ಭಾನುವಾರ, ಸೆಪ್ಟೆಂಬರ್ 19, 2021
28 °C
niti kathe

ಮುಖವಾಡದ ಹಿಂದಿನ ‘ಶಕ್ತಿ’!

ಭಾನುಶ್ರೀ Updated:

ಅಕ್ಷರ ಗಾತ್ರ : | |

Prajavani

ಅದೊಂದು ಊರು. ಅಲ್ಲೊಂದು ಕತ್ತೆ. ಒಂದು ದಿನ ಆ ಕತ್ತೆಗೆ ಸಿಂಹದ ಮುಖವಾಡವೊಂದು ದೊರೆಯಿತು. ಕೂಡಲೇ ಕತ್ತೆಗೊಂದು ಕೆಟ್ಟ ಆಲೋಚನೆ ಬಂದಿತು. ಅದು ಸಿಂಹದ ಮುಖವಾಡವನ್ನು ಧರಿಸಿತು; ಕಾಡಿನೊಳಕ್ಕೂ ಹೊಕ್ಕಿತು. ಎಲ್ಲ ಪ್ರಾಣಿಗಳ ಮುಂದೆ ಸಿಂಹದಂತೆ ನಿಲ್ಲುವುದು; ಅವನ್ನು ಹೆದರಿಸುವುದು – ಹೀಗೆ ಅದರ ಆಟ ಮುಂದುವರೆಯಿತು. ಪ್ರಾಣೀಗಳೂ ಅದನ್ನು ಸಿಂಹ ಎಂದೇ ಭಾವಿಸಿದವು.

ಹೀಗಿರಲು ಒಮ್ಮೆ ಹೀಗಾಯಿತು. ಸಿಂಹದ ಮುಖವಾಡದ ಕತ್ತೆ ಅಂದು ನರಿಯ ಮುಂದೆ ನಿಂತಿತು. ಅದನ್ನು ಮತ್ತಷ್ಟು ಹೆದರಿಸಬೇಕೆಂದು ಕೂಗಿತು. ಅದು ಕೂಗಿದ ಕೂಡಲೇ ಕತ್ತೆಯ ಸ್ವರ ಮೊಳಗಿತು. ಆಗ ನಗುತ್ತ ನರಿ ‘ನೀನು ಅರಚದೇ ಇದ್ದಿದ್ದರೆ, ಹೆದರಿಕೊಳ್ಳಬಹುದಿತ್ತು’ ಎಂದಿತು.

* * *

ನಾವು ಹೊರಗಡೆ ಏನೆಲ್ಲ ವೇಷವನ್ನು ಹಾಕಿಕೊಂಡರೂ ನಮ್ಮ ಒಳಗಡೆಯ ವಿವರಗಳನ್ನು ಅದರಿಂದ ಬದಲಿಸಲಾಗದು.

ಮೇಲಣ ಕಥೆಗೆ ಪೂರಕವಾಗಿ ಸಂಸ್ಕೃತಸುಭಾಷಿತವೊಂದು ಹೀಗಿದೆ:

ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕಕಾಕಯೋಃ |
ವಸಂತಸಮಯೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||

‘ಕಾಗೆಯೂ ಕಪ್ಪಾಗಿರುತ್ತದೆ; ಕೋಗಿಲೆಯೂ ಕಪ್ಪಾಗಿರುತ್ತದೆ. ಹಾಗಾದರೆ ಆ ಎರಡರ ನಡುವೆ ವ್ಯತ್ಯಾಸವೇನು? ವಸಂತಕಾಲ ಬಂದಾಗ, ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೆ!’

ಕಾಗೆ ಮತ್ತು ಕೋಗಿಲೆ, ನೋಡಲು ಒಂದೇ ಬಣ್ಣವಷ್ಟೆ. ಹೀಗೆಂದು ಅವೆರಡೂ ಒಂದೇ ಗುಣವನ್ನು ಹೊಂದಿದೆ ಎಂದು ಅರ್ಥವೆ? ಕೋಗಿಲೆಯ ದನಿ ಇಂಪು; ಆದರೆ ಕಾಗೆಯ ದನಿಗೆ ಅಂಥ ಇಂಪು ಇರದು. ವಸಂತಸಮಯದಲ್ಲಿ ಮಾವಿನ ಚಿಗುರನ್ನು ತಿಂದು ಕೂಗುವ ಕೋಗಿಲೆಯ ದನಿಯು ಹಾಡಿನಂತೆಯೇ ಮಧುರವಾಗಿರುತ್ತದೆ. ವಸಂತಕಾಲದಲ್ಲಿ ಕಾಗೆಯೂ ಕೂಗುತ್ತದೆ; ಕೋಗಿಲೆಯೂ ಕೂಗುತ್ತದೆ. ಇವೆರಡರ ದನಿಯಿಂದಲೇ ಕೋಗಿಲೆ ಯಾವುದೆಂದೂ ಕಾಗೆ ಯಾವುದೆಂದೂ ಗುರುತಿಸಬಹುದು; ಬಣ್ಣ ದಿಕ್ಕು ತಪ್ಪಿಸಬಹುದು; ಆದರೆ ದನಿ ನಮಗೆ ನಿಖರವಾದ ಮಾಹಿತಿಯನ್ನು ಕೊಡುತ್ತದೆಯೆನ್ನಿ! ಎಂದರೆ ನಾವು ಯಾವಾಗಲೂ ಎಲ್ಲರನ್ನೂ ಮೋಸ ಮಾಡಲು ಆಗದು.

ಕತ್ತೆಯು ಸಿಂಹದ ಮುಖವಾಡವನ್ನು ಹಾಕಿಕೊಂಡಮಾತ್ರಕ್ಕೆ ಅದೇನೂ ಸಿಂಹವಾಗದಷ್ಟೆ! ಮುಖವಾಡದಿಂದ ಅದು ಒಂದು ಕ್ಷಣ ಸಿಂಹ ಎಂದೆನಿಸಬಹುದು; ಆದರೆ ಗರ್ಜಿಸಿದಾಗ ಗೊತ್ತಾಗುತ್ತದೆ, ಅದು ಸಿಂಹದ ಗರ್ಜನೆಯೋ ಕತ್ತೆಯ ಕೂಗೋ ಎಂದು! ನರಿ ಅದನ್ನು ಚೆನ್ನಾಗಿಯೇ ತಿವಿಯಿತು. ಕತ್ತೆ ಕೂಗದೆ ಇದಿದ್ದರೆ ನರಿಗೂ ಹೆದರಿಕೆ ಉಂಟಾಗುತ್ತಿತ್ತೇನೋ? ಆದರೆ ಕತ್ತೆಯ ಕೂಗು ಕತ್ತೆಯ ಮೋಸವನ್ನು ಬಯಲು ಮಾಡಿತು. ಹೊರಗಿನ ಸಂಗತಿಗಳು ಬದಲಾವಣೆ ಆದ ಮಾತ್ರಕ್ಕೆ ನಮ್ಮ ಒಳಗಿನ ಶಕ್ತಿ–ಸತ್ವಗಳೂ ಬದಲಾವಣೆ ಆಗುತ್ತವೆ ಎನ್ನುವಂತಿಲ್ಲ.

ಈ ಕಥೆಯನ್ನು ನಮ್ಮ ನಿತ್ಯದ ಎಷ್ಟೋ ಸಂಗತಿಗಳೊಂದಿಗೆ ತೂಗಿ ನೋಡಬಹುದು.

ನಾವು ಧರಿಸುವ ಬಟ್ಟೆ–ಬರೆಗಳು ನಮ್ಮ ವ್ಯಕ್ತಿತ್ವವನ್ನು ಸೂಚಿಸುವ ಸಂಗತಿಗಳು ಎಂದುಕೊಳ್ಳುತ್ತೇವೆ. ಆದರೆ ನಮ್ಮ ನಡೆ–ನುಡಿಗಳು ನಮ್ಮ ವ್ಯಕ್ತಿತ್ವದ ನಿಜವಾದ ಪ್ರತಿಬಿಂಬಗಳು. ನಮ್ಮ ಮನೆ ವಿಶಾಲವಾಗಿದ್ದ ಮಾತ್ರಕ್ಕೆ ನಮ್ಮ ವ್ಯಕ್ತಿತ್ವವೂ ವಿಶಾಲವಾಗಿರುತ್ತದೆ ಎನ್ನುವಂತಿಲ್ಲ. ಸ್ನೇಹದ ಸವಿಮಾತುಗಳನ್ನು ಆಡಬಹುದು; ಆದರೆ ಆ ಸ್ನೇಹ ನಿಜವೋ ಸುಳ್ಳೋ ಎಂದು ಗೊತ್ತಾಗುವುದು ಅದರ ಅವಶ್ಯಕತೆ ಒದಗಿದಾಗ; ಕಷ್ಟದಲ್ಲಿ ಸಿಕ್ಕ ಸ್ನೇಹಿತನೊಂದಿಗೆ ಆ ಸ್ನೇಹ ಹೇಗೆ ಸ್ಪಂದಿಸುತ್ತದೆ ಎನ್ನುವುದರಿಂದಲೇ ಸ್ನೇಹದ ಪರೀಕ್ಷೆ ನಡೆಯುವುದು. 

ಸಿಂಹದ ಶಕ್ತಿ ಇರುವುದು ಅದರ ಮುಖದ ಆಕಾರದಲ್ಲಿ ಅಲ್ಲ; ಅದರ ದೇಹದ ಕಣಕಣದಲ್ಲೂ ಸಿಂಹತ್ವದ ಗುಣ ಹರಿಯುತ್ತಿರುತ್ತದೆ. ಹೀಗಾಗಿಯೇ ಅದನ್ನು ‘ಸಿಂಹ’ ಎಂದು ಕರೆಯುವುದೆನ್ನಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.