ಶನಿವಾರ, ಅಕ್ಟೋಬರ್ 16, 2021
22 °C

ಚಂದ್ರಶೇಖರ್‌ ಸಿರಿವಂತೆ ಬರೆದ ಕಥೆ: ಕಾಮಾಂಸಾ-ಹಾರ

ಚಂದ್ರಶೇಖರ್‌ ಸಿರಿವಂತೆ Updated:

ಅಕ್ಷರ ಗಾತ್ರ : | |

Prajavani

ನಾನೀಗ ವಿಚಾರಣಾಧೀನ ರಾಜಕೀಯ ಕೈದಿಯಾಗಿ ಜೈಲಿನೊಳಗಿದ್ದೆ. ನನಗೆ ಜೈಲಿನ ಸಿಬ್ಬಂದಿ ಕೊಟ್ಟ ಸಂಖ್ಯೆ 5927. ಸಾಗರದ ಉಪಕಾರಾಗೃಹದಲ್ಲಿ ನನ್ನನ್ನು ಇಟ್ಟಿದ್ದರು. ಅಷ್ಟೇ ಅಲ್ಲ, ನನ್ನನ್ನು ನೋಡಲು ಬರುವವರ ಮೇಲೂ ಸರ್ಕಾರದ ನಿಗವಿತ್ತು. ಆದರೂ ಜನ ತಂಡೋಪತಂಡವಾಗಿ ಎನ್ನುವಂತೆ ನನ್ನನ್ನು ನೋಡಲು ಬರುತ್ತಿದ್ದರು. ಅವರಿಗೆ ಸರ್ಕಾರದ ಬಗ್ಗೆ ಯಾವ ಅಳುಕೂ ಇದ್ದಂತಿರಲಿಲ್ಲ. ಜೈಲಿನಲ್ಲಿರುವ ಸಿ.ಸಿ.ಟಿವಿ ಕ್ಯಾಮೆರಾ ಎಲ್ಲವನ್ನೂ ದಾಖಲಿಸಿಕೊಳ್ಳುತ್ತಿತ್ತು. ಹಗಲು ಹೊತ್ತು ನಾನು ಸೆಲ್‍ನೊಳಕ್ಕೆ ಇರಲಾಗುತ್ತಲೇ ಇರಲಿಲ್ಲ. ಜೈಲಿನ ಸಿಬ್ಬಂದಿಗೂ ನನ್ನ ಮೇಲೆ ಒಂಥರದ ಪ್ರೀತಿಯಿದ್ದ ಕಾರಣ ನನ್ನನ್ನು ನೋಡಲು ಬರುವವರಿಗೆ ಯಾವುದೇ ನಿರ್ಬಂಧ ಹೇರುತ್ತಿರಲಿಲ್ಲ. ಹಾಗಾಗಿ ಇಡೀ ದಿನ ಜನ..ಜನ...ಜನ. ಇವರೊಂದಿಗೆ ನನ್ನ ಕುಟುಂಬಸ್ಥರು ಹಾಗು ನೆಂಟರಿಷ್ಟರು ಬೇರೆ. ನನ್ನ ಹೆಂಡತಿಯಂತೂ ನನ್ನನ್ನು ನೋಡಿ ಕಣ್ಣೀರುಗೆರೆಯುವುದೊಂದೇ ಬಾಕಿ. ನಾನೇ ತುಸು ಗದರಿ ಕಣ್ಣೀರಿಂಗಿಸಬೇಕಾಯ್ತು.

ಕೆಲವು ನೆಂಟರಂತೂ ದುಃಖದ ಭಾವದೊಂದಿಗೆ ಕುಹಕದ ನಗೆಯನ್ನೂ ಬೆರೆಸುತ್ತಾ ಬಫೂನರಂತೆ ಕಂಗೊಳಿಸಿದರು. ಹಲವಾರು ಗೆಳೆಯರು ನನ್ನನ್ನು ನೋಡಲು ಬಂದ ಜನರ ಗುಂಪನ್ನು ಕಂಡು ಚೂರು ಹೊಟ್ಟೆಕಿಚ್ಚಿಗೊಳಪಟ್ಟವರಂತೆ ಮುಲುಕಾಡಿದರು. ನನ್ನನ್ನು ನೋಡಲು ಬಂದವರಲ್ಲಿ ಸಾಹಿತಿಗಳು, ಕಲಾವಿದರು, ರಾಜಕೀಯ ನೇತಾರರು, ಸಂಘ-ಸಂಸ್ಥೆಗಳ ಮುಖಂಡರು, ಊರ ಮುಖಂಡರು, ಸಾಮಾನ್ಯರು ಎಲ್ಲರು ಇದ್ದರು. ಬರುವವರೆಲ್ಲರೂ ಹಣ್ಣು-ಹಂಪಲು, ತಿಂಡಿ-ತಿನಿಸುಗಳನ್ನು ಧಂಡಿಯಾಗಿ ತರುತ್ತಿದ್ದರು. ಜೈಲಿನಲ್ಲಿರುವ ಇತರೆ ಇಪ್ಪತ್ತಮೂರು ಕೈದಿಗಳಿಗೆ ಹಾಗೂ ಜೈಲಿನ ಸಿಬ್ಬಂದಿಗೆ ಹಂಚಿದರೂ ಮತ್ತೂ ಮತ್ತೂ ಮಿಕ್ಕುಳಿಯುವಷ್ಟು. ತರಬೇಡಿರೆಂದು ಹೇಳುವುದಾದರೂ ಹೇಗೆ? ಬರುತ್ತಿದ್ದರು, ಜನ ಬರುತ್ತಲೇ ಇದ್ದರು.

ಆದರೆ ನನ್ನ ಅಪ್ಪ ಮಾತ್ರ ನನ್ನನ್ನು ನೋಡಲು ಬರಲಿಲ್ಲ! ಅರೆ ನನ್ನ ಪ್ರೀತಿಯ ಅಪ್ಪ ಜೈಲಿನಲ್ಲಿರುವ ತನ್ನ ಪ್ರೀತಿಯ ಮಗನನ್ನು ನೋಡಲು ಯಾಕೆ ಬರಲಿಲ್ಲ? ಈ ಚಿಂತೆ ನನ್ನನ್ನು ಸಂಜೆಯಿಂದ ಕೊರೆಯಲಾರಂಭಿಸಿತು. ಯಾರೊಂದಿಗೆ ಮಾತನಾಡಿದರೂ ಅದು ಬರೀ ಮಾತಷ್ಟೇ ಆಗಿ ಅವರೊಂದಿಗೆ ಮನ ಬೆಸೆಯದಾಯಿತು. ಆ ರಾತ್ರಿ ಯಾಕೋ ನಿದ್ದೆಯೂ ಸರಿಯಾಗಿ ಬರಲಿಲ್ಲ. ನಾನು ಜೈಲಿಗೆ ಬಂದದ್ದು ಅಪ್ಪನಿಗೆ ಬೇಸರವಾಗಿರಬಹುದೆ? ಆದರೆ ಕಾರಣ ತಿಳಿಯದಷ್ಟು ದಡ್ಡನೇನೂ ನನ್ನಪ್ಪನಲ್ಲ. ಎಷ್ಟೆಂದರೂ ಜೈಲು ಎಂಬುದು ಅಪ್ಪನಲ್ಲಿ ಕಳವಳ ಹುಟ್ಟಿಸಿರಬಹುದಲ್ಲವೆ? ಜೈಲಿನಲ್ಲಿ ಹೊಡೆಯುತ್ತಾರೆ, ಬಡಿಯುತ್ತಾರೆ ಎಂಬೆಲ್ಲಾ ಪುಕಾರುಗಳು ಅಪ್ಪನನ್ನು ಅಂಜಿಸಿರಬಹುದೆ? ಹೀಗೆಲ್ಲ ಆಲೋಚಿಸುತ್ತಾ ರಾತ್ರಿಯೆಲ್ಲಾ ನಿದ್ದೆ ಬಾರದೆ ಕಳೆದೆ. ಯಾಕೆಂದರೆ ನಾನು ಜೈಲಿಗೆ ಬಂದು ಐದು ದಿನಗಳಾಗಿದ್ದವು.

ಎಂದಿನಂತೆ ಮುಂಜಾನೆಯಾಯಿತು. ಆ ಹೊತ್ತಿನಲ್ಲಿ ನನಗೆ ಜೊಂಪೊಜೊಂಪು. ಜೈಲು ವಾರ್ಡನ್‍ಗೆ ವಿನಂತಿಸಿ ಇನ್ನಷ್ಟು ಸಮಯ ಮಲಗಿದೆ. ಒಂಬತ್ತರ ಹೊತ್ತಿಗೆ ಎಚ್ಚರವಾಯಿತು. ಹೊರಗೆ ನೋಡುತ್ತೇನೆ, ಅಲ್ಲಿರುವ ಗಾರ್ಡನ್‍ನಲ್ಲಿ ಕೈದಿಗಳೆಲ್ಲಾ ತಮಗೆ ಜೈಲರ್ ಕೊಟ್ಟ ಕೆಲಸ ಮಾಡುತ್ತಿದ್ದಾರೆ. ಹಸಿರು ಗಾರ್ಡನ್ ಮೇಲೆ ಹೊಂಗಿರಣದ ಹೊದಿಕೆ. ನೀರುಣಿಸಿದ ಗಿಡಗಳಿಂದ ಹಸಿರಿನ ನಳನಳಿಕೆ. ಅಲ್ಲಲ್ಲಿ ಬಿಟ್ಟಿದ್ದ ಬಣ್ಣಬಣ್ಣದ ಹೂಗಳು ಮನಸ್ಸನ್ನು ಮುದಗೊಳಿಸುವಂತಿದ್ದವು.

ಹೆಂಗರುಳಿನ ಜೈಲು ಸುಪರಿಂಟೆಂಡೆಂಟ್ ಆಗಮಿಸಿದರು. ಶಿಕ್ಷಾಧೀನ ಕೈದಿಗಳನ್ನು, ವಿಚಾರಣಾಧೀನ ಕೈದಿಗಳನ್ನು ಅನುಕಂಪದಿಂದ ಮಾತನಾಡಿಸುತ್ತಾ ನನ್ನ ಬಳಿ ಬಂದರು.

‘ಏನ್ ಭಾಷಣಗಾರ್ರಿ ನೀವು? ನಿಮ್ಮ ಭಾಷಣವನ್ನು ವಿಡಿಯೊದಲ್ಲಿ ನೋಡಿದೆ. ಬಹಳ ಅದ್ಭುತವಾಗಿ ಮಾತಾಡಿದೀರಲ್ರಿ, ನೋಡಿಯಪ್ಪಾ ಇರೋ ಸತ್ಯ ಹೇಳಿದ್ರೂ ಕೂಡ ಈ ನಮ್ಮ ವ್ಯವಸ್ಥೆ ನಮ್ಮೊಂದಿಗೆ ಎಷ್ಟು ಕೆಟ್ಟದಾಗಿ ನಡಕೊಳ್ಳತ್ತೆ, ಒಹ್, ನೀವು ಈಗ ಎದ್ದಂಗಿದೆ, ಯಾಕೆ ರಾತ್ರಿ ನಿದ್ದೆ ಬಂದಿಲ್ವೆ?’ ಎಂದು ಬಹು ಕಕ್ಕುಲಾತಿಯಿಂದ ವಿಚಾರಿಸಿ ‘ಮುಖತೊಳೆದು ಬನ್ನಿ, ನನ್ನ ಛೇಂಬರನಲ್ಲಿರುತ್ತೇನೆ’ ಎಂದು ಮೆಲುವಾಗಿ ಭುಜತಟ್ಟಿ ನಡೆದರು.

ನಾನು ಮುಖಮಾರ್ಜನ ಮುಗಿಸಿ ಸುಪರಿಂಟೆಂಡೆಂಟ್‍ರವರ ಛೇಂಬರ್ ಪ್ರವೇಶಿಸಿದೆ. ಅಲ್ಲಿ ನನಗಾಗಿ ಬಿಸಿಬಿಸಿ ಟೀ ಹಾಗೂ ಇಡ್ಲಿವಡೆಗಳು ಕಾದಿದ್ದವು. ಅವರು ಮತ್ತು ಅಲ್ಲಿದ್ದ ಅವರ ಸಹಾಯಕ ಬರೀ ಟೀ ಇಟ್ಟುಕೊಂಡು ಕುಳಿತಿದ್ದರು. ನನ್ನ ಬರುವನ್ನೇ ನಿರೀಕ್ಷಿಸುತ್ತಿದ್ದರು. ನಾನು ಅವರಲ್ಲಿ ಕ್ಷಮೆಕೋರುತ್ತಾ ಕುಳಿತು ತಿಂಡಿ ತಿನ್ನಲಾರಂಭಿಸಿದೆ. ಅಷ್ಟರಲ್ಲಿ ಜೈಲಿನ ಕರೆಗಂಟೆ ಬಾರಿಸಿತು. ಸುಪರಿಂಟೆಂಡೆಂಟ್ ಮುಖದಲ್ಲಿ ಕಿರುನಗು ಕಾಣಿಸಿಕೊಂಡಿತು. ನನಗೂ ಅದು ಅರ್ಥವಾಗಿ ಕಿರುನಕ್ಕೆ. ಅಷ್ಟರಲ್ಲಿ ಅವರ ಮೊಬೈಲ್ ರಿಂಗಾಯಿತು. ಎತ್ತಿದವರೇ ಆ ಕಡೆಯಿಂದ ಬಂದ ನಮಸ್ಕಾರಕ್ಕೆ ಉತ್ತರಿಸಿ ಬಂದವರು ಯಾರೆಂದು ವಿಚಾರಿಸಿ ಒಳಗೆ ಕಳಿಸುವಂತೆ ಸೂಚಿಸಿದರು. ನನ್ನ ಕಡೆ ನೋಡುತ್ತಾ ನಿಮ್ಮನ್ನೇ ಕಾಣಲು ಅದಾರೋ ದೇವಪ್ಪ ಎಂಬುವವರು ಬಂದಿದ್ದಾರೆಂದು ತಿಳಿಸಿದರು. ನಾವು ಕುಳಿತಿದ್ದ ಛೇಂಬರಿನೊಳಗಿಂದ ಮುಖ್ಯದ್ವಾರ ಕಾಣಿಸುತ್ತಿತ್ತಾದ್ದರಿಂದ ಕೂತೂಹಲವಾಗಿ ನಾನು ಅಲ್ಲಿಗೇ ನನ್ನ ಕಣ್ಣುನೆಟ್ಟೆ. ಜೈಲ್ ಪೋಲೀಸ್ ಬಾಗಿಲು ತೆರೆದು ಅವರನ್ನು ಒಳಗೆ ಬರಮಾಡಿಕೊಡುತ್ತಿರುವಂತೆ ನನ್ನ ಕಣ್ಣುಗಳು ಖುಷಿಯಿಂದ ಮಿನುಗಲಾರಂಭಿಸಿದವು. ಸುಪರಿಂಟೆಂಡೆಂಟ್ ಅದನ್ನು ಗಮನಿಸಿದವರೇ ‘ನಿಮಗೆ ಭಾರಿ ಬೇಕಾದವರಂತಿದೆ’ ಎಂದು ಉಸುರಿದರು. ಅಷ್ಟರಲ್ಲಿ ತಿಂಡಿ-ಟೀ ಮುಗಿದಿತ್ತು.

‘ಹೌದು ಸರ್, ನನಗೆ ಭಾರಿ ಬೇಕಾದವರೆ, ನಮ್ಮ ತಂದೆಯ ಸ್ನೇಹಿತರು, ಪಟೇಲ್ ದೇವಪ್ಪ ಎಂಬುದು ಅವರ ಹೆಸರು. ಅವರನ್ನು ನೋಡುತ್ತಿದ್ದಂತೆಯೆ ನಮ್ಮ ತಂದೆಯನ್ನು ನೋಡಿದಷ್ಟೇ ಖುಷಿಯಾಯ್ತು’ ಎಂದುತ್ತರಿಸಿದೆ. ಅದಕ್ಕವರು ತಲೆದೂಗುತ್ತಾ ಗಂಭೀರ ನಗುವೊಂದನ್ನು ಚೆಲ್ಲಿದರು.

ದೇವಪ್ಪನವರದು ಎತ್ತರವಾದ ಆಳ್ತನ. ಅದಕ್ಕೆ ತಕ್ಕಂಥಹ ನೇರದೇಹದ ನಡಿಗೆ. ಮಧ್ಯಮ ಗಾತ್ರದಸ್ಥೂಲತ್ವ. ಸ್ವತಃ ಕೃಷಿಕರಾದುದರಿಂದ ವಯಸ್ಸು ಎಂಬತ್ತರ ಹತ್ತಿರವಿದ್ದರೂ ಗಟ್ಟುಮುಟ್ಟಾಗಿದ್ದರು. ಶುಭ್ರಬಿಳಿಯ ಅಡ್ಡಪಂಚೆ, ಬಿಳಿಯ ಜುಬ್ಬಾ, ಹೆಗಲಲ್ಲಿ ಒಂದು ಹಸಿರು ಶಾಲು ಅವರು ರೈತ ಸಂಘದವರೆಂಬುದನ್ನು ಎತ್ತಿ ತೋರಿಸುತ್ತಿತ್ತು. ಎಣ್ಣೆಬಳಿದು ನೀಟಾಗಿ ಬಾಚಿದ ತಲೆಗೂದಲು, ಮುಖದ ತುಂಬಾ ಎಲ್ಲರನ್ನು ಸೆಳೆಯುವಂತ ದೇಶಾವರಿ ನಗೆ. ಜೈಲು ಪೇದೆ ದೇವಪ್ಪನವರನ್ನು ಕರೆತಂದು ಸೀದಾ ಸುಪರಿಂಟೆಂಡೆಂಟ್‍ರವರ ಕಚೇರಿಗೇ ಬಿಟ್ಟ. ಅವರು ಬಾಗಿಲ ಬಳಿ ಬರುತ್ತಿದ್ದಂತೆಯೆ ನಾನು ಎದ್ದುನಿಂತೆ. ಸುಪರಿಂಟೆಂಡೆಂಟ್ ಹಾಗೂ ಅವರ ಸಹಾಯಕನೂ ಎದ್ದುನಿಂತರು. ನಾನು ದೇವಪ್ಪನವರಿಗೆ ಕೈಮುಗಿಯುತ್ತಿದ್ದಂತೆ ಅವರು ಸಹ ಕೈಮುಗಿದರು. ದೇವಪ್ಪನವರು ನಮ್ಮ ಮೂವರಿಗೂ ಒಟ್ಟಿಗೆ ಕೈಮುಗಿಯುತ್ತಾ ಒಳಬಂದು ನನ್ನ ಪಕ್ಕದ ಖುರ್ಚಿಯಲ್ಲಿ ಕುಳಿತರು. ಅವರಿಬ್ಬರನ್ನು ಕಣ್ಣುಹೊರಳಿಸಿ ಎರೆಡು ಬಾರಿ ನೋಡಿ ನಂತರ ನನ್ನೆಡೆಗೆ ತಿರುಗಿ

‘ಏನಾ ಹುಡ್ಗಾ, ನಿನ್ಯಾಕ್ ಈ ಪೋಲಿಸ್ನೋರು ತಂದು ಇಲ್ಲಿ ಹಾಕಿಟ್ಟಾರಾ?’ ಎಂದು ಪ್ರಶ್ನಿಸುತ್ತಾ ಜೈಲು ಪೋಲೀಸರ ಕಡೆ ಕೈದೋರಿದರು. ನಾನು ನಗುತ್ತಾ

‘ಇವರಲ್ಲ ನನ್ನನ್ನು ಇಲ್ಲಿ ತಂದು ಹಾಕಿದವರು, ಹೊರಗಡೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೋಲೀಸರು ನನ್ನನ್ನು ನ್ಯಾಯಾಲಯದ ಅಣತಿಯ ಮೇರೆಗೆ ಇಲ್ಲಿ ತಂದು ಹಾಕಿದ್ದಾರೆ, ಅದಕ್ಕೂ ಇವರಿಗೂ ಸಂಬಂಧವಿಲ್ಲ’ ಎಂದೆ. ಅದಕ್ಕೆ ದೇವಪ್ಪನವರು,

‘ಅದ್ ನಂಗೂ ಗೊತ್ತೈತ್ತಪ್ಪಾ, ಆದ್ರೂ ನೀನೇನೆ ಹೇಳು ಈ ಪೋಲೀಸ್ನೋರ್ದೆಲ್ಲಾ ಒಂದೇ ಜಾತಿ. ನಾವು ಹೊರ್ಗಡೆ ಇದ್ದಾಗ ಒಂಥರ ಇದ್ದವ್ರು ನಾವು ನಮೀಗ್ ಗೊತ್ತಿಲ್ದಂಗ್ ಏನಾರೂ ಮಾಡ್ ಸಿಕ್ಕಬಿದ್ರೆ ಸಾಕ್ ನಮ್ಮನ್ನ್ ನೋಡೋ ಥರಾನೆ ಬೇರೆ ಮಾರಾಯ!’ ಎಂದರು. ಈ ಪೋಲೀಸ್ನೋರಿಂದ ಯಾವಾಗ್ಲೊ ದೇವಪ್ಪನವರಿಗೆ ಕೆಟ್ಟ ಅನುಭವವಾಗಿರಬೇಕೆಂದು ಊಹಿಸುತ್ತಾ ನಾನು ಮಾತಿನ ದಿಕ್ಕನ್ನು ಬದಲಿಸುವ ಸಲುವಾಗಿ,

‘ಅದಿರಲಿ, ನಿಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಾ? ನಮ್ಮ ಮನೆಕಡೆ ಹೋಗಿದ್ರಾ? ನಮ್ಮ ಮನೇಲಿ ಎಲ್ರೂ ಹೇಗಿದಾರೆ?’ ಎಂದು ಮೂರು ಪ್ರಶ್ನೆಗಳನ್ನೂ ಒಟ್ಟಿಗೇ ಕೇಳಿದೆ.

‘ಹುಂ, ನಮ್ಮನೆ ಕಥೆ ಬಿಡು, ಯಲ್ಲ ಗನಾಗೈದಾರೆ. ನಿಮ್ಮನೆ ಕಡೆ ನಿನ್ನೆ ಹೋಗಿದ್ನಾ, ಆವಾಗ್ಲೆ ನಂಗೆ ನಿನ್ನ ಜೈಲಿಗ್ ಹಾಕಿದ್ ವಿಷ್ಯ ತಿಳ್ದಿದ್ದು, ನಿಮ್ಮನ್ಯಾಗ್ ಉಳ್ದವ್ರಿಗಿಂತ ನಿಮ್ಮಪ್ಪವ್ರಿಗೇ ಬಾಳ ಬೇಜಾರಾದಾಂಗ್ ಕಾಣ್ತೈತಿ ಹುಡ್ಗಾ, ಆದ್ರೆ ಅವ್ರಿಗ್ ಜೈಲಿಗ್ ಬಂದ್ ನಿನ್ನನ್ನ್ ನೋಡಕೂ ಇಷ್ಟಿಲ್ಲ ತಗಾ!’ ಅಂದರು. ತಕ್ಷಣವೇ ನಾನು,

‘ಬೇಡ ಬೇಡ ಅವ್ರ್ ಜೈಲ್ ಹತ್ರುಕ್ಕೂ ಬರದ್ ಬೇಡ, ದಯವಿಟ್ಟು ನೀವು ಅವ್ರನ್ನ ಇಲ್ಲೀಗ್ ಬರ್ದಿದ್ದಂಗ್ ತಡೀರಿ, ಅವ್ರಿಗೆ ಇಂಥದೆಲ್ಲ ಅಷ್ಟರ ಮಟ್ಟಿಗೆ ಅರ್ಥನೂ ಆಗಲ್ಲ, ಒಂದ್ವೇಳೆ ಆದ್ರೂ ನಮ್ಗ್ಯಾಕ್‍ಬೇಕಿತ್ತು ಈ ಉಸಾಬರಿಯಲ್ಲ ಅಂಥಾನೆ ಯೋಚುಸ್ತಾರೆ’ ಎಂದೆ.

ಅದಕ್ಕೆ ದೇವಪ್ಪನವರು ‘ನಾಯ್ಕರಿಗೆ ನಾನ್ ಹೇಳ್ತೀನಿಬಿಡು, ಅದಿರ್ಲಿ, ನೀನ್ ಮಾಡಿದ್ದ್ ತಪ್ಪಾದ್ರೂ ಏನಪ್ಪಾ?’ ಎಂದು ವಿಷಯದ ಬುಡಕ್ಕೆ ಕೈಹಾಕಿದರು. ಅದಕ್ಕೆ ನಾನು ಇನ್ನೇನು ಉತ್ತರಿಸಬೇಕು ಎಂಬಷ್ಟರಲ್ಲಿ ಸುಪರಿಂಟೆಂಡೆಂಟ್‍ರವರು ತಟ್ಟನೆ ಮಧ್ಯೆ ಮಾತನಾಡಿ

‘ನೋಡಿ ದೇವಪ್ಪ ಸರ್, ಇವರು(ನನ್ನತ್ತ ಬೆರಳು ತೋರಿ) ಪ್ರಚಲಿತ ವಿಷಯಗಳನ್ನಿಟ್ಟುಕೊಂಡು ಈ ಸಮಾಜದಲ್ಲಿ ಇನ್ನು ಏನೇನು ಬದಲಾವಣೆಗಳಾಗಬೇಕು ಮತ್ತು ಅದನ್ನು ಕಾರ್ಯಗತಗೊಳಿಸುವುದು ಹೇಗೆ ಎಂಬುದರ ಬಗ್ಗೆ ಅತ್ಯಂತ ಸೊಗಸಾಗಿಯೇ ಮಾತನಾಡಿದ್ದಾರೆ. ರಾಜ್ಯಕ್ಕೆ ಸಂಬಂಧಪಟ್ಟಂತೆ ಇವರು ಕೊಟ್ಟಿರುವ ಎಲ್ಲಾ ಅಂಕಿಸಂಖ್ಯೆಗಳೂ ಸಾಕಷ್ಟು ಕರಾರುವಾಕ್ಕಾಗಿಯೇ ಇವೆ. ಜೊತೆಗೆ ಅವರವರು ಉಣ್ಣುವ ಆಹಾರದ ಬಗ್ಗೆ ಪ್ರಸ್ತಾಪಿಸುತ್ತಾ ಮನುಷ್ಯನ ಹುಟ್ಟಿನ ಮೂಲದಲ್ಲೇ ಮಾಂಸಾಹಾರವಿದೆಯೆಂದು ಪ್ರತಿಪಾದಿಸಿದ್ದಾರೆ. ನನಗಂತೂ ಇವರ ಆ ಪ್ರತಿಪಾದನೆ ನಿಜಕ್ಕೂ ತುಂಬಾ ಅರ್ಥಪೂರ್ಣವೆನ್ನಿಸಿದೆ. ನಾನಂತೂ ಅದನ್ನು ಮನಸಾರೆ ಒಪ್ಪಿದ್ದೇನೆ. ಹಾಗೆಯೆ ಇವರ ಇತರೆ ವಿಷಯಗಳಲ್ಲಿನ ಅಭಿವೃದ್ಧಿಯ ದೃಷ್ಟಿಕೋನಗಳೆಲ್ಲವೂ ರೈತರ ಹಾಗೂ ಗ್ರಾಮೀಣ ಪ್ರದೇಶದ ಜನರ ಕುರಿತೇ ಆಗಿದೆ. ಈ ದೇಶವಿರುವುದೇ ಹಳ್ಳಿಗಳಿಂದ. ಈ ದೇಶವಿರುವುದೇ ರೈತರಿಂದ. ಹಾಗಿದ್ದಾಗ ನಮ್ಮ ಸರ್ಕಾರಗಳು ತಮ್ಮೆಲ್ಲಾ ಯೋಜನೆ-ಯೋಚನೆಗಳನ್ನು ಹಳ್ಳಿಗಳಿಂದಲೇ ಸುರುಮಾಡಬೇಕೆಂದು ಒತ್ತಾಯಿಸುತ್ತಾರೆ. ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸಿಕೊಳ್ಳುವ ಅವಕಾಶ ಸೃಷ್ಟಿಸಿಕೊಡಬೇಕೆನ್ನುತ್ತಾರೆ. ಪಕೃತಿ ಸಹಜವಾಗಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟು ಭೂಮಿಯಲ್ಲಿ ಇಂಗಿಸಿಕೊಳ್ಳುವ ಕುರಿತು ಸರಳವಾದ ಉಪಾಯವನ್ನು ಮಂಡಿಸುತ್ತಾರೆ. ಈ ರೀತಿಯ ಅನೇಕ ವಿಷಯಗಳ ಕುರಿತು ವಿಷಯ ಮುಂದಿಟ್ಟಿದ್ದಾರೆ. ಆದರೆ ಅದನ್ನ ಕೇಳಿಸಿಕೊಳ್ಳುವ ಕಿವಿಗಳು ಯಾವುವು ಎಂಬುದಷ್ಟೆ ಮುಂದಿರುವ ಪ್ರಶ್ನೆ.’ ಎಂದು ಹೇಳಿದ ಆ ಅಧಿಕಾರಿ ವಿಷಾದದಿಂದೆಂಬಂತೆ ಮೌನವಾಗಿ ಕುಳಿತುಬಿಟ್ಟರು. ಆ ಕೋಣೆಯಲ್ಲಿ ಸ್ವಲ್ಪಹೊತ್ತು ನಿಶ್ಶಬ್ಧ ಆವರಿಸಿತು.

ಸುಮಾರು ಹದಿನೈದು ಸೆಕೆಂಡುಗಳ ನಂತರ ದೇವಪ್ಪನವರು ಆ ಅಧಿಕಾರಿಯನ್ನು ಉದ್ದೇಶಿಸಿ,

‘ಇವ್ನು ಮಾತಡಿದ್ದನ್ನ ನೀವು ಯಾವಾಗ, ಎಲ್ಲಿ ಕೇಳಿಸಿಕೊಂಡಿರಿ?’ ಎಂದು ಪ್ರಶ್ನಿಸಿದರು. ತಕ್ಷಣವೇ ಆ ಅಧಿಕಾರಿ ತನ್ನ ಮೊಬೈಲನ್ನು ಕೈಗೆತ್ತಿಕೊಂಡು,

‘ಇದರ ಮುಖಾಂತರ ಕೇಳಿಸಿಕೊಂಡೆ, ಇವರ ಮಾತುಗಳು ನನ್ನನ್ನು ಬಹಳ ಪ್ರಭಾವಿಸಿತು.’ ಎಂದರು.

ನೋಡಲು ಆ ಅಧಿಕಾರಿ ನನಗಿಂತ ನಾಲ್ಕೈದು ವರ್ಷ ಚಿಕ್ಕವರಿದ್ದರು. ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿದ್ದರು. ಸೂಕ್ಷ್ಮ ಮನಸ್ಸಿನವರಾಗಿದ್ದರು. ತಾನೊಬ್ಬ ಪೋಲೀಸ್ ಅಧಿಕಾರಿಯೆಂಬ ಗತ್ತುಗೈರತ್ತು ಅವರಲ್ಲಿರಲಿಲ್ಲ.

ದೇವಪ್ಪನವರು ನನ್ನ ಕಡೆ ತಿರುಗಿ ಅತ್ಯಂತ ಆಪ್ತನೋಟ ಬೀರಿದರು. ನನಗೋ ಮುಜುಗರವಾಯಿತು. ಎಷ್ಟಾದರೂ ದೇವಪ್ಪನವರು ನನ್ನ ತಂದೆಯ ಸ್ನೇಹಿತರಲ್ಲವೆ? ತಕ್ಷಣವೇ ಸುಪರಿಂಟೆಂಡೆಂಟ್‍ರ ಕಡೆ ನೋಡುತ್ತಾ ದೇವಪ್ಪನವರು,

‘ನಿಮ್ಮ ಮೊಬೈಲ್‍ನಲ್ಲಿರುವ ಇವನ ಭಾಷಣವನ್ನು ನಾನೂ ಕೇಳಬಹುದೆ?’ ಎಂದು ಕೋರಿದರು. ಅದಕ್ಕೆ ಆ ಅಧಿಕಾರಿ,

‘ಅಯ್ಯೊ ಅದಕ್ಕೇನಂತೆ ಕೇಳಿ, ನೀವಿದನ್ನು ಕೇಳಲೇಬೇಕು, ಸುಮಾರು ನಲ್ವತ್ತು ನಿಮಿಷದ ಭಾಷಣ’ ಎಂದು ಹೇಳುತ್ತಾ ಮೊಬೈಲನ್ನು ಆನ್ ಮಾಡುತ್ತಾ,

‘ಪೂರ್ತಿ ಆಲಿಸುತ್ತೀರೊ ಹೇಗೆ?’ ಎಂದು ಕೇಳಿದರು. ದೇವಪ್ಪನವರು,

‘ನೀವು ಹೇಳಿದ್ದು ತಿಳಿದ ಮೇಲೆ ಪೂರ್ತಿ ಕೇಳಬೇಕೆನ್ನಸುತ್ತಿದೆ, ಹಾಕಿ’ ಎಂದರು.

ಭಾಷಣ ಶುರುವಾಯಿತು. ಅದರ ವಿವರವನ್ನೆಲ್ಲಾ ನಾನಿಲ್ಲಿ ಬರೆಯಲಾರೆ. ಅವಗಾಹನೆಗಾಗಿ ಸಾರಾಂಶವನ್ನಷ್ಟೆ ಹಾಕುತ್ತೇನೆ.

‘ರಾಜ್ಯದಲ್ಲಿರುವ ಪ್ರತೀ ಎಕರೆ ವ್ಯವಸಾಯ ಭೂಮಿಯಲ್ಲಿ ಪ್ರತೀ ಎಕರೆಗೆ ಒಂದು ಗುಂಟೆ ಜಾಗವನ್ನು ಪ್ರತೀ ರೈತನೂ ಮಳೆ ನೀರು ಸಂಗ್ರಹಕ್ಕೆ ಮೀಸಲಿಡಬೇಕು. 33*33ಅಡಿಯ ಜಾಗದಲ್ಲಿ ಕನಿಷ್ಠ 10ಅಡಿ ಆಳದ ಒಂದು ಇಂಗು ಗುಂಡಿಯನ್ನು ನಿರ್ಮಿಸಬೇಕು. ಒಂದು ಎಕರೆ ಇದ್ದವನು ಒಂದು ಗುಂಟೆ ಜಾಗದಲ್ಲಿ, ಹತ್ತು ಎಕರೆ ಇದ್ದವನು ಹತ್ತು ಗುಂಟೆ ಜಾಗದಲ್ಲಿ ಹಾಗೇ ನೂರು ಎಕರೆ ಇದ್ದವನು ನೂರು ಗುಂಟೆ ಜಾಗದಲ್ಲಿ ಈ ನೀರಿಂಗಿಸುವ ಕೆಲಸ ಕಡ್ಡಾಯವಾಗಿ ಮಾಡಲೇಬೇಕು. ಇದಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಹಣ ಬಳಸಬಹುದು. ಈ ಕೆಲಸದಿಂದ ರಾಜ್ಯದಾದ್ಯಂತ ನೂರಾರು ಟಿ.ಎಂ.ಸಿ. ನೀರು ಉಳಿಯುತ್ತದೆ ಹಾಗೂ ಭೂಮಿಯಲ್ಲಿ ಇಂಗುತ್ತದೆ. ಒಂದು ಟಿ.ಎಂ.ಸಿ ನೀರೆಂದರೆ ಸಾವಿರ ಅಡಿ ಅಗಲ, ಸಾವಿರ ಅಡಿ ಉದ್ದ ಹಾಗೂ ಸಾವಿರ ಅಡಿ ಎತ್ತರದ ನೀರಿನ ರಾಶಿ. ಇದರಲ್ಲಿ ಶೇ. ಎಪ್ಪತ್ತರಷ್ಟು ನೀರು ವರ್ಷವರ್ಷವೂ ನೆಲದಲ್ಲಿ ಇಂಗಿದರೂ ಅಂತರ್ಜಲ ಮಟ್ಟ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಹೀಗೆ ನನ್ನ ಮೊದಲ ಭಾಷಣದಲ್ಲಿ ನೀರಿನ ವಿಷಯ ಪ್ರಸ್ತಾಪಿಸಿದ್ದೆ. ಇದಿಷ್ಟೆ ವಿಷಯಗಳನ್ನಿಟ್ಟುಕೊಂಡು ನಾಲ್ಕಾರು ಕಡೆ ಮಾತನಾಡಿದ್ದೆ.

ಇದೇ ರೀತಿಯ ಇನ್ನೊಂದು ಯೋಜನೆಯೆಂದರೆ ಪ್ರತೀ ಎಕರೆ ಕೃಷಿಭೂಮಿಯಲ್ಲಿ ಒಂದು ಗುಂಟೆ ಜಾಗದಲ್ಲಿ ಕಾಡುಜಾತಿಯ ಮರಗಳನ್ನು ಬೆಳೆಸುವಂತೆ ಕಡ್ಡಾಯಗೊಳಿಸುವುದು. ಕಾಡುಜಾತಿಯ ಹಣ್ಣಿನ ಗಿಡಗಳಾದರಂತೂ ಬಹು ಉಪಯೋಗಿ. ಪ್ರಾಣಿ ಪಕ್ಷಿಗಳಿಗೆ ಉಪಕಾರವಾಗುತ್ತದೆ. ಇವು ರೈತನಿಗೂ ಉಪಕರಿಸುತ್ತವೆ ಎಂದು ನನ್ನ ನಂತರದ ಹಲವು ಭಾಷಣಗಳಲ್ಲಿ ಹೇಳಿದ್ದೆ. ಹಲವು ಕಡೆ ಇದಿಷ್ಟೇ ವಿಷಯದ ಭಾಷಣವಿತ್ತು.

ಮುಂದಿನ ಭಾಷಣದಲ್ಲಿ ‘ಪ್ರತೀ ಊರಿನ, ಪ್ರತೀ ಗ್ರಾಮದ ಹೊರಅಂಚಿನಲ್ಲಿರುವ ಪಾಳುಬಿದ್ದ ಸರ್ಕಾರಿ ಜಾಗಗಳು, ಹೆಚ್ಚುವರಿ ಗೋಮಾಳಗಳಲ್ಲಿ ಹೊನ್ನೇ ಮರಗಳನ್ನು ಬೆಳೆಸುವುದು. ಇವು ಶೀಘ್ರವಾಗಿ ಬೆಳೆಯುವ ಕಾಡುಜಾತಿಯ ಮರಗಳಾದ್ದರಿಂದ ಇವುಗಳ ಸೊಪ್ಪನ್ನು ಮಂಗ, ದನಕರು, ಎಮ್ಮೆಗಳು, ಒಂಟೆ, ಆನೆ ಮುಂತಾದ ಪ್ರಾಣಿಗಳು ತಿನ್ನುತ್ತವೆ. ಮನುಷ್ಯರಿಗೂ ಇದು ಉಪಯೋಗಿ. ಬೆಳೆದ ಮರ ಬಂಗಾರಕ್ಕೆ ಸಮಾನವಾದ್ದರಿಂದ ಇದಕ್ಕೆ ‘ಹೊನ್ನೆ’ಮರವೆಂದು ಕರೆಯುವರು’ ಎಂದು ಕರೆಕೊಟ್ಟಿದ್ದೆ. ಜನ ಪ್ರತಿಯೊಂದನ್ನೂ ಆಸಕ್ತಿಯಿಂದ ಆಲಿಸಿ ಸಂವಾದಿಸುತ್ತಿದ್ದರು.

ಹೀಗೆ ಪ್ರತೀ ಭಾಷಣದಲ್ಲೂ ಹೊಸ ವಿಷಯ ಸೇರ್ಪಡೆಗೊಳ್ಳುತ್ತಿತ್ತು. ನನ್ನ ಮುಂದಿನ ಭಾಷಣದಲ್ಲಿ ಮೇಲ್ಕಂಡ ವಿಷಯಗಳ ಜೊತೆ ‘ರಾಜ್ಯದಾದ್ಯಂತ ಪ್ರತೀ ಊರಿನಲ್ಲಿ ಅಥವಾ ಪ್ರತೀ ಗ್ರಾಮದಲ್ಲಿ ಒಂದೊಂದು ರೈತ ಸಹಕಾರಿ ಸಂಘವನ್ನು ಸ್ಥಾಪಿಸುವುದರ ಮೂಲಕ ಸಹಕಾರಿ ಕೃಷಿ ಪದ್ಧತಿಯನ್ನು ಜಾರಿಗೆ ತರುವುದು. ಈಗಿರುವ ಶೇ.99 ಸಹಕಾರಿ ಸಂಘಗಳು ಸಾಲ ಕೊಡಲು ಹಾಗೂ ವಸೂಲಾತಿಗೆ ಮೀಸಲಾಗಿವೆ. ಒಂದಷ್ಟು ರಾಸಾಯನಿಕ ಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತ ಇದ್ದೂ ಸತ್ತಂತಿವೆ. ಈಗ ಹೊಸದಾಗಿ ಆರಂಭಿಸಬೇಕಾದ ಈ ಸಹಕಾರಿ ಸಂಘದಲ್ಲಿ ರೈತ ಬೆಳೆದ ಬೆಳೆಯನ್ನು ರಕ್ಷಿಸಿ ಇಡುವ ಕಾರ್ಯವಾಗಬೇಕು ಅಲ್ಲದೇ ರಕ್ಷಣೆಗಾಗಿ ತಂದಿರಿಸಿದ ಬೆಳೆಗೆ ತಕ್ಷಣವೇ ಶೇ.75ರಷ್ಟು ಹಣವನ್ನು ರೈತರಿಗೆ ಪಾವತಿಸಬೇಕು. ಮಲೆನಾಡಿನಲ್ಲಿರುವ ಈಗಿನ ಮೈಯಾಳು ಪದ್ಧತಿಯನ್ನು ಇನ್ನೂ ಹೆಚ್ಚು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದಾದ್ಯಂತ ಇರುವ ಸಣ್ಣಬೆಳೆಗಾರರನ್ನು ರಕ್ಷಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಅತಿ ಅಗತ್ಯವಾಗಿದೆ. ಆದರೆ ಈಗಿರುವ ಸರ್ಕಾರ? ಇದರ ವರ್ತನೆ ಹೇಗಿದೆಯೆಂದರೆ ಹೊಸ ಭೂಮಾಲೀಕರನ್ನು ಹುಟ್ಟುಹಾಕುವತ್ತ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಇದು ಮುಂಬರುವ ದಿನಗಳಲ್ಲಿ ಸಣ್ಣರೈತ ಸಮುದಾಯಕ್ಕೆ ಭಾರೀ ಅಪಾಯವನ್ನು ತಂದೊಡ್ಡಲಿದೆ. ಇದರ ಬಗ್ಗೆ ರೈತ ಸಮುದಾಯ ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ತನ್ನ ವಿನಾಶಕ್ಕೆ ತಾನೇ ನಾಂದಿ ಹಾಡಿಕೊಂಡಂತಾಗುತ್ತದೆ’ ಎಂಬ ವಿಷಯವನ್ನು ಎತ್ತಿಕೊಂಡಿದ್ದೆ. ಜನರಿಂದ ಅದ್ಭುತ ಪ್ರತಿಕ್ರಿಯೆ ಬಂತು. ನಂತರದ ಭಾಷಣಗಳಲ್ಲಿ

‘ಸೊಲಾರ್ ವಿದ್ಯುತ್‍ ದೀಪವನ್ನು ರಾಜ್ಯದಾದ್ಯಂತ ಗ್ರಾಮೀಣ ಭಾಗಗಳಲ್ಲಿ ಹಾಗೂ ನಗರದ ಕೊಳಗೇರಿಗಳಲ್ಲಿ ಉಚಿತವಾಗಿ ಕೊಡುವುದು, ಮತದಾನವನ್ನು ಕಡ್ಡಾಯಗೊಳಿಸುವುದು, ಮೀಸಲಾತಿಯನ್ನು ಸರ್ಕಾರಿ ಹಾಗೂ ಖಾಸಗಿರಂಗಗಳಲ್ಲಿ ಇನ್ನೂ ಇಪ್ಪತ್ತು ವರ್ಷ ಮುಂದುವರೆಸುವುದು, ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಮನುಷ್ಯರ ಆಹಾರ ಪದ್ಧತಿಯ ವಿಷಯದಲ್ಲಿ ಸರ್ಕಾರ ಹಾಗೂ ಧಾರ್ಮಿಕ ಕೇಂದ್ರಗಳು ತಲೆಹಾಕದಂತೆ ನಿರ್ಭಂಧ ವಿಧಿಸುವುದು’ ಮುಂತಾದ ವಿಷಯಗಳು ನನ್ನ ಭಾಷಣದಲ್ಲಿದ್ದವು.

ಆದರೆ ನಾನು ಭಾಷಣದಲ್ಲಿ ಪ್ರಸ್ತಾಪಿಸಿದ ಕಾಮದ ಕುರಿತಾದ ಮಾತುಗಳು ಕೆಲವರಿಗೆ ಇರಿಸುಮುರುಸಾಯಿತು. ನಾನು ಮೇಲ್ಕಂಡ ಎಲ್ಲಾ ವಿಷಯಗಳ ಜೊತೆಗೆ ಇದನ್ನು ಪ್ರಸ್ತಾಪಿಸಿದ್ದೆನೇ ಹೊರತು ಇದೊಂದನ್ನೇ ಇಟ್ಟಕೊಂಡು ಮಾತಾಡಿರಲಿಲ್ಲ.

‘ಮನುಷ್ಯನ ಹುಟ್ಟೆಂಬುದು(ಹಾಗೂ ಸುಮಾರು ಪ್ರಾಣಿಗಳದ್ದು) ಮಾಂಸಾಹಾರದ ಒಂದು ಭಾಗವೆನ್ನುವುದು ನನ್ನ ಮುಖ್ಯ ಪ್ರತಿಪಾದನೆಯಾಗಿತ್ತು. ಇದು ಹಲವು ಜನರಿಗೆ ನುಂಗಲಾರದ ಆದರೆ ತಿರಸ್ಕರಿಸಲೂ ಆಗದ ವಿಷಯವಾಗಿ ಪರಿಣಮಿಸಿಬಿಟ್ಟಿತ್ತು. ಹಲವಾರು ಮಠಾಧೀಶರಿಗೆ ಹಾಗೂ ಇತರೆ ಧಾರ್ಮಿಕ ಮುಖಂಡರಿಗೆ ಇದು ಅವರ ಕುಂಡೆಯ ಬುಡಕ್ಕೆ ಬಿಸಿನೀರು ಬಿಟ್ಟಂತಾಗಿತ್ತು. ಇಲ್ಲಿ ನಾನು ಹೇಳಿದ್ದು ಇಷ್ಟೆ. ಕಾಮವೆಂಬುದು ಒಂದು ಪಕ್ಕಾ ಮಾಂಸಾಹಾರ. ಈ ಕಾಮದಿಂದಲೇ ವಂಶಾಭಿವೃದ್ಧಿ ಆಗುವುದು ಹಾಗೂ ಬದುಕಿನ ಕೆಂದ್ರಬಿಂದುವೂ ಕೂಡ ಕಾಮ’-ಮುಂದುವರೆದು

‘ಮನುಷ್ಯನಿಗೆ ಮೂಲಭೂತವಾಗಿ ಮೂರು ಹಸಿವೆಗಳಿರುತ್ತವೆ. ಹೊಟ್ಟೆಯ ಹಸಿವು, ನಿದ್ದೆಯ ಹಸಿವು ಹಾಗೂ ಮೈಥುನದ ಹಸಿವು. ಕಾಮದ ಹಸಿವು ಹುಟ್ಟುವುದು ಹೊಟ್ಟೆ ತುಂಬಿದ ನಂತರ. ಇದು ಅಂತಿಂಥ ಹಸಿವಲ್ಲ. ತೀರಾ ಘೋರವಾದ ಹಸಿವು. ಇದು ಬದುಕಿನಲ್ಲಿ ಏನೇನನ್ನೆಲ್ಲಾ ಮಾಡಿಸಿಬಿಡುತ್ತದೆ. ಅದಕ್ಕೆ ಹಿರಿಯರು ಕಾಮಕ್ಕೆ ಕಣ್ಣಿಲ್ಲವೆಂದಿದ್ದಾರೆ’ ಎಂದು ಹೇಳಿ

‘ಈ ಕಾಮದಲ್ಲಿಯೂ ಕೂಡ ಐದು ವಿಧ. ನಾನಿಲ್ಲಿ ಕಾಮದ ಭಂಗಿಗಳ ಕುರಿತು ಹೇಳುತ್ತಿಲ್ಲ. ಮನುಷ್ಯ ತನ್ನ ಕಾಮಶಮನಕ್ಕೆ ಹಲವು ದಾರಿಗಳನ್ನು ಕಂಡುಕೊಂಡಿದ್ದಾನೆ. ಅವುಗಳಾವುವೆಂದರೆ ಒಂದು ಗಂಡು ಮತ್ತು ಹೆಣ್ಣಿನ ಕಾಮಸಂಬಂಧ. ಇನ್ನೊಂದು ಗಂಡು ಮತ್ತು ಗಂಡಿನ ಕಾಮಸಂಬಂಧ. ಮಗದೊಂದು ಹೆಣ್ಣುಹೆಣ್ಣಿನ ಕಾಮಸಂಬಂಧ’ ಎಂದು ಮುಂದುವರಿಯುತ್ತಾ

‘ಇಲ್ಲಿ ಮೊದಲನೆಯದು ನೈಸರ್ಗಿಕವೆಂದು ಕರೆಸಿಕೊಂಡರೆ ಉಳಿದೆರೆಡು ಸಲಿಂಗಕಾಮವೆಂದು ಪರಿಗಣಿಸಲ್ಪಟ್ಟದೆ. ಇದಲ್ಲದೆ ಇನ್ನೆರೆಡು ರೀತಿಯ ಕಾಮಸಂಬಂಧಗಳಿವೆ. ಅವೆಂದರೆ ಗಂಡು ಹೆಣ್ಣುಪ್ರಾಣಿ(ಹಸು,ಎಮ್ಮೆ ಇತ್ಯಾದಿ)ಗಳೊಂದಿಗೆ ಕಾಮದಾಟವಾಡುವುದು ಹಾಗೆಯೇ ಹೆಣ್ಣು ಗಂಡುಪ್ರಾಣಿ(ನಾಯಿ,ಬೆಕ್ಕು,ಟಗರು,ಕುದುರೆ ಇತ್ಯಾದಿ)ಗಳೊಂದಿಗೆ ರತಿಕ್ರೀಡೆಯಾಡುವುದು. ಇದೆಲ್ಲವನ್ನು ಗಮನಿಸಿದಾಗ ಇಲ್ಲಿ ಮಾಂಸಭರಿತ ದೇಹಗಳು ಒಂದನ್ನೊಂದು ಅವಲಂಬನೆಗೊಂಡಿರುವುದು ಕಾಣಬರುತ್ತದೆ. ಎಲ್ಲಾ ರೀತಿಯ ಕಾಮಸಂಬಂಧಗಳಲ್ಲಿ ಎರೆಡು ಮಾಂಸಭರಿತ ದೇಹಗಳ ಮಸೆದಾಟ ಸಾಮಾನ್ಯವಾಗಿರುವುದು ಕಂಡುಬರುತ್ತದೆ. ಅಂದರೆ ಕಾಮ ಎಂಬುದು ಸಂಪೂರ್ಣ ಮಾಂಸಾಹಾರ. ಅಂದರೆ ಇದು ನೈಸರ್ಗಿಕ ಸೃಷ್ಟಿ. ಯಾರ್ಯಾರು ತಮ್ಮ ಜೀವನದಲ್ಲಿ ತಮ್ಮ ಖಾಯಮ್ಮಾದ ಅಥವಾ ತಾತ್ಕಾಲಿಕ ಸಂಗಾತಿಗಳಲ್ಲಿ ಕಾಮಶಮನ ಪಡೆಯುತ್ತಾರೊ ಅವರೆಲ್ಲರೂ ಮಾಂಸಾಹಾರಿಗಳು. ಈ ಮಾಂಸಾಹಾರದ ಮುಖೇನವೆ ಎಲ್ಲರೂ ಸಂತಾನವನ್ನು ಪಡೆಯುತ್ತಾರೆ. ಹೀಗಿದ್ದ ಮೇಲೆ ಬದುಕಲಿಕ್ಕಾಗಿ ತಿನ್ನುವ ಆಹಾರದಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಎಂಬ ವರ್ಗೀಕರಣ ತೀರಾ ಬಾಲಿಷವಾದುದಲ್ಲವೆ? ತಾನು ಪಕ್ಕಾ ಸಸ್ಯಾಹಾರಿ ಎಂದು ಘೋಷಿಸಿಕೊಳ್ಳುವವ ತನ್ನ ಕಾಮಜೀವನವನ್ನು ತ್ಯಜಿಸಿ ಬ್ರಹ್ಮಚರ್ಯಕ್ಕೆ ತನ್ನನ್ನು ಸಂಪೂರ್ಣ ಒಡ್ಡಿಕೊಳ್ಳುವನೆ?(ನನ್ನ ಸ್ನೇಹಿತ ಬ್ರಹ್ಮಾಚಾರಿಗೆ ಮೂರು ಮಕ್ಕಳು, ಆ ಮಾತು ಅಲಾಯದ). ಹಸ್ತಮೈಥುನವನ್ನೂ ಕೂಡ ಮಾಡಿಕೊಳ್ಳದೆ? ಇದರಲ್ಲಿ ಕೂಡ ಮಾಂಸದ ತಿಕ್ಕಾಟವಿದೆ. ಹಾರ ಬದಲಿಸಿಕೊಂಡು ಮದುವೆ ಮಾಡಿಕೊಳ್ಳುವುದು ಕೂಡ ಇದೇ ಉದ್ದೇಶಕ್ಕೆ ಅಲ್ಲವೆ? ಒಂದು ರೀತಿಯಲ್ಲಿ ವ್ಯಕ್ತಿಗಳ ಕಾಮದಾಹದ ಶಮನಕ್ಕೆ ಸಮಾಜದ ಮನ್ನಣೆ ಒತ್ತುವುದು ಈ ಹಾರ ಬದಲಾವಣೆಯ ಮುಖ್ಯ ಉದ್ದೇಶ’ ಎಂದು ನನ್ನ ಮಾತುಗಳನ್ನು ಮುಗಿಸಿದ್ದೆ.

ದೇವಪ್ಪನವರು, ಸುಪರಿಂಟೆಂಡೆಂಟ್‍ರವರು, ಅವರ ಸಹಾಯಕ, ನಾನು ಸುಮಾರುಹೊತ್ತು ಸುಮ್ಮನೆ ಕುಳಿತೆವು. ಬಳಿಕ ದೊಡ್ಡದಾದ ನಿಟ್ಟುಸಿರೊಂದನ್ನು ಬಿಟ್ಟ ದೇವಪ್ಪನವರು ನನ್ನ ಕಡೆ ತಿರುಗಿ ಮುಖದಲ್ಲಿ ತುಂಬು ನಗುವನ್ನು ಸೂಸುತ್ತಾ,

‘ಆದ್ರೂ ಹುಡ್ಗ ಈ ಸಮಾಜದ್ ಬಗ್ಗೆ ಬಾಳ ಆಲೋಚ್ನೆ ಮಾಡಿದಿಬಿಡ, ನಿನ್ನ ಆಲೋಚ್ನೆಯೆಲ್ಲಾ, ಯೋಜ್ನೆಯೆಲ್ಲಾ ಹಳ್ಳಿ ಜನ್ರಿಗ್ ಅನ್ಕೂಲ ಆಗಂತವೆ. ಆದ್ರೆ ಈ ಪುಂಡ್‍ಮುಂಡೆಗಂಡ್ರಿಗ್ ಅವೆಲ್ಲಾ ಬೇಕೆನಾ ತಮ್ಮಾ, ಅವ್ರು ರಾಜ್ಕೀಯಕ್ಕ್ ಬಂದಿರದೇ ಹಡ್ಬೇಗಂಟು ಹೊಡ್ಕು ತಿನ್ನಬೌದು ಅಂತ, ಅವ್ಕೇಲ್ಲಾ ನೀ ಹೇಳದ್ ಪಥ್ಯಕೈತಂತ ತಿಳ್ಕಂಡಿಯೆ? ಜನಾನೂ ಹಂಗೇ ಐದಾರೋ ಮಾರಾಯ, ಎಲೆಕ್ಷನ್ ಟೈಮಾಗ್ ಯಾವನ್ ಕುಡುಸ್ತಾನೆ, ಸೆಗ್ಣಿ ತಿನ್ನಕ್ ಯಾವನ್ ಏನ್ ಕೊಡ್ತಾರೊ ಅಂತ ನಾಯಿತರ ಕಾದು ಓಟ್ ಒತ್ತ್ ಬರ ಮಳ್ ಸೂಳೆಮಕ್ಳು ಇರಗಂಟ ಈ ದೇಶ ಉದ್ದಾರಾಕೈತಿ ಅಂತ ಮಾಡಿಯೇ?’ ಎಂದು ಸುಮ್ಮನಾದರು.

‘ಆದ್ರೂ ನೀನೇನೆ ಹೇಳು, ನಿನ್ನ್ ಭಾಷಣ್‍ದಾಗೆ ಎತ್ತಿದ್ ವಿಷ್ಯ ಐದಾವಲಾ ಅವ್ ಮಾತ್ರ ಅಪ್ಪನಿಗ್ ಹುಟ್ಟದವ್ರು ಆಡಮಾತೆ ಬಿಡು, ಭೇಷ್ ಮಗನೆ, ಇವತ್ತು ನಿನ್ನ ನಿಜವಾಗ್ಲೂ ನನ್ನ ಸ್ನೇಹಿತ್ರಮಗಾ ಮಾತ್ರಲ್ಲ, ನಮ್ಮ ಊರಿನ್ ಹೆಮ್ಮೆಮಗಾ ಅಂತಾ ಎಲ್ಲಕಡೆ ಹೇಳ್ಕಂಡ್ ಬರಂಗ್ ಮಾಡ್ದಿ’ ಎಂದು ನನ್ನ ಬೆನ್ನು ತಟ್ಟಿದರು. ಇದನ್ನೆಲ್ಲಾ ನೋಡುತ್ತಿದ್ದ ಸುಪರಿಂಟೆಂಡೆಂಟ್‍ರವರು ದೇವಪ್ಪನವರನ್ನು ಉದ್ದೇಶಿಸಿ,

‘ಎಲ್ಲಾ ಸರಿ ಅಂದ್ರಿ ಯಜಮಾನ್ರೆ, ಆದ್ರೆ ಆ ಕೊನೇ ವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯನೇ ತಿಳಿಸ್ಲಿಲ್ಲ?’ ಎಂದು ನಸುನಗುಬೀರುತ್ತಾ ಪ್ರಶ್ನಿಸಿದರು. ಅದಕ್ಕೆ ದೇವಪ್ಪನವರು ದೊಡ್ಡದಾಗಿ ನಗುನಗುತ್ತಾ,

‘ಅಲ್ಲಸಾಹೇಬ್ರೆ, ನಾನು ಈ ಭಾಷಣ ಕೇಳೋಕ್ ಮುಂಚೇನೆ ನೀವೇ ಅದ್ರಬಗ್ಗೆ ಒಳ್ಳೆ ಅಭಿಪ್ರಾಯ ಕೊಟ್ಟಿದೀರಿ, ಇನ್ನ್ ಹಳ್ಳಿಮುಕ್ಕ ನಾನು, ಅದ್ರ ಬಗ್ಗೆ ನಿಮ್ಮ್ ಅಭಿಪ್ರಾಯನೇ ನಂದು, ನಂಗೂ ಕೂಡ ಕಾಮ ಅಂದ್ರೆ ಮಾಂಸಾಹಾರ ಅನ್ನೊದನ್ನ ನಮ್ಮೀ ಹುಡ್ಗ ತಿಳ್ಸಿಕೊಟ್ಟ ನೋಡಿ, ಇಷ್ಟು ವರ್ಷ ಕಾಮದಜೀವನ ನಾನು ನಡ್ಸಿದ್ರೂ ನನ್ಗದು ಮಾಂಸಾಹಾರ ಅಂತ ಗೊತ್ತಿರ್ಲಿಲ್ಲ, ಹ್ಹಹ್ಹಹ್ಹಹ್ಹಹ್ಹಹ್ಹಹ್ಹ’.

ಈ ಕಾಮಸಂಬಂಧದ ಕುರಿತ ವಿಷಯಗಳನ್ನು ನನ್ನ ಎಪ್ಪತ್ನಾಲ್ಕನೆಯ ಭಾಷಣದಲ್ಲಿ ಹೆಚ್ಚುವರಿಯಾಗಿ ಪ್ರಸ್ತಾಪಿಸಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿತು. ಹೋದಹೋದಲೆಲ್ಲಾ ಈ ಕುರಿತ ಚರ್ಚೆಗಳು, ವಾದಗಳು ಸಕಾರಾತ್ಮಕವಾಗಿ ಹೊಮ್ಮತೊಡಗಿದವು.

ಕೆಲವು ಕಡೆ ಜನಸಂಪರ್ಕ ಸಭೆಗಳಲ್ಲಿ ಅಭಿವೃದ್ಧಿಯ ವಿಷಯಗಳು ಚರ್ಚೆಗೆ ಬಂದು ಆಢಳಿತಗಾರರಿಗೆ ಕಿರಿಕಿರಿ ಹುಟ್ಟಿಸತೊಡಗಿದವು. ಇದು ಜನಪ್ರತಿನಿಧಿಗಳಿಗೆ ಹೇಗೊ ಹಾಗೇ ಅಧಿಕಾರಿಗಳಿಗೂ ತಲೆನೋವಾಯಿತು.

ಕೊರೊನಾ ಎಂಬ ಕಾಯಿಲೆಯನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸುತ್ತಿರುವ ಹಗಲು ದರೋಡೆಯ ಬಗ್ಗೆಯೂ ಜನರಲ್ಲಿ ಚರ್ಚೆ ನಡೆಯತೊಡಗಿತು. ಸೀಲ್‍ಡೌನ್ ಆದ ಪ್ರದೇಶಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಕಿಂಚತ್ ಕೂಡ ಸಹಾಯ ನೀಡದ ಸರ್ಕಾರಿ ಅಧಿಕಾರಿಗಳ ನಡೆಯ ಕುರಿತು ಜಗಳಗಳೇ ನಡೆದು ಹೋದವು. ಜನಪ್ರತಿನಿಧಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಅವರು ಆಕಾಶದ ಕಡೆ ಬೆರಳು ತೋರಿದರು. ಅದಕ್ಕೆ ಪುಷ್ಟಿ ನೀಡುವಂತೆ ನಮ್ಮ ಆರ್ಥಿಕ ಸಚಿವರು ಹಣಕಾಸಿನ ಬಿಕ್ಕಟ್ಟಿಗೆ ದೇವರೇ ಕಾರಣವೆಂದು ಹೇಳಿಕೆನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸಿದರು. ಬೇರೆಬೇರೆ ದೇಶಗಳ ಹಣಕಾಸು ಸಚಿವರುಗಳು ಮಾತ್ರ ಈ ಹೇಳಿಕೆ ಕೇಳಿ ತೀವ್ರ ಕಂಗಾಲಾದರು. ಇವೆಲ್ಲವನ್ನೂ ನನ್ನ ಭಾಷಣದಲ್ಲಿ ಪ್ರಸ್ತಾಪಿಸಿದ್ದೆ. ಕೊರೊನಾದ ಹೆಸರಿನಲ್ಲಿ ತಿನ್ನುವ ಹಣವನ್ನು ಕೊರೊನಾ ರೋಗಿಯ ಹೆಣವನ್ನೇ ತಿಂದಂತೆ ಎಂದು ಅತ್ಯಂತ ಖಾರವಾಗಿ ಟೀಕಿಸಿದ್ದೆ.

ಒಂದು ವಾರದ ಹಿಂದೆ ನನ್ನ ಭಾಷಣ ಶತದಿನವನ್ನು ಆಚರಿಸಿಕೊಂಡಿತು. ಅಂದು ನನ್ನ ಭಾಷಣ ಸಾಗರದಲ್ಲಿಯೇ ಇತ್ತು. ಅದಾದ ಮಾರನೆಯ ದಿನ ಆನಂದಪುರದಲ್ಲಿ ನನ್ನ ನೂರೊಂದನೆಯ ಭಾಷಣ ಮುಗಿಸಿ ಹೊರ ಬಂದಾಗ ಜನರೆಲ್ಲಾ ಮುತ್ತಿ ಅಭಿನಂದನೆಯ ಸುರಿಮಳೆಗೈದರು.

ಆನಂದಪುರದಲ್ಲಿ ಭಾಷಣ ಮಾಡಿದ ಮರುದಿನವೇ ನನ್ನನ್ನು ಪೋಲೀಸರು ಬಂಧಿಸಿದರು. ಕಾರಣವೇನೆಂದು ಆರಕ್ಷಕರನ್ನು ವಿಚಾರಿಸಲಾಗಿ ಆನಂದಪುರದ ಪಿ.ಡಿ.ಒ. ಬಳಿ ನನ್ನ ಮೇಲೆ ದೂರನ್ನು ನೀಡಲು ಪುಸಲಾಯಿಸಲಾಗಿತ್ತು. ಆದರೆ ಅಲ್ಲಿನ ಸೂಕ್ಷ್ಮಮತಿ ಪಿ.ಡಿ.ಒ. ಅದನ್ನು ನಯವಾಗಿ ತಿರಸ್ಕರಿಸಿದ್ದಳು.

ನಂತರದಲ್ಲಿ ಅಲ್ಲಿನ ಮಹಾಭ್ರಷ್ಟ ಹಾಗೂ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಉಪತಹಶೀಲ್ದಾರನನ್ನು ಹಿಡಿದು ದೂರು ಕೊಡಿಸಲಾಯ್ತು. ಆ ದೂರಿನ ಅನ್ವಯ ನನ್ನ ಬಂಧನವಾಗಿತ್ತು. ಆತನಿಗೆ ಯಾರ್ಯಾರೊ ಚಿತಾವಣೆ ಮಾಡಿ ದೂರು ಕೊಡುವಂತೆ ನೋಡಿಕೊಂಡಿದ್ದರು. ಪರಿಸರದ ಕುರಿತು, ನಿಜವಾದ ಅಭಿವೃದ್ಧಿಯ ಕುರಿತು, ಜನರಿಗೆ ಒಳಿತನ್ನು ಮಾಡುವ ಬದಲು ಹಣಗಳಿಸುವುದನ್ನೇ ರಾಜಕೀಯ ಎಂಬ ಮನಸ್ಥಿತಿಯ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ನನ್ನೀ ಭಾಷಣ ಕಿರಿಕಿರಿಯುಂಟು ಮಾಡಲು ತೊಡಗಿದ್ದು ಸಾಬೀತಾದಂತಾಯಿತು. ಹೇಗಾದರೂ ಮಾಡಿ ನನ್ನ ಬಾಯಿ ಮುಚ್ಚಿಸಬೇಕಿತ್ತು. ಉಪತಹಶೀಲ್ದಾರ ಅವರ ಕೈಗೊಂಬೆಯಾದ. ನಾನು ಜೈಲುಪಾಲಾದೆ.

ದೇವಪ್ಪನವರು ಬಂದುಹೋದದ್ದು ಮನಕ್ಕೆ ತುಂಬಾ ಸಮಾಧಾನ ನೀಡಿತು. ಇನ್ನು ಅಪ್ಪನ ಕುರಿತು ಆಲೋಚಿಸುವ ಅಗತ್ಯವಿಲ್ಲವೆನಿಸಿ ನಿರಾಳವಾಯಿತು.

ಸಾಗರದ ಎ.ಸಿ. ಕಛೇರಿಯ ಎದುರು ಗೆಳೆಯರು, ಸಾಹಿತಿ-ಕಲಾವಿದರೂ, ಊರು-ಪರವೂರಿನ ಜನರು, ಎಲ್ಲಾ ಪಕ್ಷಗಳಲ್ಲಿನ ನನ್ನ ಸ್ನೇಹಿತರು ಸೇರಿ ಅನೇಕ ಮಂದಿ ಧರಣಿ ಕುಳಿತಿದ್ದಾರೆಂಬ ಸಂಗತಿ ತಲುಪಿತು. ಹಾಗೆಯೇ ನಾಡಿನಾದ್ಯಂತ ಅನೇಕ ಕಡೆಗಳಲ್ಲಿ ನನ್ನ ಬಂಧನವನ್ನು ವಿರೋಧಿಸಿ ಸತ್ಯಾಗ್ರಹಗಳು ನಡೆಯತ್ತಿವೆಯೆಂಬ ಸುದ್ದಿಕೇಳಿ ಹೃದಯ ತುಂಬಿಬಂತು. ಕಣ್ಣಂಚು ಮಂಜಾಯಿತು. ಮೌನಿಯಾದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು