ವಿಮಾನ ನಿಲ್ದಾಣಕ್ಕೆ ಬರುವವರು ಹೋಗುವವರ ದಂಡೇ ಇತ್ತು. ಮೊದಲ ಬಾರಿಗೆ ಪರದೇಶಕ್ಕೆ ಹೋಗುವ ಪ್ರಯಾಣಿಕರನ್ನು ಬೀಳ್ಕೊಡುವಾಗ ಹತ್ತಿರದವರ ಮಿಶ್ರ ಭಾವಗಳು, ಕಣ್ಣೀರು, ಮೆಲು ಅಪ್ಪುಗೆ, ಸಿಹಿ ಮುತ್ತು, ಹಸ್ತಲಾಘವ, ಹೀಗೆ ಸಾಂಕೇತಿಕವಾಗಿ ಪ್ರಕಟವಾಗುತ್ತಿತ್ತು. ಅಂತೆಯೇ ಇತ್ತ ಬರುವವರನ್ನು ಸ್ವಾಗತಿಸುವವರ ಸಂಭ್ರಮವೂ ಕಾಣುತಿತ್ತು. ದಶಕಗಳ ಹಿಂದೆ ಇದ್ದ ಸಂಕೋಚ ಈಗ ಇಲ್ಲ. ಕಾಲ ಬದಲಾಗಿದೆ. ಹದಿನಾರರ ಯುವತಿಯರಿಂದ ಎಪ್ಪತ್ತರ ಹಿರಿಯರೂ ಜೀನ್ಸ್ ಧಾರಿಣಿಯರೆ! ಅದು ಪ್ರತಿಷ್ಠೆಯ ಪ್ರತೀಕವೇ ಆಗಿಬಿಟ್ಟಿದೆ. ನನ್ನ ಮಟ್ಟಿಗೆ ಅದು ಕಂಫರ್ಟ್. ಅಮೆರಿಕಕ್ಕೆ ತೆರಳಿದ ಮೇಲೆ ನಾನೂ ಅದಕ್ಕೆ ಹೊಂದಿಕೊಂಡಿದ್ದೆ. ತೀರಾ ಮಧ್ಯಮ ವರ್ಗದ ಹುಡುಗಿ, ಸಂಪ್ರದಾಯದ ಗೋಡೆಗಳ ನಡುವೆ ಬೆಳೆದವಳು, ಈಗ ನಲವತ್ತೈದು ದಾಟಿದರೂ ಹಾಗೆನ್ನಿಸದು. 'ಜೀನ್ಸ್‌ನಲ್ಲಿ ನನ್ನ ಕಣ್ಣೇ ಬೀಳುತ್ತೆ, ನಿನಗೆ ಇಪ್ಪತ್ತು ವರ್ಷದ ಮಕ್ಕಳಿದ್ದಾರೆ ಅಂದ್ರೆ ನಂಬೋಕ್ಕೆ ಆಗೋಲ್ಲ' ಅಮ್ಮ ಆಗಾಗ ಹೇಳುತ್ತಲೇ ಇರ್ತಾರೆ.

ಅಮ್ಮ, ಇಂದು ಬೆಳಿಗ್ಗೆ ಮೂರು ದಿನದ ತೀರ್ಥಯಾತ್ರೆಗೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬಳೇ ಇರುವ ಬದಲು ವಾಸುವನ್ನು ಬರಮಾಡಿಕೊಳ್ಳಲು ಏರ್‌ಪೋರ್ಟ್‌ಗೆ ಬಂದಿದ್ದೆ. ಮೊದಲ ಬಾರಿ ನಾನು, ಮದುವೆಯ ನಂತರ ತವರಿಗೆ ವಿದಾಯ ಹೇಳಿ ವಿಮಾನ ಹತ್ತುವಾಗ ಅಪ್ಪ, ಅಮ್ಮ ಬಂದಿದ್ದು ನೆನಪಾಯ್ತು.

ಐದು ಮಕ್ಕಳಲ್ಲಿ ನಾನೊಬ್ಬಳೇ ಹೆಣ್ಣು ಮಗಳು, ಅಪ್ಪ ಹೋಗುತ್ತಲೇ, ಇದ್ದ ಒಂದು ಮನೆ ಮಾರಿ ಆರು ಭಾಗಮಾಡಿ ದುಡ್ಡು ಹಂಚಿಕೊಳ್ಳುವುದೆಂದೂ, ಅಮ್ಮನ ಜವಾಬ್ದಾರಿ ಎರಡು ತಿಂಗಳಿಗೊಬ್ಬ ಮಗನ ಸರದಿ ಎಂದು ಗಂಡು ಮಕ್ಕಳೇ ತೀರ್ಮಾನಿಸಿದಾಗ ಅಮ್ಮ ನಡುಗಿಬಿಟ್ಟಿದ್ದರು. ‘ಏನೇ ನೀಲೂ, ಹೀಗೆ ಮಾತಾಡ್ತಿದ್ದಾರೆ? ಎರಡೆರಡು ತಿಂಗಳು ನಾನು ಪೆಟ್ಟಿಗೆ, ಪೆಠಾರಿ ತೊಗೊಂಡು ‘ದೇಹಿ’ ಅಂತ ಹೋಗ್ಬೇಕ? ಸೊಸೆಯರು ಹಾಕೋ ಕವಳಕ್ಕೆ ಕಾಯ್ತಾ ಕೂರೋಕ್ಕೆ ನನಗೇನು ಕರ್ಮ? ನನ್ನ ಕೈಕಾಲೇನು ಉಡುಗಿಲ್ಲ, ಒಂದೆರಡು ಮನೆ ಅಡುಗೆ ಕೆಲಸ ಮಾಡಿ ನನ್ನ ಹೊಟ್ಟೆ ತುಂಬಿಸ್ಕೊಳ್ತೀನಿ, ನೀನಾದ್ರೂ ಒಂದು ದಾರಿ ತೋರಿಸು ‘ಅಮ್ಮ ಮರೆಯಲ್ಲಿ ಕಣ್ಣೊರೆಸಿಕೊಂಡಾಗ, ವಾಸುವಿನೊಡನೆ ಚರ್ಚಿಸಿ, ನನ್ನ ಪಾಲಿನ ಹಣಕ್ಕೆ ಮೇಲೊಂದಿಷ್ಟು ಹಾಕಿ ಚಿಕ್ಕ ಫ್ಲಾಟ್ ತೊಗೊಂಡು ಅಮ್ಮನಿಗೊಂದು ಗೂಡು ಕಲ್ಪಿಸಿದ್ದೆ. ‘ಅಡುಗೆ ಕೆಲಸ ಮಾಡಿ ಊಟ ಮಾಡುವಷ್ಟು ಕಷ್ಟ ಅಪ್ಪ ಕೊಟ್ಟಿಲ್ಲ, ನಿನ್ನ ಪಾಲಿನದ್ದನ್ನ ಬ್ಯಾಂಕಿಗೆ ಹಾಕಿ ಅದರ ಬಡ್ಡಿಯಲ್ಲಿ ಜೀವನ ಮಾಡು, ಬೇಕಾದಷ್ಟು’ ಎಂದು ಆ ವ್ಯವಸ್ಥೆಯನ್ನೂ ಮಾಡಿದ್ದೆ. ಇದರಿಂದ ಗಂಡುಮಕ್ಕಳು ಸೊಸೆಯರು ಎಲ್ಲರೂ ಖುಷ್. ನಾನು ‘ಅಮ್ಮನ ಮನೆ’ ಎಂದು ಬರುತ್ತಿದೆ, ನನ್ನ ಮನೆಯೇ ಆದರೂ. ಹೀಗಾಗಿ ಭಾರತಕ್ಕೆ ಬಂದಾಗ ವಸತಿಯ ತೊಂದರೆಯಿಲ್ಲ, ಮನೆಯಲ್ಲಿ ಲಗೇಜ್ ಇಟ್ಟು ಹಗಲು ಎಷ್ಟೆಲ್ಲ ತಿರುಗಾಡಿದರೂ ರಾತ್ರಿ ಮನೆ ಸೇರುತ್ತಿದ್ದೆ.
‘ನೀಲೋತ್ಪಲ?’
ಯಾರೋ ಕರೆದಂತಾಗಿ ತಿರುಗಿದೆ.
ನನ್ನಿಂದ ಮೂರನೇ ಆಸನದಲ್ಲಿ ಕುಳಿತಿದ್ದ ವ್ಯಕ್ತಿ.
‘ಸಾರಿ?’
‘ಬೈ ಎನಿ ಚಾನ್ಸ್ ನಿಮ್ಮ ಹೆಸರು ನೀಲೋತ್ಪಲ?’
‘ಹೌದು ...ನೀವು ?’
‘ಗುರುತು ಸಿಗಲಿಲ್ವ ?’
ಎಲ್ಲೋ ನೋಡಿದಂತಿದೆ ಆದರೆ ನೆನಪಾಗದು, ಮಾಸಲು.
‘ಕ್ಷಮಿಸಿ ತಿಳಿಯಲಿಲ್ಲ’ ಸಂಕೋಚಿಸಿದೆ.
‘ಅತ್ತಿಗೆ, ನಾನು ಚಿದಾನಂದ, ವೆಂಕಿಯ ದೊಡ್ಡಪ್ಪನ ಮಗ ... '
ಗರ ಬಡಿದಂತಾಯ್ತು... ಮರೆತೇ ಹೋಗಿದ್ದ ವೆಂಕಿ ಹೀಗೆ ನೆನೆಪಾಗಬೇಕೆ?
ಅಷ್ಟರಲ್ಲೆ ಅವನ ಮೊಬೈಲ್ ಕರೆ; ‘ಸಾರಿ’ ಎಂದು ಕರೆಗೆ ಉತ್ತರಿಸುತ್ತ ಆವರಣದ ಇನ್ನೊಂದು ಬದಿಗೆ ಹೋದ.
ವೆಂಕಿ, ವೆಂಕಟೇಶ ! ...
ನಮ್ಮನ್ನು ಅಗಲಿ ಇಪ್ಪತ್ತಮೂರು ವರ್ಷಗಳೇ ಆಗಿವೆ. ಎಲ್ಲ ಮರೆತಿರುವಾಗ ಹೀಗೇಕೆ ನೆನೆಯುವ ಪ್ರಸಂಗ? ನಾನು ಸುಮ್ಮನೆ ವಾಸು ಜೊತೆಗೆ ಬಂದಿದ್ದರೆ ಸಾಕಿತ್ತು. ಅಥವಾ, ವಾಸುವನ್ನು ಕರೆತರಲು ಏರ್‌ಪೋರ್ಟ್‌ಗೆ ಬರಬಾರದಿತ್ತು.
ದೊಡ್ಡ ಭಾವನವರ ಮಗನಿಗೆ, ಮಗ ಹುಟ್ಟಿದ್ದ ಪ್ರಯುಕ್ತ ಸಾಂಪ್ರದಾಯಿಕ ಕಾರ್ಯಕ್ರಮದ ಸಡಗರ.
ಮಕ್ಕಳು, ಸಂಭ್ರಮ್, ಸಂಯಮ್ ಇಬ್ಬರೂ ಬರೋಲ್ಲ ಅಂದಿದ್ದರಿಂದ ನಾನೂ ವಾಸು ಮಾತ್ರ ಹೊರಟಿದ್ದೆವು. ವಾರಕ್ಕೆ ಮೊದಲು ಗೆಳತಿ, ರುಚಿ, ತವರಿಗೆ ಹೊರಟಿದ್ದಳು. ನಾನೂ ಅವಳ ಜೊತೆ ಬಂದಿದ್ದೆ... ಒಂದಷ್ಟು ಖಾಸಗಿ ಸಮಯ ಸಿಕ್ಕೀತೆಂದು. ಬಂದ ನಾಲ್ಕೈದು ದಿನಗಳು ಶಾಲಾ ಕಾಲೇಜು ಗೆಳತಿಯರನ್ನು ಭೇಟಿ ಮಾಡಿ ಮಾಲ್, ಚಾಟ್ ಅಂತೆಲ್ಲ ಅಲೆದು ಬಾಲ್ಯವನ್ನು ಮತ್ತೊಮ್ಮೆ ಸವಿದಿದ್ದು ಆಯ್ತು. ಈಗ, ವಾಸುವಿಗೆ ತಿಳಿಸದೆಯೇ ಅಚ್ಚರಿ ನೀಡಲು ಏರ್‌ಪೋರ್ಟ್‌ಗೆ ಬಂದಿದ್ದೆ. ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗುವುದೆಂದು ತಿಳಿದ ಮೇಲೆ ಕೈಯಲ್ಲಿ ಪುಸ್ತಕವೊಂದು ಹಿಡಿದು ಕುಳಿತಿದ್ದೆ, ಆಗಲೇ ಚಿದಾನಂದ ತನ್ನನ್ನು ಗಮನಿಸಿದ್ದು.
‘ಸಾರಿ ಅತ್ತಿಗೆ ಮುಖ್ಯವಾದ ಕಾಲ್, ಇರಲಿ, ಹೇಗಿದ್ದೀರಿ ?’
‘ಹಾಂ... ಹೂಂ, ಚೆನ್ನಾಗಿದ್ದೀನಿ’ ಗಂಟಲಲ್ಲಿ ಪಸೆಯಾರಿತ್ತು.
‘ಮಕ್ಕಳು, ವಾಸು ಅಣ್ಣ ಚೆನ್ನಾಗಿದ್ದಾರಾ? ಅವರೂ ಬಂದಿದ್ದಾರಾ?’
‘ಎಲ್ಲರೂ ಫೈನ್, ವಾಸು ಈಗ ಬರ್ತಿದ್ದಾರೆ ಮಕ್ಕಳು ಅಲ್ಲೇ ಇದ್ದಾರೆ, ನಾಳೆ ಶುಕ್ರವಾರ ಭಾವನವರ ಮೊಮ್ಮೊಗನಿಗೆ ವರ್ಷದ ಸಂಭ್ರಮ, ಅದರಾಚೆಯ ಗುರುವಾರ ವಾಪಾಸಾಗ್ತಿದ್ದೀವಿ' ಅವನು ಕೇಳದೆಯೇ ಒದರಿದ್ದೆ.
‘ಅಚ್ಯುತ ಹೇಗಿದ್ದಾನೆ ?' ಮತ್ತೆ ನಾನೇ ಕೇಳಿದೆ, ಅಚ್ಯುತ ವೆಂಕಿಯ ತಮ್ಮ.
‘ಇದ್ದಾನೆ, ಆರೋಗ್ಯ ಅಷ್ಟು ಚೆನ್ನಾಗಿಲ್ಲ, ದೊಡ್ಡಮ್ಮ ಕಾಲವಾದ ಮೇಲೆ ಇಲ್ಲಿನ ಮನೆ ಮಾರಿ ಹೆಂಡತಿ ಊರಲ್ಲಿ ಸೆಟಲ್ ಆಗ್ಬಿಟ್ಟ’

‘ಓಹ್... ' ಸೊಟ್ಟಗೆ ನಕ್ಕೆ.
‘ಇಷ್ಟು ವರ್ಷಕ್ಕೆ ನಿಮ್ಮನ್ನು ನೋಡಿದ್ದು ಬಹಳ ಸಂತೋಷವಾಯಿತು. ಅತ್ತಿಗೆ, ನಾನು ಹೊರಡುವೆ, ನಮ್ಮ ಎಂ.ಡಿನ ರಿಸೀವ್ ಮಾಡ್ಬೇಕು ಫ್ಲೈಟ್ ಬಂತು’ ಎಂದು ಅರೈವಲ್ಸ್ ತಾಣಕ್ಕೆ ಹೋದ.
ಮನಸ್ಸು ಭಾರವೆನಿಸಿತು.
ವಾಸುವಿನ ಫ್ಲೈಟ್ ಬರಲು ಇನ್ನು ಮುಕ್ಕಾಲು ಗಂಟೆ ಇದೆ.
ತಲೆಗೆ ವೆಂಕಿ ಎಂಬ ಹುಳು ಬಿದ್ದಾಗಿತ್ತು.

ಸಾಧು ಸ್ವಭಾವದ ವೆಂಕಿಯೊಂದಿಗೆ, ನನ್ನ ಮದುವೆ ಹಿರಿಯರ ನಿರ್ಧಾರ. ಅತ್ತೆ ಕೊಂಚ ಗಡಸು ಮಾವನದು ಹೆಂಗರಳು. ಮೈದುನ ಅಚ್ಯುತ, ತನ್ನಿಷ್ಟದ ಹುಡುಗಿಯನ್ನು ಕಟ್ಟಿಕೊಂಡು ಕುಟುಂಬಕ್ಕೆ ಆಘಾತ ಮೂಡಿಸಿದ್ದ. ಅಂತಹ ಮನೆಗೆ ಹುಡುಗಿಯನ್ನು ಕೊಡಲು ಹಿಂದೇಟು ಹೊಡೆಯುತ್ತಿದ್ದ ಕಾಲ, ಅಂತಸ್ತಿನಲ್ಲಿ ಹೊಂದಿಕೆಯಾಗದಿದ್ದರೂ ನನ್ನನ್ನು ಮನೆ ತುಂಬಿಸಿಕೊಂಡಿದ್ದರು, ಹೆಚ್ಚು ಖರ್ಚಿಲ್ಲದೆ ಫಾರಿನ್ ವರ- ನಮ್ಮ ಮನೆಗೊಂದು ಆಕರ್ಷಣೆ! ಮದುವೆಯಾದ ತಿಂಗಳಿಗೆಲ್ಲ ಹೊರದೇಶಕ್ಕೆ ಬಂದಾಗಿತ್ತು. ಅಂತರ್ಮುಖಿಯಾದ ವೆಂಕಿಯೊಡನೆ ಬದುಕು ನನ್ನ ಲೆಕ್ಕಾಚಾರಕ್ಕೆ ಸಪ್ಪೆ ಎನ್ನಿಸಿದರೂ ಸಮಾಧಾನವಿತ್ತು. ವರುಷ ಎರಡು ಕಳೆದರೂ ಮಕ್ಕಳಾಗಲಿಲ್ಲ. ಇರದ ಬಗ್ಗೆ ಚಿಂತಿಸಲು ಪುರುಸೊತ್ತಿಲ್ಲದ ಮಟ್ಟಿಗೆ ನಾನು ನನ್ನದೇ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೆ. ಅದೊಂದು ದಿನ ಮತ್ತೊಂದು ಆಘಾತಕರ ಸುದ್ದಿ ನನ್ನನ್ನು ಉಡುಗಿಸಿತ್ತು. ಯಾವುದೇ ಚಿಕಿತ್ಸೆಗೆ ಕರಗದ ಕ್ಯಾನ್ಸರ್ ಅವರನ್ನು ಆವರಿಸಿ ದಿನ ಎಣಿಸುವಂತೆ ಮಾಡಿತ್ತು. ಆ ದಿನಗಳಲ್ಲಿ ವೆಂಕಿಯ ಜೊತೆ ನಿಂತದ್ದು ಅವನ ಗೆಳೆಯ ವಾಸು. ನನಗೆ ಹೊಸಬಾಳು ಕೊಡಬೇಕೆಂಬ ಗೆಳೆಯನ ಅಂತಿಮ ಕೋರಿಕೆಯನ್ನು ಸ್ವೀಕರಿಸಿ ಸಾಕಾರಗೊಳಿಸಿದ್ದ.
ನನ್ನ ತವರಿನ ಕಡೆ ಆಕ್ಷೇಪವಿಲ್ಲದಿದ್ದರೂ ವೆಂಕಿಯ ಮನೆಯವರು ನನ್ನನ್ನು ದೂರ ಮಾಡಿದ್ದರು. ವಾಸುವಿನ ಕುಟುಂಬದಲ್ಲಿ ತಕರಾರಿರಲಿಲ್ಲ. ಇಬ್ಬರು ಮುದ್ದಾದ ಮಕ್ಕಳಿಗೆ ತಾಯಿಯಾಗಿದ್ದೆ. ಕಾಲ ಎಲ್ಲವನ್ನು ಮರೆಸಿತ್ತು. ವೆಂಕಿಯಲ್ಲಿ ಕಾಣಬಯಸಿದ್ದು ವಾಸುವಿನಲ್ಲಿ ಸಿಕ್ಕಿತ್ತು, ಅಷ್ಟರಮಟ್ಟಿಗೆ ನಾನು ಅದೃಷ್ಟವಂತೆ. ಆದರೆ ಈಗ ಆಳದಲ್ಲಿ ಹುದುಗಿದ್ದ ನೆನಪು ಅಲೆಯಲೆಯಾಗಿ ಹಾದು ಮನಸ್ಸು ಭಾರವಾಯಿತು. ಕಣ್ಣಿಂದ ನೀರು ಜಿನುಗುವುದು ಅನ್ನಿಸಿದಾಗ ಕೈಚೀಲದಿಂದ ಟಿಶ್ಯು ಪೇಪರ್ ತೆಗೆದು ಕಣ್ಣಿಗೆ ಅದುಮಿದೆ.

ಫ್ಲೈಟ್ ಬಂದ ಸೂಚನೆ.
ಧೀರ್ಘವಾಗಿ ಉಸಿರೆಳೆದು ವೆಟ್ ಟಿಶ್ಯುನಲ್ಲಿ ಮುಖ ಒರೆಸಿಕೊಂಡೆ. ಸ್ವಲ್ಪ ಹಾಯೆನಿಸಿತು. ಅರೈವಲ್ ಜಾಗದಲ್ಲಿ ನಿಂತೆ. ಒಬ್ಬೊಬ್ಬರೇ ಬರುತ್ತಿದ್ದರು.
ವಾಸು ಟ್ರಾಲಿ ಎಳೆದು ಬರುತ್ತಿದ್ದು ಕಂಡು ಅವನತ್ತ ಹೋದೆ. ನನ್ನನ್ನು ಕಂಡೊಡನೆ, ಕಣ್ಣರಳಿಸಿ
‘ಹೇ ವಾಟ್ ಎ ಪ್ಲೆಸೆಂಟ್ ಸರ್ಪ್ರೈಸ್... ಡಿಂಟ್ ಎಕ್ಸ್ಪೆಕ್ಟ್' ಎಂದು ಮೆಚ್ಚುಗೆ ತೋರಿದ.
‘ಮಿಸ್ಡ್ ಯೂ ವಾಸು’ ಎಂದು ಅವನ ನಿರೀಕ್ಷೆಗೂ ಮೀರಿ ಅಪ್ಪಿದೆ.
‘ಮೀ ಟೂ .. ' ಎಂದ.
ಅವನ ನೋಟದಲ್ಲಿ ಅರಿಯದ ಬೇಸರ.
‘ಏನಾಯ್ತು ? ಸಂಥಿಂಗ್ ರಾಂಗ್ ?’
ಕ್ಯಾಬ್ ಹತ್ತುತ್ತಲೇ ಕೇಳಿದೆ.
ಮೊಬೈಲ್ ತೆಗೆದು ಯಾರಿಗೋ ಮಾತನಾಡಿದ. ಮತ್ತೆ ಕೆದಕಲು ಹೋಗಲಿಲ್ಲ.
ಮನೆ ತಲುಪುತ್ತಲೇ ನಮ್ಮನ್ನು ಎದಿರುಗೊಳ್ಳಲು ಎಣಿಸಿದಂತೆ ಅತ್ತೆಯವರು ಬರಲಿಲ್ಲ.
‘ಅಮ್ಮಾವ್ರು ಆಸ್ಪತ್ರೆಗೆ ಹೋಗಿದ್ದಾರೆ ನೀವು ತಿಂಡಿ ತಿಂದು ಹೋಗಬೇಕಂತೆ, ಇಡ್ಲಿ, ಸಜ್ಜಿಗೆ ರೆಡಿ ಇದೆ’ ಅಡುಗೆಯ ಶಾಂತಮ್ಮ ಹೇಳಿದಾಗ ವಾಸು ತಲೆಯಾಡಿಸಿದ, ನನಗೇನೂ ಅರ್ಥವಾಗಲಿಲ್ಲ.

ನನ್ನ ಕಣ್ಣಾಲಿಗಳು ಮತ್ತೆ ತುಂಬಿದವು.
ಆಸ್ಪತ್ರೆಯ ರಿಸೆಪ್ಷನ್‌ನಲ್ಲಿ ವಿಚಾರಿಸಿದಾಗ ಮಾವನವರು ಐ.ಸಿ.ಯುದಲ್ಲಿ ಇರುವುದಾಗಿ ತಿಳಿದು ನೇರ ಅಲ್ಲಿಗೇ ಹೋದೆವು. ರೋಗಿಗಳ ಕಡೆಯವರು ಕಾಯುವ ಜಾಗದಲ್ಲಿ ಅತ್ತೆಯವರು ಸಪ್ಪಗೆ ಕುಳಿತಿದ್ದರು. ವಾಸುವಿನ ದನಿ ಕೇಳುತ್ತಲೇ, ‘ಬಾ ವಾಸು, ಇಲ್ಲೇ ಕೂತ್ಕೋ, ಸದ್ಯ, ನಿನ್ನನ್ನು ನೋಡಿದ ಮೇಲೆ ಸ್ವಲ್ಪ ಧೈರ್ಯ ಬಂತು, ಅಪ್ಪನಿಗೆ ಮಾಮೂಲೀ ಉಸಿರಾಟದ ಸಮಸ್ಯೆ. ಈ ಬಾರಿ ಸ್ವಲ್ಪ ಗಂಭೀರ ಅನ್ನಿಸ್ತಿದೆ. ಮನೆಯಿಂದ ಹೊರಡುವಾಗಲೇ ಹೇಳಿಬಿಟ್ರು ‘ನನಗೇನಾದರೂ ಆದರೂ ಯಾರಿಗೂ ವಿಷಯ ತಿಳಿಸದಂತೆ ವ್ಯವಸ್ಥೆ ಮಾಡಿ, ಮರಿಮಗನ ಸಮಾರಂಭ ಸಾಂಗವಾಗಿ ನಡೆಯುವಂತೆ ಮಾಡು’ ಅಂತ. ಮುಖ್ಯವಾಗಿ ವಿದೇಶದಿಂದ ಬರುವ ಮಗ, ಮೊಮ್ಮೊಕ್ಕಳ ಮೇಲಿನ ಪ್ರೀತಿ. ಎಲ್ಲರು ಒಟ್ಟಿಗೆ ಸೇರುವಾಗ ತನ್ನ ಅನುಪಸ್ಥಿತಿ ಬಾಧಿಸದಿರಲಿ ಅಂತಲೋ ಏನೋ. ಇವರ ಆರೋಗ್ಯ ಸರಿಯಿದ್ದಿದ್ದರೆ ನಾಳೆ ಎಲ್ಲರೂ ಮೈಸೂರಿಗೆ ಹೋಗುವುದು ಅಂತಾಗಿತ್ತು. ಯಾಕೋ ಈ ವಿಷಯ ದೊಡ್ಡ ಮಾಡುವುದು ಬೇಡ ಅಂತಾನೇ ಬಾಯಿ ಬಿಗಿಹಿಡಿದಿದ್ದೀನಿ, ಸದ್ಯ ನಿನ್ನನ್ನು ನೋಡಿದ ಮೇಲೆ ಒಂಥರಾ ಸಮಾಧಾನ, ವಾಮನನಿಗೆ ಹೇಳಿ ಅವನಿಗೂ ಗಾಬರಿ ಮಾಡೋದು ಬೇಡ, ಪಾಪ, ಈ ಅಪರೂಪದ ಕಾರ್ಯಕ್ರಮಕ್ಕೆ ಮಕ್ಕಳು ಮಂದಿ ಸೇರಿರ್ತಾರೆ’. ಅತ್ತೆ, ಕಣ್ಣೊರೆಸಿಕೊಂಡರು.

ವಾಸು ‘ಈಗ ಬರ್ತೀನಿ’ ಎಂದು ಯಾರನ್ನೋ ಕಾಣಲು ಹೋದ. ನಾನು ಅತ್ತೆಯ ಬದಿಗೆ ಕುಳಿತೆ.
‘ಇಷ್ಟು ಹೊತ್ತಿಗಾಗಲೇ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿರ್ತಾರೆ ಛತ್ರ, ಅಡುಗೆ ಉಡುಗೊರೆ ಅಂತ ಲಕ್ಷಾಂತರ ಖರ್ಚು ಎಲ್ಲ ಮಗನದ್ದೇ ಅಂತ ವಾಮನ ಹೇಳಿದ್ದ ಡಾಲರ್‌ಗಟ್ಟಲೆ ಸಂಪಾದನೆ ಇದೆ - ಅಪ್ಪನಿಗೂ ಕಳೆದ ತಿಂಗಳು ಎಂಬತ್ತೇಳು ತುಂಬಿತಲ್ಲ, ಅದನ್ನೂ ಸೇರಿಸಿ ಪೂಜೆ, ಹೋಮ ಅಂತ ಇಟ್ಕೊಂಡಿದ್ದಾರೆ. ಎಲ್ಲರೂ ಸೇರೋಕ್ಕೆ ಒಂದು ನೆಪ ಅಷ್ಟೇ ಅಲ್ವ? ಮಗುವಿನ ನೆಪದಲ್ಲಿ ಎಲ್ಲರೂ ಸೇರಬಹುದು ಅಂತ ವಾಮನನೇ ಒಪ್ಪಿಕೊಂಡನಂತೆ'
ನಾನು ಸುಮ್ಮನೆ ‘ಹೂಂ’ಗುಟ್ಟಿದೆ.

‘ಈ ಬಾರಿ ಮೇಲೇಳ್ತಾರೆ ಅನ್ನೋ ಬಗ್ಗೆ ಸಂಶಯವಿದೆ’ ಮತ್ತೆ ಕಣ್ಣೊರೆಸಿಕೊಂಡರು.
‘ಎಲ್ಲ ಸರಿಹೋಗುತ್ತೆ ಬಿಡಿ ಅತ್ತೆ’ ಧೈರ್ಯ ತುಂಬಿದೆ.
ಅಷ್ಟರಲ್ಲೇ ವಾಸು ಬಂದ.
‘ವೆಂಟಿಲೇಟರ್ ಸಪೋರ್ಟ್ ಕೊಡ್ತಿದ್ದಾರೆ, ನೋಡೋಣ, ಅಮ್ಮ, ನಾಳೆ ನಮ್ಮೊಟ್ಟಿಗೆ ನೀನು ಬಾ ಅಪ್ಪ ಬರದೇ ಇರೋಕ್ಕೆ ಏನಾದರೂ ಕಾರಣ ಹೇಳಿದರಾಯ್ತು ನಾವು ಬರೋತನ್ಕಾ ವಿಶೇಷ ಕಾಳಜಿಯಿಂದ ನೋಡಿಕೊಳ್ಳೋಕೆ ರಿಕ್ವೆಸ್ಟ್ ಮಾಡಿದ್ದೀನಿ, ನನ್ನ ಕ್ಲಾಸ್‌ಮೇಟ್ ಅಣ್ಣನೇ ಈ ಆಸ್ಪತ್ರೆಯ ಎಂ.ಡಿ. ಚಿಂತೆ ಬೇಡ’ ಎಂದು ನಮ್ಮನ್ನು ಅಲ್ಲಿಂದ ಎಬ್ಬಿಸಿದ.

ಗುರುವಾರ ಸಂಜೆ ನಾಲ್ಕಕ್ಕೆ ಹೊರಟು ನೇರ ಛತ್ರಕ್ಕೆ ಹೋದೆವು. ಅಷ್ಟರಲ್ಲಾಗಲೇ ಸಡಗರ ಮನೆ ಮಾಡಿತ್ತು. ‘ಇವತ್ತು ಸಂಜೆ, ಅಪ್ಪನ ಫ್ಯಾಕ್ಟರಿ ವತಿಯಿಂದ ನಿವೃತ್ತ ನೌಕರರಿಗೆ ಸನ್ಮಾನವಿದೆ. ಅದನ್ನು ಮುಗಿಸಿಕೊಂಡು ನಾಳೆ ಬರ್ತಾರೆ’ ಎಂದು ಮಾವನ ಅನುಪಸ್ಥಿತಿಗೆ ಸಬೂಬು ಹೇಳಿ ಭಾವನನ್ನು ಸಮಾಧಾನಪಡಿಸಿದ್ದಾಯ್ತು. ಹೋಮದ ಮುನ್ನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ವಾಸು ಆಗಾಗ್ಗ ಆಸ್ಪತ್ರೆಗೆ ಮಾತನಾಡುತ್ತಿದ್ದರು. ಅತ್ತೆಯ ಮುಖದಲ್ಲಿ ಎಂದಿನ ಕಳೆಯಿಲ್ಲ. ಅರಿಯದ ಆತಂಕ.
‘ನೀಲೂ, ನನಗ್ಯಾಕೋ ಹೆದರಿಕೆ ಕಣೆ, ಹಾಗೇ ಕಣ್ಮುಚ್ಚಿಬಿಡ್ತಾರೇನೋ, ನನಗೆ ಯಾವಾಗ ಊರಿಗೆ ಹೋಗ್ತಿನೋ ಅನ್ನಿಸಿಬಿಟ್ಟಿದೆ’ ಕಣ್ತುಂಬಿಕೊಂಡು ಮೆಲುದನಿಯಲ್ಲಿ ಹೇಳಿದಾಗ ‘ಹಾಗೆಲ್ಲ ಅಂದ್ಕೋಬೇಡಿ ಅತ್ತೆ, ಮೊದಲ ಪಂಕ್ತಿ ಊಟಮಾಡಿ ನಾಳೆ ಹೊರಟುಬಿಡೋಣ ವಾಸೂಗೆ ಹೇಳ್ತೀನಿ’ ಎಂದು ಅವರ ಕೈ ಅದುಮಿದೆ.
ಯಾಕೋ ಮತ್ತೆ ವೆಂಕಿಯ ಕೊನೆಯ ದಿನಗಳು ನೆನಪಾದವು. ಸಾವು ಸಮೀಪಿಸುವಾಗಲೂ ನನಗೇ ಧೈರ್ಯತುಂಬಿ ನನಗೊಂದು ಬಾಳು ತೋರಿಸಿದ್ದ. ನಿಂತ ನೀರಾಗದಿರುವುದೇ ಜೀವನ ಎಂದು ನನಗೇ ಸಮಾಧಾನ ಹೇಳಿ ಹೊರಟೇ ಹೋಗಿದ್ದ.

ಅರೆಮನಸ್ಸಿನಲ್ಲೇ ಸಮಾರಂಭದಲ್ಲಿ ಪಾಲ್ಗೊಂಡಾಗಿತ್ತು. ನಡುವೆ ಆಸ್ಪತ್ರೆಯಿಂದ ಕರೆ ಬಂದಿತ್ತು. ವಾಸುವಿನ ಸಪ್ಪೆ ಮುಖ ನೋಡುತ್ತಲೇ ಅತ್ತೆ ವಿಚಲಿತರಾಗಿದ್ದರು. ‘ಏನಂತೆ ?’ ಅತ್ತೆ ಕಣ್ಣಲ್ಲೇ ಕೇಳಿದ್ದರು ‘ಇಲ್ಲಿ ಬೇಡ’ ಎಂದು ಮೊದಲ ಮಹಡಿಯಲ್ಲಿ ನಾವು ಉಳಿದುಕೊಂಡಿದ್ದ ರೂಮಿನತ್ತ ಹೆಜ್ಜೆ ಹಾಕಿದ ವಾಸುವನ್ನೇ ನಾನೂ ಅತ್ತೆಯವರೂ ಹಿಂಬಾಲಿಸಿದೆವು. ‘ವೆಂಟಿಲೇಟರ್ ಸಪೋರ್ಟ್ ತೆಗೆಯಲು ನಮ್ಮ ಅನುಮತಿಗಾಗಿ ಕಾಯ್ತಿದ್ದಾರೆ’ ಎಂದ ಗದ್ಗದಿತನಾಗಿ. ಐದು ನಿಮಿಷ ಅತ್ತೆ ಮೌನಕ್ಕೆ ಮೊರೆ ಹೋದರು. ನಂತರ, ‘ನಡೆಯಿರಿ ನಾವೂ ಒಂದು ತುತ್ತು ಉಂಡ ಶಾಸ್ತ್ರ ಮಾಡಿ ಹೊರಟುಬಿಡೋಣ, ಇಲ್ದಿದ್ರೆ ವಾಮನ ನೊಂದ್ಕೊಳ್ತಾನೆ, ಈಗ ಬಿಟ್ಟರೂ ಮನೆ ಸೇರೋಕ್ಕೆ ನಾಲ್ಕೈದು ಗಂಟೆ ಹಿಡಿಯುತ್ತೆ, ಅಲ್ಲಿ ಹೋಗೋ ಹೊತ್ತಿಗೆ ಇಲ್ಲಿ ಎಲ್ಲರೂ ಛತ್ರ ಖಾಲಿ ಮಾಡಿರ್ತಾರೆ, ಆಮೇಲಿಂದು ಆಮೇಲೆ’ ಎಂದು ಅತ್ತೆ ದೃಢವಾಗಿ ಹೇಳಿದಾಗ ಅವಾಕ್ಕಾಗುವ ಸರದಿ ನಮ್ಮದಾಗಿತ್ತು. ಅಂದಿನ ಸಡಗರ, ಸಂಭ್ರಮಕ್ಕೆ ಯಾವುದೇ ಕುತ್ತು ಬಾರದಂತೆ ತಳೆದಿದ್ದ ನಿರ್ಧಾರಕ್ಕೆ ಬೆರಗಾಗುವ ಜೊತೆಗೆ, ಅತ್ತೆಯ ಸಮಯ, ಸಾಮಾಜಿಕಪ್ರಜ್ಞೆಗೆ ತಲೆಬಾಗಬೇಕೆನ್ನಿಸಿತು.

‘ನೀಲಾ , ವೆಂಟಿಲೇಟರ್ ಸಪೋರ್ಟ್ ಇರೋ ತನಕ, ಇವರು ಜೀವಂತವಾಗಿದ್ದರೆ ಅನ್ನೋ ಲೆಕ್ಕಾನೇ ಅಲ್ವಾ ?’ ಕಾರಿನಲ್ಲಿ ಸಾಗುವಾಗ ಅತ್ತೆ ಇದ್ದಕ್ಕಿದ್ದಂತೆ ಕೇಳಿದರು.
ನನಗೆ ಏನು ಹೇಳಬೇಕೋ ತೋಚದೆ ವಾಸುವಿನತ್ತ ನೋಡಿದೆ.
‘ನೇರ ಆಸ್ಪತ್ರೆಗೇ ಹೋಗೋಣ ಅಲ್ಲಿ ನಿಮ್ಮ ಅಪ್ಪನನ್ನು ನೋಡಿದ ಮೇಲೆ ಆ ಸಪೋರ್ಟ್ ತೆಗೆಯೋಕ್ಕೆ ಹೇಳೋಣವಂತೆ... ಅಲ್ಲಿಗೆ ನನ್ನ ಸಪೋರ್ಟು ಕಳಚಿದಂತೆಯೇ, ಬದುಕು ಹೇಗಾದರೂ ಸವೆಯುತ್ತೆ’ ಅತ್ತೆ ಮುಂದುವರೆಸಿ, ಬಿಕ್ಕತೊಡಗಿದರು.
ವಾಸುವಿನ ಮುಖದಲ್ಲಿ ಶೋಕಭಾವ ಆವರಿಸಿತ್ತು.
ಕಾರು ಸಿಗ್ನಲ್ ಕಂಬದಲ್ಲಿ ಕೆಂಪು ದೀಪ ಕಾಣುತ್ತಿರುವಂತೆ ನಿಂತಿತು, ಅರವತ್ತು ಸೆಕೆಂಡ್ ನಂತರ ಹಸಿರು ಬಣ್ಣ ಕಂಡೊಡನೆ ಮಾಮೂಲಿನಂತೆ ಚಲಿಸಿತು.
ಬೇಡಬೇಡವೆಂದರೂ ಅಂದು ವೆಂಕಿ ಹೇಳಿದ್ದ ‘ನಿಂತ ನೀರಾಗದಿರುವುದೇ ಜೀವನ’ ಎಂಬ ಮಾತುಗಳು ಅನುರಣಿಸಿದವು. ಅದಕ್ಕೆ ಪೂರಕವೋ ಎಂಬಂತೆ ದೋಣಿ ಸಾಗಲಿ, ಮುಂದೆ ಹೋಗಲಿ ಹಾಡು ... ಎಫ್.ಎಂ ರೇಡಿಯೋದಿಂದ ಬಿತ್ತರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.