹೊಟ್ಟೆ ಹೊರೆಯುವದಕ್ಕಾಗಿ ವಿವಿಧ ವೃತ್ತಿ ನೆಚ್ಚಿಕೊಂಡು ಕಾರ್ಯಮಗ್ನರಾದ ಜನರ ಗೌಜು-ಗದ್ದಲ, ಸಂದು ಸಿಕ್ಕಲ್ಲಿ ಗೂಡು ಕಟ್ಟಿಕೊಂಡು ಚಿಲಿಪಿಲಿ ಗೈಯುತ್ತಿರುವ ಹಕ್ಕಿಪಕ್ಷಿಗಳು-ಹೀಗೆ ಎಲ್ಲವುದರ ದಿನದ ಆರಂಭದ ಚಟುವಟಿಕೆಯ ಸದ್ದು ಕಿವಿಗೆ ತಾಕತೊಡಗಿತು. ಸಣ್ಣಗೆ ಸುಳಿಯುತ್ತಿದ್ದ ಆಹ್ಲಾದಕರ ಗಾಳಿಯ ಸೆಳತಕ್ಕೆ ಸೋತು ಹಾರಾಡುತ್ತಿದ್ದ ತನ್ನ ಮಂಗುರುಳುಗಳನ್ನ ಕಿವಿಯ ಸಂದಿಯಲ್ಲಿ ಸಿಕ್ಕಿಸುತ್ತಾ ಆ ಕಿಟಕಿಯ ಸರಳುಗಳ ಮೇಲೆ ಬೆರಳಾಡಿಸುತ್ತಾ ತನ್ನ ವರ್ತಮಾನದ ಬದುಕಿನ ದಿಗಿಲುಗಳನ್ನು ನೆನೆದು ಹಳಹಳಿಸುತ್ತಾ ಹಾಗೆಯೇ ನಿಂತಳು. ನಿಂತು ನಿಂತು ಕಾಲುಗಳು ಜಡಗೊಳ್ಳತೊಡಗಿದಾಗ ಅಲ್ಲಿಂದ ಕಾಲ್ಕಿತ್ತು ಮಂಚದ ಪಕ್ಕದಲ್ಲಿರುವ ಆರಾಮ್ ಕುರ್ಚಿಯ ಮೇಲೆ ಕುಳಿತು ಮೈಮುರಿದು ಧೀರ್ಘವಾಗಿ ಆಕಳಿಸಿದಳು. ಆ ಕುರ್ಚಿಯ ಹಿಂಬದಿಗೆ ತಲೆ ಆನಿಸಿ ಕಣ್ಣು ಮುಚ್ಚಿದಾಗ ತುಸು ಜಂಪು ಹತ್ತಿತು.

ಕಾಲಹರಣ ಮಾಡುವುದೊಂದೇ ತನ್ನ ಜೀವನದ ಪರಮ ಧ್ಯೇಯ ಎಂಬಂತೆ ದಿನದ ಇಪತ್ನಾಲ್ಕು ತಾಸುಗಳಲ್ಲಿನ ಬಹು ಸಮಯವನ್ನು ಹೀಗೆಯೇ ನಿರ್ಲಿಪ್ತ ಭಾವದಿಂದ ಕಳೆಯುವದನ್ನು ಇತ್ತೀಚಿಗೆ ರೂಢಿ ಮಾಡಿಕೊಂಡಿದ್ದಾಳೆ. ಒಮ್ಮೊಮ್ಮೆ ತನ್ನೂರಿನ ಪರಿಸರ ಮತ್ತು ತನ್ನ ಬಾಲ್ಯ, ಅಪ್ಪನ ಗದರುವಿಕೆ, ಅಕ್ಕನ ಅಕ್ಕರೆ ಹೀಗೆ ಮಧುರ ನೆನಪುಗಳು ಸುರಳಿ ಸುರುಳಿಯಾಗಿ ಬಿಚ್ಚಿಕೊಂಡಾಗ ಅವುಗಳನ್ನು ಹರಡಿಕೊಂಡು ಸಂಭ್ರಮಿಸುತ್ತಾಳೆ. ಮತ್ತೊಮ್ಮೆ ‘ನನ್ನ ಪಾಲಿಗೆ ಯಾರೂ, ಯಾವುದೂ ಉಳಿಯಿದೇ ಬರೀ ನೆನಪುಗಳಾಗಿ ಕೊಡುವ ಕ್ಷಣಿಕ ಸುಖ ಯಾರಿಗೆ ಬೇಕು? ಈ ಹಾಳಾದ ನೆನಪುಗಳೊಂದಿಗೆ ಎಷ್ಟು ದಿನ ಬದುಕಲು ಸಾಧ್ಯ? ಅಷ್ಟಕ್ಕೂ ನಾನು ಬದುಕಿದ್ದು ಸಾಧಿಸುವುದೇನಿದೆ? ನನ್ನ ಬದುಕಿನಲ್ಲಿ ಎಲ್ಲವೂ ಮುಗಿದಿದೆ. ಇನ್ನೇನೂ ಉಳಿದಿಲ್ಲ’ ಅಂದುಕೊಳ್ಳುತ್ತಾಳೆ. ಎಲ್ಲದಕ್ಕೂ ಅಂತ್ಯ ಅನ್ನೋದು ಇದ್ದೇ ಇರುತ್ತದೆ ಎಂಬ ಸತ್ಯದ ಕಿಡಿ ಹೊತ್ತಿಕೊಂಡಾಗಲೇ ತನ್ನ ಕಷ್ಟ-ನಷ್ಟಗಳಿಗೂ ಕೂಡ ಒಂದು ಅಂತ್ಯವಿದೆ ಎಂದು ಜಿನುಗುವ ಜೀವನೋತ್ಸಾಹವನ್ನು ದಟ್ಟವಾಗಿಸಿಕೊಳ್ಳುತ್ತಾಳೆ.

ತಾನೂ ಎಲ್ಲರಂತೆ ಬದುಕಿನ ರಭಸ, ರಾದ್ಧಾಂತ, ರಗಳೆಗಳನ್ನ ನಿಗ್ರಹಿಸಿ ಸಿಹಿ-ಕಹಿಗಳನ್ನ ಸವಿಯುವ ಮೂಲಕ ಬದುಕು ಕರಗಿಸಿ ಪಂಚಭೂತಗಳಲ್ಲಿ ಲೀನವಾಗುವ ಕನಸು ಕಾಣುತ್ತಾಳೆ. ಅದರ ಬೆನ್ನಲ್ಲೇ ಸದಾ ಜೇನು ನೊಣದಂತೆ ಮುತ್ತಿಕೊಂಡಂತಿದ್ದ ತನ್ನೂರಿನ ಗಲ್ಲಿಯ ತನ್ನ ಮನೆಯ ಎದುರಿಗಿದ್ದ ಆ ಕುರುಚಲು ಗಡ್ಡದ, ನೀಯಕಾಯದ ನಿರಂತರ್‌ನನ್ನು ನೆನಪಿಸಿಕೊಳ್ಳುತ್ತಾಳೆ. ಅವನೊಂದಿಗೆ ವ್ಯಯಿಸಿದ ರಸನಿಮಿಷಗಳನ್ನೆಲ್ಲಾ ಸಂಕಲಿಸುತ್ತಾ ತನ್ನ ಎದೆಯೊಳೆಗೆ ಹೊಸ ಜಗತ್ತೊಂದನ್ನು ಸೃಷ್ಠಿಸಿಕೊಂಡು ಸುಖಿಸುತ್ತಾಳೆ. ಆಗ ಇಂದೋ, ನಾಳೆಯೋ ನಿರಂತರ್ ಆಕೆಯನ್ನು ಹುಡುಕಿಕೊಂಡು ಬಂದೇ ಬರುತ್ತಾನೆ ಅನ್ನುವ ಭರವಸೆ ಹೆಪ್ಪುಗಟ್ಟುತ್ತಾ ಹೋಗುತ್ತದೆ.

ಮತ್ತೊಬ್ಬರಿಗಾಗಿ ಹೊಟ್ಟೆಭಾರ ಹೊರುವ ಈ ಕಾಯಕದಿಂದ ಮುಕ್ತಿಗೊಂಡು ಆತನ ನಗ್ನ ತೋಳಿಗೆ ತಲೆ ಆನಿಸಿ ಎದೆಯ ಮೇಲಿನ ರೋಮಗಳೊಳಗೆ ಕೈಯ್ಯಾಡಿಸುತ್ತಾ ಪವಡಿಸಬೇಕೆಂಬ ಬಯಕೆ ಬಲಗೊಳ್ಳುತ್ತದೆ. ಇಂತಿಷ್ಟು ದಿನ, ಇಂತಿಷ್ಟು ಸಂಬಳ, ಈ ಥರದ ಸೌಲಭ್ಯಗಳು, ಅವಶ್ಯಕವಾಗಿ ಪಾಲಿಸಲೇಬೇಕಾದ ನೀತಿ-ನಿಯಮಗಳನ್ನು ಒಳಗೊಂಡ ಒಪ್ಪಂದ ಪತ್ರಕ್ಕೆ ಸಹಿ ಹಾಕುವಾಗ ನಡುಗುತ್ತಿದ್ದ ತನ್ನ ಕೈ ನೆನಪಾಗುತ್ತದೆ. ತನ್ನ ಎಡಬಲ ಕೈ ಬೆರಳುಗಳನ್ನು ಒಂದೊಂದಾಗಿ ಮಡಚಿ ಇಷ್ಟು ವರ್ಷ-ತಿಂಗಳು-ದಿನವೆಂದು ಲೆಕ್ಕಹಾಕಿ ಈ ಕಾಯಕದಿಂದ ಮುಕ್ತಿ ಹೊಂದುವ ದಿನವನ್ನು ಎದುರು ನೋಡುತ್ತಾ ನಿರಾಶೆಯಾಗುತ್ತಾಳೆ. ತನ್ನ ಬಾಳು ಸಿಹಿಯೋ, ಕಹಿಯೋ ಒಟ್ಟಿನಲ್ಲಿ ಸದ್ಯಕ್ಕೀಗ ಕಾಲ ಕಳೆವುದೊಂದೇ ಹಾದಿ ಎಂದು ಸುಮ್ಮನಾಗುತ್ತಾಳೆ.

‘ಅಕ್ಕಾ’ ಎಂದು ಯಾರೋ ಕೂಗಿದಂತಾಗಿ ಕೇಳಿಸಿ ಕುರ್ಚಿಯಲ್ಲಿ ನಿದ್ರಿಸುತ್ತಿದ್ದ ಆಕೆ ಥಟ್ಟನೆ ಎಚ್ಚೆತ್ತಳು. ಪುನಃ ಆ ಧ್ವನಿಗಾಗಿ ಶಾಂತಚಿತ್ತದಿಂದ ತಟಸ್ಥವಾಗಿ ಕುಳಿತು ಕಿವಿ ನಿಮಿರಿಸಿದಾಗ ಧ್ವನಿ ಬಹಳ ಹೊತ್ತಿನವರೆಗೂ ಮೊಳಗಲೇ ಇಲ್ಲ. ಈಕೆಯೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲ್ಲಿಲ್ಲ. ಹಗಲಿರುಳಿನ ಹಂಗಿಲ್ಲದ ತಿರುಗುವ ಆ ಗಡಿಯಾರದ ಮುಳ್ಳುಗಳು ಆಕೆಯ ನೋಟಕ್ಕೆ ಗಂಟೆ ಒಂಬತ್ತೆಂದು ಬಿತ್ತರಿಸಿದಾಗ ಕೆಲಸದಾಕೆ ರೇಣು ನೆನಪಾದಳು. ಎಂದಿನಂತಾಗಿದ್ದರೆ ಇಷ್ಟೊತ್ತಿಗೆ ರೇಣು ‘ಅಕ್ಕಾ’ ಎಂದು ಬಾಗಿಲಿನಿಂದಲೇ ಕೂಗಿಕೊಂಡು ಕೈಬಳೆಗಳನ್ನ ಕಿಂಕಿಣಿಸುತ್ತಾ ಒಳಬರುತ್ತಿದ್ದಳು. ಕುಶಲ ಕೇಳಿ ತನ್ನದೆಲ್ಲವನ್ನೂ ತೋಡಿಕೊಳ್ಳತ್ತಲೇ ನೊರೆಭರಿತ ಕಾಫಿ ಕೈಗಿಡುತ್ತಿದ್ದಳು. ಆದರೆ ಈ ದಿನ ಯಾಕೋ ಆಕೆಯ ಸುಳಿವೇ ಇಲ್ಲ. ಅದೊಂದು ಪಾಪದ ಹೆಣ್ಣು. ಉಸಿರಾಡುವ ಗಾಳಿಯೊಂದೇ ಉಚಿತವಾಗಿ ದೊರೆಯುವ ಈ ನಗರದಲ್ಲಿ ನಾಲ್ಕೈದು ಮನೆಯ ಕಸ ಮುಸುರಿ ಮಾಡಿ ಮಾತು ಕೇಳದ ಮಗನನ್ನ, ಸರಾಯಿ ಬಿಡದ ಗಂಡನನ್ನ ಎಗ್ಗಿಲ್ಲದೇ ಸಲಹುವ ಶ್ರಮಜೀವಿ ರೇಣು. ಆಕೆಗೆ ಹೋಲಿಸಿದರೆ ನನ್ನ ಬದುಕೂ ಹೆಚ್ಚು ಭಿನ್ನವಲ್ಲ! ನನ್ನದಷ್ಟೇ ಯಾಕೆ? ಈ ಜಗತ್ತಿನ ಯಾವ ಹೆಣ್ಣಿನ ಬದುಕು ಭಿನ್ನವಲ್ಲ. ಹೆಣ್ಣು ಅನ್ನುವ ವಸ್ತು ಆಯಾ ಪರಿಸರ-ಪರಿಸ್ಥತಿಗೆ ಅನುಗುಣವಾಗಿ ಒಂದಲ್ಲ ಒಂದು ರೀತಿಯಲ್ಲಿ ಶ್ರಮವಹಿಸುತ್ತಲೇ ಇರುತ್ತಾಳೆ. ಹೋಗಲಿ ಆ ಜೀವಕ್ಕೆ ಇವತ್ತು ಒಂದು ದಿನವಾದರೂ ವಿಶ್ರಾಂತಿ ಸಿಗಲಿ ಎಂದು ಕುರ್ಚಿಯಿಂದ ಮೇಲೆದ್ದಳು.

ಬೆಡ್‌ಲ್ಯಾಂಪ್‌ನ ಪಕ್ಕದಲ್ಲಿಟ್ಟಿದ್ದ ಮೊಬೈಲ್ ಆಗಾಗ ಶಬ್ಧ ಮಾಡಿ ಬೆಳಗಿನ ಹತ್ತಲವು ಸಂದೇಶಗಳನ್ನ ತನ್ನೊಳಗೆ ದಾಖಲಿಸಿಕೊಳ್ಳುತ್ತಿತ್ತು. ಟಿಪಾಯಿ ಮೇಲೆ ಅಷ್ಟಿಷ್ಟು ತಿಂದಿಟ್ಟಿದ್ದ ಬಿಸ್ಕತ್ತಿಗೆ ಸಣ್ಣ ಇರುವೆಗಳು ಸಾಲುಗಟ್ಟಿದ್ದವು. ರಾತ್ರಿ ಅಡುಗೆ ಕೆಲಸ ಮುಗಿಸಿ ಹೊರಡುವಾಗ ರೇಣು ತಂದುಕೊಟ್ಟಿದ್ದ ಉಗುರುಬೆಚ್ಚಗಿನ ಹಾಲು ತಣ್ಣಗಾಗಿತ್ತು. ಗೊಂಡಬಿ, ದ್ರಾಕ್ಷೀ, ಬಾದಾಮಿ, ಕೇರಬೀಜ ಹೀಗೆ ವಿವಿಧ ನಮೂನೆಯ ಒಣಗಿದ ಆಹಾರ ಪದಾರ್ಥಗಳಿಂದ ತುಂಬಿಕೊಂಡಿದ್ದ ಡಬ್ಬಿ ಸುಸ್ಥಿತಿಯಲ್ಲಿರಲಿಲ್ಲ. ಬೆಡ್ ಮೇಲಿದ್ದ ದಿಂಬು, ಬ್ಲ್ಯಾಂಕೆಟ್‌ ಮತ್ತು ಐದಾರು ಪುಸ್ತಕಗಳು ಅಡ್ಡಾದಿಡ್ಡಿಯಾಗಿ ಹರಡಿಕೊಂಡು ಈಡೀ ಕೋಣೆಗೆ ಗಲೀಜಿನ ಶೋಭೆ ತಂದಿದ್ದವು. ಇದೆಲ್ಲವನ್ನೂ ಕಂಡು ಮನಸ್ಸಿಗೆ ಪಿಚ್ಚೆನಿಸಿ ಸ್ವಚ್ಛಗೊಳಿಸಲು ಸದ್ಯಕ್ಕೆ ತನ್ನಲ್ಲಿ ಇಲ್ಲದ ಚೈತನ್ಯವನ್ನು ಹಳಿದುಕೊಳ್ಳುತ್ತಾ ಕೋಣೆಯ ಬಾಗಿಲು ತೆರೆದು ಹೊರಡಲು ಅಣಿಯಾದಾಗ ಮಂಚದ ಮೇಲಿದ್ದ ಎಲಿಜಿಬತ್ ಗಿಲ್ಬರ್ಟಳ ‘ಬಿಗ್ ಮ್ಯಾಜಿಕ್’ ಕಾದಂಬರಿ ತನ್ನ ಪುಟದ ಕಿವಿಯನ್ನು ತಿರುವಿಸಿಕೊಂಡು ಬೆಳಕಿಗೆ ಮೈಯೊಡ್ಡಿ ನುಲಿಯತ್ತಲಿತ್ತು. ಅದನ್ನ ಕಂಡ ತಕ್ಷಣ ಎತ್ತಿ ಎದೆಗೊತ್ತಿಕೊಂಡಾಗ ನಿರಂತರ್ ನೆನಪಾದ. ತಕ್ಷಣವೇ ಅದನ್ನ ಅಲ್ಲೇ ಎಸೆದು ಮುಂಜಾನೆಯ ದೇಹ ಶುಚಿಯ ಚಟುವಟಿಕೆಗಳಿಗೆ ಮುಂದಾದಳು.

ಪುಸ್ತಕ ಓದಿನ ಹಲವು ಖುಷಿಗಳನ್ನು ಎದರುಗೊಂಡಾಗ ತಪ್ಪದೇ ಆಕೆಗೆ ನಿರಂತರ್ ನೆನಪಾಗುತ್ತಾನೆ. ಹಾಗೆ ನೋಡಿದರೆ ಆಕೆಗೆ ಓದುವ ಹುಚ್ಚು ಹಚ್ಚಿದವನು ಅವನೇ! ‘ನಮ್ಮನ್ನು ನಾವು ಖುಷಿಯಾಗಿಟ್ಟುಕೊಳ್ಳಲು ಮನಸ್ಸಿಗೆ ಮುದ ನೀಡುವ ಹವ್ಯಾಸವೊಂದನ್ನು ರೂಢಿಸಿಕೊಳ್ಳಬೇಕು. ಈ ಪುಸ್ತಕ ಪ್ರಪಂಚದಲ್ಲಿ ಒಂದು ವಿಶಿಷ್ಟ ಸೆಳತವಿದೆ. ಪುಸ್ತಕಗಳೊಂದಿಗೆ ಒಡನಾಡುತ್ತಾ, ಅದರಲ್ಲಿನ ಪಾತ್ರಗಳ ಜೊತೆಗೆ ಮಾತನಾಡುವುದನ್ನು ಕಲಿತುಬಿಟ್ಟರೆ ಬೇರೆ ಪ್ರಪಂಚವೇ ಬೇಡವೆನಿಸುತ್ತದೆ’ ಎನ್ನುತ್ತಿದ್ದ ನಿರಂತರ್ ತನ್ನ ಓದುವ ಕುರಿತಾಗಿನ ಚಟುವಟಿಕೆಯಿಂದಲೇ ಆಕೆಯ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದ. ಎಲ್ಲರೂ ಹಳ್ಳಿ ಕೆಟ್ಟು ಪಟ್ಟಣ ಸೇರಿಕೊಂಡರೆ ನಿರಂತರ್ ಮಾತ್ರ ಹಳ್ಳಿಯ ಬಡಮಕ್ಕಳಿಗೆ ಪಾಠ ಮಾಡುವ ಮೂಲಕ ಸಮಾಜ ಸೇವೆ ಗೈಯ್ಯಲೆಂದು ಹಳ್ಳಿಗೆ ಬಂದಿದ್ದ. ನಿರಂತರ್‌ನ ಮನೆ ಈಕೆಯ ಮನೆ ಎದುರಿಗೆಯೇ ಇರುವದರಿಂದ ದಿನಕ್ಕೆ ಹತ್ತಾರು ಬಾರಿ ಇಬ್ಬರೂ ಎದುರುಗೊಂಡು ಪರಸ್ಪರ ಮುಗಳ್ನಗೆಯನ್ನು ವಿನಿಮಯಿಸುತ್ತಿದ್ದರೇ ಹೊರತು ಚೂರು ಮಾತನಾಡಿರಲಿಲ್ಲ. ಒಂದು ದಿನ ನಿರಂತರ್ ಆಕೆಯನ್ನು ಮಾತನಾಡಿಸುವ ಸಲುವಾಗಿಯೇ ಇನ್ನಿಲ್ಲದ ನೆಪ ಸೃಷ್ಠಿಸಿಕೊಂಡು ‘ನೋಡಿ... ಇವರೇ...’ ಎಂದು ತೊದಲಿಸುತ್ತಾ ಕೇಳಿಯೇ ಬಿಟ್ಟ ‘ನಿಮ್ಮ ಹೆಸರೇನು?’ ಅಂತ. ಆಕೆ ಮುಗುಳ್ನಗುತ್ತಾ ತಲೆ ನೆಲಕ್ಕಿಟ್ಟು ನೆಲದ ಮೇಲೆ ಹೆಬ್ಬೆರಳಿನಿಂದ ರಂಗೋಲಿ ಬಿಡಿಸುತ್ತಾ ನನ್ನ ಹೆಸರು ‘ಅಭಿಲಾಷಿ’ ಅಂತ ಸಂಕೋಚದಿಂದ ಹೇಳಿರಲಿಲ್ಲ. ಏಕೆಂದರೆ ದಿನವೂ ಒಬ್ಬರಿಗೊಬ್ಬರೂ ಮುಖ ನೋಡುತ್ತಿದ್ದರಿಂದ ಚೂರೂ ಅಪರಚಿತ ಭಾವ ಅವರಿಬ್ಬರಲ್ಲೂ ಸೊಲ್ಲೆತ್ತಿರಲಿಲ್ಲ. ‘ಹೆಸರು ಚನ್ನಾಗಿದೆ ಇನ್ನೊಮ್ಮೆ ಹೇಳಿ’ ಎಂದು ಮತ್ತೇ ಮತ್ತೇ ಕೇಳಿ ತಿಳಿದ. ಆಕೆ ‘ಅ..ಭಿ..ಲಾ..ಷಿ’ ಎಂದು ಬಿಡಿಸಿ ಹೇಳಿದ್ದಳು. ಹೀಗೆ ಇಬ್ಬರ ಪಯಣ ಮುಂದುವರೆದು ಪುಸ್ತಕ, ವಿಚಾರ, ವಿಷಯಗಳೆಲ್ಲಾ ವಿನಿಮಯಗೊಳ್ಳುತ್ತಾ ಪ್ರೀತಿ ಮೊಳಕೆ ಒಡೆದಿತ್ತು. ಆದರೆ ಮುಂದೊಂದು ದಿನ ತಮ್ಮ ಪ್ರೀತಿಗೆ ಸಹಿಸಲಾಗದ ವಿಪತ್ತು ಬರುತ್ತದೆಂದು ಇಬ್ಬರೂ ಅಂದುಕೊಂಡಿರಲಿಲ್ಲ. ಅಪ್ಪನ ಬವಣೆ, ಅಕ್ಕ ಮಾಡಿದ ಆಘಾತದ ದುಃಖ, ನಿರಂತರ್‌ನ ನಿರ್ಮಲ ಪ್ರೀತಿ ಹೀಗೆ ಹಲವು ಸಂಘರ್ಷ, ವಿಷಯ, ವಿಷಾದಗಳೊಂದಿಗೆ ಸಾಂದ್ರತೆಯ ಬದುಕು ಸಾಗುಸುತ್ತಿದ್ದ ಅಭಿಲಾಷಿಗೆ ಎಲ್ಲವೂ ಇದ್ದೂ ಇಲ್ಲದಂತೆ ಬದುಕುವ ಅನಿವಾರ್ಯತೆ ಒದಗಿಬಂದಿದೆ. ಈ ಸಂಧರ್ಭದಲ್ಲಿ ಅಭಿಲಾಷಿ ರೂಢಿಸಿಕೊಂಡಿರುವ ಪುಸ್ತಕ ಓದುವ ಹವ್ಯಾಸವಷ್ಟೇ ಆಕೆಯ ಒಂಟಿತನಕ್ಕೆ ತುಸು ಜೊತೆಯಾಗುತ್ತಿದೆ.
ಅಪಾರ್ಟಮೆಂಟ್‌ಗೆ ಬಂದಾಗಿನಿಂದ ಎಲ್ಲದಕ್ಕೂ ರೇಣು ಇರುತ್ತಿದ್ದಳಾದ್ದರಿಂದ ಅಭಿಲಾಷಿ ಅಡುಗೆ ಮನೆಯ ಉಸಾಬರಿಗೇ ಹೋಗುತ್ತಿರಲಿಲ್ಲ. ಆಗಾಗ ಬೇಕಾಗುವ ಹಾಲು, ಕಾಫಿ, ಕಷಾಯ ಇನ್ನಿತರ ತಂಪು ಅಥವಾ ಬಿಸಿ ಪಾನೀಯಗಳಿಗೆ ಹೀಗೆ ಹೋಗಿ ಹೀಗೆ ಬಂದುಬಿಡುತ್ತಿದ್ದಳು. ರೇಣು ಇಲ್ಲದೇ ಹೋದಲ್ಲಿ ಹೊಟೇಲ್‌ನಿಂದ ಪಾರ್ಸೆಲ್ ತರಿಸುತ್ತಿದ್ದಳೇ ವಿನಃ ಊಟ, ತಿಂಡಿಯ ತಯಾರಿಗಾಗಿ ಅಡುಗೆ ಮನೆಯ ಗ್ಯಾಸ್ ಸ್ಟೋವನ್ನ ಹಚ್ಚುತ್ತಿರಲಿಲ್ಲ. ಬಾತ್‌ರೂಮ್‌ನಿಂದ ಹೊರಬರುತ್ತಾ ಇಷ್ಟಾತ್ತಾದರೂ ಸುಳಿಯದ ರೇಣುಳ ಬಗ್ಗೆ ಚಿಂತಿಸುತ್ತಾ ಆಲಸ್ಯದಿಂದಲೇ ಗ್ಯಾಸ್ ಸ್ಟೋವಿನ ಮುಂದೆ ಅಂತರ್ಮುಖಿಯಾಗಿ ನಿಂತಿದ್ದ ಅಭಿಲಾಷಿ ಕಾಫಿಗೆಂದು ಇಟ್ಟ ನೀರೂ ಬಿಸಿಯಾಗುವ ಲಕ್ಷಣ ಕಾಣದಿದ್ದಾಗ ನಿಡುಸುಯ್ದು ಬಗ್ಗಿ ನೋಡಿದಳು. ಸ್ಟೋ ಹೊತ್ತಿಸಿಯೇ ಇರಲಿಲ್ಲ. ತನ್ನ ಮಂಕುತನಕ್ಕೆ ತಲೆಕೊಡವಿಕೊಂಡು ಸ್ಟೋ ಹೊತ್ತಿಸಿ ಹಾಲಿಗಾಗಿ ಫ್ರಿಡ್ಜ್‌ನಲ್ಲಿ ತಡಕಾಡಿದಳು. ಹಾಲು ಸಿಕ್ಕಲೇ ಇಲ್ಲ. ಇರುವ ಎಲ್ಲಾ ಹಾಲಿಗೂ ಕೊಂಚ ಸಕ್ಕರೆ, ಕೇಸರಿ ಉದುರಿಸಿ ಉಗುರು ಬೆಚ್ಚಗೆ ಮಾಡಿ ಗ್ಲಾಸಿಗೆ ಸುರುವಿಕೊಂಡು ನಿನ್ನೆ ರಾತ್ರಿ ರೇಣು ತನಗಾಗಿ ತಂದಿಟ್ಟಿದ್ದ ಹಾಲು ತನ್ನ ಬೆಡ್‌ರೂಮ್‌ನಲ್ಲಿ ತಣ್ಣಗಾಗಿ ಕುಳಿತಿದ್ದು ನೆನಪಾಗಿ ಬೇಸರಿಸಿಕೊಂಡು ಧಗಧಗಿಸುತ್ತಿದ್ದ ಗ್ಯಾಸ್ ಸ್ಟೋವಿನ ನೀಲಿ ಜ್ವಾಲೆಯನ್ನು ನಂದಿಸಿ ಹಾಲ್‌ನಲ್ಲಿ ಬಂದು ಕುಳಿತಳು. ಕಾಫಿ ಸವಿಯಲೇಬೇಕು ಎಂದಾದರೆ ಅಭಿಲಾಷಿ ತನ್ನ ಫ್ಲ್ಯಾಟಿನ ಬಾಗಿಲ ತೆಗೆದು ದರದರನೇ ಮೆಟ್ಟಿಲಿಳಿದು ಅಥವಾ ಲಿಫ್ಟ್ ಬಳಸಿ ಕೆಳಗಿಳಿದು ಅಪಾರ್ಟಮೆಂಟಿನ ಎದುರಿಗಿರುವ ಅಂಗಡಿಯಲ್ಲಿ ಹಾಲು ತರಬೇಕಿತ್ತು. ಆದರೆ, ತನ್ನ ಐದು ತಿಂಗಳ ಹೊಟ್ಟೆಯನ್ನು ಹೊತ್ತು ಹಾಲು ತರುವ ಕೆಲಸ ಸುಲಭದ್ದಲ್ಲ. ಅದರಲ್ಲೂ ಈ ಅಪಾರ್ಟಮೆಂಟಿನ ಜನರ ಹಾಗೂ ಎದುರು ಮನೆಯ ಆ ಅಗಲ ಕುಂಕುಮದ ಹೆಂಗಸಿನ ಕಣ್ಣು ಯಾವತ್ತೂ ನನ್ನ ಹೊಟ್ಟೆಯ ಮೇಲೆಯೇ. ಹಾಲು ತರುವ ಸಮಯದಲ್ಲಿ ಅವರು ಸೂಸುವ ತಿರಸ್ಕಾರ ಭಾವದ ನೋಟ ನನ್ನಲ್ಲಿ ದುಃಖವನ್ನೇ ಹೆರುತ್ತದೆಯೇ ವಿನಃ ಖುಷಿಯನ್ನಲ್ಲ ಎಂದುಕೊಂಡು ನಿನ್ನೆಯ ಪೇಪರಿನ ಪುಟಗಳ ಮೇಲೆ ಕಣ್ಣಾಡಿಸಲು ಶುರುವಿಟ್ಟುಕೊಂಡಳು.

ಅಭಿಲಾಷಿ ಈ ಅಪಾರ್ಟಮೆಂಟಿಗೆ ಬಂದ ಹೊಸತರಲ್ಲಿ ಅಗಲ ಕುಂಕುಮದ, ಎದರು ಮನೆಯ ಆ ಹೆಂಗಸು ಹೊಸ ನರೆಹೊರೆಯುವರ ಬಂದಾಗ ಸೃಷ್ಠಿಯಾಗುವ ಸಹಜ ಕುತೂಹಲದೊಂದಿಗೆ ಆಗಮಿಸಿ ಮುಗಳ್ನಗುತ್ತಾ ಆತ್ಮೀಯವಾಗಿ ಮಾತನಾಡಿಸಿದ್ದಳು. ಫ್ಲ್ಯಾಟಿಗೆ ಸಂಬಂಧಿಸಿದ ಅನಕೂಲ ಮತ್ತು ಸಮಸ್ಯೆಗಳನ್ನು ಬಿಚ್ಚಿಡುತ್ತಾ ಐದ್ಹತ್ತು ನಿಮಿಷ ಕಳೆಯುವುದರಲ್ಲಿಯೇ ಅಭಿಲಾಷಿ ಜೊತೆಗಿದ್ದ ಕೆಂಪಗೆ, ನುಣ್ಣಗೆ ಇದ್ದ ಮಧ್ಯವಯಸ್ಸಿನ ಅಭಿನಂದನ್‌ನನ್ನು ಕಂಡು ‘ಇವರು ನಿಮ್ಮ ಮನೆಯವರಾ? ಎಂದು ಅಭಿಲಾಷಿಗೆ ಕೇಳಿದ್ದಳು. ಅಭಿಲಾಷಿಗೆ ಏನು ಹೇಳಬೇಕೆಂದು ತಿಳಿಯದೇ ಗಂಟಲು ಕಟ್ಟಿದಂತಾಗಿ ಕತ್ತು ನೆಲಕ್ಕಿಟ್ಟಳು. ಅಭಿನಂದನ್ ಆಕೆ ಎಸೆದ ಪ್ರಶ್ನೆಗೆ ಸಮಂಜಸ ಉತ್ತರ ಕೊಡದೇ ತಡವರಿಸಿದ್ದು ಆಕೆಯ ಕುತೂಹಲ ಗಾಢವಾಗಲು ಕಾರಣವಾಯಿತು. ಅಬ್ಬಬ್ಬಾ ಎಂದರೆ ಹುಡುಗಿಗೆ ವಯಸ್ಸು ಮೂವತ್ತಿದ್ದರಬಹುದು. ಹುಡಗನಿಗಂತೂ ನಲವತ್ತರ ಮೇಲೆಯೇ. ಇಷ್ಟು ವಯಸ್ಸಿನ ಅಂತರವಿರುವರು ನಿಜಕ್ಕೂ ಇವರು ಗಂಡ-ಹೆಂಡತಿ ಆಗಿರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಈಗಿನ ಯಾವ ಹುಡುಗನಾಗಲಿ, ಹುಡುಗಿಯಾಗಲಿ ವಯಸ್ಸಿನ ಹೆಚ್ಚು ಅಂತರವಿರುವ ಸಂಬಂಧವನ್ನು ಒಪ್ಪಿಕೊಳ್ಳುವದಿಲ್ಲ. ಕೆಲವೊಮ್ಮೆ ಹೇಳಲಿಕ್ಕೆ ಆಗುವುದಿಲ್ಲ; ಹಣ, ಆಸ್ತಿ-ಪಾಸ್ತಿಯ ಆಮಿಷವೂ ಮದುವೆಗೆ ಕಾರಣವಾಗಿರುತ್ತದೆ. ಅದೇನೇ ಇರಲಿ ಇವರಿಬ್ಬರ ಸಂಬಂಧ ಕೊಂಡಿ ತಿಳಿಯಲೆಂದೇ ಮರುದಿನ ಬೆಳಗ್ಗೆ ಇಲ್ಲ ಸಲ್ಲದ ನೆಪ ಹೊತ್ತು ಅಗಲ ಕುಂಕುಮದ ಆ ಹೆಂಗಸು ಅಭಿಲಾಷಿ ಮನೆಯ ಕದ ತಟ್ಟಿದ್ದಳು. ಮೊಗದಲ್ಲಿ ಸಣ್ಣ ನಗುವೊಂದನ್ನು ಅಂಟಿಸಿಕೊಂಡು ‘ಸಾಮಾನುಗಳನ್ನೆಲ್ಲಾ ಹೊಂದಿಸಿ ಆಯಿತಾ? ನಲ್ಲೀಲಿ ನೀರು ಬರ್ತಿದೆಯಾ? ಬಟ್ಟೆ-ಪಾತ್ರೆ ತೊಳೆಯೋ ಕೆಲಸದವ್ರು ಸಿಕ್ರಾ?’ ಎಂಬಿತ್ಯಾದಿ ಸಹಜ ಪ್ರಶ್ನೆಗಳನ್ನು ಕೇಳುತ್ತ ಹಾಲ್‌ನಲ್ಲಿರುವ ಸೋಫಾ ಮೇಲೆ ಕುಳಿತು ಅಭಿಲಾಷಿ ಕೊಟ್ಟ ಕಾಫಿ ಹೀರಿದಳು. ನಾಲಿಗೆಯ ಮೇಲಿನ ಕಾಫಿಯ ಪಸೆ ಆರುವ ಮುಂಚೆಯೇ ತಾನು ಬಂದಿರುವ ಕೆಲಸ ಮುಗಿಸಿಬಿಡಬೇಕೆಂಬ ಹುಕಿ ಬಂದು ‘ನಿನ್ನೆ ಒಬ್ರು ಗಂಡ್ಸು ಬಂದಿದ್ರಲ್ಲಾ ಅವರೇನಾ ನಿಮ್ಮ ಮನೆಯೋರು?’ ಎಂದು ಪ್ರಶ್ನೆಯನ್ನು ಹಾಕಿಯೇ ಬಿಟ್ಟಳು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸಂತೆ ಎಂದುಕೊಂಡ ಅಭಿಲಾಷಿ ಹೌದು ಎನ್ನುವಂತೆ ಕತ್ತು ಅಲ್ಲಾಡಿಸಿದ್ದಳು. ಆದರೂ ಆ ಹೆಂಗಸಿಗೆ ಅಭಿಲಾಷಿ ನೀಡಿದ ಉತ್ತರ ಸಮಾಧಾನ ನೀಡಿರಲಿಲ್ಲ. ಕೊರಳಲ್ಲಿ ತಾಳಿಯಾಗಲಿ, ಕಾಲಲ್ಲಿ ಕಾಲುಂಗುರವಾಗಲಿ ಅಥವಾ ಮದುವೆಯಾದ ಹೆಂಗಸಿನ ಇನ್ಯಾವುದೋ ಕುರುಹವಾಗಲಿ ಅಭಿಲಾಷಿಯಲ್ಲಿ ಕಾಣದಿದ್ದರಿಂದ ಆಕೆಯಲ್ಲಿ ಅಸಹನೆ ಹೆಚ್ಚಿತು. ಈಗಿನ ಹೆಂಗಸರೇ ಇಂಥವರು. ಮದುವೆ ಆದರ‍್ಯಾರೋ, ಮದುವೆ ಆಗದರ‍್ಯಾರೋ ಎಂದು ಗುರುತಿಸುವುದೇ ಕಷ್ಟ ಎಂದು ಗೊಣಗಿಕೊಳ್ಳುತ್ತಾ ಕೊನೆಪಕ್ಷೆ ಅಭಿಲಾಷಿಯತ್ತ ಸಣ್ಣ ನಗವೊಂದನ್ನು ವಿನಿಮಯಿಸಿದೇ ದಡ್ಡನೇ ಬಾಗಿಲು ಹಾಕಿಕೊಂಡು ಹೊರಟೇ ಹೋದಳು. ಆಕೆ ತೊರೆದ ದಾರಿಯುದ್ದಕ್ಕೂ ಅಭಿಲಾಷಿ ಅಸಹಾಕತೆಯ ನೋಟವೊಂದನ್ನು ನೆಟ್ಟಿದ್ದಳು.

ಗಂಟೆ ಹತ್ತಾಗುತ್ತಾ ಬಂದಿದ್ದರೂ ರೇಣುಳ ಸುಳಿವೇ ಇರಲಿಲ್ಲ. ಹೊತ್ತುಗಳೆಯಲು ನಿನ್ನೆಯ ಪೇಪರನ್ನೇ ತಿರುವಿ ಹಾಕುತ್ತಾ ಹಾಲ್‌ನಲ್ಲಿ ಕುಳಿತಿದ್ದ ಅಭಿಲಾಷಿಗೆ ಅಗಲ ಕುಂಕುಮದ ಆ ಹೆಂಗಸಿನ ಜೊತೆಗೆ ಅವಳಂಥಾ ಹತ್ತಾರು ಜನರು ಆಕೆಯ ಬಸಿರು ಪ್ರಶ್ನಿಸಿ ಹಿಯಾಳಿಸಿದವರ ಕತೆಗಳು ಆಕೆಯ ಪೇಪರಿನ ಓದಿನೊಂದಿಗೆ ಕಲಿಸಿ ಹೋಗಿದ್ದವು. ಆಗಾಗ ಇಂಥಹ ಅವಮಾನಕ್ಕೀಡಾದ ಅನೇಕ ಪ್ರಸಂಗಗಳು ಮರುಕಳಿಸಿ ಹೀಗೆ ಹಿಂಸಿಸುವುದು, ಆಕೆ ಮತ್ತಷ್ಟು ಮನನೊಂದು ಪರಿಹಾರಕ್ಕಾಗಿ ಯೋಚಿಸುವುದು ಸುಮಾರು ದಿನಗಳಿಂದ ನಡದೇ ಇತ್ತು. ಆದರೆ ಈ ದಿನ ಮಾತ್ರ ಅಭಿಲಾಷಿ ‘ನಾನು ನನ್ನ ಗರ್ಭಾಶಯವನ್ನು ಅಭಿನಂದನ್‌ಗೆ ಬಾಡಿಗೆಗೆ ನೀಡಿದ್ದೇನೆ! ನಾನು ಬಾಡಿಗೆ ತಾಯಿ!’ ಎಂದು ತನ್ನ ಮತ್ತು ಅಭಿನಂದನ್‌ನ ನಂಟಿನ ಗುಟ್ಟುನ್ನು ಗಟ್ಟಿಯಾಗಿ ಕೂಗಿಬಿಡಬೇಕು ಅಂದುಕೊಂಡುಬಿಟ್ಟಳು. ‘ಈ ನೆಲದ ಸಾಂಪ್ರದಾಯಿಕ ಮನಸ್ಥಿತಿಯ ಹೆಣ್ಣುಗಳು ಹಣಕ್ಕಾಗಿ ತಾಯಿಯಾದ ನನ್ನನ್ನ ಏನಂತ ಆಡಿಕೊಳ್ಳಾತ್ತಾರೆ? ವ್ಯಭಿಚಾರಿ ಅಂತಲೋ? ಸೂಳಿ ಅಂತಲೋ? ಏನಾದರೂ ಅನ್ನಲಿ. ನನಗೆ ನನ್ನ ನೈತಿಕತೆ ಬಗ್ಗೆ ಜನರಲ್ಲಿ ಮೂಡಲಿರುವ ಸಂಶಯಗಳ ಭಯವಾಗಲಿ, ಆತಂಕವಾಗಲಿ ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೇ ಮುಂದೆ ಸಾಗಬೇಕು. ಈ ಕಾಯಕದಿಂದ ನಾನು ಇನ್ನೊಬ್ಬರಿಗೆ ತಂದೆ-ತಾಯಿಯಾಗುವ ಭಾಗ್ಯವನ್ನು ಒದಗಿಸಿ ಕೊಡುತ್ತಿರುವ ತೃಪ್ತಿ ನನ್ನಲ್ಲಿದೆ. ಬಾಡಿಗೆ ತಾಯಿಯ ಈ ಸಂಗತಿ ಜಗತ್ತಿನ ಎಲ್ಲರ ದೃಷ್ಠಿಯಲ್ಲೂ ಇದೊಂದು ಸಮಾಜ ಸೇವೆ ಅಂತಾಗಲಿ ಎಂದು ಅಭಿಲಾಷಿಯ ಮನಸ್ಸು ಆತ್ಮವಿಶ್ವಾಸದ ಬೆಳಕನ್ನು ತುಂಬುತ್ತಿತ್ತಾದರೂ ಆಕೆಯ ಪ್ರಿಯಕರ ನಿರಂತರ್‌ನ ನೆನಪೊಂದು ಸುಂಯ್ಯನೆ ಸುಳಿದು ಬೆಳಕು ಒಮ್ಮಲೆ ಕರಗಿತು. ತಾನಿನ್ನೂ ಮುಟ್ಟಿರದ ಪ್ರೇಯಸಿ ಐದು ತಿಂಗಳ ಬಸಿರು ಎಂದರೆ ಯಾವ ಗಂಡಸು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನೆ? ನಿರಂತರ್ ನನ್ನನ್ನ ಒಪ್ಪಿಕೊಳ್ಳುವುದೇ ಇಲ್ಲ’ ಎಂದು ತನ್ನ ಕ್ಲಿಷ್ಟಕರ ಬದುಕನ್ನು ಶಪಿಸುತ್ತಾ ಕೈಯಲ್ಲಿರುವ ಪೇಪರನ್ನ ಮುದುಡಿ ಮಾಡಿ ಮೂಲೆಗೆಸೆದಳು. ನಾನು ಮಾಡಿದ ಪಾಪವಾದರೂ ಏನು? ನಾನೇಕೆ ಬಾಡಿಗೆ ತಾಯಿ ಆದೆ? ಎಲ್ಲದಕ್ಕೂ ಮನುಷ್ಯನ ಈ ಜಗತ್ತೇ ಕಾರಣ. ಹೀಗೆ ಭುಗಿಲೇಳುತ್ತಿದ್ದ ಎಲ್ಲವನ್ನೂ ಅಭಿಲಾಷಿ ಹೊರಹಾಕಬೇಕೆಂದಾಗ ಕಿವಿಯಾಗವ ಯಾವ ನರಪಿಳ್ಳೆಯೂ ಇರಲಿಲ್ಲ. ದಡದಡನೇ ಬೆಡ್‌ರೂಮಿಗೆ ತೆರಳಿ ಅದೇ ನಿರಂತರ್ ನೀಡಿದ್ದ ಕಪ್ಪು ವರ್ಣದ ಆ ಡೈರಿಯಲ್ಲಿ ತನ್ನ ಜೀವನದ ಎಲ್ಲ ಕ್ಷಣಗಳನ್ನು ದಾಖಲಿಸತೊಡಗಿದಳು.

“ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಅಪ್ಪನ ಕೈಲಿ ಉಳಿಸಿಲಾಗಲಿಲ್ವಂತೆ. ಇದಷ್ಟೇ ಅವರಿವರು ಆಡಿರುವ ಮಾತೇ ನನಗೂ ಮತ್ತು ಅಕ್ಕ ಅವಿನಾಶಿಗೆ ಅಮ್ಮನ ನೆನಪಾಗಿ ಉಳಿದಿತ್ತು. ಅಪ್ಪ ಊರಿನ ಶಿವನ ದೇವಸ್ಥಾನದ ಅರ್ಚಕನಾಗಿ ಆರತಿ ತಟ್ಟೆ, ಗಂಟೆ, ಜಾಗಟೆಗಳನ್ನು ನಂಬಿ ಬದುಕಿದ್ದಕ್ಕೇ ಅದರಿಂದ ಬರುವ ಅಲ್ಪ ಹಣ ನಮ್ಮ ಹೊಟ್ಟೆ-ಬಟ್ಟೆಗೆ ಸಾಕಾಗಿತ್ತು ಹೊರತು ಮತ್ಯಾವದಕ್ಕೂ ಸಾಲುತ್ತಿರಲಿಲ್ಲ. ಅಪ್ಪ ಊರಿಗೇ ಬುದ್ದಿ ಹೇಳುವ, ಜನರ ಕಷ್ಟಗಳಿಗೆ ದೇವರ ಪ್ರತಿನಿಧಿಯಾಗಿ ಸ್ಪಂದಿಸುವ ದೈವಿಕ ಸ್ಥಾನಮಾನ ಗಿಟ್ಟಿಸಿಕೊಂಡಿದ್ದ. ಹೀಗಾಗಿ ಊರಿನ ಜನರು ಅಪ್ಪನಿಗೆ ಇನ್ನಿಲ್ಲದ ಮರ್ಯಾದೆ, ಪ್ರೀತಿ, ಗೌರವ ತೋರುತ್ತಿದ್ದರು. ಅವನ ಹೊರ ಜಗತ್ತಿಗೆ ಮಾತ್ರ ನಾವು ಅವನ ಮಕ್ಕಳಾಗಿದ್ದೆವೇ ಹೊರತು ಮನೆಯಲ್ಲಿ ಕೂಲಿ ಆಳುಗಳಿಗೆ ಸಮ. ಯಾವತ್ತು ತಂದೆ ಎಂಬ ಜವಬ್ದಾರಿಗಾದರೂ ಅವನು ನಮ್ಮನ್ನು ಮುದ್ದಿಸಿರಲಿಲ್ಲ. ‘ಎಲ್ಲರಿಗೂ ಹುಟ್ಟುವಂತೆ ನನಗೂ ಮಕ್ಳು ಹುಟ್ಟಿದ್ವು. ಅವೂ ದರಿದ್ರ ಹೆಣ್ಣುಗಳು. ಒಂದು ಗಂಡಾದರೂ ಹುಟ್ಟಿದ್ದರೆ ನಾಲ್ಕು ಮನೆಯ ತಿಥಿಯ ಚಾಕರಿ ಮಾಡಿಯಾದರೂ ನನ್ನನ್ನ ಸಾಕುತ್ತಿದ್ದ. ಆದರೆ ಈ ಹೆಣ್ಣುಗಳು ಮನೆಯಲ್ಲೇ ಹುಟ್ಟಿ ಬೆಳದು ಹೋಗುವ ಗಳಿಗೆಗೆ ನಮ್ಮಿಂದಲೇ ಎಲ್ಲವನ್ನೂ ದೋಚಿಕೊಂಡು ಹೋಗುವ ಶನಿಗಳು’ ಎಂದು ತಾರಾಮಾರಿ ಬೈಯ್ಯುತ್ತಿದ್ದ. ಹೀಗಾಗಿ ಅಪ್ಪನೆಂಬ ಗೌರವ ನಮ್ಮಲ್ಲಿ ಅಷ್ಟಾಗಿ ಉಳಿದುಕೊಂಡಿರಲಿಲ್ಲ.

ಅಪ್ಪ ಆ ಸರಕಾರಿ ಹೈಸ್ಕೂಲು, ಕಾಲೇಜಿಗೆ ಹಂತ ಹಂತವಾಗಿ ಕಟ್ಟುತ್ತಿದ್ದ ಅಲ್ಪ ಹಣವೇ ಹೊರೆಯಾಗುತ್ತದೆಂದು ಮೇಲಾಗಿ ಹೆಣ್ಣುಮಕ್ಕಳು ಹೆಚ್ಚಿಗೆ ಓದಲೇಬಾರದೆಂದು ನಮ್ಮಿಬ್ಬರಿಗೂ ಮದುವೆಯ ತಯಾರಿ ನಡೆಸಿ ವರಗಳ ಜಾತಕ ನೋಡವ ಕೆಲಸದಲ್ಲಿ ಮಗ್ನನಾಗಿದ್ದ. ಅದೇ ಹೊತ್ತಿಗೆ ನಮ್ಮೂರಿಗೆ ಕಾಲಿಟ್ಟ ನಿರಂತರ್ ನಮ್ಮ ಮನೆಯ ಎದುರಿಗಿರುವ ಮನೆಯೊಂದರಲ್ಲಿ ವಾಸವಾಗಿದ್ದ. ಅಪ್ಪ ನಿರಂತರ್‌ನ ಅನುದಿನದ ಹಾಲ್‌ಚಾಲನ್ನು ನೋಡಿ ಅವನ ಸ್ನೇಹ ಗಿಟ್ಟಿಸಿಕೊಂಡು ನನಗಿಂತಲೂ ಎರಡು ವರ್ಷ ಹಿರಿಕಳಾದ ಅವಿನಾಶಿಗೆ ಉತ್ತಮ ಜಾತಕದ ವರ ತರುವ ಕೆಲಸವನ್ನು ಹಚ್ಚಿದ್ದ. ಈ ಕಾರಣವಾಗಿ ನಿರಂತರ್ ಆಗಾಗ ಅಪ್ಪನನ್ನು ಹುಡುಕಿಕೊಂಡು ಮನೆಗೆ ಆಗಮಿಸುವ ಅನಿವಾರ್ಯ ಹೆಚ್ಚಾಯಿತು. ನಾನು ಅವನು ಬಂದಾಗಲೆಲ್ಲಾ ಅಪ್ಪನ ತೀಕ್ಷö್ಮ ನೋಟದಿಂದ ತಪ್ಪಿಸಿಕೊಂಡು ನಿರಂತರ್‌ನತ್ತ ಸಣ್ಣ ನಗುವೊಂದನ್ನು ಎಸೆದು ಕಾಫಿ ತಂದು ಕೊಡುತ್ತಿದ್ದೆ. ಅವನು ಸಹ ನನ್ನಷ್ಟೇ ಉತ್ಸಾಹದಿಂದ ನನಗೆ ಪ್ರತಿಕ್ರಿಯಿಸುತ್ತಿದ್ದ. ಆದರೆ ಅವಿನಾಶಿ ಮಾತ್ರ ‘ಇವನ್ಯಾವ ದೊಣ್ಣೆ ನಾಯ್ಕ ನನಗೆ ವರ ತರಲು’ ಎಂದು ಯಾವಾಗಲೂ ಅವನ ಮೇಲೆ ಉರಿದುರಿದು ಬೀಳುತ್ತಿದ್ದಳು. ಆಕೆ ಹಾಗೆ ಉರಿದುರಿದು ಬೀಳುತ್ತಿದ್ದ ಕಾರಣ ನಮ್ಮೆಲ್ಲರಿಗೂ ಸ್ಪಲ್ಪ ದಿನದಲ್ಲೇ ಗೊತ್ತಾಯಿತು.

ನಿರಂತರ್ ನನ್ನ ಹೆಸರು ಕೇಳಿ ತಿಳಿದು ಒಂದು ವಾರ ಕಳೆದಿತ್ತು. ಒಂದು ದಿನ ಜೋರು ಮಳೆ ಸುಳಿಯುತ್ತಿರುವಾಗ ನಿರಂತರ್ ಅಪ್ಪನನ್ನ ಕೇಳಿಕೊಂಡು ಮನೆಗೆ ಬಂದಿದ್ದ. ಮನೆಯಲ್ಲಿ ಯಾರೂ ಇರಲಿಲ್ಲ. ಅವಿನಾಶಿ ಊರು ಸುತ್ತಲು ಬೆಳಗ್ಗೆ ಹೋದವಳು ಇನ್ನೂ ಬಂದಿರಲಿಲ್ಲ. ಅಪ್ಪ ಮಧ್ಯಾಹ್ನದ ಊಟ ಮಾಡಿ ಹೋದವನು ದೇವಸ್ಥಾನದಿಂದ ಇನ್ನೂ ಮರಳಿರಲಿಲ್ಲ. ತಪ್ಪನೇ ತೋಯ್ದಿದ್ದ ನಿರಂತರ್ ಅಪ್ಪನನ್ನ ಕೇಳಿದಾಗ ದೂರದಲ್ಲೇ ನಿಂತು ಇಲ್ಲವೆಂದಿದ್ದೆ. ಅಷ್ಟಕ್ಕೇ ನಿರಂತರ್‌ಗೆ ಮನೆಯಲ್ಲಿ ಯಾರೂ ಇಲ್ಲದ ವಾಸನೆ ಬಡಿದಿತ್ತೇನೋ ಟವೆಲ್ ಕೇಳಿದ. ಇಲ್ಲವೆನ್ನಲು ಬಾಯಿಬರದೇ ಅಪ್ಪನ ಟವೆಲನ್ನೇ ಎಳೆದುಕೊಟ್ಟೆ. ನಿರಂತರ್ ನನ್ನನ್ನ ಎವೆಯಿಕ್ಕದೇ ದಿಟ್ಟಿಸುತ್ತಿದ್ದ. ನಾನು ಅವನ ಚಿತ್ತ ಬದಲಿಸಲು ನನ್ನ ನೋಟ ಬದಲಿಸಿ ಮರಳುವಷ್ಟರಲ್ಲಿ ಅವನು ನನ್ನ ಕೈ ಹಿಡಿದೆಳೆದು ತನ್ನ ಎದೆಗಾನಿಸಿಕೊಂಡ. ಅವನ ಬಿಸಿ ಉಸಿರು ನನಗೆ ತಾಕುತ್ತಿತ್ತು. ಇದೇ ನನ್ನ ಮತ್ತು ಅವನ ಮೊದಲ ಪ್ರೇಮ ಮಿಲನವಾಗಿತ್ತು. ಅಷ್ಟರಲ್ಲಿ ಅಪ್ಪ ಮೆಲ್ಲನೆ ಬಂದು ನಮ್ಮ ಪಕ್ಕದಲ್ಲಿ ನಿಂತು ತನ್ನ ಗಂಟಲು ಸರಿಪಡಿಸಿಕೊಂಡ. ಅಪ್ಪನ ಆ ರುದ್ರ ಭಯಾನಕ ನೋಟಕ್ಕೆ ಕಂಗಾಲಾಗಿ ನಿರಂತರ್ ಹೇಳದೇ ಕೇಳದೇ ಓಟ ಕಿತ್ತಿದ್ದ. ನಾನಂತೂ ಉಸಿರು ಬಿಗಿಹಿಡಿದು ಮೂಲೆ ಸೇರಿದೆ. ಅಪ್ಪ ತನ್ನ ಕೋಣೆಯೊಳಗೆ ಹೋಗಿ ದಡ್ಡನೇ ಬಾಗಿಲ ಹಾಕಿಕೊಂಡವನು ಸುಮಾರು ಹೊತ್ತಿನವರೆಗೂ ಹೊರ ಬರಲಿಲ್ಲ. ನಾನು ಆ ಕೋಣೆಯ ಎದುರು ಅತ್ತು ಕರೆದು ಕ್ಷಮೆ ಕೇಳಿದರೂ ಅಪ್ಪ ಪ್ರತಿಕ್ರಿಯಿಸಲೇ ಇಲ್ಲ. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಅದರ ಜೊತೆಗೆ ಅವಿನಾಶಿ ಪ್ರೀತಿಸಿದ ಹುಡುಗನ ಜೊತೆಗೆ ಓಡಿಹೋದ ಸುದ್ದಿಯೂ ಜೋರಾಗಿತ್ತು. ಅಪ್ಪ ನೇಣಿಗೆ ಶರಣಾಗಿದ್ದ!

ನೀತಿಗೆಟ್ಟ ಮಕ್ಕಳಿಂದ ಅಪ್ಪನ ಮರಣ ಹೋಮ ಎಂಬ ಹಣೆಪಟ್ಟಿ ಅಭಿಲಾಷಿ ಆದ ನಾನು ಅವಿನಾಶಿಯಾದ ನನ್ನ ಅಕ್ಕನಿಗೆ ಅಂಟಿಕೊಂಡಿತು. ಒಬ್ಬಂಟಿಯಾದ ನನಗೆ ನೀತಿ ಹೇಳುತ್ತಿದ್ದ ಊರಿನ ಯಾವ ಗಂಡಸಾಗಲಿ, ಹೆಂಗಸಾಗಲಿ ನನಗೆ ತುತ್ತು ಅನ್ನ ಹಾಕಿ ಸಲುವಹ ಮಾತು ಆಡಲಿಲ್ಲ. ಈ ಹೊತ್ತಲ್ಲಿ ನನಗೆ ದೇವರಾಗಿ ನಿಂತವಳೆಂದರೆ ನನ್ನೂರಿನ ಆರೋಗ್ಯ ಪ್ರಾಥಮಿಕ ಕೇಂದ್ರ ಡಾ. ಶಭನಾ. ನನ್ನನ್ನ ತನ್ನೂರಿಗೆ ಕರೆದುಕೊಂಡು ಬಂದು ಅಷ್ಟಿಷ್ಟು ವರ್ಷ ಅಡುಗೆ ಕೆಲಸ ಮಾಡಿಸಿಕೊಳ್ಳುವುದರ ಜೊತೆಗೆ ತನ್ನಿಬ್ಬರ ಗಂಡು ಮಕ್ಕಳ ಜೊತೆಗೇ ಕಾಲೇಜು ಓದಿಸಿದ್ದಳು. ನಾನು ಆಕೆಗೆ ಹೊರೆಯಾಗಿದ್ದೇನೋ ಅಥವಾ ಆಕೆಗೆ ನನಗೂ ಒಂದು ಬದುಕು ಕಟ್ಟಿಕೊಡುವ ಇಚ್ಚಿಯಿತ್ತೋ ಗೊತ್ತಿಲ್ಲ; ಅಭಿನಂದನ್‌ನ ಮಗುವಿಗೆ ತಾಯಿಯಾಗುವ ಕೆಲಸ ನೀಡಿದ್ದಳು! ನಾನು ಅವನೊಂದಿಗೆ ದೇಹ ಹಂಚಿಕೊಂಡು ಮಗು ಹೆರುವ ಪ್ರಮೇಯ ಬರುತ್ತದೆಂದು ತಿರಸ್ಕರಿಸಿಬಿಟ್ಟಿದ್ದೆ. ಗಂಡಿಸಿನ ವೀರ್ಯವನ್ನು ಕೃತಕ ಮಾರ್ಗದ ಮೂಲಕ ಹೆಂಗಸಿನ ಗರ್ಭಕ್ಕೆ ಕಳುಹಿಸಿ ಬಸಿರು ಸೃಷ್ಠಿಸುವುದನ್ನು ಶಭಾನ ಹೇಳಿದ್ದರಿಂದ ನಾನು ಒಪ್ಪಿಕೊಂಡೆ. ಶಭಾನ ಎಲ್ಲವನ್ನೂ ಕಾನೂನ ರೀತಿಯಲ್ಲಿಯೇ ಮಾಡಿದ್ದಳು. ಅಭಿನಂದನ್ ಸಹ ಆಡಿರುವ ಮಾತಿನಂತೆ ಸಕಲ ಸೌಕರ್ಯ ನೀಡಿ, ಅರ್ಧ ಹಣವನ್ನೂ ನನ್ನ ಖಾತೆಗೆ ವರ್ಗಾಯಿಸಿದ್ದ’’ ಹೀಗೆ ಅಭಿಲಾಷಿ ಮತ್ತಿನ್ನೆನೋ ಬರೆಯುತ್ತಿದ್ದಾಗ ಯಾರೋ ಬಾಗಿಲ ತಟ್ಟಿದ ಸಪ್ಪಳ ಕೇಳಿಸಿ ಅಭಿಲಾಷಿ ಪೆನ್ನಿಗೆ ವಿಶ್ರಾಂತಿ ನೀಡಿದಳು. ಆಕೆಯ ಜೀವನದ ಎಲ್ಲವನ್ನೂ ದಾಖಲಿಸಿಕೊಂಡು ಆ ಕಪ್ಪು ಡೈರಿ ಗೆಲುವು ಕಂಡಂತೆ ಸಂಭ್ರಮಿಸುತ್ತಿತ್ತು.

ರೇಣು ಬಂದಿರುವಳೇನೋ ಎಂದು ಅಭಿಲಾಷಿ ಬಾಗಿಲು ತೆರೆದಾಗ ಅಲ್ಲಿ ಯಾರೂ ಇರಲಿಲ್ಲ. ‘ಎಲ್ಲರಿಗೂ, ಎಲ್ಲದಕ್ಕೂ ಕಾಯುವುದೇ ನನ್ನ ಬಾಳಗಿದೆ. ಛೇ...’ ಎಂದು ಅಭಿಲಾಷಿ ನಿರಾಶೆಯಿಂದ ಬಾಗಿಲು ಹಾಕಿಕೊಂಡಾಗ ಆಕೆಯ ಫೋನ್ ರಿಂಗಾಯಿತು. ಹಲೋ ಎಂದು ಕಿವಿಗಿಟ್ಟುಕೊಂಡಾಗ ‘ಅಭಿ, ಯಾರೋ ನಿರಂತರ್ ಅಂತೆ. ನಿನ್ನನ್ನ ಕೇಳ್ಕೊಂಡು ಬಂದಿದ್ರು. ಅವರ ನಂರ‍್ನಾ ಕಲೆಕ್ಟ್ ಮಾಡಿದ್ದೀನಿ ಕೊಡ್ಲಾ?’ ಎಂದು ಶಭನಾ ಫೋನ್ ಮಾಡಿದ್ದಳು. ಅಭಿಲಾಷಿ ಅತಿಯಾದ ಹಿಗ್ಗಿನಿಂದ ನಂಬರ್ ಪಡೆದು ‘ನಿರಂತರ್ ನನ್ನನ್ನ ಈ ಸ್ಥಿತಿಯಲ್ಲಿ ನೋಡಿದರೆ ಏನಂದುಕೊಳ್ತಾನೋ’ ಎಂದು ಯೋಚಿಸತೊಡಗಿದಳು. ಆದರೂ ಅವನ ಸಂಪರ್ಕದಲ್ಲಿ ಇರುವುದು ಒಳ್ಳೆಯದು ಎಂದು ಕರೆ ಮಾಡಿಯೇಬಿಟ್ಟಳು. ‘ದ ಪರ್ಸನ್‌ ಈಸ್ ಸ್ಪೀಕಿಂಗ್ ವಿತ್ ಸಮ್ ಒನ್ ಎಲ್ಸ್. ಪ್ಲೀಸ್ ವೇಟ್ ಫಾರ್ ಎ ವ್ಹೈಲ್‌’ ಎಂಬ ಧ್ವನಿ ಮೊಳಗಿತು. ಎಲ್ಲದಕ್ಕೂ ಕಾಲ ಕೂಡಿ ಬರಲಿ. ವೇಗ ಒಳ್ಳೆಯದಲ್ಲ. ನಾನಿರುವ ಸ್ಥಿತಿಗೆ ಕಾಲಕ್ಷೇಪ ಅನಿವಾರ್ಯ ಎಂದು ಅಭಿಲಾಷಿ ಪುನಃ ಅವನಿಗೆ ಕರೆ ಮಾಡಲು ಪ್ರಯತ್ನಿಸಲಿಲ್ಲ. ಮತ್ತೇ ಆ ತನ್ನ ಕಪ್ಪು ಡೈರಿಯ ಮೇಲೆ ಕಣ್ಣಾಡಿಸಲು ಅಣಿಯಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT