ಗುರುವಾರ , ಆಗಸ್ಟ್ 5, 2021
22 °C

ಕಥೆ: ಪ್ರತಿಫಲನ

ಶ್ರೀಧರ್. ಎಸ್. ಸಿದ್ದಾಪುರ. Updated:

ಅಕ್ಷರ ಗಾತ್ರ : | |

Prajavani

ಕುಳಿರ‍್ಗಾಳಿ ಶಿಕಾರಿ ಗುಡ್ಡದ ಕಡೆಯಿಂದ ಬೀಸುತಲಿತ್ತು. ಮಂಜು ನಿಧಾನವಾಗಿ ಶಿಕಾರಿ ಗುಡ್ಡವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತಲಿತ್ತು. ಶಿಕಾರಿ ಗುಡ್ಡದ ಎಡ ಮಗ್ಗುಲಿಗೆ ನನ್ನ ಮನೆಯಿದೆ. ಕೆಂಪಾದ ಸೂರ್ಯ ಶಿಕಾರಿ ಗುಡ್ಡದಲ್ಲಿ ಅಡಗಲು ನಿಧಾನಕ್ಕೆ ಶಿಖಾರಿ ಗುಡ್ಡಕ್ಕೆ ಇಳಿಯುತ್ತಿದ್ದ. ಮರಗಳ ನೆರಳು ಉದ್ದಕ್ಕೆ ಬೆಳೆದು ಮನೆಯ ಜಗುಲಿ ಹೊಕ್ಕು ಅಲ್ಲೇ ಕಾಲು ಚಾಚಿತ್ತು. ದನ ಕರುಗಳ ಗಂಟೆಯ ನಾದ ಕಿವಿಗಳ ತುಂಬುತಲಿತ್ತು. ಕತ್ತಲನ್ನು ನಿಧಾನಕ್ಕೆ ಚಳಿ ಅಪ್ಪಿಕೊಳ್ಳುತಲಿತ್ತು.

ನಮ್ಮ ಮನೆಯ ಸನಿಹದಲ್ಲೇ ಕಮ್ಮಾರರ ಕೇರಿಗೊಂದು ಸುಂದರ ರಸ್ತೆ. ಮೈಲುದ್ದ ಮಲಗಿದ ರಸ್ತೆ ಕೆಂಧೂಳಿಯಿಂದ ಅಲಂಕೃತಗೊಂಡು, ಅಜಿರೆವರೆಗೆ ರಸ್ತೆ ಹಾವಿನಂತೆ ಸುತ್ತಿ ಸುಮ್ಮನಾಗಿತ್ತು. ಇಳಿಜಾರಿನ ಕೊನೆಗೆ ಹರಿವ ಚಿತ್ತೇರಿ ಹೊಳೆ ಸುತ್ತಲೂ ಹಬ್ಬಿದ ವನವು ಶಿಕಾರಿ ಗುಡ್ಡದ ತನಕವೂ ಹಬ್ಬಿತ್ತು. ಶಿಕಾರಿ ಗುಡ್ಡದ ಬಲ ಮಗ್ಗುಲಿನಲ್ಲಿ ಚೀರು, ಸುಬ್ಬಮ್ಮ, ಶಂಕ್ರ ಮನೆ ಮಾಡಿಕೊಂಡಿದ್ದರು. ಶಿಕಾರಿ ಗುಡ್ಡದ ಎಡ ಮಗ್ಗುಲಿನಿಂದ ಹಬ್ಬಿದ ವನವು ನಮ್ಮ ತೋಟದ ಬುಡಕ್ಕೆ ಬರುವಷ್ಟರಲ್ಲಿ ಅಸಾಧ್ಯ ಜಿಗ್ಗುಗಳಾಗಿ ಪರಿವರ್ತನೆ ಹೊಂದಿ ಒಳಹೋಗಲಾರದಷ್ಟು ದಟ್ಟವಾಗಿತ್ತು.
***
ಆಗಸ್ಟೇ ತೋಟದ ಕೆಲಸ ಮುಗಿಸಿ ಕಾಲು ಚಾಚಿ ಕುಳಿತು, ಚಹಾ ಹೀರುತ್ತಾ, ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆ. ಚೀರು ಸುಬ್ಬಮ್ಮರ ಮನೆ ಕಡೆಯಿಂದ ಗದ್ದಲದ ಸದ್ದೊಂದು ಕೇಳಿ ಬಂತು. ಅನೇಕ ಜನ ಸೇರಿ ಕೂಗಿಕೊಂಡತೆ ಏನೋ ಪ್ರಾಣಿಗಳನ್ನು ಅಡ್ಡಗಟ್ಟಿದಂತಹ ಗಲಾಟೆ. ದನವೋ ಎಮ್ಮೆಯನ್ನು ಅಡ್ಡಗಟ್ಟುವ ದನಿಯಾಗಿ ನನಗೆ ಕೇಳಿಸಿತು. ಹೋಗಿ ನೋಡಿ ಬರೋಣವೆಂದೆನಿಸಿದರೂ ಬಹಳಾ ಸುಸ್ತಾದುದರಿಂದ ಸುಮ್ಮನಾದೆ. ಅವರ ಕೇರಿಕಡೆಯಿಂದ ಕೋಳಿ ಕುಪ್ಪ ಬರುವುದು ಕಾಣಿಸಿತು. ಇವನಲ್ಲೇ ಕೇಳೋಣವೆಂದು ಸುಮ್ಮನಾದೆ.

ಕೋಳಿ ಅಂಕದಲ್ಲಿ ಹಮ್ಮೀರನಾದ ಈತ ಎರಡು ಕೋಳಿ ಚಂಚಿಕೊಂಡು ಕೋಳಿ ಅಂಕಕ್ಕೆ ಹೊರಟಿದ್ದ. ಆತನನ್ನು ಕರೆದೆ. ಬಹಳ ಗಡಿಬಿಡಿಯಲ್ಲಿದ್ದ ಆತ ಸ್ವಯಂ ಮುಚ್ಚುವ ಗೇಟು ತೆಗೆದುಕೊಂಡು ಬಂದು ಅನ್ಯ ಮನಸ್ಕನಾಗಿ ನನ್ನ ಪ್ರಶ್ನಾರ್ಥಕವಾಗಿ ನೋಡಿದ. ‘ಕಮ್ಮಾರರ ಕೇರಿಯಿಂದ ಏನೋ ಗಲಾಟೆ ಕೇಳುತ್ತಿದೆಯಲ್ಲಾ ಮರಾಯ ನಿನಗೇನಾದರು ಗೊತ್ತೋ?’ ಎಂದೆ. ‘ಚೀರು ಮನೆಯ ಹಳೇ ದನವಿರಬೇಕು ಕೊಟ್ಟಿಗೆಗೆ ಬರಲು ಉಪದ್ರವ ಕೊಡುತ್ತಿರಬೇಕು. ಅದೇ ಗದ್ದಲ’ ಎಂದು ಗಡಿಬಿಡಿಯ ತೀರ್ಮಾನ ಕೊಟ್ಟ. ನನಗೆ ಹಾಗನಿಸುತ್ತಿರಲಿಲ್ಲವಾದರೂ ನನ್ನ ಅನುಮಾನ ಅವನಲ್ಲಿ ಹೇಳಿದರೆ ಆತ ಇನ್ನೇನೊ ಹೇಳಿ ತನ್ನದೇ ಸರಿ ಎಂದು ವಾದಿಸುವವನಾದ್ದರಿಂದ ಸುಮ್ಮನಾದೆ. ಈಗ ಶಬ್ದ ಸಂಪೂರ್ಣ ನಿಂತು ಹೋದುದರಿಂದ ಸುಮ್ಮನಾದೆ. ಕೋಳಿ ಕುಪ್ಪ ತನ್ನ ಕೋಳಿಯೊಂದಿಗೆ ಹೊರಟು ಹೋದ.

ಕೋಳಿ ಕುಪ್ಪನಂತವರು ಸಿಗುವುದೇ ವಿರಳ. ಆತನೊಬ್ಬ ವಿಲಾಸಿ ವಿರಾಮ ಜೀವಿ. ಕೋಳಿಗಳ ಕುರಿತು ಆತ್ಮಜ್ಞಾನಿ. ಈತನಿಗೆ ಕೋಳಿಗಳಿಗೆ ನೀಡುವ ಔಷಧಗಳು, ಆರೈಕೆ ಮಾಡುವ ವಿಧಾನಗಳೆಲ್ಲ ನಾಲಿಗೆ ತುದಿಯಲ್ಲಿ. ದಿನದ ಹೆಚ್ಚಿನ ಸಮಯ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಳೆಯುತ್ತಿದ್ದ. ಆತ ಮನವಿಟ್ಟು ಹುಂಜವೊಂದನ್ನು ಸಾಕಿದರೆ ಕೋಳಿ ಅಂಕದಲಿ ಗೆದ್ದೇ ತೀರುವುದು. ಆದರೆ ಆತನೆಷ್ಟು ಅನ್ಯ ಮನಸ್ಕನೆಂದರೆ ಆತನ ಮನೆಯಲ್ಲೇ ಒಂದೇ ಒಂದು ಕೋಳಿ ಇಲ್ಲ! ‘ಕುಪ್ಪ ನೀನೊಂದು ಕೋಳಿ ಫಾರಂ ಮಾಡಿದ್ರೆ ಚೆನ್ನಾಗಿತ್ತು ಮರಾಯ. ನಿನಗೆ ಕೋಳಿಗಳ ಕುರಿತು ಒಳ್ಳೆ ಜ್ಞಾನವಿದೆ’ ಎಂದು ಒಮ್ಮೆ ಎಲ್ಲೊ ಹೊರಟವನಲ್ಲಿ ಬಿಟ್ಟಿ ಸಲಹೆಯೊಂದನು ಎಸೆದೆ. ‘ಕೋಳಿಗಳನ್ನು ಫಾರಂನಲ್ಲಿಟ್ಟು ಸಾಕಬಾರದು. ಪಾಪ ಬರ್ತದೆ’ ಎಂದ.

‘ಅಲ್ವೋ ಕೋಳಿ ಅಂಕ ಮಾಡಿ, ಚೂರಿ ಕಟ್ಟಿ ಹಿಂಸೆ ಕೊಟ್ಟರೆ ಬರಲ್ವೇನೋ?’ ಎಂಬ ತರ್ಕವನ್ನು ಮುಂದಿಟ್ಟೆ. ‘ಹಾಗಲ್ಲ ಬುದ್ದಿ, ದುಡ್ಡಿಗೆ ಕೋಳಿಗಳನ್ನು ಮಾರಾಟ ಮಾಡಬಾರದು’ ಎಂಬ ತನ್ನ ವಿಚಿತ್ರ ವಿತಂಡವಾದವನ್ನು ಮುಂದಿಟ್ಟು ಅಲ್ಲಿಂದ ಕಾಲ್ಕಿತ್ತ. ಎಲ್ಲರಿಗೂ ದರ್ಮಾರ್ಥ ಕೋಳಿ ಮತ್ತು ದನಗಳಿಗೆ ಬರುವ ಕಾಯಿಲೆಗಳಿಗೆ ಔಷಧಿ ಕೊಡುತ್ತಾ ಸಿಗುವ ಆರಾಮವನ್ನು ಅನುಭವಿಸುತ್ತಾ, ಒಂದೆರಡು ಗದ್ದೆ ಮಾಡಿಕೊಂಡು ಕಾಲಹಾಕುತ್ತಿದ್ದ. ಕೇರಿಯುದ್ದಕ್ಕೂ ಇಂತಹುದೇ ಮನಸ್ಥಿಯವರೇ ಅನೇಕರಿದ್ದರು.

ಪತ್ರಿಕೆಯನ್ನು ಎತ್ತಿಕೊಂಡು ಅದರ ಮೇಲೆ ಕಣ್ಣಾಡಿಸತೊಡಗಿದೆ. ಆಗಲೇ ಸುಬ್ಬಣ್ಣನ ಮನೆಯ ನಾಗರಾಜ ಏದುಸಿರು ಬಿಡುತ್ತಾ, ಓಡುತ್ತಾ ಮನೆ ಕಡೆಗೆ ಬಂದ. ಬಂದ ಗಡಿಬಿಡಿ ನೋಡಿದರೆ ಏನೋ ಅನಾಹುತವಾಗಿದೆ ಎಂದು ಅಂದಾಜಿಸಿದೆ. ಅವನನ್ನೇ ನೋಡುತ್ತಾ, ‘ಎಂತಾ ಆಯಿತು?’ ಎಂದೆ. ‘ನಮ್ಮ ಮನೆಯ ದನವನ್ನು ಯಾವುದೋ ಪ್ರಾಣಿ ಹಿಡಿದಿದೆ, ಬೇಗ ಬಂದು ತಪ್ಪಿಸಬೇಕು ಎಂದು ಅವಸರ ಮಾಡಿದ. ಈಗ ಇಚಾರಣೆ ಸರಿಯಲ್ಲವೆಂದು ನನ್ನ ಹಳೆ ಕಾಲದ ರೈಪಲ್‌ನ್ನು ತೆಗೆದು ಚರೆ ತುಂಬಿಸಿ, ಮನೆಯಿಂದ ಹೊರಟೆ. ಅವನ ಮನೆಗೆ ಏನಿಲ್ಲವೆಂದರೂ ಐದು ನಿಮಿಷದ ಹಾದಿ. ಕೂಡಲೇ ಹಳೇ ಎಜಿಡಿ ಬೈಕ್‌ನ ಕಿವಿ ಹಿಂಡಿದೆ. ನಾಗರಾಜ ನನ್ನ ಕೋವಿ ಹಿಡಿದು ಗೇಟಿನೆಡೆಗೆ ಓಡಿದ.

ಕೆಂದೂಳು ಮಿಶ್ರಿತ ಹೊಗೆ ಉಗುಳುತ್ತಾ ಬೈಕ್ ಮಣ್ಣು ರಸ್ತೆಯಲ್ಲಿ ಜಿಂಕೆಯಂತೆ ಓಡಿತು. ‘ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?’ ‘ನಾನು ನೋಡಿಲ್ಲ ಮರ್‍ರೆ, ಅಮ್ಮ ನೋಡಿದ್ದಾಳೆ’ ಎಂದ. ‘ಅಮ್ಮನಿಗೂ ಸರಿಯಾಗಿ ಕಾಣಿಸಿಲ್ಲವಂತೆ’ ಎಂದ. ‘ನೀವೆಲ್ಲಾ ಕುರುಡರೋ ಹೇಗೆ?’ ಎಂದು ಅಸಮಾದಾನದಿಂದ ಗದರಿದೆ. ಅವನಿಂದ ಉತ್ತರವೇ ಬರಲಿಲ್ಲ. ‘ಯಾವ ಕಡೆ ಹೋಯಿತೆಂದು ಗೊತ್ತಾ?’ ‘ಶಿಕಾರಿ ಗುಡ್ಡದ ನೆತ್ತಿಯ ಕಲ್ಲು ಬಂಡೆ ಎಡೆಗೆ ಕರುವನ್ನು ಎಳೆದೊಯ್ಯಿದಿತು’ ಎಂದ. ‘ಸರಿ’, ಎಂದು ಶಿಕಾರಿ ಗುಡ್ಡದ ನೆತ್ತಿಯ ಕಡೆಗೆ ಬೈಕ್ ತಿರುಗಿಸಿದೆ. ನನ್ನ ಮನೆಯಿಂದ ಕೇವಲ ಎರಡು ಫರ್ಲಾಂಗ್‌ ದೂರ ಮಾತ್ರವಿದ್ದ ಎರಡು ಪರ್ವತದ ಕಣಿವೆಯಲ್ಲಿ ಬೈಕ್‌ನ್ನು ನಿಲ್ಲಿಸಿದೆ. ನಾಗರಾಜನ ತಾಯಿ ಅಲ್ಲೇ ಒಂಟಿ ದೆವ್ವದಂತೆ ದೊಣ್ಣೆ ಹಿಡಿದು ವೀರಬಾಹುವಿನಂತೆ ನಮಗಾಗಿ ಕಾಯುತಳಿದ್ದಳು. ಇಲ್ಲಿಂದಲೇ ಶಿಕಾರಿ ಗುಡ್ಡದ ನೆತ್ತಿಗೆ ಹೋಗುವ ಕಾಲು ದಾರಿಯೊಂದಿತ್ತು. ಎರಡು ಮೂರು ನಿಮಿಷದೊಳಗೆ ನೆತ್ತಿ ತಲುಪಬಹುದಾದ ಜಾಗದಲ್ಲಿಂದು ಅಸಾಧ್ಯ ಜಿಗ್ಗು ಬೆಳೆದು ಯಾರೂ ಏರದಂತೆ ಪ್ರತಿಬಂದಿಸಿತ್ತು ಪ್ರಕೃತಿ. ಮೊದಲೆಲ್ಲಾ ಇಲ್ಲಿ ವಿಶಾಲವಾದ ಮರವಿದ್ದಿತ್ತು. ನಾಟ ಕಳ್ಳರಿಗೆ ಬಲಿಯಾಗಿದ್ದವು.

ನಾವು ಬಂದದ್ದೇ ‘ಒಡೀರೆ, ಈ ಜಿಗ್ಗಿನೊಳಗೆ ನಮ್ಮ ಹೆಂಗರುವೊಂದನ್ನು ಎಳೆದೊಯ್ಯಿದಿತು. ಸ್ವಲ್ಪ ಕಾಣಿ’ ಎಂದು ಭಯಭೀತಳಾದಂತೆ ತೋರುತ್ತಿದ್ದ ಆಕೆ, ಒಂದು ಅಸಾಧ್ಯ ಜಿಗ್ಗಿನೆಡೆಗೆ ತನ್ನ ಅಸಹಾಯಕ ಕೈ ತೋರಿದಳು ಸುಬ್ಬಮ್ಮ. ‘ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?’.. ಆಕೆ ವೀಳ್ಯ ಉಗಿಯುತ್ತಾ ‘ಚಿರತೆ ಇರಬೇಕು ಅಯ್ಯ. ಒಂದೇ ಅಲ್ಲ, ಎರಡು ಮೂರು ಪ್ರಾಣಿ ಇದ್ದಂಗಿದೆ’ ಆಶ್ಚರ್ಯ ಚಕಿತನಾದೆ. ಈ ಇಳಿ ಸಂಜೆಯ ಹೊತ್ತಿನಲ್ಲಿ ಕರುವನ್ನು ಹೊತ್ತೊಯ್ಯುವ ಪ್ರಾಣಿ ಯಾವುದೆಂದು ಅಂದಾಜಿಸಲಾಗಲಿಲ್ಲ.

ಮೊದಲೆಲ್ಲಾ ಹಗಲು ಹೊತ್ತಿನಲ್ಲೇ ದಾರಿಯಲ್ಲಿ ಮೊಲ, ಜಿಂಕೆ, ಕಡವೆಗಳು ಸಿಕ್ಕುತ್ತಿದ್ದವು. ಗುಡ್ಡದಲ್ಲಿ ನಿಶ್ಚಿಂತವಾಗಿ ಮೇಯುತ್ತಿದ್ದವು. ಕೇರಿಯವರ ಬಾಯಿ ಚಪಲಕ್ಕೆ, ಪೇಟೆ ಜನರ ಶೋಕಿಗೆ ಅವೆಲ್ಲಾ ತಮ್ಮ ಪ್ರಾಣ ಅರ್ಪಿಸಬೇಕಾಗಿ ಬಂತು. ಕಣ್ಣಿಗೆ ಕಂಡ ಪ್ರಾಣಿಗಳನ್ನೆಲ್ಲಾ ಬಂದೂಕು ನಳಿಕೆಗೆ ಗುರಿ ಮಾಡಿದರು. ಶಿಖಾರಿ ಗುಡ್ಡದ ಪ್ರಾಣಿಗಳ ಜೀವ ವಿಮೋಚನೆಗೆ ಒಳಗಾಯಿತು. ಒಂದೆರಡು ದಿನಗಳಲ್ಲ ಅನೇಕ ವರ್ಷಗಳವರೆಗೆ ಬೇಟೆ ಅವ್ಯಾಹತ. ಕಾಡಿನಲ್ಲಿರಬೇಕಾದುದು ಇವರ ಹೊಟ್ಟೆಯಲ್ಲಿ ತಣ್ಣಗೆ ಮಲಗಿತ್ತು. ಕೆಲವರಿಗೆ ಬೇಟೆ ಶೋಕಿ ಇನ್ನು ಕೆಲವರಿಗೆ ಬಾಯಿ ಚಪಲ. ಬೇಡವೆಂದು ಬಡಕೊಂಡ್ರೂ ಬಿಡದೇ ತಿಂದು ಮುಗಿಸಿದರು. ಚಿರತೆಗಳಿಗೆ ತಿನ್ನಲೇನೂ ಸಿಗದೆ ಊರಿಗೆ ಧಾಳಿ ಮಾಡುವುದು ಸಾಮಾನ್ಯ ಸಂಗತಿಯಾಗತೊಡಗಿತು. ಹುಲಿ ಬೆಕ್ಕುಗಳು ಕೋಳಿ ಗೂಡುಗಳಿಗೆ ದಾಳಿ ಮಾಡುತ್ತಿದ್ದವು. ಇತ್ತೀಚಿನ ದಿನ ಮಾನಸದಲ್ಲಿ ಇದು ವಿಪರೀತಕ್ಕಿಟ್ಟಿತು.

ಜಿಗ್ಗಿನೊಳಗೆ ನುಗ್ಗಿದ ಪ್ರಾಣಿಯಾವುದೆಂದು ಊಹಿಸುತ್ತಾ ನಾಗರಾಜನೊಡನೆ ಜಿಗ್ಗಿನೊಳಗೆ ನುಗ್ಗ ತೊಡಗಿದೆವು. ಕಿಚಕ್ ಕಿಚಕ್ ಎಂದು ಕಾಡು ಕೋಳಿಗಳು ಸಣ್ಣ ಸದ್ದು ಮಾಡಿ ಮರೆಯಾದವು. ಹಕ್ಕಿ ಪಿಕ್ಕಿಗಳು ಕಂಡರೆ ಒಂದೂ ಉಳಿಸುವುದಿಲ್ಲವೆಂದು ಮುಂದಡಿ ಇಟ್ಟೆ. ಚರೆ ಕೋವಿಯನ್ನು ನಾಗರಾಜನಿಗೆ ಕೊಟ್ಟು, ಅಡ್ಡ ಬಂದ ಜಿಗ್ಗನ್ನು ಸವರುತ್ತಾ ದಾರಿ ಮಾಡುತ್ತಾ ಮುಂದಡಿ ಇಡತೊಡಗಿದೆ. ಮಲಗಿರುವ ಹುಲ್ಲುಗಳು ಪ್ರಾಣಿಯೊಂದು ನುಸುಳಿ ಹೋದ ಸಾಕ್ಷಿ ನುಡಿಯುತ್ತಿದ್ದವು. ಶಿಕಾರಿಯ ಹೆಜ್ಜೆ ಗುರುತು ಹಿಡಿಯಲು ಪ್ರಯತ್ನಿಸಿದೆ. ಮಳೆ ಹೋಗಿ ಅನೇಕ ದಿನಗಳಾದುದರಿಂದ ಮಣ್ಣಿನಲ್ಲಿ ಹೆಜ್ಜೆ ಗುರುತು ಗುರುತಿಸದಾದೆ. ಇಂತಹ ಜಿಗ್ಗಿನೊಳಗೆ ಹೇಗೆ ನುಗ್ಗಿ ಹೋಗಿರಬೇಕೆಂದು ಆಲೋಚಿಸತೊಡಗಿದೆ.

ಕೆಲವೇ ನಿಮಿಷ ನಡೆಯುವುದರೊಳಗೆ ಮೈ ಕೈ ಎಲ್ಲಾ ಗೀರಿದ ಗಾಯಗಳಿಂದ ತುಂಬಿ ಹೊಯ್ತು. ಬೆವರಿನೊಂದಿಗೆ ಬೆರೆತ ಗೀರಿದ ಗಾಯಗಳು ಚುರುಗುಟ್ಟುತ್ತಿದ್ದವು. ‘ಬೇಕಾ ನಿನಗಿದೆಲ್ಲಾ?’ ಎನ್ನುತಲಿತ್ತು ಒಳ ಮನಸ್ಸು. ಆಗಲೇ ಮುಸುವ ಮಂಗವೊಂದು ಕೀರಲು ದನಿ ಮಾಡಿ ತನ್ನ ಗುಂಪಿಗೆ ಸಂಜ್ಞೆ ಕೊಟ್ಟಿದ್ದು ಅಸ್ಪಷ್ಟವಾಗಿ ತೇಲಿಬಂತು. ಕಷ್ಟ ಪಟ್ಟು ಶಿಕಾರಿ ಗುಡ್ಡದ ನೆತ್ತಿಯೊಳಗೆ ಕಾಲಿರಿಸಿದಾಗ ಸೂರ್ಯ ಸಂಪೂರ್ಣವಾಗಿ ಜಿಗ್ಗಿನೆಡೆಯಲ್ಲಿ ಕಂತಲು ಕಾಯುತ್ತಿದ್ದ. ಗಾಳಿ, ಗುಡ್ಡದ ಮೇಲಿನಿಂದ ಕೆಳಗೆ ಬೀಸುತಲಿತ್ತು. ಭೂತಾಕಾರದ ಮರಗಳು ಅಲ್ಪ ಬೆಳಕನ್ನು ಬಿಟ್ಟು ಭಯದ ವಾತಾವರಣ ನಿರ್ಮಿಸಿತ್ತು. ಹಕ್ಕಿ, ಮುಸುವ ಮಂಗಳಗಳ ವಿಪರೀತ ಅರಚಾಟ ಸ್ಪಷ್ಟವಾಗ ತೊಡಗಿತು. ಇಲ್ಲೆ ಎಲ್ಲೋ ಸನಿಹದಲ್ಲಿ ಅದಿರಬೇಕೆಂದು ಜಾಗರೂಕನಾದೆ.
ಮರದ ನೆರಳಿನಲ್ಲಿ ಕರಿ ಕರಡಿಯಂತಹ ಬಂಡೆಯೊಂದು ಕಂಬಳಿ ಹೊದ್ದಂತೆ ನಮ್ಮೆದುರಿಗಿತ್ತು. ಈ ನೆರಳಿನಡಿ ಏನೋ ಚಲಿಸಿದ ಸದ್ದಾಯಿತು. ಒಂದು ಜೀವಿ ಮತ್ತೊಂದು ಜೀವಿಯನ್ನು ಎಳೆದಾಡುವಂತಹ ಸದ್ದು. ಎರಡು ಮೂರು ಜೀವಿಗಳು ಓಟ ಮುಗಿಸಿ ಬಂದು ದೀರ್ಘ ಶ್ವಾಸ ಬಿಡುವ ಸದ್ದುಗಳು. ಕೆಂಪಾದ ಆಗಸದೆದುರಿಗೆ ಬಿದ್ದಿದ್ದ ಕರಿ ಕಲ್ಲಿನ ಮೇಲೆ ಆ ಜೀವಿ ತನ್ನ ದರ್ಶನ ಕೊಟ್ಟಿತು. ಒಮ್ಮೆಲೆ ಮೆದುಳಿನ ನರ ತಂತುಗಳೆಲ್ಲಾ ತಲ್ಲಣಿಸಿ ಸ್ತಬ್ದವಾದವು. ಮೊದಲೇ ಪಸೆ ಆರಿದ ಬಾಯಲ್ಲಿ ಮಾತೇ ಹೊರಡಲಿಲ್ಲ. ಕಲ್ಲಿನ ಮೇಲೆಲ್ಲಾ ರಕ್ತದೋಕುಳಿ. ದನದ ಕುತ್ತಿಗೆ ಕಚ್ಚಿ ಹಿಡಿದ ಚಿರತೆಯೊಂದು ತನ್ನ ಬೇಟೆಯನ್ನು ಸುರಕ್ಷಿತ ಸ್ಥಳಕ್ಕೆ ಎಳೆದೊಯ್ಯುವ ಮೊದಲು, ಸ್ವಲ್ಪ ವಿಶ್ರಾಂತಿಗಾಗಿ ಬಂಡೆ ಎಡೆಯಿಂದ ನಮಗೆ ದರ್ಶನ ಕೊಟ್ಟಿತ್ತು. ತೀವ್ರ ಚಟುವಟಿಕೆಯಿಂದ ಕೂಡಿದ್ದ ಸಂಜೆಯಲಿ ಚಿರತೆ ನಮ್ಮನ್ನು ಗಮನಿಸಲಿಲ್ಲ. ನಾವಿಬ್ಬರೂ ಹಿಂದೆಯೂ ಹೋಗದಂತಹ ಮುಂದಡಿಯು ಇಡದಂತಹ ಸಂಧಿಗ್ದಕ್ಕೆ ಸಿಕ್ಕಿಹಾಕಿಕೊಂಡೆವು. ಹಿಮ್ಮುಖವಾಗಿ ಓಡಲಾರದ ಎಡ ಬಲಕ್ಕೂ ದಾರಿಗಳಿಲ್ಲದ ಬೋನೊಳಗೆ ಬಿದ್ದಿದ್ದೆವು. ಕ್ಷಣ ಕಾಲ ಮೆದುಳೇ ಖಾಲಿ ಖಾಲಿ.

ನಮ್ಮೆಲ್ಲ ಕುಕೃತ್ಯಗಳು ಶಿಕಾರಿ ಗುಡ್ಡದ ಚಿರತೆಯ ಕಣ್ಣುಗಳಲ್ಲಿ ಪ್ರತಿಫಲನಗೊಂಡು ನನ್ನನ್ನು ವಿಚಲಿತಗೊಳಿಸಿದವು. ತೆವಳುತ್ತಾ ಮೇಲೆ ಬರುತ್ತಾ ಚಿರತೆಯ ಸಂಪೂರ್ಣ ದರ್ಶನ ಸಿಗುತ್ತಲೇ ನಾಗರಾಜ ನಡುಗುವ ಕೈಗಳಲ್ಲೇ ಕೋವಿಯ ಕುದುರೆಯನ್ನು ಅಮುಕಲು ತಯಾರಾಗಿದ್ದ. ಒಮ್ಮೆಲೆ ನಾನು ಕೋವಿ ಮೇಲೆರುಗುದಕ್ಕೂ ಆತ ಕೋವಿಯ ಕುದುರೆಯನ್ನು ಸಂಪೂರ್ಣ ಅದುಮುದಕ್ಕೂ ಸರಿ ಹೋಯ್ತು. ಗುಂಡು ಹಾರದೆ ಕೋವಿ ಕೆಳಗೆ ಬಿದ್ದು ನಿಶ್ಶಬ್ದವಾಯ್ತು. ನಾಗರಾಜ ನನ್ನನ್ನೇ ಆಶ್ಚರ್ಯ ಚಕಿತನಾಗಿ ನೋಡ ಹತ್ತಿದ. ಕೋವಿಯಿಂದ ಶಬ್ದ ಹೊರ ಹೊಮ್ಮಿದಿದ್ದರೆ ನಾವಿಬ್ಬರೂ ಪಡ್ಚವಾಗುತ್ತಿದ್ದೆವು. ವಿರುದ್ದ ದಿಕ್ಕಿನಿಂದ ಬೀಸುತ್ತಿದ್ದ ಗಾಳಿ, ಮೀಟದ ಕೋವಿಯ ಕುದುರೆ ನಮ್ಮನ್ನುಳಿಸಿತ್ತು. ಮುಂದಿದ್ದ ನಾಗರಾಜನಿಗೆ ವಾಪಾಸಾಗುವ ಸೂಚನೆ ನೀಡಿದೆ. ಚಿರತೆಯನ್ನೇ ಗಮನಿಸುತ್ತಾ ಏನೂ ಮಾತನಾಡದೇ ಹಿಮ್ಮುಖವಾಗಿ ಚಲಿಸತೊಡಗಿದೆವು. ಸುಬ್ಬಮ್ಮನ್ನ ಕರುವಾಗಲೇ ಪ್ರಾಣ ಬಿಟ್ಟಿತ್ತು. ‘ಹೂಜಿ ಗಿಡದ’ ಬೋನಿನಿಂದ ನೊಣ ಹೊರ ಬರುವಂತೆ ಬರತೊಡಗಿದೆವು. ಜಿಗ್ಗಿನೊಳಗೆ ಹೇಗೋ ಸುಲಭವಾಗಿ ನುಗ್ಗಿದ್ದೆವು. ಹುಲಿ ಬೋನಿಗೆ ಬಿದ್ದ ಇಲಿಯಂತಾಗಿದ್ದೆವು. ಮೈಯಲ್ಲಿ ಚೂರೂ ಜಾಗವಿಲ್ಲದಂತೆ ತರಚು ಗಾಯಗಳು. ಹಿಂದಡಿ ಇಡುತ್ತಾ ಬೈಕಿರುವಲ್ಲಿಗೆ ಬಂದಾಗ ‘ಗುಂಡು ಹಾರಿಸಿ ಕೊಲ್ಲ ಬಹುದಿತ್ತಲ್ಲಾ?’ ಎಂದ ನಾಗರಾಜ. ‘ಕರು ಉಳಿಯುವ ಸಾಧ್ಯತೆ ಇಲ್ಲದಾಗ ಕೊಂದೇನು ಲಾಭ?’ ‘ಮುಂದೊಂದು ದಿನ ಅದು ಇನ್ನೊಂದು ದನವನ್ನು ಸಾಯಿಸಬಹುದು’ ‘ಅದಕ್ಕೆ ಈಗಲೇ ಕೊಲ್ಲುವುದೇ?’ ‘ಅದೊಂದು ಹೆಣ್ಣು ಚಿರತೆ, ಈಗಷ್ಟೇ ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅವು ಹೊರಬರುವುದಿಲ್ಲ. ತನ್ನ ಸಂಗಾತಿಯನ್ನೂ ಕಳೆದುಕೊಂಡಿರಬೇಕು. ಹಾಗಾಗಿ ಸ್ವತಃ ಬೇಟೆಗೆ ಬಂದಿದೆ. ಮರಿಗಳೆಲ್ಲಾ ಅನಾಥವಾಗುವುದು ಸರಿಯಲ್ಲ’ ಎಂದು ಆತನಿಗೆ ತಿಳಿ ಹೇಳಿದೆ. ‘ನಿಮಗೆ ಹೇಗೆ ಇಷ್ಟೆಲ್ಲಾ ವಿವರ ತಿಳಿಯಿತು?’ ಅವನೆಂದ.

‘ಅದರ ಹೊಟ್ಟೆಯನ್ನು ನೀನು ಗಮನಿಸಿದೆಯಾ? ಅದು ಬೆನ್ನಿಗಂಟಿದೆ. ಹಾಲು ತುಂಬಿದ ಅದರ ಜೋಲು ಮೊಲೆಗಳನ್ನು ನೋಡಿದರೆ ಅದೀಗಷ್ಟೇ ಮರಿ ಹಾಕಿದೆ ಎಂದು ಗೊತ್ತಾಗುತ್ತೆ’ ಎಂದೆ. ನಾಗರಾಜ ಏನೂ ಮಾತನಾಡದೆ ನನ್ನ ಜೊತೆ ಹೆಜ್ಜೆ ಹಾಕಿದ. ಶಿಕಾರಿ ಗುಡ್ಡವನ್ನು ಪ್ರಾಣಿ ಮುಕ್ತ ಮಾಡಿದ್ದಕ್ಕೆ ಸೇಡು ತೀರಿಸಲೋ ಎಂಬಂತೆ ಚಿರತೆಯೊಂದು ನಮ್ಮ ಕರುವನ್ನು ಎಳೆದೊಯ್ಯಿದಿತು. ಬೈಕಿನ ಕಿವಿ ಹಿಂಡಿ ಧೂಳು ರಸ್ತೆಯಲ್ಲಿ ನಿಧಾನಕ್ಕೆ ಧೂಳಿನೊಂದಿಗೆ ಒಂದಾದೆವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು