ಗುರುವಾರ , ಆಗಸ್ಟ್ 18, 2022
25 °C

ಕಥೆ | ಸೋದರ ಮಾವ

ಮೂಲ: ಉದಯ ಪ್ರಕಾಶ್. ಕನ್ನಡಕ್ಕೆ: ಡಿ.ಎನ್.ಶ್ರೀನಾಥ್ Updated:

ಅಕ್ಷರ ಗಾತ್ರ : | |

Prajavani

ಸೋದರ ಮಾವನವರಿಗೆ ನಾನು ಮಾತ್ರವಲ್ಲ, ಇಡೀ ಮೊಹಲ್ಲಾದ ಜನ ಸೋದರ ಮಾವ ಎಂದೇ ಕರೆಯುತ್ತಿದ್ದರು. ಸಾಗರದಲ್ಲಿ ಮೂರು ದಾರಿಗಳು ಸೇರುವ ಒಂದು ಸ್ಥಳವಿದೆ. ಇದನ್ನು ತೀನ್‌ಬತ್ತಿ ಎನ್ನುತ್ತಾರೆ. ಇದಕ್ಕೂ ಮುಂದುವರೆದು ಹೋದಾಗ ಒಂದು ‘ಏರುನೆಲ’ ಸಿಗುತ್ತದೆ. ಹಾಗಂತ ಸಾಗರ, ಭೋಪಾಲದಂತೆ ಏರಿಳಿತದ ನಗರವಾಗಿದೆ. ಅಲ್ಲಿ ರಿಕ್ಷಾಗಳು ಹೋಗುವುದಿಲ್ಲ. ಟಾಂಗಾ ಅಥವಾ ಟ್ಯಾಕ್ಸಿಗಳು ಪ್ರಯಾಣಿಕರನ್ನು ಸಾಗಿಸುತ್ತವೆ. ಈ ಏರುನೆಲದ ಕೊನೆಯಲ್ಲಿ ಸ್ವಲ್ಪ ಎಡ ಭಾಗದಲ್ಲಿ ಒಂದು ಸಂಕೀರ್ಣ ಗಲ್ಲಿ ತೆರೆದುಕೊಳ್ಳುತ್ತದೆ. ಈ ಸಂಕೀರ್ಣ ಗಲ್ಲಿಯಲ್ಲಿ ನುಗ್ಗಿದ್ದಾಗ ಅಮೋನಿಯಾದ ತೀಕ್ಷ್ಣ ಗಂಧ ಮೂಗಿನ ಹೊಳ್ಳೆಗಳನ್ನು ಆವರಿಸುತ್ತದೆ. ಈ ಗಲ್ಲಿಯ ಇಬ್ಬದಿಯಲ್ಲಿ ಎತ್ತರದ ಗೋಡೆಗಳಿದ್ದು, ಇವುಗಳ ಮೇಲೆ ಅಜೀರ್ಣ, ಗುಪ್ತ ರೋಗ, ಫ್ಯಾನ್‌ಗಳು, ಬೀಡಿ, ಕಾಡಿಗೆ, ಹಲ್ಲುಪುಡಿ ಮುಂತಾದ ಜಾಹೀರಾತುಗಳನ್ನು ಬರೆಯಲಾಗಿದೆ. ಈ ಗೋಡೆಗಳು ವಾಸ್ತವವಾಗಿ ಎತ್ತರದ ಬಿಲ್ಡಿಂಗ್‌ಗಳ ಹಿಂಭಾಗವಾಗಿವೆ, ಅಲ್ಲಿ ಸಂಡಾಸು, ಸ್ನಾನಗೃಹಗಳ ಪೈಪ್‌ಗಳು ತೆರೆದುಕೊಳ್ಳುತ್ತವೆ.

ಈ ಸಂಕೀರ್ಣ ಗಲ್ಲಿ ಕೊನೆಗೊಳ್ಳುವಲ್ಲಿ ಕಸಕಡ್ಡಿ, ತಿಪ್ಪೆರಾಶಿ ಮತ್ತು ಒಡೆದ ಇಟ್ಟಿಗಳಿಂದಾವೃತವಾದ ಒಂದು ಚಿಕ್ಕ ಬಯಲಿದೆ. ಈ ಬಯಲಿನಲ್ಲಿ ದೇಹ-ಬಾಧೆ ತೀರಿಸಿಕೊಳ್ಳಲು ಸಂಡಾಸಿನಂಥ ಅನುಕೂಲಗಳಿಲ್ಲದವರು ಬಂದು ಕೂರುತ್ತಾರೆ. ಇದಕ್ಕೆ ಸ್ವಲ್ಪ ಮುಂದೆ ಪಛೀತಾಟೋಲಾ ಎಂಬ ಸುಮಾರಾದ ಹಳ್ಳಿಯಿದೆ. ಸೋದರ ಮಾವನವರು ಇಲ್ಲಿಯೇ ಇರುತ್ತಾರೆ.

ಸೋದರ ಮಾವನವರನ್ನು ಭೇಟಿಯಾಗುವುದು ದೊಡ್ಡ ವಿಷಯವೇನಲ್ಲ. ನೀವು ನಗರಕ್ಕೆ ಹೋಗುತ್ತಿದ್ದರೆ ಅಥವಾ ಪೇಟೆಯಿಂದ ಮರಳಿ ಬರುತ್ತಿದ್ದರೆ, ಕಚೇರಿ ಕಡೆಗೆ ಸೈಕಲ್ ಪೆಡಲ್ ತುಳಿಯುತ್ತಿದ್ದರೆ ಅಥವಾ ಸಿನಿಮಾ ನೋಡಿ ಮನೆಗೆ ಮರಳಿ ಬರುತ್ತಿದ್ದರೆ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ, ಸೋದರ ಮಾವನವರನ್ನು ನೀವು, ಯಥಾಪ್ರಕಾರ ಇಟ್ಟಿಗೆಯ ಮನೆಯ ಹೊಸ್ತಿಲ ಬಳಿ ಹಳೆಯ ಮಂಚದಲ್ಲಿ ಕೂತಿರುವುದನ್ನು ನೋಡಬಹುದು.

ಯಾರಾದರು ಆ ಗಲ್ಲಿಯಿಂದ ಹಾದು ಹೋದರೆ ಸೋದರ ಮಾವನವರು ಅವರೆಡೆಗೆ ಯಾಚನೆಯ ದೃಷ್ಟಿಯಿಂದ, ಉತ್ಸುಕತೆಯ ಮುಖ-ಮುದ್ರೆಯಿಂದ ನೋಡುತ್ತಾರೆ-ಹಸಿದ ಮಗು ಸಿಹಿ ತಿಂಡಿಯನ್ನು ನೋಡುವಂತೆ; ಆ ದೃಷ್ಟಿಯಲ್ಲಿ ಒಂದು ರೀತಿಯ ಅಪೇಕ್ಷಾ-ರಹಿತ ಆಸೆಯಿರುತ್ತದೆ. ಪ್ರತಿಯೊಬ್ಬರಿಗೂ ಇದರ ಅರ್ಥ ತಿಳಿದಿದೆ; ಅವರು ಹಲ್ಲುಗಿಂಜಿ ಬಲಗೈಯನ್ನೆತ್ತಿ ಗಟ್ಟಿಯಾಗಿ ಹೇಳುತ್ತಾರೆ, ‘ಮಾವ, ಜೈಹಿಂದ್!’ ಸೋದರ ಮಾವನವರು ಸಂತುಷ್ಟರಾಗುತ್ತಾರೆ, ನಂತರ ಮೌನರಾಗಿ ಬೀಡಿ ಸೇದುತ್ತಾರೆ. ಒಂದು ವೇಳೆ ಯಾರಾದರು ಗಡಿಬಿಡಿಯಲ್ಲಿದ್ದರೆ, ಬೇಗ ಹೋಗುವ ಆತುರದಲ್ಲಿದ್ದರೆ ಹಾಗೂ ಸೋದರ ಮಾವನವರ ಅಸ್ತಿತ್ವವನ್ನು ಮರೆತು ಹಾದು ಹೋದರೆ ಅವರ ಹೃದಯದಲ್ಲಿ ಗಾಢ ವೇದನೆ ಹುಟ್ಟುತ್ತದೆ. ಅವರು ದುಃಖದಿಂದಾಗಿ ಅಸ್ತವ್ಯಸ್ತರಾಗಿ, ತುಟಿಗಳಲ್ಲಿಯೇ ಏನೋ ಬಡಬಡಿಸಲು ಆರಂಭಿಸುತ್ತಾರೆ.

ನಾನು ಸಾಗರಕ್ಕೆ ಹೊಸಬನಾಗಿದ್ದೆ. ನೌಕರಿಯೂ ಹೊಸದಾಗಿತ್ತು. ಪಛೀತಾಟೋಲಾದ ಜನಗಣತಿ ಕಾರ್ಯಾಲಯಕ್ಕೆ ಹೋದೆ. ಅಲ್ಲಿ ವೋಟರ್ ಲಿಸ್ಟ್ ಸಿದ್ಧವಾಗುತ್ತಿತ್ತು, ಆಗ ಸೋದರ ಮಾವನವರೊಂದಿಗೆ ಭೇಟಿಯಾಯಿತು. ಅವರು ನನ್ನನ್ನು ತಮ್ಮ ಅಲುಗಾಡುತ್ತಿದ್ದ ಮಂಚದಲ್ಲಿ ತಮ್ಮ ಮೊಮ್ಮಗನಂತೆ ಕೂರಿಸಿದರು. ಅವರ ಮನೆಯಲ್ಲಿ ಒಟ್ಟು ನಾಲ್ಕು ಜನರಿರುವ ವಿಷಯ ತಿಳಿಯಿತು. ಒಬ್ಬರು ಸೋದರ ಮಾವ, ಉಳಿದ ಮೂವರು ಅವರ ಮಕ್ಕಳು. ಇಬ್ಬರು ಮಕ್ಕಳು ದೂರದ ನಗರದಲ್ಲಿ ನೌಕರಿ ಮಾಡುತ್ತಿದ್ದು, ಕೊನೆಯವನು ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸೋದರ ಮಾವನವರೇ ಅಡುಗೆಯನ್ನು ಮಾಡುತ್ತಿದ್ದರು.

ಸೋದರ ಮಾವನವರೊಂದಿಗೆ ನನ್ನ ಭೇಟಿ ಚಿತ್ತಾಕರ್ಷಕವಾಗಿತ್ತು. ಅವರು, ‘ಮಗಾ, ಒಂದು ಕಾಲ ನಮ್ಮದಾಗಿತ್ತು. ಆ ದಿನಗಳು ಫರ‍್ರನೆ ಕಳೆದು ಹೋದವು. ಆಗ ಬ್ರಿಟಿಷರು ಆಳುತ್ತಿದ್ದರು. ನಾವೆಲ್ಲರೂ ಸ್ವಾತಂತ್ರ್ಯದ ಪರವಾಗಿದ್ದೆವು. ಹಗಲು-ರಾತ್ರಿ ಒಂದೇ ಜಪ. ಗಾಂಧಿ ಬಾಬಾರವರ ಹೆಸರಿನಲ್ಲಿ ಭಜನೆ-ಕೀರ್ತನೆ, ಉಪವಾಸ ಮತ್ತು ಸರಳ ಖಾದಿ ಉಡುಪು ನಮ್ಮ ಮಂತ್ರವಾಗಿತ್ತು. ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’- ಇದು ನಮ್ಮ ಘೋಷಣೆಯಾಗಿತ್ತು. ಗಾಂಧೀಜಿಯವರ ಮಾತಿನಂತೆ ವೈಸರಾಯ್ ಸಾಹೇಬರು ನಮ್ಮ ಬಂಗ್ಲೆಗೆ ಬಂದರು, ಏನು ಹೇಳಲಿ ಮಗಾ, ಅದೇನು ಠೀವಿ-ಭಿಗುಮಾನ, ಅವರ ಹಿಂದೆ ಅದೇನು ದಂಡು! ವೈಸರಾಯರು ನಮ್ಮೆದರು ಕೈಮುಗಿದು ಒಂದು ಕಾಲಿನಲ್ಲಿ ನಿಂತು ಹೇಳಿದರು, ‘ಮಾಮಾಜಿ, ಈಗ ನೀವೇ ನಮ್ಮನ್ನು ಪಾರು ಮಾಡಬಲ್ಲಿರಿ. ಗಾಂಧಿ ಬಾಬಾ ನಿಮ್ಮ ಮಾತಿಗೆ ತುಂಬಾ ಮಹತ್ವವನ್ನು ಕೊಡುತ್ತಾರೆ- ಈಗ ನೀವೇ ಅವರಿಗೆ ಹೇಳಿ, ನಾವಿಲ್ಲಿ ಹಿಂದೂಸ್ಥಾನದಲ್ಲಿರಲು ಅವಕಾಶ ಮಾಡಿಸಿ ಕೊಡಿ’. ನಾವು ಅವರಿಗೆ ಪದೇ-ಪದೇ ಒಂದೇ ಮಾತನ್ನು ಹೇಳಿದೆವು, ‘ಸಾಹೇಬರೇ, ನೀವೇ ಅಧಿಕಾರಿಗಳು. ಇದು ಸಿದ್ಧಾಂತದ ವಿಷಯವಾಗಿದೆ. ತಿಲಕ್ ಬಾಬಾ ಅವರು ಉಚಿತವಾದ ಮಾತನ್ನೇ ಹೇಳಿದರು, ಗಾಂಧಿ ಬಾಬಾ ಅವರೂ ಸಹ ಇದೇ ಮಾತನ್ನು ಅಂದರೆ ‘ಸಹೋದರರೇ, ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಅಧಿಕಾರ’ ಎಂದು ಹೇಳುತ್ತಿದ್ದಾರೆ. ಮಗಾ, ವೈಸರಾಯರ ಕಣ್ಣುಗಳು ತುಂಬಿ ಬಂದವು. ಅವರು ಅತ್ತರು, ನಮ್ಮ ಕಾಲುಗಳನ್ನು ಹಿಡಿದುಕೊಂಡರು. ಆದರೆ ನಾವು ನಮ್ಮ ಸಿದ್ಧಾಂತದಿಂದ ಕದಲಲಿಲ್ಲ’.

ನಾನು ಅವರ ಮಾತನ್ನು ಅನುಮೋದಿಸುತ್ತಿದ್ದೆ.

ಸೋದರ ಮಾವನವರ ಮನೆಯ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಗದ್ದೆ-ಹೊಲ-ಆಸ್ತಿ ಇರಲಿಲ್ಲ. ಅದೇ ಹಳೆಯ ಇಟ್ಟಿಗೆಯ ಮನೆ; ಅದರ ಒಂದು ಕತ್ತಲು ಕೋಣೆಗೆ ಅವರು ತಿಂಗಳಿಗೆ ಇಪ್ಪತ್ತು ರೂಪಾಯಿ ಬಾಡಿಗೆಯನ್ನು ಕೊಡುತ್ತಿದ್ದರು. ಅಲ್ಲಿ ಒಬ್ಬರು ಪ್ರೈಮರಿ ಶಾಲಾ ಮಾಸ್ತರರು ವಾಸಿಸುತ್ತಿದ್ದರು.

ನಾನು ಜನಗಣತಿಯ ಅರ್ಜಿಯನ್ನು ಭರ್ತಿ ಮಾಡಲು ಕೂತೆ. ಅನೇಕ ವಿಷಯಗಳನ್ನು ತುಂಬಬೇಕಿತ್ತು. ಸೋದರ ಮಾವನವರು ಒಳಗೆ ಹೋಗಿ, ಸ್ವಲ್ಪ ಹೊತ್ತಿಗೆ ಮರಳಿ ಬಂದರು. ಅವರ ಕೈಯಲ್ಲಿ ಬಟ್ಟೆಯ ಒಂದು ಚಚ್ಚೌಕದ ಕಟ್ಟಿತ್ತು. ಅವರು ಅದನ್ನು ಮಂಚದ ಮೇಲಿಟ್ಟು, ಕಂಪಿಸುವ ಕೈಗಳಿಂದ ಬಿಚ್ಚಲಾರಂಭಿಸಿದರು.

ಸೋದರ ಮಾವನವರ ತಲೆಯಲ್ಲಿದ್ದ ಒಂದು ಕೂದಲು ಸಹ ಕಪ್ಪಗಿರಲಿಲ್ಲ. ಮುಸುಕಿನ ಜೋಳದ ತೆನೆಯಂತೆ ಅವರ ತಲೆಗೂದಲುಗಳು ಬಿಳುಪಾಗಿದ್ದವು. ಹುಬ್ಬುಗಳು, ಕಣ್‌ರೆಪ್ಪೆಯ ಕೂದಲುಗಳು ಮತ್ತು ಕೈಯಲ್ಲಿದ್ದ ರೋಮಗಳೂ ಬಿಳುಪಾಗಿದ್ದವು. ಚರ್ಮದಲ್ಲಿ ಮುದುಡಿದ ಬಟ್ಟೆಯಂಥ ಸುಕ್ಕುಗಳಿದ್ದವು. ಅವರ ಕಣ್ಣುಗಳಲ್ಲಿ ಸದಾ ಮಣ್ಣಿನ ನೀರಿರುತ್ತಿತ್ತು. ಕಣ್ಣಿನ ಪುತ್ಥಳಿಗಳು ಅದರ ಕೆಳಗೆ ಕಂಪಿಸುತ್ತಿದ್ದವು. ಇದನ್ನು ಹೊರತುಪಡಿಸಿಯೂ, ಅವರ ಕಣ್ಣುಗಳ ಕಾಂತಿ ಸ್ವಲ್ಪವೂ ಕುಂದಿರಲಿಲ್ಲ. ಅವರ ತಲೆ ಪ್ರತಿ ಹತ್ತು-ಹದಿನೈದು ನಿಮಿಷಗಳಿಗೊಮ್ಮೆ ಬಲ-ಎಡಕ್ಕೆ ಅಲುಗಾಡುತ್ತಿತ್ತು.

ಅವರು ಬಟ್ಟೆಯ ಗಂಟಿನಿಂದ ಕಾಗದ-ಪತ್ರಗಳನ್ನು ತೆಗೆದು ಮಂಚದ ಮೇಲೆ ಹರಡಿದರು. ಅವು ತುಂಬಾ ಹಳೆಯ ಕಾಲದ ಕಾಗದದ ತುಂಡುಗಳು ಮತ್ತು ಅಂಚೆ ಪತ್ರಗಳಾಗಿದ್ದವು.

ಸೋದರ ಮಾವನವರು ಹೇಳಿದರು-
‘ಮಗಾ, ನಮಗೆ ಆ ಕಾಲದ ವಿಷಯಗಳನ್ನು ಕೇಳಬೇಡ. ನಮ್ಮ ರಕ್ತದಲ್ಲಿ ಎಷ್ಟೊಂದು ಉತ್ಸಾಹವಿತ್ತು...ಅನ್ನದ ಚಿಂತೆಯಿರಲಿಲ್ಲ, ಹಣದ ಚಿಂತೆಯಿರಲಿಲ್ಲ. ಮೆರವಣಿಗೆ ಮತ್ತು ಧ್ವಜದ ಬಗ್ಗೆಯೇ ಸದಾ ಯೋಚಿಸುತ್ತಿದ್ದೆವು. ಬ್ರಿಟಿಷ್ ಸರ್ಕಾರ ತುಂಬಾ ಅತ್ಯಾಚಾರ ಮಾಡುತ್ತಿತ್ತು. ನಮಗೆ ಪೊಲೀಸರು ಎಷ್ಟು ಸಲ ಹೊಡೆದರು ಎಂಬುದು ಲೆಕ್ಕವಿಲ್ಲ. ಹೊಡೆಯುವವರು ಯಾರಾಗಿದ್ದರು? ನಮ್ಮ ಸಹೋದರರು-ಸಂಬಂಧಿಕರೇ...ಹಿಂದೂಸ್ಥಾನದ ಜನ, ನಮ್ಮ ಜಾತಿಯವರೇ ಹೊಡೆಯುತ್ತಿದ್ದರು. ಗಾಂಧಿ ಬಾಬಾ ಅವರು, ‘ಇವರ ತಪ್ಪಿಲ್ಲ, ಇವರು ಉಪ್ಪು ತಯಾರಿಸುತ್ತಿದ್ದಾರೆ’ ಎಂದರು’. ಸೋದರ ಮಾವ ಒಂದು ಮಡಚಿದ, ಹೊಗೆ ಹಿಡಿದಂಥ ಪತ್ರಿಕೆಯನ್ನು ಹೊರಗೆ ತೆಗೆದು ಹೇಳಿದರು, ‘ಸ್ವಲ್ಪ ಈ ಪತ್ರಿಕೆಯನ್ನು ನೋಡು’.

ನಾನು ಆ ಪತ್ರಿಕೆಯನ್ನು ನೋಡಿದೆ. ಸನ್ ಐವತ್ತರ ಅದೊಂದು ಲೋಕಲ್ ಪತ್ರಿಕೆಯಾಗಿತ್ತು. ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿತ್ತು-
‘ಸ್ವಾತಂತ್ರ್ಯದ ಸೇನಾ ನಾಯಕ ಮಾಯಾ ಪ್ರಸಾದ್ ‘ಹಿತೈಷಿ’. 

ಕೆಳಗೆ ಸೋದರ ಮಾವನವರ ಫೋಟೋ ಇತ್ತು. ಸುಮಾರು ಇಪ್ಪತ್ತೆಂಟು ವರ್ಷಗಳು ಕಳೆದಿದ್ದವು. ಆಗ ಸೋದರ ಮಾವನವರು ನಡು ವಯಸ್ಸಿನವರಾಗಿದ್ದರು.

ಸೋದರ ಮಾವನವರು ತಲೆ ತಗ್ಗಿಸಿ ಹೇಳಿದರು, ‘ಇಲ್ಲಿ ನೋಡು, ಪೊಲೀಸರು ದೊಣ್ಣೆಯಿಂದ ಹೊಡೆದು-ಬಡಿದು ತಲೆಬುರುಡೆಯನ್ನೇ ತೆರೆದಿದ್ದರು. ಈಗಲೂ ಮಳೆಗಾಲದಲ್ಲಿ ಸೊಂಟ ನೋಯುತ್ತೆ. ಆ ದಿನಗಳಲ್ಲಿ ಜನರ ಮೇಲೆ ತುಂಬಾ ದಬ್ಬಾಳಿಕೆ ನಡೆಯಿತು. ಗಣೇಶ್ ಶಂಕರ್ ವಿದ್ಯಾರ್ಥಿ ಸತ್ತಾಗ ನಾವಲ್ಲಿಯೇ ಇದ್ದೆವು. ಜೊತೆಗೇ ಇದ್ದೆವು, ನಾವಿಬ್ಬರು ಒಟ್ಟಿಗೆ ಚಹಾ ಕುಡಿದಿದ್ದೆವು. ಗಣೇಶ್ ಭೈಯ್ಯಾ ಸ್ವಲ್ಪ ಹೊತ್ತಿನ ನಂತರ ಈ ಜಗತ್ತನ್ನು ಬಿಟ್ಟು ಹೋಗ್ತಾನೆ ಅಂತ ನಮಗೇನು ಗೊತ್ತಿತ್ತು? ಏನು ಹೇಳಲಪ್ಪ...’

ಪಛೀತಾಟೋಲಾದ ಜನ ಸೋದರ ಮಾವನವರ ಬಗ್ಗೆ, ‘ಅವರು ಇದೇ ರೀತಿಯ ಮಾತುಗಳನ್ನು ತಮ್ಮ ಮೆದುಳಿನಿಂದ ಹುಟ್ಟಿಸುತ್ತಿರುತ್ತಾರೆ’ ಎಂದು ನಂತರ ಹೇಳಿದರು. ಜಗತ್ತಿನ ಪ್ರತಿಯೊಬ್ಬ ಮಹಾನುಭಾವರೊಂದಿಗೆ ಅವರಿಗೆ ಗಾಢ ಸ್ನೇಹವಿದೆ. ದಾದಾ ಭಾಯಿ ನವರೋಜಿಯವರಿಂದ ಹಿಡಿದು ಮೊರಾರ್ಜಿ ದೇಸಾಯಿಯವರೆಗೆ ಅವರ ಸಂಬಂಧ ಹೇಗೆ-ಹೇಗೋ ಕೂಡಿ ಬರುತ್ತದೆ. ಸೋದರ ಮಾವನವರು ಮೊದಲು ಕಾಂಗ್ರೆಸಿನ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಭಾಷಣ ಮಾಡುತ್ತಿದ್ದರು. ಆ ದಿನಗಳಲ್ಲಿ ಮೂರ‍್ನಾಲ್ಕು ನಿಮಿಷಗಳವರೆಗೆ ಏದುಸಿರು ಬಿಡುತ್ತಾ ಮಾತನಾಡುವುದು ದೊಡ್ಡ ಸಂಗತಿಯಾಗಿತ್ತು. ಒಮ್ಮೆ ಸತ್ಯಾಗ್ರಹ ಮಾಡುವವರ ಮೇಲೆ ಸರ್ಕಾರದ ಹೊಡೆತ ಬಿದ್ದಾಗ, ಸೋದರ ಮಾವನವರು ತುಟಿಪಿಟಿಕ್ಕೆನ್ನದೆ ಓಟ ಕಿತ್ತಿದ್ದರು. ನೂಕು-ನುಗ್ಗಲಿನಲ್ಲಿ ಎಲ್ಲೋ ಬಿದ್ದು ತಲೆಗೆ ಗಾಯ ಮಾಡಿಕೊಂಡರು. ನಂತರ ಇನ್ನಿತರ ಕಾರ್ಯಕರ್ತರು ದಾಖಲಾಗಿದ್ದ ಆಸ್ಪತ್ರೆಗೇ ಅವರನ್ನು ಸೇರಿಸಲಾಗಿತ್ತು. ‘ಪೊಲಿಟಿಕಲ್ ಸಫರರ್ಸ್’ ಪಟ್ಟಿಯಲ್ಲಿಯೂ ಸೋದರ ಮಾವನವರ ಹೆಸರಿರಲಿಲ್ಲ.

ನಾನು ತುಂಬಾ ಯೋಚಿಸಿದೆ, ಆದರೆ ಸೋದರ ಮಾವನವರ ಹುಚ್ಚುತನದಲ್ಲಿ ಅಥವಾ ವಿಕ್ಷಿಪ್ತಾವಸ್ಥೆಯಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣವಿರಲಿಲ್ಲ. ಅವರು ಆರೋಗ್ಯವಂತರಾಗಿದ್ದು, ಸಾಮಾನ್ಯರಂತೆಯೇ ಇದ್ದರು. ನಿತ್ಯ ಬೆಳಿಗ್ಗೆ ಎದ್ದು ಖೇಲಾವನ್‌ನ ಪಾನ್‌ಬೀಡಾ ಅಂಗಡಿಗೆ ಹೋಗಿ, ಅಲ್ಲಿ ಒಂದು ಗಂಟೆ ಕೂತು ಮೂರ‍್ನಾಲ್ಕು ಬೀಡಿಗಳನ್ನು ಸೇದುತ್ತಿದ್ದರು, ಪತ್ರಿಕೆಯನ್ನು ಓದುತ್ತಿದ್ದರು. ಅವರ ನೆನಪಿನ ಶಕ್ತಿ ಚುರುಕಾಗಿತ್ತು. ಅವರು ಸ್ವಾತಂತ್ರ್ಯ ಬರುವುದಕ್ಕೂ ಮೊದಲಿನ ಎಲ್ಲಾ ಘಟನೆಗಳನ್ನು ಯಥಾವತ್ತಾಗಿ ವರ್ಣಿಸುತ್ತಿದ್ದರು. ವ್ಯತ್ಯಾಸ ಅಂದರೆ, ಆ ಘಟನೆಗಳ ನಡುವೆ ಎಲ್ಲಿಯಾದರೂ ತಮ್ಮನ್ನು ಸೇರಿಸಿಕೊಂಡು ಬಿಡುತ್ತಿದ್ದರು.

ತಮ್ಮ ಇಬ್ಬರು ದೊಡ್ಡ ಮಕ್ಕಳು ತುಂಬಾ ಉನ್ನತ ಹುದ್ದೆಯಲ್ಲಿದ್ದಾರೆಂದು ಅವರು ಹೇಳಿದರು. ದೊಡ್ಡವನು ಮಹೇಂದರ್ ಬಿಡಲಾರವರ ಓರಿಯಂಟ್ ಪೇಪರ್ ಮಿಲ್‌ನ ಮ್ಯಾನೇಜರ್, ಎರಡನೆಯವನಾದ ರಾಜೇಂದರ್ ಫಾರೆಸ್ಟ್ ಡಿಪಾರ್ಟ್ಮೆಂಟಿನ ರೇಂಜರ್. ಆದರೆ ಅವರು ಯಾರಿಗೂ ಭಾರವಾಗಿರಲು ಬಯಸುತ್ತಿರಲಿಲ್ಲ, ಇದು ಅವರ ಸಿದ್ಧಾಂತ. ಚಿಕ್ಕ ಮಗ ನರೇಂದರ್ ಸಹ ಉನ್ನತ ಹುದ್ದೆಗೇರುತ್ತಾನೆ. ಅವನು ವಿದ್ಯಾಭ್ಯಾಸದಲ್ಲಿ ತುಂಬಾ ಬುದ್ಧಿವಂತ. ತುಂಬಾ ಸರಳ ಸ್ವಭಾವದ ಅವನು ವಿನಯವಂತ ಹುಡುಗ.

ತಮ್ಮ ಮೂವರು ಮಕ್ಕಳೂ ‘ಶ್ರವಣಕುಮಾರರು’ ಎಂದು ಅವರು ಹೇಳಿದರು. ಸೋದರ ಮಾವನವರ ಆದೇಶವಿಲ್ಲದೆ ಅವರು ಯಾವ ಕೆಲಸವನ್ನೂ ಮಾಡುವುದಿಲ್ಲ. ಮನೆಯಲ್ಲಿ ಚಿಕ್ಕ-ಪುಟ್ಟ ಸಮಸ್ಯೆಗಳು ಬಂದರೂ, ಪತ್ರ ಬರೆದು ಅವರ ಅಭಿಪ್ರಾಯವನ್ನು ಕೇಳುತ್ತಾರೆ. ಮೊಮ್ಮಗ-ಮೊಮ್ಮಗಳಿದ್ದರೆ ಸೋದರ ಮಾವನವರೇ ಅವರ ಹೆಸರನ್ನು ಸೂಚಿಸುತ್ತಾರೆ. ಅವರ ಮಕ್ಕಳು ಸಹ ಅವರನ್ನು ‘ಸೋದರ ಮಾವ’ ಎಂದೇ ಕರೆಯುತ್ತಾರೆ.

ಮಂತ್ರಿಗಳು, ಮುಖಂಡರು-ಅಧಿಕಾರಿಗಳು ಸೋದರ ಮಾವನವರ ಪರಿವಾರವನ್ನು ಬಲ್ಲರು. ಒಮ್ಮೆ ಯಾರೋ ರಾಜೇಂದರನನ್ನು ಸುಳ್ಳು ಅರೋಪ ಹೊರೆಸಿ ಮುಖ್ಯಮಂತ್ರಿಯರಿಗೆ ಅರ್ಜಿ ಕಳುಹಿಸಿದರು. ಮುಖ್ಯಮಂತ್ರಿಯವರಿಗೆ ರಾಜೇಂದರ, ಮಾಯಾ ಪ್ರಸಾದ್ ‘ಹಿತೈಷಿ’ಯವರ ಮಗನೆಂಬ ವಿಷಯ ತಿಳಿಯುತ್ತಲೇ ಅವರು, ‘ಇದೆಲ್ಲಾ ಸುಳ್ಳು, ಅರ್ಜಿಯನ್ನು ಕಳುಹಿಸಿದವನು ನಿಜವಾಗಿಯೂ ಬದ್ಮಾಶ್; ದ್ವೇಷವೊಂದರ ಸೇಡು ತೀರಿಸಿಕೊಳ್ಳಲು ಮತ್ತು ಸೋದರ ಮಾವನವರ ವಂಶಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಬಯಸುತ್ತಿದ್ದಾನೆ’ ಎಂದರು.

ತಮ್ಮ ದೊಡ್ಡ ಮಗನ ಬಳಿ ಬಂಗ್ಲೆಯಿದೆ, ಕಾರಿದೆ, ನೌಕರರಿದ್ದಾರೆ, ಬಿಡಲಾ ಅವರು ಮಹೇಂದರನನ್ನು ಮಗನಂತೆ ನೋಡುತ್ತಾರೆ. ಬ್ಯಾಂಕಿನ ವ್ಯವಹಾರಗಳನ್ನು ಮಹೇಂದರನೇ ನೋಡಿಕೊಳ್ಳುತ್ತಾನೆ ಎಂದು ಸೋದರ ಮಾವನವರು ಹೇಳುತ್ತಾರೆ. ಅವನ ಮದುವೆಯ ದಿಬ್ಬಣದಲ್ಲಿ ಬಿಡಲಾ ಅವರೂ ಸಹ ಭಾಗವಹಿಸಿದರು. ಬಿಡಲಾ ತುಂಬಾ ಸುಂದರವಾಗಿದ್ದು, ತುಂಬಾ ಸರಳ ಮನುಷ್ಯ, ಅವರು ಹಳೆಯ ಉಡುಪನ್ನು ಧರಿಸುತ್ತಾರೆ, ಅವರಿಗೆ ಜಂಬವೆನ್ನುವುದೇ ಇಲ್ಲ, ತುಂಬಾ ಪರೋಪಕಾರಿಗಳು ಎಂದು ಸೋದರ ಮಾವನವರು ಹೇಳಿದರು.

ಪಛೀತಾಟೋಲಾದ ಜನರಿಂದ ನನಗೆ ಯಾವ ನಿಜಾಂಶ ತಿಳಿಯಿತೋ, ಅದು ಬೇರೆಯೇ ತೆರನಾಗಿತ್ತು. ವಾಸ್ತವಾಂಶವೆಂದರೆ, ಸೋದರ ಮಾವನವರ ದೊಡ್ಡ ಮಗ ಮಹೇಂದರ್ ಎಂಟನೆಯ ತರಗತಿಯಲ್ಲಿ ಅನೇಕ ಬಾರಿ ನಪಾಸ್ ಆದ ನಂತರ ಹೋಮ್‌ಗಾರ್ಡ್ಸ್ ತರಬೇತಿಗೆ ಸೇರಿದ್ದ; ಈಗ ಅವನು ಪೇಪರ್ ಮಿಲ್‌ನಲ್ಲಿ ಒಬ್ಬ ಸಾಮಾನ್ಯ ಕಾವಲುಗಾರನಾಗಿದ್ದಾನೆ. ಎರಡನೆಯ ಮಗ ಫಾರೆಸ್ಟ್ ಗಾರ್ಡ್ ಆಗಿದ್ದ. ಮೂರನೆಯ ಮಗ ನರೇಂದರ್ ಕಾಲೇಜು ಮೆಟ್ಟಿಲುಗಳನ್ನಂತೂ ಹತ್ತಿದ್ದ, ಆದರೆ ಅವನಿಗೆ ವಿದ್ಯಾಭ್ಯಾಸದಲ್ಲಿ ಅಷ್ಟು ಆಸಕ್ತಿಯಿರಲಿಲ್ಲ. ಅವನು ಸದಾ ಪುಂಡು ಪೋಕರಿತನ ಮಾಡುತ್ತಾ ಅಲೆದಾಡುತ್ತಿದ್ದ, ರಾತ್ರಿ ವೇಳೆಯಲ್ಲಿ ಜೂಜು ಕಟ್ಟೆಗಳಲ್ಲಿ ಕೂತು ಹಣ ವಸೂಲಿ ಮಾಡುತ್ತಿದ್ದ.

ಮೂರು ಜನ ಮಕ್ಕಳೂ ಸೋದರ ಮಾವನವರೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದರು, ಅವರಿಗೆಂದೂ ಸಹಾಯವನ್ನು ಮಾಡುತ್ತಿರಲಿಲ್ಲ. ದೊಡ್ಡ ಮಗ ಮಹೇಂದರ್ ಒಮ್ಮೊಮ್ಮೆ ಇಪ್ಪತ್ತೈದು-ಮುವತ್ತು ರೂಪಾಯಿಗಳನ್ನು ಅವರಿಗೆ ಕಳುಹಿಸುತ್ತಿದ್ದ.
ಒಮ್ಮೆ ಸೋದರ ಮಾವನವರು ಕಾಯಿಲೆ ಬಿದ್ದರು, ಆಗ ಯಾವ ಮಕ್ಕಳೂ ಕಣ್ಣೆತ್ತಿಯೂ ಅವರನ್ನು ನೋಡಲಿಲ್ಲ. ಪಛೀತಾಟೋಲಾದ ಜನರೇ ಅವರನ್ನು ಚಿಕ್ಕ ಮಂಚದಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದರು. ಅವರಿಗೆ ಚಿಕಿತ್ಸೆ ಕೊಡಿಸಿದರು. ಆದರೆ ಸೋದರ ಮಾವನವರು ಗುಣಮುಖರಾದಾಗ, ‘ತಮ್ಮ ದೊಡ್ಡ ಮಗ ಮಹೇಂದರನಿಗೆ ತಮ್ಮ ಆರೋಗ್ಯ ಸರಿಯಲ್ಲದಿರುವ ವಿಷಯ ತಿಳಿದಾಗ, ಅವನು ಗಾಬರಿಯಿಂದ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಫೋನ್ ಮಾಡಿದ, ವೈದ್ಯರು ಓಡೋಡಿ ಬಂದು, ಕಾರಿನಲ್ಲಿ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ದರು. ಮಹೇಂದರ ಒಂದೇ ಸಮನೆ ಫೋನ್ ಮಾಡುತ್ತಿದ್ದ, ಇದೇ ಚಿಂತೆಯಲ್ಲಿ ಮಾರನೆಯ ದಿನ ಅವನು ಕಛೇರಿಗೆ ಹೋಗಲಿಲ್ಲ, ಆಗ ಬಿಡಲಾ ಅವರಿಗೆ ವಿಷಯ ತಿಳಿದು, ಅವರೂ ವೈದ್ಯರಿಗೆ ಫೋನ್ ಮಾಡಿದರು. ಅಲ್ಲದೆ ಅವರಿಗೆ, ಕಾಯಿಲೆಯನ್ನು ವಾಸಿ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ಸ್ಪಷ್ಟವಾಗಿ ಹೇಳಿಬಿಡಿ, ನಾವು ಅವರನ್ನು ವಿದೇಶಕ್ಕೆ ಕಳುಹಿಸುತ್ತೇವೆ ಎಂದರು. ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು. ನಾವು ಐದೇ ದಿನಗಳಲ್ಲಿ ಗುಣಮುಖರಾದೆವು’ ಎಂದರು.

ಸೋದರ ಮಾವನವರು ತಮ್ಮೊಂದಿಗೆ ಒಂದು ಕರುಣಾಜನಕ ತಮಾಷೆಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ, ಅವರು ತಮ್ಮ ಅಕ್ಕಪಕ್ಕ ಒಂದು ಸುಳ್ಳು-ಜಗತ್ತನ್ನು ನಿರ್ಮಿಸಿಕೊಂಡಿದ್ದು, ಅದನ್ನು ಅವರು ಅಂತಿಮ ಸತ್ಯವೆಂದು ಒಪ್ಪಿದ್ದಾರೆಂದು ನನಗೆ ಅನೇಕ ಬಾರಿ ಅನ್ನಿಸಿತು. ‘ಸೋದರ ಮಾವನವರೇ, ನೀವು ಎಲ್ಲಿ ಮತ್ತು ಯಾವ ಪರಿಸ್ಥಿತಿಯಲ್ಲಿ ಇದ್ದೀರೋ, ಅದನ್ನು ಅರಿತುಕೊಳ್ಳಿ, ಎಷ್ಟಾದರೂ ಕಾಲದ ಜ್ಞಾನ ಮನುಷ್ಯನಿಗಿರಬೇಕು. ಒಂದು ವೇಳೆ ನೀವು ನಿಮ್ಮ ಸ್ಥಿತಿಗತಿಯನ್ನು ಗುರುತಿಸಿಕೊಳ್ಳದಿದ್ದರೆ ಇಡೀ ಜೀವನ ತಪ್ಪು ದಾರಿಯನ್ನು ಹಿಡಿಯುತ್ತದೆ. ನೀವು ನಿಮಗಾಗಿ ವಾಸ್ತವಿಕತೆಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸಬೇಕು. ಭವಿಷ್ಯದಲ್ಲಿ ಪರಿಸ್ಥಿತಿ ಮತ್ತೂ ಹಾಳಾಗಬಹುದು. ಸೋದರ ಮಾವಂದಿರೇ, ನೀವು ಒಬ್ಬ ಸರಳ ವ್ಯಕ್ತಿಯಾಗಿದ್ದು, ಬಡವರಾಗಿದ್ದೀರ, ನಿಮ್ಮ ಬಳಿ ನಿಮ್ಮ ಶ್ರಮದ ಕೊನೆಯ ಗಂಟೂ ಸಹ ಉಳಿದಿಲ್ಲ. ನೀವು ತುಂಬಾ ಹೀನ ಸ್ಥಿತಿಯ ವೃದ್ಧರಾಗಿದ್ದೀರ. ಒಂದು ವೇಳೆ ನಿಮ್ಮ ಮಕ್ಕಳ ಮನಸ್ಸಿನಲ್ಲಿ ನಿಮ್ಮ ಮನೆಗಾಗಿ ದುರಾಸೆ ಜಾಗೃತಗೊಂಡರೆ ನೀವು ಫುಟ್‌ಪಾಥಿನಲ್ಲಿ ಭಿಕ್ಷೆ ಬೇಡುವುದನ್ನು ನೋಡಬೇಕಾಗುವುದು. ಈಗಲೇ ಎಚ್ಚೆತ್ತುಕೊಳ್ಳಿ.’ -ಹೀಗೆಂದು ಅವರ ಬಳಿ ಪಛೀತಾಟೋಲಾದ ವ್ಯಕ್ತಿಯೊಬ್ಬರು, ಪೂರ್ಣ ವಿಶ್ವಾಸದೊಂದಿಗೆ ಹೋಗಿ, ಕಟು ಸತ್ಯವನ್ನು ಹೇಳಿದ್ದರೆ!...

ಸೋದರ ಮಾವನವರ ವಿಷಯದಲ್ಲಿ ನಾನೊಂದು ವಿಚಿತ್ರ ಕ್ರೋಧ ಮತ್ತು ಕರುಣೆಯ ಭಾವನೆಗಳ ನಡುವೆ ಸಂಚರಿಸುತ್ತಿದ್ದೆ. ಅವರ ಬಗ್ಗೆ ಎಷ್ಟು ಸಿಟ್ಟು ಬರುತ್ತಿತ್ತೋ, ಅಷ್ಟೇ ಕರುಣೆಯೂ ಮೂಡುತ್ತಿತ್ತು. ನಾನು ಅವರಿಗೆ ಖಂಡಿತ ಏನನ್ನಾದರು ಒಳಿತನ್ನು ಮಾಡಲು ಬಯಸುತ್ತಿದ್ದೆ. ಕಡೇಪಕ್ಷ ಅವರು ಏರಿಳಿತ ನೆಲದ ವಾಸ್ತವಿಕತೆಯ ಮೇಲೆ ಬೆತ್ತಲೆ ಕಾಲುಗಳ ಮೇಲೆ ನಿಂತು ತಮ್ಮ ಸುತ್ತಮುತ್ತಲಿನ ವಾತಾವರಣದಿಂದ ಪರಿಚಿತರಾಗಲೆಂದು ಖಂಡಿತ ನಾನು ಬಯಸುತ್ತಿದ್ದೆ.

ಚುನಾವಣೆಯ ದಿನಗಳು ಬಂದಾಗ ಹಾಗೂ ಪಛೀತಾಟೋಲಾದಲ್ಲಿ ಪಕ್ಷಗಳ ಜೀಪುಗಳು ಓಡಾಡಲಾರಂಭಿಸಿದಾಗ ಸೋದರ ಮಾವನವರನ್ನು ಪ್ರತಿಯೊಂದು ಜೀಪಿನಲ್ಲಿ ಕಾಣಬಹುದಿತ್ತು. ಅವರ ಮನೆಗೆ ಬರುವ ಉಮೇದುವಾರರೊಂದಿಗೆ ಅವರೂ ಹೋಗುತ್ತಿದ್ದರು. ಅವರು ಉಮೇದುವಾರರಿಗೆ, ‘ಈ ಪಛೀತಾಟೋಲಾದಲ್ಲಿ ನೀವು ಸ್ವಲ್ಪವೂ ಯೋಚಿಸಬೇಕಿಲ್ಲ. ಇಲ್ಲಿರುವವರೆಲ್ಲರೂ ನಮ್ಮವರೇ. ಒಂದು ವೋಟು ಸಹ ತಪ್ಪಲ್ಲ.’ ಎನ್ನುತ್ತಿದ್ದರು. ಜೀಪಿನಲ್ಲಿ ಅಡ್ಡಾಡಿ ಅವರು ಮರಳಿ ಬಂದ ನಂತರ, ತಮ್ಮನ್ನು ಭೇಟಿ ಮಾಡಲು ಬಂದವರಿಗೆ, ‘ನಮ್ಮ ಮನೆಗೆ ಬರುವ ಕ್ಯಾಂಡಿಡೇಟ್‌ಗಳನ್ನು ನಮ್ಮ ಮನೆಯವರೆಂದೇ ತಿಳಿಯಿರಿ. ಅವರು ನಮ್ಮ ಮನೆಯ ಬಾಗಿಲಿಗೆ ಬಂದು, ಸೋದರ ಮಾವನವರೇ, ಅಪ್ಪ ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ, ನಮಗಂತೂ ರಾಜಕೀಯ ಗೊತ್ತಿಲ್ಲ, ನೀವೇ ಸ್ವಲ್ಪ ಅರ್ಥ ಮಾಡಿಸಿ, ಕ್ಯಾಂಡಿಡೇಟಿನ ತಂದೆಗೂ ನನಗೂ ಹಳೆ ಗೆಳತನವಿತ್ತು. ಬ್ರಿಟಿಷರ ಕಾಲದಲ್ಲಿ ನಾವಿಬ್ಬರು ಒಂದೇ ಜೈಲಿನಲ್ಲಿ ಕೈದಿಯಾಗಿದ್ದೆವು...ನೋಡು, ಈಗ ಆ ದಿನಗಳ ಬಗ್ಗೆ ಏನು ಹೇಳುವುದು! ಆಗ ಈ ಕ್ಯಾಂಡಿಡೇಟ್ ಒಂದೂವರೆ-ಎರಡು ವರ್ಷದ ಮಗುವಾಗಿದ್ದ. ನಮ್ಮ ಈ ಮಡಿಲಿನಲ್ಲೇ ಆಟವಾಡುತ್ತಾ ದೊಡ್ಡವನಾದ’ ಎನ್ನುತ್ತಿದ್ದರು.

ಸೋದರ ಮಾವನವರ ವಿಷಯದಲ್ಲಿ ನಾನು ಮಾತ್ರ ಕಳವಳಗೊಂಡಿದ್ದೇನೆ ಎಂದಲ್ಲ, ಪಛೀತಾಟೋಲಾದ ಅನೇಕ ಸಾಮಾನ್ಯ ಜನರೂ ಕಳವಳಗೊಂಡಿದ್ದರು. ಅವರು ಸೋದರ ಮಾವನವರೊಂದಿಗೆ ಖಂಡಿತವಾಗಿಯೂ ಸಹಾನುಭೂತಿಯುಳ್ಳವರಾಗಿದ್ದರು. ಅವರನ್ನು ಅನೇಕ ಬಾರಿ ತಡೆದರು. ಅವರಿಗೆ ಅವರ ವಾಸ್ತವಿಕತೆಯನ್ನು ಹೇಳಿದರು. ಅವರನ್ನು ಗೇಲಿ ಮಾಡಿದರು, ತಮಾಷೆಯ ವಸ್ತುವನ್ನಾಗಿ ನೋಡಿದರು. ಆದರೆ ಅವರೇ ಧೈರ್ಯವನ್ನು ಕಳೆದುಕೊಳ್ಳುತ್ತಿದ್ದರು. ಅವರು ಅದೆಷ್ಟೋ ಬಾರಿ ಸೋದರ ಮಾವನವರನ್ನು ಅವರ ಗಾಳಿ-ಜಗತ್ತಿನಿಂದ ನೇರವಾಗಿ ಎತ್ತಿ ಯಥಾರ್ಥದಲ್ಲಿ ಕೆಡವಲು ಬಯಸಿದರು, ಆದರೆ ಅವರು ಇಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಹುಚ್ಚರಂತೆ ವರ್ತಿಸುತ್ತಿದ್ದರು. ಹೊಡೆಯಲು-ಹೊಡೆಸಿಕೊಳ್ಳಲು ಮುಂದಾಗುತ್ತಿದ್ದರು ಅಥವಾ ಮೌನವಹಿಸಿ ಜುಗುಪ್ಸೆ ತಾಳುತ್ತಿದ್ದರು. ಅಲ್ಲದೆ ತಟಸ್ಥರಾಗಿ, ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡು, ಪಿಳಿಪಿಳಿ ಕಣ್ಣುಗಳಿಂದ ಅವರನ್ನೇ ದುರುಗುಟ್ಟಿ ನೋಡುತ್ತಿದ್ದರು. ಆಗ ಅವರ ಕಣ್ಣುಗಳಿಂದ ಒಗರು ಕಣ್ಣೀರು ಮತ್ತಷ್ಟು ಕೊಳಕಾಗಿ ಕ್ರಮೇಣ ಕಣ್ಣುಗಳ ಅಂಚಿನಿಂದ ಹೊರಗೆ ಒಸರುತ್ತಿತ್ತು. ಆ ವೇಳೆಯಲ್ಲಿ ಅವರನ್ನು ನೋಡಿದಾಗ ಅವರ ಅಮೂಲ್ಯ ಐಶ್ವರ್ಯವನ್ನು ಯಾರೋ ಅವರಿಂದ ಬಲಾತ್ಕಾರದಿಂದ ಕಸಿದುಕೊಳ್ಳುತ್ತಿದ್ದಾರೆಂದು ಅನ್ನಿಸುತ್ತಿತ್ತು. ಅವರ ಬಗ್ಗೆ ಕನಿಕರ ಮೂಡುತ್ತಿತ್ತು.

ಅದೊಂದು ದಿನ ಘಟನೆಯೊಂದು ಸಂಭವಿಸಿತು, ಇದನ್ನು ನಾನು ಇಂದಿಗೂ ಸಹ ಕೊನೆಯದೆಂದು ಒಪ್ಪಲು ಸಿದ್ಧನಿಲ್ಲ. ಅಂದು ಸೋದರ ಮಾವನವರು ಮನೆಯಲ್ಲಿ ಅಡುಗೆ ಮಾಡುವ ಸಿದ್ಧತೆಯಲ್ಲಿದ್ದರು, ಆಗ ಯಾರೋ ಬಂದು, ನರೇಂದರನನ್ನು ಬಂಧಿಸಲಾಗಿದೆ ಎಂದರು.

ಸೋದರ ಮಾವನವರು ಒಲೆಗೆ ನೀರು ಸುರಿದು ಅದನ್ನು ಆರಿಸಿದರು. ನಂತರ ಪೆಟ್ಟಿಗೆಯಿಂದ ತಮ್ಮ ಹಳೆಯ ಖಾದಿಯ ನಿಲುವಂಗಿಯನ್ನು ಹೊರತೆಗೆದರು. ಬಹುಶಃ ಅವರು ಮೊದಲು ಅಸಮಂಜಸತೆ, ಅನಿಶ್ಚಿತತೆ ಮತ್ತು ದುಃಖದ ಪರಿಸ್ಥಿತಿಯಲ್ಲಿದ್ದರು. ನಂತರ ಅವರಲ್ಲಿ ಉತ್ಸಾಹ ಜಾಗೃತಗೊಂಡಿತು. ತಮ್ಮ ತುಟಿಗಳಲ್ಲಿ ಏನೋ ಬಡಬಡಿಸಿದರು. ಅವರೇನು ಬಡಬಡಿಸುತ್ತಿದ್ದಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಿತ್ತು. ಅವರು ರಾಜಕೀಯ ಭಾಷಣ ಮಾಡುವಂತಿತ್ತು! ಚೆನ್ನಾಗಿ ಮಾತನಾಡಿದರೆ ಪ್ರತಿಯೊಂದು ಕಷ್ಟವೂ ಸುಲಭವಾಗುತ್ತದೆ ಎಂಬುದು ಅವರ ದೃಢ ವಿಶ್ವಾಸವಾಗಿತ್ತು. ಆ ವಿಶ್ವಾಸದೊಂದಿಗೆ ಅವರು ಪೊಲೀಸ್ ಚೌಕಿಗೆ ಹೋಗುತ್ತಿದ್ದರು.

ನಾನು ನನ್ನ ಕೆಲಸವೊಂದರ ವಿಚಾರದಲ್ಲಿ ಪೊಲೀಸ್ ಚೌಕಿಯಲ್ಲಿ ಕೂತಿದ್ದೆ. ಅಂದು ನಗರದಲ್ಲಿ ವಿದ್ಯುತ್ ಕೈಕೊಟ್ಟಿತ್ತು, ಪೊಲೀಸ್ ಚೌಕಿಯಲ್ಲಿ ಮೇಣದ ಬತ್ತಿಗಳು ಉರಿಯುತ್ತಿದ್ದವು.

ಸೋದರ ಮಾವನವರು ಬಾಗಿ, ಸಮಕೋನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ಗೆ ‘ಜಯ್‌ಹಿಂದ್’ ಎಂದರು.

‘ನಿಮ್ಮ ಹೆಸರೇನು?’ ಪೊಲೀಸ್ ಇನ್‌ಸ್ಪೆಕ್ಟರ್‌ ಕೇಳಿದರು.

‘ಮಾಯಾಪ್ರಸಾದ್ ಹಿತೈಷಿ’, ಸ್ವಾತಂತ್ರ್ಯ ಹೋರಾಟಗಾರರು’ ಎಂದು ಅವರು ವಿನಮ್ರತೆಯಿಂದಲೇ ಉತ್ತರಿಸಿದ್ದರು; ಅವರ ಧ್ವನಿಯನ್ನು ಕೇಳಿದಾಗ, ಈ ಧ್ವನಿ ಈ ಸಂಕಷ್ಟದ ನಡುವೆ ಮಾರ್ಗವೊಂದನ್ನು ಹುಡುಕಲು ಬಯಸುತ್ತಿದೆ ಎಂದು ಅನ್ನಿಸುತ್ತಿತ್ತು.

‘ಇಲ್ಲಿಗೆ ಬಂದ ಕಾರಣ?’ ಇನ್‌ಸ್ಪೆಕ್ಟರ್‌ ವಿಚಾರಿಸಿದರು.

ಸೋದರ ಮಾವನವರು ಸ್ವಲ್ಪ ಹೊತ್ತು ಸುಮ್ಮನಿದ್ದು, ನಂತರ ಹೇಳಿದರು, ‘ಸಾಹೇಬರೇ, ನಮ್ಮ ಮಗನನ್ನು ಯಾವ ಅಪರಾಧದಲ್ಲಿ ಬಂಧಿಸಲಾಗಿದೆ ಎಂಬುದನ್ನು ತಿಳಿಯಲು ನಾವಿಲ್ಲಿಗೆ ಬಂದಿದ್ದೇವೆ’.

ಇನ್‌ಸ್ಪೆಕ್ಟರ್‌ ಸ್ವಲ್ಪ ಎಚ್ಚೆತ್ತುಕೊಂಡು ಹೇಳಿದರು, ‘ಓಹ್, ನರೇಂದರ ಪ್ರಸಾದ್ ನಿಮ್ಮ ಮಗ! ನೀವೇನು ಕೆಲ್ಸ ಮಾಡ್ತೀರ?

ಸೋದರ ಮಾವನವರು ಮತ್ತೆ ಮೌನವಹಿಸಿದರು. ಏನು ಕೆಲಸವೆಂದು ಹೇಳುವುದು? ತಾವೇನು ಕೆಲಸ ಮಾಡುತ್ತೇವೆ? ಈಗಲೂ ಅವರು ಮೌನವಹಿಸಿ ನಿಂತಿದ್ದರು. ಇನ್‌ಸ್ಪೆಕ್ಟರ್‌ ಮತ್ತೆ ಕೇಳಿದರು, ‘ನೀವೇನು ಕೆಲ್ಸ ಮಾಡ್ತೀರ?’ ನನಗೆ ಮೌನ ದೀರ್ಘವಾದಂತೆ ಅನ್ನಿಸಿತು. ಸೋದರ ಮಾವನವರು ಈಗ ಮಾತನಾಡಬೇಕಿತ್ತು ಎಂದು ನಾನು ಭಾವಿಸಿದೆ. ಆಗ ಒಬ್ಬ ಕಾನ್‌ಸ್ಟೇಬಲ್‌ ಹೇಳಿದ, ‘ಇವರೇನೂ ಕೆಲಸ ಮಾಡಲ್ಲ, ಮಕ್ಕಳಿಂದ ಕಳ್ಳತನ ಮಾಡಿಸಿ, ಇವರು ಅಲೆಯುತ್ತಿರುತ್ತಾರೆ. ಮಕ್ಕಳು ಮತ್ತು ಈ ಮುದುಕ ಕಳ್ಳ ಮಾಲು ಹಂಚಿಕೊಂಡು ಜೀವನ ಮಾಡ್ತಾರೆ’.

ಸೋದರ ಮಾವನವರು ಮೊದಲ ಬಾರಿಗೆ ಆಪಾದಮಸ್ತಕ ಕಂಪಿಸಿದರು. ಕಡೆಗೆ ಸುಧಾರಿಸಿಕೊಂಡು ಹೇಳಿದರು, ‘ಇಲ್ಲ ಸಾರ್, ಇದು ಖಂಡಿತ ಸುಳ್ಳು. ಸನ್ ನಲ್ವತ್ತೆರಡರಲ್ಲಿ, ನಾವು ಯಾವುದೇ ತಪ್ಪು ಕೆಲಸ ಮಾಡಲ್ಲವೆಂದು ಪ್ರತಿಜ್ಞೆ ಮಾಡಿದ್ದೆವು. ಈ ಪತ್ರಿಕೆ ನೋಡಿ, ಇನ್ಸ್ಪೆಕ್ಟರ್ ಸಾಹೇಬ್ರೆ...’ ಸೋದರ ಮಾವನವರು ನಿಲುವಂಗಿಯ ಜೇಬಿನಿಂದ ಪತ್ರಿಕೆಯನ್ನು ಹೊರತೆಗೆದು ಹೇಳಿದರು, ‘ನಾವು ಯಾವುದೇ ತಪ್ಪು ಕೆಲಸ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೂ ಈ ವಿಷಯ ಚೆನ್ನಾಗಿ ತಿಳಿದಿದೆ. ನಾವು ಭ್ರಷ್ಟಾಚಾರವನ್ನು ಹೊಡೆದೋಡಿಸಲು...’

‘ಬೇವರ್ಸಿಗಳು, ನೇರವಾಗಿ ಹುಚ್ಚರಾಸ್ಪತ್ರೆಯಿಂದ ಬಂದು ಬಿಡ್ತಾರೆ’ ಇನ್‌ಸ್ಪೆಕ್ಟರ್‌ ಬಡಬಡಿಸಿದರು. ‘ಏಯ್, ನಾನು ನಿನ್ನ ಕೇಸ್ ಹಿಸ್ಟ್ರಿ ಕೇಳ್ತಿಲ್ಲ. ಜಮೀನು-ಗಿಮೀನಿನ ನಕಲು ಕಾಪಿ ಇದೆಯೇ? ಜಾಮೀನು ಕೊಡಬೇಕಾಗುತ್ತೆ. ನಿಮ್ಮ ಸತ್ಪುತ್ರ ಕಳ್ಳತನದ ಅಪರಾಧದಲ್ಲಿ ಸಿಕ್ಕಿಬಿದ್ದಿದ್ದಾನೆ. ಸುಮ್ಮೆ ಮನಸಿಗೆ ಬಂದಂತೆ ಮಾತನಾಡೋದಕ್ಕೆ ಬಂದ್ ಬಿಡ್ತೀರ. ಇಲ್ಲಿ ಪ್ರತಿಯೊಬ್ಬನೂ ನೇತಾಗಿರಿ ಮಾಡ್ತಿರ‍್ತಾನೆ’.

ಸೋದರ ಮಾವನವರು ಹಾಗೆಯೇ ಪತ್ರಿಕೆ ಹಿಡಿದು ನಿಂತಿರುವುದನ್ನು ನಾನು ನೋಡಿದೆ. ನಂತರ ಅವರು ಸರದಾರ್ ಪಟೇಲರ ಹೆಸರು ಹೇಳುವುದನ್ನು ಕೇಳಿದೆ. ಆದರೆ ಇನ್‌ಸ್ಪೆಕ್ಟರ್‌ರ ಒಂದೇ ಒಂದು ಧಮಕಿ ಅವರ ಬಾಯಿಯನ್ನು ಮುಚ್ಚಿಸಿತು.

ಇನ್‌ಸ್ಪೆಕ್ಟರ್‌ ಹೇಳಿದರು, ‘ಇಲ್ಲಿ ಹೆಚ್ಚು ಹುಚ್ಚುತನ ತೋರಿಸಬೇಡಿ, ಇಲ್ಲದಿದ್ದರೆ ನಿಮ್ಮನ್ನೂ ಎತ್ತಿ ಒಳಗೆ ಹಾಕ್ತೀನಿ. ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಜಾಮೀನು ಕಾಗದ-ಪತ್ರಗಳು ಮತ್ತು ಜಾಮೀನು ಕೊಡುವ ಅಸಾಮಿಯನ್ನು ಕರೆದುಕೊಂಡು ಬನ್ನಿ; ಇಲ್ಲದಿದ್ದರೆ ನಿಮ್ಮ ಮಗ ಆರು ತಿಂಗಳು ಜೈಲಿನ ಕಂಬಿ ಎಣಿಸಬೇಕಾಗುತ್ತೆ. ಏಯ್ ಮುದುಕ, ಇನ್ನೊಂದು ವಿಷಯವನ್ನೂ ಕೇಳಿಬಿಡು, ನೀನೇನಾದರು ಹೆಚ್ಚು ಮಾತನಾಡಿದರೆ, ನಿನ್ನ ಅಂಡಿಗೂ ಹೊಡೆತಗಳು ಬೀಳುತ್ತವೆ, ಆಗ ದಾರಿಗೆ ಬರ್ತೀಯ’.

ಸೋದರ ಮಾವನವರು ಮೆಲ್ಲ-ಮೆಲ್ಲನೆ ಹೊರಗೆ ಹೆಜ್ಜೆಗಳನ್ನು ಹಾಕಿದರು. ಅವರ ಹೆಗಲುಗಳು ಬಾಗಿದ್ದವು. ನಡಿಗೆ ಅಸ್ತವ್ಯಸ್ತವಾಗಿತ್ತು. ಕಾಲುಗಳು ಥರ-ಥರ ಕಂಪಿಸುತ್ತಿದ್ದವು. ಅವರು ಮಾತನಾಡದೆ ಸ್ಟೇಷನ್ನಿನ ಗೇಟಿನಿಂದ ಹೊರ ಹೋದರು.
ಒಂದೂವರೆ ಗಂಟೆಯ ನಂತರ ನಾನು ಸ್ಟೇಷನ್‌ನಿಂದ ಮರಳಿ ಬರುತ್ತಿದ್ದೆ, ಆಗ ನನ್ನ ಮೆದುಳಿನಲ್ಲಿ ಈ ಘಟನೆ ಹೊಚ್ಚ ಹೊಸದಾಗಿತ್ತು. ನಾನಿದ್ದ ತೀನ್‌ಬತ್ತಿಯ ಇಳಿಜಾರಿನ ರಸ್ತೆಯಲ್ಲಿ, ಸುಮಾರು ಹತ್ತು-ಹದಿನೈದು ಗಜದ ದೂರದಲ್ಲಿ ಸೋದರ ಮಾವನವರು ರಸ್ತೆಯ ಅಂಚಿಗಿದ್ದ ಕಿಲೋಮೀಟರ್ ಅಂಕಿತ ಕಲ್ಲಿನ ಮೇಲೆ ಕೂತಿದ್ದರು. ಅವರ ತಲೆ ಅವರ ಎರಡೂ ಕೈಗಳ ಮಧ್ಯೆ ಊರಿದ್ದು, ಮೊಣಕಾಲುಗಳ ನಡುವೆ ಬಾಗಿತ್ತು.

ಅವರು ನನ್ನನ್ನು ನೋಡಿ ಎದ್ದರು, ನಂತರ ನನ್ನೊಂದಿಗೆ ಬಂದರು.

‘ಸೋದರ ಮಾವನವರೇ, ನೀವು ನರೇಂದರನಿಗಾಗಿ ಪೊಲೀಸ್ ಚೌಕಿಗೆ ಹೋಗಿದ್ದಿರಿ, ಅದೇನಾಯಿತು?’

ಅವರು ತುಂಬಾ ಹೊತ್ತು ಮೌನದಲ್ಲಿಯೇ ಇದ್ದರು. ಕ್ರಮೇಣ ಅವರ ಮುಖದಲ್ಲಿ ಬೆಳಕು ಮೂಡಿತು. ಅವರು ಉತ್ಸಾಹದಿಂದ ಹೇಳಿದರು, ‘ಮಗಾ, ಈ ಇನ್‌ಸ್ಪೆಕ್ಟರ್‌ ಮಿಶ್ರಾ ಇದ್ದಾನಲ್ಲ, ಇವನ ಅಪ್ಪನೊಂದಿಗೆ ನನ್ನ ಗೆಳತನವಿತ್ತು. ಇವತ್ತು ಭೇಟಿಯಾದಾಗ, ಹಳೆಯದೆಲ್ಲಾ ನೆನಪಾಯಿತು. ನಾವು ಕ್ಷೇಮ-ಸಮಾಚಾರವನ್ನು ಕೇಳಿದಾಗ ಅವನು ನನಗೆ ಕೈಮುಗಿದ, ನಮ್ಮ ಕಾಲಿಗೆ ನಮಸ್ಕಾರ ಮಾಡಿದ. ಕಡೆಗೆ, ‘ಸೋದರ ಮಾವನವರೇ, ದೊಡ್ಡ ತಪ್ಪಾಯ್ತು. ನರೇಂದರ ನಿಮ್ಮ ಮಗ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಕಾನೂನಿನಂತೆ ಅವನು ತಪ್ಪೆಸಗಿದ್ದಾನೆ. ಈಗ ನಾನೇನು ಮಾಡಲಿ? ನೀವೇ ಹೇಳಿ’ ಎಂದ. ನಾವು, ‘ಪರ್ವಾಗಿಲ್ಲಪ್ಪ, ನೀನು ನಿನ್ನ ಕರ್ತವ್ಯವನ್ನು ಮಾಡು’ ಎಂದೆವು. ನಾವು ಅಲ್ಲಿಂದ ಹೊರಟಾಗ ಅವನು, ‘ಸೋದರ ಮಾವನವರೇ, ಬನ್ನಿ, ನಾನು ನಮ್ಮ ಜೀಪಿನಲ್ಲಿ ನಿಮ್ಮ ಮನೆಗೆ ನಿಮ್ಮನ್ನು ಬಿಡ್ತೀನಿ’ ಎಂದ. ಆದರೆ ನಾವು ಇನ್‌ಸ್ಪೆಕ್ಟರ್‌ ಮಿಶ್ರಾನನ್ನು ಬೇಡವೆಂದು ತಡೆದೆವು’. 

ನನ್ನ ತಿರುವು ಬಂದಿತ್ತು, ನಾನು ಇನ್ನೊಂದು ಕಡೆಗೆ ಹೋಗಬೇಕಿತ್ತು. ಸೋದರ ಮಾವನವರು ಸ್ವಲ್ಪ ದೂರ ಅಂಧಕಾರದಲ್ಲಿ ಮುಂದುವರೆದು ಹೋದರು, ನಂತರ ನಿಂತರು. ಅವರು ಮತ್ತೆ ನನ್ನ ಬಳಿಗೆ ಹೊರಳಿ ಬಂದು ಹೇಳಿದರು, ‘ಮಗಾ, ನಿನ್ನ ಹತ್ರ ಒಂದು ಅಗತ್ಯ ಕೆಲಸವಿದೆ’ ಅವರ ಧ್ವನಿ ಒಡೆದಿತ್ತು. ಗಂಟಲು ಒತ್ತಿ ಬರುತ್ತಿತ್ತು. ಅವರು ನನ್ನ ಸಮೀಪಕ್ಕೆ ಬಂದರು. ತಮ್ಮ ಕೈಗಳನ್ನು ನನ್ನ ಹೆಗಲ ಮೇಲಿಟ್ಟರು. ಅವರ ಕೈಗಳು ಮೆಲ್ಲ-ಮೆಲ್ಲನೆ ಕಂಪಿಸುತ್ತಿದ್ದವು. ಹೀಗೆ ಕೈಗಳು ಅನಿಶ್ಚಿತತೆ, ದುಃಖ, ಅಸಹಾಯಕತೆ ಮತ್ತು ಸೋಲಿನ ಪರಿಸ್ಥಿತಿಗಳಲ್ಲಿ ಕಂಪಿಸುತ್ತವೆ ಎಂದು ನನಗೆ ಅನ್ನಿಸಿತು. ಆ ಕೈಗಳು ನನ್ನ ಹೆಗಲಿಗೆ ಭಾರವಾಗುತ್ತಿದ್ದವು.

ಸೋದರ ಮಾವನವರು ಮಾತನಾಡಲಿಲ್ಲ. ತಮ್ಮ ಕೈಗಳನ್ನು ನನ್ನ ಹೆಗಲಿನಿಂದ ತೆಗೆದು, ಶೀಘ್ರವಾಗಿ ಹೊರಳಿದರು. ಅವರು ಕರಗುತ್ತಿದ್ದ ತಮ್ಮ ಮುಖವನ್ನು ಮರೆಮಾಚಿಕೊಳ್ಳಲು ಬಯಸುತ್ತಿದ್ದರು. ನಂತರ ಅಂಧಕಾರಕ್ಕೆ ತೆವಳುತ್ತಾ ಹೋಗುತ್ತಿದ್ದರು.

ನಾನು ನಾಳೆ ಬೆಳಿಗ್ಗೆ ನಿಮ್ಮೊಂದಿಗೆ ಜಾಮೀನು ಕೊಡಲು ಬರುತ್ತೇನೆ ಎಂದು ಅವರಿಗೆ ಹೇಳಲು ಯೋಚಿಸಿದೆ, ಆದರೆ ಅವರು ತುಂಬಾ ದೂರಕ್ಕೆ ಹೋಗಿದ್ದರು.

‘ಸೋದರ ಮಾವನವರೇ, ನಾನು ಬರ್ತೀನಿ..ಜಯ್‌ಹಿಂದ್’ ಎಂದು ನಾನು ಕೂಗಿ ಹೇಳಿದೆ. ಆದರೆ ಅವರು ಹಿಂದಕ್ಕೆ ಹೊರಳದೆ ತಮ್ಮ ಬಲಗೈಯನ್ನು ಎತ್ತಿ, ಅಂಧಕಾರದಲ್ಲಿ ಕಳೆದು ಹೋದರು. ನಗರದಲ್ಲಿ ಇನ್ನೂ ವಿದ್ಯುತ್ ಬಂದಿರಲಿಲ್ಲ, ಅಂಧಕಾರ ದಟ್ಟವಾಗುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.